Homeಕರ್ನಾಟಕಮಾಂಸಾಹಾರದ ಮೇಲಿನ ಕೀಳರಿಮೆ ತೊಲಗಬೇಕಿದೆ: ಚಿತ್ರಸಾಹಿತಿ ಕವಿರಾಜ್‌ ಬರಹಕ್ಕೆ ಮಿಡಿದ ಕನ್ನಡಿಗರು

ಮಾಂಸಾಹಾರದ ಮೇಲಿನ ಕೀಳರಿಮೆ ತೊಲಗಬೇಕಿದೆ: ಚಿತ್ರಸಾಹಿತಿ ಕವಿರಾಜ್‌ ಬರಹಕ್ಕೆ ಮಿಡಿದ ಕನ್ನಡಿಗರು

"ತಿಂತೀರಾ ಅಂತಾ ಕೇಳೋದ್ರಲ್ಲಿ ತಪ್ಪೇನಿದೆ?"- ಆಹಾರ ಅಸಹಿಷ್ಣುತೆ ವಿರುದ್ಧ ನಿರ್ದೇಶಕ ‘ಮಂಸೋರೆ’ ಪ್ರಶ್ನೆ

- Advertisement -

ಮಾಂಸಾಹಾರದ ಕುರಿತು ಹಬ್ಬಿಸಲಾಗಿರುವ ಕೀಳರಿಮೆಯನ್ನು ಹೋಗಲಾಡಿಸಬೇಕು ಎಂಬ ನಿಲುವನ್ನು ವ್ಯಕ್ತಪಡಿಸಿ ಕನ್ನಡದ ಖ್ಯಾತ ಚಿತ್ರ ಸಾಹಿತಿ ಕವಿರಾಜ್‌ ಅವರು ಬರೆದಿರುವ ಲೇಖನಕ್ಕೆ ಕನ್ನಡದ ಮನಸ್ಸುಗಳು ಮಿಡಿದಿವೆ. ಕವಿರಾಜ್‌ ಅವರ ನಂತರ ಕನ್ನಡ ಚಿತ್ರರಂಗದ ಮತ್ತೊಬ್ಬ ಪ್ರತಿಭಾನ್ವಿತ ಹಾಗೂ ಸಂವೇದನಾಶೀಲ ನಿರ್ದೇಶಕ ಮಂಸೋರೆ ಅವರು ಆಹಾರ ಅಸಹಿಷ್ಣುತೆಯನ್ನು ಪ್ರಶ್ನಿಸಿದ್ದಾರೆ.

ಕವಿರಾಜ್ ಅವರು ತಮ್ಮ ಬರಹವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು, ನೂರಾರು ಜನರು ಹಂಚಿಕೊಂಡಿದ್ದಾರೆ. ಅನೇಕರು ಕವಿರಾಜ್‌ ಬರಹದ ಅಂತರಾಳವನ್ನು ಮನಸಾರೆ ಹೊಗಳಿದ್ದಾರೆ.

ಕವಿರಾಜ್‌ ಬರಹ ಹೀಗಿದೆ:

ಆಹಾರ ಪದ್ಧತಿಯ ಬಗ್ಗೆ ಚರ್ಚೆ ಆಗುತ್ತಿರುವ ಈ ಹೊತ್ತಿನಲ್ಲಿ , ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ‘ಬಾಡೇ ನಮ್ಮ ಗಾಡು’ ಎಂದು ಅಭಿಯಾನ ನಡೆಸುತ್ತಿರುವ ವೇಳೆಯಲ್ಲಿ ಮೊತ್ತ ಮೊದಲಿಗೆ ಆಗಬೇಕಾಗಿರುವುದು ಮಾಂಸಹಾರಿಗಳಲ್ಲೇ ತಮ್ಮ ಆಹಾರದ ಬಗ್ಗೆ ಮೂಡಿಸಲಾಗಿರುವ ಕೀಳರಿಮೆ ತೊಲಗಬೇಕು. ತಮ್ಮ ಆಹಾರದ ಬಗ್ಗೆ ಪದೇ ಪದೇ ಇಂತಹಾ ಕೀಳರಿಮೆ ಮೂಡಿಸಲು ಮತ್ತು ಅದನ್ನು ಜಾರಿಯಲ್ಲಿಡಲು ಏನೆಲ್ಲಾ ಹುನ್ನಾರಗಳನ್ನು ಶತಮಾನಗಳಿಂದ ಹೆಣೆಯಲಾಗಿದೆ ಮತ್ತು ಅವೆಲ್ಲವನ್ನೂ ಮಾಂಸಾಹಾರಿಗಳೇ ಮನಸಾರೆ ಒಪ್ಪಿಕೊಂಡು ಶಿರಸಾವಹಿಸಿ ಚಾಚೂ ತಪ್ಪದೆ ಪಾಲಿಸಲು ಎಂತಹಾ ಕುಶಾಗ್ರಮತಿಯ ಬಲೆ ನೇಯಲಾಗಿದೆ ಎಂಬುದನ್ನು ಅರ್ಥೈಸಿಕೊಳ್ಳಬೇಕು.

ಈ ದಿಸೆಯಲ್ಲಿ ನಮ್ಮ ಮಲೆನಾಡು ಸೇರಿದಂತೆ ಬಹುತೇಕ ಕಡೆ ಈಗಲೂ ಚಾಲ್ತಿಯಲ್ಲಿರುವ ಬೌದ್ಧಿಕ ದಿವಾಳಿತನ, ನಿರಭಿಮಾನದ ವಿಚಾರ, ಪದ್ದತಿಯೊಂದು ನನಗೆ ಬಹಳ ವಿಷಾದಯುತ ಬೆರಗು ಮತ್ತು ಬೇಸರ ತರಿಸುತ್ತದೆ. ಮಲೆನಾಡಿನ ಬಹುಸಂಖ್ಯಾತ ಜನರ ಆಹಾರ ಪದ್ಧತಿಗೆ ಇಡಲಾಗಿರುವ ಹೆಸರು ‘ಹೊಲಸು’ .
ತಮ್ಮ ನೆಚ್ಚಿನ ಆಹಾರಕ್ಕೆ ಇಡಲಾಗಿರುವ ಹೊಲಸು ಎಂಬ ಹೆಸರನ್ನು ಒಂಚೂರು ಆಕ್ಷೇಪಣೆ , ಚಿಂತನೆ , ಸ್ವಾಭಿಮಾನ ಇಲ್ಲದೇ ಮೆದುಳಿಗೆ ಲಕ್ವಾ ಹೊಡೆದವರಂತೆ ಒಪ್ಪಿಕೊಂಡು, ಅದನ್ನೇ ವರಪ್ರಸಾದ ಎಂಬಂತೆ ಪಾಲಿಸುವವರ ಬೌದ್ಧಿಕ ದಾರಿದ್ರ್ಯದ ಬಗ್ಗೆ ಅಸಹ್ಯ ಎನಿಸುತ್ತದೆ. ತಮ್ಮ ಆಹಾರವನ್ನು ಹೊಲಸು ಎಂದಿದ್ದಕ್ಕೆ ತಮ್ಮ ಭಾವನೆಗೆ ದಕ್ಕೆ ಆಯಿತೆಂದು ಒಬ್ಬರೂ ಒಂದಿಂಚು ಮಿಸುಕಾಡಿದ್ದನ್ನು ಕಾಣೆ.


ಇದನ್ನೂ ಓದಿರಿ: ಹಂಸಲೇಖರವರೊಂದಿಗೆ ಫೋಟೊ, ಸೆಲ್ಫಿ ತೆಗೆದುಕೊಂಡ ಬಸವನಗುಡಿ ಪೊಲೀಸರು


ಆ ಮಟ್ಟಿಗಿನ ಬೌದ್ಧಿಕ ದಾಸ್ಯ ನಮ್ಮದು. ಒಬ್ಬರ ಆಹಾರ ಪದ್ದತಿಯನ್ನು ಹೊಲಸು ಅನ್ನುವುದಕ್ಕಿಂತ ಅತ್ಯಂತ ಕ್ರೂರ ರೇಸಿಸಂ ಇನ್ನೇನಿದೆ ? ಹಲವು ಮನೆಗಳಲ್ಲಿ, ಮನೆಯ ಒಳಗಿನ ಅಡುಗೆ ಮನೆಯಲ್ಲಿ ನಾವು ಹೊಲಸು ಮಾಡುವುದಿಲ್ಲ, ಆ ದಿನ ಹೊಲಸು ತಿನ್ನಲ್ಲ, ಈ ದಿನ ಹೊಲಸು ತಿನ್ನಲ್ಲ . ಎಂದು ಅದೊಂದು ಹೀನಾಯ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಅದಕ್ಕಾಗಿಯೇ ಮನೆಯ ಹೊರಗೊಂದು ಅಡುಗೆ ಒಲೆ ಇರುತ್ತದೆ. ಅಥವಾ ತಾತ್ಕಾಲಿಕ ಒಲೆ ನಿರ್ಮಿಸಿ ಅಲ್ಲಿ ಮಾಂಸಾಹಾರ ತಯಾರಿಸುತ್ತಾರೆ . ನಾನು ಎಷ್ಟೋ ಬಾರಿ ಹೀಗೆ ಹೇಳೋರನ್ನೇ ಪ್ರಶ್ನಿಸಿದ್ದೇನೆ . “ಅಲ್ಲಾರೀ.. ನೀವು ಹೊಟ್ಟೆಗೆ ತಿನ್ನೋ ಆಹಾರವನ್ನೇ ನೀವೇ ಹೊಲಸು ಅಂತೀರಲ್ರೀ.. ಹೊಲಸು ಅಂತಾ ನೀವೇ ಅನ್ನೋದಾದರೆ ಹೊಲಸನ್ನು ಮತ್ತ್ಯಾಕೆ ತಿಂತೀರಿ ?” ಅಂದಾಗೆಲ್ಲಾ ಒಂದು ಪೆದ್ದು ನಗೆ ಬೀರಿ “ಏನ್ಮಾಡಕಾಗುತ್ತೆ ಹಿಂದಿನಿಂದ ಬಂದಿದ್ದು ?” ಅಂತಾರೆ.

ಈಗ ಬಾಡೇ ನಮ್ಮ್ ಗಾಡು ಎಂದು ಅಭಿಯಾನ ನಡೆಸುತ್ತಿರುವವರಲ್ಲೂ ಇಂತಹ ‘ಸ್ಪ್ಲಿಟ್ ಪರ್ಸನಾಲಿಟಿ’ ಹೊಂದಿರುವ ಹಲವು ಜನರು ಖಂಡಿತವಾಗಿಯೂ ಇದ್ದಾರೆ. ಹಾಗೇ ಬಾಡೇ ನಮ್ಮ ಗಾಡು ಅನ್ನುತ್ತಾ ಇನ್ನೊಂದು ವರ್ಗದ ಸಸ್ಯಾಹಾರವನ್ನು ‘ಪುಳ್ಚಾರು’ ಎಂದು ಛೇಡಿಸುವುದು ಕೂಡಾ ಮತ್ತದೇ ರೀತಿಯ ತಪ್ಪು ಮನಸ್ಥಿತಿಯೇ. ಪರಸ್ಪರರ ಆಹಾರ ಕ್ರಮವನ್ನು ಗೌರವಿಸುವ ಪ್ರಬುದ್ಧ ಮನಸ್ಥಿತಿ ಬೆಳೆಸಿಕೊಳ್ಳಬೇಕಾಗಿದೆ. ಮೊದಲಿಗೆ ಈ ‘ಬಾಡೇ ನಮ್ಮ ಗಾಡು’ ಎಂಬುದು ಇನ್ಯಾರ ವಿರುದ್ಧವೋ ಮಾಡಬೇಕಿರುವ ಅಭಿಯಾನವಲ್ಲ. ಇದು ಅತ್ಯಂತ ಅವಶ್ಯಕವಾಗಿ ನಮ್ಮ ಆಹಾರ ಕ್ರಮದ ಬಗ್ಗೆಯೇ ನಮ್ಮೊಳಗಿರುವ ಕೀಳರಿಮೆಗಳನ್ನು ತೊಡೆದುಕೊಳ್ಳಲು ಮಾಡಬೇಕಾದ ಅಭಿಯಾನವಾಗಿದೆ.

ಯಾರದೋ ಜನ್ಮದಿನ , ಇನ್ಯಾವುದೋ ಹಬ್ಬ ಎಂದು ಬಹುಸಂಖ್ಯಾತರ ಆಹಾರದ ಮೇಲೆ ಆ ದಿನಗಳಲ್ಲಿ ನಿಷೇಧ ಹೇರುವುದು ಮಾನವನ ಆಹಾರ ಹಕ್ಕಿನಂತ ಅತ್ಯಂತ ಮೂಲಭೂತ ಹಕ್ಕಿನ ಸ್ಪಷ್ಟ ಉಲ್ಲಂಘನೆ. ಕಿಂಚಿತ್ತಾದರೂ ಆತ್ಮಗೌರವ ಇದ್ದರೆ ಇಂತಹ ನಿಷೇಧಗಳೆಂಬ ದೌರ್ಜನ್ಯಗಳನ್ನು ಯಾವ ಕಾರಣಕ್ಕೂ ಸಹಿಸಿಕೊಳ್ಳಬಾರದು. ಮೊದಲಿಗೆ ಇಂತಹಾ ಎಲ್ಲಾ ನಿಷೇಧಗಳು ತೆರವಾಗಬೇಕು.

ಬಾಡೇ ನಮ್ಮ ಗಾಡು ಎನ್ನುವ ಮೊದಲು ಆ ವಾರ ತಿನ್ನಲ್ಲ , ಈ ವಾರ ತಿನ್ನಲ್ಲ . ಶ್ರಾವಣದಲ್ಲಿ ತಿನ್ನಲ್ಲ , ಕಾರ್ತಿಕದಲ್ಲಿ ತಿನ್ನಲ್ಲ ಎಂಬ ಸೋಗಲಾಡಿತನ ಬಿಡಬೇಕು. ದೇವರಿಗಾಗಿ ತಿನ್ನಲ್ಲ, ದೇವಸ್ಥಾನಕ್ಕೆ ಹೋದಾಗ ತಿನ್ನಲ್ಲ ಅನ್ನುವುದು ಕೂಡಾ ತಮ್ಮ ಆಹಾರವನ್ನು ತುಚ್ಚವಾಗಿ ಕಾಣುವ ಇನ್ನೊಂದು ಮಜಲು. ನಾನು ನಾಸ್ತಿಕನಾದರೂ ಚರ್ಚೆಯ ಸಲುವಾಗಿ ಆಸ್ತಿಕವಾದದ ಪರವಾಗಿಯೇ ಮಾತಾಡುವುದಾದರೆ ಮನುಷ್ಯ ದೇಹವೇ ಮೂಳೆ ಮಾಂಸದ ತಡಿಕೆಯಾಗಿರುವಾಗ ಯಾವ ದೇವರು, ಎಲ್ಲಿ ಹೇಳಿದ್ದಾರೆ ಇಂತಹಾ ವಾರ ಮಾಂಸ ಸೇವಿಸಬಾರದು , ಮಾಂಸ ಸೇವಿಸಿ ದೇವಸ್ಥಾನಕ್ಕೆ ಬರಬಾರದು ಎಂದು. ಹೀಗೆ ಫರ್ಮಾನು ಹೊರಡಿಸಿದವರ ಮೂಲ ಉದ್ದೇಶ ನಿಮ್ಮ ಆಹಾರದ ಬಗ್ಗೆ ನಿಮ್ಮೊಳಗೆ ಕೀಳರಿಮೆ ತುಂಬುವುದಷ್ಟೇ.


ಇದನ್ನೂ ಓದಿರಿ: ’ಸಂಗೀತ ಕದನವನ್ನು ತಪ್ಪಿಸುತ್ತದೆ, ಸರಿಗಮಪಕ್ಕೆ ಬೇಗ ಬಂದು ಸೇರಿಕೊಳ್ಳುತ್ತೇನೆ’: ಡಾ. ಹಂಸಲೇಖ


ಜಿಂಕೆಯನ್ನು ಸೃಷ್ಟಿಸಿ ಅದನ್ನು ಹುಲಿಯ ಆಹಾರವನ್ನಾಗಿಸಿದ್ದು ನಿಮ್ಮ ದೇವರೆ ಅಥವಾ ನಾವು ದೇವರು ಅಂದುಕೊಳ್ಳುವ ಪ್ರಕೃತಿಯೇ ಅಲ್ಲವೇ ? ಹುಲಿ , ಸಿಂಹಗಳು ಸೋಮವಾರ, ಶನಿವಾರ ಮಾಂಸಾಹಾರ ತ್ಯಜಿಸುತ್ತವೆಯೇ? ಅವರೇ ಹೇಳುವಂತೆ ಭಕ್ತಿ ಎಂಬುದು ಮನಸ್ಸಿನಲ್ಲಿ ಇರಬೇಕಿರುವುದೇ ಹೊರತು ಇಂತಹ ಯಾರದೋ ಮೂಗಿನ ನೇರದ ಅರ್ಥಹೀನ ಆಚರಣೆಗಳಲ್ಲಲ್ಲ. ಅಲ್ಲಿ ನಾಗನಡೆ ಇದೆ, ಇಲ್ಲಿ ನಾಗನೆಡೆ ಇದೆ ಮನೆಯಲ್ಲಿ ಹೊಲಸು ಮಾಡಬೇಡೀ ಎಂದವರ ಮಾತು ನಂಬಿ ಚಾಚೂ ತಪ್ಪದೆ ಪಾಲಿಸುವವರಿಗೆ, ಅದೇ ನಾಗ ಸಂದಿಗೊಂದಿಗಳಲ್ಲಿ ನುಗ್ಗಿ ಇಲಿ , ಕಪ್ಪೆಯನ್ನು ಹಿಡಿದು ಹಸಿಹಸಿಯಾಗಿ ಭಕ್ಷಿಸುವುದು ಕಾಣುವುದಿಲ್ಲವೇ?

ಬಹುಶಃ ದಾಸ್ಯ, ಮೌಢ್ಯ, ಅವಿವೇಕ, ಅಂಧಶ್ರದ್ಧೆ ನಮ್ಮ ಜನರ ನರನಾಡಿಗಳಲ್ಲಿ ಸೇರಿ ಹೋಗಿದೆ ಅನಿಸುತ್ತದೆ. ಗ್ರಹ , ಗ್ರಹಣ ,ಹಾವು ,ಹಪ್ಪಟೆ ಹೀಗೆ ಪ್ರಕೃತಿಯ ಒಂದೊಂದು ವಿಸ್ಮಯಗಳನ್ನು ತೋರಿಸಿ ಅದಕ್ಕೊಂದು ಕಥೆ ಕಟ್ಟಿ ಜನರ ಶೋಷಣೆ ಮಾಡುವುದು ದಿನೇ ದಿನೇ ಹೆಚ್ಚುತ್ತಲೇ ಇದೆ. ಅದಕ್ಕೆಲ್ಲಾ ಗುರಾಣಿಯಂತೆ ‘ನಂಬಿಕೆ’ ಅನ್ನೋ ಹೆಸರು , ನಂಬಿಕೆಗಳನ್ನು ಪ್ರಶ್ನಿಸುವಂತಿಲ್ಲ ಎಂಬ ಕಟ್ಟಾ ಫರ್ಮಾನು ಬೇರೆ. ನಂಬಿಕೆ ಅನ್ನೋದೊಂದು anticipatory ರಕ್ಷಣಾ ವ್ಯವಸ್ಥೆ ಆಗಿಬಿಟ್ಟಿದೆ. ಯಾವುದೇ ವಿಷಯದಲ್ಲಿ ಪ್ರಶ್ನೆಯೆತ್ತಬಾರದು ಎಂದರೆ ಅವರ ಬಳಿ ಸಮಂಜಸ ಉತ್ತರವಿಲ್ಲ, ಅಲ್ಲೇನೋ ಹುಳುಕಿದೆ ಎಂದೇ ಅರ್ಥ
ಇದು ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ , ಎಲ್ಲಾ ಧರ್ಮಗಳಲ್ಲೂ ಬೇರೆ ಬೇರೆ ಆಯಾಮಗಳಲ್ಲಿ ಇಂತಾ ಶೋಷಕರಿದ್ದಾರೆ.
ಆದರೆ ಜೀವಸಂಕುಲದಲ್ಲೆ ಸ್ವಂತಕ್ಕೆ ದೇಹದಲ್ಲೊಂದು ಅತ್ಯಂತ ಅಭಿವೃದ್ಧಿ ಹೊಂದಿರುವ ಮೆದುಳು ಹೊಂದಿರುವ ಮನುಷ್ಯ ಯಾವತ್ತೂ ಸತ್ಯವನ್ನು ಮಾತ್ರ ನಂಬಬೇಕು , ಸತ್ಯವು ಮಾತ್ರ ನಂಬಿಕೆಯಾಗಬೇಕು. ಆಗಲೇ ಸ್ವಾಭಿಮಾನಿ, ವಿಚಾರವಂತ ಸಮಾಜವೊಂದರ ನಿರ್ಮಾಣ ಸಾಧ್ಯ.

ಇದಿಷ್ಟು ಕವಿರಾಜ್ ಅವರ ಬರಹ

***

ಮಂಸೋರೆಯವರ ಕಿರುಬರಹ ಹೀಗಿದೆ

“ಕಳೆದ ವಾರ ಗೋವಾ ಚಲನಚಿತ್ರೋತ್ಸವಕ್ಕೆ ಹೋದಾಗ, ಹೋಟೆಲಿನಲ್ಲಿ ಬೆಳಿಗ್ಗೆ ತಿಂಡಿಗೆ ಬಫೆಟ್‌‌‌ ಅಲ್ಲಿ ವೆಜ್ಜು, ನಾನ್-ವೆಜ್ಜು ಇಟ್ಟಿದ್ದರು. ನಾನು chicken sausage, ಮೊಟ್ಟೆನ ತಟ್ಟೆಗೆ ಹಾಕಿಕೊಳ್ಳುವಾಗ ಇಬ್ಬರು ಪರಿಚಿತರು ಅಲ್ಲಿಗೆ ಬಂದರು, ಅವರೂ ಅವರಿಗೆ ಬೇಕಾದ ತಿಂಡಿ ತಟ್ಟೆಗೆ ಹಾಕಿಕೊಂಡು ಅಲ್ಲಿಗೆ ಬಂದರು, ನಾನು ಅವರಿಗೆ ಮೊಟ್ಟೆ ಕೊಡಲು ಹೋದೆ, ಅವರು ಇಲ್ಲಾ ನಾವು ವೆಜ್ಜು, ನಮ್ ಪಾಲಿಂದು ನೀವೇ ತಿನ್ನಿ ಅಂತಂದ್ರು.
ಸರಿ ಅಂತಂದೆ.
ನಮ್ಮ ಮಾತುಕತೆ ಮುಂದುವರೆಯಿತು.
ಅಷ್ಟೇ!
ತಿಂತೀರಾ ಅಂತಾ ಕೇಳೋದ್ರಲ್ಲಿ ತಪ್ಪೇನಿದೆ.
ಸಿಂಪಲ್!.

***

ಹಂಸಲೇಖ ಅವರ ಪ್ರಕರಣದ ಹಿನ್ನೆಲೆಯಲ್ಲಿ ಮಾಂಸಾಹಾರ ಚರ್ಚೆ ಮುನ್ನೆಲೆಗೆ ಬಂದ ಬಳಿಕ ಕನ್ನಡ ಚಿತ್ರರಂಗದ ಅನೇಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ನಟ ಚೇತನ್‌, ಕಿರಣ್ ಶ್ರೀನಿವಾಸ್‌ ಅವರು ಹೀಗಾಗಲೇ ಆಹಾರ ಅಸಹಿಷ್ಣುತೆಯನ್ನು ಖಂಡಿಸಿದ್ದಾರೆ. ಸೋಮವಾರ ಪೋಸ್ಟ್ ಮಾಡಲಾದ ಕವಿರಾಜ್ ಬರಹ ವ್ಯಾಪಕವಾಗಿ ಹಂಚಿಕೆಯಾಗಿದೆ.


ಇದನ್ನೂ ಓದಿರಿ: ‘ಆಹಾರ ನಮ್ಮ ಹಕ್ಕು, ಬಾಡು ತಿನ್ನಲಿ ಮಠದ ಬೆಕ್ಕು’: ಪ್ರತಿಭಟನಾಕಾರರ ಆಕ್ರೋಶ


+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಹೌದು. ಚಿತ್ರ ಸಾಹಿತಿ ಆಯುಷ್ಮಾನ್ ಕವಿರಾಜ್ ರವರು ಅಕ್ಷರಶಃ ಸತ್ಯವಾದುದನ್ನೇ ತಮ್ಮ ಬರವಣಿಗೆಯಲ್ಲಿ ವ್ಯಕ್ತಪಡಿಸಿದ್ದಾರೆ. ಮತ್ತು ಸಹೋದರ ಆಯುಷ್ಮಾನ್ ಮಂಸೋರೆ ರವರೂ ಸಹ ಆಹಾರ ಪದ್ದತಿ ಅವರವರ ಇಚ್ಚೆ ಎಂಬುದನ್ನು ವ್ಯಕ್ತ ಪಡಿಸಿದ್ದಾರೆ.
    ಆದರೆ ಸಾವಿರಾರು ವರ್ಷಗಳಿಂದ ನಮ್ಮ ಭಾರತ ದೇಶದ ಬಹು ಜನರ ಆಹಾರ ಪದ್ಧತಿಯ ಮೇಲೆ ಹತ್ತು ಹಲವಾರು ರೀತಿಯಲ್ಲಿ ಆಕ್ರಮಣ ಎಸಗಿದ್ದಾರೆ. ನಂಬಿಕೆ ಎಂಬ ಮೂಡ ನಂಬಿಕೆಯನ್ನು ಬಲವಂತವಾಗಿ ಮೆದಳಿಗೆ ತುರುಕಿ ವಿಕೃತಾನಂದ ಅನುಭವಿಸುತ್ತಿದ್ದಾರೆ. ಇದನ್ನೇ ಬಹು ಜನರು ಸಂಸ್ಕೃತಿ, ಸಂಸ್ಕಾರ, ಮತ್ತು ಸಂಪ್ರದಾಯ ಇವುಗಳೆಲ್ಲವೂ ಪ್ರಶ್ನಾತೀತ ಎನ್ನುವ ನಂಬಿಕೆ ಎನ್ನುವ ಭ್ರಮೆಯ ಕಡಲಲ್ಲಿ ಬಹುಜನರನ್ನು ಮುಳುಗಿಸಿ ತಟದಲ್ಲಿ ನಿಂತು ಗಹಗಹಿಸಿ ನಗುತ್ತಲಿದ್ದಾರೆ ಬೆರಳೆಣಿಕೆಯ ಕನಿಷ್ಠ ಜನ.
    ಅಪ್ಪ ಹಾಕಿದ ಆಲದ ಮರಕ್ಕೆ ಗೋಣು ಬಿಗಿದುಕೊಳ್ಳಲೂ ಸಹ ಇನ್ನೊಬ್ಬರ ತಿಥಿ ಗಳಿಗೆ ಕಾಲಗಳನ್ನು ಅವಲಂಬಿಸಲು ಹಾತೊರೆಯುವ ಜನ ಮತ್ತು ಸಾಲ ಮಾಡಿ ಹಬ್ಬ ಹರಿದಿನಗಳನ್ನು ಮಾಡುವ ನಾಗರೀಕರು ತಮ್ಮ ಮಕ್ಕಳ ಭವಿಷ್ಯ ರೂಪಿಸಲು ಹಿಂದೆ ಮುಂದೆ ಯೋಚನೆ ಮಾಡುವ ಪರಿಸ್ಥಿತಿಗೆ ಬಂದು ನಿಂತಿದ್ದಾರೆ. ಧನ್ಯವಾದಗಳು.

  2. ಓದಿದೆ ಈ ಮಹಾಶಯರೆ ಲೇಖನನ. ನೀವೇ ಹೇಳೋಹಾಗೆ ಒಬ್ಬರ ಆಹಾರ ಪದ್ದತಿನ ಪ್ರಶ್ನಿಸೋ ಹಕ್ಕು ಯಾರಿಗೂ ಇಲ್ಲ. ಒಬ್ಬ ವ್ಯಕ್ತಿ ಮುಗ್ಧ ಅಥವಾ ತಿಳುವಳಿಕೆ ಇಲ್ಲದವ ಆಗಿದ್ದರೆ ಅವನ ಪ್ರಶ್ನೆಗೆ ನಮ್ಮ ಆಹಾರದ ಬಗ್ಗೆ ವಿವರಿಸಬಹುದು ಅಥವಾ ನೀವೇ ಹೇಳಿದ ಹಾಗೆ ಪರಿಚಯವಿದ್ದು ಅವರ ಆಹಾರದ ಬಗೆಗೆ ಗೊತ್ತಿಲ್ಲದಿದ್ದರೆ ತಿಳಿಸಬಹುದು, ಒಬ್ಬ ಮಹಾನ್ ಸಾಧಕನ ಎಲ್ಲ ಆಗು ಹೋಗುಗಳ ಪರಿಚಯವಿದ್ದೂ ಅಲ್ಲದೆ ತಾನೂ ಒಬ್ಬ ಪ್ರಭಾವಿ ವ್ಯಕ್ತಿಯಾಗಿ ಸಾರ್ವಜನಿಕವಾಗಿ ಈ ಥರ ಮಾತಾಡುವುದು ಹೊಣಿಗೇಡಿತನವಾಗುತ್ತದೆ. ಹುಲಿ, ಸಿಂಹಗಳ ಬಗೆಗೆ ಬಾಲಿಶ ಎನ್ನುವಂತೆ ಮಾತಾಡಿದ್ದೀರಿ. ಮಾನವನೇನು ಕಾಡು ಪ್ರಾಣಿಯೇ? ವಿಜ್ಞಾನವೇ ಹೇಳುತ್ತದೆ, ಮಾನವ ಶರೀರ ಮಾಂಸಾಹಾರಕ್ಕಲ್ಲ ಎಂದು. ಹಾಗೆ ಯಾವುದೇ ಆಹಾರವನ್ನು ಹೊಲಸು ಅಂದಿದ್ದು ನನ್ನ ಗಮನಕ್ಕೆ ಬಂದಿಲ್ಲ ಅದಾರು ಹೇಳುತ್ತಾರೋ? ನಿಜ ಹಬ್ಬ-ಹರಿದಿನ ತಯಾರಿಸುವ ಆಹಾರದ ಬಗೆಗೆ ಹೀಗೇಕೆ ಎಂದು ಪ್ರಶ್ನಿಸಲಾಗುತ್ತದೆಯೇ? ಕೆಲವು ಹಬ್ಬಗಳಲ್ಲಿ ಮಾಂಸಾಹಾರವನ್ನೇ ಮಾಡುತ್ತಾರೆ. ಅವರ ಅವರ ದೇವರು ನಂಬಿಕೆ ಅವರಿಗೆ ಬಿಡಬೇಕು, ಇದು ಯಾರೂ ಯಾರಿಗೂ ಹೇರಿದ್ದಲ್ಲ. ತುಂಬಾ ಜನ ಕೂಡಿದಾಗ ಎಲ್ಲರಿಗೂ ಸಮ್ಮತವಾದ ಆಹಾರ ಮಾಡುವುದರಿಂದ ಎಲ್ಲರಿಗೂ ಹಿಂಜರಿಕೆ ಇಲ್ಲದೆ ಊಟಮಾಡಲು ಅನುಕೂಲವಾಗುತ್ತದೆ. ಸುಮ್ಮನೆ ಏನೇನೋ ಮಾತಾಡಿ ಸಮಾಜದ ಒಗ್ಗಟ್ಟಿನಲ್ಲಿ ಹುಳಿ ಹಿಂಡೋ ಕೆಲಸ ಮುಂದುವರಿಸಬೇಡಿ.

LEAVE A REPLY

Please enter your comment!
Please enter your name here

- Advertisment -

Must Read

ಯುಪಿ ಚುನಾವಣೆ: ಮಹಿಳೆಯರಿಗೆ ಕಾಂಗ್ರೆಸ್‌ ಆದ್ಯತೆ; ಉಳಿದ ಪಕ್ಷಗಳ ಕಥೆಯೇನು..?

0
ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯು ಬಿಜೆಪಿ ನೇತೃತ್ವದ ಎನ್‌ಡಿಎ, ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ, ಕಾಂಗ್ರೆಸ್ ಪಕ್ಷಗಳ ನಡುವಿನ ಸ್ಪರ್ಧೆಯಾಗಿದೆ. ಮಾಯಾವತಿಯವರ ಬಿಎಸ್‌ಪಿ ಪಕ್ಷ ಈ ಬಾರಿ ಇದ್ದು ಇಲ್ಲದಂತಾಗಿದೆ. ಬಿಜೆಪಿಯ...
Wordpress Social Share Plugin powered by Ultimatelysocial