Homeಕರ್ನಾಟಕ‘ಆಹಾರ ನಮ್ಮ ಹಕ್ಕು, ಬಾಡು ತಿನ್ನಲಿ ಮಠದ ಬೆಕ್ಕು’: ಪ್ರತಿಭಟನಾಕಾರರ ಆಕ್ರೋಶ

‘ಆಹಾರ ನಮ್ಮ ಹಕ್ಕು, ಬಾಡು ತಿನ್ನಲಿ ಮಠದ ಬೆಕ್ಕು’: ಪ್ರತಿಭಟನಾಕಾರರ ಆಕ್ರೋಶ

- Advertisement -
- Advertisement -

“ನಮ್ಮ ಆಹಾರ ನಮ್ಮ ಹಕ್ಕು, ಬಾಡು ತಿನ್ನಲಿ ಮಠದ ಬೆಕ್ಕು; ನಿಮ್ಮ ಆಹಾರ ನಿಮ್ಮ ಹಕ್ಕು, ಹಾಲು ಕುಡಿಯಲಿ ಮನೆಯ ಬೆಕ್ಕು, ಬಾಡೇ ನಮ್‌ ಗಾಡು ಬೂದುಗುಂಬಳ ನಿಮ್ಮ ಗಾಡು”- ಹೀಗೆ ಕ್ರಾಂತಿಗೀತೆಯನ್ನು ಹಾಡುವ ಮೂಲಕ ಮಾಂಸಾಹಾರದ ಕುರಿತ ಅಸಹನೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಆಗುತ್ತಿರುವ ಅಡ್ಡಿಯನ್ನು ಪ್ರತಿಭಟನಾಕಾರರು ಖಂಡಿಸಿದರು.

ಅಸ್ಪೃಶ್ಯತೆ, ಜಾತೀಯತೆ, ಅಸಮಾನತೆಗಳ ವಿರುದ್ಧ ದನಿ ಎತ್ತಿದ ಸಂಗೀತ ನಿರ್ದೇಶಕ ಹಂಸಲೇಖ ಅವರನ್ನು ಬೆಂಬಲಿಸಿ ಸಂವಿಧಾನ ಸಂರಕ್ಷಣಾ ಐಕ್ಯತಾ ಸಮಿತಿ (ಕರ್ನಾಟಕ) ವತಿಯಿಂದ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಬೆಂಗಳೂರಿನಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥಾ ಮತ್ತು ಬೃಹತ್‌ ಸಮಾವೇಶದಲ್ಲಿ ಬ್ರಾಹ್ಮಣ್ಯದ ವಿರುದ್ಧ ಘೋಷಣೆಗಳು ಮೊಳಗಿದವು. ಮನುವಾದದ ಹಿಡಿತಕ್ಕೆ ಸಿಲುಕು ಬಲಿಪಶುಗಳಾಗುತ್ತಿರುವ ದಲಿತಾದಿ ಶೂದ್ರ ಸಮುದಾಯಗಳ ಯುವಕರನ್ನು ರಕ್ಷಿಸಬೇಕೆಂಬ ಆಶಯ ವ್ಯಕ್ತವಾಯಿತು.

ಕೇಂದ್ರ ರೈಲು ನಿಲ್ದಾಣದಿಂದ ಹಿಡಿದು, ಫ್ರೀಡಂ ಪಾರ್ಕ್‌ವರೆಗೆ ಶಾಂತಿಯುತ ಜಾಥಾ ನಡೆಯಿತು. ಬಳಿಕ ನಡೆದ ಸಮಾವೇಶದಲ್ಲಿ ಚಿಂತಕರು ಮಾತನಾಡಿದರು. ಉರಿಲಿಂಗಿಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಮಾತನಾಡಿ, “ಪೇಜಾವರ ಮಠದ ಸ್ವಾಮೀಜಿಯವರು ನನಗೆ ಬಹಳ ಆತ್ಮೀಯರು. ಅವರು ತೀರಿಕೊಳ್ಳುವ ಮೂರು ತಿಂಗಳ ಹಿಂದೆ ನಮ್ಮನ್ನು ಮೈಸೂರಿನ ಕೃಷ್ಣಧಾಮಕ್ಕೆ ಕರೆದುಕೊಂಡು ಮಾತನಾಡಿಸಿದರು. ಮೈಸೂರಿನ ದಲಿತ ಕೇರಿಗಳಾದ ಅಶೋಕಪುರಂಗೆ, ಗಾಂಧಿನಗರಕ್ಕೆ ಹೋಗಬೇಕೆಂದು ನಿರ್ಧರಿಸಿದ್ದೇನೆ, ನೀವೆಲ್ಲ ನಿಂತು ಸಹಕರಿಸಿ ಎಂದರು. ಪೂಜ್ಯ ಪೇಜಾವರ ಸ್ವಾಮೀಜಿಯವರೇ, ನೀವು ನಮ್ಮ ಅಶೋಕಪುರಂಗಾಗಲೀ, ಗಾಂಧಿನಗರಕ್ಕಾಗಿ ಬರಬೇಕಾದರೆ ನಮ್ಮದೊಂದು ಷರತ್ತಿದೆ. ನೀವು ನಮ್ಮ ಮೊಹಲ್ಲಾಕ್ಕೆ ಬರುವುದಾದರೆ ಬಾಬಾ ಸಾಹೇಬ್‌ ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬರಬೇಕು ಎಂದು ಆಗ್ರಹಿಸಿದೆವು. ಅವರು ಆಗುವುದಿಲ್ಲ ಎಂದರು. ಸಂವಿಧಾನ ಶಿಲ್ಪಿಗೆ ಮಾಲಾರ್ಪಣೆ ಮಾಡುವುದಿಲ್ಲ ಎಂಬುದು ರಾಷ್ಟ್ರದ್ರೋಹ ಅಲ್ಲವಾ?” ಎಂದು ಪ್ರಶ್ನಿಸಿದರು.


ಇದನ್ನೂ ಓದಿರಿ: ರೈತ ಹೋರಾಟಕ್ಕೆ ಒಂದು ವರ್ಷ: ರಾಜ್ಯದಲ್ಲಿ ನಡೆದ ಪ್ರತಿಭಟನೆ ಚಿತ್ರಗಳಲ್ಲಿ ನೋಡಿ


ಈ ದೇಶದ ಸಂವಿಧಾನ ಒಪ್ಪಲ್ಲ ಎಂಬುದು ರಾಷ್ಟ್ರದ್ರೋಹ ಅಲ್ಲವಾ? ಈ ನೆಲದ ಕಾನೂನಿನ ಮುಂದೆ ಯಾವ ಸ್ವಾಮೀಜಿಯು ದೊಡ್ಡವರಲ್ಲ. ಯಾವ ಯತಿಗಳೂ ದೊಡ್ಡವರಲ್ಲ. ಈ ಸಂವಿಧಾನ ದೊಡ್ಡದು. ಪ್ರತಿಮೆಗೆ ಮಾಲಾರ್ಪಣೆ ಮಾಡುವುದು ಬೇಡ ಸ್ವಾಮೀಜಿ, ದಲಿತರು ಕೊಡುವ ಒಂದು ಲೋಟ ಪಾನಕ ಅಥವಾ ಮಜ್ಜಿಗೆಯನ್ನಾದರೂ ಕುಡಿಯಿರಿ ಎಂದೆವು. ನನ್ನಿಂದಾಗದು ಎಂದರು. ಕುರಿ ಫ್ರೈಯೋ, ಚಿಕನ್ ಫ್ರೈಯೋ ಅಲ್ಲ. ಕೇವಲ ಪಾನಕ, ಮಜ್ಜಿಗೆ ಕುಡಿಯಲೂ ಆಗಲ್ಲ ಎನ್ನುವ ಸ್ವಾಮೀಜಿಗಳು ದಲಿತ ಕೇರಿಗೆ ಪಾದಾಯಾತ್ರೆ ಬರುವ ಉದ್ದೇಶವಾದರೂ ಏನು? ಎಂದು ಜ್ಞಾನಪ್ರಕಾಶ್ ಸ್ವಾಮೀಜಿ ಕೇಳಿದರು.

“ಒಂದು ಲೋಟ ಮಜ್ಜಿಗೆಯನ್ನು ತೆಗೆದುಕೊಳ್ಳಲು ಯೋಗ್ಯತೆ ಇಲ್ಲದ ನೀವು, ನಿಮ್ಮ ಪಾದಯಾತ್ರೆ ಬೂಟಾಟಿಕೆಯಲ್ಲವೇ ಎಂದು ಹಂಸಲೇಖರು ಹೇಳಿರುವುದರಲ್ಲಿ ಏನು ತಪ್ಪಿದೆ. ಹೀಗೆ ಕೇಳಿದರೆ ಸಂವಿಧಾನ ವಿರೋಧಿಯೇ, ಜನಾಂಗ ವಿರೋಧಿಯೇ? ಯಾವ ಸಂವಿಧಾನದಲ್ಲಿ ಇದ್ದೀರಿ ನೀವು? ಯಾವ ಸಂವಿಧಾನಕ್ಕೆ ನೀವು ಸೆಲ್ಯೂಟ್ ಮಾಡುತ್ತೀರಿ?” ಎಂದು ಪ್ರಶ್ನಿಸಿದರು.

“ಇಂದು ಕ್ಷಮೆಯನ್ನು ಕೇಳಬೇಕಾದವರು ಯಾರು? ಒಂದು ಪುಟ್ಟ ಮಗು ದೇವಸ್ಥಾನದಲ್ಲಿ ಹೆಜ್ಜೆಹಾಕಿದ್ದಕ್ಕೆ ದಂಡ ಹಾಕಿದಿರಲ್ಲ, ಯಾರು ಯಾರನ್ನು ಕ್ಷಮೆ ಕೇಳಬೇಕು? ಒಂದು ಪ್ಲಾಸ್ಟಿಕ್‌ ಬಕೆಟ್‌ ಮುಟ್ಟಿದ್ದಕ್ಕೆ ಒಬ್ಬ ಗರ್ಭಿಣಿ ಹೆಣ್ಣು ಮಗಳನ್ನು ಒದ್ದು ಸಾಯಿಸಿದಿರಲ್ಲ, ಯಾರು ಕ್ಷಮೆ ಕೇಳಬೇಕು? ದಲಿತ ವಾಚ್‌ ಕಟ್ಟಿದ ಎಂದು ಚೆನ್ನೈನಲ್ಲಿ ಕೈ ಕತ್ತರಿಸಿ ಹಾಕಿದಿರಲ್ಲ, ಯಾರು ಕ್ಷಮೆ ಕೇಳಬೇಕು? ಮೀಸೆ ಬಿಟ್ಟ ಕಾರಣಕ್ಕೆ ದಲಿತನಿಗೆ ಚಾಕು ಹಾಕಿ ಚುಚ್ಚಿದಿರಲ್ಲ, ಯಾರು ಕ್ಷಮೆ ಕೇಳಬೇಕು? ಮಂಗಳೂರಿನಲ್ಲಿ ಪೊಲೀಸ್ ಡ್ರಸ್‌ನಲ್ಲಿದ್ದ ನಮ್ಮ ಹೆಣ್ಣು ಮಗಳನ್ನು ಅಸ್ಪೃಶ್ಯರು ಎಂದು ಹೇಳಿ ಹೊರಗೆ ಕಳಿಸಿದಿರಲ್ಲ, ಯಾರು ಕ್ಷಮೆ ಕೇಳಬೇಕು? ನಿಮ್ಮಂಥ ನೀಚರು ಯಾರಾದರೂ ಜಗತ್ತಿನಲ್ಲಿ ಇದ್ದಾರಾ? ನಾಡಿನ ಬಹುಸಂಖ್ಯಾತರ ಕ್ಷಮೆಯನ್ನು ನೀವೆಷ್ಟು ಕೇಳಬೇಕು” ಎಂದು ಪ್ರಶ್ನೆಗಳ ಸುರಿಮಳೆಗೈದರು.

ಪ್ರೊ.ಹ.ರಾ.ಮಹೇಶ್ ಮಾತನಾಡಿ, “ಬಿಎಸ್‌ಪಿ ಹೊರತುಪಡಿಸಿ ಯಾವ ವಿರೋಧ ಪಕ್ಷವೂ ಹಂಸಲೇಖರ ಪರ ನಿಲ್ಲದಿರುವುದು ವಿಷಾದನೀಯ. ಹಂಸಲೇಖರು ಕ್ಷಮೆ ಕೇಳಿದ ಬಳಿಕವೂ ಅವರಿಗೆ ಮಾನಸಿಕ ಕಿರುಕುಳ ನೀಡಲಾಗಿದೆ. ಯಾಕೆಂದರೆ ಅವರು ಅಬ್ರಾಹ್ಮಣರಾಗಿದ್ದಾರೆ. ಬಸವನಗುಡಿಯ ಬ್ರಾಹ್ಮಣ್ಯ, ಹಂಸಲೇಖ ಅವರ ಮೇಲೆ ಪ್ರಕರಣ ದಾಖಲಿಸಿದೆ. ವಿರೋಧ ಪಕ್ಷಗಳು ಹಂಸಲೇಖರ ಪರ ನಿಂತಿದ್ದರೆ ಪ್ರಕರಣ ದಾಖಲಾಗುತ್ತಿರಲಿಲ್ಲ” ಎಂದು ಅಭಿಪ್ರಾಯಪಟ್ಟರು.


ಇದನ್ನೂ ಓದಿರಿ: ಅಧಿವೇಶನ ಮುಗಿಯುವವರೆಗೆ ಪ್ರಾರ್ಥನಾ ಸಭೆ ನಡೆಸದಂತೆ ಬೆಳಗಾವಿ ಕ್ರಿಶ್ಚಿಯನ್ನರಿಗೆ ಪೊಲೀಸರ ‘ಸ್ನೇಹಪೂರ್ವಕ’ ಎಚ್ಚರಿಕೆ!


ಅಂಬೇಡ್ಕರ್‌ ಅವರನ್ನು ಉಳಿಸಿಕೊಳ್ಳುವುದು ಕೇವಲ ದಲಿತರ ಕೆಲಸವಲ್ಲ. ಸಂವಿಧಾನದ ಉಳಿವಿಗಾಗಿ ಮಾತನಾಡುವವರ ಪರ ನಾವು ನಿಲ್ಲದಿದ್ದರೆ ನಾವು ಸಂವಿಧಾನವನ್ನು ಕಳೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

ಚಿಂತಕ ಎಲ್‌.ಎನ್‌.ಮುಕುಂದರಾಜ್‌ ಮಾತನಾಡಿ, “ಮಾಂಸ ತಿನ್ನುವವರನ್ನು ರಾಕ್ಷಸರು ಎಂದು ಒಬ್ಬ ಹೆಣ್ಣು ಮಗಳು ಹೇಳಿದ್ದು ನೋಡಿದೆವು. ಹೌದು ನಾವು ರಾಕ್ಷಸರು. ರಾಕ್ಷಸ ಎಂದರೆ ರಕ್ಷಕ. ರಾಕ್ಷಸ ಎಂದರೆ ನೆಲವನ್ನು ಉತ್ತುವವನು ಮತ್ತು ಬಿತ್ತುವವನು” ಎಂದು ವಿಶ್ಲೇಷಿಸಿದರು.

“ವೈದಿಕರ ಮಠ, ಮಂದಿರಗಳನ್ನು ಬಹಿಷ್ಕರಿಸೋಣ. ನಮ್ಮದೇ ದೇವರುಗಳನ್ನು ಪೂಜಿಸೋಣ. ಭಾರತಾಂಭೆಯನ್ನು ಪೂಜಿಸೋಣ” ಎಂದು ತಿಳಿಸಿದರು.

ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಮಾತನಾಡಿ, “ಪ್ರತಿಭಟನೆಯ ವೇಳೆ ಒಬ್ಬ ಪುರೋಹಿತ ಹಂಸಲೇಖರ ಭಾವಚಿತ್ರಕ್ಕೆ ಒದೆಯುತ್ತಾನೆ. ಪುರೋಹಿತ ಎಂಬ ಪದದ ಅರ್ಥವಾದರೂ ಈತನಿಗೆ ಗೊತ್ತಿದ್ದರೆ ಈ ಕೆಲಸವನ್ನು ಮಾಡುತ್ತಿರಲಿಲ್ಲ. ಹೀಗೆ ವರ್ತಿಸುವ ಮೂಲಕ ತನಗೇ ತಾನೇ ಅವಮಾನ ಮಾಡಿಕೊಂಡಿದ್ದಾನೆ. ನೀವು ಮನುಷ್ಯರಾ? ಮನುಷ್ಯರಂತೆ ಆಗಬೇಕೆಂದರೆ ಪೆರಿಯಾರ್‌‌, ಬಸವಣ್ಣ, ಕುಂದ್ಮಲ್ ರಂಗರಾವ್‌ ಅವರಂತೆ ಬ್ರಾಹ್ಮಣ್ಯ ಬಿಟ್ಟು ಹೊರಬನ್ನಿ” ಎಂದರು.

“ಶೂದ್ರ ಯುವಕರು ಬಲಿಪಶುಗಳಾಗುತ್ತಿದ್ದಾರೆ. ಪಕ್ಷಾಂತರಿಗಳು ಸಮುದಾಯಗಳನ್ನು ಬಲಿಕೊಡುತ್ತಿದ್ದಾರೆ. ಹಂಸಲೇಖ ಅವರು ತಪ್ಪು ಮಾತನಾಡಿಲ್ಲ. ಹಂಸಲೇಖರ ಮೇಲೆ ಅಹಂಕಾರದ ಶ್ರೇಷ್ಠತೆಯ ವ್ಯಸನದ ಅಜ್ಞಾನ ದಾಳಿ ಮಾಡಿದೆ” ಎಂದು ಹೇಳಿದರು.

ಚಿಂತಕಿ ಬಿ.ಟಿ.ಲಲಿತಾ ನಾಯಕ್ ಮಾತನಾಡಿ, “ಅವರು ದಲಿತ ಕೇರಿಗೆ ಬರಲಿ, ಬಾರದಿರಲಿ ಅಷ್ಟು ಮಹತ್ವ ಕೊಡಬೇಕಾಗಿಲ್ಲ. ಮಾಂಸಾಹಾರವನ್ನು ತಿನ್ನಲು ಕಲಿಸಿದ್ದು ಅವರೇ. ಈಗ ಮಾಂಸಾಹಾರವನ್ನು ಟೀಕಿಸುತ್ತಿದ್ದಾರೆ. ಹಂಸಲೇಖರು ದೊಡ್ಡವರು- ಹೀಗಾಗಿ ಕ್ಷಮೆ ಕೇಳಿದ್ದಾರೆ. ಹಂಸಲೇಖರಿಗೆ ಆಗಿದ್ದು, ಏನು ಮಾಡುತ್ತಿದ್ದೆವೋ ಗೊತ್ತಿಲ್ಲ” ಎಂದು ಹರಿಹಾಯ್ದರು.

ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿ ಮಲ್ಲಿಕಾ ಘಂಟಿ ಮಾತನಾಡಿ, “ಅಂಬೇಡ್ಕರ್‌ ಅವರು ಅಕ್ಷರ ಭಿಕ್ಷೆ ನೀಡದಿದ್ದರೆ ನಾನು ಯಾರದೋ ಮನೆಯಲ್ಲಿ ಸಗಣಿ ಬಾಚಬೇಕಾಗುತ್ತಿತ್ತು” ಎಂದರು.

ಹಂಸಲೇಖರನ್ನು ಮಹಾಗುರು ಎನ್ನುತ್ತಿದ್ದ ಯಾರೂ ಬಂದಿಲ್ಲ. ಎದೆಗೆ ಬೀಜ ಬಿತ್ತದೆ ತಲೆಗೆ ಬೀಜ ಬಿತ್ತಿದರೆ ಎದೆಯಲ್ಲಿ ಅಂತಃಕರಣ ಹೊಮ್ಮುವುದಿಲ್ಲ. ಕೈಗೆ ತ್ರಿಶೂಲ ಬರುತ್ತದೆ ಅಷ್ಟೇ. ಸಂವಿಧಾನ ಓದುವ ವ್ಯವಧಾನ ಇರದ ಶೂದ್ರ ಹುಡುಗರ ತಲೆಯೊಳಗೆ ಸಗಣಿಯನ್ನು ತುಂಬಲಾಗಿದೆ. ಗರ್ಭಗುಡಿಯೊಳಗೆ ಕಸ ಹೊಡೆಯಲು ಈ ಹುಡುಗರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ವಿಷಾದಿಸಿದರು.


ಇದನ್ನೂ ಓದಿರಿ: ಹಂಸಲೇಖ ಹೇಳಿಕೆ ಪರವಾಗಿ ಬೆಂಗಳೂರಿನಲ್ಲಿ ಬೃಹತ್‌ ‘ಜನದನಿ’ ರ್‍ಯಾಲಿ


ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಈವಾಗ ಉಡುಪಿ ಸ್ವಾಮಿ ವಿಧಿವಶರಾಗಿದ್ದಾರೆ ಈಗ ಅವರ ಬಗ್ಗೆ ಅಂಬೇಡ್ಕರ್ ಆರೋಪ ಮಾಡುವ ಜ್ಞಾನಪ್ರಕಾಶ ಸ್ವಾಮಿಗಳೇ ಈ ಬಗ್ಗೆ ನಿಮ್ಮಲ್ಲಿ ಯಾವುದಾದರೂ ಪುರಾವೆಗಳು ಇವೆಯೇ ಅಥವಾ ಪ್ರಚಾರಕ್ಕಾಗಿ ನೀವು ಸುಳ್ಳು ಹೇಳುತ್ತಿರಬಹುದಲ್ಲವೆ!
    ಯಾಕೆಂದರೆ ಯಾವುದೇ ವೇದಿಕೆಯಲ್ಲಿ ಸ್ವಾಮಿಜಿ ಸಮಕ್ಷಮದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಬಹುದಿತ್ತಲ್ಲವೆ.

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...