‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ನಿರ್ಮಿಸಿದವರು ಭಯೋತ್ಪಾದಕ ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಎನ್‌ಡಿಎ ಮೈತ್ರಿಕೂಟದ ಪಾಲುದಾರ, ಬಿಹಾರದ ಮಾಜಿ ಸಿಎಂ ಜಿತನ್ ರಾಮ್ ಮಾಂಝಿ ಒತ್ತಾಯಿಸಿದ್ದಾರೆ.
ಎನ್‌ಡಿಎ ಭಾಗವಾದ ಜೆಡಿಯು ಮತ್ತು ಬಿಜೆಪಿ ಜಂಟಿ ಸರ್ಕಾರವು ಬಿಹಾರದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರಕ್ಕೆ ತೆರಿಗೆ ಮುಕ್ತಗೊಳಿಸಿದ ಒಂದು ದಿನದ ನಂತರ ಈ ಹೇಳಿಕೆ ಹೊರಬಿದ್ದಿದೆ.
1980ರ ದಶಕದ ಉತ್ತರಾರ್ಧದಲ್ಲಿ ನಡೆದ ಕಾಶ್ಮೀರಿ ಪಂಡಿತರ ವಲಸೆ ಮೇಲೆ ಮಾಡಿದ ಚಲನಚಿತ್ರವು ಪಿತೂರಿಯಾಗಿರಬಹುದು. ಕಾಶ್ಮೀರಿ ಪಂಡಿತರು ಕಾಶ್ಮೀರಕ್ಕೆ ಮರಳದಂತೆ ಅವರಲ್ಲಿ ಭಯದ ವಾತಾವರಣವನ್ನು ಹುಟ್ಟು ಹಾಕಲು ಭಯೋತ್ಪಾದಕ ಸಂಘಟನೆಗಳು ಈ ಸಿನಿಮಾವನ್ನು ಮಾಡಿವೆ ಎಂದು ಸರ್ಕಾರದ ಪ್ರಮುಖ ಪಾಲುದಾರ, ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಆರೋಪಿಸಿದ್ದಾರೆ.
ಭಯೋತ್ಪಾದಕ ಸಂಘಟನೆಗಳು ಮತ್ತು ಚಿತ್ರದ ನಿರ್ಮಾಪಕರ ನಡುವಿನ ಸಂಪರ್ಕದ ಬಗ್ಗೆ ಸುಳಿವು ನೀಡಿದ ಮಾಂಝಿ, “ದಿ ಕಾಶ್ಮೀರ್ ಫೈಲ್ ಚಿತ್ರದಲ್ಲಿ ಕಾಶ್ಮೀರಿ ಬ್ರಾಹ್ಮಣರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಲಾಗಿದೆ. ಪಂಡಿತರು ಮರಳಿ ಕಾಶ್ಮೀರಕ್ಕೆ ಹೋಗಬಾರದೆಂದು ಪ್ರಯತ್ನಿಸುತ್ತಿರುವ ಭಯೋತ್ಪಾದಕರ ಬಹುದೊಡ್ಡ ಪಿತೂರಿಯೂ ಇದಾಗಿದೆ” ಎಂದು ಹೇಳಿದರು.
“ದಿ ಕಾಶ್ಮೀರ್ ಫೈಲ್ಸ್” ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸೇರಿದಂತೆ ಚಿತ್ರ ನಿರ್ಮಾಪಕರು ಮತ್ತು ಭಯೋತ್ಪಾದಕ ಸಂಘಟನೆಗಳ ನಡುವೆ ಸಂಭವನೀಯ ಸಂಪರ್ಕ ಇರಬಹುದು. ಈ ಕುರಿತು ತನಿಖೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಸಿನಿಮಾವು ಕಾಶ್ಮೀರಿ ಪಂಡಿತರ ವಸ್ತುಸ್ಥಿತಿಯನ್ನು ಪ್ರದರ್ಶಿಸುತ್ತದೆ ಎಂದು ಹೇಳುವ ಮೂಲಕ ಬಿಜೆಪಿ ಈ ಚಿತ್ರವನ್ನು ಶ್ಲಾಘಿಸಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರೂ ಚಲನಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಯವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜನರನ್ನು ಜಾಗೃತಗೊಳಿಸಲು ಕಾಶ್ಮೀರದ ಕುರಿತು ಹೆಚ್ಚಿನ ಚಲನಚಿತ್ರಗಳನ್ನು ನಿರ್ಮಿಸಿ ಎಂದು ಅವರು ಕರೆ ನೀಡಿದ್ದಾರೆ.
ಇದನ್ನೂ ಓದಿರಿ: ‘ಗುಜರಾತ್ ಫೈಲ್ಸ್’ ಸಿನಿಮಾ ಮಾಡುವೆ, ಪಿಎಂ ಸಹಕರಿಸಬೇಕು: ವಿನೋದ್ ಕಾಪ್ರಿ


