Homeಚಳವಳಿದಲಿತರ ರಕ್ತದಲ್ಲಿ ಚರಿತ್ರೆ ಬರೆಯಲು ತಯಾರಿ: ಕೋಟಗಾನಹಳ್ಳಿ ರಾಮಯ್ಯ ಎಚ್ಚರಿಕೆ

ದಲಿತರ ರಕ್ತದಲ್ಲಿ ಚರಿತ್ರೆ ಬರೆಯಲು ತಯಾರಿ: ಕೋಟಗಾನಹಳ್ಳಿ ರಾಮಯ್ಯ ಎಚ್ಚರಿಕೆ

ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಮಾರ್ಚ್‌ 18 ಮತ್ತು 19ರಂದು ದಾವಣಗೆರೆ ಚಲೋ ನಡೆಯುತ್ತಿದ್ದು, ದಸಂಸದ ಹಿರಿಯ ಜೀವ, ಚಿಂತಕ ಕೋಟಗಾನಹಳ್ಳಿ ರಾಮಯ್ಯ ಅವರು ಆಡಿದ ಭಾಷಣದ ಸಂಕ್ಷಿಪ್ತ ರೂಪ ಇಲ್ಲಿದೆ.

- Advertisement -
- Advertisement -

(ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಮಟ್ಟದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಸಮಾವೇಶ ಮಾರ್ಚ್‌ 18 ಮತ್ತು 19ರಂದು ದಾವಣಗೆರೆಯಲ್ಲಿ ನಡೆಯುತ್ತಿದೆ. ದಾವಣಗೆರೆ ಚಲೋ ಹೆಸರಿನಲ್ಲಿ ಸಮಾವೇಶ ನಡೆಯುತ್ತಿದ್ದು, ದಸಂಸದ ಹಿರಿಯ ಜೀವ, ಚಿಂತಕ ಕೋಟಗಾನಹಳ್ಳಿ ರಾಮಯ್ಯ ಅವರು ಆಡಿದ ಭಾಷಣದ ಸಂಕ್ಷಿಪ್ತ ರೂಪ ಇಲ್ಲಿದೆ.)

ದಲಿತ ಚಳಿವಳಿಯ ಚರಿತ್ರೆಯನ್ನು ಯಾವ ರೀತಿಯಲ್ಲಿ ನೋಡಬೇಕು ಎಂಬ ಪ್ರಶ್ನೆ ನಮ್ಮ ಮುಂದೆ ಇದೆ.  ಇದುವರೆಗೂ ಬಂದಿರುವ ಅಥವಾ ನಿರೂಪಣೆಗೊಂಡಿರುವ ದಲಿತ ಚರಿತ್ರೆ ಮೂವರ ಸುತ್ತ ನಿರೂಪಿಸಲ್ಪಟ್ಟಿದೆ. ಬಿ.ಕೃಷ್ಣಪ್ಪ, ದೇವನೂರ ಮಹಾದೇವ, ಸಿದ್ದಲಿಂಗಯ್ಯ- ಈ ಮೂವರ ಸುತ್ತ ದಲಿತ ಚಳವಳಿಯನ್ನು ಬರೆಯಲಾಗಿದೆ. ಸಂತೋಷ. ಯಾಕೆಂದರೆ ಚಳವಳಿಯ ಹೆಗ್ಗುರುತುಗಳಾಗಿ ಕೆಲವು ವ್ಯಕ್ತಿತ್ವಗಳನ್ನು ನಾವು ಗುರಿಸಿಕೊಳ್ಳುವುದರಿಂದ ಚಳವಳಿಗೆ ದೊಡ್ಡ ಶಕ್ತಿ ಬರುತ್ತದೆ ಎಂಬುದು ನಿಜ.

ಕೃಷ್ಣಪ್ಪ ಅವರನ್ನು ನಾವು ಯಾವ ರೀತಿ ಅರ್ಥ ಮಾಡಿಕೊಳ್ಳುವುದು? ಬಿ.ಕೃಷ್ಣಪ್ಪ ಅವರು ದಲಿತ ಸಂಘರ್ಷ ಸಮಿತಿಯ ಮೊದಲ ರಾಜ್ಯ ಸಂಚಾಲಕರು. ಅವರ ನಾಯಕತ್ವದಲ್ಲಿ ಕರ್ನಾಟಕ ರಾಜ್ಯಾದ್ಯಂತ ಹಲವು ಹೋರಾಟಗಳನ್ನು ಹಲವು ವರ್ಷಗಳ ಕಾಲ ನಾವು ರೂಪಿಸಿದ್ದೇವೆ. ಕೃಷ್ಣಪ್ಪ ಅವರು ಹೋರಾಟ ಮತ್ತು ನುಡಿಯನ್ನು ನಿಭಾಯಿಸಿದ್ದರಿಂದ ಅವರ ಬಗ್ಗೆ ಅಪಾರ ಗೌರವವಿದೆ.

ದಸಂಸಕ್ಕೂ ಮೊದಲು ದಲಿತ ಲೇಖಕ ಕಲಾವಿದರ (ದಲೇಕ) ಬಳಗವಿತ್ತು. ಸವಾಲುಗಳನ್ನು ದಲೇಕದಿಂದ ಮಾತ್ರ ಎದುರಿಸಲು ಸಾಧ್ಯವಿಲ್ಲ. ಸಂಘಟನೆ ಅಗತ್ಯವಿದೆ ಎಂದು ಅರಿತೆವು. ದಲಿತ ಸಂಘರ್ಷ ಸಮಿತಿಯ ತಾಯಿ ದಲೇಕಯಿಸಂ ಎಂಬ ಸತ್ಯವನ್ನು ನಾವು ಒಪ್ಪಿಕೊಳ್ಳಬೇಕು. ಯಾಕೆಂದರೆ ಇವತ್ತಿನ ಸಮಸ್ಯೆಗಳನ್ನು ಇದರ ಮೂಲಕ ನಿವಾರಿಸಿಕೊಳ್ಳಬಹುದು. ದಲಿತ ಸಂಘರ್ಷ ಸಮಿತಿ ಒಡೆದುಹೋಗಿ ಹಲವು ವಿಭಾಗಗಳಾಗಿ ಹೋಗಿದ್ದು, ದಲೇಕಯಿಸಂ ಥರದ ಒಂದು ತಾಯಿ ಗರ್ಭ ಬೇಕಾಗಿದೆ.

ಬಿ.ಕೃಷ್ಣಪ್ಪ ಎಂದರೆ ಹೋರಾಟದ ಸ್ಫೂರ್ತಿ. ರಾಜ್ಯದ ಯಾವುದೇ ಮೂಲೆಯಲ್ಲಿ ಹೋರಾಟ ನಡೆದರೂ ಬಿ.ಕೃಷ್ಣಪ್ಪ ಅವರು ಅಲ್ಲಿರುತ್ತಿದ್ದರು. ಹೀಗಾಗಿ ಕೃಷ್ಣಪ್ಪ ಅವರು ದಲಿತ ಜನಮಾನಸದಲ್ಲಿ ಉಳಿದಿದ್ದಾರೆ. ಬಾಬಾ ಸಾಹೇಬರ ಹೆಸರನ್ನು ಹೇಗೆ ನಾವು ಹೇಗೆ ನೆನಪಿಸಿಕೊಳ್ಳುತ್ತೇವೆಯೋ ಹಾಗೆಯೇ ಬಿ.ಕೃಷ್ಣಪ್ಪ ಅವರ ಹೆಸರನ್ನು ನಾವು ನೆನಪಿಸಿಕೊಳ್ಳಬೇಕಾಗುತ್ತದೆ.

ಇದನ್ನೂ ಓದಿರಿ: `ಕಾಶ್ಮೀರ್‌ ಫೈಲ್ಸ್‌‌’ ಎಂದು ಕೂಗುತ್ತಿರುವವರಿಗೆ ‘ದಲಿತ್‌ ಫೈಲ್ಸ್‌‌’ ಕಾಣುವುದಿಲ್ಲವೇ?

ನಲವತ್ತು ವರ್ಷಗಳ ಹಿಂದೆ ನಮಗೆ ಇದ್ದಂತಹ ಸವಾಲುಗಳೇ ಬೇರೆ. ಇಂದಿನ ಸಮಸ್ಯೆಗಳೇ ಬೇರೆ ಇದೆ. 1991ರವರೆಗೆ ದಲಿತ ಚಳಿವಳಿಯ ತಿಳಿವಳಿಕೆ, ತಾತ್ವಿಕತೆ, ನಡೆ- ಇಡೀ ಸಮುದಾಯವನ್ನು ಒಳಗನ್ನು, ಆಂತರ್ಯ, ಅಂತಸತ್ವವನ್ನು ಚೈತನ್ಯಗೊಳಿಸುವಂತೆ ಇತ್ತು. ಕ್ರಾಂತಿಕಾರಕವಾಗಿತ್ತು.  1991ರ ನಂತರ ಏನಾಯಿತೆಂದು ನಾವು ವಿಮರ್ಶೆ ಮಾಡಿಕೊಳ್ಳಲೇಬೇಕಾಗುತ್ತದೆ. ಚಳವಳಿಯೊಂದು ವ್ಯಕ್ತಿಗಳನ್ನು ಮೀರಿ ಯೋಚಿಸಬೇಕಾಗುತ್ತದೆ. ವಿಮರ್ಶೆ ಇಲ್ಲದೆ ಯಾವುದೇ ರೀತಿಯ ಚಳವಳಿಗಳು ಗಟ್ಟಿಗೊಳ್ಳುವುದಿಲ್ಲ. ಚಳವಳಿಯ ದಾರಿಗಳು ಸುಲಭಗೊಳ್ಳುವುದಿಲ್ಲ.

ಕಬನ್‌ ಪಾರ್ಕ್‌‌ನಲ್ಲಿ 1991ರಲ್ಲಿ ನಡೆದ ಕಾರ್ಯಕ್ರಮ ರಾಜಕೀಯ ವೇದಿಕೆಯಾಗಿದ್ದನ್ನು ನೆನಪಿಸಿಕೊಳ್ಳಬೇಕು. ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಬಿ.ಕೃಷ್ಣಪ್ಪ ಅವರು ಜನತಾ ಪಕ್ಷದ ಚಿಹ್ನೆಯಲ್ಲಿ ಸ್ಪರ್ಧಿಸಿದ್ದರು. ನೀವು ಚುನಾವಣೆಯಲ್ಲಿ ನಿಲ್ಲುತ್ತಿರುವ ಪಕ್ಷ ಬಲಿಷ್ಠ ಜಾತಿಯಾದ ಒಕ್ಕಲಿಗರ ಪ್ರಾಬಲ್ಯ ಹೊಂದಿದೆ. ಇವರ ವಿರುದ್ಧ ಹೋರಾಟ ಮಾಡುತ್ತ ಬಂದಿದ್ದೇವೆ. ನೀವು ಅದೇ ಪಕ್ಷದಿಂದ ಸ್ಪರ್ಧಿಸಿದ್ದೀರಿ ಎಂದು ನಾವು ಆಕ್ಷೇಪ ಎತ್ತಿದೆವು.

ಚುನಾವಣೆಯಲ್ಲಿ ಸ್ಪರ್ಧಿಸಿ ನಾವು ಶಾಸನ ಸಭೆಗಳಿಗೆ ಹೋಗದಿದ್ದರೆ ನಮ್ಮ ನೋವುಗಳಿಗೆ ಪರಿಹಾರವಿಲ್ಲ ಎಂಬ ನಂಬಿಕೆ ಹಾಗೂ ಆಶಯಗಳಿಂದ ಕೃಷ್ಣಪ್ಪ ಅವರು ಚುನಾವಣೆಗೆ ಹೋದರು. ಖಂಡಿತ ಅವರು ವೋಟ್ ಹಾಕಲ್ಲ ಎಂಬುದು ಗೊತ್ತಿತ್ತು. ಅವರು ಗೆಲ್ಲಲಿಲ್ಲ. ಆದರೆ ಕೃಷ್ಣಪ್ಪ ಅವರು ಮೂರನೇ ಸ್ಥಾನ ಪಡೆದರು. ಈ ಸೋಲಿನಿಂದಾಗಿ ಕೃಷ್ಣಪ್ಪ ಅವರ ಉತ್ಸಾಹ ಕೊಂಚ ಕುಸಿಯಿತು.

ಆ ಸಂದರ್ಭದಲ್ಲಿ ಕಾನ್ಶೀರಾಮ್‌ ಅವರ ನೇತೃತ್ವದಲ್ಲಿ ಉತ್ತರಪ್ರದೇಶದಲ್ಲಿ ಬಿಎಸ್‌ಪಿ ಯಶಸ್ವಿಯಾಗಿತ್ತು. ಚುನಾವಣೆಯ ನಂತರ ದಸಂಸ ಸಭೆ ನಡೆಯಿತು. ನಾವು ಯಾವುದಾದರೂ ಪಕ್ಷವನ್ನು ಆಯ್ಕೆ ಮಾಡಿಕೊಳ್ಳುವುದಾದರೆ ಬಿಎಸ್‌ಪಿಯನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ತೀರ್ಮಾನಿಸಲಾಯಿತು. ಆದರೆ ಒಂದು ಅಂಶವನ್ನು ಒಪ್ಪಿಕೊಳ್ಳಲಾಯಿತು. ಯಾರ್‍ಯಾರು ಸಕ್ರಿಯ ರಾಜಕಾರಣಕ್ಕೆ ಹೋಗುತ್ತಾರೆಂಬುದನ್ನು  ಪಟ್ಟಿ ಮಾಡೋಣ. ಬಿಎಸ್‌ಪಿಯಲ್ಲಿ ದಲಿತ ಹಿತಾಸಕ್ತಿ ಕಡಿಮೆಯಾದರೆ  ಅದನ್ನೂ ಪ್ರಶ್ನಿಸೋಣ. ದಲಿತ ಚಳವಳಿ ಒಂದು ಸಾಂಸ್ಕೃತಿಕ ಹಾಗೂ ರಾಜಕೀಯ ಒತ್ತಡದ ಗುಂಪಾಗಿ ಉಳಿದುಕೊಳ್ಳಲಿ ಎಂದು ತೀರ್ಮಾನಿಸಲಾಯಿತು. ಆದರೆ ಇಡೀ ದಲಿತ ಚಳವಳಿಯನ್ನು ಬಿಎಸ್‌ಪಿಯೊಳಗೆ ವಿಲೀನಗೊಳಿಸಲಾಯಿತು. ಇದು ಬಹಳ ಚೋದ್ಯದ ಸಂಗತಿ. ಇದರಿಂದ ಏನಾಯಿತೆಂದು ನಮಗೆ ಗೊತ್ತೇ ಇದೆ. ಸಂಘಟನೆಯಿಂದ ಕೆಲವರು ಹೊರಗಡೆ ಬಂದರು. ಅಲ್ಲಿಂದ ವಿಘಟನೆ ಆರಂಭವಾಯಿತು. ಈಗ ಯಾವ ಸ್ಥಿತಿ ಇದೆ ಎಂಬುದನ್ನು ಈಗ ನಾವು ಹೇಳಬೇಕಾಗಿಲ್ಲ.

ಇದನ್ನೂ ಓದಿರಿ: ಕಂಬಾಲಪಲ್ಲಿ ದಲಿತರ ಹತ್ಯಾಕಾಂಡಕ್ಕೆ 22 ವರ್ಷ: ನ್ಯಾಯಕ್ಕಾಗಿ ಕಾಯುತ್ತಲೇ ಮೃತರಾದ ಸಂತ್ರಸ್ತರ ಸಂದರ್ಶನ

ಪ್ರಬುದ್ಧ ಭಾರತ ವರ್ಸಸ್ ಪೇಶ್ವೆ ಭಾರತ ಎಂದು ಇಲ್ಲಿ ಗೋಡೆ ಮೇಲೆ ಬರೆಯಲಾಗಿದೆ. ಚರಿತ್ರೆಯನ್ನು ಇನ್ನು ಮುಂದೆ ದಲಿತರ ರಕ್ತದಲ್ಲಿ ಬರೆಯಲಾಗುತ್ತದೆ.  ಹಿಂದುತ್ವ ರಾಜಕಾರಣಕ್ಕೆ ಅರಿಗಿಸಿಕೊಳ್ಳಲಾಗದ ಸತ್ಯವೆಂದರೆ ಅಂಬೇಡ್ಕರ್‌ ವಾದಿಗಳು. ಈ ಅಂಬೇಡ್ಕರ್‌ ವಾದಿಗಳನ್ನು ಹೇಗೆ ನಿರ್ನಾಮ ಮಾಡಬೇಕು ಎಂಬುದೇ ಅವರ ಮುಂದಿರುವ ಸವಾಲು. ಅದಕ್ಕೆ ಬೇಕಾದ ಯೋಜನೆಯನ್ನು ಅವರು ಹೀಗಾಗಲೇ ಮಾಡಿಕೊಂಡಿದ್ದಾರೆ.

ದಲಿತ ಸಂಘರ್ಷ ಸಮಿತಿಯ ಯಾವುದೇ ಬಣವಾದರೂ ನಾವು ನಡೆಯಬೇಕಾದ ದಾರಿಯ ಕುರಿತು ಯೋಚಿಸಬೇಕಾಗಿದೆ. ವಿಸ್ತಾರಗೊಳ್ಳದೆ ಇರುವ ಪ್ರಜ್ಞೆಯನ್ನು ಹೇಗೆ ವಿಸ್ತಾರಗೊಳಿಸಬೇಕೆಂದು ಚಿಂತಿಸಬೇಕಿದೆ. ಭವಿಷ್ಯದಲ್ಲಿ ಕಟ್ಟಬೇಕಾದ ದಲಿತ ಸಂಘರ್ಷ ಸಮಿತಿ ಯಾವ ರೀತಿ ಇರಬೇಕು ಎಂಬುದನ್ನು ತಿಳಿಯಬೇಕು. ದಲಿತ ಐಕ್ಯತೆಯನ್ನು ಕಟ್ಟಬೇಕು.

ಅವರು ನೇರವಾಗಿ ಘೋಷಿಸಿದ್ದಾರೆ, ತಮ್ಮ ಕಾರ್ಯಕ್ರಮಗಳ ಮೂಲಕ ಹೇಳುತ್ತಿದ್ದಾರೆ. ಸಾವಿರಾರು ವರ್ಷಗಳ ಹಿಂದೆ ಇದ್ದಂತಹ ಸಾಮಾಜಿಕ ಸ್ಥಿತಿಯನ್ನು ನೆಲೆಗೊಳಿಸಿಯೇ ತೀರುತ್ತೇವೆ ಎಂದು ಘೋಷಿಸಿದ್ದಾರೆ. ಸರಸ್ವತಿ ನದಿ ಯಾಕೆ ಬತ್ತಿ ಹೋಯಿತೆಂದು ಹೇಳುತ್ತಾ- ಅಸ್ಪಶ್ಯ ಬೇಡರ ಕುಲ ಸರಸ್ವತಿ ನೀರನ್ನು ಕುಡಿದಿದ್ದರಿಂದ ಆ ಸರಸ್ಪತಿ ನದಿ ಬತ್ತಿ ಹೋಯಿತು ಎನ್ನುತ್ತಾರೆ. ಜಾತಿ ಪದ್ಧತಿಯನ್ನು ಬಲಿಷ್ಠವಾಗಿ ಕಟ್ಟಬೇಕೆಂದಿರುವವರ ನಡುವೆ ದಲಿತ ಚಳವಳಿಯನ್ನು ಕಟ್ಟಬೇಕಾದವರ ವ್ಯಾಪ್ತಿ, ಸಮಕಾಲೀನತೆ, ಮುಂದಿನ ಪೀಳಿಗೆಯ ಪಡೆ ಯಾವ ರೀತಿಯಲ್ಲಿ ಇರಬೇಕು ಎಂಬುದು ನಮ್ಮ ಮುಂದೆ ಇರುವ ದೊಡ್ಡ ಸವಾಲಾಗಿದೆ.

ನವಭಾರತ ಕಾರ್ಯಕ್ರಮ ಘೋಷಿಸಿದ್ದಾರೆ. ನವಭಾರತ ಎಂದರೆ ಏನು? ಯಾಕಾಗಿ? ಎಂಬುದನ್ನು ನಾವು ಸ್ವಷ್ಟವಾಗಿ ಅರ್ಥ ಮಾಡಿಕೊಳ್ಳಬೇಕು. ಸಂವಿಧಾನವನ್ನು ತೆಗೆದು ಅಲ್ಲಿ ಮನುಸ್ಮೃತಿಯನ್ನು ಸ್ಥಾಪಿಸುವುದು ನವಭಾರತದ ಅಜೆಂಡಾವಾಗಿದೆ. ಇದನ್ನು ಹೇಗೆ ಎದುರಿಸುವುದು? ನಮ್ಮ ಮುಂದಿನ ಪೀಳಿಗೆಯನ್ನು ಬೌದ್ಧಿಕರನ್ನಾಗಿಸಬೇಕು. ಮುಂದಿನ ಸವಾಲುಗಳನ್ನು ಹೇಗೆ ಎದುರಿಸಬೇಕೆಂಬ ಬೌದ್ಧಿಕತೆಯನ್ನು ರೂಪಿಸಬೇಕು.

ದಲಿತ ಎಂಬ ದೊಡ್ಡ ಸೂರು ಒಡೆದುಹೋಗಿದೆ. ನಾವು ಈಗ ಜಾತಿ ಮತ್ತು ಉಪಜಾತಿಗಳಲ್ಲಿ ಗುರುತಿಸಿಕೊಳ್ಳುತ್ತಿದ್ದೇವೆ. ನಮ್ಮ ಮುಂದೆ ಇರುವುದು ಪ್ರಬುದ್ಧ ಭಾರತ ವರ್ಸಸ್‌ ಪೇಶ್ವೆ ಭಾರತ ಎಂಬುದರಲ್ಲಿ ಅನುಮಾನವೇ ಇಲ್ಲ. ಪೇಶ್ವೆಗಳ ಕೈಯಲ್ಲಿ ಕತ್ತಿಗಳಿಲ್ಲ. ಆದರೆ ಪತ್ರಿಕೆಗಳಿವೆ, ಬಂಡವಾಳ ಇದೆ, ಜಾತಿ ಬಲ ಇದೆ, ರಾಜಕೀಯ ಬಲ ಇದೆ. ಇವುಗಳನ್ನು ಇಂದಿನ ಸಂಘಟನೆಯ ಸ್ವರೂಪಗಳ ಮೂಲಕ ಎದುರಿಸಲು ಖಂಡಿತ ಸಾಧ್ಯವಿಲ್ಲ. ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಚಳವಳಿಯ ನಾಯಕರಿಂದಲೇ ದಲಿತ ಚಳವಳಿಯನ್ನು ಐಕ್ಯಗೊಳಿಸಲು ಸಾಧ್ಯವಿದೆ. ದಲಿತ ಚಳವಳಿಯನ್ನು ಕಟ್ಟುವ ಛಲ ಕಾರ್ಯಕರ್ತರಿಗಿದೆ. ನಾಯಕರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು.

  • ಕೋಟಗಾನಹಳ್ಳಿ ರಾಮಯ್ಯ

ಇದನ್ನೂ ಓದಿರಿ: ದಲಿತ ಯುವತಿಯನ್ನು ಪ್ರೀತಿಸಿ, ನಂತರ ಮದುವೆಗೆ ನಿರಾಕರಿಸಿ ಪೆಟ್ರೋಲ್ ಸುರಿದು ಹತ್ಯೆಗೈದ ಸವರ್ಣೀಯ ಯುವಕ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ದಿನಕ್ಕೊಂದು ದಲಿತ ಫೈಲನ್ನು ಈ ಭಾರತ ನಮ್ಮವರಿಂದಲೇ ಸೃಷ್ಟಿಸಲಾಗುತ್ತಿದೆ
    ಅವರಿಗೆ ಗೊತ್ತು ಈ ಜನ ಬಹಳ ಸುಲಭವಾಗಿ ಬೇರೆಯವರ ಅಧೀನದಲ್ಲಿ ಬೀಳುವ ಜನ. ಇದೇ ಕೆಲಸವನ್ನು ಮಾನಸಿಕ ರೂಪದ ಬಂಡವಾಳದಿಂದ ಹಿಂದಿನಿಂದಲೂ ಸಾದಿಸಬಂದಿದ್ದಾರೆ.
    ಈ ಭೇದಬಾವವು ಅಳಿಯುವವರೆಗೆ ಈ ದೇಶದ ಸ್ಥಿರ ಅಭಿವೃದ್ಧಿ ಸಾಧ್ಯವಿಲ್ಲ. ಅದು ಅವರಿಗೆ ಬೇಕಾಗಿಲ್ಲ.

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...