Homeಮುಖಪುಟಪೆಗಾಸಸ್ ಆರೋಪಗಳನ್ನು ಪರಿಶೀಲಿಸಲು ಸಮಿತಿ ರಚಿಸಿದ ಸುಪ್ರೀಂ ಕೋರ್ಟ್

ಪೆಗಾಸಸ್ ಆರೋಪಗಳನ್ನು ಪರಿಶೀಲಿಸಲು ಸಮಿತಿ ರಚಿಸಿದ ಸುಪ್ರೀಂ ಕೋರ್ಟ್

ಬೇಹುಗಾರಿಕೆ ಆರೋಪಗಳು ಗಂಭೀರವಾಗಿದ್ದು, ಸತ್ಯಾಂಶ ಹೊರಬೀಳಬೇಕು ಎಂದು ಮುಖ್ಯ ನ್ಯಾಯಮೂರ್ತಿ ಸೂಚಿಸಿದ್ದಾರೆ

- Advertisement -
- Advertisement -

ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ತನ್ನ ದೇಶದ ನಾಗರಿಕರ ಮೇಲೆ ಬೇಹುಗಾರಿಕೆ ಮಾಡಲು ಇಸ್ರೇಲಿ ಸ್ಪೈವೇರ್‌ ಪೆಗಾಸಸ್ ಅನ್ನು ಬಳಸಿದೆ ಎಂಬ ಆರೋಪಗಳನ್ನು ಪರಿಶೀಲಿಸಲು ಸುಪ್ರೀಂಕೋರ್ಟ್‌ ಬುಧವಾರದಂದು ಸ್ವತಂತ್ರ ತಜ್ಞ ತಾಂತ್ರಿಕ ಸಮಿತಿಯನ್ನು ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಆರ್.ವಿ. ರವೀಂದ್ರನ್ ಮೇಲ್ವಿಚಾರಣೆಯಲ್ಲಿ ನೇಮಕ ಮಾಡಿದೆ.

ಬೇಹುಗಾರಿಕೆ ಆರೋಪಗಳು ಗಂಭೀರವಾಗಿದ್ದು, ಸತ್ಯಾಂಶ ಹೊರಬೀಳಬೇಕು ಎಂದು ಸೂಚಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ನೇತೃತ್ವದ ಪೀಠವು ತನ್ನ ವರದಿಯನ್ನು ತ್ವರಿತವಾಗಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಿದೆ. ಪ್ರಕರಣದ ವಿಚಾರಣೆಯನ್ನು ಎಂಟು ವಾರಗಳ ನಂತರ ಮುಂದೂಡಿದೆ.

ಇದನ್ನೂ ಓದಿ: 25 ಕೋಟಿ ರೂ.ಗೆ ಪೆಗಾಸಸ್‌ ಖರೀದಿಸುವಂತೆ ನನಗೆ ಪ್ರಸ್ತಾಪ ಬಂದಿತ್ತು: ಮಮತಾ ಬ್ಯಾನರ್ಜಿ

ನ್ಯಾಯಮೂರ್ತಿ ರವೀಂದ್ರನ್ ಅವರು ತಾಂತ್ರಿಕ ಸಮಿತಿಯ ಕಾರ್ಯನಿರ್ವಹಣೆಯನ್ನು ಮೇಲ್ವಿಚಾರಣೆ ನೋಡಿಕೊಳ್ಳಲಿದ್ದು, ಮಾಜಿ IPS ಅಧಿಕಾರಿ (1976 ಬ್ಯಾಚ್) ಅಲೋಕ್ ಜೋಶಿ ಅವರಿಗೆ ಸಹಾಯ ಮಾಡಲಿದ್ದಾರೆ. ಉಪ ಸಮಿತಿಯ ಅಧ್ಯಕ್ಷರಾಗಿ  ಡಾ. ಸಂದೀಪ್ ಒಬೆರಾಯ್ (ಇಂಟರ್ನ್ಯಾಷನಲ್ ಆರ್ಗನೈಸೇಶನ್ ಆಫ್ ಸ್ಟ್ಯಾಂಡರ್ಡೈಸೇಶನ್/ಇಂಟರ್ನ್ಯಾಷನಲ್ ಎಲೆಕ್ಟ್ರೋ-ಟೆಕ್ನಿಕಲ್ ಕಮಿಷನ್/ಜಾಯಿಂಟ್ ಟೆಕ್ನಿಕಲ್ ಸಮಿತಿ) ಅವರು ಇರಲಿದ್ದಾರೆ.

ತಾಂತ್ರಿಕ ಸಮಿತಿಯಲ್ಲಿ ಮೂವರು ಸದಸ್ಯರಿದ್ದಾರೆ. ಸೈಬರ್ ಸೆಕ್ಯುರಿಟಿ ಮತ್ತು ಡಿಜಿಟಲ್ ಫೊರೆನ್ಸಿಕ್ಸ್ ಪ್ರೊಫೆಸರ್‌‌ ಮತ್ತು ಗುಜರಾತ್‌ ಗಾಂಧಿನಗರದ ನ್ಯಾಷನಲ್ ಫೋರೆನ್ಸಿಕ್ ಸೈನ್ಸಸ್ ವಿಶ್ವವಿದ್ಯಾಲಯದ ಡೀನ್‌ ಆಗಿರುವ ಡಾ. ನವೀನ್ ಕುಮಾರ್ ಚೌಧರಿ, ಸ್ಕೂಲ್ ಆಫ್ ಇಂಜಿನಿಯರಿಂಗ್ ಪ್ರೊಫೆಸರ್‌ ಮತ್ತು ಕೇರಳ ಅಮೃತಪುರಿಯ ಅಮೃತ ವಿಶ್ವ ವಿದ್ಯಾಪೀಠಂನ ಡಾ. ಪ್ರಭಾಹರನ್ ಪಿ., ಇನ್ಸ್ಟಿಟ್ಯೂಟ್ ಚೇರ್ ಅಸೋಸಿಯೇಟ್ ಪ್ರೊಫೆಸರ್ (ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್), ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬಾಂಬೆ, ಮಹಾರಾಷ್ಟ್ರದ ಡಾ. ಅಶ್ವಿನ್ ಅನಿಲ್ ಗುಮಾಸ್ತೆ ಈ ಸಮಿತಿಯಲ್ಲಿ ಇರಲಿದ್ದಾರೆ.

ನ್ಯಾಯಾಲಯವು ಯಾವುದೆ ರಾಜಕೀಯ ವಿಚಾರದಲ್ಲಿ ಅಲೆದಾಡುವುದಿಲ್ಲ ಎಂದು ಹೇಳಿದ್ದು, ಜಗತ್ತಿನಾದ್ಯಂತ ಇತರ ದೇಶಗಳು ಪೆಗಾಸಸ್‌ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿ ಸತ್ಯವನ್ನು ತಿಳಿದುಕೊಳ್ಳುವ ಪ್ರಯತ್ನಗಳನ್ನು ಪ್ರಾರಂಭಿಸಿದ್ದಾಗ, ಭಾರತ ಮಾತ್ರ ಮೌನವಾಗಿರಲು ಸಾಧ್ಯವಿಲ್ಲ ಎಂದು ಹೇಳಿದೆ.

ಇದನ್ನೂ ಓದಿ: ಪೆಗಾಸಸ್‌: ನ್ಯೂಯಾರ್ಕ್ ಟೈಮ್ಸ್‌ ವರದಿ ಪರಿಶೀಲಿಸುವಂತೆ ಸುಪ್ರೀಂಕೋರ್ಟ್‌‌ಗೆ ಎಡಿಟರ್ಸ್ ಗಿಲ್ಡ್‌‌ ಪತ್ರ

ಮುಖ್ಯ ನ್ಯಾಯಮೂರ್ತಿ ರಮಣ ಅವರು ನ್ಯಾಯಾಲಯದಲ್ಲಿ ಓದಿದ ಆದೇಶವು ಸಮಿತಿಯನ್ನು ರಚಿಸಲು ನ್ಯಾಯಾಲಯವನ್ನು ಒತ್ತಾಯಿಸಿದ ಹಲವಾರು ಕಾರಣಗಳನ್ನು ಉಲ್ಲೇಖಿಸಿದೆ. ಬೇಹುಗಾರಿಕೆಯಿಂದಾಗಿ ಸಾಮಾನ್ಯ ನಾಗರಿಕರ ಗೌಪ್ಯತೆ ಮತ್ತು ವಾಕ್ ಸ್ವಾತಂತ್ರ್ಯದ ಹಕ್ಕುಗಳ ಮೇಲೆ ವ್ಯಾಪಕ ಪ್ರಭಾವ ಬೀರಿದೆ ಎಂಬ ವರದಿಗಳು ಇವುಗಳಲ್ಲಿ ಸೇರಿವೆ. ಒಟ್ಟಾರೆಯಾಗಿ ನಾಗರಿಕರ ವೈಯಕ್ತಿಕ ಹಕ್ಕುಗಳ ಮೇಲೆ ಪೆಗಾಸಸ್ ಪರಿಣಾಮ ಬೀರಿದೆ ಎಂಬ ಆರೋಪಗಳನ್ನು ನಿರ್ಲಕ್ಷಿಸಿ ಸುಮ್ಮನೆ ನಿಲ್ಲಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಈ ಆರೋಪಗಳು ನಿಜವೋ ಅಲ್ಲವೋ ಎಂಬುದರ ಕುರಿತು ನ್ಯಾಯಾಲಯದಲ್ಲಿ ‘ಸ್ಪಷ್ಟ ನಿಲುವು’ ತೆಗೆದುಕೊಳ್ಳಲು ಸರ್ಕಾರವು ಹೇಗೆ ನಿರಾಕರಿಸಿತು ಎಂಬುದರ ಕುರಿತು ತನ್ನ ಆದೇಶದಲ್ಲಿ ನ್ಯಾಯಾಲಯವು ಹೈಲೈಟ್ ಮಾಡಿದೆ.

ಆರೋಪಗಳಿಗೆ ಪ್ರತಿಕ್ರಿಯೆಯಾಗಿ ವಿವರವಾದ ಅಫಿಡವಿಟ್ ಸಲ್ಲಿಸಲು ನ್ಯಾಯಾಲಯವು ಮಾಡಿದ ಪುನರಾವರ್ತಿತ ಸಲಹೆಗಳು ಕೂಡಾ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಸರ್ಕಾರ ಸಲ್ಲಿಸಿರುವ ಎರಡು ಪುಟಗಳ ಅಫಿಡವಿಟ್ ಅಲ್ಲಿ ‘ಯಾವುದೇ ಹೊಳಹು ಇಲ್ಲ’ ಮತ್ತು ಹೆಚ್ಚೆಂದರೆ ‘ಅಸ್ಪಷ್ಟ ನಿರಾಕರಣೆ’ ಇದೆ. ಎರಡು ವರ್ಷಗಳ ಹಿಂದೆ ಪೆಗಾಸಸ್ ಬೇಹುಗಾರಿಕೆಯ ಮೊದಲ ಆರೋಪಗಳು ಕಾಣಿಸಿಕೊಂಡಾಗ ನ್ಯಾಯಾಲಯವು ಇದನ್ನು ಹೇಳಿದೆ.

ಇದನ್ನೂ ಓದಿ: ಇಸ್ರೇಲ್‌ನಿಂದ ಪೆಗಾಸಸ್‌ ಖರೀದಿಸಿದ್ದ ವರದಿ ಬಹಿರಂಗ; ಮೋದಿ ಸರ್ಕಾರದ ವಿರುದ್ದ ವಿಪಕ್ಷಗಳ ಕಿಡಿ!

“ಭಾರತ ಸರ್ಕಾರವು ಆರೋಪಗಳನ್ನು ನಿರ್ದಿಷ್ಟವಾಗಿ ಯಾವುದೇ ನಿರಾಕರಣೆ ಮಾಡಿಲ್ಲ…ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದರೆ, ನ್ಯಾಯಾಲಯದ ಮೇಲೆ ಕಡಿಮೆ ಹೊರೆ ಇರುತ್ತಿತ್ತು” ಎಂದು ಮುಖ್ಯ ನ್ಯಾಯಮೂರ್ತಿ ರಮಣ ಹೇಳಿದ್ದಾರೆ.

ಪೆಗಾಸಸ್‌ ವಿಚಾರವನ್ನು ಬಹಿರಂಗಪಡಿಸುವುದು ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಬೀರುತ್ತದೆ ಎಂಬ ಸರ್ಕಾರದ ಆತಂಕವನ್ನು ನ್ಯಾಯಾಲಯವು ತಳ್ಳಿಹಾಕಿದೆ. ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠದಲ್ಲಿ ಮುಖ್ಯ ನ್ಯಾಯಮೂರ್ತಿ ರಮಣ ಅವರು, ನಾಗರಿಕರ ಸಾಂವಿಧಾನಿಕ ಹಕ್ಕುಗಳು ಅಪಾಯದಲ್ಲಿರುವಾಗ ರಾಷ್ಟ್ರೀಯ ಭದ್ರತೆಯ ಉಲ್ಲಂಘನೆಯ ವಿಚಾರವನ್ನು ಉಲ್ಲೇಖಿಸಿ ಬಚಾವಾಗಲು ಸಾಧ್ಯವಿಲ್ಲ ಎಂದು ಘೋಷಿಸಿದ್ದಾರೆ.

ಹಿರಿಯ ಪತ್ರಕರ್ತರಾದ ಎನ್. ರಾಮ್ ಮತ್ತು ಶಶಿಕುಮಾರ್, ಎಡಿಟರ್ಸ್ ಗಿಲ್ಡ್ ಮತ್ತು ಬೇಹುಗಾರಿಕೆಗೆ ಬಲಿಯಾದ ವ್ಯಕ್ತಿಗಳು ಸೇರಿದಂತೆ ಹಲವು ಕಡೆಗಳಿಂದ ಸಲ್ಲಿಸಿದ ಅರ್ಜಿಗಳ ಆಧಾರದ ಮೇಲೆ ಈ ಆದೇಶ ಹೊರಬಿದ್ದಿದೆ.

ಇದನ್ನೂ ಓದಿ: ಗೂಡಾಚರ್ಯೆಯ ಪೆಗಾಸಸ್‌‌ ಸ್ಪೈವೇರ್‌‌ಅನ್ನು ಭಾರತ ಖರೀದಿಸಿದೆ: ನ್ಯೂಯಾರ್ಕ್ ಟೈಮ್ಸ್‌ ವರದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...