Homeಮುಖಪುಟಬಂದೂಕಿನ ನಳಿಗೆಯಲ್ಲಿ ನಲುಗುತ್ತಿರುವ ಜನಸಾಮಾನ್ಯನ ಬದುಕು

ಬಂದೂಕಿನ ನಳಿಗೆಯಲ್ಲಿ ನಲುಗುತ್ತಿರುವ ಜನಸಾಮಾನ್ಯನ ಬದುಕು

ಬಂದೂಕುಗಳು ಸಮಾಜದಲ್ಲಿ ಅಭದ್ರತೆಗೆ, ಆತಂಕಕ್ಕೆ ಯಾವಾಗ ಕಾರಣವಾಗುತ್ತದೋ ಆಗ ಪ್ರಭುತ್ವ ತನ್ನ ನಿರಂಕುಶತ್ವದ ಪಾರಮ್ಯ ತಲುಪಿದೆಯೆಂದರ್ಥ.

- Advertisement -
- Advertisement -

ಬಂದೂಕು ಮತ್ತು ಖಾಕಿ ಭದ್ರತೆಯ, ಸಂರಕ್ಷಣೆಯ, ಸುರಕ್ಷತೆಯ ಸಂಕೇತಗಳು. ಖಾಕಿ ಜನಸಾಮಾನ್ಯನಿಗೆ ಸುರಕ್ಷತೆಯನ್ನು ನೀಡಿದರೆ ಬಂದೂಕು ಖಾಕಿಗೆ ಭದ್ರತೆ ನೀಡುತ್ತದೆ. ಮತ್ತು ಭದ್ರತೆಗಾಗಿಯಷ್ಟೇ ಬಂದೂಕು ಬಳಕೆಯಾಗಬೇಕಿದೆ. ಆದರೆ ಬಂದೂಕು ಸಾಮಾನ್ಯನ ಕೈಗೂ, ಸಾಮಾನ್ಯನ ಮನೋಭಾವ, ವಾಂಛೆಗಳು ಖಾಕಿಯೊಳಗೂ ನುಗ್ಗಿದರೆ ಪರಿಣಾಮ ಏನಾಗುತ್ತಿದೆಯೆಂಬುದನ್ನು ಸದ್ಯಕ್ಕೆ ನಡೆಯುತ್ತಿರುವ ವಿದ್ಯಾಮಾನಗಳೇ ಸಾರಿ ಹೇಳುತ್ತಿದೆ.

ಕೇಂದ್ರ ಸರಕಾರ ಜಾರಿಗೆ ತಂದ ಕರಾಳ ಕಾಯ್ದೆಯ ವಿರುದ್ದ ದೇಶವಿಡೀ ಸಿಡಿದೆದ್ದು ಎರಡು ತಿಂಗಳುಗಳೆ ಕಳೆದವು. ಕಾಯ್ದೆ ಸಂಸತ್ತಿನಲ್ಲಿ ಅನುಮೋದನೆ ಪಡೆದಾಗಲೆ ದೇಶದಾದ್ಯಂತ ಬೀದಿಗಿಳಿದ ಜನಸ್ತೋಮವನ್ನು ಕಂಡು ಕೇಂದ್ರ ಸರಕಾರ ಬಸವಳಿದು ಹೋಗಿತ್ತು. ಆದರೆ ಜನರ ಆಕ್ರೋಶ, ತಿರಸ್ಕಾರಗಳನ್ನು ಅರ್ಥೈಸಲಾಗದ ಕೇಂದ್ರ ಸರಕಾರ ತನ್ನ ದಾರ್ಷ್ಟ್ಯತೆಯನ್ನು ಪ್ರದರ್ಶಿತೊಡಗಿತು. ಪ್ರತಿಭಟಿಸುವ ಜನರ ಸಾಂವಿಧಾನಿಕ ಹಕ್ಕನ್ನು ಹಿಂಸೆಯ ಮೂಲಕ ಹತ್ತಿಕ್ಕಲು ಯತ್ನಿಸಿತು. ಪ್ರತಿಭಟಿಸಿದರೆ ಲಾಠಿ, ಗುಂಡೇಟಿನ ಬೆದರಿಕೆಯನ್ನು ಹಾಕತೊಡಗಿತು. ಒಂದಷ್ಟು ಬಿಜೆಪಿ ನಾಯಕರು ಗುಂಡೇಟಿನ ಬಗ್ಗೆ ಮಾತನಾಡಿದ್ದು ಪೋಲೀಸರ ಬಂದೂಕಿಗೆ ತಣ್ಣನೆಯ ಧೈರ್ಯ ಕೊಟ್ಟವು.

ತಮ್ಮ ಹಕ್ಕು ಮತ್ತು ಅಸ್ತಿತ್ವಕ್ಕಾಗಿ ಪ್ರಜೆಗಳು ನಡೆಸುವ ಕಾನೂನಾತ್ಮಕ ಹೋರಾಟಕ್ಕೆ ಭದ್ರತೆ ಒದಗಿಸಬೇಕಾದವರು ಪೋಲೀಸರು. ಇದು ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಪೂರಕವಾಗಿರುವ ಪೋಲೀಸರ ಕರ್ತವ್ಯವು ಹೌದು. ಆದರೆ ಆಳುವವರ ‘ಆಳು’ಗಳಾದ ಖಾಕಿ ಪಡೆಗಳು ಜನರ ಪ್ರಾಣದೊಂದಿಗೆ ಚೆಲ್ಲಾಟವಾಡಲಾರಂಭಿಸಿದರು. ಮೊದಲ ಗುಂಡೇಟು ನಡೆದದ್ದು ಅಸ್ಸಾಂನಲ್ಲಿ. ಹದಿನೇಳು ವಯಸ್ಸಿನ ಬಾಲಕನ ಸಮೇತ ಐದಾರು ಮಂದಿ ಅಸ್ಸಾಂನಲ್ಲಿ ಗುಂಡೇಟಿಗೆ ಬಲಿಯಾದರು‌. ಆ ಬಳಿಕ ಮಂಗಳೂರಿನಲ್ಲೂ ಪ್ರತಿಭಟನಾಕಾರರ ನೇರವಾಗಿ ಗುಂಡು ಹಾರಿದವು. ಉದ್ದೇಶಪೂರ್ವಕವಾಗಿಯೇ ಎರಡು ಜೀವಗಳನ್ನು ಆಪೋಶನ ಪಡೆದ ಪೋಲೀಸರ ನಡೆಯು ರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾದವು. ಜನ ಸಾಮಾನ್ಯನಿಗೆ ಭದ್ರತೆಯನ್ನು ನೀಡಬೇಕಾದ ಖಾಕಿ ದಾರಿಗಳು ಮಂಗಳೂರಿನ ಪ್ರತಿಭಟನೆಯ ವೇಳೆ ಅಕ್ಷರಶಃ ಹೆಣ ಉದುರಿಸುವ ಕಾಯಕಕ್ಕೆ ನಿಂತಿದ್ದರು.

ಪರಿಣಾಮ ಮಂಗಳೂರು ಉದ್ವಿಗ್ನಗೊಂಡವು. ಮೊದಲೇ ಕೋಮುಸೂಕ್ಷ್ಮ ಪ್ರದೇಶವಾಗಿದ್ದ ಮಂಗಳೂರು ಮತ್ತು ಆಸುಪಾಸು ನಿರ್ವಾತ ಸ್ಥಿತಿಗೆ ತಲುಪಿದವು. ಪ್ರತಿಭಟನಾ ಕಾರರಿಗೆ ಲಾಠಿಜಾರ್ಜ್ ಮಾಡಬಾರೆಂದು ಮುಖ್ಯಮಂತ್ರಿ ಆದೇಶ ಹೊರಡಿಸಿದ್ದರೂ ಮಂಗಳೂರು ಪೋಲೀಸರು ಇನ್ಯಾರದೋ ಒತ್ತಡಕ್ಕೆ ಮಣಿದಿದ್ದರು. ಗುಂಡೇಟಿನ ಬಗ್ಗೆ ಮಾತನಾಡಿದ್ದ ರಾಷ್ಟ್ರ ಮಟ್ಟದ ಬಿಜೆಪಿ ನಾಯಕರ ಮಾತುಗಳು ಅವರಿಗೆ ಉತ್ತೇಜನ ನೀಡಿದ್ದವೋ ಗೊತ್ತಿಲ್ಲ. ”ಪ್ರತಿಭಟಿಸುವುದಾದರೆ ಉತ್ತರ ಭಾರತಕ್ಕೆ ಹೋಗಿ” ಎಂದು ಪೋಲೀಸ್ ಆಯುಕ್ತ ಭಾಸ್ಕರ್ ಪ್ರಸಾದ್ ನೀಡಿದ್ದ ಹೇಳಿಕೆ ಪ್ರಭುತ್ವದಂತೆ ಪೋಲೀಸರಿಗೂ ಪ್ರತಿಭಟನೆಗಳು ಅಪಥ್ಯವಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ. ಇದರಿಂದ ಮಂಗಳೂರು ಗೋಲೀಬಾರ್ ಪೋಲೀಸರ ಪೂರ್ವನಿಯೋಜಿತ ಕೃತ್ಯವೇ ಎಂಬುದು ಸ್ಪಷ್ಟವಾಗುತ್ತದೆ.

ಆ ಬಳಿಕ ಗೋಲೀಬಾರ್ ನಡೆದದ್ದು ಯೋಗಿ ಆಡಳಿತದ ಉತ್ತರ ಪ್ರದೇಶದಲ್ಲಿ. ಮೂರು ದಿನಗಳ ಕಾಲ ಮುಂದುವರೆದಿದ್ದ ಪ್ರತಿಭಟನೆಯಲ್ಲಿ‌ ಜೀವ ಕಳೆದುಕೊಂಡದ್ದು ಬರೋಬ್ಬರಿ ಮೂವತ್ತು ಮಂದಿ. ಅಲ್ಲೂ ಕೂಡಾ ಪೋಲೀಸರು ವಿಕೃತಿ ಮೆರೆದರು. ಪ್ರತಿಭಟನಾಕಾರರನ್ನು ಅಟ್ಟಾಡಿಸಿ ಗುಂಡಿಟ್ಟು ಕೊಂದರು. ಅಲ್ಲಿ ಸುರಕ್ಷತೆಯ ಸಂಕೇತವಾದ ಖಾಕಿ ಆಳುವವನ ‘ಮತಾಂಧ ಕಾವಿ’ಗೆ ಶರಣಾಗಿ ಹೋಗಿದ್ದರ ಪರಿಣಾಮ ಈ ಎಲ್ಲಾ ರಾದ್ದಾಂತ ನಡೆದು ಹೋದವು.

ದೆಹಲಿ ಮುಖ್ಯಮಂತ್ರಿ ಕೇಜ್ರೀವಾಲ್‌ ಶಾಹೀನ್ ಪ್ರತಿಭಟನಾಕಾರರನ್ನು ಬೆಂಬಲಿಸುತ್ತಿದ್ದಾರೆಂದು ಅರೋಪಿಸಿದ ಯೋಗಿ ಆದಿತ್ಯನಾಥ್, “ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ನಾವು ಎಲ್ಲ ಉಗ್ರಗಾಮಿಗಳನ್ನು ಗುರುತಿಸಿ, ಬಿರಿಯಾನಿ ಕೊಡುವ ಬದಲಿಗೆ ಗುಂಡು ಹೊಡೆಯುತ್ತಿದ್ದೇವೆ” ಎಂದು ಉಗ್ರ ಭಾಷಣ ಮಾಡಿದ್ದರು. ಪ್ರತಿಭಟನಾಕಾರರನ್ನು ಉಗ್ರರಾಗಿ ಚಿತ್ರೀಕರಿಸಿ ಗುಂಡಿಕ್ಕುವ ಮೂಲಕ ಅಪರಾಧವನ್ನು ಕಾನೂನುಬದ್ದಗೊಳಿಸುವ ಬಿಜೆಪಿ ಸರಕಾರದ ದುಷ್ಟತೆಯನ್ನು ಯೋಗಿ ಮಾತು ಸೂಚಿಸುತ್ತದೆ.

ದೆಹಲಿಯ ಜಾಮಿಯಾ ವಿವಿ ಬಳಿ ರಾಮ್ ಗೋಪಾಲ್ ಎಂಬಾತ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಿದ. ತಾನು ರಾಮ ಭಕ್ತನೆಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದ ಆತ ಫೈರಿಂಗ್‌ಗೂ ಮುನ್ನ ‘ಶಾಹೀನ್ ಬಾಗ್ ಖೇಲ್ ಖತಂ ಹೋಗಯಾ’ ಎಂದು ಪೋಸ್ಟ್ ಹಾಕಿದ್ದ. ಆಘಾತಕಾರಿ ವಿಚಾರವೆಂದರೆ ಆತ ಅರ್ಧ ನಿಮಿಷಗಳ ಕಾಲ ಪಿಸ್ತೂಲ್ ಹಿಡಿದು ಕೂಗಾಡುತ್ತಿದ್ದರೂ ಪೋಲೀಸರು ಕೈ ಕಟ್ಟಿ ನಿಂತಿದ್ದರು. ಹಾಗಾದರೆ ಅವನ ಕೈಗೆ ಪಿಸ್ತೂಲ್ ನೀಡಿದ್ದಾದರೂ ಯಾರು..? ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಲು ಆತನಿಗೆ ಪ್ರಚೋದನೆಯಾದರೂ ಎಲ್ಲಿಂದ ಬಂತು..? ಸಾಮಾನ್ಯನ ಕೈಗೂ ಪ್ರಾಣ ತಿನ್ನುವ ಪಿಸ್ತೂಲ್, ಬಂದೂಕುಗಳು ಬಂದರೆ ದೇಶದ ಭದ್ರತೆಗೆ ಗಂಡಾಂತರ ಎರಗಿದೆ ಎಂದರ್ಥವಲ್ಲವೇ..?

ಆ ಬಳಿಕ ಶಾಹೀನ್ ಬಾಗ್‌ನಲ್ಲೂ ಪಿಸ್ತೂಲ್ ಸದ್ದು ಮಾಡಿತು. ಕಪಿಲ್ ಗುಜ್ಜಾರ್ ಎಂಬಾತ ಜೈ ಶ್ರೀರಾಮ್ ಎಂದು ಕೂಗುವ ಮೂಲಕ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿದ್ದ. ತೀರಾ ಮೊನ್ನೆ, ದಿಲ್ಲಿ ಹಿಂಸಾಚಾರದ ಮೊದಲು ಶಾರೂಖ್ ಎಂಬಾತ ಪ್ರತಿಭಟನಾಕಾರರ ನೇರವೂ, ಪೋಲೀಸರ ನೇರವೂ ಪಿಸ್ತೂಲ್ ಹಿಡಿದು ಅಡ್ಡಾದಿಡ್ಡಿ ರಸ್ತೆಯಲ್ಲಿ ರೌರವ ಮೆರೆದಿದ್ದ. ಇದುವೆ ದಿಲ್ಲಿ ಹಿಂಸಾಚಾರಕ್ಕೆ ನಾಂದಿ ಹಾಡಿತೆಂದು ಹೇಳಲಾಗುತ್ತದೆ. ವ್ಯಂಗ್ಯವೆಂದರೆ ಆತನ ಬಂಧನವಾಗುವಾಗ ಇಡೀ ದಿಲ್ಲಿ ಹೊತ್ತಿ‌ಉರಿದು ವಾರಗಳೆ ಕಳೆದುಹೋಗಿತ್ತು. ಪೋಲೀಸರ ನೆತ್ತಿಯ ನೇರಕ್ಕೆ ಪಿಸ್ತೂಲ್ ತೋರಿಸಿ ಬೆದರಿಸುವವರನ್ನು ಬಂಧಿಸಲಾಗದಷ್ಟು ದಿಲ್ಲಿ ಪೋಲೀಸ್ ವ್ಯವಸ್ಥೆ ಮತ್ತು ಸರಕಾರ ವಿಫಲವಾಯಿತೆ..? ಒಬ್ಬ ವ್ಯಕ್ತಿಯನ್ನು ಜೈಲಿಗಟ್ಟಲು ಇಷ್ಟು ವಿಳಂಬವಾದದ್ದರೂ ಯಾಕೆ..? ಅಥವಾ ಮುಸ್ಲಿಂ ಎಂಬ ನಾಮ ಮಾತ್ರಕ್ಕೆ ಆತನನ್ನು ಇಡೀ ದಿಲ್ಲಿ ಹಿಂಸಾಚಾರದ ಕೇಂದ್ರ ಬಿಂದುವನ್ನಾಗಿಸುವ ಹುನ್ನಾರ ನಡೆದಿರಬಹುದೇ..? ಆತನನ್ನೇ ಹೈಲೆಟ್ ಮಾಡಿ, ಪ್ರಸಾರ ಮಾಡುತ್ತಿದ್ದ ಮಾಧ್ಯಮಗಳ ನಡೆ ಅಂಥದ್ದೊಂದು ಗುಮಾನಿಗಳಿಗೆ ದಾರಿ ಮಾಡುತ್ತಿದೆ.

ಈಗೀಗ ಬಿಜೆಪಿ ನಾಯಕರ ಬಾಯಿಯೆ ಬಂದೂಕುಗಳಾಗುತ್ತಿದೆ. ಗುಂಡಿಕ್ಕುವ, ಲಾಠಿ ಬೀಸುವ, ಕೊಂದು ಹಾಕುವ, ಹೊಡೆದುರಳಿಸುವ ಬೆಂಕಿ ಮಾತುಗಳನ್ನೇ ಉದುರಿಸುತ್ತಿದ್ದಾರೆ. “ಸಿಎಎ ಪ್ರತಿಭಟನಾಕಾರರನ್ನು ನಮ್ಮ ಪಕ್ಷ ಅಧಿಕಾರದಲ್ಲಿರುವ ಕರ್ನಾಟಕ, ಅಸ್ಸಾಂ, ಯುಪಿಯಲ್ಲಿ ನಾಯಿಗಳಂತೆ ಕೊಂದು ಹಾಕಿದ್ದಾರೆಂದು” ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ಇತ್ತೀಚೆಗೆ ಹೇಳಿದ್ದರು. ಕೇಂದ್ರ ಸಚಿವ ಅನುರಾಗ್ ಠಾಕೂರ್ ತನ್ನ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ “ದೇಶ್ ಕೆ ಗದ್ದಾರೋಂ ಕೋ ಗೋಲಿಮಾರೋ (ದೇಶದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲಿ)” ಎಂದು ಬಹಿರಂಗವಾಗಿ ಘೋಷಣೆ ಕೂಗಿದ್ದಲ್ಲದೆ ಸಭಿಕರೊಂದಿಗೆ ಹೇಳಿಸಿದ್ದರು ಕೂಡ. ಆದ್ದರಿಂದ ದಿಲ್ಲಿ ಹಿಂಸಾಚಾರದಲ್ಲಿ ಕಪಿಲ್ ಮಿಶ್ರಾನಂತೆ ಅನುರಾಗ್ ಠಾಕೂರ್ ಕೂಡಾ ಪ್ರಧಾನ ಪಾತ್ರವಹಿಸಿದ್ದರು. ಆ ಬಳಿಕ ಇದು ಸಾರ್ವಜನಿಕ ಸ್ಥಳಗಳಲ್ಲೂ ಕೇಳಿಬರತೊಡಗಿದವು. ತೀರಾ ಇತ್ತೀಚೆಗೆ ಮೊನ್ನೆ ಕೊಲ್ಕತ್ತಾದಲ್ಲಿ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಆಯೋಜಿಸಿದ್ದ ರ‌್ಯಾಲಿಯಲ್ಲೂ ಈ ಘೋಷಣೆಗಳು ಕೇಳಿ ಬಂದವು. ಇಂತಹ ಹಿಂಸಾತ್ಮಾಕ ಘೋಷಣೆಗಳು ದೇಶದ ಭವಿಷ್ಯವನ್ನು ಕರಾಳತೆಯತ್ತ ಕೊಂಡೊಯ್ಯಲಿದೆ ಎಂಬುದರಲ್ಲಿ ಸಂಶಯವಿಲ್ಲ. ಇದು ಬಿಜೆಪಿಯ ಹಿಂಸಾ ವೃತ್ತಾಂತವನ್ನು ಅನಾವರಣ ಮಾಡುತ್ತದೆ. ಹಾಗೆ ನೋಡಿದರೆ ಬಂದೂಕಿಗೂ ಸಂಘಪರಿವಾರಕ್ಕೂ ಹುಟ್ಟಿನಿಂದಲೇ ನಂಟಿದೆ. ಗಾಂಧೀಜಿಯ ಎದೆ ಸೀಳುವ ಮೂಲಕ ಅದು ದೇಶದಲ್ಲಿ ಮೊದಲ ಹಿಂಸೆಯ ಮೊಹರನ್ನು ಒತ್ತಿತು. ಪನ್ಸಾರೆ, ದಾಬೋಲ್ಕರ್, ಕಲ್ಬುರ್ಗಿ, ಗೌರಿ ಮುಂತಾದ ಸಮಾಜದ ಸದಾ ‘ಎಚ್ಚರಿಕೆ’ಗಳನ್ನು ಹೊಸಕಿ ಹಾಕಿದ್ದೂ ಇದೇ ಸೈದ್ದಾಂತಿಕ ‘ಭಿನ್ನತೆಯ ಬಂದೂಕು’ಗಳು.

ಸಾರ್ವಜನಿಕ ವಲಯದಲ್ಲಿ ಪೋಲೀಸರ ಎದುರಲ್ಲೆ ನಿರ್ಭೀತಿಯಿಂದ ಪಿಸ್ತೂಲ್ ಹಿಡಿದು ತಿರುಗುತ್ತಿದ್ದಾರೆ. ಆತ್ಮ ರಕ್ಷಣೆಗಾಗಿ ಮತ್ತು ವಿಕೋಪಕ್ಕೆ ತಿರುಗುವ ಸನ್ನಿವೇಶವನ್ನು ಹತೋಟಿಗೆ ತರಲೋಸ್ಕರ ಮಾತ್ರ ಬಳಸಬೇಕಾದ ಬಂದೂಕನ್ನು ಸಾಮಾನ್ಯನ ಎದೆ ನೇರಕ್ಕೆ ಇಡುತ್ತಿದ್ದಾರೆಂದರೆ ದೇಶದಲ್ಲಿ ಪ್ರಾಣಕ್ಕಿರುವ ಬೆಲೆಯಾದರೂ ಏನು..? ಗೂಂಡಾಗಳ ಕೈಯ್ಯಲ್ಲಿ ಈ ಬಂದೂಕು, ಪಿಸ್ತೂಲ್‌ಗಳಿದ್ದರೆ ಅದು ಮಾರಕಾಸ್ತ್ರಗಳಾಗುತ್ತದೆ. ಆದರೆ ಪ್ರಭುತ್ವದ ಪರವಾಗಿರುವವರ ಮತ್ತು ಅವರದೆ ವ್ಯವಸ್ಥೆಗೆ ಪೂರಕವಾಗಿರುವ ಪೋಲೀಸರ ಕೈಯ್ಯಲ್ಲಿರುವ ಈ ಅಸ್ತ್ರಗಳು ಸಾಮಾನ್ಯನಿಗೆ ಬೆದರಿಕೆಯಾದರೆ ಮಾರಕಾಸ್ತ್ರವೆನಿಸುವುದಿಲ್ಲವೇಕೆ..?. ಮೊನ್ನೆ ದಿಲ್ಲಿಯಲ್ಲಿ ಮೃತಪಟ್ಟವರ ಪೈಕಿ ಶೇಕಡಾ ಐವತ್ತರಷ್ಟು ಮಂದಿಯೂ ಗುಂಡೇಟಿಗೆ ಬಲಿಯಾದವರೆಂದು ಮಾಧ್ಯಮಗಳು ಪ್ರಸಾರ ಮಾಡಿದವು. ಇದು ಸಾಮಾನ್ಯನ ಬದುಕು ಬಂದೂಕಿನ ಭಯಾನಕ ಬಾಯಿಗೆ ಬಂದು ಬಿಟ್ಟಿದೆಯೆಂದರ್ಥವಲ್ಲವೇ..?

ಬಂದೂಕುಗಳು ಸಮಾಜದಲ್ಲಿ ಅಭದ್ರತೆಗೆ, ಆತಂಕಕ್ಕೆ ಯಾವಾಗ ಕಾರಣವಾಗುತ್ತದೋ ಆಗ ಪ್ರಭುತ್ವ ತನ್ನ ನಿರಂಕುಶತ್ವದ ಪಾರಮ್ಯ ತಲುಪಿದೆಯೆಂದರ್ಥ. ಅದಕ್ಕೆ ಇಂದಿನ ವಿದ್ಯಾಮಾನಗಳೇ ಸಾಕ್ಷಿ.

(ಲೇಖಕರು ಸಾಮಾಜಿಕ ಕಾರ್ಯಕರ್ತರು. ಅಭಿಪ್ರಾಯಗಳು ಅವರ ವೈಯಕ್ತಿಕವಾದವುಗಳು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...