Homeಕರ್ನಾಟಕದಡಾರ-ರುಬೆಲ್ಲಾ ಲಸಿಕೆ ಅತ್ಯಂತ ಸುರಕ್ಷಿತ; ಬೆಳಗಾವಿ ಮಕ್ಕಳ ಸಾವಿನ ಬಗ್ಗೆ ಸೂಕ್ತ ತನಿಖೆಯಾಗಬೇಕು: ಡಾ. ಹಿಮಾಂಶು

ದಡಾರ-ರುಬೆಲ್ಲಾ ಲಸಿಕೆ ಅತ್ಯಂತ ಸುರಕ್ಷಿತ; ಬೆಳಗಾವಿ ಮಕ್ಕಳ ಸಾವಿನ ಬಗ್ಗೆ ಸೂಕ್ತ ತನಿಖೆಯಾಗಬೇಕು: ಡಾ. ಹಿಮಾಂಶು

- Advertisement -
- Advertisement -

ದಡಾರದ ರುಬೆಲ್ಲಾ ಲಸಿಕೆಯಿಂದ ಮಕ್ಕಳು ಮೃತಪಡುವುದು ಅಪರೂಪದಲ್ಲೇ ಅಪರೂಪ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ. ಹಿಮಾಂಶು ಅವರು ಬೆಳಗಾವಿಯಲ್ಲಿ ಮೂವರು ಮಕ್ಕಳ ಸಾವಿನ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡುತ್ತಾ ಹೇಳಿದ್ದಾರೆ. ರುಬೆಲ್ಲಾ ಲಸಿಕೆಯು ಅತ್ಯಂತ ಸುರಕ್ಷಿತ ಲಸಿಕೆಯಾಗಿದ್ದು, ಸುಮಾರು 40-50 ವರ್ಷದಿಂದ ಇದನ್ನು ನೀಡಲಾಗುತ್ತಿದೆ. ಇದರಿಂದಾಗಿ ಮಕ್ಕಳು ಮೃತಪಟ್ಟ ಸುದ್ದಿಯನ್ನು ನಾನಂತೂ ಕೇಳಿಲ್ಲ, ಬೆಳಗಾವಿ ಮಕ್ಕಳ ಸಾವಿನ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ಅವರು ಹೇಳಿದ್ದಾರೆ.

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಕಳೆದ ವಾರ ದಡಾರದ ರುಬೆಲ್ಲಾ ಲಸಿಕೆ ಪಡೆದುಕೊಂಡಿದ್ದ ಮೂವರು ಮಕ್ಕಳ ಮೃತಪಟ್ಟಿದ್ದರು. ಜನವರಿ 11 ರಂದು ರಾಮದುರ್ಗ ತಾಲೂಕಿನ ಮಲ್ಲಾಪುರದಲ್ಲಿ ಒಂದು ಮಗು ಮೃತಪಟ್ಟರೆ, ಜನವರಿ 12 ರಂದು ಬೋಚಬಾಲ ಗ್ರಾಮದಲ್ಲಿ ಇಬ್ಬರು ಶಿಶುಗಳು ಮೃತಪಟ್ಟಿದ್ದವು. ಇನ್ನೂ ಇಬ್ಬರು ಶಿಶುಗಳು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ:ಬೆಳಗಾವಿಯಲ್ಲಿ 3 ಮಕ್ಕಳ ಸಾವು ಪ್ರಕರಣ: ಇಬ್ಬರು ಅಮಾನತು

ಈ ಬಗ್ಗೆ ಪ್ರಾಥಮಿಕ ತನಿಖಾ ವರದಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಿರುವುದಾಗಿ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಬುಧವಾರ ತಿಳಿಸಿದ್ದಾರೆ. ಶಿಶುಗಳನ್ನು ಕಳೆದುಕೊಂಡ ಕುಟುಂಬಗಳಿಗೆ ಪರಿಹಾರ ನೀಡುವ ಕುರಿತು ಚರ್ಚೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ಫಾರ್ಮಾಸಿಸ್ಟ್‌ನಿಂದ ಲಸಿಕೆ ಬಾಟಲಿಗಳನ್ನು ಪಡೆದ ನರ್ಸ್ ಎಲ್ಲಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಆಹಾರ ಪದಾರ್ಥಗಳೊಂದಿಗೆ ಹೋಟೆಲ್‌ನ ಫ್ರಿಜ್‌ನಲ್ಲಿ ಇರಿಸಿದ್ದರು ಎಂದು ಮೂರು ಶಿಶುಗಳ ಸಾವಿನ ಬಗ್ಗೆ ನಡೆದ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ವರದಿಯಾಗಿದೆ. ಇದರಿಂದಾಗಿ ಬ್ಯಾಕ್ಟೀರಿಯಾದ ಸೋಂಕಿಗೆ ಕಾರಣವಾಗಿ ಮತ್ತು ಈ ಲಸಿಕೆಗಳನ್ನು ಪಡೆದ ಮೂರು ಶಿಶುಗಳು ಅಸೆಪ್ಟಿಕ್ ಶಾಕ್ ಸಿಂಡ್ರೋಮ್‌ನಿಂದ ಸಾವನ್ನಪ್ಪಿದ್ದವು ಎಂದು ನ್ಯಾಶನಲ್ ಹೆರಾಲ್ಡ್‌ ತನ್ನ ವರದಿಯಲ್ಲಿ ಹೇಳಿದೆ.

ಇದನ್ನೂ ಓದಿ:ದಡಾರ-ರುಬೆಲ್ಲಾ ಲಸಿಕೆ ಪಡೆದ ಮೂರು ಶಿಶುಗಳ ಸಾವು ಪ್ರಕರಣ: ಸಿಎಂಗೆ ವರದಿ ಸಲ್ಲಿಕೆ

ಈ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿದ ಡಾ. ಹಿಮಾಂಶು, “ಸಧ್ಯಕ್ಕೆ ಪ್ರಾಥಮಿಕ ತನಿಖೆಯಷ್ಟೇ ಬಂದಿದೆ. ಪೂರ್ತಿ ತನಿಖೆಯಲ್ಲಿ ಏನು ನಡೆದಿದೆ ಎಂದು ತಿಳಿಯಬಹುದು. ಅಸೆಪ್ಟಿಕ್ ಶಾಕ್ ಸಿಂಡ್ರೋಂನಿಂದ ಸಾಯುವುದು ತುಂಬಾ ಕಡಿಮೆ. ಅಲ್ಲದೆ ರುಬೆಲ್ಲಾ ಲಸಿಕೆಯಿಂದಾಗಿ ಸಾವು ಸಂಭವಿಸುವುದಿಲ್ಲ, ಅದನ್ನು ಕೋಲ್ಡ್‌ ಸ್ಟೋರೇಜ್ ಮಾಡಿದಾಗ ಅದರ ಟೆಂಪರೇಚರ್‌ನಲ್ಲಿ ವ್ಯತ್ಯಾಸ ಆದರೆ ಲಸಿಕೆಯ ಶಕ್ತಿ ಕಡಿಮೆಯಾಗುತ್ತದೆಯೆ ಹೊರತು ಅದರಿಂದ ಸಾವು ಉಂಟಾಗುವುದಿಲ್ಲ” ಎಂದು ಹೇಳಿದ್ದಾರೆ.

“ಲಸಿಕೆ ಚುಚ್ಚುವ ಸಿರಿಂಜ್ ಸರಿಯಿಲ್ಲದಿದ್ದರೆ ಅಥವಾ ಸಿರಿಂಜ್ ಸರಿಯಾಗಿ ಸಂಗ್ರಹ ಮಾಡದೆ ಇದ್ದರೆ ಹಾಗೂ ಗಲೀಜಾಗಿದ್ದರೆ, ಅಸೆಪ್ಟಿಕ್‌ ಶಾಕ್ ಸಿಂಡ್ರೋಂ ಆಗುತ್ತದೆ. ಅಸೆಪ್ಟಿಕ್ ಶಾಕ್‌‌ ಸಿಂಡ್ರೋಂ ಕೂಡಾ ಅಷ್ಟು ಸುಲಭದಲ್ಲಿ ಆಗುವುದಿಲ್ಲ. ಮಕ್ಕಳು ಅಪೌಷ್ಠಿಕತೆಯಲ್ಲಿದ್ದರೆ ಮತ್ತು ಅವರಿಗೆ ಇತರ ಸಮಸ್ಯೆ ಇದ್ದು ಹಾಗೂ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದಿದ್ದರೆ ಮಾತ್ರ ಸಾವು ಸಂಭವಿಸುತ್ತದೆ. ಪ್ರಾಥಮಿಕ ತನಿಖೆಯಿಂದ ಕೂಡಾ ಏನೂ ಹೇಳಲು ಸಾಧ್ಯವಿಲ್ಲ. ಅದರ ಬಗ್ಗೆ ಸೂಕ್ತ ತನಿಖೆ ನಡೆಯಬೇಕು” ಎಂದು ಅವರು ಡಾ. ಹಿಮಾಂಶು ಹೇಳಿದ್ದಾರೆ.

ಇದನ್ನೂ ಓದಿ:ಕೊರೊನಾ ಲಸಿಕೆಯಿಂದ ‘ಬಂಜೆತನ’ ಉಂಟಾಗುವುದಿಲ್ಲ: ಒಕ್ಕೂಟ ಸರ್ಕಾರ ಸ್ಪಷ್ಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...