ಮೇಕೆದಾಟು ಯೋಜನೆ ಕುಡಿಯುವ ನೀರಿನ ಉದ್ದೇಶದೊಂದಿಗೆ ರೂಪುಗೊಂಡಿರುವ ಯೋಜನೆಯಾಗಿದ್ದು ಅದನ್ನು ನಿಲ್ಲಿಸುವುದಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೋಮವಾರ ಬೆಂಗಳೂರಿನಲ್ಲಿ ಹೇಳಿದ್ದಾರೆ. ಈ ಯೋಜನೆಯು ನಮ್ಮ ರಾಜ್ಯದ ಹಕ್ಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆ ವಿರೋಧಿಸಿ ಕೈಗೊಂಡ ನಿರ್ಣಯಕ್ಕೆ ಪ್ರತಿಕ್ರಿಯೆ ನೀಡಿದ ಅವರು, “ಮೇಕೆದಾಟು ಯೋಜನೆಗೆ ಸಂಬಂಧಪಟ್ಟಂತೆ ಈಗಾಗಲೇ ಸಿದ್ದವಾಗಿರುವ ಸಮಗ್ರ ಯೋಜನಾ ವರದಿಯನ್ನು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲಾಗಿದೆ. ಇದು ಹೆಚ್ಚುವರಿ ಕಾವೇರಿ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಬಳಕೆ ಮಾಡುವ ಯೋಜನೆ. ಈ ಯೋಜನೆಯನ್ನು ಜಾರಿಗೊಳಿಸುವ ಎಲ್ಲಾ ಹಕ್ಕುಗಳು ಕರ್ನಾಟಕಕ್ಕೆ ಇವೆ” ಎಂದು ಪ್ರತಿಪಾಸಿದ್ದಾರೆ.
ಇದನ್ನೂ ಓದಿ: ಮೇಕೆದಾಟು ಯೋಜನೆ: ಸರ್ವ ಪಕ್ಷ ಸಭೆ ನಡೆಸಿದ ತಮಿಳುನಾಡು ಸಿಎಂ ಸ್ಟಾಲಿನ್
“ರಾಜ್ಯದ ಜನರ ಹಿತವನ್ನು ರಕ್ಷಿಸಲು ಮೇಕೆದಾಟು ಯೋಜನೆಯನ್ನು 100% ದಷ್ಟು ಜಾರಿಗೊಳಿಸಲಾಗುವುದು. ರಾಜ್ಯ ಸರ್ಕಾರದ ಈ ಮನವಿಯನ್ನು ನಿಯಮಗಳ ಪ್ರಕಾರ ಕೇಂದ್ರ ಸರ್ಕಾರ ಪರಿಗಣಿಸಬೇಕು” ಎಂದು ಅವರು ಹೇಳಿದ್ದಾರೆ.
“ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಪಟ್ಟಂತೆ ಈಗಾಗಲೇ ತೀರ್ಪು ಬಂದಿದೆ. ಅದರ ಪ್ರಕಾರ ತಮಿಳುನಾಡಿಗೆ ಯಾವ ಸಮಯಕ್ಕೆ ಎಷ್ಟು ನೀರು ಬಿಡಬೇಕು ಎಂಬುದರ ಕುರಿತು ಕಾವೇರಿ ಮಂಡಳಿ ಗಮನಿಸುತ್ತದೆ. ಸಂಕಷ್ಟ ಸಂದರ್ಭದಲ್ಲಿ ಹೆಚ್ಚುವರಿ ನೀರನ್ನು ಹಂಚಿಕೆ ಮಾಡಿಕೊಳ್ಳುವುದರಿಂದ ಎರಡು ರಾಜ್ಯಗಳಿಗೆ ಅನುಕೂಲವಾಗುತ್ತದೆ ಎಂಬುದನ್ನು ತಮಿಳುನಾಡು ಸರ್ಕಾರ ಅರಿತುಕೊಳ್ಳಬೇಕು” ಎಂದು ಅವರು ಹೇಳಿದ್ದಾರೆ.
“ಮೇಕೆದಾಟು ಕುಡಿಯುವ ನೀರಿನ ಯೋಜನೆಯಾಗಿದ್ದು, ಅದನ್ನು ನಿಲ್ಲಿಸಲು ಕರ್ನಾಟಕಕ್ಕೆ ಯಾವುದೇ ಸಕಾರಣಗಳು ಇಲ್ಲ. ಯೋಜನೆಯನ್ನು ಖಂಡಿತವಾಗಿಯೂ ಜಾರಿ ಮಾಡುತ್ತೇವೆ. ಇದಕ್ಕೆ ಬೇಕಾಗುವ ಎಲ್ಲಾ ಒಪ್ಪಿಗೆಗಳನ್ನು ಒಕ್ಕೂಟ ಸರ್ಕಾರದಿಂದ ಪಡೆಯಲು ಶಕ್ತಿಮೀರಿ ಪ್ರಯತ್ನಿಸುತ್ತೇವೆ” ಎಂದು ಬಸವರಾಜ ಬೊಮ್ಮಯಿ ಅವರು ಹೇಳಿದ್ದಾರೆ.
ಇದನ್ನೂ ಓದಿ: ಹಿಂದೂ ಹುಡುಗ ಹಿಂದೂ ಹುಡುಗಿಗೆ ಸುಳ್ಳು ಹೇಳುವುದು ಕೂಡಾ ‘ಜಿಹಾದ್’ – ಅಸ್ಸಾಂ ಸಿಎಂ


