ಹಿಂದೂ ಹುಡುಗ ಹಿಂದೂ ಹುಡುಗಿಗೆ ಸುಳ್ಳು ಹೇಳುವುದು ಕೂಡಾ ‘ಜಿಹಾದ್’ - ಅಸ್ಸಾಂ ಸಿಎಂ | NaanuGauri

ಹಿಂದು ಹುಡುಗ ಹಿಂದು ಹುಡುಗಿಗೆ ಸುಳ್ಳು ಹೇಳುವುದು ಕೂಡಾ ಜಿಹಾದ್ ಆಗಿದೆ, ಅದರ ವಿರುದ್ದ ನಾವು ಕಾನೂನು ತರಲಿದ್ದೇವೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಶನಿವಾರ ಹೇಳಿದ್ದಾರೆ.

ಧಾರ್ಮಿಕ ಗುರುತು ಮತ್ತು ಇತರ ಮಾಹಿತಿಯನ್ನು ಮರೆಮಾಚುವ ಮೂಲಕ, ಪುರುಷರು ಮಹಿಳೆಯರನ್ನು ಮದುವೆಯಾಗುವುದರಿಂದ ಆಗುವ ಅಪಾಯವನ್ನು ಪರಿಶೀಲಿಸಲು, ರಾಜ್ಯ ಸರ್ಕಾರ ಶೀಘ್ರದಲ್ಲೇ ಕಾನೂನು ತರಲಿದೆ ಎಂದು ಅವರು ಹೇಳಿದ್ದಾರೆ. ಈ ಕಾನೂನಿನಂತೆ ವಧು-ವರರು ಮದುವೆಗೆ ಒಂದು ತಿಂಗಳು ಮೊದಲೇ ತಮ್ಮ ಧರ್ಮ ಮತ್ತು ಆದಾಯದ ಅಧಿಕೃತ ದಾಖಲೆಗಳಲ್ಲಿ ಬಹಿರಂಗಪಡಿಸುವುದು ಕಡ್ಡಾಯ  ಎಂದು ಹೇಳಿದ್ದಾರೆ.

ಇದು ಎಲ್ಲಾ ಸಮುದಾಯಗಳನ್ನು ಒಳಗೊಳ್ಳಲಿದೆ ಎಂದು ಶರ್ಮಾ ಹೇಳಿದ್ದಾರೆ. “ಇದು ಹಿಂದೂಗಳಲ್ಲೂ ಆಗಬಹುದು. ಹಿಂದೂ ಹುಡುಗ ಹಿಂದೂ ಹುಡುಗಿಯನ್ನು ಮದುವೆಯಾಗಲು ಸಂಶಯಾಸ್ಪದ ವಿಧಾನಗಳನ್ನು ಬಳಸಿದರೆ ಅದು ಕೂಡಾ ‘ಜಿಹಾದ್’ ಆಗಲಿದೆ” ಎಂದು ಶರ್ಮಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ‘ಡ್ಯಾನ್ಸ್ ಜಿಹಾದ್’ ಎಂದ ಬಲಪಂಥೀಯರಿಗೆ ಕೇರಳ ಪ್ರತಿರೋಧಿಸಿದ್ದು ಹೇಗೆ ಗೊತ್ತೇ?

ಹಸು ಸಂರಕ್ಷಣಾ ಮಸೂದೆ ಮತ್ತು ಎರಡು ಮಕ್ಕಳ ನೀತಿಯ ನಂತರ ಅಸ್ಸಾಂ ಅಸೆಂಬ್ಲಿಯಲ್ಲಿ ಈ ಕಾನೂನನ್ನು ಪರಿಚಯಿಸಲಾಗುವುದು ಎಂದು ಹೇಳಿದ್ದಾರೆ. ಯುಪಿ, ಮಧ್ಯಪ್ರದೇಶ, ಗುಜರಾತ್ ನಂತರ ಇಂತಹ ಮತಾಂತರ ವಿರೋಧಿ ಮಸೂದೆಯನ್ನು ಅಂಗೀಕರಿಸಲಿರುವ ಬಿಜೆಪಿ ಆಡಳಿತದ ರಾಜ್ಯ ಅಸ್ಸಾಂ ಆಗಲಿದೆ.

ಬಿಜೆಪಿ ಸರ್ಕಾರ, ಈ ವರ್ಷ ನಡೆದ ವಿಧಾನಸಭಾ ಚುನಾವಣೆಗೆ ನೀಡಿದ ಪ್ರಣಾಳಿಕೆಯಲ್ಲಿ, ‘ಲವ್ ಜಿಹಾದ್’ ವಿರುದ್ಧ ನೀತಿ / ಮಸೂದೆಯನ್ನು ತರುವುದಾಗಿ ಪ್ರತಿಜ್ಞೆ ಮಾಡಿತ್ತು.

“ನಾವು ಇದನ್ನು ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದ್ದೇವೆ. ನಮ್ಮ ಸರ್ಕಾರಕ್ಕೆ ಕೇವಲ ಎರಡು ಅಷ್ಟೇ ಆಗಿದೆ. ಮೊದಲು ನಾವು ಹಸು ಸಂರಕ್ಷಣಾ ಕಾನೂನನ್ನು ತರುತ್ತೇವೆ, ಮುಂದಿನ ತಿಂಗಳು ನಾವು ಎರಡು ಮಕ್ಕಳ ಕಾನೂನನ್ನು ತರುತ್ತೇವೆ ಮತ್ತು ನಂತರ ‘ಮದುವೆ ಮಸೂದೆ’ ತರುತ್ತೇವೆ” ಎಂದು ಹಿಮಾಂತ ಬಿಸ್ವಾ ಹೇಳಿದ್ದಾರೆ.

“ಹಿಂದೂ ಕೂಡ ಹಿಂದೂವನ್ನು ಮೋಸ ಮಾಡಬಾರದು ಎಂದು ನಾವು ಭಾವಿಸುತ್ತೇವೆ. ಆದರರಿಂದ ‘ಲವ್ ಜಿಹಾದ್’ ಎನ್ನುವ ಪದವನ್ನು ಬಳಸಲು ಬಯಸುವುದಿಲ್ಲ. ನಾವು ಒಂದು ಕಾನೂನನ್ನು ತರುತ್ತೇವೆ, ಆದರೆ ಅದು ಕೇವಲ ಮುಸ್ಲಿಮರ ವಿರುದ್ಧ ಮಾತ್ರವಲ್ಲ ಆಗಿರುವುದಿಲ್ಲ. ನಮ್ಮ ಕಾನೂನು ಹಿಂದೂಗಳು ಮತ್ತು ಮುಸ್ಲಿಮರ ವಿಷಯದಲ್ಲಿ ಸಮಾನವಾಗಿರುತ್ತದೆ” ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಇದನ್ನೂ ಓದಿ: ತೈಲ ಬೆಲೆ 100 ರ ಗಡಿ ದಾಟಿದೆ; ಆದರೆ ಬಿಜೆಪಿ ‘ಲವ್ ಜಿಹಾದ್’ ಹಿಂದೆ ಬಿದ್ದಿದೆ: ವಿಜಯರಾಘವನ್

LEAVE A REPLY

Please enter your comment!
Please enter your name here