ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಮತ್ತು ಎಂಎಸ್‌ಪಿ ಖಾತ್ರಿಗಾಗಿ ಕಾಯ್ದೆಗಾಗಿ ಆಗ್ರಹಿಸಿ ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ರೈತ ಹೋರಾಟ ಬೆಂಬಲಿಸಿ ವಾಪಸ್ಸಾದ ಕರ್ನಾಟಕ ಜನಶಕ್ತಿ ಮತ್ತು ಇತರ ಸಂಘಟನೆಗಳ ಕಾರ್ಯಕರ್ತರಿಗೆ ಇಂದು ಬೆಂಗಳೂರಿನ ರೈಲ್ವೇ ನಿಲ್ದಾಣದಲ್ಲಿ ಸ್ವಾಗತ ಕೋರಲಾಯಿತು.
ಆ ಸಂದರ್ಭದಲ್ಲಿ ಹಿರಿಯ ಹೋರಾಟಗಾರ ಸಿರಿಮನೆ ನಾಗರಾಜ್ ಮಾತನಾಡಿ “ರೈತ ಹೋರಾಟದಲ್ಲಿ ನಾವು ಕೇವಲ ಒಂದು ವಾರಗಳ ಕಾಲ ಮಾತ್ರ ಇದ್ದೆವು. ಅಂದರೆ ಆನೆಯ ದಂತದ ಒಂದು ಭಾಗವನ್ನು ಮಾತ್ರ ನಾವು ತಿಳಿಯಲು ಸಾಧ್ಯವಾಗಿದೆ. ಇತಿಹಾಸದಲ್ಲಿ ಸ್ವಾತಂತ್ರ್ಯ ಹೋರಾಟದ ನಂತರ ನಡೆಯುತ್ತಿರುವ ದಿಟ್ಟ ಹೋರಾಟ ಇದಾಗಿದೆ. ರೈತರು ಗೆಲ್ಲದೇ ಅಲ್ಲಿಂದ ಕದಲುವುದಿಲ್ಲ ಎಂದು ನಿರ್ಧರಿಸಿದ್ದಾರೆ” ಎಂದರು.
ಕೇಂದ್ರ ಸರ್ಕಾರ ಇಡೀ ದೇಶದ ಮೇಲೆ ಯುದ್ಧ ಸಾರಿದೆ. ದೆಹಲಿಯ ಗಡಿಗಳಲ್ಲಿ ಸೈನಿಕ ಪಡೆಗಳನ್ನು ನಿಯೋಜಿಸಿ ನಿಜಕ್ಕೂ ಯುದ್ಧಭೂಮಿ ರೀತಿ ಮಾರ್ಪಡಿಸಿದೆ. ಆದರೆ ರೈತರು ಮಾತ್ರ ಶಾಂತಿಯುತವಾಗಿ ತಮ್ಮ ವಿರೋಧ ದಾಖಲಿಸುತ್ತಿದ್ದಾರೆ. ಹಳ್ಳಿ ಹಳ್ಳಿಗಳಲ್ಲಿ ರೈತ ಮಹಾಪಂಚಾಯತ್ ನಡೆಸಿ ಇಡೀ ದೇಶಕ್ಕೆ ಹೋರಾಟದ ಕಿಡಿ ಹಬ್ಬಿಸುತ್ತಿದೆ. ಜೀವನದಲ್ಲಿ ಒಮ್ಮೆ ಮಾತ್ರ ಸಿಗಬಹುದಾದ ಸಮಾನತೆಯ ಸಾಗರದ ಹೋರಾಟ ಇದಾಗಿದ್ದು, ನೀವು ತೀರ್ಥಯಾತ್ರೆ ರೀತಿ ದಯವಿಟ್ಟು ನೀವೆಲ್ಲರೂ ಒಮ್ಮೆ ಹೋಗಿ ದೆಹಲಿಯ ಗಡಿಗಳಿಗೆ ಭೇಟಿ ಕೊಡಿ ಎಂದು ಮನವಿ ಮಾಡಿದರು.
ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಸರೋವರ್ ಬೆಂಕಿಕೆರೆ ಮಾತನಾಡಿ “ದಲಿತರ, ಮಹಿಳೆಯರ ಮೇಲಿನ ದೌರ್ಜನ್ಯಗಳು, ಆರ್ಥಿಕ ಕುಸಿತ, ನಿರುದ್ಯೋಗದಂತಹ ಕರಾಳ ಸ್ಥಿತಿಯಲ್ಲಿದ್ದ ಭಾರತಕ್ಕೆ ಈ ರೈತ ಹೋರಾಟ ಸ್ಪಷ್ಟ ದಿಕ್ಕು ತೋರಿದೆ. ಭಾರತ ಎಂದರೆ ಏನು ಎಂಬುದನ್ನು ಈ ರೈತ ಹೋರಾಟ ಕಲಿಸುತ್ತಿದೆ. ಜಾತಿಯಂತಹ ರೋಗಗ್ರಸ್ಥದಿಂದ ಭಾರತ ಇಂದು ದೆಹಲಿಯ ಗಡಿಗಳಲ್ಲಿ ಮೇಲ್ಜಾತಿ, ಕೆಳಜಾತಿಯೆಂಬ ಜಾತಿ ತಾರತಮ್ಯವಿಲ್ಲದೆ, ಧರ್ಮ ಬೇಧಭಾವವಿಲ್ಲದೆ ಎಲ್ಲರೂ ಒಟ್ಟಿಗೆ ಊಟ ಮಾಡುತ್ತಾ ಹೋರಾಡುತ್ತಿದ್ದಾರೆ” ಎಂದರು.
ಸಂವಿಧಾನವನ್ನು ಎತ್ತಿ ಹಿಡಿಯುವ ಕೆಲಸ ದೆಹಲಿಯಲ್ಲಿ ನಡೆಯುತ್ತಿದೆ. ಇದು ರೈತರ ಹೋರಾಟವಾಗಿ ಮಾತ್ರ ಉಳಿದಿಲ್ಲ, ದೇಶದಲ್ಲಿ ಅನ್ನ ತಿನ್ನುವ ಪ್ರತಿಯೊಬ್ಬರ ಹೋರಾಟವಾಗಿ ಮಾರ್ಪಟ್ಟಿದೆ. ನಾವು ಅಲ್ಲಿ ಅತ್ಯದ್ಭುತವಾದ ಮಾನವ ಪ್ರೀತಿಯನ್ನು ಕಲಿತು ಬಂದಿದ್ದೇವೆ. ರೈತರು ವಿನಯ, ದೃಢನಿರ್ಧಾರ ಮತ್ತು ಗಟ್ಟಿತನದಿಂದ ಹೋರಾಡುತ್ತಿದ್ದಾರೆ. ಈ ಹೋರಾಟದಲ್ಲಿ ಈಗಾಗಲೇ ರೈತರು ಗೆದ್ದಿದ್ದಾರೆ. ಇದರಲ್ಲಿ ಅನುಮಾನವೇ ಇಲ್ಲ. ಸರ್ಕಾರ ತನ್ನ ಪ್ರತಿಷ್ಟೆಗೆ ಹೆದರಿ ಅದನ್ನು ಒಪ್ಪಿಕೊಳ್ಳುತ್ತಿಲ್ಲ ಅಷ್ಟೇ. ಆದರೆ ಕೆಲವೇ ದಿನಗಳಲ್ಲಿ ಸರ್ಕಾರ ಅದನ್ನು ಒಪ್ಪಿಕೊಳ್ಳುವ ಸಮಯ ಬರಲಿದೆ ಎಂದರು.
ಕರ್ನಾಟಕ ಜನಶಕ್ತಿಯ ಪ್ರಧಾನ ಕಾರ್ಯದರ್ಶಿ ಮಲ್ಲಿಗೆ ಸಿರಿಮನೆ ಮಾತನಾಡಿ “ನಮ್ಮ ದೇಶದ ಮುಂದಿನ ಪೀಳಿಗೆಗೋಸ್ಕರ, ಮುಂದಿನ ಮಕ್ಕಳ ಭವಿಷ್ಯಕ್ಕಾಗಿ ತಮ್ಮ ಮನೆ ಮಠ ಬಿಟ್ಟು, ಒಂದೊಂದು ರೂಪಾಯಿ ಜೋಡಿಸಿಕೊಂಡು ಲಕ್ಷಾಂತರ ರೈತರು ದೆಹಲಿಯ ಗಡಿಗಳಲ್ಲಿ ದುಡಿಯುತ್ತಾ ಹೋರಾಡುತ್ತಿದ್ದಾರೆ. ಈ ಹೋರಾಟ ಪೂರ್ತಿ ಅವರದ್ದು. ಈ ಹೋರಾಟದಲ್ಲಿ ನಾವು ನಿಮಿತ್ತ ಮಾತ್ರ.. ಇದು ಇಡೀ ರೈತರ ಹೋರಾಟ. ಅದರಲ್ಲಿ ನಾವು ಅಳಿಲು ಸೇವೆ ಮಾಡಲು ಅವಕಾಶ ಸಿಕ್ಕಿದ್ದಕ್ಕೆ ನಾವು ಧನ್ಯರಾಗಿದ್ದೇವೆ. ಅವರ ಹೋರಾಟ ದೊಡ್ಡ ಭರವಸೆ ಮತ್ತು ಹೊಸ ಉತ್ಸಾಹವನ್ನು ತುಂಬಿದೆ” ಎಂದರು.
ದೆಹಲಿಯ ಹೋರಾಟಗಾರರಿಂದ ನಾವು ಕಲಿತಿರುವುದೇನೆಂದರೆ ಅವರಷ್ಟೇ ಗಟ್ಟಿ ಹೋರಾಟವನ್ನು ದಕ್ಷಿಣ ಭಾರತದಲ್ಲಿಯೂ ಕಟ್ಟಬೇಕಿದೆ. ವಿಸ್ತಾರವಾದ ಹೋರಾಟವನ್ನು ನಾವು ಕಟ್ಟೇ ಕಟ್ಟುತ್ತೇವೆ ಎಂಬ ವಿಶ್ವಾಸ ಬಂದಿದೆ. ಸಂಪೂರ್ಣವಾಗಿ ತನುಮನಧನದಿಂದ ಈ ಆಂದೋಲನದಲ್ಲಿ ತೊಡಗಿಸಿಕೊಳ್ಳುತ್ತೇವೆ. ಮಾರ್ಚ್ 20 ರಂದು ಶಿವಮೊಗ್ಗದಲ್ಲಿ ರೈತ ಪಂಚಾಯತ್ ನಡೆಯಲಿದ್ದು, 21 ಮತ್ತು 22 ರಂದು ಉತ್ತರ ಕರ್ನಾಟಕದಲ್ಲಿ ರೈತ ಹೋರಾಟ ನಡೆಯಲಿದೆ. ನೀವೆಲ್ಲರೂ ಭಾಗವಹಿಸಿ ಎಂದು ಮನವಿ ಮಾಡಿದರು.
ಕೊಡಗಿನ ಯುವ ಹೋರಾಟಗಾರ ಗಿರೀಶ್ ಮಾತನಾಡಿ “ನಾವು ಟಿವಿ ಚಾನೆಲ್‌ಗಳಲ್ಲಿ ನೋಡಿದ ಹಾಗೆ ಅಲ್ಲಿನ ಪರಿಸ್ಥಿತಿ ಇಲ್ಲ. ಸರ್ಕಾರ ಅವರ ಮೇಲೆ ದೌರ್ಜನ್ಯವೆಸಗುತ್ತಿದೆ. ನೀರು, ವಿದ್ಯುತ್, ಇಂಟರ್ನೆಟ್‌ನಂತರ ಮೂಲಭೂತ ಸೌಲಭ್ಯಗಳನ್ನು ಕೊಡದೇ ಕಿರುಕುಳ ನೀಡುತ್ತಿದೆ. ಕೇವಲ ಅಂಬಾನಿ ಅದಾನಿಯಂತಹ ಬಂಡವಾಳಶಾಹಿಗಳಿಗೋಸ್ಕರ ರೈತರನ್ನು ಬಲಿಕೊಡಲಾಗುತ್ತದೆ ಎಂಬುದು ನನಗೆ ದೆಹಲಿಯಲ್ಲಿ ಗೊತ್ತಾಯಿತು.
ಇದನ್ನೂ ಓದಿ: ರೈತರನ್ನು ಸುತ್ತುವರಿಯಲು ನೋಡಿದರು, ಈಗ ರೈತರೇ ಸರ್ಕಾರವನ್ನು ಸುತ್ತುವರೆದಿದ್ದಾರೆ: ಡಾ. ಅಮಿತ್ ಬಾಧುರಿ


