ರಾಜ್ಯ ವಿಧಾನಸಭಾ ಚುನಾವಣೆಯ ಕಾವು ರಂಗೇರುತ್ತಿದ್ದು, ಪಕ್ಷದ ಅಭ್ಯರ್ಥಿ ಪರವಾಗಿ ನಾಯಕರು ಪ್ರಚಾರ ಆರಂಭಿಸಿದ್ದಾರೆ. ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯಗೆ ಪ್ರತಿಸ್ಪರ್ಧಿಯಾಗಿರುವ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಪರವಾಗಿ ಸಂಸದ ಪ್ರತಾಪ್ ಸಿಂಹ ಪ್ರಚಾರಕ್ಕೆ ತೆರಳಿದ್ದರು. ಈ ವೇಳೆ ಕುಪ್ಯ ಗ್ರಾಮದ ಜನರು ಪ್ರತಾಪ ಸಿಂಹ ಅವರಗೆ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಗುರುವಾರ ಸಂಸದ ಪ್ರತಾಪ್ ಸಿಂಹ್ ಅವರು ಕುಪ್ಯ ಗ್ರಾಮದಲ್ಲಿ ಪ್ರಚಾರಕ್ಕೆ ತೆರಳಿದ್ದರು. ಈ ವೇಳೆ ಗ್ರಾಮಸ್ಥರು ಅವರಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಅವರ ಪ್ರಶ್ನೆಗಳಿಗೆ ಉತ್ತರ ನೀಡಲಾಗದ ಪ್ರತಾಪ ಸಿಂಹ ಕಕ್ಕಾಬಿಕ್ಕಿಯಾಗಿ ನಿಂತಿರುವ ವಿಡಿಯೋ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
”ನಾವು ಬಂದಿರುವುದೇ ಸಂವಿಧಾನ ಬದಲಾಯಿಸುವುದಕ್ಕೆ ಎಂದು ಬಿಜೆಪಿಯವರು ಹೇಳಿದ್ದೀರಿ. ಸಂವಿಧಾನ ರಚಿಸಿದ ಅಂಬೇಡ್ಕರ್ ಅಭಿಮಾನಿಗಳಾದ ನಾವು ನಿಮ್ಮನ್ನು ಹೇಗೆ ಬೆಂಬಲಿಸುವುದು?” ಎಂದು ಗ್ರಾಮಸ್ಥರು ಕೇಳಿದ್ದಾರೆ.
”ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ನಿಮ್ಮದೇ ಸರ್ಕಾರವಿದ್ದಾಗ ರಸ್ತೆರಾಜ ಎಂದು ಬಿರುದು ಕೊಟ್ಟಿದ್ರಿ. ಈಗ ಮೈಸೂರು- ಬೆಂಗಳೂರು ದಶಪಥ ಹೆದ್ದಾರಿ ನಿರ್ಮಾಣವಾದ ಮೇಲೆ ಅವರ ವಿರುದ್ಧವೇ ಆರೋಪ ಮಾಡುತ್ತಿದ್ದೀರಿ ಇದು ಸರಿಯೇ?” ಎಂದು ಕೇಳಿ ತರಾಟೆಗೆ ತೆಗೆದುಕೊಂಡಿದ್ದಾರೆ.
”ಸಂಸದ ವಿ.ಶ್ರೀನಿವಾಸ ಪ್ರಸಾದ್ ಈವರೆಗೂ ನಮ್ಮೂರಿಗೆ ಬಂದೇ ಇಲ್ಲ” ಎಂದೂ ದೂರಿದ್ದಾರೆ.
ಇದನ್ನೂ ಓದಿ: ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿಯಲ್ಲಿ ಸಂಸದ ಪ್ರತಾಪ್ ಸಿಂಹ ಕೋಟ್ಯಾಂತರ ರೂ ಕಮಿಷನ್ ತಿಂದಿದ್ದಾರೆ: ಎಚ್.ವಿಶ್ವನಾಥ್
ಪ್ರತಾಪ್ ಸಿಂಹ ಅವರು ಈ ಹಿಂದೆ ಸಿದ್ದರಾಮಯ್ಯ ವಿರುದ್ಧ ನೀಡಿದ್ದ ಹೇಳಿಕೆಗಳ ಬಗ್ಗೆಯೇ ಪ್ರಶ್ನೆ ಮಾಡಿದ ಗ್ರಾಮಸ್ಥರು ಅವರ ಚಳಿಬಿಡಿಸಿದ್ದಾರೆ. ”ಸಿದ್ದರಾಮಯ್ಯ ಮೈಸೂರಿಗೆ ನೀಡಿರುವ ಕೊಡುಗೆ ಏನು ಎಂದೆಲ್ಲಾ ಕೇಳಿದ್ದೀರಿ. ಅವರ ಪಕ್ಕ ಹೋಗಿ ಕುಳಿತುಕೊಳ್ಳಿ ಆಗ ಎಲ್ಲವೂ ನಿಮಗೆ ಗೊತ್ತಾಗುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
”ಅಕ್ಕಿ ಮೋದಿಯದು, ಚೀಲ ಸಿದ್ದರಾಮಯ್ಯ ಅವರದ್ದು ಎಂದು ಆರೋಪಿಸುತ್ತೀರಲ್ಲಾ ನೀವೇನು ಕೊಡುಗೆ ಕೊಟ್ಟಿದ್ದೀರಿ? ನಿಮ್ಮ ಸರ್ಕಾರದಲ್ಲಿ ಪ್ರತಿ ವ್ಯಕ್ತಿಗೆ 10 ಕೆ.ಜಿ. ಅಕ್ಕಿ ಕೊಡುತ್ತಿಲ್ಲವೇಕೆ? ಅಡುಗೆ ಅನಿಲ ಸಿಲಿಂಡರ್ ಬೆಲೆ ಇಷ್ಟೊಂದು ಜಾಸ್ತಿಯಾಗಿದೆಯಲ್ಲ ಏಕೆ? ಎಂದು ಪ್ರಶ್ನಿಸಿದ್ದಾರೆ.
ಪ್ರಜ್ಞಾವಂತ ಮತದಾರರ ಪ್ರಶ್ನೆಗಳಿಗೆ ಕಕ್ಕಬಿಕ್ಕಿಯಾದ ಗ್ರಾಮ ಸಿಂಹ..
ನಿಮ್ಮದೇ ಮಾಧ್ಯಮದವರ ಮುಂದೆ , ತಮ್ಮದೇ ಸಾಮಾಜಿಕ ಜಾಲತಾಣಗಳಲ್ಲಿ ಬಾಯಿಗೆ ಬಂದಂಗೆ ಬೊಗಳೋದಲ್ಲಾ , ಈಗ ಜನರ ಮಧ್ಯೆ ನಿಂತು ಉತ್ತರಿಸು, ತೋರಿಸು ನಿನ್ನ ಪೌರುಷನ..#bjpfailsinindia #BJPGoons pic.twitter.com/rLkY2HY1qF
— DEEPU GOWDRU (@DEEPUVAJRAMUNI) April 21, 2023
ಗ್ರಾಮಸ್ಥರ ಈ ಮೇಲಿನ ಪ್ರಶ್ನೆಗಳಿಂದ ಕಕ್ಕಾಬಿಕ್ಕಿಯಾಗಿ ನಿಂತ ಸಂಸದ ಪ್ರತಾಪ ಸಿಂಹ ಅವರು ಉತ್ತರ ನೀಡಲು ಪರದಾಡಿರುವುದು ವಿಡಿಯೊದಲ್ಲಿದೆ.


