Homeಕರ್ನಾಟಕ13 ಷರತ್ತು ವಿಧಿಸಿ ಕಾಂಗ್ರೆಸ್‌ಗೆ ದಸಂಸ ಐಕ್ಯ ಹೋರಾಟ ಚಾಲನಾ ಸಮಿತಿ ಬೆಂಬಲ

13 ಷರತ್ತು ವಿಧಿಸಿ ಕಾಂಗ್ರೆಸ್‌ಗೆ ದಸಂಸ ಐಕ್ಯ ಹೋರಾಟ ಚಾಲನಾ ಸಮಿತಿ ಬೆಂಬಲ

- Advertisement -
- Advertisement -

13 ಷರತ್ತುಗಳನ್ನು ವಿಧಿಸುವ ಮೂಲಕ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಕಾಂಗ್ರೆಸ್ ಪಕ್ಷಕ್ಕೆ ಈ ಚುನಾವಣೆಯಲ್ಲಿ ಬೆಂಬಲ ಘೋಷಿಸಿದೆ.

ಹತ್ತಾರು ಬಣಗಳಾಗಿ ಒಡೆದು ಹೋಗಿದ್ದ ದಸಂಸವನ್ನು ಈ ಚಾಲನಾ ಸಮಿತಿಯು ಒಗ್ಗೂಡಿಸಿದೆ. ಡಿಸೆಂಬರ್‌ 6ರಂದು ಬೆಂಗಳೂರಿನ ಬಸವನಗುಡಿ ಮೈದಾನದಲ್ಲಿ ‘ಸಾಂಸ್ಕೃತಿಕ ಪ್ರತಿರೋಧ’ ಸಮಾವೇಶ ನಡೆಸುವ ಹತ್ತು ಬಣಗಳನ್ನು ಒಂದು ವೇದಿಕೆಗೆ ತರಲಾಗಿತ್ತು. ಕೋಮುವಾದಿ ಪಕ್ಷಗಳ ವಿರುದ್ಧ ಸಮರ ಸಾರಿರುವ ಸಮಿತಿಯು ಈಗ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ನೀಡಿದೆ.

“ಕಾಂಗ್ರೆಸ್ ಪಕ್ಷ, ದಲಿತ ಸಂಘರ್ಷ ಸಮಿತಿ ಆಯ್ಕೆ ಮಾಡಿಕೊಂಡ ಈ ಹೊತ್ತಿನ ಅನಿವಾರ್ಯ ಚುನಾವಣಾ ಆಯ್ಕೆಯೇ ಹೊರತು, ರಾಜಕೀಯ ಪರ್ಯಾಯವಲ್ಲ” ಎಂದು ಸಮಿತಿ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ಚಾಲನಾ ಸಮಿತಿ ನೀಡಿರುವ ಪತ್ರಿಕಾ ಹೇಳಿಕೆಯ ಪೂರ್ಣ ಪಠ್ಯ

ಭಾರತದ ನೆಲ ಕಂಡಂತಹ ಅತ್ಯಂತ ಸಮರ್ಥ ಜನ ಚಳವಳಿಗಳಲ್ಲಿ ದಲಿತ ಸಂಘರ್ಷ ಸಮಿತಿಯು ವಿಶಿಷ್ಟವಾಗಿ ನಿಲ್ಲುತ್ತದೆ. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಭಾರತದ ಸಂವಿಧಾನ ನಮ್ಮ ದಲಿತ ಸಂಘರ್ಷ ಸಮಿತಿಯ ಜೀವಾಳ ಮತ್ತು ಮನೋಸ್ಥೈರ್ಯ. ಅಂಬೇಡ್ಕರ್ ಸಿದ್ಧಾಂತವೇ ನಮ್ಮ ಸಿದ್ಧಾಂತ. ‘ಎಲ್ಲಾ ಜಾತಿಯ ಬಡವರೂ ದಲಿತರು’ ಎಂಬ ಧ್ಯೇಯ ವಾಕ್ಯದೊಂದಿಗೆ 1970ರ ದಶಕದ ಮಧ್ಯ ಭಾಗದಲ್ಲಿ ಕರ್ನಾಟಕದಲ್ಲಿ ಆರಂಭವಾದ ದಲಿತ ಸಂಘರ್ಷ ಸಮಿತಿಯು ಅಸ್ಪೃಶ್ಯತೆ ಮತ್ತು ದಲಿತರ ಮೇಲಿನ ದೌರ್ಜನ್ಯಗಳನ್ನು ಸಮರ್ಥವಾಗಿ ಪ್ರಶ್ನಿಸಿತು ಹಾಗೂ ಅದರ ವಿರುದ್ಧ ನಿರಂತರವಾಗಿ ಹೋರಾಟ ನಡೆಸಿತು. ಜೊತೆಗೆ ಹಿಂದುಳಿದ ಜಾತಿಗಳ ಮತ್ತು ಮಹಿಳೆಯರ ಮೇಲೆ ನಡೆದ ದೌರ್ಜನ್ಯಗಳ ವಿರುದ್ಧವೂ ಬೀದಿಗಿಳಿದು ಹೋರಾಡಿತು. ಸ್ವತಃ ಹಿಂದುಳಿದ ಜಾತಿಗಳಿಗೆ ಮಂಡಲ್ ವರದಿ ಆಧಾರಿತ ಮೀಸಲಾತಿ ಜಾರಿಯ ಬಗ್ಗೆ ಸ್ಪಷ್ಟತೆ ಇಲ್ಲದಿದ್ದ ಆ ಕಾಲದಲ್ಲೇ ದಲಿತ ಸಂಘರ್ಷ ಸಮಿತಿಯು ಮಂಡಲ್ ವರದಿ ಜಾರಿಗಾಗಿ ಹಾಗೂ ಹಿಂದುಳಿದ ವರ್ಗಗಳ ಪರವಾಗಿ ಕೆಲಸ ಮಾಡಿತು. ಕರ್ನಾಟಕದ ಹಲವು ಸರ್ಕಾರಗಳ ವಿರುದ್ಧ ವಿರೋಧ ಪಕ್ಷದ ರೀತಿಯಲ್ಲಿ ಕೆಲಸ ಮಾಡಿಕೊಂಡು ಬಂದಿರುವುದು ದಲಿತ ಸಂಘರ್ಷ ಸಮಿತಿಯ ಇತಿಹಾಸ.

ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಆಡಳಿತದಲ್ಲಿ ಕೈಗೊಂಡ ಹಲವು ನೀತಿಗಳ ವಿರುದ್ಧ ನಮಗೆ ಅಸಮಾಧಾನವಿರುವುದು ನಿಜ. ಬಾಬಾಸಾಹೇಬ್ ಅಂಬೇಡ್ಕರ್ ಅವರ ‘ಪ್ರಭುತ್ವ ಸಮಾಜವಾದ’ ಕಲ್ಪನೆಯ ವಿರುದ್ಧವಾಗಿ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ಪರವಾಗಿ ನಿಂತ ಕಾಂಗ್ರೆಸ್ ಸರ್ಕಾರದ ನಿಲುವಿನ ಬಗ್ಗೆ ನಮಗೆ ಬೇಸರವಿದೆ. 1989ರಲ್ಲಿ ಜಾರಿಗೊಳಿಸಿದ ‘ಅಟ್ರಾಸಿಟಿ ಕಾಯ್ದೆ’ಯನ್ನು ತಳಮಟ್ಟದಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸದೆ ಇದ್ದುದರ ಪರಿಣಾಮವಾಗಿ ಕಂಬಾಲಪಲ್ಲಿ, ನಾಗಲಾಪಲ್ಲಿ ಖೈರ್ಲಾಂಜಿ ಮುಂತಾದ ಕಡೆ ನಡೆದ ದಲಿತರ ನರಮೇಧಗಳಿಗೆ ನ್ಯಾಯ ಸಿಗದ ಬಗ್ಗೆ ತೀವ್ರ ನೋವಿದೆ. ದಲಿತ ಮಕ್ಕಳ ಉನ್ನತ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡದಿದ್ದಕ್ಕೆ ಅಸಮಾಧಾನವಿದೆ. ಆದರೂ ದಿವಂಗತ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅವರು ಜಾರಿಗೆ ತಂದ ಇಪ್ಪತ್ತು ಅಂಶಗಳ ಕಾರ್ಯಕ್ರಮ, ಶಿಕ್ಷಣವನ್ನು ಹಕ್ಕನ್ನಾಗಿಸಿದ್ದು, ಆರ್.ಟಿ.ಐ ಕಾಯಿದೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉಪಯೋಜನೆಯನ್ನು ಜಾರಿಗೊಳಿಸಿದ್ದರ ಬಗ್ಗೆ ಸಮಾಧಾನವಿದೆ.

2014ರಲ್ಲಿ ಆರ್.ಎಸ್.ಎಸ್-ಬಿಜೆಪಿ ಕೃತಕವಾಗಿ ಸೃಷ್ಟಿಸಿದ್ದ, ಕೋಮುದ್ವೇಷದ ‘ಗುಜರಾತ್ ಮಾಡಲ್’ ಭಾಗವಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೆಹಲಿಯ ಗದ್ದುಗೆ ಏರಿತು. ಅಲ್ಲಿಂದ ಸತತವಾಗಿ ಭಾರತದ ಜನಸಾಮಾನ್ಯರ ರಕ್ತ ಹೀರುತ್ತಲೇ ಬಂದಿದೆ. ನೋಟು ರದ್ದತಿ, ಜಿ.ಎಸ್.ಟಿ. ಕೋವಿಡ್ ಲಾಕ್‌ಡೌನ್‌, ಶ್ರೀಮಂತರ ತೆರಿಗೆ ಕಡಿತ, ಖಾಸಗೀಕರಣದ ಭರಾಟೆ, ಸಾರ್ವಜನಿಕ ಉದ್ದಿಮೆಗಳ ಮಾರಾಟ, ಬೆಲೆ ಏರಿಕೆ, ಕೋಮುದಳ್ಳುರಿ, ಗೋಭಯೋತ್ಪಾದನೆ, ವಿಪರೀತ ಜಾತಿದ ಜಾತಿ ದೌರ್ಜನ್ಯಗಳು ಒಂದೇ ಎರಡೇ, ಕಳೆದ 9 ವರ್ಷಗಳಲ್ಲಿ ಭಾರತದ ಜನಸಾಮಾನ್ಯರು ನರಕ ನೋಡಿದ್ದಾರೆ. ಅದರಲ್ಲಿ ದಲಿತರು ರೌರವ ನರಕ ಅನುಭವಿಸಿದ್ದಾರೆ. ಕಾನೂನು ಹಾಗೂ ಶಾಂತಿ ಸುವ್ಯವಸ್ಥೆ ಕುಸಿದು ಬಿದ್ದು ನೈತಿಕ ಪೊಲೀಸ್‌ ಗಿರಿ, ರಾರಾಜಿಸುತ್ತಿದೆ. ಕಾರ್ಯಾಂಗದಲ್ಲಿ ಸಂಘಪರಿವಾರದ ಮನಸ್ಥಿತಿಗಳು ಸ್ವಜನ ಪಕ್ಷಪಾತಿಗಳಾಗಿದ್ದಾರೆ. ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳೆಲ್ಲವೂ ಆಡಳಿತ ಬಿಜೆಪಿ ಸರ್ಕಾರದ ಆಣತಿಯಂತೆ ವರ್ತಿಸುತ್ತಿವೆ. ನರೇಂದ್ರ ಮೋದಿ ಸರ್ಕಾರದ ಮಂತ್ರಿಗಳು ಸಂವಿಧಾನವನ್ನು ಬದಲಾಯಿಸುವ ಮಾತುಗಳನ್ನು ಆಡುತ್ತಿದ್ದಾರೆ. ಪಠ್ಯ ಪುಸ್ತಕಗಳಲ್ಲಿ ಪುರಾಣದ ಕತೆಗಳನ್ನೂ ಹಾಗೂ ಸಂಘಪರಿವಾರದ ಸುಳ್ಳುಗಳನ್ನು ಸೇರಿಸಲಾಗುತ್ತಿದೆ. ಬಹುತೇಕ ಮಾಧ್ಯಮಗಳು ಬಿಜೆಪಿಗೆ ಮಾರಾಟವಾದಂತಿವೆ. ಹಾಗಾಗಿ ಭಾರತ ದೇಶದಲ್ಲೀಗ ಸರ್ವಾಧಿಕಾರ ಜಾರಿಯಲ್ಲಿದೆ.

ಸರ್ವಾಧಿಕಾರದ ಗರ್ಭದೊಳಗೆ ಕುಡಿಯೊಡೆದಿರುವ ಸರ್ಕಾರವೇ ಇಂದು ಕರ್ನಾಟಕವನ್ನು ಆಳುತ್ತಿರುವ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ, ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದ ಕರ್ನಾಟಕದಲ್ಲಿ ‘ಆಪರೇಷನ್ ಕಮಲ’ ಎಂಬ ಅನೈತಿಕ ಹಾಗೂ ಅಸಂವಿಧಾನಿಕ ದಾರಿಯಿಂದ ಸರ್ಕಾರ ರಚಿಸಿದ ಬಿಜೆಪಿಯು ತದನಂತರಲ್ಲಿ ಉತ್ತರ ಭಾರತದ ಕೋಮುದ್ವೇಷವನ್ನು ಕರ್ನಾಟಕದಲ್ಲೂ ಬಿತ್ತಲು ಆರಂಭಿಸಿತು. ಕನ್ನಡದ ಮನವು ಆವರೆಗೆ ಕಂಡಿರದ ಕೋಮುಧ್ರುವೀಕರಣ ಕ್ರಿಯೆಗೆ ಒಳಗಾಗುವಂತಾಯಿತು. ಧರ್ಮ-ಧರ್ಮಗಳ ನಡುವೆ, ಜಾತಿ-ಜಾತಿಗಳ ನಡುವೆ ಬಿರುಕು ಮೂಡಿಸಲಾಯಿತು. ಭ್ರಷ್ಟಾಚಾರವೆಂಬುದು ಬೊಮ್ಮಾಯಿ ಸರ್ಕಾರದ ಕಿರೀಟವಾಯಿತು.

ಹಾಗಾಗಿ ಸದಾ ಕಾಲ ಸಮಾನತೆ ಸಾಮರಸ್ಯವನ್ನೇ ಬಯಸುವ ದಸಂಸ, ದೇಶ ಮತ್ತು ರಾಜ್ಯದಲ್ಲಿ ಜಾರಿಯಲ್ಲಿರುವ ಸರ್ವಾಧಿಕಾರಿ ಜನವಿರೋಧಿ ಆಡಳಿತವನ್ನು ಕಿತ್ತೊಗೆಯಲು ನಿರ್ಧರಿಸಿತು. ಈ ಹಿನ್ನೆಲೆಯಲ್ಲಿಯೇ ವಿವಿಧ ಗುಂಪುಗಳಾಗಿ ಹಂಚಿಹೋಗಿದ್ದ ಸಮಾನ ಮನಸ್ಕ ದಲಿತ ಸಂಘರ್ಷ ಸಮಿತಿಗಳ ಹತ್ತು ಬಣಗಳನ್ನು, ಒಂದುಗೂಡಿಸುವ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿನಿರ್ವಾಣ ದಿನವಾದ ಡಿಸೆಂಬರ್ 6, 2022 ರಂದು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ‘ದಲಿತ ಸಾಂಸ್ಕೃತಿಕ ಸಮಾವೇಶ’ ಆಯೋಜಿಸಿ, ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ಪಣತೊಡಲಾಗಿತ್ತು. ಕೋಮುವಾದಿ ಆರ್.ಎಸ್.ಎಸ್ – ಬಿ.ಜೆ.ಪಿ ಆಡಳಿತಕ್ಕೆ ಕೊನೆ ಹಾಡಲು ಅಂದೇ ನಿರ್ಧರಿಸಲಾಗಿತ್ತು. ಅಂದಿನ ಸಮಾವೇಶದಲ್ಲಿ, ದಲಿತ ಸಮುದಾಯದ ಜೊತೆ ಹಿಂದುಳಿದವರು, ಆದಿವಾಸಿಗಳು, ಅಲೆಮಾರಿಗಳು, ವಿದ್ಯಾರ್ಥಿ ಯುವಜನರೂ ಸೇರಿದಂತೆ ಲಕ್ಷಾಂತರ ಜನರು ಭಾಗವಹಿಸಿ ಇತಿಹಾಸವನ್ನೇ ನಿರ್ಮಿಸಿದರು.

ಇದರ ಮುಂದುವರೆದ ಭಾಗವಾಗಿ ಮೇ 10, 2023 ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ಮತ್ತು ಜನ ದ್ರೋಹಿ ಆರ್.ಎಸ್.ಎಸ್ ಬಿಜೆಪಿಯನ್ನು ಹಿಮ್ಮೆಟ್ಟಿಸುವುದಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಷರತ್ತುಬದ್ಧ ಬೆಂಬಲ ನೀಡಲು ‘ಕರ್ನಾಟಕ ರಾಜ್ಯ, ದ.ಸಂ.ಸ ಐಕ್ಯ, ಹೋರಾಟ ಚಾಲನಾ ಸಮಿತಿ’ ತೀರ್ಮಾನಿಸಿದೆ. ಮುಂದೆ ಆಯ್ಕೆಯಾಗಿ ಸರ್ಕಾರ ರಚಿಸಿದ ನಂತರ ಜನಪರ ಆಡಳಿತ ನೀಡುವುದರೊಂದಿಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿ ಹಿಡಿಯಬೇಕೆಂದು ಆಗ್ರಹಪಡಿಸುತ್ತದೆ. ಕಾಂಗ್ರೆಸ್ ಪಕ್ಷ, ದಲಿತ ಸಂಘರ್ಷ ಸಮಿತಿ ಆಯ್ಕೆ ಮಾಡಿಕೊಂಡ ಈ ಹೊತ್ತಿನ ಅನಿವಾರ್ಯ ಚುನಾವಣಾ ಆಯ್ಕೆಯೇ ಹೊರತು, ರಾಜಕೀಯ ಪರ್ಯಾಯವಲ್ಲ ಎಂಬುದನ್ನೂ ಇಲ್ಲಿ ಸ್ಪಷ್ಟಪಡಿಸಬಯಸುತ್ತದೆ.

ಷರತ್ತುಗಳು

1. ಪರಿಶಿಷ್ಟ ಜಾತಿ/ವರ್ಗಗಳಿಗೆ SCSP/TSP ಕಾಯ್ದೆಯ ಅನುಗುಣವಾಗಿ ರಾಜ್ಯ ಬಜೆಟ್ಟಿನ ಶೇ. 24.10 ರಷ್ಟು ಅನುದಾನವನ್ನು ಕಡ್ಡಾಯವಾಗಿ ಮೀಸಲಿಡಬೇಕು. ಈ ಅನುದಾನವನ್ನು ಸಂಪೂರ್ಣವಾಗಿ ‘ಏಕಗವಾಕ್ಷಿ ಯೋಜನೆ’ಯಲ್ಲಿ ಅನುಷ್ಠಾನಗೊಳಿಸಬೇಕು. ದಲಿತರ, ಅವಶ್ಯಕತೆಗೆ ತಕ್ಕಂತೆ ಯೋಜನೆ ರೂಪಿಸುವುದರ ಮೂಲಕ ಅನುದಾನ ದುರ್ಬಳಕೆಯನ್ನು ಕೂಡಲೇ ನಿಲ್ಲಿಸಬೇಕು. ಇತರೆ ವೆಚ್ಚಕ್ಕಾಗಿ ಹಣ ಬಳಸಲು ಅವಕಾಶವಿರುವ 7ಡಿ ಸೆಕ್ಷನ್ ಅನ್ನು ಕಾಯ್ದೆಯಿಂದ ತೆಗೆದುಹಾಕಬೇಕು. ಕೇಂದ್ರ ಸರ್ಕಾರವೂ ಸಹ ಇದೇ ಮಾದರಿಯ ಕಾಯ್ದೆಯನ್ನು ರೂಪಿಸಬೇಕು.

2. ಕೇವಲ ಆರ್ಥಿಕ ಮಾನದಂಡದಲ್ಲಿ ಎಸ್ಸಿ/ಎಸ್ಟಿ/ಒಬಿಸಿ ಯವರನ್ನು ಹೊರತುಪಡಿಸಿ ವಾರ್ಷಿಕ ಎಂಟು ಲಕ್ಷ ವರಮಾನವಿರುವ ಮೇಲ್ಜಾತಿಯವರಿಗೆ ನೀಡಿರುವ EWS ಮೀಸಲಾತಿಯನ್ನು ವಿರೋಧಿಸಬೇಕು, ಖಾಸಗಿಯಲ್ಲಿಯೂ ಸಾಮಾಜಿಕ ನ್ಯಾಯದ ಹಿನ್ನೆಲೆಯ ಮೀಸಲಾತಿಯನ್ನು ಜಾರಿಗೊಳಿಸಬೇಕು.

3. ರಾಜ್ಯ, ಸರ್ಕಾರಗಳಲ್ಲಿ ಬಹುಕಾಲದಿಂದ ಖಾಲಿಯಾಗಿಯೇ ಉಳಿದಿರುವ ಲಕ್ಷಾಂತರ ಎಸ್ಸಿ/ಎಸ್ಟಿ ಬ್ಯಾಕ್ಲಾಗ್‌ ಹುದ್ದೆಗಳನ್ನು, ಈ ಕೂಡಲೇ ಭರ್ತಿ ಮಾಡಿಕೊಳ್ಳಬೇಕು. ಹೊರಗುತ್ತಿಗೆ ನೇಮಕಾತಿಯನ್ನು ರದ್ದುಗೊಳಿಸಬೇಕು, ಖಾಲಿ ಹುದ್ದೆಗಳನ್ನು ಕೂಡಲೇ ತುಂಬಬೇಕು.

4. ‘ಪಿ.ಟಿ.ಸಿ.ಎಲ್ ಕಾಯ್ದೆ’ಯನ್ನು ಬಲಪಡಿಸಬೇಕು. ದಲಿತರ ಭೂಮಿಯು ದಲಿತರಲ್ಲಿಯೇ ಉಳಿಯುವಂತೆ ಮಾಡಬೇಕು. ಈ ಕಾಯ್ದೆಯ ಮೂಲ ಉದ್ದೇಶವಾದ ‘ದಲಿತರು ಭೂಮಿ ಹೊಂದುವ ಗುರಿ’ಯನ್ನು ಸಮರ್ಥವಾಗಿ ಅನುಷ್ಠಾನಕ್ಕೆ ತರಬೇಕು.

5. ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಗೋಹತ್ಯಾ ನಿಷೇಧ ಕಾಯ್ದೆ’ ಮತ್ತು ‘ಮತಾಂತರ ನಿಷೇಧ ಕಾಯ್ದೆ’ಗಳನ್ನು ಈ ಕೂಡಲೇ ರದ್ದುಗೊಳಿಸಬೇಕು.

6. ಎಸ್ಸಿ/ಎಸ್ಟಿ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳ ಸಮಸ್ಯೆಗಳನ್ನು ಬಗೆಹರಿಸಲು ‘ಹಿಂದುಳಿದ ವರ್ಗಗಳ ಶಾಶ್ವತ ಆಯೋಗ’ದ ಮಾದರಿಯಲ್ಲಿ ಪ್ರತ್ಯೇಕ ಆಯೋಗವನ್ನು ರಚಿಸಿ ಕಾಲಕಾಲಕ್ಕೆ ಸಮೀಕ್ಷೆ ಮಾಡಿ ಸೌಲಭ್ಯ ಒದಗಿಸಬೇಕು. ಡಿ.ಎನ್.ಟಿ (ಡಿನೋಟಿಫೈಯ್ಡ್ ಟ್ರೆಬ್ಸ್) ಸಮುದಾಯಗಳಿಗೆ ವಿಶೇಷ ಸೌಲಭ್ಯ ಒದಗಿಸಬೇಕು.

7. ಹಿಂದುಳಿದ ವರ್ಗಗಳಲ್ಲಿ ಇರುವಂತೆ ಪರಿಶಿಷ್ಟ ಜಾತಿ/ವರ್ಗಗಳಲ್ಲೂ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ಜಾರಿಗೆ ತರಬೇಕು. ವೈಜ್ಞಾನಿಕ ಅಧ್ಯಯನದ ಅಂಕಿ-ಅಂಶಗಳ ಆಧಾರದ ಮೇಲೆ, ಎಲ್ಲ ಸಮುದಾಯಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಳಮೀಸಲಾತಿ ಜಾರಿಗೊಳಿಸಲು ಒಕ್ಕೂಟ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಮತ್ತು ಅದಕ್ಕಾಗಿ ಸಂವಿಧಾನ ತಿದ್ದುಪಡಿಗಾಗಿ ಒತ್ತಡ ಹೇರಬೇಕು.

8. ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ರೈತಾಪಿ ಜನರ ವಿರೋಧಿ ಭೂಸುಧಾರಣಾ ತಿದ್ದುಪಡಿ ಕಾಯ್ದೆ, ಎ.ಪಿ.ಎಮ್.ಸಿ. ತಿದ್ದುಪಡಿ ಕಾಯ್ದೆ ಹಾಗೂ ವಿದ್ಯುತ್ ಖಾಸಗೀಕರಣ ಮಸೂದೆಯನ್ನು ಮತ್ತು ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಈ ಕೂಡಲೇ ರದ್ದುಗೊಳಿಸಬೇಕು.

9. ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತಂದಿರುವ, ಅಸಮಾನತೆಯನ್ನು ಹಾಗೂ ಚಾತುವರ್ಣ ಪದ್ಧತಿಯನ್ನು ಎತ್ತಿ ಹಿಡಿಯುವ ರಾಷ್ಟ್ರೀಯ ಶಿಕ್ಷಣ ನೀತಿ – 2020 ಅನ್ನು, ಈ ಕೂಡಲೇ ರದ್ದುಗೊಳಿಸಬೇಕು.

10. ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವ ದಲಿತ ಮಕ್ಕಳಿಗೆ ಸ್ಕಾಲರ್ಶಿಪ್ ಮೊತ್ತವನ್ನು ಹೆಚ್ಚಿಸಬೇಕು. ಎಸ್ಸಿ/ಎಸ್ಟಿ ಮೀಸಲಾತಿಗೆ ನಿಗದಿಪಡಿಸಿರುವ ವಾರ್ಷಿಕ ಆದಾಯ ಮಿತಿಯನ್ನು ಹತ್ತು ಲಕ್ಷಕ್ಕೆ, ಏರಿಸಬೇಕು.

11. ಅರ್ಚಕ ಮತ್ತು ಪೌರಕಾರ್ಮಿಕ ವೃತ್ತಿಯನ್ನು ಸಾರ್ವತ್ರಿಕಗೊಳಿಸಬೇಕು. ಈ ಎರಡೂ ವೃತ್ತಿಗಳಲ್ಲಿ ಮೀಸಲಾತಿ ನೀತಿಯನ್ನು ಅನುಷ್ಠಾನಕ್ಕೆ ತರಬೇಕು. ಮಲ ಹೊರುವ ಪದ್ಧತಿ ನಿಷೇಧಗೊಂಡಿದ್ದರೂ ನೂರಾರು ಸಾವುಗಳು ಇದರಿಂದ ಸಂಭವಿಸಿವೆ. ಇಡೀ ದೇಶವೇ ತಲೆತಗ್ಗಿಸುವಂತೆ ಮಾಡಿದೆ. ಮಲ ಹೊರುವ ಪದ್ಧತಿ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು.

12. ದಲಿತರು, ಮಹಿಳೆಯರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆದಿರುವ ದೌರ್ಜನ್ಯಗಳನ್ನು ಕೂಡಲೇ ನಿಲ್ಲಿಸಬೇಕು. ಹಾಗೂ ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ಕನ್ನಡ ನಾಡಿನ ಬಹುತ್ವವನ್ನು ಹಾಳುಗೆಡುವುತ್ತಿರುವ ಕೋಮುವಾದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

13. ಭಾರತವು ವೈವಿಧ್ಯಮಯವಾದ ಸೌಹಾರ್ಧಯುತ ಮತ್ತು ಬಹು ಸಂಸ್ಕೃತಿಯ ನೆಲೆವೀಡು. ಇಂತಹ ದೇಶದ ಮೇಲೆ ತಾರತಮ್ಯಭರಿತ ವೈದಿಕಶಾಹಿಯು ಏಕ ಸಂಸ್ಕೃತಿಯನ್ನು ಹೇರುತ್ತಾ ದಬ್ಬಾಳಿಕೆ ನೀತಿಯನ್ನು ಅನುಸರಿಸುತ್ತಿದೆ. ಇಂತಹ ದೇಶದ್ರೋಹಿ ಬೆಳವಣಿಗೆಯನ್ನು ದಲಿತ ಸಂಘರ್ಷ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ವೈವಿಧ್ಯಮಯ, ಸೌಹಾರ್ದಯುತ, ಸಾಮರಸ್ಯ ಮತ್ತು ಬಹುತ್ವದ ಸಾಂಸ್ಕೃತಿಕ ಅಸ್ಮಿತೆಯ ಬದುಕನ್ನು ಉಳಿಸಿಕೊಳ್ಳುವ ಸಲುವಾಗಿ ಭಾರತದ ಸಂವಿಧಾನ ಎತ್ತಿಹಿಡಿದಿರುವ ಮೂಲಭೂತ ಹಕ್ಕುಗಳನ್ನು ಸಮಸ್ತ ಭಾರತೀಯರೂ ಅನುಭವಿಸುವಂತಹ ವಾತಾವರಣವನ್ನು ನಿರ್ಮಾಣ ಮಾಡಬೇಕು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆಯೂ ಯೋಚಿಸಬಹುದು: ಸುಪ್ರೀಂ ಕೋರ್ಟ್‌

0
ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆ ಕೂಡ ನಾವು ಯೋಚಿಸಬಹುದು ಎಂದು ಸುಪ್ರೀಂ ಕೋರ್ಟ್ ನಿನ್ನೆ ಹೇಳಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನ್ನ...