ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಬಡ ಕಾರ್ಮಿಕರನ್ನು ರಾಜ್ಯ ಸರ್ಕಾರ ಕಡೆಗಣಿಸಿದೆ ಎಂಬ ಆರೋಪ ಕೇಳಿಬಂದಿದೆ ಬೀದಿಬದಿ ವ್ಯಾಪಾರಿಗಳು, ಹಮಾಲಿ ಕಾರ್ಮಿಕರು, ಬೀಡಿಕಾರ್ಮಿಕರು, ಟೈಲರ್‌ಗಳು ಮತ್ತು ಮನೆಗೆಲಸಗಾರರಿಗೆ ಯಾವುದೇ ಪರಿಹಾರದ ಕ್ರಮಗಳನ್ನು ಕೈಗೊಳ್ಳದಿರುವುದು ಈ ವರ್ಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ವರ್ಗವನ್ನೂ ಪರಿಹಾರ ಕ್ರಮಗಳಡಿ ತರಬೇಕಿತ್ತು ಎಂಬ ಒತ್ತಾಯ ವ್ಯಕ್ತವಾಗಿದೆ.
ಕೋವಿಡ್-19 ಲಾಕ್‌ಡೌನ್‌ನಿಂದ ಅಸಂಘಟಿತ ವಲಯದ ಕಾರ್ಮಿಕ ವರ್ಗ ಜರ್ಝರಿತವಾಗಿತ್ತು. ದಿನದ ದುಡಿಮೆಯೇ ಅವರ ಜೀವನಾಧಾರವಾಗಿತ್ತು. ಅಂಥವರ ಬದುಕು ಸಂಕಷ್ಟಕ್ಕೆ ಸಿಲುಕೊಂಡಿದ್ದು ಅವರ ನೆರವಿಗೂ ಸರ್ಕಾರ ಮುಂದಾಗಬೇಕು. ಕೇವಲ ಆಹಾರ ಕಿಟ್ ಗಳನ್ನು ನೀಡಿದರೆ ಸಾಲದು ದಿನನಿತ್ಯದ ಖರ್ಚುವೆಚ್ಚಕ್ಕೆ ಬೇಕಾದ ಕ್ರಮಗಳನ್ನು ಸರ್ಕಾರದಿಂದ ನೀರಿಕ್ಷಿಸಿದ್ದರು. ಹಲವು ಮನವಿಗಳನ್ನು ನೀಡಿದ್ದರು. ಆದರೂ ಸರ್ಕಾರ ಪರಿಹಾರದ ನಿರೀಕ್ಷೆ ಹುಸಿಯಾಗಿದೆ.
ರಾಜ್ಯದಲ್ಲಿ ಬೀದಿಬದಿ ವ್ಯಾಪಾರಿಗಳ ಸಂಖ್ಯೆ 20 ಲಕ್ಷ ಇದೆ. ಹಮಾಲಿ ಕಾರ್ಮಿಕರು ಮತ್ತು ಮನೆಗೆಲಸಗಾರರು ತಲಾ 5ಲಕ್ಷ ಇದ್ದಾರೆ. ಟೈಲರ್ ಗಳ ಸಂಖ್ಯೆ 4 ಲಕ್ಷ ಮಂದಿ ಇದ್ದು ಬೀಡಿ ಕಾರ್ಮಿಕರು, ಕೃಷಿಕೂಲಿಕಾರರು ಹೀಗೆ ರಾಜ್ಯದಲ್ಲಿ 2.5 ಕೋಟಿ ಅಸಂಘಟಿತ ಕಾರ್ಮಿಕರಿದ್ದರೂ ಅವರ ಅಂಕಿಸಂಖ್ಯೆ ಸರ್ಕಾರದ ಬಳಿ ಇಲ್ಲ. ಇಂಥ
ಸಂಧರ್ಭದಲ್ಲಿ ಸರ್ಕಾರ ಇವರನ್ನು ನಿರ್ಲಕ್ಷಿಸಿರುವುದು ಸರಿಯಾದ ಕ್ರಮವಲ್ಲ ಎಂದು ಕಾರ್ಮಿಕರ ಮುಖಂಡ ಮಹಾಂತೇಶ್ ಹೇಳುತ್ತಾರೆ.
ಕೊರೊನಾ ಸಂಕಟ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅಸಂಘಟಿತ ಕಾರ್ಮಿಕರಿಗೆ ಪರಿಹಾರ ಕೊಡಿಸುವ ಕುರಿತು ಸಭೆಗಳು ಬೆಂಗಳೂರಿನಲ್ಲಿ ನಡೆದಿದೆ. ನಾಳೆ (ಮೇ07) ಸಿಎಂ ಯಡಿಯೂರಪ್ಪ ಅವರನ್ನು ಸಿದ್ದರಾಮಯ್ಯ ಭೇಟಿ ಮಾಡಿ ಪರಿಹಾರ ನೀಡುವ ಬಗ್ಗೆ ಗಮನ ಸೆಳೆಯಲಿದ್ದರು. ಸಿದ್ದರಾಮಯ್ಯ ಭೇಟಿಯಾಗುವ ಮುನ್ನಾದಿನವೇ ಟ್ಯಾಕ್ಸಿ, ನೇಕಾರರು, ಆಟೋ, ಕಟ್ಟಡ, ಮಡಿವಾಳ ಮತ್ತು ಕ್ಷೌರಿಕರಿಗೆ ಪರಿಹಾರವನ್ನು ಘೋಷಣೆ ಮಾಡಿದ್ದಾರೆ.
ಸಿದ್ದರಾಮಯ್ಯ ಅವರಿಗೆ ರಾಜಕೀಯ ಲಾಭ ಧಕ್ಕದಿರಲಿ ಎಂಬ ಉದ್ದೇಶ ಇದರಲ್ಲಿ ಅಡಗಿದೆ.
ವಲಸೆ ಕಾರ್ಮಿಕರನ್ನು ಅವರ ಊರಿಗೆ ತಲುಪಿಸುವ ವಿಚಾರದಲ್ಲೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಂದು ಕೋಟಿ ಘೋಷಿಸದಿದ್ದರೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡುತ್ತಿರಲಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.
ಕಾರ್ಮಿಕ ಮುಖಂಡರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದಾಗ ಮೊದಲು ಆಟೋ ಚಾಲಕರು, ಟ್ಯಾಕ್ಸಿ ಚಾಲಕರು ಸ್ವಉದ್ಯೋಗ ಮಾಡುತ್ತಿದ್ದಾರೆ, ಅವರಿಗೆ ಪರಿಹಾರ ನೀಡಲು ಆಗುವುದಿಲ್ಲವೆಂದು ಯಡಿಯೂರಪ್ಪ ಹೇಳಿದ್ದರು ಎನ್ನಲಾಗಿದೆ. ನಂತರ ಓಲಾ ಮತ್ತು ಊಬರ್ ಮಾಲಿಕರ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಟ್ಯಾಕ್ಸಿ ಚಾಲಕರಿಗೂ ಕೋವಿಡ್ ಸಂಕಷ್ಟದ ಪರಿಹಾರ ಘೋಷಣೆ ಮಾಡಿದೆ.
ಹೂವಿನ ಬೆಳೆಗಾರರು, ಆಟೋ, ಕ್ಷೌರಿಕರು, ಮಡಿವಾಳರಿಗೆ ಸಣ್ಣ ಪ್ರಮಾಣದ ಪರಿಹಾರ ನೀಡುತ್ತಿರುವುದು ಶ್ಲಾಘನೀಯ. ಇವರಂತೆಯೇ ಕಷ್ಟದ ಜೀವನ ನಡೆಸುತ್ತಿರುವ ಬೀಡಿ, ಟೈಲರ್, ಬೀದಿಬದಿ ವ್ಯಾಪಾರಿಗಳು, ಮನೆಗೆಲಸಗಾರರು, ಹಮಾಲಿ ಕಾರ್ಮಿಕರನ್ನು ಒಳಗೊಂಡಂತೆ ಪರಿಹಾರ ಘೋಷಣೆ ಮಾಡಿದ್ದರೆ ಒಳ್ಳೆಯದಿತ್ತು ಎಂದು ಕಾರ್ಮಿಕ ಮುಖಂಡರ ಆಗ್ರಹ.
ಈ ವರ್ಗದಲ್ಲಿ ಒಂಟಿ ಮಹಿಳೆಯರು, ವಿಧವೆಯರು, ಸಂಸಾರದ ನೊಗ ಹೊತ್ತವರು ಹೆಚ್ಚಾಗಿದ್ದು ಸರ್ಕಾರ ಇವರ ನೆರವಿಗೂ ಬರಬೇಕಾಗಿದೆ.
ಇದನ್ನೂ ಓದಿ: 900 ಕಾರ್ಮಿಕರನ್ನು ಒಂದೇ ಗೋಡೌನ್‌ನಲ್ಲಿಟ್ಟು ನೋಂದಣಿ: ತುಮಕೂರಿನಲ್ಲಿ ಅಘಾತಕಾರಿ ಘಟನೆ
ನಮ್ಮ ಯೂಟ್ಯೂಬ್ ಚಾನೆಲ್ Subscribe ಮಾಡಿ


