Homeಕರ್ನಾಟಕಮಣಿವಣ್ಣನ್ ಔಟ್, ಎಂ.ಎಂ.ರಾವ್ ಇನ್ : ಕೊರೊನ ಕಾಲದಲ್ಲಿ ಮುಸುಕಿನ ರಾಜಕೀಯ

ಮಣಿವಣ್ಣನ್ ಔಟ್, ಎಂ.ಎಂ.ರಾವ್ ಇನ್ : ಕೊರೊನ ಕಾಲದಲ್ಲಿ ಮುಸುಕಿನ ರಾಜಕೀಯ

- Advertisement -
- Advertisement -

ನಯೋಮಿ ಕ್ಲೈನ್ ಎಂಬ ಅಮೇರಿಕನ್ ಸಾಮಾಜಿಕ ಹೋರಾಟಗಾರ್ತಿ ತಮ್ಮ ‘ದ ಶಾಕ್ ಡಾಕ್ಟ್ರೈನ್’ ಎಂಬ ಪುಸ್ತಕದಲ್ಲಿ ರಾಷ್ಟ್ರೀಯ ವಿಪತ್ತುಗಳನ್ನು ಅಧಿಕಾರ ಕೇಂದ್ರಗಳು ಮತ್ತು ಸರ್ಕಾರಗಳು ಹೇಗೆ ದುರುಪಯೋಗಪಡಿಸಿಕೊಳ್ಳುತ್ತವೆ ಎಂಬುದನ್ನು ವಿವರವಾಗಿ ಚರ್ಚಿಸಿದ್ದಾರೆ. ಇಡೀ ದೇಶ ಯಾವುದಾದರೂ ವಿಪತ್ತನ್ನು ಎದುರಿಸುತ್ತಿರುವಾಗ, ಸರ್ಕಾರಗಳು ಅಂತಹ ದುಃಸ್ಥಿತಿಯನ್ನು ತಮ್ಮ ಪ್ರಯೋಜನಕ್ಕೆ ಬಳಸಿಕೊಂಡು ಪರಿಚಯಿಸುವ ವಿವಾದಾತ್ಮಕ ಅಥವ ಪ್ರಶ್ನಾರ್ಹ ನೀತಿಗಳು ಆಗಲೇ ಆಘಾತದಲ್ಲಿ ಇರುವ ಜನರಿಂದ ಯಾವುದೇ ವಿರೋಧ ಇಲ್ಲದೆ ಜಾರಿಯಾಗಿ ಹೋಗುತ್ತವೆ. ನೈಸರ್ಗಿಕ ವಿಪತ್ತುಗಳು ಅಥವಾ ಸಾಂಕ್ರಾಮಿಕಗಳಿಂದ ಮೊದಲೇ ಭಯಭೀತರಾಗಿರುವ ಜನ ಇಂತಹ ನೀತಿಗಳನ್ನು ವಿರೋಧಿಸಲು ಚಿಂತೆ ಮಾಡುವಷ್ಟು ಅಥವಾ ಒಗ್ಗೂಡುವಷ್ಟು ಶಕ್ತರಾಗಿರುವುದಿಲ್ಲ. ತುರ್ತು ಸಮಯದ ಕಾಯ್ದೆಗಳು ಕೂಡ ಅಂತಹುದನ್ನು ತಡೆಯುತ್ತಿರುತ್ತವೆ. ಇಂತಹ ಸಮಯವನ್ನು ದುರುಪಯೋಗಪಡಿಸಿಕೊಳ್ಳುವ ಸರ್ಕಾರಗಳು ತಾವು ಜಾರಿ ಮಾಡುವ ಕಾನೂನು-ನೀತಿ-ನಿಯಮಗಳಿಗೆ ಒಪ್ಪಿಗೆಯನ್ನು ಕೂಡ ಉತ್ಪಾದಿಸಿ ಪಡೆದುಬಿಡುತ್ತವೆ.

ಕೊರೊನ ವೈರಾಣು ಪರೋಕ್ಷವಾಗಿಯಾದರೂ ಬಹುತೇಕ ಎಲ್ಲರನ್ನೂ ಒಂದಲ್ಲಾ ಒಂದು ರೀತಿ ಕಾಡಿದೆ. ಕೆಲವರಿಗೆ ನೇರವಾಗಿ ದಾಳಿ ಮಾಡಿದ್ದರೆ ಮತ್ತೆ ಹಲವರ ಅನ್ನ ನೀರು ಕಸಿದಿದೆ. ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಕಡು ಬಡ ಮತ್ತು ಬಡ ಮಧ್ಯಮ ವರ್ಗದ ಜನತೆಯನ್ನು ಆತಂಕಕ್ಕೆ ಎಡೆ ಮಾಡಿದೆ. ಇಂತಹ ಸಮಯದಲ್ಲಿ ಸರಕಾರಗಳು ಎಚ್ಚರಿಕೆಯಿಂದ ನಡೆದುಕೊಂಡು, ಜನರಿಗೆ ಭರವಸೆ ಮೂಡಿಸುವ, ಅವರ ಸ್ಥಿತಿಯನ್ನು ಉತ್ತಮಗೊಳಿಸುವ ನೀತಿಗಳನ್ನು ಆರ್ಥಿಕ ಸುಧಾರಣೆಗಳನ್ನು ಮುಂದುಮಾಡಬೇಕು. ಆದರೆ ಅದಕ್ಕೆ ತದ್ವಿರುದ್ಧವಾಗಿ ಜನರನ್ನು ಇನ್ನೂ ಚಿಂತೆಗೀಡುಮಾಡುವ, ಆರ್ಥಿಕ ಪರಿಸ್ಥಿತಿಯನ್ನು ಇನ್ನೂ ಬಿಗಡಾಯಿಸುವ ಡ್ರಕೋನಿಯನ್ ಕ್ರಮಗಳು ಮತ್ತು ಬದಲಾವಣೆಗಳಿಗೆ ನಿಂತಿರುವುದು ಶೋಚನೀಯ ಸಂಗತಿ.

ಕಾರ್ಮಿಕ ಇಲಾಖೆಯ ನಿರ್ದೇಶಕರಾಗಿದ್ದ ಮಣಿವಣ್ಣನ್ ಅವರ ವರ್ಗಾವಣೆಯನ್ನು ನಾವು ಇದೇ ದೃಷ್ಟಿಯಿಂದ ನೋಡಬೇಕಾಗಿದೆ. ಕೆಲವೇ ಕೆಲವು ದಿನಗಳ ಹಿಂದಕ್ಕೆ ರಿವೈಂಡ್ ಮಾಡಿ ನೋಡೋಣ. ಸುಮಾರು ಎರಡು ತಿಂಗಳ ಲಾಕ್‍ಡೌನ್‍ನಿಂದ ಎಲ್ಲ ವಲಯದ ಜನ, ಉದ್ದಿಮೆಗಳು, ಉದ್ಯಮಿಗಳು, ನೌಕರರು ಚಿಂತೆಗೀಡಾಗಿದ್ದರು. ಇಂತಹ ಸಮಯದಲ್ಲೂ ಯಾವುದೇ ಖಾಸಗಿ ಸಂಸ್ಥೆಯಾಗಲೀ, ಸಾರ್ವಜನಿಕ ಸಂಸ್ಥೆಯಾಗಲೀ ಎಲ್ಲ ನೌಕರರಿಗೂ ವೇತನ ನೀಡಬೇಕು ಮತ್ತು ಯಾರನ್ನೂ ಕೆಲಸದಿಂದ ವಜಾಗೊಳಿಸಬಾರದು ಎಂದು ಕೇಂದ್ರ ಸರ್ಕಾರದ ಕಾರ್ಮಿಕ ಸಚಿವಾಲಯ ನಿರ್ದೇಶನ ನೀಡಿತ್ತು. ರಾಜ್ಯ ಸರ್ಕಾರ ಕೂಡ ಇದನ್ನು ಅನುಸರಿಸಿತ್ತು. ಇದು ಕೇವಲ ಮಾತಿನ ಶೂರತ್ವ ಆಗಬಾರದಿತ್ತು.

ಇದರಿಂದ ಉತ್ತೇಜನಗೊಂಡಿದ್ದ ರಾಜ್ಯ ಕಾರ್ಮಿಕ ಇಲಾಖೆಯ ಪ್ರಧಾನ ನಿರ್ದೇಶಕ ಮಣಿವಣ್ಣನ್ ಅವರು ಕಾರ್ಮಿಕ ವರ್ಗದ ದೂರು ಪಡೆಯಲು ವೆಬ್ ಪೋರ್ಟಲ್ ಮತ್ತು ಸಹಾಯವಾಣಿಯನ್ನು ಮೇ ಮೊದಲ ವಾರದಲ್ಲಿ ಪ್ರಾರಂಭಿಸಿದ್ದರು. ಒಂದೇ ದಿನಕ್ಕೆ ಕೆಲಸದಿಂದ ವಜಾ ಆದ, ವೇತನ ಸಿಕ್ಕದ, ವೇತನದಲ್ಲಿ ಕಡಿತವಾಗಿದ್ದ ಸುಮಾರು 700 ದೂರುಗಳು ದಾಖಲಾದ ಬೆನ್ನಲ್ಲೇ ರಣಹದ್ದುಗಳು ಎಚ್ಚರಗೊಂಡವು. ಈ ದೂರುಗಳ ಹಿನ್ನಲೆಯಲ್ಲಿ ನೋಟಿಸ್ ಕೊಡುವುದಕ್ಕೆ ತಯಾರಿ ನಡೆಸುವ ಮೊದಲೇ ಸಹಾಯವಾಣಿ ಮತ್ತು ವೆಬ್ ಪೋರ್ಟಲ್‍ಗಳು ಸ್ಥಗಿತಗೊಂಡಿತ್ತು.

ನೋಟಿಸ್ ಪಡೆದಾಕ್ಷಣವೇ ಯಾವ ಉದ್ದಿಮೆಗೂ ಯಾವ ಉದ್ದಿಮೆದಾರನಿಗೂ ಶಿಕ್ಷೆಯಾಗುವುದಿಲ್ಲ. ಉತ್ತರಿಸಲು ಸಮಯ ಇರುತ್ತದೆ. ಇದನ್ನೇ ನೆಪವಾಗಿಟ್ಟುಕೊಂಡು ಸರ್ಕಾರದ ಜೊತೆಗೆ ಮಾತುಕತೆ ನಡೆಸಿ ಉದ್ದಿಮೆಗಳಿಗೆ ಆಗಿರುವ ನಷ್ಟವನ್ನು ಸರ್ಕಾರಕ್ಕೆ ತಿಳಿಸಿ ತಮ್ಮ ಬೇಡಿಕೆಗಳನ್ನು ಸಂಬಂಧಿಸಿದ ಇಲಾಖೆಗೆ ಕಳುಹಿಸಬಹುದಿತ್ತು. ಸರ್ಕಾರದಿಂದ ಉತ್ತೇಜನದ ಮತ್ತು ಪರಿಹಾರದ ಭರವಸೆ ಪಡೆದು ಕಾರ್ಮಿಕರಿಗೆ ಆಗಿರುವ ಸಮಸ್ಯೆಗಳನ್ನು ಪರಿಹರಿಸುವ ಕೆಲಸಕ್ಕೆ ಪರಸ್ಪರ ಕೈಜೋಡಿಸುವ ಅವಕಾಶ ಇತ್ತು. ಆದರೆ ಏಕಾಏಕಿ ದೂರುಗಳನ್ನು ತೆಗೆದುಕೊಂಡ ಅಧಿಕಾರಿಯ ಮೇಲೆ ಏರಿ ಬಿದ್ದ ಈ ಕರ್ನಾಟಕ ಉದ್ದಿಮೆದಾರರ ಸಂಘ ಮತ್ತು ಸಮಾನಮನಸ್ಕರ ರಾಜಕಾರಣಿಗಳು, ಸಮಸ್ಯೆ ಬಗೆಹರಿಸಿಕೊಳ್ಳಲು ಇದ್ದ ಸಣ್ಣ ಕಿಂಡಿಯನ್ನು ಮುಚ್ಚಿಸಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಮಹೇಶ್ವರ್ ರಾವ್ ಅವರನ್ನು ಕಾರ್ಮಿಕ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯಾಗಿ ನೇಮಕ ಮಾಡಿಸಲು ಕಾರಣಕರ್ತರಾಗಿದ್ದಾರೆ. ಕೈಗಾರಿಕೆ ಮತ್ತು ಉದ್ದಿಮೆಗಳ ಹಿತ ಕಾಯಲು ಇರುವ ಇಲಾಖೆಯ ಅಧಿಕಾರಿಗೆ ಕಾರ್ಮಿಕರ ಹಿತ ಕಾಯುವ ಕೆಲಸವನ್ನು ನೀಡಿರುವ ವಿಪರ್ಯಾಸ ಕುರಿಗಳನ್ನು ಕಾಯುವುದಕ್ಕೆ ತೋಳವನ್ನು ಕೇಳಿಕೊಂಡಂತೆ ಆಗುವುದಿಲ್ಲವೇ?

ಈ ಬೆಳವಣಿಗೆ ಕುರಿತು ಸತೀಶ್ ಆಚಾರ್ಯ ಅವರು ಬರೆದ ವ್ಯಂಗ್ಯಚಿತ್ರ

ಈ ವಿದ್ಯಮಾನಕ್ಕೂ ಕೆಲವೇ ದಿನಗಳ ಹಿಂದೆ ಕೈಗಾರಿಕೆ ಇಲಾಖೆ, ಕಾರ್ಮಿಕ ಕಾನೂನುಗಳನ್ನು ಬದಲಾಯಿಸಲು ಮತ್ತು ಸಡಿಲಗೊಳಿಸಲು ಒತ್ತಡ ಹಾಕಿತ್ತು. ಇದನ್ನು ಕಾರ್ಮಿಕ ಇಲಾಖೆ ವಿರೋಧಿಸಿದ್ದು ಕೂಡ ವರದಿಯಾಗಿತ್ತು. ಗುಜರಾತಿನಲ್ಲಿ ಆಗಲೇ ನಿರ್ಣಯ ತೆಗೆದುಕೊಂಡಿರುವಂತೆ ಕಾರ್ಮಿಕರ ಕೆಲಸದ ಅವಧಿಯನ್ನು 8 ಘಂಟೆಗಳಿಂದ 12 ಘಂಟೆಗಳವರೆಗೆ ಹೆಚ್ಚಿಸುವುದಕ್ಕೆ ಮಹೇಶ್ವರ್‍ರಾವ್ ಅವರು ಸಲಹೆ ನೀಡಿದ್ದರು. ಎಪ್ರಿಲ್ 2020ಕ್ಕೆ ಜಾರಿಯಾಗಬೇಕಿದ್ದ ಪರಿಷ್ಕøತ ಕೂಲಿಯ ನಿರ್ದೇಶನವನ್ನು ಒಂದು ವರ್ಷದವರೆಗೆ ಮುಂದೂಡುವಂತೆ, ವೇತನದ ಭಾಗವಾದ ಡಿಎ ರದ್ದು ಮಾಡುವಂತೆ, ಹಾಗೆಯೇ ಪಿಎಫ್ ಮತ್ತು ಇಎಸ್‍ಐ ಕೊಡುಗೆಯನ್ನು ಕೈಬಿಡುವ ಸಲಹೆ ನೀಡಿದ್ದರು. ಇವೆಲ್ಲವೂ ಕಾರ್ಮಿಕ ವಿರೋಧಿ ನಡೆಗಳಾಗಿದ್ದು ಹಲವು ಕಾರ್ಮಿಕ ಸಂಘಟನೆಗಳು ಮೊದಲಿಂದಲೂ ವಿರೋಧಿಸುತ್ತಲೇ ಇವೆ. ಇಂತದ್ದಕ್ಕೆ ಸೊಪ್ಪು ಹಾಕದ ಮಣಿವಣ್ಣನ್ ಅವರು ಹಲವರ ಕೆಂಗಣ್ಣಿಗೆ ಗುರಿಯಾಗಿದ್ದರು.

ಈಗ ಮಹೇಶ್ವರ್‍ರಾವ್ ಅವರು ಕಾರ್ಮಿಕ ಇಲಾಖೆಗೆ ನೀಡಿದ್ದ ಸಲಹೆಗಳನ್ನು ತಾವೇ ಅನುಮೋದಿಸಲು ಬಂದಿದ್ದಾರೆ. ಅದಕ್ಕಿಂತಲೂ ಭೀಕರ ಬದಲಾವಣೆಗಳು ಕಾಣಿಸಿಕೊಳ್ಳಬಹುದು. ಯೋಗಿಯವರ ಉತ್ತರಪ್ರದೇಶದಲ್ಲಿ ಕಾರ್ಮಿಕ ಕಾನೂನುಗಳನ್ನು ಮೂರು ವರ್ಷ ಗಾಳಿಗೆ ತೂರುವಂತೆ ಆಗಲೇ ಆದೇಶವಾಗಿದೆ. ಉತ್ತರ ಪ್ರದೇಶ ಮಾದರಿಯನ್ನು ಕೂಡ ಕರ್ನಾಟಕ ಅಧ್ಯಯನ ಮಾಡುತ್ತಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಆಡಳಿತದ ರಾಜಸ್ಥಾನ ರಾಜ್ಯ ಕೂಡ ಇದಕ್ಕೆ ಹಿಂದೆ ಬಿದ್ದಿಲ್ಲ. ರಣ ಹದ್ದುಗಳ ಕೇಕೆಗೆ ಕಾರ್ಮಿಕ ಕಾನೂನುಗಳ ದುರುಪಯೋಗ ಆಗದಂತೆ ಇನ್ನು ಕರ್ನಾಟಕದಲ್ಲಿ ಎಚ್ಚರಿಕೆ ವಹಿಸುವವರು ಯಾರು?

ಇದು ಆರ್ಥಿಕ ಸುಧಾರಣೆಗೆ ಮಾರಕ!

ಕೊರೊನ ಸಾಂಕ್ರಾಮಿಕ ಪಿಡುಗು ಹಿಂದೆಂದೂ ಕಾಣದ ಆರ್ಥಿಕ ಹಿಂಜರಿತವನ್ನು ಜಾಗತಿಕವಾಗಿ ತಂದೊಡ್ಡಿದೆ. ಉತ್ಪಾದನೆ ಸ್ಥಗಿತ ಮತ್ತು ಕೊಳ್ಳುವ ಸಾಮಥ್ರ್ಯ ಏಕಕಾಲಕ್ಕೆ ಕುಸಿದಿರುವುದರಿಂದ ಉಂಟಾಗಿರುವ ಈ ಆರ್ಥಿಕ ಹಿಂಜರಿತವನ್ನು ಜಾಗರೂಕತೆಯಿಂದ ನಿಭಾಯಿಸಬೇಕಿದೆ. ಒಂದು ಕಡೆ ಉತ್ಪಾದನೆಗೆ ಇಂಬು ನೀಡುತ್ತಲೇ, ಜನರ ಉದ್ಯೋಗ ಕಡಿತವಾಗದಂತೆ, ನಿರುದ್ಯೋಗ ಹೆಚ್ಚಾಗದಂತೆ, ಜನರ ಕೊಳ್ಳುವ ಸಾಮಥ್ರ್ಯ ಮರುಕಳಿಸುವಂತಹ ಕ್ರಮಗಳಿಗೆ ಸರ್ಕಾರಗಳು ಮುಂದಾಗಬೇಕು.

ಈಗ ಕಾರ್ಮಿಕರ ಕೆಲಸದ ಅವಧಿಯನ್ನು 8 ಘಂಟೆಗಳಿಂದ 12 ಘಂಟೆಗಳಿಗೆ ಹೆಚ್ಚಿಸುವ ಬೇಡಿಕೆಯನ್ನೇ ನೋಡೋಣ. ಈಗಾಗಲೇ ಉತ್ಪಾದನೆಯ ಬೇಡಿಕೆ ಕುಸಿದಿದೆ. ಈ ಸಮಯದಲ್ಲಿ ಮೂರು ಜನ ಮಾಡುತ್ತಿದ್ದ 24 ಘಂಟೆಗಳ ಕೆಲಸವನ್ನು ಇಬ್ಬರು ಮಾಡಬೇಕು ಎನ್ನುವ ತಿದ್ದುಪಡಿ ತಂದರೆ, ಒಬ್ಬರ ಕೆಲಸಕ್ಕೆ ಕುತ್ತು ಬಂತು. ನಿರುದ್ಯೋಗಕ್ಕೆ ಇದು ನೇರ ಕಾರಣವಾಗಲಿದೆ. ಅಥವಾ ಉಳಿದ ಕಾರ್ಮಿಕ ಕಾನೂನುಗಳನ್ನು ಸಡಿಲಗೊಳಿಸುವುದರಿಂದ ಒಂದು ಪಕ್ಷ ಉದ್ಯೋಗಗಳನ್ನು ಕಡಿತಗೊಳಿಸದೆ ಹೋದರೂ ಈಗ 8 ಘಂಟೆಯ ಅವಧಿಯ ದುಡಿಮೆಯ ಆದಾಯವನ್ನು 12 ಘಂಟೆಯು ಕೆಲಸಕ್ಕೆ ನೀಡುವಂತೆ ಆದರೆ, ಅದರ ಪರಿಣಾಮವಾಗಿ ಒಂದು ಘಂಟೆಯ ಆದಾಯ ಸುಮಾರು 30% ಕಡಿಮೆಯಾದಂತೆ. ಇದು ಕಾರ್ಮಿಕರ ಕೊಳ್ಳುವ ಶಕ್ತಿಯನ್ನು ಕುಗ್ಗಿಸುತ್ತದೆ. ಇದು ಕುಸಿಯುತ್ತಿರುವ ಆರ್ಥಿಕತೆಗೆ ಇನ್ನಷ್ಟು ಪುಷ್ಟಿ ನೀಡುತ್ತದೆ.

ಆದುದರಿಂದ ಉದ್ದಿಮೆಗಳಿಗೆ ಮತ್ತು ಉದ್ಯಮಿಗಳಿಗೆ ತಮ್ಮ ಲಾಭವನ್ನಷ್ಟೇ ಲೆಕ್ಕಾಚಾರ ಮಾಡುವ ಸಮಯ ಇದಲ್ಲ. ಇದು ಇಡೀ ದೇಶದ ಆರ್ಥಿಕತೆಯ ಪ್ರಶ್ನೆಯಾಗಿದೆ. ಉದ್ದಿಮೆಗಳನ್ನು ನಡೆಸಲು ಇರುವ ಸಮಸ್ಯೆಗಳನ್ನು ಸರ್ಕಾರದ ಜೊತೆಗೆ ನೇರವಾಗಿ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಕಾರ್ಮಿಕರ ಹಕ್ಕುಗಳನ್ನು ಅವರ ದುಡಿಮೆಯನ್ನು ಕಿತ್ತುತಿನ್ನುವುದರಿಂದ ಈ ಸಮಸ್ಯೆ ಬಗೆಹರಿಯುವುದಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕು. ಅಂತಹ ಕ್ರಮಕ್ಕೆ ಯಾವ ಸಮಯದಲ್ಲಿಯೂ ಮುಂದಾಗಬಾರದು. ಇದನ್ನು ಬರೆಯುವ ಹೊತ್ತಿಗೆ ಸುಮಾರು 20 ಲಕ್ಷ ಕೋಟಿ ರೂ ಪರಿಹಾರ ಪ್ಯಾಕೇಜ್‍ಅನ್ನು ಪ್ರಧಾನಮಂತ್ರಿಗಳು ಘೋಷಿಸಿದ್ದಾರೆ. ವಿವರಗಳು ಲಭ್ಯವಾಗಬೇಕಿವೆ. ಉದ್ದಿಮೆಗಳಿಗೆ ತೆರಿಗೆ ವಿನಾಯಿತಿ ರೂಪದಲ್ಲಿಯೋ, ಸಾಲಗಳ ಮರುಪಾತಿಯಲ್ಲಿ ಬಡ್ಡಿ ವಿನಾಯಿತಿಯ ದೃಷ್ಟಿಯಿಂದಲೋ ಹಲವು ಪರಿಹಾರಗಳು ದೊರಕಬಲ್ಲವು. ಇಂತಹುವುಗಳನ್ನು ಆರ್ಥಿಕ ಚೇತರಿಕೆಗೆ ಬಳಸಿಕೊಂಡು ಅಗತ್ಯ ಬಿದ್ದರೆ ಸರ್ಕಾರಗಳಿಗೆ ಇನ್ನಷ್ಟು ಬೇಡಿಕೆಯನ್ನು ಇಟ್ಟು, ಕಾರ್ಮಿಕರ ಕೈಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಉದ್ದಿಮೆಗಳು ಮುಂದುವರೆಯಬೇಕು.

ಕರ್ನಾಟಕ ಉದ್ದಿಮೆದಾರರ ಸಂಘದ ಅಧ್ಯಕ್ಷ ಬಿ.ಸಿ.ಪ್ರಭಾಕರ್ ಅವರ “ಧರ್ಮ ಯುದ್ಧ”!

ಕೊರೊನ ಬಡಕಾರ್ಮಿಕರಿಗೆ ಸೃಷ್ಟಿ ಮಾಡಿರುವ ಸಮಸ್ಯೆಗೆ ಭಾರತದ ಮಧ್ಯಮ ವರ್ಗ ಮತ್ತು ಸಿರಿವಂತ ವರ್ಗದ ಉಪೇಕ್ಷೆಯ ಧೋರಣೆಗೆ ಕರ್ನಾಟಕ ಉದ್ದಿಮೆದಾರರ ಸಂಘದ ಅಧ್ಯಕ್ಷ ಬಿ.ಸಿ.ಪ್ರಭಾಕರ್ ಅವರು ಮಣಿವಣ್ಣನ್ ಅವರ ಕ್ರಮಗಳನ್ನು ಖಂಡಿಸಿ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಬರೆದ ಪತ್ರ ಕನ್ನಡಿಯಂತಿದೆ. ಉದ್ದಿಮೆದಾರರನ್ನು “ಉದ್ಯೋಗದಾತ” ಮತ್ತು “ಅನ್ನದಾತ” ಎಂಬ ಹುಸಿ ವಿಶೇಷಣಗಳಿಂದ ಹೊಗಳಿಕೊಂಡಿರುವ ಪತ್ರ, ಲಾಭಕೋರ ನವ ಉದಾರೀಕರಣವನ್ನು “ಧರ್ಮ” ಎಂಬಂತೆ ಬಿಂಬಿಸುತ್ತಾ, ಕಾರ್ಮಿಕರನ್ನು ತಮ್ಮ ಉದ್ದಿಮೆಯ ಪಾಲುದಾರರು ಎಂಬಂತೆ ಕಾಣದೆ ಅಪರಾಧಿಗಳು ಎಂಬ ರೀತಿಯಲ್ಲಿ ವರ್ಣಿಸಿ ಪತ್ರ ಬರೆದಿದ್ದಾರೆ. ತಾವು ಬರೆದಿರುವ ಒಂಭತ್ತನೆಯ ಅಂಶದಲ್ಲಂತೂ ಒಂದು ಹೆಜ್ಜೆ ಮುಂದೆ ಹೋಗಿ ಕಾರ್ಮಿಕ ಇಲಾಖೆ ಕಾರ್ಮಿಕ ಇಲಾಖೆ “ಅನ್ನದಾತರ” ವಿರುದ್ಧ ಕಾರ್ಮಿಕರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದೆ ಎಂಬ ಆರೋಪವನ್ನು ಮಾಡಿದ್ದಾರೆ.

ಕಾರ್ಮಿಕರ ಸಮಸ್ಯೆಯನ್ನು ಆಲಿಸುವುದಕ್ಕೆ ವೆಬ್ ಪೋರ್ಟಲ್ ಮತ್ತು ಸಹಾಯವಾಣಿ ಪ್ರಾರಂಭ ಮಾಡಿದ್ದರ ವಿರುದ್ಧ ದೂಷಣೆ ಮಾಡಿರುವುದನ್ನು ರಾಜ್ಯ ಸರ್ಕಾರ ಯಾವ ರೀತಿಯಲ್ಲಿಯೂ ಪುರಸ್ಕರಿಸಬಾರದಿತ್ತು. ಈ ಪತ್ರದಲ್ಲಿ ಬಳಸಿರುವ ಭಾಷೆಯನ್ನೂ ಖಂಡಿಸಿ ಕಾರ್ಮಿಕರ ಬೆಂಬಲಕ್ಕೆ ಸರ್ಕಾರ ನಿಲ್ಲಬೇಕಿತ್ತು. ಕಾರ್ಮಿಕರು ಕೆಲಸ ಮಾಡುತ್ತಿರುವುದರಿಂದಲೇ ಉದ್ದಿಮೆದಾರರಿಗೆ ಸಂಪತ್ತು ಸೃಷ್ಟಿಯಾಗುತ್ತಿರುವುದು ಎಂಬ ಮೂಲಭೂತ ತತ್ವವನ್ನು ತಿಳಿಸಿ, ಮನಗಾಣಿಸಿ ಈ ಸಮಯದಲ್ಲಿ ಆಗುತ್ತಿರುವ ತೊಂದರೆಗೆ ಸ್ಪಂದಿಸುವುದಾಗಿ ಸರ್ಕಾರ ಜನಪರವಾದ ಆಶಯ ತಳೆಯಬೇಕಿತ್ತು.

ಇಡೀ ದೇಶ ಸಮಸ್ಯೆಯಲ್ಲಿ ಮುಳುಗಿರುವಾಗ ಯಾವುದೇ ಚರ್ಚೆಯಾಗದೆ ಸರ್ಕಾರ ತಂದಿರುವ ಕರ್ನಾಟಕ ಭೂಸುಧಾರಣೆಗಳ (ತಿದ್ದುಪಡಿ) ವಿಧೇಯಕ, ಎಪಿಎಂಸಿ ಕಾಯ್ದೆಗೆ ತರಬೇಕೆಂದುಕೊಂಡಿರುವ ದಮನಕಾರಿ ತಿದ್ದುಪಡಿ, ಈಗ ಕಾರ್ಮಿಕ ಕಾಯ್ದೆಗೆ ತಿಲಾಂಜಲಿ ಇಡಲು ನಡೆಸಿರುವ ಸಿದ್ಧತೆ ಎಲ್ಲವೂ ಮಾರಕವಾದವೇ. ಬೇರೆ ಸಮಯದಲ್ಲಿಯಾದರೆ ಇಂತಹ ತಿದ್ದುಪಡಿಗಳಿಗೆ ಜನಸಾಮಾನ್ಯರಿಂದ ತೀವ್ರ ವಿರೋಧಗಳು ವ್ಯಕ್ತವಾಗುತ್ತಿದ್ದವು. ಇಂತಹ ಸಮಯವನ್ನು ಜನಪರವಾದ ಯಾವ ಸರ್ಕಾರವೂ ದುರುಪಯೋಗಪಡಿಸಿಕೊಳ್ಳಬಾರದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕ; ಲೋಕಾಯುಕ್ತ ಪೊಲೀಸರಿಂದ ಚಂದ್ರು ಲಮಾಣಿ ಬಂಧನ

ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರು ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಗುತ್ತಿಗೆದಾರ ವಿಜಯ್ ಪೂಜಾರ್ ಅವರ ದೂರಿನ ಮೇರೆಗೆ ಗದಗ ಲೋಕಾಯುಕ್ತ ಪೊಲೀಸರು ನಡೆಸಿದ...

ಎಐ ಶೃಂಗಸಭೆಯಲ್ಲಿ ಪ್ರತಿಭಟನೆ : ನಾಲ್ವರು ಯುವ ಕಾಂಗ್ರೆಸ್‌ ಕಾರ್ಯಕರ್ತರು 5 ದಿನ ಪೊಲೀಸ್ ಕಸ್ಟಡಿಗೆ

ನವದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಿದ್ದ ಎಐ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದ ನಾಲ್ವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ದೆಹಲಿ ನ್ಯಾಯಾಲಯ ಶನಿವಾರ (ಫೆ.21) 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ದೆಹಲಿ ಪೊಲೀಸರು...

ಮೈಮೇಲೆ ದೇವರು ಬಂದಂತೆ ನಟಿಸಿ ದಲಿತ ನವದಂಪತಿ ದೇವಸ್ಥಾನ ಪ್ರವೇಶ ನಿರಾಕರಣೆ: ವ್ಯಕ್ತಿ ಬಂಧನ

ಮೈಮೇಲೆ ದೇವರು ಬಂದಂತೆ ನಾಟಕವಾಡಿದ ವ್ಯಕ್ತಿಯೊಬ್ಬ, ದೇವಸ್ಥಾನಕ್ಕೆ ಬಂದಿದ್ದ ದಲಿತ ನವದಂಪತಿಯನ್ನು ಹೊರಗೆ ಕಳುಹಿಸುವ ಮೂಲಕ ಅಸ್ಪೃಶ್ಯತೆ ಆಚರಣೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋಣಿ ತುಮಕೂರಿನಲ್ಲಿ (ಫೆ.20) ನಡೆದಿದೆ. ಗೃಹ...

ಜಾತಿವಾದಿ ಹೇಳಿಕೆ: ಜೆಎನ್‌ಯು ಉಪಕುಲಪತಿ ರಾಜೀನಾಮೆಗೆ ವಿದ್ಯಾರ್ಥಿ ಸಂಘ ಆಗ್ರಹ

ದೆಹಲಿಯ ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯದ (ಜೆಎನ್‌ಯು) ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು 'ದ ಸಂಡೇ ಗಾರ್ಡಿಯನ್' ಯೂಟ್ಯೂಬ್‌ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ 'ಜಾತಿ ಮತ್ತು ವಿಕ್ಟಿಮ್ ಕಾರ್ಡ್' ಕುರಿತು ನೀಡಿದ ಹೇಳಿಕೆ...

10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ : ದಂಪತಿಗೆ ಮರಣದಂಡನೆ

ಸುಮಾರು 10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದಂಪತಿಗೆ ಮರಣದಂಡನೆ ವಿಧಿಸಿ ಉತ್ತರ ಪ್ರದೇಶದ ಬಂಡಾ ವಿಶೇಷ ಪೋಕ್ಸೋ ನ್ಯಾಯಾಲಯ ಶುಕ್ರವಾರ (ಫೆ.20) ಆದೇಶಿಸಿದೆ. ಉತ್ತರ ಪ್ರದೇಶದ...

ರಾಜ್ಯಸಭೆ ಚುನಾವಣೆ : ಬಿಹಾರದಲ್ಲಿ ಕಿಂಗ್ ಮೇಕರ್ ಆದ ಓವೈಸಿ ಪಕ್ಷ

ಮಾರ್ಚ್ 16ರಂದು ನಡೆಯಲಿರುವ ಬಿಹಾರದ ಐದು ರಾಜ್ಯಸಭಾ ಸ್ಥಾನಗಳ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು 'ಕಿಂಗ್ ಮೇಕರ್' ಆಗಿ ಹೊರಹೊಮ್ಮಿದೆ. ಬಿಹಾರದಲ್ಲಿ ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು ಕನಿಷ್ಠ...

ದೆಹಲಿ : ಪ್ರಧಾನಿ ಮನೆ ಬಳಿಯ ಕೊಳಗೇರಿಗಳ 717 ಕುಟುಂಬಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್

ನವದೆಹಲಿಯ ಪ್ರಧಾನಿ ನಿವಾಸದ ಬಳಿಯ ಮೂರು ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಏಳುನೂರ ಹದಿನೇಳು ಕುಟುಂಬಗಳು ಮಾರ್ಚ್ 6ರೊಳಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ದರಾಗುವಂತೆ ಎಚ್ಚರಿಕೆ ನೀಡಲಾಗಿದೆ...

ಹೊಸ ಅಸ್ತ್ರ ಪ್ರಯೋಗಿಸಿದ ಟ್ರಂಪ್ : ಎಲ್ಲಾ ರಾಷ್ಟ್ರಗಳ ಆಮದು ಮೇಲೆ ಶೇ.10ರಷ್ಟು ಜಾಗತಿಕ ಸುಂಕ ಘೋಷಣೆ

ಎಲ್ಲಾ ದೇಶಗಳ ಆಮದುಗಳ ಮೇಲೆ ಹೊಸದಾಗಿ ಶೇಕಡ 10 ಸುಂಕ ವಿಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ಘೋಷಿಸಿದ್ದಾರೆ. ಇದಕ್ಕೂ ಕೆಲ ಗಂಟೆಗಳ ಮೊದಲು,...

ಭಾರತದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ: ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಟ್ರಂಪ್ ಹೇಳಿಕೆ

ಅಮೆರಿಕ ಸುಪ್ರೀಂ ಕೋರ್ಟ್ ಪ್ರತಿ ಸುಂಕ (Reciprocal tariffs) ನೀತಿಯನ್ನು ರದ್ದುಗೊಳಿಸಿದರೂ, ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ತಿಳಿಸಿದ್ದಾರೆ. ಶ್ವೇತಭವನದಲ್ಲಿ...

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...