ಬಿಜೆಪಿ ಸರ್ಕಾರ ಮತ್ತು ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ರವರು 15,000 ಶಿಕ್ಷಕರ ನೇಮಕಾತಿ ಮಾಡಿಕೊಂಡಿದ್ದೇವೆ ಎಂದು ಹಲವಾರು ಬಾರಿ ತಮ್ಮನ್ನು ತಾವೇ ಹೊಗಳಿಕೊಂಡಿದ್ದುಂಟು. ಆದರೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿ ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಸರ್ಕಾರ ಮಾಡಿದ ಯಡವಟ್ಟುಗಳಿಂದ ಒಬ್ಬರ ನಂತರ ಒಬ್ಬರಂತೆ ಹಲವರು ಕೋರ್ಟ್ ಮೆಟ್ಟಿಲೇರಿದ ಪರಿಣಾಮ ನೇಮಕಾತಿ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ. ಇನ್ನು ಕೆಲವೇ ದಿನಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾಗಲಿದ್ದು, ನೀತಿ ಸಂಹಿತೆ ಜಾರಿಗೆ ಬಂದಲ್ಲಿ ನೇಮಕಾತಿ ಪ್ರಕ್ರಿಯೆ ಮತ್ತೆ 5-6 ತಿಂಗಳು ಮುಂದೆ ಹೋಗುವ ಸಂಭವವಿದೆ. ಇದರಿಂದಾಗಿ ಶಿಕ್ಷಕರಾಗುವ ಕನಸಿನಲ್ಲಿದ್ದ ಸಾಮಾನ್ಯ ವರ್ಗದಲ್ಲಿ ಆಯ್ಕೆಯಾಗಿದ್ದ ಮತ್ತು ಯಾವುದೇ ಕಾನೂನು ತೊಡಗಿಲ್ಲದ ಭಾವೀ ಶಿಕ್ಷಕರು ಪ್ರತಿ ದಿನ ಕಣ್ಣೀರಿಡುತ್ತಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗಾಗಿ 2022ರ ಮಾರ್ಚ್‌ನಲ್ಲಿ 15,000 ಶಿಕ್ಷಕರ ನೇಮಕಾತಿಗೆ ಅರ್ಜಿ ಕರೆಯಲಾಯಿತು. ಮೇ ತಿಂಗಳಿನಲ್ಲಿ ಪರೀಕ್ಷೆ ನಡೆಸಲಾಯಿತು. ನವೆಂಬರ್‌ನಲ್ಲಿ 1:2 ಮತ್ತು 1:1ರ ತಾತ್ಕಾಲಿಕ ಪಟ್ಟಿ ಪ್ರಕಟ ಮಾಡಿಲಾಯಿತು. ಆಯ್ಕೆಯಾದ ಭಾವೀ ಶಿಕ್ಷಕರು ಕೊನೆಗೂ ತಮ್ಮ ಆಸೆ ನೆರವೇರಿತು ಎಂಬ ಸಂಭ್ರಮದಲ್ಲಿದ್ದರು. ಆದರೆ ಪಟ್ಟಿ ಪ್ರಕಟವಾಗಿ ಆರು ತಿಂಗಳಾಗುತ್ತ ಬಂದರೂ ಅವರಿಗೆ ಇದುವರೆಗೂ ಸ್ಥಳ ನಿಯುಕ್ತಿ ಮತ್ತು ನೇಮಕಾತಿ ಆದೇಶ ಸಿಕ್ಕಿಲ್ಲ.
ಈ ಹಿಂದೆ ಪೋಷಕರ ಜಾತಿ ಮತ್ತು ಅದಾಯ ಸಲ್ಲಿಸಿದ ವಿವಾಹಿತರನ್ನು ಸಾಮಾನ್ಯ ವರ್ಗದಲ್ಲಿ ಪರಿಗಣಿಸಿದ್ದನ್ನು ಕೋರ್ಟ್‌ನಲ್ಲಿ ಪ್ರಶ್ನಿಸಿದರು. ಹಾಗಾಗಿ ಪ್ರಕ್ರಿಯೆಯಲ್ಲಿ ವಿಳಂಬವಾಯಿತು. ಪೋಷಕರ ಜಾತಿ ಮತ್ತು ಅದಾಯ ಪ್ರಮಾಣ ಪತ್ರ ಸಲ್ಲಿಸಿದ ವಿವಾಹಿತರನ್ನು ಮೀಸಲಾತಿಯಲ್ಲಿ ಪರಿಗಣಿಸುವಂತೆ ಹಾಗೂ ಇರುವ ತಾತ್ಕಾಲಿಕ ಪಟ್ಟಿಯನ್ನು ರದ್ದುಪಡಿಸಿ ಹೊಸ ಪಟ್ಟಿ ಬಿಡುವಂತೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಹಾಗಾಗಿ ಆಯ್ಕೆ ಪ್ರಕ್ರಿಯೆಯಲ್ಲಿ ವಿಳಂಬವಾಯಿತು. ಆನಂತರ ಮಾರ್ಚ್ 08ರಂದು ಸರ್ಕಾರ ಅಂತಿಮ ಪಟ್ಟಿ ಬಿಡುಗಡೆ ಮಾಡಿತ್ತು. ಆದರೆ ಅದರಲ್ಲಿ ಕಲ್ಯಾಣ ಕರ್ನಾಟಕ ಭಾಗದ ಕೆಲ ಅಭ್ಯರ್ಥಿಗಳನ್ನು ಹೊರ ಹಾಕಲಾಗಿದೆ ಎಂದು ಆರೋಪಿಸಿ ಕೆಲವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿ ಆಯ್ಕೆ ಪಟ್ಟಿಗೆ ಮತ್ತೆ ತಡೆಯಾಜ್ಞೆ ತಂದಿದ್ದಾರೆ.
ಹಾಗಾಗಿ ಸದ್ಯದಲ್ಲಿ ವಿವಾದ ಬಗೆಹರಿಯುವ ಸೂಚನೆ ಕಂಡುಬರುತ್ತಿಲ್ಲ. “ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮೊದಲು ವರ್ಗಾವಣೆಯನ್ನು ಪೂರ್ಣಗೊಳಿಸುವುದು. ವರ್ಗಾವಣೆಯಿಂದಾಗಿ ಖಾಲಿಯಾದ ಹುದ್ದೆಗಳಿಗೆ ಹೊಸ ಶಿಕ್ಷಕರನ್ನು ನಿಯೋಜಿಸುವುದು ನಮ್ಮ ಯೋಜನೆಯಾಗಿದೆ. ಈಗ ವರ್ಗಾವಣೆಗೆ ಸಂಬಂಧಿಸಿದ ಕಡತವು ಇನ್ನೂ ಸರ್ಕಾರದ ಮಟ್ಟದಲ್ಲಿ ಬಾಕಿ ಉಳಿದಿರುವುದರಿಂದ ಎಲ್ಲವೂ ವಿಳಂಬವಾಗುತ್ತದೆ” ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.
ಭಾವೀ ಶಿಕ್ಷಕರ ಆಕ್ರೋಶ; ಸಿಎಂ ಬೊಮ್ಮಾಯಿಗೆ ಪತ್ರ
ಪದೇ ಪದೇ ನೇಮಕಾತಿ ಪ್ರಕ್ರಿಯೆ ಮುಂದೆ ಹೋಗುತ್ತಿರುವುದರಿಂದ ಆಕ್ರೋಶಗೊಂಡಿರುವ ಭಾವೀ ಶಿಕ್ಷಕರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಉದ್ಯೋಗ ಸೃಷ್ಟಿ ಮತ್ತು ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಿಮ್ಮ ಸರ್ಕಾರದ ಸಾಧನೆ ಸೊನ್ನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ 500ಕ್ಕೂ ಅಭ್ಯರ್ಥಿಗಳ ಬದುಕಿಗೆ ಕೊಳ್ಳಿ ಇಟ್ಟಿರಿ. ಈಗ ಶಿಕ್ಷಕರ ನೇಮಕಾತಿಯಲ್ಲಿ 13,300ಕ್ಕೂ ಹೆಚ್ಚು ಅಭ್ಯರ್ಥಿಗಳ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದೀರಿ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದು ನಾಲ್ಕು ವರ್ಷಗಳಾಗುತ್ತಿವೆ. ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ 2021ರ ಡಿಸೆಂಬರ್‌ನಲ್ಲಿ ಪರೀಕ್ಷೆ ನಡೆದರೂ ಇನ್ನೂ ನೇಮಕಾತಿ ಪ್ರಕ್ರಿಯೆ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಪ್ರೌಢ ಶಾಲಾ ಶಿಕ್ಷಕರ ನೇಮಕಾತಿ ಮತ್ತು ಪಿಯುಸಿ ಉಪನ್ಯಾಸಕರ ನೇಮಕಾತಿ ಮಾಡಿಕೊಂಡಿಲ್ಲ. ಪೋಲಿಸ್ ಹುದ್ದೆಗಳ ನೇಮಕಾತಿ ಕೂಡ ಬಾಕಿ ಉಳಿದಿದೆ. ವರ್ಷಗಟ್ಟಲೆ ಓದಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ದರಾಗುತ್ತಿರುವ ಅದೆಷ್ಟೊ ಅಭ್ಯರ್ಥಿಗಳ ಕನಸಿಗಳಿಗೆ ನೀರೆರೆಚುವ ಕೆಲಸವನ್ನು ನಿಮ್ಮ ಸರ್ಕಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.
ಸದ್ಯ ಭಾವೀ ಶಿಕ್ಷಕರು ಖಾಸಗಿ ಶಾಲೆಗಳಲ್ಲಿ ಪಾಠ ಮಾಡುತ್ತಿದ್ದು, ಸರ್ಕಾರಿ ಶಿಕ್ಷಕರಾಗಿ ಆಯ್ಕೆಯಾಗಿರುವುದರಿಂದ ಈ ವರ್ಷದ ಅಂತ್ಯಕ್ಕೆ ಅವರನ್ನು ಕೆಲಸದಿಂದ ತೆಗೆಯಲಾಗುತ್ತದೆ. ಆದರೆ ಸರ್ಕಾರಿ ಕೆಲಸದ ನೇಮಕಾತಿ ಆದೇಶ ಸಿಗದುದ್ದರಿಂದ ಎರಡು ಕಡೆ ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿ ಅಲೆಯಬೇಕಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಚುನಾವಣಾ ನೀತಿ ಸಂಹಿತೆ ಜಾರಿಯಾದರೆ ನಮಗೆ ಕೆಲಸ ಸಿಗುವುದು ಮತ್ತಷ್ಟು ಮುಂದೆ ಹೋಗುವುದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತೇವೆ. ಮುಂದಿನ ಶೈಕ್ಷಣಿಗೆ ವರ್ಷದ ಒಳಗೆ ಶಿಕ್ಷಕರ ನೇಮಕಾತಿ ಆಗದೆ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕುಸಿಯುವ ಅಪಾಯವಿದೆ.
ಹಾಗಾಗಿ ಚುನಾವಣೆ ನೀತಿ ಸಂಹಿತೆಯಿಂದ ತೊಂದರೆಯಾಗದಂತೆ ಸಂಪೂರ್ಣ ನೇಮಕಾತಿ ಪ್ರಕ್ರಿಯೆಯನ್ನ ಚುರುಗೊಳಿಸಬೇಕು. ಕಲ್ಯಾಣ ಕರ್ನಾಟಕ ಹೊರತುಪಡಿಸಿ ಉಳಿದ ಭಾಗಗಳ ಭಾವೀ ಶಿಕ್ಷಕರಿಗೆ ನೇಮಕಾತಿ ಆದೇಶ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ; ಕೇಂದ್ರೀಯ ತನಿಖಾ ಸಂಸ್ಥೆಗಳ ದುರುಪಯೋಗ: ಸರ್ಕಾರದ ವಿರುದ್ಧ ಸುಪ್ರೀಂ ಮೊರೆ ಹೋದ 14 ಪ್ರತಿಪಕ್ಷಗಳು


