ಬಲಪಂಥೀಯ ಟ್ರೋಲರ್ ರೋಹಿತ್ ಚಕ್ರತೀರ್ಥ ಅವರ ಅಧ್ಯಕ್ಷತೆಯಲ್ಲಿ ಮಾಡಲಾಗಿರುವ ಪಠ್ಯ ಪುಸ್ತಕ ಮರು ಪರಿಷ್ಕರಣೆಯನ್ನು ವಿರೋಧಿಸಿ ಪಠ್ಯ ವಾಪಾಸಾತಿ ಚಳವಳಿ ಮುಂದುವರೆಯುತ್ತಿದೆ. ಡಾ.ಆರ್.ವಿ. ಭಂಡಾರಿಯವರು ಬರೆದ ‘ಹಾರಿಹೋದ ಹಕ್ಕಿಗಳು’ ಕವನವನ್ನು ಪರಿಷ್ಕೃತ ಪಠ್ಯದಲ್ಲಿ ಅಳವಡಿಸಿಕೊಳ್ಳಲು ನೀಡಿರುವ ಪರವಾನಗಿಯನ್ನು ಹಿಂಪಡೆದಿರುವುದಾಗಿ ಅವರ ಕುಟುಂಬಿಕರು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಶುಕ್ರವಾರದಂದು ಪತ್ರ ಬರೆದಿದ್ದಾರೆ.
ಆರ್.ವಿ. ಭಂಡಾರಿ ಅವರ ಸೊಸೆ, ಹೋರಾಟಗಾರ್ತಿ ಯಮುನಾ ಗಾಂವ್ಕರ್ ಅವರು ಕುಟುಂಬಸ್ಥರ ಪರವಾಗಿ ಬರೆದಿರುವ ಪತ್ರದಲ್ಲಿ,“ಸಧ್ಯದ ಪಠ್ಯಪುಸ್ತಕ ಪರಿಷ್ಕರಣೆಯ ಧ್ಯೇಯ ಉದ್ದೇಶಗಳು ಮತ್ತು ಫಲಿತಗಳು ಡಾ.ಆರ್.ವಿ. ಭಂಡಾರಿಯವರು ಬಾಳಿದ ಮತ್ತು ಬೋಧಿಸಿದ ತಾತ್ವಿಕತೆ ಮತ್ತು ಮೌಲ್ಯಗಳಿಗೆ ವಿರುದ್ಧವಾಗಿರುವ ಹಿನ್ನೆಲೆಯಲ್ಲಿ ಅವರ ಬರಹವನ್ನು ಬಳಸಿಕೊಳ್ಳು ನೀಡಿದ್ದ ಅನುಮತಿಯನ್ನು ಹಿಂತೆಗೆದುಕೊಂಡಿದ್ದೇವೆ” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಯಮುನಾ ಅವರು ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ, “ನಾಡಿನ ಜನತೆಯ ಸಾಕ್ಷಿ ಪ್ರಜ್ಞೆಯಂತಿದ್ದ ಡಾ. ಆರ್. ವಿ. ಭಂಡಾರಿಯವರು ಅರವತ್ತರ ದಶಕದಲ್ಲಿಯೇ ಎರಡು ಸ್ನಾತಕೋತ್ತರ ಉನ್ನತ ಪದವಿಗಳನ್ನು ನಂತರ ಸಂಶೋಧನಾ ಪ್ರಬಂಧವನ್ನು ಸಲ್ಲಿಸಿ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಕೊನೆಯವರೆಗೂ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ತೀರಾ ಗ್ರಾಮೀಣ ಪ್ರದೇಶಗಳಲ್ಲಿ ಸೇವೆಸಲ್ಲಿಸಿದ್ದರು” ಎಂದು ಹೇಳಿದ್ದಾರೆ.
“ಮೂವತ್ತೈದು ವರ್ಷಗಳಿಗೂ ಹೆಚ್ಚು ಕಾಲ ಕೆಲಸ ಮಾಡಿದವರು. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಅವರ ಮನಸ್ಸನ್ನು ಅರಳಿಸುವ ಪರಿಯನ್ನು ವೈಜ್ಞಾನಿಕವಾಗಿ ಅರ್ಥ ಮಾಡಿಕೊಂಡವರು. ನೂರಾರು ಪುಸ್ತಕ ಬರೆದು ಮಕ್ಕಳ ಸಾಹಿತ್ಯ, ವಿಮರ್ಶೆ, ಕತೆ, ಕಾದಂಬರಿ, ವೈಚಾರಿಕ, ಮಾನವಿಕ ಮುಂತಾದ ಸಾಹಿತ್ಯ ಕ್ಷೇತ್ರದಲ್ಲಿ ಹೆಸರಾದವರು. ಪ್ರಸಿದ್ಧ ತಾಳಮದ್ದಲೆ ಅರ್ಥಧಾರಿಗಳೂ ಆಗಿದ್ದರು”
“ಸಾಕ್ಷರತಾ ಆಂದೋಲನವನ್ನು ಒಳಗೊಂಡು ಶೈಕ್ಷಣಿಕ ಎಲ್ಲಾ ಕೆಲಸಗಳಲ್ಲಿ ಇದ್ದವರು. ಅಂದು ಸಾಹಿತ್ಯ ಅಕಾಡೆಮಿ, ಕನ್ನಡ ಜಾಗೃತಿ ಸಮಿತಿ, ಗ್ರಂಥಾಲಯ ಸಮಿತಿಗಳಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ನಲವತ್ತು ದಶಕಗಳ ಕಾಲ ವಿವಿಧ ಸರ್ಕಾರಗಳ ಅವಧಿಯಲ್ಲಿ ಪಠ್ಯ ಪುಸ್ತಕ ರಚನೆಗೆ ತನ್ನ ಪ್ರಬುದ್ಧ ಸಲಹೆಗಳನ್ನು, ಅಗತ್ಯವಿದ್ದಲ್ಲಿ ಸೂಕ್ತ ಮಾರ್ಪಾಡುಗಳನ್ನು ಸೂಚಿಸುವಲ್ಲಿ ತೊಡಗಿಸಿಕೊಂಡಿದ್ದರು” ಎಂದು ಯಮುನಾ ಹೇಳಿದ್ದಾರೆ.
“ಕಳೆದ ಅವಧಿಯಲ್ಲಿ ತಿಳಿ ಕನ್ನಡ, ದ್ವಿತೀಯ ಭಾಷಾ ಕನ್ನಡ ಪಠ್ಯಪುಸ್ತಕ, ಪರಿಷ್ಕೃತ, (ಎರಡನೇ ಭಾಷೆ, ಕನ್ನಡ ಪಠ್ಯಪುಸ್ತಕ) ಎಂಟನೆಯ ತರಗತಿಯ ಪರಿವಿಡಿಯ ಪದ್ಯಭಾಗದ 2 ನೇ ಕವನ ಪುಟ ಸಂಖ್ಯೆ 69-71ರಲ್ಲಿರುವ ಆರ್.ವಿ. ಭಂಡಾರಿಯವರು ಬರೆದ ‘ಹಾರಿದ ಹಕ್ಕಿಗಳು’ ಕವನವನ್ನು ಪಠ್ಯದಲ್ಲಿ ಬಳಸಲು ನೀಡಿದ ಪರವಾನಗಿಯನ್ನು ಡಾ. ಆರ್. ವಿ. ಭಂಡಾರಿಯವರ ಕುಟುಂಬದ ಪರವಾಗಿ ನೀಡಲಾಗಿತ್ತು” ಎಂದು ಯಮುನಾ ಅವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಮಹಿಳಾ ಹೋರಾಟಗಾರ್ತಿಯರಿಗೆ ಅವಮಾನ: ವೀರ ರಾಣಿ ಅಬ್ಬಕ್ಕ ದೇವಿ ಪಾಠ ಕೈಬಿಟ್ಟ ಚಕ್ರತೀರ್ಥ ಸಮಿತಿ
ಶಿಕ್ಷಣ ಮಂತ್ರಿಗಳಿಗೆ ಬರೆದ ಪತ್ರದಲ್ಲಿ ಅವರು, “ಪಠ್ಯಪುಸ್ತಕ ಪರಿಷ್ಕರಣೆಯ ಧ್ಯೇಯ-ಉದ್ದೇಶಗಳು ಮತ್ತು ಫಲಿತಗಳು ಡಾ.ಆರ್.ವಿ. ಭಂಡಾರಿಯವರು ಬಾಳಿದ ಮತ್ತು ಬೋಧಿಸಿದ ತಾತ್ವಿಕತೆ ಮತ್ತು ಮೌಲ್ಯಗಳಿಗೆ ವಿರುದ್ಧವಾಗಿರುವ ಹಿನ್ನೆಲೆಯಲ್ಲಿ, ಅವರ ಕುಟುಂಬ ವರ್ಗ ಅವರ ಕವನವನ್ನು ಪರಿಷ್ಕೃತ ಪಠ್ಯ ಪುಸ್ತಕದಲ್ಲಿ ಉಳಿಸಿಕೊಳ್ಳಲು ಅನುಮತಿಯನ್ನು ಹಿಂತೆದುಕೊಂಡಿದೆ” ಎಂದು ಹೇಳಿದ್ದಾರೆ.



ಯಮುನಾ ಗಾಂವ್ಕರ್ ಅವರ ಈ ಕ್ರಮ ಸ್ವಾಗತಾರ್ಹ.
ಪ್ರಿಯ ಯಮುನಾ,
ಆರ್ವಿ ಅವರ ಕವನವನ್ನು ಪರಿಷ್ಕೃತ ಪಠ್ಯ ಪುಸ್ತಕದಲ್ಲಿ ಅಳವಡಿಸಿಕೊಳ್ಳಲು ಕೊಟ್ಟ ಅನುಮತಿಯನ್ನು ಹಿಂತೆಗೆದುಕೊಂಡ ನಿಮ್ಮ ಕುಟುಂಬದ ತೀರ್ಮಾನ ಸಮಯೋಚಿತ.