ಅದು 1990ರ ದಶಕ. ಆಗ ಪ್ರಧಾನಿಯಾಗಿದ್ದ ವಿ.ಪಿ. ಸಿಂಗ್ ಅವರು ಮಂಡಲ್ ವರದಿಯನ್ನು ಜಾರಿಗೊಳಿಸಿದ್ದರು. ಅದನ್ನೇ ನೆಪ ಮಾಡಿಕೊಂಡು ವಿ.ಪಿ. ಸಿಂಗ್ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಿದ್ದ ಬಿಜೆಪಿ ತನ್ನ ಬೆಂಬಲವನ್ನು ವಾಪಸ್ ತೆಗೆದುಕೊಂಡಿತು. ಅದರ ಬೆನ್ನಿಗೇ ಮಂಡಲ್ ವರದಿ ವಿರುದ್ಧ ಇಡೀ ದೇಶವೇ ಹತ್ತಿ ಉರಿಯಿತು. ವಿಪರ್ಯಾಸವೆಂದರೆ, ಯಾವ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ಒದಗಿಸಲು ಮಂಡಲ್ ವರದಿಯನ್ನು ಜಾರಿಗೊಳಿಸಲಾಗಿತ್ತೊ ಅದೇ ಸಮುದಾಯದ ವಿದ್ಯಾರ್ಥಿಗಳು ಮೀಸಲಾತಿ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದರು. ಬಲಪಂಥೀಯರು ಹಾಗೂ ಮೀಸಲಾತಿ ವಿರೋಧಿಗಳ ಕುಮ್ಮಕ್ಕಿನಿಂದ ಕೆಲವು ವಿದ್ಯಾರ್ಥಿಗಳು ಆತ್ಮಾಹುತಿಯನ್ನೂ ಮಾಡಿಕೊಂಡರು. ಮತ್ತೆ ಕೆಲವು ಅಮಾಯಕರನ್ನು ಬಲವಂತವಾಗಿ ಬೆಂಕಿಗೆ ಆಹುತಿ ಕೊಟ್ಟ ದುರ್ಘಟನೆಗಳೂ ನಡೆದವು.
ಇದಾದ 30 ವರ್ಷಗಳಲ್ಲಿ ಭಾರತೀಯ ರಾಜಕಾರಣದಲ್ಲಿ ಸಾಕಷ್ಟು ನೀರು ಹರಿದುಹೋಗಿದೆ. ಮಂಡಲ್ ವರದಿಯ ವಿರುದ್ಧ ನಿಂತಿದ್ದ ಹಿಂದುಳಿದ ವರ್ಗಗಳು ಈಗ ಆ ಸೌಲಭ್ಯವನ್ನು ಬಳಸಿಕೊಂಡು, ಶಿಕ್ಷಣ, ಉದ್ಯೋಗ, ರಾಜಕೀಯದಲ್ಲಿ ನಿರ್ಣಾಯಕ ಪಾಲು ಪಡೆಯತೊಡಗಿದ್ದಾರೆ. ಮಂಡಲ್ ವರದಿ ವಿರೋಧಿ ಪ್ರತಿಭಟನೆಗಳ ರಂಗಭೂಮಿಯಾಗಿದ್ದ ಉತ್ತರ ಪ್ರದೇಶ, ಬಿಹಾರದಲ್ಲಿಂದು ಹಿಂದುಳಿದ ವರ್ಗಗಳು ರಾಜಕೀಯವಾಗಿ ಬಲಿಷ್ಠವಾಗಿವೆ. ಇದು ಯಾವುದೇ ಶೋಷಿತ ಸಮುದಾಯಕ್ಕೆ ಮೀಸಲಾತಿ ಒದಗಿಸಿದರೆ ಆಗುವ ಸಂಕ್ರಮಣ.

ವಿಪರ್ಯಾಸವೆಂದರೆ, ಸುಮಾರು 5000 ವರ್ಷಗಳ ಕಾಲ ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಮೀಸಲಾತಿಯನ್ನು ಎಗ್ಗಿಲ್ಲದೆ ಅನುಭವಿಸಿದ ವೈದಿಕ ವರ್ಗ, ದಲಿತರಿಗೆ ನೀಡಿದ ಮೀಸಲಾತಿ (ಪ್ರಾತಿನಿಧ್ಯ) ವಿರುದ್ಧ ಕೇವಲ 40 ವರ್ಷಗಳಲ್ಲಿ ಉಳಿದ ಸಮುದಾಯಗಳಲ್ಲಿ ಅಸಹನೆ, ಅಸೂಯೆ ಮೂಡಿಸುವಲ್ಲಿ ಯಶಸ್ವಿಯಾಗಿತ್ತು. ಮೀಸಲಾತಿಯಿಂದ ಪ್ರತಿಭಾ ಪಲಾಯನವಾಗುತ್ತದೆ ಎಂದು ವ್ಯವಸ್ಥಿತವಾಗಿ ಸಮಾಜದಲ್ಲಿ ಬಿತ್ತಲಾಯಿತು. ಮೀಸಲಾತಿಯಿಂದ ಯಾವುದೇ ಅರ್ಹತೆ ಇಲ್ಲದವರು ಉದ್ಯೋಗಾವಕಾಶಗಳನ್ನು ಪಡೆಯುತ್ತಾರೆ ಎಂದು ಬಿಂಬಿಸಲಾಯಿತು.
ಭಾರತಕ್ಕೆ ಬ್ರಿಟಿಷರು ಬರುವವರೆಗೂ ಶೇ. 100ರಷ್ಟು ಮೀಸಲಾತಿ ಅನುಭವಿಸಿದ್ದು ವೈದಿಕರು. ಶಿಕ್ಷಣವಂತೂ ಅವರದ್ದೇ ಹಕ್ಕಾಗಿತ್ತು. ಹೀಗಿದ್ದೂ ಭಾರತ ಕೊಳಗೇರಿಯ ಕೊಂಪೆಯಾಗಿತ್ತು. ಇಲ್ಲಿ ವಿದ್ಯೆ, ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಕ್ಷೇತ್ರಗಳೆಲ್ಲ ಗಬ್ಬೆದ್ದು ನಾರುತ್ತಿದ್ದವು. ಬ್ರಾಹ್ಮಣರ ಅಗ್ರಹಾರಗಳನ್ನು ಹೊರತುಪಡಿಸಿ ಉಳಿದೆಲ್ಲರ ಕೇರಿಗಳು ಅಕ್ಷರಶಃ ಮಲದ ಗುಂಡಿಗಳಂತಿದ್ದವು. ಅದಕ್ಕೆ ಪ್ರಮುಖ ಕಾರಣ ಬ್ರಾಹ್ಮಣರು ಶಿಕ್ಷಣವನ್ನು ಕೇಂದ್ರೀಕರಿಸಿಕೊಂಡಿದ್ದು. ಶಾಸ್ತ್ರ, ಸಂಪ್ರದಾಯಗಳೆಂದು ಆಧುನಿಕ ಶಿಕ್ಷಣ ಭಾರತವನ್ನು ಪ್ರವೇಶಿಸದಂತೆ ಸಾವಿರಾರು ವರ್ಷಗಳ ಕಾಲ ತಡೆಹಿಡಿದಿದ್ದು.
ಬ್ರಾಹ್ಮಣರು ಶಿಕ್ಷಣವನ್ನು ಕೇಂದ್ರೀಕರಿಸಿಕೊಂಡಿದ್ದರಿಂದ ಈ ನೆಲದಲ್ಲಿ ಯಾವುದೇ ಆಧುನಿಕ ವಿಜ್ಞಾನ, ತಂತ್ರಜ್ಞಾನ ಬೆಳೆಯಲಿಲ್ಲ. ಹೀಗಾಗಿ ಮೊಘಲರು, ಡಚ್ಚರು, ಫ್ರೆಂಚರು, ಪೋರ್ಚುಗೀಸರು, ಬ್ರಿಟಷರಾದಿಯಾಗಿ ಎಲ್ಲರೂ ಈ ನೆಲದ ಮೇಲೆ ದಂಡೆತ್ತಿ ಬಂದರು. ಈ ನೆಲದ ಸಂಪತ್ತನ್ನು ಲೂಟಿ ಹೊಡೆದರು. ಬ್ರಿಟಿಷರಂತೂ ಸುಮಾರು 150 ವರ್ಷಗಳ ಕಾಲ ಭಾರತೀಯರನ್ನು ಅಕ್ಷರಶಃ ಗುಲಾಮರನ್ನಾಗಿಸಿಕೊಂಡು ಆಳಿದರು.
ಈ ನಡುವೆಯೂ ಭಾರತದ ಸಾಮಾಜಿಕ ಸಂರಚನೆಯಲ್ಲಿ ಒಂದು ಸಂಚಲನ ಸೃಷ್ಟಿಸಿದ್ದು 1835ರಲ್ಲಿ ಜಾರಿಯಾದ ಲಾರ್ಡ್ ಮೆಕಾಲೆ ಪ್ರಣೀತ ಇಂಗ್ಲಿಷ್ ಶಿಕ್ಷಣ. ಭಾರತವನ್ನು ತಮ್ಮ ಕೈವಶ ಮಾಡಿಕೊಂಡಿದ್ದ ಬ್ರಿಟಿಷರು, ಈ ನೆಲದಲ್ಲಿ ದೀರ್ಘ ಕಾಲ ನೆಲೆಯೂರಲು ಆಡಳಿತಾತ್ಮಕ ಸಿಬ್ಬಂದಿಯ ಕೊರತೆ ಅನುಭವಿಸುತ್ತಿದ್ದರು. ವೈವಿಧ್ಯಮಯ ಭಾಷೆಯನ್ನು ಹೊಂದಿದ್ದ ಭಾರತದಲ್ಲಿ ಅವರಿಗೆ ಸಂವಹನ ತೀರಾ ಕಷ್ಟದಾಯಕವಾಗಿ ಪರಿಣಮಿಸಿತ್ತು. ಹೀಗಾಗಿ ಬ್ರಿಟಿಷರು 1985ರಲ್ಲಿ ಲಾರ್ಡ್ ಮೆಕಾಲೆ ಪ್ರಣೀತ ಇಂಗ್ಲಿಷ್ ಶಿಕ್ಷಣವನ್ನು ದೇಶದಾದ್ಯಂತ ಜಾರಿಗೊಳಿಸಿದರು. ಈ ನೀತಿಯನ್ವಯ ಶಿಕ್ಷಣವನ್ನು ಸಾರ್ವತ್ರಿಕಗೊಳಿಸಲಾಯಿತು. ಅದರಿಂದ ಬ್ರಾಹ್ಮಣರಲ್ಲಿ ಕೇಂದ್ರೀಕೃತಗೊಂಡಿದ್ದ ಶಿಕ್ಷಣ ವಿಕೇಂದ್ರೀಕರಣವಾಯಿತು. ಬ್ರಾಹ್ಮಣರಲ್ಲದೆ ಕ್ಷತ್ರಿಯ, ವೈಶ್ಯ, ಶೂದ್ರ, ದಲಿತ, ಅಲ್ಪಸಂಖ್ಯಾತರೆಲ್ಲ ಆಧುನಿಕ ಶಿಕ್ಷಣಕ್ಕೆ ತೆರೆದುಕೊಳ್ಳುವುದು ಇದರಿಂದ ಸಾಧ್ಯವಾಯಿತು. ಅಂತಹ ಶಿಕ್ಷಣ ವಿಕೇಂದ್ರೀಕರಣದ ದೊಡ್ಡ ಫಲವೇ ಡಾ. ಬಿ.ಆರ್. ಅಂಬೇಡ್ಕರ್.
ಸ್ವಾತಂತ್ರ್ಯೋತ್ತರ ಭಾರತದ ಸಂವಿಧಾನ ಶಿಲ್ಪಿಯಾದ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಶೋಷಿತ ಸಮುದಾಯಗಳಿಗೆ ಪ್ರಾತಿನಿಧ್ಯ ಒದಗಿಸಿದ್ದರಿಂದ ದೊಡ್ಡ ಸಾಮಾಜಿಕ ಸಂಕ್ರಮಣವೇ ಸಾಧ್ಯವಾಯಿತು. ಅಲ್ಲಿಯವರೆಗೂ ಮೇಲ್ಜಾತಿ, ಮೇಲ್ವರ್ಗಗಳಿಗೆ ಮೀಸಲಾಗಿದ್ದ ಶಿಕ್ಷಣ, ಉದ್ಯೋಗಾವಕಾಶ, ರಾಜಕೀಯ ಕ್ಷೇತ್ರಗಳಲ್ಲಿ ಶೋಷಿತರಿಗೆ ಅವಕಾಶ ದೊರೆಯಿತು. ವಿವಿಧ ಸಮುದಾಯದ ಕುಶಲಕರ್ಮಿಗಳು, ವಿಜ್ಞಾನಿಗಳು, ತಂತ್ರಜ್ಞಾನಿಗಳಿಗೆ ಶಿಕ್ಷಣ ಹಾಗೂ ಉದ್ಯೋಗಾವಕಾಶ ದೊರೆತಿದ್ದರಿಂದ ಭಾರತವು ಕೇವಲ 70 ವರ್ಷಗಳಲ್ಲಿ ಅಗಾಧ ಬೆಳವಣಿಗೆ ಸಾಧಿಸಿದೆ. ಈ ಬೆಳವಣಿಗೆ ಹೇಗೆ ಅಗಾಧ ಎಂಬುದನ್ನು ಬ್ರಿಟಿಷ್ ಪೂರ್ವ ಭಾರತದ ಸಾಮಾಜಿಕ, ಆರ್ಥಿಕ, ರಾಜಕೀಯ ಸ್ಥಿತಿಗತಿಗಳನ್ನು ಅವಲೋಕಿಸಿದಾಗ ಮಾತ್ರ ಅರ್ಥವಾಗುತ್ತದೆ.
ಡಾ. ಬಿ.ಆರ್. ಅಂಬೇಡ್ಕರ್ ಅವರು ದಶಕಗಳ ಕಾಲ ಹೋರಾಟ ನಡೆಸಿ ದಮನಿತ ಸಮುದಾಯಗಳಿಗೆ ಕಲ್ಪಿಸಿದ ಮೀಸಲಾತಿಯ ವಿರುದ್ಧ ಆ ಸೌಲಭ್ಯವನ್ನು ಪಡೆಯುತ್ತಿರುವ ಶೂದ್ರ ಸಮುದಾಯಗಳಲ್ಲೇ ಕೇವಲ 40 ವರ್ಷಗಳಲ್ಲಿ ಅಸಹನೆ, ಅಸೂಯೆ ಬಿತ್ತುವಲ್ಲಿ ವೈದಿಕ ಶಕ್ತಿ ಯಶಸ್ವಿಯಾಗಿತ್ತು. ಆದರೆ, ಶಿಕ್ಷಣ ವ್ಯವಸ್ಥೆ ವ್ಯಾಪಕತೆ ಪಡೆಯುತ್ತಿದ್ದಂತೆಯೆ ಎಲ್ಲ ಸಮುದಾಯಗಳಿಗೂ ಈಗ ಒದಗಿಸುತ್ತಿರುವ ಮೀಸಲಾತಿ ಪ್ರಮಾಣ ಅಪರಿಪೂರ್ಣ ಎಂಬ ಅರಿವು ಆಗತೊಡಗಿದೆ. ಆದರೆ, ಸುಪ್ರೀಂಕೋರ್ಟ್ ಮೀಸಲಾತಿಯ ಪ್ರಮಾಣ ಶೇ. 50 ಅನ್ನು ಮೀರಬಾರದು ಎಂಬ ತೀರ್ಪು ನೀಡಿರುವುದರಿಂದ ಕುರುಬರು, ಪಂಚಮಸಾಲಿಗಳು, ನಾಯಕರು, ಒಕ್ಕಲಿಗರೆಲ್ಲ ಮೀಸಲಾತಿ ಪ್ರವರ್ಗಗಳ ಪರಿಷ್ಕರಣೆ ಇಲ್ಲವೆ ಮೀಸಲಾತಿ ಹೆಚ್ಚಳಕ್ಕಾಗಿ ಪ್ರತಿಭಟನೆಗೆ ಮುಂದಾಗಿವೆ.
ಡಾ. ಬಿ.ಆರ್. ಅಂಬೇಡ್ಕರರು ರಚಿಸಿರುವ ಸಂವಿಧಾನದಲ್ಲಿ ಒದಗಿಸಿರುವ ಮೀಸಲಾತಿ ಸಾಮಾಜಿಕ ಹಿಂದುಳಿಯುವಿಕೆಯನ್ನು ಆಧರಿಸಿದ್ದು ಎಂಬುದನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ. ದುರಂತವೆಂದರೆ, ಈ ಆಧುನಿಕ ದಿನಗಳಲ್ಲೂ ಭಾರತದ ಸಾಮಾಜಿಕ ಪರಿಸ್ಥಿತಿ ದಿನೇ ದಿನೇ ಜಾತಿಗ್ರಸ್ತವಾಗತೊಡಗಿದ್ದು, ದಮನಿತರಿಗೆ ನೀಡುತ್ತಿರುವ ಪ್ರಾತಿನಿಧ್ಯದ ಬಗ್ಗೆ ಅಸಹನೆ ಮಡುಗಟ್ಟುತ್ತಿದೆ. ಹೀಗಾಗಿ ಜಾತಿ ಆಧಾರಿತ ಮೀಸಲಾತಿಯನ್ನು ರದ್ದು ಮಾಡಿ ಆರ್ಥಿಕ ಮೀಸಲಾತಿಯನ್ನು ಜಾರಿಗೊಳಿಸಬೇಕು ಎಂಬ ಕೂಗು ಪ್ರಬಲವಾಗತೊಡಗಿವೆ. ಇಂತಹ ಕೂಗು ಬಲಗೊಳ್ಳಲು ಮತ್ತದೇ ವೈದಿಕ ಶಕ್ತಿಗಳು ಕಾರಣ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದನಂತರ ಸಾಮಾಜಿಕ ಸ್ಥಿತಿ ಆಧಾರಿತ ಮೀಸಲಾತಿಯನ್ನು ರದ್ದುಗೊಳಿಸಿ, ಆರ್ಥಿಕ ಸ್ಥಿತಿ ಆಧಾರಿತ ಮೀಸಲಾತಿಯನ್ನು ಜಾರಿಗೊಳಿಸಬೇಕು ಎಂಬ ಕೂಗು ವ್ಯಾಪಕತೆ ಪಡೆಯತೊಡಗಿದೆ. ಅದಕ್ಕೆ ಇಂಬು ನೀಡುವಂತೆ ಬಿಜೆಪಿ ಸರ್ಕಾರ, ಕಳೆದ ವರ್ಷ ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೆ ಶೇ. 10ರಷ್ಟು ಮೀಸಲಾತಿಯನ್ನು ಜಾರಿ ಮಾಡಿದೆ. ಈ ಅಸಾಂವಿಧಾನಿಕ ಕ್ರಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮುಂದೆ ಹಲವಾರು ಪ್ರಕರಣಗಳು ದಾಖಲಾಗಿದ್ದರೂ ಸುಪ್ರೀಂ ಕೋರ್ಟ್ ಆ ಕುರಿತು ವಿಚಾರಣೆ ಕೈಗೊಳ್ಳುವ ಮನಸ್ಸನ್ನು ಈವರೆಗೂ ಮಾಡಿಲ್ಲ.
ಇದನ್ನೇ ನೆಪವಾಗಿಸಿಕೊಂಡು ರಾಜಸ್ತಾನದಲ್ಲಿ ಗುಜ್ಜಾರ್ ಸಮುದಾಯ, ಗುಜರಾತ್‌ನಲ್ಲಿ ಪಾಟೀದಾರ್ ಸಮುದಾಯ, ಕರ್ನಾಟಕದಲ್ಲಿ ಪಂಚಮಸಾಲಿ, ಒಕ್ಕಲಿಗ ಸಮುದಾಯಗಳು ಮೀಸಲಾತಿ ಪರಿಷ್ಕರಣೆಗಾಗಿ ಹೋರಾಡುತ್ತಿವೆ. ದುರದೃಷ್ಟವಶಾತ್ ಈ ಸಮುದಾಯಗಳು ಶೇ. 100ರಷ್ಟು ಜನಸಂಖ್ಯಾವಾರು ಮೀಸಲಾತಿಗಾಗಿ ಹೋರಾಡುವ ಬದಲು, ದುರ್ಬಲರು, ಕುಶಲಕರ್ಮಿಗಳಿರುವ ಪ್ರವರ್ಗಗಳಿಗೆ ತಮ್ಮ ಸಮುದಾಯವನ್ನು ಸೇರ್ಪಡೆಗೊಳಿಸಿ ಎಂದು ಬೀದಿಗಿಳಿದಿದ್ದಾರೆ. ಇದು ಸಂವಿಧಾನ ವಿರೋಧಿ ಕ್ರಮ ಮಾತ್ರವಲ್ಲ; ಮುಂದೊಂದು ದಿನ ಬಲಿಷ್ಠರು ದುರ್ಬಲರ ಅವಕಾಶಗಳನ್ನು ಬೇಟೆಯಾಡಲು ನೀಡುವ ಪರವಾನಗಿಯಾಗಿಬಿಡುತ್ತದೆ.
ಹಾಗಾದರೆ, ಎಲ್ಲ ಸಮುದಾಯಗಳು ಮೀಸಲಾತಿಗಾಗಿ ಆಗ್ರಹಿಸತೊಡಗಿದರೆ ಆಳುವ ಸರ್ಕಾರಗಳು ಏನನ್ನು ಮಾಡಬೇಕು? ನೆನಪಿಡಿ: 1990ರ ದಶಕದಲ್ಲಿ ಯಾವ ಸಮುದಾಯಗಳು ದಲಿತರು, ಶೋಷಿತರಿಗೆ ಒದಗಿಸಲಾಗುತ್ತಿದ್ದ ಮೀಸಲಾತಿಯ ಕಡು ವಿರೋಧಿಗಳಾಗಿದ್ದವೊ ಅದೇ ಸಮುದಾಯಗಳು ಆರ್ಥಿಕ ಹಿಂದುಳಿದಿರುವಿಕೆಯ ಆಧಾರದಲ್ಲಿ ಮೀಸಲಾತಿಯನ್ನು ಬೇಡುತ್ತಿವೆ. ಈ ಬೇಡಿಕೆ ತಾರ್ಕಿಕ ಅಂತ್ಯ ತಲುಪಬೇಕಿದ್ದರೆ ಸಂವಿಧಾನಕ್ಕೆ ತಿದ್ದುಪಡಿ ತಂದು ಶೇ. 100ರಷ್ಟು ಜನಸಂಖ್ಯಾವಾರು ಮೀಸಲಾತಿಯನ್ನು ಜಾರಿಗೊಳಿಸಬೇಕಿದೆ.
ಜನಸಂಖ್ಯಾವಾರು ಮೀಸಲಾತಿಯನ್ನು ಜಾರಿಗೊಳಿಸಲು ದೊಡ್ಡ ತೊಡಕಾಗಿರುವುದು ಈ ನೆಲದಲ್ಲಿರುವ ಅಸಂಖ್ಯಾತ ಜಾತಿ, ಬುಡಕಟ್ಟು, ಅಲೆಮಾರಿ ಸಮುದಾಯಗಳು. ಕೆಲವು ಜಾತಿ, ಬುಡಕಟ್ಟು, ಅಲೆಮಾರಿ ಸಮುದಾಯಗಳ ಜನಸಂಖ್ಯೆ 10,000 ದಾಟದಿರುವುದೂ ಇದೆ. ಅಂತಹ ಸೂಕ್ಷ್ಮ ಸಮುದಾಯಗಳಿಗೆ ಮೀಸಲಾತಿ ಒದಗಿಸಲು ಹೇಗಾದರೂ ಸಾಧ್ಯವೇ ಎಂಬ ಆತಂಕ ಅನೇಕ ಸಾಮಾಜಿಕ ಹೋರಾಟಗಾರರು, ಸಂವಿಧಾನತಜ್ಞರಲ್ಲಿ ಮನೆ ಮಾಡಿದೆ. ಈ ಬಿಕ್ಕಟ್ಟಿಗೆ ಒಂದು ಸರಳ ಪರಿಹಾರೋಪಾಯವಿದೆ: ಜಾತಿವಾರು ಮೀಸಲಾತಿಯ ಜಾಗದಲ್ಲಿ ಪ್ರವರ್ಗ ಆಧಾರಿತ ಮೀಸಲಾತಿಯನ್ನು ಜಾರಿಗೊಳಿಸುವುದು.
ಈ ದೇಶದಲ್ಲಿ ಅಸಂಖ್ಯ ಮುಖ್ಯ ಜಾತಿಗಳಿರುವಂತೆಯೆ ಉಪ ಜಾತಿ, ಸಂಬಂಧಿತ ಜಾತಿಗಳೂ ಹೇರಳವಾಗಿವೆ. ಹೀಗಾಗಿ ಯಾವ ಸಮುದಾಯದ ಜನಸಂಖ್ಯೆ ಒಂದು ಲಕ್ಷವನ್ನೂ ಮೀರುವುದಿಲ್ಲವೊ ಅಂತಹ ಸಣ್ಣಪುಟ್ಟ ಸಮುದಾಯಗಳನ್ನೆಲ್ಲ ಕುಲಶಾಸ್ತ್ರೀಯ ಅಧ್ಯಯನದ ನೆಲೆಯಲ್ಲಿ ಒಂದು ಪ್ರವರ್ಗಕ್ಕೆ ಸೇರ್ಪಡೆ ಮಾಡಬೇಕು. ನಂತರ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಹಾಗೂ ದಲಿತ ವರ್ಗಗಳಲ್ಲಿನ ಅತಿ ದೊಡ್ಡ ಸಮುದಾಯಗಳಿಗೆ ಜಾತಿ ಆಧಾರಿತ ಒಳಮೀಸಲಾತಿ ಪ್ರವರ್ಗಗಳನ್ನು ಸೃಷ್ಟಿಸಬೇಕು. ಉದಾಹರಣೆಗೆ ನ್ಯಾ. ಸದಾಶಿವ ಆಯೋಗ ಮಾದಿಗ ಹಾಗೂ ಮಾದಿಗ ಸಂಬಂಧಿತ ಉಪಜಾತಿಗಳಿಗೆ ಶೇ. 5.5ರಷ್ಟು ಒಳಮೀಸಲಾತಿ ಹಾಗೂ ಹೊಲೆಯ ಮತ್ತು ಹೊಲೆಯ ಸಂಬಂಧಿತ ಉಪ ಜಾತಿಗಳಿಗೆ ಶೇ. 4.5ರಷ್ಟು ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ಶಿಫಾರಸು ಮಾಡಿದೆ. ಇದೇ ಮಾನದಂಡವನ್ನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಸಮುದಾಯಗಳಿಗೂ ಅನ್ವಯಿಸಬೇಕು. ಸಾಮಾಜಿಕ ಹಿಂದುಳಿದಿರುವಿಕೆಯೊಂದಿಗೆ ಆರ್ಥಿಕ ಹಿಂದುಳಿದಿರುವಿಕೆಯನ್ನೂ ಮಾನದಂಡವಾಗಿ ಪರಿಗಣಿಸಬೇಕು.
ನ್ಯಾ. ಸದಾಶಿವ ವರದಿಯನ್ನು ವಿರೋಧಿಸುತ್ತಿರುವ ಕೆಲವು ಪ್ರಾಜ್ಞರು, ಆ ವರದಿಯಲ್ಲಿ ಶಿಫಾರಸಾಗಿರುವ ಕೆನೆ ಪದರದತ್ತ ಬೊಟ್ಟು ಮಾಡುತ್ತಿದ್ದಾರೆ. ಇದು ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ವಾದಿಸುತ್ತಿದ್ದಾರೆ. ಅವರ ವಾದದಲ್ಲಿ ಕೆಲಮಟ್ಟಿಗೆ ತಥ್ಯವಿದೆ ಕೂಡಾ. ಆದರೆ, ಈ ಹಂತದಲ್ಲಿ ನಾವೆಲ್ಲ ನೆನಪಿಟ್ಟುಕೊಳ್ಳಬೇಕಿರುವುದು ಡಾ. ಬಿ.ಆರ್. ಅಂಬೇಡ್ಕರ್ ಅವರು ಕಾಲಘಟ್ಟದ ಅಗತ್ಯಕ್ಕನುಗುಣವಾಗಿ ಸಂವಿಧಾನ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ನೀಡಿದ್ದಾರೆ-ಸಂವಿಧಾನದ ಮೂಲಭೂತ ಆಶಯಗಳನ್ನು ಹೊರತುಪಡಿಸಿ.
ಇಂದಿನ ಯುವಜನರಲ್ಲಿ ಮೀಸಲಾತಿಯಿಂದಲೇ ಪ್ರತಿಭೆಗಳಿಗೆ ಅನ್ಯಾಯವಾಗುತ್ತಿದೆ ಎಂಬ ಅಸಮಾಧಾನ ವ್ಯಾಪಕವಾಗುತ್ತಿದೆ. ಈ ಅಸಮಾಧಾನಕ್ಕೆ ಜಾತಿ ನೆಲೆಯ ಪೂರ್ವಗ್ರಹ ಕೂಡಾ ಕಾರಣವಾಗಿದೆ. ಇಂತಹ ಪೂರ್ವಗ್ರಹವನ್ನು ಹೋಗಲಾಡಿಸಬೇಕಾದರೆ ಶೇ. 100ರಷ್ಟು ಜನಸಂಖ್ಯಾವಾರು ಮೀಸಲಾತಿಯನ್ನು ಜಾರಿಗೊಳಿಸುವುದು ಅತ್ಯಗತ್ಯವಾಗಿದೆ. ಜನಸಂಖ್ಯಾವಾರು ಮೀಸಲಾತಿ ಜಾರಿಗೊಳಿಸುವಾಗ ಪ್ರತಿ ಸಮುದಾಯದ ದುರ್ಬಲರು, ದಮನಿತರಿಗೇ ಅವಕಾಶ ದೊರೆಯುವಂತೆ ನೋಡಿಕೊಳ್ಳಬೇಕಾದುದು ಸಂವಿಧಾನದ ಚೌಕಟ್ಟಿನಲ್ಲಿ ಅತ್ಯಗತ್ಯ. ಹೀಗಾಗಿ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗ ಸೇರಿದಂತೆ ಜನಸಂಖ್ಯಾವಾರು ಮೀಸಲಾತಿ ಅಡಿಯಲ್ಲಿ ಸೃಷ್ಟಿಯಾಗಲಿರುವ ಎಲ್ಲ ಪ್ರವರ್ಗಗಳಿಗೂ ಕೆನೆಪದರವನ್ನು ನಿಗದಿಗೊಳಿಸಬೇಕಿದೆ.
ಇದೇ ಹೊತ್ತಿನಲ್ಲಿ ಜನಸಂಖ್ಯಾವಾರು ಮೀಸಲಾತಿ ಇಡೀ ದೇಶದಲ್ಲಿ ಯಶಸ್ವಿಯಾಗುತ್ತದೆ ಎಂದು ಭಾವಿಸುವುದೂ ತಪ್ಪಾಗುತ್ತದೆ. ಹೀಗಾಗಿ ಯಾವುದಾದರೂ ಒಂದು ನಿರ್ದಿಷ್ಟ ರಾಜ್ಯದಲ್ಲಿ ಪ್ರಾಯೋಗಿಕವಾಗಿ ಜನಸಂಖ್ಯಾವಾರು ಮೀಸಲಾತಿಯನ್ನು ಜಾರಿಗೊಳಿಸಲು ಸಾಧ್ಯವಾಗುವಂತೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕಿದೆ. ಸದ್ಯ ಜನಸಂಖ್ಯಾವಾರು ಮೀಸಲಾತಿಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲು ಅತ್ಯಂತ ಪ್ರಶಸ್ತವಾಗಿರುವ ರಾಜ್ಯ ಕರ್ನಾಟಕ. ಯಾಕೆಂದರೆ, ಕರ್ನಾಟಕದಲ್ಲಿ ಈಗಾಗಲೇ ಜನಸಂಖ್ಯಾವಾರು ಜಾತಿ ಸಮೀಕ್ಷೆ ಪೂರ್ಣಗೊಂಡಿದ್ದು, ಆ ವರದಿಯನ್ನು ಸರ್ಕಾರ ಅಂಗೀಕರಿಸುವುದು ಮಾತ್ರ ಬಾಕಿಯಿದೆ.
ಯಾವುದೇ ಪ್ರಯೋಗ ಶೇಕಡಾ ನೂರಕ್ಕೆ ನೂರರಷ್ಟು ಯಶಸ್ವಿಯಾಗುವುದಿಲ್ಲ. ಅದರಲ್ಲಿ ಧನಾತ್ಮಕ, ಋಣಾತ್ಮಕ ಅಂಶಗಳೆರಡೂ ಸೇರಿಕೊಂಡಿರುತ್ತವೆ. ಹೀಗಾಗಿಯೇ ಕರ್ನಾಟಕದಲ್ಲಿ ಮಾತ್ರ ಜನಸಂಖ್ಯಾವಾರು ಮೀಸಲಾತಿಯನ್ನು ಶಿಕ್ಷಣ, ಉದ್ಯೋಗ, ರಾಜಕೀಯ ಕ್ಷೇತ್ರಗಳಲ್ಲೆಲ್ಲ ಜಾರಿಗೊಳಿಸಿ, ಅದರ ಸಾಧಕಬಾಧಕಗಳನ್ನು ಕನಿಷ್ಠ ಪಕ್ಷ 10 ವರ್ಷಗಳ ಅವಧಿಗೆ ಅವಲೋಕಿಸಬೇಕಿದೆ. ಅಂತಹ ಪ್ರಯೋಗದಿಂದ ಆಗುವ ಲಾಭಗಳನ್ನು ಉಳಿಸಿಕೊಂಡು ನಷ್ಟವಾಗುವ ಅಥವಾ ಸಮಾಜಕ್ಕೆ ಬಾಧಕವಾಗುವ ಅಂಶಗಳನ್ನು ಕೈಬಿಡುವ ಅಥವಾ ಪರಿಷ್ಕರಿಸುವ ಕೆಲಸಕ್ಕೆ ಮುಂದಾಗಬೇಕಿದೆ.
ಸದ್ಯ ಕರ್ನಾಟಕದಲ್ಲಿ ನಡೆಯುತ್ತಿರುವ ಬಲಿಷ್ಠ ಸಮುದಾಯಗಳ ಮೀಸಲಾತಿ ಹೋರಾಟದ ಬಗ್ಗೆ ದಲಿತ ಸಮುದಾಯಗಳು ಅಸಹನೆ ಬೆಳೆಸಿಕೊಳ್ಳುವ ಬದಲು ಸಹಾನುಭೂತಿ ತೋರಬೇಕಿದೆ. ಮೀಸಲಾತಿ ಪರಿಷ್ಕರಣೆಗಾಗಿ ಆಗ್ರಹಿಸುತ್ತಿರುವ ಪಂಚಮಸಾಲಿ, ಕುರುಬ, ಒಕ್ಕಲಿಗ ಸಮುದಾಯಗಳ ಹೋರಾಟಗಳು ಜನಸಂಖ್ಯಾವಾರು ಹೋರಾಟವಾಗಿ ರೂಪುಗೊಳ್ಳುವಂತೆ ರಂಗವನ್ನು ಸಿದ್ಧಗೊಳಿಸುವ ಜವಾಬ್ದಾರಿ ದಲಿತ ಸಂಘಟನೆಗಳ ಮೇಲಿದೆ. ಯಾಕೆಂದರೆ, ’ಕೋತಿ ತಾನು ಮೊಸರು ತಿಂದು ಮೇಕೆ ಮೂತಿಗೆ ಒರೆಸಿತು’ ಎಂಬ ಗಾದೆಯಂತೆ, ಶಿಕ್ಷಣ, ರಾಜಕೀಯ ಉದ್ಯೋಗಾವಕಾಶಗಳಲ್ಲಿ ಗರಿಷ್ಠ ಅವಕಾಶ ಪಡೆದಿರುವ ವೈದಿಕರು, ಪ್ರತಿಭಾವಂತರಿಗೆ ಅವಕಾಶ ದೊರೆಯದಿರಲು ದಲಿತರಿಗೆ ನೀಡುತ್ತಿರುವ ಮೀಸಲಾತಿಯೇ ಕಾರಣ ಎಂದು ದಲಿತರತ್ತ ಬೊಟ್ಟು ಮಾಡುತ್ತಿವೆ. ಆ ಮೂಲಕ ಇತರರಲ್ಲಿ ಮೀಸಲಾತಿ ವಿರೋಧಿ ಅಸಹನೆ ಬಿತ್ತುತ್ತಿವೆ. ಹೀಗಾಗಿ ಮೇಲ್ಜಾತಿ ಸಮುದಾಯಗಳು ಮೀಸಲಾತಿಗಾಗಿ ನಡೆಸುತ್ತಿರುವ ಪ್ರತಿಭಟನೆಗಳಿಗೆ ದಲಿತರು ಬೆಂಬಲ ಸೂಚಿಸಿ, ಆ ಹೋರಾಟಗಳು ಜನಸಂಖ್ಯಾವಾರು ಮೀಸಲಾತಿ ಹೋರಾಟಗಳಾಗಿ ಪರಿವರ್ತನೆಗೊಳ್ಳುವಂತೆ ನೋಡಿಕೊಳ್ಳಬೇಕಿದೆ. ಆಗ ಮಾತ್ರ ಇಡೀ ಸಮಾಜವನ್ನು ಆವರಿಸಿಕೊಂಡು ವ್ರಣದ ಸ್ವರೂಪ ಪಡೆದುಕೊಂಡಿರುವ ಮೀಸಲಾತಿ ವಿರೋಧಿ ಅಸಹನೆಯನ್ನು ಬೇರು ಸಮೇತ ಕಿತ್ತೊಗೆಯಲು ಸಾಧ್ಯ.

ಸದಾನಂದ ಗಂಗನಬೀಡು
ಲೇಖಕರು ಹಿರಿಯ ಪತ್ರಕರ್ತರು ಮತ್ತು ಕಥೆಗಾರರು. ಪ್ರಸಕ್ತ ವಿದ್ಯಮಾನಗಳಿಗೆ ಸಕ್ರಿಯವಾಗಿ ಪ್ರತಿಕ್ರಿಯಿಸುವ ಚಿಂತಕರು


