ಹೆಚ್ಚುತ್ತಿರುವ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಮತ್ತು ಆರೋಗ್ಯ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಮಹಾರಾಷ್ಟ್ರ ಸರ್ಕಾರದ ಇಬ್ಬರು ಹಿರಿಯ ಮಂತ್ರಿಗಳು ರಾಜ್ಯಯಲ್ಲಿ ವಿಸ್ತೃತ ಲಾಕ್‌ಡೌನ್ ಮಾಡುವ ಸಾಧ್ಯತೆಯ ಬಗ್ಗೆ ಮಾತನಾಡಿದ್ದಾರೆ. ರಾಜ್ಯದಲ್ಲಿ ಈಗಾಗಲೇ ವಾರಾಂತ್ಯದಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ.
ಆರೋಗ್ಯ ಸಚಿವ ರಾಜೇಶ್ ಟೊಪೆ, ಮಹಾರಾಷ್ಟ್ರವು ಲಾಕ್‌ಡೌನ್‌ನತ್ತ ಸಾಗುತ್ತಿದೆ ಎಂದು ಹೇಳಿದ್ದಾರೆ. ಪರಿಹಾರ ಮತ್ತು ಪುನರ್ವಸತಿ ಸಚಿವ ವಿಜಯ್ ವಾಡೆಟ್ಟಿವಾರ್ ಅವರು ಕೂಡಾ ರಾಜ್ಯವು ಲಾಕ್‌ಡೌನ್ ಮಾಡುವಂತಹ ಹಾದಿಯಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕೊರೊನಾ ಹರಡದಂತೆ ತಡೆಯಲು ಬೇಕಾಗಿ ರಾಜ್ಯವು ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಒಮ್ಮತ ಮೂಡಿಸಲು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶನಿವಾರ ಸರ್ವಪಕ್ಷ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಸಂಪೂರ್ಣ ಲಾಕ್‌ಡೌನ್ ಬಗ್ಗೆಯೂ ಚರ್ಚಿಸಲಾಗುವುದು ಎನ್ನಲಾಗಿದೆ.
ಇದನ್ನೂ ಓದಿ: ಆಪರೇಷನ್ ಕಮಲ ಭೀತಿ: ಕಾಂಗ್ರೆಸ್ ಮೈತ್ರಿಕೂಟದ 20 ಅಭ್ಯರ್ಥಿಗಳು ಜೈಪುರ ರೆಸಾರ್ಟ್‌ಗೆ!
“ನಾನು ಒಟ್ಟು ಲಾಕ್ಡೌನ್ ಪರವಾಗಿಲ್ಲ ಆದರೆ ರಾಜ್ಯವು ಆ ದಿಕ್ಕಿನಲ್ಲಿ ಸಾಗುತ್ತಿದೆ. ಪ್ರಕರಣಗಳು ಹೆಚ್ಚಾಗುತ್ತಿದ್ದರೆ ಲಾಕ್‌ಡೌನ್ ಮಾಡುವುದನ್ನು ಬಿಟ್ಟು ನಮಗೆ ಬೇರೆ ಆಯ್ಕೆ ಇರುವುದಿಲ್ಲ” ಎಂದು ಆರೋಗ್ಯ ಸಚಿವ ರಾಜೇಶ್ ಟೊಪೆ ಹೇಳಿದ್ದಾರೆ.
ಕಠಿಣ ನಿರ್ಬಂಧಗಳನ್ನು ಹೊಂದಿರುವ ಎರಡು-ಮೂರು ವಾರಗಳ ಲಾಕ್‌ಡೌನ್ ಸಮಯದಲ್ಲಿ ರಾಜ್ಯವು ತನ್ನ ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಲು ಸಮಯವನ್ನು ಪಡೆದುಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.
ಆರೋಗ್ಯ ವ್ಯವಸ್ಥೆಯು ಕುಸಿಯುವ ತಕ್ಷಣದ ಬೆದರಿಕೆ ಸಧ್ಯಕ್ಕೆ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. “ಆಸ್ಪತ್ರೆಗಳ ಮತ್ತು ವೈದ್ಯರ ಕೊರತೆಯಿದ್ದಾಗ, ನಮಗೆ ಲಾಕ್ ಡೌನ್ ಅಗತ್ಯವಿದೆ. ಸದ್ಯಕ್ಕೆ ನಾವು ಆ ಹಂತವನ್ನು ತಲುಪಿಲ್ಲ, ”ಎಂದು ಅವರು ತಿಳಿಸಿದ್ದಾರೆ.
ಆದಾಗ್ಯೂ, ಪರಿಹಾರ ಮತ್ತು ಪುನರ್ವಸತಿ ಸಚಿವ ವಿಜಯ್ ವಾಡೆಟ್ಟಿವಾರ್, ಮಹಾರಾಷ್ಟ್ರದ ಪರಿಸ್ಥಿತಿ ಅನಿಶ್ಚಿತವಾಗಿದೆ, ತಕ್ಷಣದ ಲಾಕ್ ಡೌನ್ ಅಗತ್ಯವಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಮತಾ ಬ್ಯಾನರ್ಜಿಗೆ ಮತ್ತೆ ನೋಟಿಸ್ ನೀಡಿದ ಚುನಾವಣಾ ಆಯೋಗ!
“ಪ್ರಸ್ತುತ ಪರಿಸ್ಥಿತಿಯಲ್ಲಿ ನಾವು ಆಮ್ಲಜನಕದ ಕೊರತೆಯನ್ನು, ಲಸಿಕೆ ಕೊರತೆಯ ಸಮಸ್ಯೆಯನ್ನು ಎದುರಿಸುತ್ತಿದೆ. ಮುಂದಿನ 5 ರಿಂದ 10 ದಿನಗಳಲ್ಲಿ ರೋಗಿಗಳ ಸಂಖ್ಯೆ 5 ಲಕ್ಷದಿಂದ 10 ಲಕ್ಷಕ್ಕೆ ಜಿಗಿಯಲಿದೆ. ಪರಿಸ್ಥಿತಿಯು ಕೈ ಮೀರಲಿದೆ” ಎಂದು ವಾಡೆಟ್ಟಿವಾರ್ ಹೇಳಿದ್ದಾರೆ.
“ನಾವು ಮೂರು ವಾರಗಳವರೆಗೆ ಕಟ್ಟುನಿಟ್ಟಾದ ಲಾಕ್‌ಡೌನ್ ಮಾಡದಿದ್ದರೆ ಕೊರೊನಾ ಹರಡುವುದನ್ನು ತಡೆಯುವುದು ನಮಗೆ ಕಷ್ಟವಾಗುತ್ತದೆ ಎಂದು ನಾನು ಸಿಎಂಗೆ ಹೇಳಿದ್ದೇನೆ” ಎಂದು ಅವರು ಹೇಳಿದ್ದಾರೆ.
ಕಟ್ಟುನಿಟ್ಟಾದ ಲಾಕ್‌ಡೌನ್‌ನ ಎಂದರೆ ಎಲ್ಲಾ ಅಂಗಡಿಗಳನ್ನು ಮುಚ್ಚುವುದು ಮತ್ತು ಅಗತ್ಯ ವಸ್ತುಗಳನ್ನು ಮನೆಗೆ ತಲುಪಿಸಲು ಮಾತ್ರ ಅವಕಾಶ ನೀಡುವುದು ಎಂದು ವಾಡೆಟ್ಟಿವಾರ್ ಹೇಳಿದ್ದಾರೆ.
ಶನಿವಾರದ ಸರ್ವಪಕ್ಷ ಸಭೆಯು ಈ ವಿಷಯದ ಬಗ್ಗೆ ಒಮ್ಮತವನ್ನು ಮೂಡಿಸಲು ಪ್ರಯತ್ನಿಸುತ್ತದೆ ಎಂದು ಅವರು ಹೇಳಿದರು.
ಈ ಸಭೆಯು ಇಲ್ಲಿಯವರೆಗಿನ ನಿರ್ಬಂಧಗಳ ಪರಿಣಾಮವನ್ನು ಪರಿಶೀಲಿಸುತ್ತದೆ ಮತ್ತು ಮುಂದಿನ ಕೆಲವು ವಾರಗಳವರೆಗೆ ರಾಜ್ಯಕ್ಕೆ ಕಠಿಣವಾದ ನಿರ್ಬಂಧಗಳು ಅಥವಾ ಸಂಪೂರ್ಣ ಲಾಕ್‌ಡೌನ್ ಅಗತ್ಯವಿದೆಯೇ ಎಂದು ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ. ಹಿರಿಯ ಸಚಿವರು ಮತ್ತು ವಿರೋಧ ಪಕ್ಷಗಳಾದ ಬಿಜೆಪಿ, ಎಂಎನ್‌ಎಸ್ ಮುಖಂಡರು ಹಾಜರಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ರಸಗೊಬ್ಬರ ಬೆಲೆ ಏರಿಕೆ ಪ್ರಶ್ನಿಸದ ರಾಜ್ಯ ಸರ್ಕಾರ, ಬಿಜೆಪಿ ಸಂಸದರು ಹೇಡಿಗಳು- ಸಿದ್ದರಾಮಯ್ಯ


