Homeಮುಖಪುಟಕ್ರಾಂತಿಯ ಕಿಡಿ ಹೊತ್ತಿಸಿದವರು ಕಿಡಿಗೇಡಿಗಳಿಂದ ಹತ್ಯೆಯಾದ ಕಥೆ

ಕ್ರಾಂತಿಯ ಕಿಡಿ ಹೊತ್ತಿಸಿದವರು ಕಿಡಿಗೇಡಿಗಳಿಂದ ಹತ್ಯೆಯಾದ ಕಥೆ

ವಿಶ್ವದ ಪ್ರತೀ ರಾಷ್ಟ್ರದಲ್ಲೂ ಹೋರಾಟಗಾರರ ಕೊಲೆ, ಹತ್ಯೆ ನಡೆದಿದೆ. ತಮ್ಮ ಬದುಕನ್ನೇ ನೆಲಕ್ಕಾಗಿ, ನೆಲದ ಜನರಿಗಾಗಿ ಮುಡಿಪಾಗಿಟ್ಟವರನ್ನು ಹತ್ಯೆಗೈಯ್ಯುವ ಸಮಾಜ ಎಷ್ಟೊಂದು ಕ್ರೂರ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.

- Advertisement -

ತಾನು ಬದುಕುವ ನೆಲದ ವಿಮೋಚನೆಗೆ ದುಡಿದ ಮಂದಿ ಅದೇ ನೆಲದ ದುಷ್ಕರ್ಮಿಗಳಿಂದ ಹತ್ಯೆಯಾಗಿ ಹೋಗುತ್ತಾರಲ್ಲಾ, ಇದು ವಿಪರ್ಯಾಸದ ಜತೆಗೆ ತೀರಾ ವಿಚಿತ್ರವೆನಿಸುತ್ತದೆ. ತೀರ ಮೊನ್ನೆ ಇಥಿಯೋಪಿಯಾದ ಕ್ರಾಂತಿಕಾರಿ ಕವಿ ಹುಕಾಲು ಹಂಡೀಸಾ ಕಿಡಿಗೇಡಿಗಳ ಗುಂಡೇಟಿಗೆ ಬಲಿಯಾಗಿ ಬಿಟ್ಟರು.

ಈಗಷ್ಟೇ ಮೂವೈತ್ತೈದರ‌ ಹರೆಯದ ಹಂಡೀಸಾ ಪ್ರಭುತ್ವದ ವಿರುದ್ದ ಸಿಡಿದೆದ್ದವರು. ನಾಡಿನ ಜನತೆಯಲ್ಲಿ ಕೆಚ್ಚು ಮತ್ತು ಸ್ವಾಭಿಮಾನವನ್ನು ತುಂಬಿದವರು. ಅದಕ್ಕಾಗಿ ಜೈಲುವಾಸ ಅನುಭವಿಸಬೇಕಾಗಿ ಬಂದವರು. ಯಾವ ನೆಲದ ಜನತೆ ಸ್ವಸ್ಥವಾಗಿ ಬದುಕಬೇಕೆಂದು ಕನಸು ಕಂಡರೋ ಅದೇ ನೆಲದಲ್ಲಿ ಹೆಚ್ಚು ಕಾಲ ಅವರಿಗೆ ಬದುಕಲು ಸಾಧ್ಯವಾಗಲಿಲ್ಲ.

ಹುಕಾಲು ಹಂಡೀಸಾ

ಹಕಾಲು ಹಂಡೀಸರ ಬಗ್ಗೆ ಒಂದೆರಡು ಲೇಖನ ಓದಿದ ಮೇಲೆ ಜಗತ್ತಿನ ಇತರ ಕ್ರಾಂತಿಕಾರಿಗಳು ಯಾಕೋ ನನ್ನನ್ನು ಕಾಡತೊಡಗಿದರು. ಹೀಗೆ ಸುಮ್ಮನೆ ಗೂಗಲ್ ಜಾಲಾಡ ತೊಡಗಿದ್ದೆ. ತೀರಾ ಸಂಕಟವೇ ಎದುರಾಯಿತು. ಇಂಥ ಕ್ರಾಂತಿಕಾರಿಗಳು, ಸ್ವಾತಂತ್ರ್ಯ ಹೋರಾಟಗಾರರು, ಮಾನವಹಕ್ಕು ಹೋರಾಟಗಾರರು ತಮ್ಮ ಬದುಕನ್ನು ಮುಗಿಸಿ ಕೊಂಡದ್ದು ದುಷ್ಕರ್ಮಿಗಳ ಬಂದೂಕಿನಿಂದಲೇ. ಅಂಥ ಕೆಲವು ಮಹಾನ್ ವ್ಯಕ್ತಿಗಳ ಪರಿಚಯ ಇಲ್ಲಿದೆ.

ತುಂಬಾ ದೂರ ಬೇಡ. ನಮ್ಮ ದೇಶದ ರಾಷ್ಟ್ರಪಿತರನ್ನೇ ತೆಗೆದುಕೊಳ್ಳೋಣ. ಇಡೀ ಬದುಕನ್ನೇ ದೇಶದ ಸ್ವಾತಂತ್ರ್ಯಕ್ಕಾಗಿ ಮೀಸಲಿಟ್ಟವರು ಗಾಂಧೀಜಿ. ತಾನು ಗಳಿಸಿ ಕೊಟ್ಟ ಸ್ವಾತಂತ್ರ್ಯವನ್ನು ಹೆಚ್ಚು ಕಾಲ ಅನುಭವಿಸುವ ಅವಕಾಶ ಗಾಂಧೀಜಿಗಿರಲಿಲ್ಲ. ಬ್ರಿಟಿಷ್ ವಿರುದ್ದ ಚಳುವಳಿ ಹಿಂಸಾತ್ಮಕ ವಾಗುವುದನ್ನು ಗಾಂಧೀಜಿ ವಿರೋಧಿಸಿದ್ದರು. ಅಹಿಂಸೆಯನ್ನೇ ಹೋರಾಟದ ಅಸ್ತ್ರವಾಗಿಸಿ ಕೊಂಡರು. ಯಾವ ನೆಲ ಸ್ವತಂತ್ರಗೊಳ್ಳಲು ಗಾಂಧೀಜಿ ಅಹಿಂಸೆ ಪ್ರತಿಪಾದಿಸಿದರೋ ಅದೇ ನೆಲದಲ್ಲಿ ಹುಟ್ಟಿದ ಗೋಡ್ಸೆ ಗಾಂಧೀಜಿಯನ್ನು ಕೊಂದು ಬಿಟ್ಟ. ಅದೂ ಹಿಂಸಾತ್ಮಕವಾಗಿಯೇ.

ಮಹಾತ್ಮ ಗಾಂಧಿ

ಅಬ್ರಹಾಂ ಲಿಂಕನ್ ಅಮೇರಿಕಾದ ಮೊದಲ ಅಧ್ಯಕ್ಷ. ಇತಿಹಾಸದಲ್ಲಿ ಖಾಯಂ ಸ್ಥಾನ ಪಡೆದ ಲಿಂಕನ್‌ನ ಖ್ಯಾತಿ ಅಳತೆಗೂ ಮೀರಿದ್ದು. ಪ್ರಜಾಪ್ರಭುತ್ವ, ಸಮಾನಹಕ್ಕು, ಮುಕ್ತ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದ ಲಿಂಕನ್ ಗುಲಾಮಗಿರಿಯ ನಿರ್ಮೂಲನೆಗೆ ನಾಂದಿ ಹಾಡಿದವರು. ವರ್ಣ ತಾರತಮ್ಯದ ವಿರುದ್ದ ಸಿಡಿದೆದ್ದ ಮೊದಲ ಅಧ್ಯಕ್ಷನೆಂಬ ಖ್ಯಾತಿಯೂ ಲಿಂಕನ್‌ಗಿದೆ. 1865 ಏಪ್ರಿಲ್ 14 ರ ಆ ಸಂಜೆ ಲಿಂಕನ್ ಪಾಲಿಗೆ ಯಾವ ನಮೂನೆಯ ಶಕುನವಾಗಿ ಕಾಡಿತ್ತೋ ಏನೋ. ಎಂದಿನಂತೆ ಅಂದು ಕೂಡಾ ನಿರಾಳವಾಗಿ ನಾಟಕ ನೋಡಲು ತೆರಳಿದ್ದರು ಲಿಂಕನ್. ಆ ಸಮಯಕ್ಕೆ ಜಾನ್ ವಿಲ್ಕೆಸ್ ಎಂಬ ಕಿಡಿಗೇಡಿಯೊಬ್ಬ ಹಿಂಬದಿಯಿಂದ ಹಾರಿಸಿದ್ದ ಗುಂಡು ಲಿಂಕನ್ ತಲೆಯನ್ನು ಬೇಧಿಸಿ ಒಳಹೊಕ್ಕವು. ಅಲ್ಲೇ ಅವರು ಅಂತ್ಯ ಕಂಡರು.

ಅಬ್ರಹಂ ಲಿಂಕನ್

ಏಪ್ರಿಲ್ 21 ಕ್ಕೆ ಅವರ ಪಾರ್ಥಿವ ಶರೀರವನ್ನು ಹೊತ್ತ ವಿಶೇಷ ರೈಲೊಂದು ವಾಷಿಂಗ್ಟನ್‌‌ನಿಂದ ‘ಇಲ್ಲಿನಾಯ್ಗೆ’ ಹೊರಟಿತು. ನಾಲ್ಕು ವರ್ಷಗಳ ಮುಂಚೆ ಲಿಂಕನ್ ಇದೇ ದಾರಿಯಾಗಿ ಬೃಹತ್ ಆಂದೋಲನಾ ರ‌್ಯಾಲಿಯನ್ನು ಸಂಘಟಿಸಿದ್ದರು. ಜನರ ಹಕ್ಕಿಗಾಗಿ, ಸಮಾನತೆಗಾಗಿ, ದೌರ್ಜನ್ಯದ ವಿರುದ್ದ ಆ ರ‌್ಯಾಲಿಯುದ್ದಕ್ಕೂ ಲಿಂಕನ್ ಭಾಷಣ ಮಾಡಿದ್ದರು. ಯಾವ ನೆಲದ ಜನರಿಗಾಗಿ ಲಿಂಕನ್ ಧ್ವನಿಯೆತ್ತಿದ್ದರೋ ಅದೇ ನೆಲದಲ್ಲಿ, ಅದೇ ಜನರ ನಡುವೆ ಅವರ ಶವವನ್ನು ಹೊತ್ತ ರೈಲು ಶೋಕ ಸಂಚಾರ ನಡೆಸುತ್ತಿತ್ತು.

ಮಾರ್ಟಿನ್ ಲೂಥರ್ ಕಿಂಗ್ ಅಮೇರಿಕಾದ ಗಾಂಧಿಯೆಂದೇ ಪ್ರಚಲಿತರು. ಹೋರಾಟದಲ್ಲಿ ಗಾಂಧಿ ಹಾದಿಯನ್ನೇ ತುಳಿದವರು. ಕಪ್ಪು ಜನರ ಮೇಲಿನ ದೌರ್ಜನ್ಯದ ವಿರುದ್ದ ಅಹಿಂಸೆಯ ಚಳುವಳಿಯನ್ನು ಆರಂಭಿಸಿದವರು. ಸರ್ವರ ಸಹಭಾಗಿತ್ವದಲ್ಲಿ ಸಮಾನ ಸಮಾಜ ನಿರ್ಮಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದವರು. ನ್ಯಾಯದ ಪ್ರಖರ ಸೂರ್ಯ ಉದಿಸುವವರೆಗೆ, ಅನ್ಯಾಯ ಅಸ್ತಂಗಗೊಳ್ಳುವವರೆಗೆ ಬಂಡಾಯದ ಸುಂಟರಗಾಳಿ ದೇಶದ ಅಡಿಪಾಯವನ್ನು ಅಲ್ಲಾಡಿಸುತ್ತಲೇ ಇರುತ್ತದೆಯೆಂದು ಸಾರಿದವರು. ಜನಾಂಗೀಯ ಸಂಘರ್ಷದ ನೆಲದಲ್ಲಿ ಭಾತೃತ್ವದ ಒರತೆ ಪುಟಿಯಬೇಕೆಂದು ಬಯಸಿದವರು. ಅದಕ್ಕೆಂದೇ ದುಡಿದರು. ಜನರನ್ನು ಸಂಘಟಿಸಿದರು. ದುರ್ಬಲರ, ದಮನಿತರ, ದಬ್ಬಾಳಿಕೆಗೆ ಒಳಗಾದವರ ದನಿಯಾದರು. ದನಿಯಾಗಲು ಉತ್ತೇಜಿಸಿದರು. ವರ್ಣ ತಾರತಮ್ಯ ಪರಾಕಾಷ್ಟೆಗೆ ತಲುಪಿದ್ದ ಸಮಯಕ್ಕೆ ಕಪ್ಪು ಜನಾಂಗದಲ್ಲಿ ಭರವಸೆಯನ್ನು, ಆಶಾಭಾವನೆಯನ್ನೂ ಮೂಡಿಸಿದರೇ ಈ ಲೂಥರ್ ಕಿಂಗ್.

1963 ರಲ್ಲಿ ಲೂಥರ್ ವಾಷಿಂಗ್ಟನ್‌ನಲ್ಲಿ I have a dream ಎಂಬ ಹೆಸರಿನಲ್ಲಿ ನಡೆಸಿದ ಆಂದೋಲನ ಅಮೇರಿಕನ್ ಶ್ವೇತ ವರ್ಣೀಯರ ಗುಂಡಿಗೆ ನಡುಗಿಸಿತ್ತು. ಅಲ್ಲಿ ಅವರು ಮಾಡಿದ ಐತಿಹಾಸಿಕ ಭಾಷಣದಲ್ಲಿ ಮೇಲಿನ ಈ ಎಲ್ಲಾ ವಿಷಯಗಳೂ ಅಡಕವಾಗಿತ್ತು. ಅವರ ಪ್ರಖರ ಮಾತುಗಳು ಹೋರಾಟದ ತೀವ್ರತೆಯನ್ನು ಹೆಚ್ಚಿಸಿದವು. ಪ್ರಭುತ್ವದ ನೀತಿಯನ್ನು, ವರ್ಣ ತಾರತಮ್ಯವನ್ನು ಬೆಂಬಲಿಸುತ್ತಿದ್ದ ಮಾಧ್ಯಮಗಳು ತಮ್ಮ ನಿಲುವನ್ನು ಬದಲಾಯಿಸಿದವು. ಈ ಭಾಷಣದ ಮಾರನೆ ದಿನ ನ್ಯೂಯಾರ್ಕ್ ಟೈಮ್ಸ್ ವರದಿ ಹೀಗಿತ್ತು; “ಎಲ್ಲರಿಗಿಂತಲೂ ಉತ್ಕೃಷ್ಟವಾಗಿ ಮಾತನಾಡಿದ ಕಿಂಗ್, ಲಿಂಕನ್ ಹಾಗೂ ಗಾಂಧಿಯ ಸಂಕೇತದಂತೆ ತೋರುತ್ತಿದ್ದರು. ಪ್ರತಿಭಟನಾ ಕಾರರು ತಮ್ಮ ದೂರದ ನಡಿಗೆ ಸಾರ್ಥಕವಾಯಿತೆಂಬ ಭಾವದಲ್ಲಿ ತಮ್ಮೂರಿನತ್ತ ಹೆಜ್ಜೆ ಹಾಕುತ್ತಿದ್ದರು.”

ಮಾರ್ಟಿನ್ ಲೂಥರ್ ಕಿಂಗ್

ಅವರು ಎಷ್ಟೇ ಪ್ರಬಲ ಹೋರಾಟವನ್ನು ಸಂಘಟಿಸಿದ್ದರೂ ಅದರ ಪ್ರಾಯೋಗೀಕ ಹಂತ ಅಹಿಂಸೆಯೇ ಆಗಿತ್ತು. ಹಿಂಸೆಯನ್ನು ಸದಾ ವಿರೋಧಿಸಿದರು. ಕ್ರಿಯಾತ್ಮಕ ಅಹಿಂಸಾ ಚಳುವಳಿಗಳ ಮೂಲಕ ನಾಗರಿಕ ಹಕ್ಕುಗಳಿಗೆ ದನಿಯೆತ್ತಿದರು. ಅಂಥ ಅಹಿಂಸಾವಾದಿ ಕೊನೆ ಕ್ಷಣದಲ್ಲಿ ಪ್ರಾಣ ಕಳೆದು ಕೊಂಡದ್ದು ದುಷ್ಕರ್ಮಿಯ ಕೈಯಿಂದಲೇ. 1968 ರ ಏಪ್ರಿಲ್ ನಾಲ್ಕರ ಆ ಕೆಟ್ಟ ಘಳಿಗೆಯಲ್ಲಿ ಜೇಮ್ಸ್ ಆರ್ಲ್ ರಾಯ್ ಎಂಬಾತ ಸಿಡಿಸಿದ ಗುಂಡು ಲೂಥರ್‌ರನ್ನು ಮಕಾಡೆ ಮಲಗಿಸಿ ಬಿಟ್ಟಿತ್ತು.

ಸಿರಿಯಾದ ರಾಷ್ಟ್ರೀಯವಾದಿಯಾಗಿದ್ದವರು ಅಬ್ದುಲ್ ರಹ್‌ಮಾನ್ ಶಾಹ್‌ಬಂದರ್. ಅದು ಮೊದಲ ಮಾಹಾ ಯುದ್ಧದ ಸಮಯವಾಗಿತ್ತು. 1920 ರ ಜುಲೈಯಲ್ಲಿ ಫ್ರಾನ್ಸ್ ಸಿರಿಯಾವನ್ನು ಆಕ್ರಮಿಸಿಕೊಂಡಿತು. ತನ್ನ ಜನ್ಮ ನಾಡಿನ ಮೇಲೆ ಪರಕೀಯ ಶಕ್ತಿಗಳು ನಡೆಸಿದ ಈ ಆಕ್ರಮಣವನ್ನು ಶಾಹ್‌ಬಂದರ್ ವಿರೋಧಿಸಿದರು. ಪ್ರಾದೇಶಿಕ ಸರಕಾರದ ದೌರ್ಬಲ್ಯವನ್ನೂ, ಫ್ರಾನ್ಸ್ ವಿಧೇಯತ್ವ ನೀತಿಯನ್ನೂ ಕಟುಭಾಷೆಯಲ್ಲಿ ಟೀಕಿಸಿದರು. ಈ ಕಾರಣಕ್ಕಾಗಿ ಅವರು ಪ್ರಭುತ್ವದ ಕೆಂಗಣ್ಣಿಗೆ ಗುರಿಯಾದರು. ಆದ್ದರಿಂದ ದೇಶ ಬಿಟ್ಟು ಪಲಾಯಣ ಮಾಡಬೇಕಾಯಿತು. 1921 ರಲ್ಲಿ ತಾಯ್ನಾಡಿಗೆ ಮರಳಿ ಫ್ರೆಂಚ್ ಆಡಳಿತದ ವಿರುದ್ದ ಆಂದೋಲನ ನಡೆಸಲು ಐರನ್ ಹ್ಯಾಂಡ್ ಎಂಬ ಸಂಘಟನೆ ರಚಿಸಿದರು. ಯುವ ಜನತೆಯನ್ನು ಒಗ್ಗೂಡಿಸಿದರು. ರಾಷ್ಟ್ರೀಯವಾದದ ಜಾಗೃತಿ ಮೂಡಿಸಿದರು.

1922ರಲ್ಲಿ ಶಾಹ್‌ಬಂದರ್ ಬಂಧನಕ್ಕೊಳಗಾದರು. ಜತೆಗೆ ಸಂಘಟನೆ ಇತರ ನಾಯಕರೂ ಅವರ ಜತೆಗೆ ಜೈಲು ಸೇರಿದರು. ಈ ಬಂಧನವು ಡಮಸ್ಕಸ್‌ನಲ್ಲಿ ಸಂಘರ್ಷದ ವಾತಾವಾರಣವನ್ನೇ ಸೃಷ್ಟಿಸಿದವು. ಹಲವರು ಜೀವ ಕಳೆದುಕೊಂಡರು. ಕನಿಷ್ಠ ಸಮಯದಲ್ಲೇ‌ ಶಾಹ್‌‌ಬಂದರ್ ದೇಶದಲ್ಲೆಡೆ ಜನಪ್ರಿಯರಾಗಿದ್ದರು. ಇಪ್ಪತ್ತು ವರ್ಷಗಳ ಜೈಲು ಶಿಕ್ಷೆಯನ್ನು ಫ್ರೆಂಚ್ ನ್ಯಾಯಾಲಯ ವಿಧಿಸಿದ್ದರೂ ಸಿರಿಯಾದಾದ್ಯಂತ ಭುಗಿಲೆದ್ದ ಪ್ರತಿಭಟನೆಯ ಫಲವಾಗಿ ಮುಂದಿನ ಒಂದುವರೆ ವರ್ಷದಲ್ಲೇ ಶಾಹ್‌ಬಂದರ್ ಬಿಡುಗಡೆಯಾದರು. ಆ ಬಳಿಕ ಹಲವು ರಾಷ್ಟ್ರೀಯ ಸಂಘಟನೆಗಳಲ್ಲಿ ಕಾರ್ಯಾಚರಿಸಿದರು. ಪೀಪಲ್ಸ್ ಎಂಬ ರಾಷ್ಟ್ರೀಯವಾದಿ ಸಂಘಟನೆ ಕಟ್ಟಿದರು. ಸಿರಿಯಾದ ಮೂಲೆಮೂಲೆಗಳಲ್ಲೂ ಹೋರಾಟದ, ಆಂದೋಲನದ ಕಿಡಿ ಹಚ್ಚಿದರು. ಸಿರಿಯಾದಲ್ಲಿ ಸಾರ್ವಭೌಮತ್ವ ಮೆರೆಯುವ ಇರಾದೆಯಿಂದ ಫ್ರಾನ್ಸ್ ನಡೆಸಿದ ಫ್ರಾಂಕೋ-ಸಿರಿಯನ್ ಒಪ್ಪಂದವನ್ನು ಬಹಿಷ್ಕರಿಸಲು ನಾಡಿನಾದ್ಯಂತ ಕರೆ ನೀಡಿದರು. ಮುನೀರ್ ಅಲ್ ಅಜ್ಲಾನಿಯಂಥ ಘಟಾನುಘಟಿ ರಾಜಕಾರಣಿಗಳೇ ಶಾಹ್‌ಬಂದರ್‌ರ‌ ಬೆನ್ನಿಗೆ ನಿಂತರು. ಶಾಹ್‌ಬಂದರ್ ಸಿರಿಯಾದ ಜನಪ್ರಿಯ ನಾಯಕರಲ್ಲೊಬ್ಬರಾಗಿದ್ದರೂ ತನ್ನ ರಾಜಕೀಯ ಪರಂಪರೆಯನ್ನು ಶಾಶ್ವತಗೊಳಿಸುವ ಪಕ್ಷವನ್ನು ಕಟ್ಟದೆ ಜನಪರ ಹೋರಾಟದಲ್ಲೇ ಮಗ್ನರಾದರು.

ಅಬ್ದುಲ್ ರಹ್‌ಮಾನ್ ಶಾಹ್‌ಬಂದರ್

1940ರ ಒಂದು ದಿನ ಶಾಹ್‌ಬಂದರ್ ಹತ್ಯೆಯಾದರು. ಹತ್ಯೆಯ ಹಿಂದೆ ನ್ಯಾಶನಲ್ ಬ್ಲಾಕ್ ಎಂಬ ಸಿರಿಯನ್ ರಾಜಕೀಯ ಪಕ್ಷದ ಕೈವಾಡವಿದೆಯೆಂದು ಖುದ್ದು ಫ್ರೆಂಚ್ ಸರಕಾರವೇ ಆರೋಪಿಸಿತು. ಹತ್ಯೆಗೆ ಸಂಚು ಹೂಡಿದ್ದ ಸಾದಲ್ಲಾ ಅಲ್ ಜಾಬಿರಿ ಮತ್ತು ಜಾಮಿಲ್ ಮರ್ದಾಂ ಎಂಬ ನ್ಯಾಶನಲ್ ಬ್ಲಾಕ್ ಕಾರ್ಯಕರ್ತರಿಬ್ಬರು ಇರಾಕ್‌ನಲ್ಲಿ ತಲೆಮರೆಸಿಕೊಂಡರು. ಇದರೊಂದಿಗೆ ನ್ಯಾಶನಲ್ ಬ್ಲಾಕ್ ಹತ್ಯೆಯ ಹೊಣೆಯನ್ನು ವಹಿಸಿಕೊಂಡಿತು.

ಮಾಲ್ಕಂ ಎಕ್ಸ್ ಎಂದರೆ ರೋಮಾಂಚನಗೊಳ್ಳದ ಕರಿಯರಿಲ್ಲ. ಪ್ರತಿಯೊಬ್ಬ ಕರಿಯನ ಸ್ವಾಭಿಮಾನವನ್ನು ಬಡಿದೆಬ್ಬಿಸಿದವರು ಮಾಲ್ಕಂ ಎಕ್ಸ್. ವರ್ಣಬೇಧ, ಮತ್ತು ಪ್ರತ್ಯೇಕತಾವಾದದ ವಿರುದ್ದ ಸಿಡಿದೆದ್ದ ಮಾಲ್ಕಂ ತುಳಿತಕ್ಕೊಳಗಾದ ಕರಿಯರ ಪರ ದನಿಯೆತ್ತಿದವರು. ಅವಜ್ಞೆಗೊಳಗಾದ ದಮನಿತ ವಿಭಾಗವನ್ನು ಮುಖ್ಯ ವಾಹಿನಿಗೆ ತರಲು ಅವಿರತ ಶ್ರಮ ಪಟ್ಟವರು. ಮಾಲ್ಕಂರ ಹೋರಾಟದ ಹಾದಿ ಕ್ರಾಂತಿಯಾಗಿತ್ತು. ಅವರ ಚಳುವಳಿಯಲ್ಲಿ ತೀವ್ರತೆಯಿತ್ತು. ಮಾತಿನಲ್ಲಿ ತೀಕ್ಷ್ಣತೆಯಿತ್ತು. ಒಟ್ಟಾರೆ ಅವರ ಹೋರಾಟಕ್ಕೆ ಬಂಡಾಯದ ಆಯಾಮವಿತ್ತು. ಅದೇ ಸಮಯದಲ್ಲಿ ಅಹಿಂಸೆಯ ಹಾದಿ ತುಳಿದಿದ್ದ ಲೂಥರ್ ಕಿಂಗ್‌ರಿಗೂ ಮಾಲ್ಕಂರಿಗೂ ಮುಸುಕಿನ ಗುದ್ದಾಟವೇ ನಡೆಯುತ್ತಿದ್ದವು. ಲೂಥರ್ ನಿಲುವನ್ನು ಮಾಲ್ಕಂ ಟೀಕಿಸುತ್ತಿದ್ದರು. ಅಹಿಂಸೆಯೆಂಬುದು ಮೂರ್ಖರ ಸಿದ್ದಾಂತವೆಂದು ಜರಿದಿದ್ದರು.

ಮಾಲ್ಕಂ ಎಕ್ಸ್

ಅವರು ಇಸ್ಲಾಂ ಸ್ವೀಕರಿಸಿದ ನಂತರ ಅವರ ಹೋರಾಟದಲ್ಲಿ ಬದಲಾವಣೆ ಗೋಚರಿಸತೊಡಗಿದವು. ವಿನಯವೇ ಎದುರಾಳಿಯನ್ನು ಬಗ್ಗು ಬಡಿಯಲಿರುವ ಅಸ್ತ್ರವೆಂದು ಸಾರಿದರು. ಉಗ್ರ ನಿಲುವುಗಳು ಮೃದುಧೋರಣೆಯಾಗಿ ಪರಿವರ್ತನೆಯಾದವು. ಅವರು ಮಕ್ಕಾ ಯಾತ್ರೆಯ ನಂತರ ಕೆಲವೇ ದಿನಗಳ ಅಂತರದಲ್ಲಿ ಆಡಬೋನ್ ಬಾಲ್‌ರೂಂನಲ್ಲಿ ಭಾಷಣ ಮಾಡುತ್ತಿದ್ದಾಗ ಗುಂಡೇಟು ತಗುಲಿ ಇಹಲೋಕ ತ್ಯಜಿಸಿದರು. ನಾಡಿನ ಪರವಾಗಿ, ಜನತೆಯ ಪರವಾಗಿ, ಹೋರಾಡಿದ ಆ ಮಹಾನ್ ಚೇತನ ಅಂತ್ಯ ಕಂಡದ್ದೂ ದುಷ್ಕರ್ಮಿಗಳ ಕೈಯಿಂದಲೇ..!

ಹೀಗೆ ಕಿಡಿಗೇಡಿಗಳ ಕೈಯಿಂದ ಬದುಕು ಮುಗಿಸಿದ್ದ ಅಸಂಖ್ಯ ಕ್ರಾಂತಿಕಾರಿಗಳು, ಹೋರಾಟಗಾರರು, ಮಾನವ ಹಕ್ಕು ಚಳುವಳಿಗಾರರು, ಜನಪರ ಪತ್ರಕರ್ತರಿದ್ದಾರೆ. ವಿಶ್ವದ ಪ್ರತೀ ರಾಷ್ಟ್ರದಲ್ಲೂ ಹೋರಾಟಗಾರರ ಕೊಲೆ, ಹತ್ಯೆ ನಡೆದಿದೆ. ತಮ್ಮ ಬದುಕನ್ನೇ ನೆಲಕ್ಕಾಗಿ, ನೆಲದ ಜನರಿಗಾಗಿ ಮುಡಿಪಾಗಿಟ್ಟವರನ್ನು ಹತ್ಯೆಗೈಯ್ಯುವ ಸಮಾಜ ಎಷ್ಟೊಂದು ಕ್ರೂರ ಎಂಬ ಪ್ರಶ್ನೆ ಇಲ್ಲಿ ಸಹಜವಾಗಿಯೇ ಮೂಡುತ್ತದೆ.

ಟಿ.ಎಂ ಅನ್ಸಾರ್ ಸ‌ಅದಿ ತಂಬಿನಮಕ್ಕಿ, ಮೂಲತಃ ದ.ಕ ಜಿಲ್ಲೆಯ ಸುಳ್ಯದ ತಂಬಿನಮಕ್ಕಿಯವರು. ‘ಸಅದಿ’ ಪದವೀಧರರಾದ ಇವರು ಸದ್ಯಕ್ಕೆ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಸ್ಲಾಮೀ ರಾಜಕೀಯ ಮತ್ತು ಇತಿಹಾಸದ ಕುರಿತಾದ ಹಲವು ಲೇಖನಗಳನ್ನು ಈ ತನಕ ಬರೆದಿದ್ದಾರೆ.


ಓದಿ: ಪ್ರಜ್ವಲ ಕ್ರಾಂತಿಕಾರಿ ಚೇ ಗೆವಾರ ಹುತಾತ್ಮನಾಗುವ ಮುನ್ನ ಹೇಳಿದ ಮಾತುಗಳೇನು ಗೊತ್ತೆ?


 

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಂಗನಾ ಪೋಸ್ಟ್‌ಗಳಿಗೆ ಸೆನ್ಸಾರ್‌ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

0
ನಟಿ ಕಂಗನಾ ರಣಾವತ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಮಾಡುವ ಪೋಸ್ಟ್‌ಗಳನ್ನು ಇನ್ನು ಮುಂದೆ ಸೆನ್ಸಾರ್ ಮಾಡಬೇಕು ಎಂದು ಒತ್ತಾಯಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ ಎಂದು ಬಾರ್ ಅಂಡ್‌‌ ಬೆಂಚ್ ವರದಿ...
Wordpress Social Share Plugin powered by Ultimatelysocial
Shares