ಇತ್ತೀಚಿಗೆ ನಿಧನರಾದ ಹಿರಿಯ ಸಾಹಿತಿ ಗೀತಾ ನಾಗಭೂಷಣ ರವರಿಗೆ ನುಡಿ ನಮನ ಬರಹ.
ನನ್ನ ಶಾಲಾ ದಿನಗಳು ಅದು. ವಾರ್ಷಿಕ ರಜೆಯಲ್ಲಿ ಅಟ್ಟದ ಕಸ ಗುಡಿಸುವ ಅಭ್ಯಾಸ. ಪೊರಕೆ ಹಿಡಿದು ತಲೆಗೆ ಅಮ್ಮನ ಹಳೆ ಸೀರೆ ತುಂಡು ಬಿಗಿದು ಅಟ್ಟ ಹತ್ತಿದರೆ ಹಳೆ ಪತ್ರಿಕೆಗಳನ್ನೆಲ್ಲ ರಾಶಿ ಹಾಕಿಕೊಂಡು ಕಣ್ಣಾಡಿಸುತ್ತ ಓದಬೇಕೆನಿಸಿದ್ದನ್ನು ಎತ್ತಿಟ್ಟುಕೊಂಡು, ಉಳಿದದ್ದನ್ನೆಲ್ಲ ರದ್ದಿಗೆ ಹಾಕಲು ಜೋಡಿಸಿ ಬೀಂಜಲು ತೆಗೆದು ಧೂಳು ಹೊಡೆದು ಕೆಳಗಿಳಿಯುತ್ತಿದ್ದೆ. ಆ ದಿನಗಳಲ್ಲಿ ನಮ್ಮನೆಗೆ ತರಂಗ, ಮಂಗಳ ವಾರಪತ್ರಿಕೆ ತರಿಸುತ್ತಿದ್ದರು. ಧಾರಾವಾಹಿಗಳ ಕಾಲ. ಪತ್ರಿಕೆ ಬರುತ್ತಿದ್ದಂತೆ ಅಕ್ಕ, ಅಣ್ಣ ಇವರದೆಲ್ಲ ಸರದಿ ಮುಗಿಯದೆ ನನ್ನ ಕೈಗಂತು ಸಿಗುತ್ತಿರಲಿಲ್ಲ. ಸಿಕ್ಕಿದರೂ ಧಾರಾವಾಹಿ ಓದುವ ವಯಸ್ಸಲ್ಲ ಎಂಬ ನಂಬಿಕೆಯ ಹಿರಿಯರು. ಹಳೆಯದಾಗಿ ಅಟ್ಟ ಸೇರಿರುವುದನ್ನು ವರ್ಷದ ನಂತರ ಹೀಗೆ ಗುಡ್ಡೆ ಹಾಕಿಕೊಂಡು ಕುಕ್ಕರುಗಾಲಲ್ಲಿ ಕುಳಿತು ಪುಟ ತಿರುಗಿಸುತ್ತಿದ್ದಾಗ ಸಿಕಿದ್ದು “ಹಸಿ ಮಾಂಸ ಮತ್ತು ರಣ ಹದ್ದು”. ಒಂದಷ್ಟು ಸಾಲು ಓದುತ್ತಿದ್ದಂತೆ ಕಥೆ ಹೇಳುವ ರೀತಿ, ಭಾಷೆ, ವಸ್ತು ಎಲ್ಲವೂ ಹೊಸ ನಮೂನೆಯೇ. ದಕ್ಕಿಣಕನ್ನಡದ ಅದರಲ್ಲೂ ಗ್ರಾಮೀಣ ಭಾಗದ ಮಕ್ಕಳಾದ ನಮಗೆ ನಮ್ಮ ಇನ್ನೊಂದು ತುದಿಯಲ್ಲಿ ಈ ರೀತಿಯ ಬದುಕಿದೆ, ಜನರಿದ್ದಾರೆ ಎಂಬ ಅರಿವೂ ಇಲ್ಲದಿರುವ ದಿನಗಳವು. ಅರ್ಥೈಸಿಕೊಳ್ಳಲು ಕಷ್ಟವಾದರೂ ಅರ್ಧದಲ್ಲೆ ಕೈ ಬಿಡಲಾಗುತ್ತಿರಲಿಲ್ಲ. ರಾತ್ರಿ ಮಲಗಿದಾಗಲೂ ಕಾಡುತ್ತಿತ್ತು. ಅಂದಿನಿಂದಲೇ ನಾನು ಕಾಣದ ಆ ಸೀಮೆ, ಭಾಷೆ, ಅಲ್ಲಿಯ ಜನ ನನ್ನೆದೆಯೊಳಗೆ ಕುಳಿತುಬಿಟ್ಟರು. ಮುಂದೆ ವಲಸೆಗಳು ಜಾಸ್ತಿಯಾಗಿ ಆ ಭಾಗದ ಮಂದಿ ಜಾಸ್ತಿ ಜಾಸ್ತಿ ಕಾಣಲು ಸಿಕ್ಕಿದಾಗ ಗೀತಾ ನಾಗಭೂಷಣರ ಕಥಾ ಪಾತ್ರಗಳು ಇವರೆಲ್ಲರೊಳಗೂ ಇರಬಹುದೆಂದು ತಡಕಾಡಿದ್ದೂ ಇದೆ. ಅವರನ್ನು ಮಾತಾಡಿಸುವ ಹಂಬಲ, ಅವರ ಊರಿನ ಬದುಕಿನ ಬಗ್ಗೆ ಕೇಳುವ, ಅವರ ಕಥೆಗಳಿಗೆ ಕಿವಿಯಾಗುತ್ತ ಅವರನ್ನು ಒಳಗಿಳಿಸಿಕೊಳ್ಳುವ ಪ್ರಯತ್ನಕ್ಕೂ ಮೂಲದಲ್ಲಿ ಇದೇ ಕಾರಣವಿರಬಹುದು.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡದ ಮೊದಲ ಮಹಿಳೆ, ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಮೊದಲ ಮಹಿಳೆ – ಹಲವು ಮೊದಲುಗಳಿಗೆ ಭಾಜನರಾದ ಗೀತಾ ನಾಗಭೂಷಣ ಅಂದೊಡನೆ ನನ್ನ ಮೊದಲ ತಾಜಾ ಅನುಭವ ಇದು. ಯಾವತ್ತೂ ನಾನು ಗೀತಾ ನಾಗಭೂಷಣರನ್ನು ಮುಖತಃ ಕಾಣುವಂತಹ ಅವಕಾಶಗಳಿಗೆ ಎದುರಾದವಳಲ್ಲ. ಆದರೆ, ನನಗೆಂದೂ ಅದು ದೊಡ್ಡ ಮಟ್ಟಿನ ಕೊರತೆಯಾಗಿ ಕಾಡಲಿಲ್ಲ. ಅಕಾಡಮಿಕ್ ಆಗಿಯೂ ಸಾಹಿತ್ಯದ ವಿದ್ಯಾರ್ಥಿನಿ ಅಲ್ಲದ ನನಗೆ ನಾನಿದ್ದ ಪರಿಸರದಲ್ಲಿ ಅವರ ಬರಹಗಳು ಬಹುಕಾಲದವರೆಗೆ ಅಷ್ಟಾಗಿ ಓದಿಗೆ ದೊರೆಯಲಿಲ್ಲ. ಆದರೆ, ಅಂದಿನ ಆ ಓದು ನನ್ನೊಳಗೆ ಸಣ್ಣ ಕಿಡಿ ಹೊತ್ತಿಸಿ ಇಂದಿಗೂ ಬೆಚ್ಚಗಿರುವುದನ್ನು ಅಲ್ಲಗಳೆಯಲಾರೆ.
ತನ್ನ ಸಮಾಜವನ್ನು ಒಳ ವಿಮರ್ಶಗೆ ಒಡ್ಡಿ ಒರೆ ಹಚ್ಚಿ ಬರೆಯುವ ನಿಷ್ಪಕ್ಷಪಾತಿಯಾಗುವುದು ಸೃಜನಶೀಲ ಬರವಣಿಗೆಯ ದೊಡ್ಡ ಸವಾಲು. ಅದರಲ್ಲೂ ಬರಹಗಾರ್ತಿಯರಿಗಂತು ಇದು ಇಂದಿಗೂ ನುಂಗಲಾರದ ಉಗುಳಲಾರದ ತುತ್ತು. ಇದಕ್ಕೆ ಗೀತಾ ನಾಗಭೂಷಣರೂ ಹೊರತಲ್ಲವೆಂಬುದು ಮುಂದೆ ಒಂದಷ್ಟು ಅವರ ಬರಹಗಳು ಓದಿಗೆ ಸಿಕ್ಕಿದಾಗ ಅನಿಸಿತು. ಅವರ ಮೊದಮೊದಲ ಬರಹಗಳು ನಂತರದ ಬರಹಗಳಂತೆ ಕಾದ ಕಬ್ಬಿಣದ ಸರಳಾಗಿರಲಿಲ್ಲ. ತನ್ನ ಬದುಕಿನಲ್ಲಿ ಹೋರಾಡುತ್ತಲೇ ಅಕ್ಷರಗಳನ್ನು ಪಡೆದುಕೊಂಡರೂ, ಒಂದು ಸ್ಥಾನಮಾನ ಗಿಟ್ಟಿಸಿದರೂ ಆರಂಭದ ಬರವಣಿಗೆಯಲ್ಲಿ ಒಳ ಮನಸ್ಸಿನ ಕೋರಿಕೆಯಂತೆ ಬರೆಯಲು ಅವರಿಗೆ ಸಾಧ್ಯವಾಗಲಿಲ್ಲವೋ ಅಥವಾ ಇದು ತನ್ನ ದಾರಿಯಲ್ಲವೆಂದು ಗುರುತಿಸಿಕೊಂಡು ಒಳಮನದ ಬೇಡಿಕೆಗೆ ತೆರೆದುಕೊಳ್ಳಲು ಸಮಯ ಬೇಕಾಯಿತೋ. “ನನಗೆ ಧ್ವನಿ ಇದೆ. ಧ್ವನಿ ಇಲ್ಲದ ನನ್ನ ಹೆಣ್ಮಕ್ಕಳ, ನನ್ನ ನೆಲದ-ಜನರ ಉಮ್ಮಳವನ್ನು ನಾನು ಮುಸುಕಿಕ್ಕದೆ ಹೇಳಿ ತೀರುತ್ತೇನೆ” ಎಂದು ನಿರ್ಧರಿಸಿದ ಮೇಲೆ ಕೌಟುಂಬಿಕ ಸಂಘರ್ಷದಲ್ಲೂ ರಾಜಿಯಾಗದೆ ನಿಂತಿದ್ದು ಸ್ವ ಶಕ್ತಿಯ ಮೇಲೆ ಅವರಿಗಿದ್ದ ಆತ್ಮವಿಶ್ವಾಸವನ್ನು, ಅವರ ಆತ್ಮಬಲವನ್ನು ತೋರಿಸುತ್ತದೆ. ಹೀಗೆ ಬರೆಯಲು ತೊಡಗಿದಾಗ ಕೆಲವೊಮ್ಮೆ ಒಳಸಮಾಜದೊಂದಿಗೆ ಒಟ್ಟು ಸಮಾಜವನ್ನು ವಿಮರ್ಶಾ ಕಣ್ಣಿಂದ ನೋಡುವಾಗ ಒಳ ಸಮಾಜದ ಬಗ್ಗೆ ಪಕ್ಷಪಾತ, ಸಹಾನುಭೂತಿ ಕಳಚಿಕೊಳ್ಳಬೇಕಾಗುತ್ತಿದೆ. ಇದನ್ನು ದಾಟಿಕೊಳ್ಳುವುದೇ ಸವಾಲು. ನಿಜದಲ್ಲಿ ಲೇಖಕ ಅಥವಾ ಲೇಖಕಿ ದಾಟಿಕೊಂಡರೂ ಅದನ್ನು ಒಟ್ಟು ಸಮಾಜದ ಓದುಗರು ಗುರುತಿಸುವುದರಲ್ಲಿ ಸೋಲುವ ಸಾಧ್ಯತೆಗಳಿರುತ್ತವೆ. ಹಾಗೆಯೇ ಕೆಲವೊಮ್ಮೆ ಅತಿ ಎಂದೋ, ಪುನರಾವರ್ತನೆ ಎಂದೊ ಟೀಕೆಗೊಳಗಾಗುವುದೂ ಇದೆ. ಇದ್ಯಾವುದರಿಂದಲೂ ಗೀತಾನಾಗಭೂಷಣರು ಹೊರತಾಗಲಿಲ್ಲ. ಆದರೆ, ಕೆಲವು ಸಂದರ್ಭಗಳಲ್ಲಿ ತಾನು ಹೇಳುತ್ತಿರುವ ಬದುಕಿನ ತೀವ್ರತೆ ಮನದಟ್ಟು ಮಾಡಿಸಲು ಈ ಪುನರಾವರ್ತನೆ ಅಥವಾ ಅತಿಗಳು ಸಹಕಾರಿಯಾಗುತ್ತವೆ. ಇತಿ-ಮಿತಿ ಹಾಗು ವ್ಯಾಪ್ತಿ-ಪ್ರಾಪ್ತಿಗಳ ನಡುವೆಯೇ ವರ್ತಮಾನದ ಕನ್ನಡ ಸಾಹಿತ್ಯದಲ್ಲಿ ಗೀತಾನಾಗಭೂಷಣರು ಉಳಿಸಿದ ಧ್ವನಿ, ಆತ್ಮದ ಧ್ವನಿಗಾಗಿ ತಮ್ಮ ಬದುಕನ್ನೇ ಪ್ರಯೋಗಕ್ಕೊಡ್ಡಿದ ಕಮಲಾದಾಸ್, ಮಹಾಶ್ವೇತಾದೇವಿ, ಇಂದಿರಾ ಗೋಸ್ವಾಮಿಯಂತವರನ್ನು ನೆನಪಿಸುತ್ತದೆ.
ಸಾಹಿತ್ಯವೆಂಬುದು ಆಯಾ ಕಾಲಘಟ್ಟದ ಸೃಜನಶೀಲ ಸಂಘರ್ಷವೆಂದ ಅವರ ಮಾತಿಗೆ ಪೂರಕವಾಗಿಯೇ “ಬದುಕು” ಕಾದಂಬರಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಪಡೆಯುವ ಸಮಯದಲ್ಲಿ ತನ್ನ ಸಾಹಿತ್ಯ ರಚನೆಯ ಬಗ್ಗೆ ಅವರಾಡಿದ ಮಾತುಗಳು ಹಾಗು 76ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅದನ್ನವರು ನಿಭಾಯಿಸಿದ ರೀತಿ ಹಾಗು ಅವರೆತ್ತಿದ ಪ್ರಶ್ನೆಗಳೂ ಇದ್ದವು.
ಅಂದು ಗೀತಾನಾಗಭೂಷಣರ ಮೊದಲ ಓದಿನ ಅನುಭವಕ್ಕೆ ತೆರೆದುಕೊಳ್ಳುವಾಗ ಈ ಸಾಹಿತ್ಯದ ಮಣ್ಣಲ್ಲಿ ನನ್ನದೇ ಆದ ಪುಟ್ಟ ಉಳುಮೆ ಮಾಡುವ ಪ್ರಯತ್ನ ಮಾಡುತ್ತೇನೆಂದೂ ಕನಸೂ ಕಂಡವಳಲ್ಲ. ಇಂದು ಗೀತಾನಾಗಭೂಷಣ ನಮ್ಮಂತಹ ಕಂದಮ್ಮಗಳಿಗೆ ಒಳಮನದ ಮಾತಿನಂತೆ ಹೆಜ್ಜೆ ಇಡಲು ತಾಕತ್ ತುಂಬಿದ ಅವ್ವ ಅಂದರೆ ಉತ್ಪ್ರೇಕ್ಷೆ ಅಲ್ಲ. ಎಲ್ಲಾ ವಿಧದಲ್ಲೂ ಹುಳುಕುಗಳನ್ನು ಮುಚ್ಚಿಡುವ ಶಿಷ್ಟತೆಯ ಹಂಗು ಕಳಚಿಕೊಂಡು ಇದು ಹಾಗೆ ಮಾತ್ರ ಅಲ್ಲ ಹೀಗೂ ಇದೆ ನೋಡಿ ಎಂದು ಅವರು ತೆರೆದಿಟ್ಟ ಜಗತ್ತು, ನಾವು ನಮ್ಮ ನಮ್ಮೊಳಗಿನ ಜಗತ್ತು ನೋಡಿಕೊಳ್ಳುವುದನ್ನು ತುಸುವಾದರೂ ಕಲಿಸಿದೆ. ಕಲಿಸುತ್ತಿರುತ್ತದೆ..
- ಅನುಪಮಾ ಪ್ರಸಾದ್ ರವರು ಲೇಖಕಿಯಾಗಿದ್ದು ಇತ್ತೀಚೆಗೆ ‘ಪಕ್ಕಿಹಳ್ಳದ ಹಾದಿಗುಂಟ’ ಕಾದಂಬರಿ ಬರೆದಿದ್ದಾರೆ.


