Homeಮುಖಪುಟಧ್ವನಿ ಇಲ್ಲದ ಹೆಣ್ಮಕ್ಕಳ ಧ್ವನಿಯಾಗಿದ್ದ ಗೀತಾ ನಾಗಭೂಷಣ...

ಧ್ವನಿ ಇಲ್ಲದ ಹೆಣ್ಮಕ್ಕಳ ಧ್ವನಿಯಾಗಿದ್ದ ಗೀತಾ ನಾಗಭೂಷಣ…

- Advertisement -
- Advertisement -

ಇತ್ತೀಚಿಗೆ ನಿಧನರಾದ ಹಿರಿಯ ಸಾಹಿತಿ ಗೀತಾ ನಾಗಭೂಷಣ ರವರಿಗೆ ನುಡಿ ನಮನ ಬರಹ.

ನನ್ನ ಶಾಲಾ ದಿನಗಳು ಅದು. ವಾರ್ಷಿಕ ರಜೆಯಲ್ಲಿ ಅಟ್ಟದ ಕಸ ಗುಡಿಸುವ ಅಭ್ಯಾಸ. ಪೊರಕೆ ಹಿಡಿದು ತಲೆಗೆ ಅಮ್ಮನ ಹಳೆ ಸೀರೆ ತುಂಡು ಬಿಗಿದು ಅಟ್ಟ ಹತ್ತಿದರೆ ಹಳೆ ಪತ್ರಿಕೆಗಳನ್ನೆಲ್ಲ ರಾಶಿ ಹಾಕಿಕೊಂಡು ಕಣ್ಣಾಡಿಸುತ್ತ ಓದಬೇಕೆನಿಸಿದ್ದನ್ನು ಎತ್ತಿಟ್ಟುಕೊಂಡು, ಉಳಿದದ್ದನ್ನೆಲ್ಲ ರದ್ದಿಗೆ ಹಾಕಲು ಜೋಡಿಸಿ ಬೀಂಜಲು ತೆಗೆದು ಧೂಳು ಹೊಡೆದು ಕೆಳಗಿಳಿಯುತ್ತಿದ್ದೆ. ಆ ದಿನಗಳಲ್ಲಿ ನಮ್ಮನೆಗೆ ತರಂಗ, ಮಂಗಳ ವಾರಪತ್ರಿಕೆ ತರಿಸುತ್ತಿದ್ದರು. ಧಾರಾವಾಹಿಗಳ ಕಾಲ. ಪತ್ರಿಕೆ ಬರುತ್ತಿದ್ದಂತೆ ಅಕ್ಕ, ಅಣ್ಣ ಇವರದೆಲ್ಲ ಸರದಿ ಮುಗಿಯದೆ ನನ್ನ ಕೈಗಂತು ಸಿಗುತ್ತಿರಲಿಲ್ಲ. ಸಿಕ್ಕಿದರೂ ಧಾರಾವಾಹಿ ಓದುವ ವಯಸ್ಸಲ್ಲ ಎಂಬ ನಂಬಿಕೆಯ ಹಿರಿಯರು. ಹಳೆಯದಾಗಿ ಅಟ್ಟ ಸೇರಿರುವುದನ್ನು ವರ್ಷದ ನಂತರ ಹೀಗೆ ಗುಡ್ಡೆ ಹಾಕಿಕೊಂಡು ಕುಕ್ಕರುಗಾಲಲ್ಲಿ ಕುಳಿತು ಪುಟ ತಿರುಗಿಸುತ್ತಿದ್ದಾಗ ಸಿಕಿದ್ದು “ಹಸಿ ಮಾಂಸ ಮತ್ತು ರಣ ಹದ್ದು”. ಒಂದಷ್ಟು ಸಾಲು ಓದುತ್ತಿದ್ದಂತೆ ಕಥೆ ಹೇಳುವ ರೀತಿ, ಭಾಷೆ, ವಸ್ತು ಎಲ್ಲವೂ ಹೊಸ ನಮೂನೆಯೇ. ದಕ್ಕಿಣಕನ್ನಡದ ಅದರಲ್ಲೂ ಗ್ರಾಮೀಣ ಭಾಗದ ಮಕ್ಕಳಾದ ನಮಗೆ ನಮ್ಮ ಇನ್ನೊಂದು ತುದಿಯಲ್ಲಿ ಈ ರೀತಿಯ ಬದುಕಿದೆ, ಜನರಿದ್ದಾರೆ ಎಂಬ ಅರಿವೂ ಇಲ್ಲದಿರುವ ದಿನಗಳವು. ಅರ್ಥೈಸಿಕೊಳ್ಳಲು ಕಷ್ಟವಾದರೂ ಅರ್ಧದಲ್ಲೆ ಕೈ ಬಿಡಲಾಗುತ್ತಿರಲಿಲ್ಲ. ರಾತ್ರಿ ಮಲಗಿದಾಗಲೂ ಕಾಡುತ್ತಿತ್ತು. ಅಂದಿನಿಂದಲೇ ನಾನು ಕಾಣದ ಆ ಸೀಮೆ, ಭಾಷೆ, ಅಲ್ಲಿಯ ಜನ ನನ್ನೆದೆಯೊಳಗೆ ಕುಳಿತುಬಿಟ್ಟರು. ಮುಂದೆ ವಲಸೆಗಳು ಜಾಸ್ತಿಯಾಗಿ ಆ ಭಾಗದ ಮಂದಿ ಜಾಸ್ತಿ ಜಾಸ್ತಿ ಕಾಣಲು ಸಿಕ್ಕಿದಾಗ ಗೀತಾ ನಾಗಭೂಷಣರ ಕಥಾ ಪಾತ್ರಗಳು ಇವರೆಲ್ಲರೊಳಗೂ ಇರಬಹುದೆಂದು ತಡಕಾಡಿದ್ದೂ ಇದೆ. ಅವರನ್ನು ಮಾತಾಡಿಸುವ ಹಂಬಲ, ಅವರ ಊರಿನ ಬದುಕಿನ ಬಗ್ಗೆ ಕೇಳುವ, ಅವರ ಕಥೆಗಳಿಗೆ ಕಿವಿಯಾಗುತ್ತ ಅವರನ್ನು ಒಳಗಿಳಿಸಿಕೊಳ್ಳುವ ಪ್ರಯತ್ನಕ್ಕೂ ಮೂಲದಲ್ಲಿ ಇದೇ ಕಾರಣವಿರಬಹುದು.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡದ ಮೊದಲ ಮಹಿಳೆ, ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಮೊದಲ ಮಹಿಳೆ – ಹಲವು ಮೊದಲುಗಳಿಗೆ ಭಾಜನರಾದ ಗೀತಾ ನಾಗಭೂಷಣ ಅಂದೊಡನೆ ನನ್ನ ಮೊದಲ ತಾಜಾ ಅನುಭವ ಇದು. ಯಾವತ್ತೂ ನಾನು ಗೀತಾ ನಾಗಭೂಷಣರನ್ನು ಮುಖತಃ ಕಾಣುವಂತಹ ಅವಕಾಶಗಳಿಗೆ ಎದುರಾದವಳಲ್ಲ. ಆದರೆ, ನನಗೆಂದೂ ಅದು ದೊಡ್ಡ ಮಟ್ಟಿನ ಕೊರತೆಯಾಗಿ ಕಾಡಲಿಲ್ಲ. ಅಕಾಡಮಿಕ್ ಆಗಿಯೂ ಸಾಹಿತ್ಯದ ವಿದ್ಯಾರ್ಥಿನಿ ಅಲ್ಲದ ನನಗೆ ನಾನಿದ್ದ ಪರಿಸರದಲ್ಲಿ ಅವರ ಬರಹಗಳು ಬಹುಕಾಲದವರೆಗೆ ಅಷ್ಟಾಗಿ ಓದಿಗೆ ದೊರೆಯಲಿಲ್ಲ. ಆದರೆ, ಅಂದಿನ ಆ ಓದು ನನ್ನೊಳಗೆ ಸಣ್ಣ ಕಿಡಿ ಹೊತ್ತಿಸಿ ಇಂದಿಗೂ ಬೆಚ್ಚಗಿರುವುದನ್ನು ಅಲ್ಲಗಳೆಯಲಾರೆ.

ತನ್ನ ಸಮಾಜವನ್ನು ಒಳ ವಿಮರ್ಶಗೆ ಒಡ್ಡಿ ಒರೆ ಹಚ್ಚಿ ಬರೆಯುವ ನಿಷ್ಪಕ್ಷಪಾತಿಯಾಗುವುದು ಸೃಜನಶೀಲ ಬರವಣಿಗೆಯ ದೊಡ್ಡ ಸವಾಲು. ಅದರಲ್ಲೂ ಬರಹಗಾರ್ತಿಯರಿಗಂತು ಇದು ಇಂದಿಗೂ ನುಂಗಲಾರದ ಉಗುಳಲಾರದ ತುತ್ತು. ಇದಕ್ಕೆ ಗೀತಾ ನಾಗಭೂಷಣರೂ ಹೊರತಲ್ಲವೆಂಬುದು ಮುಂದೆ ಒಂದಷ್ಟು ಅವರ ಬರಹಗಳು ಓದಿಗೆ ಸಿಕ್ಕಿದಾಗ ಅನಿಸಿತು. ಅವರ ಮೊದಮೊದಲ ಬರಹಗಳು ನಂತರದ ಬರಹಗಳಂತೆ ಕಾದ ಕಬ್ಬಿಣದ ಸರಳಾಗಿರಲಿಲ್ಲ. ತನ್ನ ಬದುಕಿನಲ್ಲಿ ಹೋರಾಡುತ್ತಲೇ ಅಕ್ಷರಗಳನ್ನು ಪಡೆದುಕೊಂಡರೂ, ಒಂದು ಸ್ಥಾನಮಾನ ಗಿಟ್ಟಿಸಿದರೂ ಆರಂಭದ ಬರವಣಿಗೆಯಲ್ಲಿ ಒಳ ಮನಸ್ಸಿನ ಕೋರಿಕೆಯಂತೆ ಬರೆಯಲು ಅವರಿಗೆ ಸಾಧ್ಯವಾಗಲಿಲ್ಲವೋ ಅಥವಾ ಇದು ತನ್ನ ದಾರಿಯಲ್ಲವೆಂದು ಗುರುತಿಸಿಕೊಂಡು ಒಳಮನದ ಬೇಡಿಕೆಗೆ ತೆರೆದುಕೊಳ್ಳಲು ಸಮಯ ಬೇಕಾಯಿತೋ. “ನನಗೆ ಧ್ವನಿ ಇದೆ. ಧ್ವನಿ ಇಲ್ಲದ ನನ್ನ ಹೆಣ್ಮಕ್ಕಳ, ನನ್ನ ನೆಲದ-ಜನರ ಉಮ್ಮಳವನ್ನು ನಾನು ಮುಸುಕಿಕ್ಕದೆ ಹೇಳಿ ತೀರುತ್ತೇನೆ” ಎಂದು ನಿರ್ಧರಿಸಿದ ಮೇಲೆ ಕೌಟುಂಬಿಕ ಸಂಘರ್ಷದಲ್ಲೂ ರಾಜಿಯಾಗದೆ ನಿಂತಿದ್ದು ಸ್ವ ಶಕ್ತಿಯ ಮೇಲೆ ಅವರಿಗಿದ್ದ ಆತ್ಮವಿಶ್ವಾಸವನ್ನು, ಅವರ ಆತ್ಮಬಲವನ್ನು ತೋರಿಸುತ್ತದೆ. ಹೀಗೆ ಬರೆಯಲು ತೊಡಗಿದಾಗ ಕೆಲವೊಮ್ಮೆ ಒಳಸಮಾಜದೊಂದಿಗೆ ಒಟ್ಟು ಸಮಾಜವನ್ನು ವಿಮರ್ಶಾ ಕಣ್ಣಿಂದ ನೋಡುವಾಗ ಒಳ ಸಮಾಜದ ಬಗ್ಗೆ ಪಕ್ಷಪಾತ, ಸಹಾನುಭೂತಿ ಕಳಚಿಕೊಳ್ಳಬೇಕಾಗುತ್ತಿದೆ. ಇದನ್ನು ದಾಟಿಕೊಳ್ಳುವುದೇ ಸವಾಲು. ನಿಜದಲ್ಲಿ ಲೇಖಕ ಅಥವಾ ಲೇಖಕಿ ದಾಟಿಕೊಂಡರೂ ಅದನ್ನು ಒಟ್ಟು ಸಮಾಜದ ಓದುಗರು ಗುರುತಿಸುವುದರಲ್ಲಿ ಸೋಲುವ ಸಾಧ್ಯತೆಗಳಿರುತ್ತವೆ. ಹಾಗೆಯೇ ಕೆಲವೊಮ್ಮೆ ಅತಿ ಎಂದೋ, ಪುನರಾವರ್ತನೆ ಎಂದೊ ಟೀಕೆಗೊಳಗಾಗುವುದೂ ಇದೆ. ಇದ್ಯಾವುದರಿಂದಲೂ ಗೀತಾನಾಗಭೂಷಣರು ಹೊರತಾಗಲಿಲ್ಲ. ಆದರೆ, ಕೆಲವು ಸಂದರ್ಭಗಳಲ್ಲಿ ತಾನು ಹೇಳುತ್ತಿರುವ ಬದುಕಿನ ತೀವ್ರತೆ ಮನದಟ್ಟು ಮಾಡಿಸಲು ಈ ಪುನರಾವರ್ತನೆ ಅಥವಾ ಅತಿಗಳು ಸಹಕಾರಿಯಾಗುತ್ತವೆ. ಇತಿ-ಮಿತಿ ಹಾಗು ವ್ಯಾಪ್ತಿ-ಪ್ರಾಪ್ತಿಗಳ ನಡುವೆಯೇ ವರ್ತಮಾನದ ಕನ್ನಡ ಸಾಹಿತ್ಯದಲ್ಲಿ ಗೀತಾನಾಗಭೂಷಣರು ಉಳಿಸಿದ ಧ್ವನಿ, ಆತ್ಮದ ಧ್ವನಿಗಾಗಿ ತಮ್ಮ ಬದುಕನ್ನೇ ಪ್ರಯೋಗಕ್ಕೊಡ್ಡಿದ ಕಮಲಾದಾಸ್, ಮಹಾಶ್ವೇತಾದೇವಿ, ಇಂದಿರಾ ಗೋಸ್ವಾಮಿಯಂತವರನ್ನು ನೆನಪಿಸುತ್ತದೆ.

ಸಾಹಿತ್ಯವೆಂಬುದು ಆಯಾ ಕಾಲಘಟ್ಟದ ಸೃಜನಶೀಲ ಸಂಘರ್ಷವೆಂದ ಅವರ ಮಾತಿಗೆ ಪೂರಕವಾಗಿಯೇ “ಬದುಕು” ಕಾದಂಬರಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಪಡೆಯುವ ಸಮಯದಲ್ಲಿ ತನ್ನ ಸಾಹಿತ್ಯ ರಚನೆಯ ಬಗ್ಗೆ ಅವರಾಡಿದ ಮಾತುಗಳು ಹಾಗು 76ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅದನ್ನವರು ನಿಭಾಯಿಸಿದ ರೀತಿ ಹಾಗು ಅವರೆತ್ತಿದ ಪ್ರಶ್ನೆಗಳೂ ಇದ್ದವು.

ಅಂದು ಗೀತಾನಾಗಭೂಷಣರ ಮೊದಲ ಓದಿನ ಅನುಭವಕ್ಕೆ ತೆರೆದುಕೊಳ್ಳುವಾಗ ಈ ಸಾಹಿತ್ಯದ ಮಣ್ಣಲ್ಲಿ ನನ್ನದೇ ಆದ ಪುಟ್ಟ ಉಳುಮೆ ಮಾಡುವ ಪ್ರಯತ್ನ ಮಾಡುತ್ತೇನೆಂದೂ ಕನಸೂ ಕಂಡವಳಲ್ಲ. ಇಂದು ಗೀತಾನಾಗಭೂಷಣ ನಮ್ಮಂತಹ ಕಂದಮ್ಮಗಳಿಗೆ ಒಳಮನದ ಮಾತಿನಂತೆ ಹೆಜ್ಜೆ ಇಡಲು ತಾಕತ್ ತುಂಬಿದ ಅವ್ವ ಅಂದರೆ ಉತ್ಪ್ರೇಕ್ಷೆ ಅಲ್ಲ. ಎಲ್ಲಾ ವಿಧದಲ್ಲೂ ಹುಳುಕುಗಳನ್ನು ಮುಚ್ಚಿಡುವ ಶಿಷ್ಟತೆಯ ಹಂಗು ಕಳಚಿಕೊಂಡು ಇದು ಹಾಗೆ ಮಾತ್ರ ಅಲ್ಲ ಹೀಗೂ ಇದೆ ನೋಡಿ ಎಂದು ಅವರು ತೆರೆದಿಟ್ಟ ಜಗತ್ತು, ನಾವು ನಮ್ಮ ನಮ್ಮೊಳಗಿನ ಜಗತ್ತು ನೋಡಿಕೊಳ್ಳುವುದನ್ನು ತುಸುವಾದರೂ ಕಲಿಸಿದೆ. ಕಲಿಸುತ್ತಿರುತ್ತದೆ..

  • ಅನುಪಮಾ ಪ್ರಸಾದ್ ರವರು ಲೇಖಕಿಯಾಗಿದ್ದು ಇತ್ತೀಚೆಗೆ ‘ಪಕ್ಕಿಹಳ್ಳದ ಹಾದಿಗುಂಟ’ ಕಾದಂಬರಿ ಬರೆದಿದ್ದಾರೆ.

ಇದನ್ನು ಓದಿ: ಗೀತಾ ನಾಗಭೂಷಣ ತಮ್ಮ ಪುಸ್ತಕಗಳ ಜೊತೆ ಸದಾ ಜೀವಂತವಾಗಿ ಇರುತ್ತಾರೆ: ಶ್ರದ್ಧಾಂಜಲಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಾಸಿಕ್‌| ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರು

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಫಾದ್ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ಖಂಡಿಸಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿದ ಪ್ರತಿಭಟನಾಕಾರರ ಗುಂಪೊಂದು ನಗರ ಪಂಚಾಯತ್ ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು...

ವಿವಾಹಿತೆ ಮೇಲೆ ಅತ್ಯಾಚಾರ ಆರೋಪ : ಬಿಜೆಪಿ ಮಾಜಿ ಶಾಸಕನ ವಿರುದ್ಧ ಎಫ್‌ಐಆರ್

ಗನ್‌ ಪಾಯಿಂಟ್‌ ಇಟ್ಟು ಬೆದರಿಸಿ 22 ವರ್ಷದ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಹಾರಾಷ್ಟ್ರದ ಬಿಜೆಪಿ ಮಾಜಿ ಶಾಸಕ ಮತ್ತು ವಜಾಗೊಂಡಿರುವ ಪೊಲೀಸ್ ಸಿಬ್ಬಂದಿಯೊಬ್ಬರ ವಿರುದ್ಧ ಗುರುವಾರ (ಸೆ.17)...

ಬ್ರಿಕ್ಸ್ ಶೃಂಗಸಭೆಯಲ್ಲಿ ಸಂಪೂರ್ಣ ಸಸ್ಯಹಾರಿ ಮೆನು; ಶಿವಸೇನೆ ತೀವ್ರ ವಾಗ್ದಾಳಿ

ದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ವಿದೇಶಿ ಪ್ರತಿನಿಧಿಗಳಿಗೆ ಕೇವಲ ಸಸ್ಯಹಾರಿ ಆಹಾರವನ್ನು ಬಡಿಸಿರುವುದನ್ನು ಖಂಡಿಸಿರುವ ಶಿವಸೇನೆ (ಯುಬಿಟಿ) ಗುರುವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಇದು ಅಂತರರಾಷ್ಟ್ರೀಯ ಅತಿಥಿಗಳ ಮೇಲೆ...

ದೆಹಲಿ ಎಸ್‌ಐಆರ್: ಮತದಾರರ ಪಟ್ಟಿಯಿಂದ ಹೆಸರುಗಳ ಡಿಲೀಟ್ ಪ್ರಶ್ನಿಸಿ ಅರ್ಜಿ; ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ದೆಹಲಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನದಡಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 21ರಂದು ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಗೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್...

ಕೇರಳ | ಮಿತಿಗಿಂತ ಹೆಚ್ಚು ಮದ್ಯ ಸಂಗ್ರಹ ಆರೋಪ : ರಿಪೋರ್ಟರ್ ಟಿವಿ ಎಂಡಿ ಆಂಟೋ ಆಗಸ್ಟಿನ್ ಬಂಧನ

ಕೇರಳ ಅಬಕಾರಿ ಇಲಾಖೆಯು ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆಂಟೋ ಆಗಸ್ಟಿನ್ ಅವರನ್ನು ಗುರುವಾರ (ಸೆ.17) ಮುಂಜಾನೆ ಬಂಧಿಸಿದೆ. ಎರ್ನಾಕುಲಂನಲ್ಲಿರುವ ಸುದ್ದಿ ವಾಹಿನಿಯ ಕಚೇರಿಯಿಂದ ಮುಂಜಾನೆ ಸುಮಾರು...

ದೆಹಲಿ: ಜಾಮೀನು ಸಿಕ್ಕ ಬೆನ್ನಲ್ಲೇ ಸ್ವತಂತ್ರ ಭಾರದ್ವಾಜ್ ವಿಡಿಯೋ ವೈರಲ್; ಷರತ್ತು ಉಲ್ಲಂಘನೆ ಆರೋಪ!

ಜಂತರ್ ಮಂತರ್‌ನಲ್ಲಿ ದಲಿತ ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಜಾದ್ ಅವರ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತರಾಗಿದ್ದ ಹಿಂದುತ್ವ ಪ್ರಭಾವಿ ಸ್ವತಂತ್ರ ಭಾರದ್ವಾಜ್ ಅವರಿಗೆ ದೆಹಲಿ ನ್ಯಾಯಾಲಯ ಮೂರು ವಾರಗಳ ಮಧ್ಯಂತರ...

ಸರ್ಕಾರದ ಹಸ್ತಕ್ಷೇಪದಿಂದ ಕ್ಯಾಂಪಸ್ ನಿರ್ಬಂಧದವರೆಗೆ: ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯದ ಕುಸಿತ ಬಯಲಿಗೆಳೆದ ಜಾಗತಿಕ ವರದಿ 

ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯವು ತೀವ್ರವಾಗಿ ನಿರ್ಬಂಧಿತವಾಗಿದ್ದು, ಉನ್ನತ ಶಿಕ್ಷಣ ಸಂಸ್ಥೆಗಳ ಮೇಲೆ ಸರ್ಕಾರದ ಹೆಚ್ಚುತ್ತಿರುವ ಹಸ್ತಕ್ಷೇಪ, ಕ್ಯಾಂಪಸ್‌ಗಳಲ್ಲಿ ಶೈಕ್ಷಣಿಕ ಮತ್ತು ರಾಜಕೀಯ ಅಭಿವ್ಯಕ್ತಿಯ ಮೇಲಿನ ನಿರ್ಬಂಧಗಳು, ವಿದ್ವಾಂಸರು ಹಾಗೂ ವಿದ್ಯಾರ್ಥಿಗಳ ವಿರುದ್ಧದ ಕ್ರಮಗಳು...

ಬಿಹಾರ| ದಲಿತ ಯುವಕನ ವಿವಾಹವಾದ ಯುವತಿ; ಮಗಳ ಸಾಂಕೇತಿಕ ಅಂತ್ಯಕ್ರಿಯೆ ನಡೆಸಿದ ಪೋಷಕರು

ತಮ್ಮ 18 ವರ್ಷದ ಮಗಳು ಅಂತರ್ಜಾತಿ ವಿವಾಹವಾಗಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು, ಆಕೆಗೆ ಸಾಂಕೇತಿಕವಾಗಿ ಅಂತ್ಯಕ್ರಿಯೆ ನಡೆಸಿದ ಘಟನೆ ಬಿಹಾರದ ಪೂರ್ಣಿಯಾದಲ್ಲಿ ಬೆಳಕಿಗೆ ಬಂದಿದೆ. ಯುವತಿಯ ಫೋಟೋವಿರುವ ಪ್ರತಿಕೃತಿಯನ್ನು ಸಿದ್ಧಪಡಿಸಿ ಊರಿನಲ್ಲಿ ಶವಯಾತ್ರೆ...

ಸ್ವಇಚ್ಛೆಯಿಂದ ಇಸ್ಲಾಂ ಸ್ವೀಕಾರ : ಆಯುಷ್ ಮಲಿಕ್‌ರನ್ನು ಗೃಹಬಂಧನದಿಂದ ಬಿಡುಗಡೆಗೊಳಿಸಿದ ಅಲಹಾಬಾದ್ ಹೈಕೋರ್ಟ್

ತಾನು ಸ್ವಇಚ್ಛೆಯಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದಾಗಿ ಮತ್ತು ಆ ನಂತರ ತನ್ನ ತಂದೆಯೇ ತನಗೆ ಬೆದರಿಕೆ ಹಾಕಿ, ಕಾನೂನುಬಾಹಿರವಾಗಿ ಗೃಹಬಂಧನದಲ್ಲಿ ಇರಿಸಿದ್ದರು ಎಂದು ಆರೋಪಿಸಿದ್ದ ಆಯುಷ್ ಮಲಿಕ್ ಎಂಬ 31 ವರ್ಷದ ಯುವಕನನ್ನು...

ಬಿಜ್ನೋರ್‌ನಲ್ಲಿ ಮುಸ್ಲಿಂ ಶಿಕ್ಷಕನ ಗುಂಡಿಕ್ಕಿ ಹತ್ಯೆ: ‘ಲವ್ ಜಿಹಾದ್’ ಆರೋಪ; ವೈಯಕ್ತಿಕ ದ್ವೇಷದ ಬಗ್ಗೆಯೂ ಪೊಲೀಸರಿಂದ ತನಿಖೆ 

ಬಿಜ್ನೋರ್: ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ 43 ವರ್ಷದ ಮುಸ್ಲಿಂ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನೊಬ್ಬರನ್ನು ರೈತನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಶಿಕ್ಷಕ ನೌಶಾದ್ ಅಹ್ಮದ್ ಅವರು ‘ಲವ್ ಜಿಹಾದ್’...