Homeಮುಖಪುಟಗೀತಾ ನಾಗಭೂಷಣ ತಮ್ಮ ಪುಸ್ತಕಗಳ ಜೊತೆ ಸದಾ ಜೀವಂತವಾಗಿ ಇರುತ್ತಾರೆ: ಶ್ರದ್ಧಾಂಜಲಿ

ಗೀತಾ ನಾಗಭೂಷಣ ತಮ್ಮ ಪುಸ್ತಕಗಳ ಜೊತೆ ಸದಾ ಜೀವಂತವಾಗಿ ಇರುತ್ತಾರೆ: ಶ್ರದ್ಧಾಂಜಲಿ

ನಮ್ಮಿಂದ ಅವರು ದೂರವಾಗಿರುವ ಈ ಸಂದರ್ಭದಲ್ಲಿ ಅವರ ಬಹುಮುಖ್ಯ ಕೃತಿಗಳು ಚರ್ಚೆಗೆ ಒಳಪಡಿಸುವುದೆ ಅವರಿಗೆ ನಾವು ಸಲ್ಲಿಸಬೇಕಾದ ನಿಜವಾದ ಗೌರವ ಆಗಿದೆ.

- Advertisement -
- Advertisement -

ನಾನಾಗ ಪಿಯುಸಿ ಓದುತ್ತಿದ್ದೆ. ಮುಂಜಾನೆ 8 ಗಂಟೆಗೆ ಕಾಲೇಜು ಇರುತ್ತಿದ್ದರಿಂದ ಬೇಗನೆ ಎದ್ದು ಹೊರಡಬೇಕಿತ್ತು. ಗೀತಾ ನಾಗಭೂಷಣ ಅವರ ಮನೆ ಮುಂದೆ ಹಾಯ್ದು ಹೋಗುತ್ತಿದ್ದೆವು. ಫಸ್ಟ್ ಪಿಯುಸಿ ಇದ್ದಾಗ ಇವರ್ಯಾರು ಅಂಬೋದು ನಮಗೆ ಗೊತ್ತಿರಲಿಲ್ಲ. ಟಿ.ವಿ ನೋಡುತ್ತಾ ಕುಳಿತುಕೊಂಡಿರುತ್ತಿದ್ದ ವಯಸ್ಸಾದ ಅಜ್ಜಿ ಈ ನಾಡಿನ ಬಹುದೊಡ್ಡ ಬರಹಗಾರ್ತಿ ಅಂತ ಗೊತ್ತಾಗಿದ್ದು, ಪಿಯುಸಿ ಮುಗಿಸುವ ಹೊತ್ತಿಗೆ. ಹೈಸ್ಕೂಲನಲ್ಲಿ ಪಠ್ಯಕ್ಕೆ ಇದ್ದ ಅವರ “ಅವ್ವ” ಕಥೆ ಓದಿದ ನೆನಪು . ಅವರಿಗೆ ಪರಿಚಯವಿಲ್ಲದ ನಾನು ಒಂದು ದಿನ ಅವರ ಮನೆಗೆ ಹೋಗಿ ಮೇಡಂ ಅವರಿಗೆ ನನ್ನ ಹೆಸರು, ಕಾಲೇಜು ಪರಿಚಯ ಮಾಡಿಸಿ “ನಿಮ್ಮ ಬುಕ್ಸ್ ಬೇಕಾಗಿತ್ತು ನಮ್ಮ ಕಾಲೇಜಿನ ಲೈಬ್ರರಿಗೆ ಫ್ರೀಯಾಗಿ ಕೊಡೋಕೆ ಸಾಧ್ಯನಾ?” ಅಂತ ಕೇಳಿದೆ. ಅವರು ತುಸು ಯೋಚಿಸಿ, “ನಿಮ್ಮ ಪ್ರಿನ್ಸಿಪಾಲರಿಂದ ಒಂದು ಲೆಟರ್ ತಗೊಂಡ ಬಾರಪ್ಪ ಕೊಡ್ತೀನಿ” ಅಂದ್ರು. ಮರುದಿನ ಲೆಟರ್ ಬರೆಸಿಕೊಂಡು ಹೋಗಿ ಅವರ ಕೈಗಿಟ್ಟೆ ಅವರು ಮರುಮಾತನಾಡದೆ ಮುಗುಳ್ನಗುತ್ತಲೆ ಪುಸ್ತಕದ ಹೊರೆ ಕೈಗಿಟ್ಟರು. ಅದು ಅವರ ಜೊತೆಗಿನ ನನ್ನ ಮೊದಲ ಭೇಟಿ.

ಮುಂದೆ ಅವರ ‘ಬದುಕು’ ಕಾದಂಬರಿ ಓದಿದೆ. ಆವಾಗ ಅರ್ಥ ಆಯ್ತು – ನಾ ಭೇಟಿ ಮಾಡಿದ್ದು, ನಮ್ಮ ಕಣ್ಣೆದುರೆ ಕೂರುತ್ತಿದ್ದ ಅಜ್ಜಿ ಅಸಾಮಾನ್ಯ ಬರಹಗಾರ್ತಿ ಅಂತ. ಆಮೇಲೆ ನನ್ನಲ್ಲಿ ಇದ್ದ ಬೃಹತ್ ಕಾದಂಬರಿ ‘ಬದುಕು’ ಹೊತ್ತುಕೊಂಡು ಹೋಗಿ, ಅವರಿಂದ ಆ ಪುಸ್ತಕದ ಮೇಲೆ ಆಟೋಗ್ರಾಫ್ ಹಾಕೊಂಡು ಬಂದೆ.

ನಮ್ಮಿಂದ ಅವರು ದೂರವಾಗಿರುವ ಈ ಸಂದರ್ಭದಲ್ಲಿ ಅವರ ಬಹುಮುಖ್ಯ ಕೃತಿಗಳು ಚರ್ಚೆಗೆ ಒಳಪಡಿಸುವುದೆ ಅವರಿಗೆ ನಾವು ಸಲ್ಲಿಸಬೇಕಾದ ನಿಜವಾದ ಗೌರವ ಆಗಿದೆ.

“ದಿನಕ್ಕೊಮ್ಮೆ ಹುಟ್ಟು ದಿನಕ್ಕೊಮ್ಮೆ ಸಾವು ಅನ್ನೋಹಂಗ ಸೂರ್ಯ ಚಂದ್ರಾಮರು ಹುಟ್ಟುತ್ತಿದ್ದರು…ಸಾಯುತ್ತಿದ್ದರು. ಹಿಂಗೇ ಹುಟ್ಟು ಸಾವುಗಳ ಕೈ ಹಿಡಿದುಕೊಂಡೇ ಮಂದಿಯ ಬದುಕು ಮುಂದೆ ಮುಂದೆ ನಡೆಯುತ್ತಿತ್ತು. ಎಲ್ಲಿಗೆ ಹೋಗಿ ತಲುಪಬೇಕು ಅನ್ನುವ ಗುರಿ ಗೊತ್ತಿರಲಿಲ್ಲವಾದರೂ ನಡೆಯುವುದೊಂದೇ ತನ್ನ ಗುರಿಯೆನ್ನುವಂತೆ ಹೊತ್ತು ನಡೆಯುತ್ತಲೇ ಇತ್ತು ತನ್ನದೇ ಗತಿಯಿಂದ !” ಬದುಕು (ಕಾದಂಬರಿ) – ಪುಟ ನಂ -517

‘ಬದುಕು’ ಕಾದಂಬರಿಯಲ್ಲಿ ಹೀಗೆ ಬರೆದಿರುವ ಗೀತಾ ನಾಗಭೂಷಣ ಅವರು ಸಾವಿನ ಕೈಹಿಡಿದು ಎಲ್ಲಿಗೋ ಹೋಗಿದ್ದಾರೆ. ಆದರೆ ಅವರು ನಮ್ಮ ಕೈಗಿತ್ತ ‘ಬದುಕು’ ಓದುವುದು, ಅದರೊಂದಿಗೆ ಸಂವಾದಿಸುವುದು ಈ ಹೊತ್ತಿನ ಜರೂರತ್ತು. ಸದಾ ಅವರು ಜಾತಿಯ ಶೋಷಣೆಗಳನ್ನು, ಸ್ತ್ರೀ ದೌರ್ಜನ್ಯಗಳನ್ನು ತಮ್ಮ ಬರಹದ ಮೂಲಕ ವಿರೋಧಿಸುತ್ತಲೇ ಬಂದಿದ್ದಾರೆ. ಉತ್ತರ ಕರ್ನಾಟಕದಲ್ಲಿ ಆಚರಣೆಯಲ್ಲಿರುವ ಅನಿಷ್ಟ ಪದ್ಧತಿಗಳಿಗೆ ತಮ್ಮ ಬರಹದ ಮೂಲಕ ಕನ್ನಡಿ ಹಿಡಿದು ಹೊರ ನಾಡಿಗೆ ಪರಿಚಯಿಸುವ ಕೆಲಸ ಸಹ ಮಾಡಿದ್ದಾರೆ. ಮುಖ್ಯವಾಗಿ ಅವರು ಬಳಸಿಕೊಂಡಿರುವ ನೆಲದ ಭಾಷೆ ನಮ್ಮೆಲ್ಲರಿಗೂ ನಿಜವಾಗಿಯೂ ಸ್ಪೂರ್ತಿ ಆಗಬೇಕಿದೆ.

ಕೆಲವು ತಿಂಗಳ ಕೆಳಗೆ ಆತ್ಮೀಯ ಗೆಳೆಯರೊಬ್ಬರು ಹೇಳಿದ ಕಾರಣಕ್ಕೆ ಒಂದಿಷ್ಟು ಪ್ರಶ್ನೆಗಳು ಬರೆದುಕೊಂಡು ಅವರ ಮನೆಗೆ ಒಂದು ಸಣ್ಣ ಸಂದರ್ಶನಕ್ಕಾಗಿ ಹೋಗಿದೆ. ” ಹೆಲ್ತ್ ಸರಿಯಲ್ಲ ಈಗ ಯಾವ ಇಂಟರ್ವ್ಯೂ ಸಹ ಕೊಡ್ತಿಲ್ಲಪ್ಪ” ಅಂದ್ರು. ಆವತ್ತು ತುಸು ಬೇಜಾರು ಮಾಡಿಕೊಂಡೆ ಹೊರ ಬಂದವನ ಕೈಯಲ್ಲಿನ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಸಿ ಹೋದ ಮೇಡಂ ಅವರು ತಮ್ಮ ಕಾದಂಬರಿಯಲ್ಲಿ ಒಂದುದು ಕಡೆ ಹೀಗೆ ಬರೆಯುತ್ತಾರೆ,
“ಹಣ್ಣೆಲಿ ಉದುರಿ ಹೊಸಾ ಎಲಿ ಚಿಗುರೊದು ಆ ಭಗವಂತ ಹಾಕಿದ ನೇಮದಾ. ಸತ್ತಾಗಿನ ದುಕ್ಕ, ಹಡದಾಗಿನ ಬ್ಯಾನಿ ನೆನಪಿಟ್ಟುಕೊಂಡರ ಈ ದುನಿಯಾದಾರೀನೇ ನಡೀತಿರಲಿಲ್ಲ”…. ಬದುಕು(ಕಾದಂಬರಿ) ಪುಟ ನಂ -428.

ಸದಾ ಹೊಸತನಕ್ಕೆ ತುಡಿಯುತ್ತಿದ್ದ ಅವರ ಬರಹ ನಮ್ಮೊಳಗೆ ಇನ್ನಷ್ಟು ಹೊಸ ಬೆಳಕಿಂಡಿಗಳು ತೆರೆದಿದೆ. ಒಬ್ಬ ಬರಹಗಾರ ಎಂದಿಗೂ ಸಾಯುವುದಿಲ್ಲ. ಪುಸ್ತಕಗಳ ಜೊತೆ ಸದಾ ಜೀವಂತವಾಗಿ ಉಸಿರಾಡುತ್ತಲೇ ಇರುತ್ತಾರೆ. ಓದುಗರೊಂದಿಗೆ ಮಾತಾಡುತ್ತಲೇ ಇರುತ್ತಾರೆ.


‘ಯುದ್ಧ ಮತ್ತು ಮಕ್ಕಳು’: ಪೋಷಕರು ಓದಬೇಕಾದ ಇಂದಿನ ಕಾಲಕ್ಕೂ ಪ್ರಸ್ತುತ ಕೃತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಗೀತಾ ನಾಗಭೂಷಣರ ‘ಬದುಕು’ ಕನ್ನಡದ ಅತ್ಯುತ್ತಮ ಕಾದಂಬರಿಗಳಲ್ಲಿ ಒಂದು, ಎಂಬುದು ನನ್ನ ಅಭಿಪ್ರಾಯ.

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...