ನಿರ್ಭೀತ ಹಾಗೂ ಗುಣಮಟ್ಟದ ಪತ್ರಿಕೋದ್ಯಮಕ್ಕೆ ಹೆಸರಾದ, ಅಭಿವ್ಯಕ್ತಿಯ ಗಟ್ಟಿ ದನಿಯಾಗಿ, ಹಣಕಾಸು ಲಾಭದಾಯಕ ಗುರಿಗಳಿಲ್ಲದೆ ಪತ್ರಿಕೋದ್ಯಮದಲ್ಲಿ ಹೊಸ ಭಾಷ್ಯ ಬರೆದಿರುವ ಭಾರತದ “ದಿ ವೈರ್” ಸುದ್ದಿ ಜಾಲತಾಣವು, ಅಂತಾರಾಷ್ಟ್ರೀಯ ಪತ್ರಿಕಾ ಸಂಸ್ಥೆ (ಐಪಿಐ) ನೀಡುವ “2021 ಫ್ರೀ ಮೀಡಿಯಾ ಪೊಯೊನೀರ್ ಪ್ರಶಸ್ತಿ”ಗೆ ಭಾಜನವಾಗಿದೆ.
ಒಂದು ದೇಶ ಅಥವಾ ಪ್ರದೇಶದಲ್ಲಿ ಸ್ವತಂತ್ರವಾಗಿ ಪತ್ರಿಕೋದ್ಯಮ ನಡೆಸುತ್ತಾ, ಜನರಿಗೆ ನಿಖರ ಸುದ್ದಿಗಳನ್ನು ನೀಡುತ್ತಿರುವ ಸಂಸ್ಥೆಗಳನ್ನು ಗುರುತಿಸಲೆಂದು 1996ರಲ್ಲಿ ಐಪಿಐ ಈ ಪ್ರಶಸ್ತಿಯನ್ನು ಸ್ಥಾಪಿಸಿದೆ. ಕಳೆದ ಆರು ವರ್ಷಗಳಿಂದ ಈ ಪ್ರಶಸ್ತಿಯನ್ನು ಕೋಪೆನ್‌ಹೆಗನ್ ಮೂಲದ ಇಂಟರ್ ನ್ಯಾಷನಲ್ ಮೀಡಿಯಾ ಸಪೋರ್ಟ್ (ಐಎಂಎಸ್) ಸಹಭಾಗಿತ್ವದಲ್ಲಿ ನೀಡಲಾಗುತ್ತಿದೆ.
? IPI and @forfreemedia are proud to announce India's @thewire_in as the recipient of the 2021 Free Media Pioneer Award!
A digital news leader, The Wire's commitment to independent journalism is a global model. Congratulations!
➡️ https://t.co/BNdrAxPuz1 pic.twitter.com/k5oci1OnUJ
— IPI – The Global Network for Press Freedom (@globalfreemedia) September 1, 2021
ಆಸ್ಟ್ರೇಲಿಯದ ವಿಯೆನ್ನದಲ್ಲಿ ಐಪಿಐ ವಾರ್ಷಿಕ ಮಹೋತ್ಸವ (ವರ್ಡ್ ಕಾಂಗ್ರೆಸ್) ಸೆ.16ರಂದು ನಡೆಯಲಿದ್ದು, ಈ ಬಾರಿಯ ಪೊಯೊನೀರ್ ಪ್ರಶಸ್ತಿಯನ್ನು ಐಪಿಎಸ್‌ನ ವರ್ಡ್ ಫ್ರೀಡಮ್ ಹಿರೋ ಪ್ರಶಸ್ತಿಯೊಂದಿಗೆ ಪ್ರದಾನ ಮಾಡುತ್ತಿರುವುದು ವಿಶೇಷ.
“ದಿ ವೈರ್” ಹುಟ್ಟಿದ ಬಗೆ
ವಿಶೇಷ ಪ್ರಶಸ್ತಿಗೆ ಭಾಜನವಾಗಿರುವ “ದಿ ವೈರ್” 2015ರಲ್ಲಿ ಸ್ಥಾಪನೆಯಾಯಿತು. ದಶಕಗಳ ಕಾಲ ಪತ್ರಿಕೋದ್ಯಮದಲ್ಲಿ ಪಳಗಿದ್ದ ಸಿದ್ಧಾರ್ಥ್ ವರದರಾಜನ್, ಎಂ.ಕೆ.ವೇಣು ಮತ್ತು ಸಿದ್ಧಾರ್ಥ್ ಭಾಟಿಯಾ ದಿ ವೈರ್‌ನ ಸಂಸ್ಥಾಪಕರು. ಕಾರ್ಪೊರೇಟ್ ಪ್ರಧಾನ ಸಾಂಪ್ರದಾಯಿಕ ಮಾದರಿಯನ್ನು ಒಡೆದು, ಓದುಗ ಕೇಂದ್ರಿತ ಪತ್ರಿಕೋದ್ಯಮದತ್ತ ದಿ ವೈರ್ ಹೆಜ್ಜೆ ಇಟ್ಟಿತು. ಬದ್ಧತೆಗೆ ಎಂದಿಗೂ ಓದುಗರು ಬೆಲೆ ಕೊಡುತ್ತಾರೆ ಎಂಬುದನ್ನು ದಿ ವೈರ್ ಸಾಬೀತು ಮಾಡಿದೆ. ಇತ್ತೀಚೆಗೆ ಪೆಗಾಸಸ್ ಗೂಢಾಚರ್ಯೆನ್ನು ಬಹಿರಂಗಗೊಳಿಸಿದ್ದು ದಿ ವೈರ್..
“ಉತ್ತಮ ಪತ್ರಿಕೋದ್ಯಮ ಎಂದಿಗೂ ಉಳಿಯುತ್ತದೆ ಮತ್ತು ಜನರು ಅದನ್ನು ಬೆಳೆಸುತ್ತಾರೆ. ಸಂಪಾದಕೀಯ ನೀತಿ ಮತ್ತು ಆರ್ಥಿಕ ನೀತಿ ಸ್ವತಂತ್ರವಾಗಿದ್ದಾಗ ಮಾತ್ರ ಇದು ಸಾಧ್ಯ. ಉತ್ತಮ ಪತ್ರಿಕೋದ್ಯಮವಲ್ಲದೇ ಬೇರೆ ಯಾವುದೇ ಉದ್ದೇಶವಿಲ್ಲದ ಪತ್ರಿಕೋದ್ಯಮವನ್ನು ಓದುಗರು ಹಾಗೂ ನಾಗರಿಕರು ಬೆಳೆಸುತ್ತಾರೆ. ಇದು ವೈರ್ ನೀಡಿರುವ ಸಂಸ್ಥಾಪನಾ ಪ್ರಮಾಣ” ಎಂದು ಸಂಸ್ಥೆಯ ಸಂಸ್ಥಾಪಕ ಸಂಪಾದಕರು ನೆನಪಿಸಿದ್ದಾರೆ.
ದಿ ವೈರ್ ಇಂಗ್ಲಿಷ್, ಹಿಂದಿ, ಉರ್ದು ಮತ್ತು ಮರಾಠಿ ಭಾಷೆಯಲ್ಲಿ ವರದಿಗಳನ್ನು ಮಾಡುತ್ತಿದ್ದು, ಅತಿದೊಡ್ಡ ಸಂಸ್ಥೆಯಾಗಿ ಬೆಳೆದುನಿಂತಿದೆ. ಅಧಿಕಾರಶಾಹಿಯ ನೀತಿಗಳು ಹೇಗೆ ದೇಶದ ಜನಜೀವನದ ಮೇಲೆ ದಿನೇದಿನೇ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತಿವೆ ಎಂಬುದನ್ನು ದಿ ವೈರ್ ಸೂಕ್ಷ್ಮವಾಗಿ ಬಿತ್ತರಿಸಿ, ಪತ್ರಿಕೋದ್ಯಮದಲ್ಲಿನ ದೊಡ್ಡ ಕೊರತೆಯನ್ನು ತುಂಬುತ್ತಿದೆ. ದಿ ವೈರ್‌ನ ಯೂಟ್ಯೂಬ್ ಚಾನೆಲ್ 35 ಲಕ್ಷ ಚಂದಾದಾರರನ್ನು ಹೊಂದಿದ್ದು, ಪ್ರತಿ ತಿಂಗಳು 2 ಕೋಟಿಗೂ ಅಧಿಕ ವೀಕ್ಷಣೆ ಪಡೆಯುತ್ತಿರುವುದು ದಾಖಲೆಯೇ ಸರಿ.
ಭಾರತದ ಪತ್ರಿಕೋದ್ಯಮ ಕುಸಿಯುತ್ತಿರುವ ಕಾಲದಲ್ಲಿ ದಿ ವೈರ್, ಸಾರ್ವಜನಿಕ ಹಿತಾಸಕ್ತಿಗಾಗಿ ಹೋರಾಡುತ್ತಿದೆ. ಮತ್ತೊಂದೆದೆ ಸರ್ಕಾರದ ಕಿರುಕುಳವನ್ನೂ ಸಹಿಸಿಕೊಳ್ಳಬೇಕಾಗಿದೆ. ದೆಹಲಿಯಲ್ಲಿ ರೈತರ ಪ್ರತಿಭಟನೆಯ ಸಂಬಂಧದ ವರದಿಗಾರಿಕೆ ಒಳಗೊಂಡಂತೆ ಕಳೆದ ವರ್ಷ ಮೂರು ಪ್ರಕರಣಗಳನ್ನು ದಿ ವೈರ್ ವರದಿಗಾರರ ಮೇಲೆ ದಾಖಲಿಸಲಾಗಿತ್ತು. ಧಾರ್ಮಿಕ ಮುಖಂಡರು ಕೋವಿಡ್ 19 ನಿಯಮಗಳನ್ನು ಉಲ್ಲಂಘಿಸಿದ ಕುರಿತು ವರದಿ ಮಾಡಿದ್ದಕ್ಕಾಗಿ ದಿ ವೈರ್ ಮತ್ತು ವರದರಾಜನ್ ಅವರ ಮೇಲೆ “ಭೀತಿ ಹರಡುವಿಕೆ’ಯ ಆರೋಪ ಹೊರಿಸಿ ಪ್ರಕರಣ ದಾಖಲಿಸಲಾಗಿತ್ತು. ಈ ಹಿಂದೆ 14 ಮಾನನಷ್ಟ ಮೊಕದ್ದಮೆಗಳನ್ನು ದಿ ವೈರ್ ಎದುರಿಸಿದ್ದು, ಆಡಳಿತ ಪಕ್ಷ 1.4 ಬಿಲಿಯನ್ ಡಾಲರ್‌ಗಳಷ್ಟು ಪರಿಹಾರವನ್ನು ನೀಡಬೇಕೆಂದು ಬೇಡಿಕೆ ಇಟ್ಟಿತ್ತು.
ಸರ್ಕಾರದ ಹದ್ದಿನ ಕಣ್ಣು ದಿ ವೈರ್ ಮೇಲೆ ಇತ್ತೆಂಬುದನ್ನು ಪೆಗಾಗಸ್ ಪ್ರಕರಣ ಬಹಿರಂಗ ಮಾಡಿತ್ತು. ವರದರಾಜನ್ ಮತ್ತು ವೇಣು ಅವರ ಮೊಬೈಲ್‌ನಲ್ಲಿ ಇಸ್ರೇಲಿ ಮೂಲದ ಸ್ಪೈವೇರ್ ಸ್ಥಾಪಿಸಲಾಗಿತ್ತು. ನಂತರ ದಿ ವೈರ್ ಫಾರ್‍ಬಿಡನ್ ಸ್ಟೋರಿಸ್‌ನೊಂದಿಗೆ ಸೇರಿ ಫೆಗಾಸಸ್ ದಾಳಿಯ ಸಂಭಾವಿತ ಪಟ್ಟಿಯನ್ನು ಬಿಡುಗಡೆ ಮಾಡಿತ್ತು.
ಇದನ್ನೂ ಓದಿ; ದೆಹಲಿ ಹಿಂಸಾಚಾರದ ಅಸಲಿ ಪಿತೂರಿಗಾರರು ಯಾರು? ದೆಹಲಿ ಪೊಲೀಸ್ ನೋಡಲೊಲ್ಲದ ಭೀಕರ ಸತ್ಯಗಳನ್ನು ತೆರೆದಿಟ್ಟ ದಿ ವೈರ್ ವರದಿ



???