Courtesy: Scroll.in

ಕೃಪೆ: ದಿ ವೈರ್

  • ಅಲಿಶಾನ್ ಜಾಫ್ರಿ, ಶೆಹಕ್ತ್ ಮಕ್ನೂನ್ ಮತ್ತು ಸಿದ್ದಾರ್ಥ ವರದರಾಜನ್

ಅನುವಾದ: ಮಲ್ಲನಗೌಡರ್ ಪಿ.ಕೆ

ದೆಹಲಿಯ ಕೋಮು ಹಿಂಸಾಚಾರದಲ್ಲಿ 53 ಜನರು ಸಾವನ್ನಪ್ಪಿ, ನೂರಾರು ಮನೆಗಳು ಮತ್ತು ಅಂಗಡಿಗಳು ಹಾನಿಗೊಳಗಾದ ಅಥವಾ ನಾಶವಾಗಿ ಈಗ ಒಂದು ವರ್ಷವಾಗಿದೆ. ಆ ಹಿಂಸಾಚಾರದ ಬಲಿಪಶುಗಳು ಅಗಾಧವಾಗಿ ಮುಸ್ಲಿಮರಾಗಿದ್ದರು.

ವೃತ್ತಿಪರ ತನಿಖಾಧಿಕಾರಿಗಳು ಈ ರೀತಿಯ ಅಪರಾಧವನ್ನು ಹೇಗೆ ಪರಿಹರಿಸುತ್ತಾರೆ? ಹಿಂಸಾಚಾರದಲ್ಲಿ ಪಾಲ್ಗೊಂಡ ಪುರುಷರು ಮತ್ತು ಮಹಿಳೆಯರನ್ನು ಮೊದಲು ಗುರುತಿಸಿ, ತದನಂತರ ಅವರನ್ನು ಯಾರು ಪ್ರಚೋದಿಸಿದರು, ಸಜ್ಜುಗೊಳಿಸಿದರು ಮತ್ತು ಅವರು ಏನು ಮಾಡಿದರು ಎಂದು ನೋಡುವ ಮೂಲಕ ಆರಂಭಿಸುತ್ತಾರೆ. ಹೀಗೆ ಬಿಡಿ ಬಿಡಿ ಘಟನೆಗಳ ಚುಕ್ಕೆಗಳನ್ನು ಶ್ರಮದಿಂದ ಜೋಡಿಸಿ ಸಂಚು/ಪಿತೂರಿಯ ಜಾಡನ್ನು ಹಿಡಿಯುತ್ತಾರೆ. ಆದರೆ ಅದನ್ನು ಮಾಡುವ ಬದಲು, ದೆಹಲಿ ಪೊಲೀಸರು ಕಳೆದ ಹತ್ತು ತಿಂಗಳುಗಳಿಂದ ಕಾಲ್ಪನಿಕ ಪಿತೂರಿಯನ್ನು ಬೆನ್ನಟ್ಟಿದ್ದಾರೆ.

ಗಲಭೆಗಳು ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧದ ಪ್ರತಿಭಟನೆಯ ಉತ್ಪನ್ನವಾಗಿದೆ ಎಂದು ವಾದಿಸುವ ಉತ್ಸಾಹದಲ್ಲಿ, ಆ ಚಳವಳಿಯ ಭಾಗವಾಗಿ 2019 ರ ಡಿಸೆಂಬರ್‌ನಲ್ಲಿ ನಡೆದ ಪ್ರಚೋದನಕಾರಿ ಹೇಳಿಕೆಗಳು ಮತ್ತು ಸಣ್ಣ ಹಿಂಸಾಚಾರದ ಘಟನೆಗಳು ಪಿತೂರಿಯ ಭಾಗಗಳಾಗಿದ್ದವು ಎಂದು ಪೊಲೀಸರು ಹೇಳುತ್ತಾರೆ.

ಆದರೆ ಅವರ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ದೆಹಲಿ ಪೊಲೀಸರಿಗೆ ಅವರು ಬಂಧಿಸಿರುವ ಆಕ್ಟಿವಿಸ್ಟ್‌ಗಳನ್ನು ಯಾವುದೇ ಹಿಂಸಾಚಾರದ ಪಿತೂರಿಗಾರರು ಎಂದು ಸಾಧಿಸಲು ಸಾಧ್ಯವಾಗಿಲ್ಲ. (ಉಮರ್ ಖಾಲಿದ್, ಸಫೂರಾ ಜಾರ್ಗರ್, ದೇವಂಗನ ಕಲಿತಾ, ಶಾರ್ಜೀಲ್ ಇಮಾಮ್, ಇಶ್ರತ್ ಜಹಾನ್, ಖಾಲಿದ್ ಸೈಫಿ, ನತಾಶಾ ನರ್ವಾಲ್, ಮೀರನ್ ಹೈದರ್, ಆಸಿಫ್ ತನ್ಹಾ ಮತ್ತು ಶಿಫಾ-ಉರ್-ರಹಮಾನ್-ಇವರನ್ನು ಹಿಂಸಾಚಾರದ ಪಿತೂರಿಗಾರರು ಎಂದು ಬಂಧಿಸಲಾಗಿದೆ.)

ಪೊಲೀಸರು ಮಾಡಲು ನಿರಾಕರಿಸಿರುವ ತನಿಖೆಯನ್ನು ದಿ ವೈರ್ ಕಳೆದ ಕೆಲವು ತಿಂಗಳುಗಳಿಂದ ಮಾಡುತ್ತಿದೆ. ಅದರ ಕನ್ನಡ ಅನುವಾದ ಇಲ್ಲಿದೆ.

ದೆಹಲಿ ಪೊಲೀಸರು ತಮ್ಮ ಚಾರ್ಜ್‌ಶೀಟ್‌ಗಾಗಿ ಅವಲಂಭಿಸಿದ ಅನಾಮಧೇಯ ಸಾಕ್ಷಿಗಳ ಆಧಾರರಹಿತ ಹೇಳಿಕೆಗಳು, ಪ್ರಶ್ನಾರ್ಹ ತಪ್ಪೊಪ್ಪಿಗೆಗಳು ಮತ್ತು ನಂಬಲಾಗದ ತಾರ್ಕಿಕ ಅಂಶಗಳನ್ನು ನಾವು ಸಾಕ್ಷಿಯಾಗಿ ಬಳಸಿಲ್ಲ. ಆದರೆ ವೀಡಿಯೊಗಳು, ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಮತ್ತು ಈ ಹಿಂದೂತ್ವ ಕಾರ್ಯಕರ್ತರು ಮತ್ತು ನಾಯಕರು ನೀಡಿದ ಹೇಳಿಕೆಗಳ ಆಧಾರದಲ್ಲಿ ಈ ವರದಿ ಸಿದ್ಧಪಡಿಸಿದ್ದೇವೆ. ಇವೆಲ್ಲದರಿಂದ ಹೊರಹೊಮ್ಮುವ ಚಿತ್ರಣವು ನಿಜವಾಗಿಯೂ ಭೀಕರವಾಗಿದೆ.

ಗಲಭೆಕೋರರು ಸ್ವತಃ ಪೋಸ್ಟ್ ಮಾಡಿದ ವೀಡಿಯೊಗಳಲ್ಲಿ – ಗೋಚರಿಸುವ ಸಣ್ಣ ಚುಕ್ಕೆಗಳಿಂದ ನಾವು ಪ್ರಾರಂಭಿಸಿದ್ದೇವೆ ಮತ್ತು ಅವರು ಯಾರೆಂದು, ಅವರು ಹೇಗೆ ಆಮೂಲಾಗ್ರವಾಗಿದ್ದರು ಮತ್ತು ಇಷ್ಟೆಲ್ಲ ಬಂದೂಕುಗಳು, ಕತ್ತಿಗಳು, ಇಟ್ಟಿಗೆಗಳು ಮತ್ತು ಕಬ್ಬಿಣದ ಸರಳುಗಳು ಬೀದಿಗಳಲ್ಲಿ ಕಾಣಿಸಿಕೊಳ್ಳಲು ಹೇಗೆ ಕಾರಣವಾಗಿತು ಎಂಬುದನ್ನು ನೋಡಲು ಶ್ರಮ ಹಾಕಿ ಕೆಲಸ ಮಾಡಿದ್ದೇವೆ.

ನಾವು ಚುಕ್ಕೆಗಳನ್ನು ಸಂಪರ್ಕಿಸಿದಾಗ, ಜೋಡಿಸುತ್ತಾ ಹೋದಾಗ, ಇದು ಕೇವಲ ಒಬ್ಬ ಬಿಜೆಪಿ ನಾಯಕ ಯೋಜಿಸಿದ ಗಲಭೆಯಲ್ಲ ಎಂಬುದು ಸ್ಪಷ್ಟವಾಯಿತು. ಅವರು ಕೇವಲ ಒಂದು ಸ್ಫೋಟಕ, ವಿಭಜನಕಾರಿ ಭಾಷಣ ಮಾಡಿದರು. ಆದರೆ 2019 ರ ಡಿಸೆಂಬರ್ ಎರಡನೇ ವಾರದಿಂದ ಅನೇಕರು ಇದನ್ನು ಮಾಡಿದ್ದಾರೆ. ಮತ್ತು ಈ ದ್ವೇಷದ ಕುಲುಮೆಯನ್ನು ರಚಿಸಿದ ನಂತರ ಮುಖ್ಯವಾಹಿನಿಯ ರಾಜಕೀಯ ನಾಯಕರು, ಅಪಾಯಕಾರಿ ಗುಂಪುಗಳು ಮತ್ತು ಅವರಿಗೆ ಮೀಸಲಾದ ಆಪ್ತ ಮಾಧ್ಯಮ ಪರಿಸರ ವ್ಯವಸ್ಥೆಯೊಂದಿಗೆ ಸಂಧಿಸಿದರು. ದ್ವೇಷ, ಕೋಮುವಾದದ ಮಡಿಕೆಯನ್ನು ಕುದಿಯುವಂತೆ ಮಾಡಲು ಇದನ್ನು ನಿರಂತರವಾಗಿ ಬಳಸಲಾಗುತ್ತಿದೆ.

ನಾವು ಕಟ್ಟಿಕೊಡುವ ಕ್ರೊನೊಲಜಿಯು ಈ ನಿಜವಾದ ಪಿತೂರಿಯ ಸ್ವರೂಪವನ್ನು ಬಹಳ ಸ್ಪಷ್ಟಪಡಿಸುತ್ತದೆ. ದೆಹಲಿ ಪೊಲೀಸರು ಅವರನ್ನು ತನಿಖೆ ಮಾಡಲು ಅಥವಾ ಅವರ ಬಗ್ಗೆ ಮಾತನಾಡಲು ನಿರಾಕರಿಸಿದ್ದರಿಂದ ನಾವು ನಿಮಗೆ ತೋರಿಸುವ ಮುಖಗಳು ಮತ್ತು ಪಾತ್ರಗಳನ್ನು ಸಾರ್ವಜನಿಕ ದೃಷ್ಟಿಕೋನದಿಂದ ಉದ್ದೇಶಪೂರ್ವಕವಾಗಿ ಮರೆಮಾಡಲಾಗಿದೆ.

ಇಂದು, ಆ ಮೌನ ಕೊನೆಗೊಳ್ಳುತ್ತದೆ. ಪೊಲೀಸರು ನೋಡಲೊಲ್ಲದ ಸಂಗತಿಗಳು

ಫೆಬ್ರವರಿ 2020 ರ ಕೊನೆಯ ವಾರದಲ್ಲಿ, 1984 ರ ನವೆಂಬರ್‌ನಲ್ಲಿ ಸಿಖ್ಖರ ಹತ್ಯಾಕಾಂಡದ ನಂತರ ರಾಜಧಾನಿ ಕಂಡ ಅತ್ಯಂತ ಭೀಕರ ಕೋಮು ಹಿಂಸಾಚಾರದಿಂದ ದೆಹಲಿ ನಡುಗಿತು.
ಈ ಸಮಯದಲ್ಲಿ, ಗಲಭೆ ಹರಡುವಿಕೆ ಮತ್ತು ಪ್ರಮಾಣವು ಚಿಕ್ಕದಾಗಿತ್ತು ಮತ್ತು ಬಲಿಪಶುಗಳು ಮುಸ್ಲಿಮರಾಗಿದ್ದರು. ಆದರೆ 2020ರ ಹಿಂಸಾಚಾರ ಎರಡು ವಿಷಯಗಳಲ್ಲಿ 1984ರಂತೆಯೇ ಇತ್ತು. ಮೊದಲಿಗೆ, ಸಂತ್ರಸ್ತರನ್ನು ರಕ್ಷಿಸಲು ಪೊಲೀಸರು ಯಾವುದೇ ಪ್ರಯತ್ನ ಮಾಡಲಿಲ್ಲ. ಎರಡನೆಯದಾಗಿ, ಆಡಳಿತ ಪಕ್ಷಕ್ಕೆ ಸಂಬಂಧಿಸಿದ ನಾಯಕರು ಮತ್ತು ಕಾರ್ಯಕರ್ತರು ದ್ವೇಷವನ್ನು ಹರಡುವಲ್ಲಿ ಮತ್ತು ಹಿಂಸೆಯನ್ನು ಪ್ರಚೋದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಹಿಂಸಾಚಾರದ ಉದ್ದೇಶಿತ ಸ್ವರೂಪದಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಮತ್ತು ತನ್ನದೇ ಆದ ಸ್ಪಷ್ಟ ವೈಫಲ್ಯಗಳನ್ನು ಮರೆಮಾಚಲು, ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಶಾಂತಿಯುತ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮುಸ್ಲಿಂ ಮತ್ತು ಪ್ರಗತಿಪರ ಕಾರ್ಯಕರ್ತರನ್ನು ಕೋಮು ಹಿಂಸಾಚಾರಕ್ಕೆ ಕಾರಣೀಕರ್ತರು ಎಂದು ದೆಹಲಿ ಪೊಲೀಸರು ದೂಷಿಸಿದ್ದಾರೆ. ದೆಹಲಿಯ ಪೊಲೀಸರು ಪ್ರಾಸಂಗಿಕವಾಗಿ ಬಿಜೆಪಿ ಮುಖಂಡ ಅಮಿತ್ ಶಾ ನಡೆಸುತ್ತಿರುವ ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಿದ್ದಾರೆ.

ಕಳೆದ ಒಂದು ವರ್ಷದಲ್ಲಿ, ಬೀದಿಮಟ್ಟದ ಗಲಭೆಕೋರರನ್ನು ಬಂಧಿಸಲಾಗಿದೆ. ಆದರೆ ಹಿಂಸಾಚಾರವನ್ನು ಪ್ರಚೋದಿಸಿದ ನಿಜವಾದ ನಿಜವಾದ ಪಿತೂರಿಗಾರರು ಸಿಎಎಯನ್ನು ವಿರೋಧಿಸಿದವರು ಎಂದು ಪೊಲೀಸರು ‘ತರ್ಕ’ ಮಂಡಿಸುತ್ತಿದ್ದಾರೆ. ದೇಶದ ಭಯೋತ್ಪಾದನಾ-ವಿರೋಧಿ (ಯುಎಪಿಎ) ಕಾನೂನಿನಡಿಯಲ್ಲಿ ಒಂದು ಡಜನ್‌ಗೂ ಹೆಚ್ಚು ಆಕ್ಟಿವಿಸ್ಟ್‌ಗಳ ಮೇಲೆ ಆರೋಪ ಹೊರಿಸಲಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿಯ ಸಮಯದಲ್ಲಿ ಈ ಕಾರ್ಯಕರ್ತರು ವಿಶ್ವದ ದೃಷ್ಟಿಯಲ್ಲಿ ನರೇಂದ್ರ ಮೋದಿ ಸರ್ಕಾರವನ್ನು ದೂಷಿಸುವ ಮತ್ತು ನಂತರ ಅದನ್ನು ಬಲವಂತದಿಂದ ಉರುಳಿಸುವ ಉದ್ದೇಶದಿಂದ ಗಲಭೆಗಳನ್ನು ಪ್ರಚೋದಿಸಲು ಸಂಚು ರೂಪಿಸಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.
ಆದರೆ ಪೊಲೀಸ್ ಆವೃತ್ತಿ ನಿಜವಾಗಿಯೂ ಸದೃಢವೇ? ಎಲ್ಲರ ಮುಖಕ್ಕೆ ರಾಚುವಂತಿರುವ ನಿಜವಾದ ಪಿತೂರಿಯನ್ನು ಮುಚ್ಚಿಡಲು ಅವರು ಬೆದರು ಬೊಂಬೆಯನ್ನು (ಒಣಹುಲ್ಲಿನ ಮನುಷ್ಯನನ್ನು) ಸ್ಥಾಪಿಸಿದ್ದಾರೆಯೇ?

ತಮ್ಮ ಚಾರ್ಜ್‌ಶೀಟ್‌ಗಳಲ್ಲಿ, ಅವರು ಡೊನಾಲ್ಡ್ ಟ್ರಂಪ್ ಭೇಟಿಯನ್ನು ಉಲ್ಲೇಖಿಸಿದ್ದಾರೆ. “2020 ರ ಜನವರಿ 8 ರಂದು ಟ್ರಂಪ್ ಭೇಟಿ ನಿಗದಿಯಾಗಿತ್ತು, ಆ ಕಾರಣಕ್ಕೆ ಗಲಭೆ ಸೃಷ್ಟಿಸುವ ಸಂಚು ನಡೆದಿತ್ತು” ಎಂದು ಸಿಎಎ ವಿರೋಧಿ ಆಕ್ಟಿವಿಸ್ಟ್‌ಗಳ ಮೇಲೆ ಪೊಲೀಸರು ಅಪಾದನೆ ಹೊರಿಸಿದ್ದಾರೆ. ಆದರೆ ಆ ದಿನಾಂಕದಂದು ಭಾರತ ಅಥವಾ ಅಮೆರಿಕ ಟ್ರಂಪ್ ಭೇಟಿಯನ್ನು ಘೋಷಿಸಿರಲಿಲ್ಲ.

ಸಿಎಎ ವಿರೋಧಿ ಕಾರ್ಯಕರ್ತರ ವಿರುದ್ಧ ಅವರು ಅಸಂಭವ ಸನ್ನಿವೇಶಗಳೊಂದಿಗೆ ಆರೋಪ ಮಾಡುವ ದೆಹಲಿ ಪೊಲೀಸರು, ಡಿಸೆಂಬರ್ 2019 ರ ಮೂರನೇ ವಾರದಿಂದ ಶಾಂತಿಯುತ ಸಿಎಎ ವಿರೋಧಿ ಪ್ರತಿಭಟನೆಗಳನ್ನು ಕೊನೆಗೊಳಿಸಲು ಹಿಂಸಾಚಾರವನ್ನು ಮುಕ್ತವಾಗಿ ಪ್ರತಿಪಾದಿಸಿದ ಪುರುಷರು ಮತ್ತು ಮಹಿಳೆಯರ ಪ್ರಭಾವಿ ಗುಂಪನ್ನು ತನಿಖೆ ಮಾಡದಿರಲು ಉದ್ದೇಶಪೂರ್ವಕವಾಗಿ ನಿರ್ಧರಿಸಿದ್ದಾರೆ.

ಈ ಗುಂಪು ಪ್ರಭಾವಶಾಲಿಯಾಗಿತ್ತು ಏಕೆಂದರೆ ಅವರು ಆಡಳಿತ ಸ್ಥಾಪನೆಯೊಂದಿಗೆ ಸಂಬಂಧ ಹೊಂದಿದ್ದರು. ಮೋದಿ ಸರ್ಕಾರಕ್ಕೆ ಅಂತರರಾಷ್ಟ್ರೀಯ ಮುಜುಗರವನ್ನು ಉಂಟುಮಾಡುವ ಪ್ರತಿಭಟನೆಗಳನ್ನು ಕೊನೆಗೊಳಿಸುವುದು ಮತ್ತು ಅವುಗಳಲ್ಲಿ ಭಾಗವಹಿಸಿದ ಎಲ್ಲರಿಗೂ, ವಿಶೇಷವಾಗಿ ಮುಸ್ಲಿಮರು ಮತ್ತು ವಿದ್ಯಾರ್ಥಿಗಳಿಗೆ ಪಾಠ ಕಲಿಸುವುದು ಅವರ ವ್ಯಾಪಕ ಉದ್ದೇಶವಾಗಿತ್ತು. ಕೋಮು ಹಿಂಸಾಚಾರದ ವಾರಗಳಲ್ಲಿ ಅವರ ಸ್ಥಿರ ಸಂದೇಶವೆಂದರೆ ಸರ್ಕಾರದ ಹಿಂದುತ್ವ ಕಾರ್ಯಸೂಚಿಯನ್ನು ವಿರೋಧಿಸಿದರೆ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂಬುದೇ ಆಗಿತ್ತು.

ಈ ಗುಂಪಿನ ಬಗ್ಗೆ ತನಿಖೆ ನಡೆಸಲು ಪೊಲೀಸರು ನಿರಾಕರಿಸಿದ್ದೇಕೆ? ಅವರೆಲ್ಲರೂ ಬಹಿರಂಗವಾಗಿ ಕ್ರಿಮಿನಲ್‌ಗಳು ಎಂದು ಕರೆಯಲ್ಪಡುವ ‘ಫ್ರಿಂಜ್’ ಎಲಿಮೆಂಟುಗಳಿಂದ ಹಿಡಿದು ಬಿಜೆಪಿ ರಾಜಕಾರಣಿಗಳು ಮತ್ತು ಮೋದಿ ಸರ್ಕಾರದ ಕೆಲವು ಮಂತ್ರಿಗಳು ಈ ಗುಂಪಿನ ಭಾಗವಾಗಿದ್ದು, ಈ ಗುಂಪು ಹಿಂದೂತ್ವವಾದಿ ಅಜೆಂಡಾದ ಭಾಗವಾಗಿದೆ.

ಫೆಬ್ರವರಿ 23 ರ ಮಧ್ಯಾಹ್ನ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಅವರು ಮೌಜ್ಪುರದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ ಮತ್ತು ಪೊಲೀಸರು ಅವರ ಪಾತ್ರದ ಬಗ್ಗೆ ತನಿಖೆ ನಡೆಸಲು ನಿರಾಕರಿಸಲಿಲ್ಲ, ಆದರೆ ಆತನನ್ನು ನಾಜೂಕಾಗಿ ಆರೋಪ ಮುಕ್ತಗೊಳಿಸಿದ್ದಾರೆ. ಆದರೆ ಇದೇ ನಾಯಕ, ಡಿಸೆಂಬರ್ 19 ರ ಹಿಂದೆಯೇ, ಸಿಎಎ ವಿರೋಧಿ ಪ್ರತಿಭಟನಾಕಾರರ ವಿರುದ್ಧ ಹಿಂಸಾಚಾರವನ್ನು ಪ್ರತಿಪಾದಿಸಿದ್ದರು ಮತ್ತು ಫೆಬ್ರವರಿ 23 ರಂದು ನಿಜವಾದ ಹಿಂಸಾಚಾರ ಪ್ರಾರಂಭವಾಗುವ ಮೊದಲು ಈ ಬೆದರಿಕೆಗಳನ್ನು ಮಾಡುತ್ತಿದ್ದ ಇತರ ವ್ಯಕ್ತಿಗಳೊಂದಿಗೆ ಸಂಬಂಧ ಹೊಂದಿದ್ದಾರೆ.

ಜಾಮಿಯಾ, ಜೆಎನ್‌ಯು ಮತ್ತು ಎಎಂಯು ವಿದ್ಯಾರ್ಥಿಗಳಿಗೆ ಗುಂಡು ಹಾರಿಸಬೇಕೆಂದು ಕರೆ ನೀಡಿದ ಘೋಷಣೆಗಳ ಬಗ್ಗೆ ದಿ ವೈರ್ ಮಿಶ್ರಾ ಅವರನ್ನು ಕೇಳಿದಾಗ, ಅವರು ಇದನ್ನು ಮೊದಲು ನಿರಾಕರಿಸಿದರು. ಆದರೆ ಅವರು ಆ ಘೋಷನೆ ಕೂಗುತ್ತಿರುವ ವೀಡಿಯೊಗಳನ್ನು ತೋರಿಸಿದಾಗ, “ಗೋಲಿ ಮಾರೊ ಸಾಲೊಂ ಕೋ” ಎಂದು ಹೇಳುವುದು ದೊಡ್ಡ ವಿಷಯವಲ್ಲ ಮತ್ತು ಗುಂಡು ಹಾರಿಸಿದ್ದರ ಬಗ್ಗೆ ಈ ಉಲ್ಲೇಖವು ಕೇವಲ ಅಸಂಭವ ಪ್ರಾಸವಾಗಿದೆ ಎಂದು ಹೇಳಿದರು.
ಫೆಬ್ರವರಿ 23 ರಂದು ಮೌಜ್ಪುರದಲ್ಲಿ ಅವರು ನೀಡಿದ ಹೇಳಿಕೆ ಹಿಂಸಾಚಾರಕ್ಕೆ ಬೆದರಿಕೆ ಹಾಕುವ ಉದ್ದೇಶವನ್ನು ಹೊಂದಿದೆ ಎಂಬುದನ್ನು ಕಪಿಲ್ ಮಿಶ್ರಾ ನಿರಾಕರಿಸಿದ್ದಾರೆ.

ಕಳೆದ ವರ್ಷ, ದೆಹಲಿಯ ಮಾಜಿ ಪೊಲೀಸ್ ಆಯುಕ್ತ ಅಜಯ್ ರಾಜ್ ಶರ್ಮಾ ಅವರು, “ನಾನು ಕರ್ತವ್ಯದಲ್ಲಿದ್ದರೆ ಕಪಿಲ್ ಮಿಶ್ರಾ ಅವರನ್ನು ಬಂಧಿಸುತ್ತಿದ್ದೆ ಮತ್ತು ಮಿಶ್ರಾ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುವಾಗ ಮೌನವಾಗಿ ನಿಂತಿದ್ದ ಹಿರಿಯ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡುತ್ತಿದ್ದೆ” ಎಂದು ದಿ ವೈರ್‌ಗೆ ತಿಳಿಸಿದ್ದರು.

ಆದರೆ, ಹಿಂಸಾಚಾರವನ್ನು ಬಿಚ್ಚಿಡಲು ತಮ್ಮನ್ನು ಬಹಿರಂಗವಾಗಿ ಸಜ್ಜುಗೊಳಿಸುತ್ತಿದ್ದ ಬಿಜೆಪಿ ನಾಯಕರು ಮತ್ತು ಹಿಂದುತ್ವ ಗುಂಪುಗಳ ಹೆಸರನ್ನು ತೆರವುಗೊಳಿಸುವ ಉತ್ಸಾಹದಲ್ಲಿ, ಪೊಲೀಸ್ ತನಿಖಾಧಿಕಾರಿಗಳು ಮೇಲುನೋಟಕ್ಕೆ ಶಾಂತಿಯುತ ಉದ್ದೇಶದ ಮಿಶ್ರಾ ಅವರ ಸಮರ್ಥನೆಗಳನ್ನು ತಕ್ಕಮಟ್ಟಿಗೆ ಒಪ್ಪಿಕೊಂಡಿಲ್ಲ. ಆದರೆ ಪಬ್ಲಿಕ್ ಡೊಮೇನ್‌ನಲ್ಲಿರುವ ಅಪಾರ ಪ್ರಮಾಣದ ಪಿತೂರಿಯ ಸಾಕ್ಷ್ಯಗಳನ್ನು ನಿರ್ಲಕ್ಷಿಸಿದ್ದಾರೆ.

ಫೆಬ್ರವರಿ 2020 ರ ದೆಹಲಿ ಗಲಭೆಯ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ಉಗ್ರ ಹಿಂದುತ್ವ ನಾಯಕಿ ರಾಗಿಣಿ ತಿವಾರಿ ಅವರು ಎರಡು ತಿಂಗಳ ಹಿಂದೆ ಬಿಡುಗಡೆ ಮಾಡಿದ ಆಘಾತಕಾರಿ ವಿಡಿಯೋದಲ್ಲಿ, ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಮಾಡಿದಂತೆಯೇ ದೆಹಲಿ ಬಳಿ ಪ್ರತಿಭಟನಾ ನಡೆಸುತ್ತಿರುವ ರೈತರ ಮೇಲೆ ಹಿಂಸಾಚಾರವನ್ನು ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ.

“ಸರ್ಕಾರವು ನಮ್ಮನ್ನು ರೈತರ ಚಳವಳಿಯಿಂದ ಮುಕ್ತಗೊಳಿಸದಿದ್ದರೆ, ದೆಹಲಿಯಿಂದ ರೈತರನ್ನು ತೊಡೆದುಹಾಕದಿದ್ದರೆ, ರಾಗಿಣಿ ತಿವಾರಿ ಜಾಫ್ರಾಬಾದ್ ಅನ್ನು ಮರುಸೃಷ್ಟಿಸುತ್ತಾರೆ ಮತ್ತು ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ, ದೆಹಲಿ ಪೊಲೀಸರು ಜವಾಬ್ದಾರರಾಗುತ್ತಾರೆ. ಜೈ ಶ್ರೀ ರಾಮ್. ಭಾರತದ ರಾಷ್ಟ್ರೀಯವಾದಿಗಳೇ, 17 ರಂದು ರಾಗಿಣಿ ತಿವಾರಿಯವರನ್ನು ಸೇರಿಕೊಳ್ಳಿ. ನಾವು ಹೇಗಾದರೂ ರೈತರ ಚಳವಳಿಯೊಂದಿಗೆ ವ್ಯವಹರಿಸುತ್ತೇವೆ. ನಾನು ಹೇಗಾದರೂ ಅದನ್ನು ಖಾಲಿ ಮಾಡಿಸುತ್ತೇನೆ. ಜೈ ಜಗತ್ ಜನನಿ ಜಾನ್ಕಿ. ಜೈ ಶ್ರೀ ರಾಮ್. ವಂದೇ ಮಾತರಂ. ರೈತರ ಆಂದೋಲನದ ಸೋಗಿನಲ್ಲಿ ನಡೆಯುತ್ತಿರುವ ಪಿತೂರಿಯನ್ನು 16 ರೊಳಗೆ ತೆಗೆದುಹಾಕದಿದ್ದರೆ, ರಾಗಿಣಿ ತಿವಾರಿ 17 ರಂದು ಅದನ್ನು ತೆಗೆದುಹಾಕುತ್ತಾರೆ. ಜೈ ಶ್ರೀ ರಾಮ್” ಎಂದು ವಿಡಿಯೋದಲ್ಲಿ ಹೇಳಲಾಗಿದೆ.

ರಾಗಿಣಿ ತಿವಾರಿ

2020 ರ ಫೆಬ್ರವರಿ 23 ರಂದು ಕಪಿಲ್ ಮಿಶ್ರಾ ಬೆದರಿಕೆ ಹಾಕಿದ್ದನ್ನು , ರಾಗಿಣಿ ತಿವಾರಿಯಂತಹ ಹಿಂದುತ್ವ ನಾಯಕರು ಮೌಜ್‌ಪುರ ಮತ್ತು ಈಶಾನ್ಯ ದೆಹಲಿಯ ಇತರ ಸ್ಥಳಗಳಲ್ಲಿ ಪ್ರಾಕ್ಟಿಕಲ್ ಆಗಿ ಜಾರಿಗೆ ತಂದಿದ್ದಾರೆ. ಈಗ ಈ ಹೆಣ್ಣುಮಗಳು ಬೇರೆಡೆ “ಜಾಫ್ರಾಬಾದ್ ಅನ್ನು ಮರುಸೃಷ್ಟಿಸುವ” ಬಗ್ಗೆ ಮಾತನಾಡುತ್ತಾಳೆ.

ಈ ಸರಣಿಯಲ್ಲಿ, ದ್ವೇಷವನ್ನು ಹರಡಲು, ಜನಸಮೂಹವನ್ನು ಸಜ್ಜುಗೊಳಿಸಲು ಮತ್ತು ನಂತರ ಹಿಂಸಾಚಾರವನ್ನು ಪ್ರಚೋದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಹಲವಾರು ಹಿಂದುತ್ವ ಕಾರ್ಯಕರ್ತರು ಮತ್ತು ಮುಖಂಡರನ್ನು ದಿ ವೈರ್ ನಿಮಗೆ ಪರಿಚಯಿಸುತ್ತದೆ. ಅವುಗಳಲ್ಲಿ ಕೆಲವರನ್ನು ನಾವು ಗುರುತಿಸಲು ಸಾಧ್ಯವಾಯಿತು, ಆದರೆ ಇತರರ ಗುರುತು ನಮಗೆ ತಿಳಿದಿಲ್ಲ. ರಾಗಿಣಿ ತಿವಾರಿ ಅವರಂತಹ ಕಾರ್ಯಕರ್ತರು ವಿಡಿಯೋದಲ್ಲಿ ತಮ್ಮ ಪಾತ್ರದ ಬಗ್ಗೆ ಪದೇ ಪದೇ ಹೆಮ್ಮೆ ಪಡುತ್ತಾರೆ. ಆದರೆ ಆಶ್ಚರ್ಯಕರ ಸಂಗತಿಯೆಂದರೆ, ಹಿಂಸಾಚಾರವನ್ನು ಉಂಟು ಮಾಡುವುದರಲ್ಲಿ ಅವರ ಪಾತ್ರಕ್ಕಾಗಿ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ, ಅದು ಅಂತಿಮವಾಗಿ ಪೊಲೀಸ್ ಸೇರಿದಂತೆ 53 ಅಮಾಯಕ ಜನರ ಪ್ರಾಣವನ್ನು ತೆಗೆದುಕೊಂಡಿತು.

ನಮ್ಮ ಸರಣಿಯ ಭಾಗ 1 ರಲ್ಲಿ, ದೀಪಕ್ ಸಿಂಗ್ ಹಿಂದೂ ಮತ್ತು ಅಂಕಿತ್ ತಿವಾರಿ ಎಂಬ ಎರಡು ಪಾತ್ರಗಳ ಪಾತ್ರವನ್ನು ನಾವು ಬಿಚ್ಚಿಡುತ್ತಿದ್ದೇವೆ.

ದೀಪಕ್ ಸಿಂಗ್ ಹಿಂದೂ, ‘ಹಿಂದೂ ಪಡೆ’ ಎಂಬ ಸಂಘಟನೆಯ ಸ್ಥಾಪಕ ಮತ್ತು ಭಜರಂಗದಳದ ನಂಟಿರುವಾತ.

ಫೆಬ್ರವರಿ 23, 2020 ರ ಬೆಳಿಗ್ಗೆ ಕಪಿಲ್ ಮಿಶ್ರಾ ಈಶಾನ್ಯ ದೆಹಲಿಯ ಮೌಜ್ಪುರ್ ಚೌಕ್‌ನಲ್ಲಿ ತಮ್ಮ ಕುಖ್ಯಾತ ಭಾಷಣ ಮಾಡಿದ ದಿನ, ‘ದೀಪಕ್ ಸಿಂಗ್ ಹಿಂದೂ’ ಅಲ್ಲಿನ ಜನಸಮೂಹವನ್ನು ಸಜ್ಜುಗೊಳಿಸಲು ಫೇಸ್‌ಬುಕ್‌ನಲ್ಲಿ ಪ್ರಚೋದನೆ ನೀಡಿದರು.

“ನಾನು ಈ ಯುದ್ಧವನ್ನು ಏಕಾಂಗಿಯಾಗಿ ಮಾಡುತ್ತಿದ್ದೇನೆ. ಆದರೆ ಇಂದು ಈ ಧಾರ್ಮಿಕ ಯುದ್ಧದಲ್ಲಿ ನಿಮ್ಮ ಭಾಗವಹಿಸುವಿಕೆ ನನಗೆ ಬೇಕು. ಇಡೀ ದೆಹಲಿಯನ್ನು ಶಾಹೀನ್ ಬಾಗ್ ಆಗಿ ಪರಿವರ್ತಿಸಲಾಗುತ್ತಿದೆ. ಮತ್ತು ಈಗ ಈಶಾನ್ಯ ದೆಹಲಿಯ ಜಾಫ್ರಾಬಾದ್ ಅನ್ನು ಶಾಹೀನ್ ಬಾಗ್ ಆಗಿ ಮಾಡಲಾಗಿದೆ. ಜಿಹಾದಿ ಮನಸ್ಥಿತಿ ಹೊಂದಿರುವ ಸಾವಿರಾರು ಜನರು ರಸ್ತೆಗಳಿಗೆ ಬಂದಿದ್ದಾರೆ, ಆದರೆ ನಾವು ಇದನ್ನು ಹಿಜ್ಡಾಗಳಂತೆ ನೋಡುವ ಬದಲು, ಗಂಡಸರಂತೆ ಸಾಯುವುದೇ ಮೇಲು. ನಾನು ದೀಪಕ್ ಸಿಂಗ್ ಹಿಂದೂ, ಈ ಯುದ್ಧವನ್ನು ಅದರ ತಾರ್ಕಿಕ ಅಂತ್ಯಕ್ಕೆ ಒಯ್ಯುತ್ತೇನೆ. ದಯವಿಟ್ಟು 2:30 ಕ್ಕೆ ಮೌಜ್‌ಪುರ್ ಚೌಕ್‌ಗೆ ಬನ್ನಿ, ಏಕೆಂದರೆ ದೀಪಕ್ ಸಿಂಗ್ ಹಿಂದೂ ಒಬ್ಬಂಟಿಯಾಗಿ ಅಲ್ಲಿಗೆ ಹೋದರೆ, ಅದು ನೀವು ಅವಮಾನದಿಂದ ಸಾಯುವ ಕ್ಷಣವಾಗಿದೆ. ನಿಮಗೆ ಹೆಚ್ಚಿನ ಮನವಿಯೆಂದರೆ ನೀವು ಮೌಜ್‌ಪುರ್ ಚೌಕ್ ಅನ್ನು ಹೆಚ್ಚಿನ ಸಂಖ್ಯೆಯಲ್ಲಿ ನೀವೆಲ್ಲ ತಲುಪಬೇಕು”.

“ನನ್ನ ಮೊಬೈಲ್ ಸಂಖ್ಯೆ ಗಮನಿಸಿ ಮತ್ತು ಕರೆ ಮಾಡಿ. (ನಂಬರ್ ಹಾಕಿದ್ದಾನೆ) ನನ್ನ ಬೆಂಬಲಿಗರೊಂದಿಗೆ ನಾನು ಅಲ್ಲಿಗೆ ತಲುಪುತ್ತೇನೆ. ಹೇಗಾದರೂ, ನಾನು ನಿಮ್ಮ ಬೆಂಬಲವನ್ನು ಪಡೆದರೆ, ನನ್ನ ಶಕ್ತಿ ಸಾವಿರ ಪಟ್ಟು ಹೆಚ್ಚಾಗುತ್ತದೆ”. ಇದು ಆತನ ಫೇಸ್‌ಬುಕ್‌ ಪೋಸ್ಟ್‌ನಲ್ಲಿದ್ದ ಅಂಶಗಳು.

‘ದೀಪಕ್ ಸಿಂಗ್ ಹಿಂದೂ

ಹಿಂಸಾಚಾರ ಪ್ರಾರಂಭವಾದ ದಿನದ ಬೆಳಿಗ್ಗೆ ದೀಪಕ್ ನಿಖರವಾಗಿ ಹೇಳಿದ್ದನ್ನು ನೋಡೋಣ. ನೆನಪಿಡಿ, ಈ ಬೆಂಕಿಯಿಡುವ ವೀಡಿಯೊವನ್ನು ಅವರು ರೆಕಾರ್ಡ್ ಮಾಡಿದ ಸಮಯದಲ್ಲಿ ಯಾವುದೇ ಹಿಂಸಾಚಾರ ಪ್ರಾರಂಭವಾಗಿರಲಿಲ್ಲ.

ದೀಪಕ್ ಸಿಂಗ್ ಹಿಂದೂ ಮಧ್ಯಾಹ್ನ 2:30 ಕ್ಕೆ ಮೌಜ್‌ಪುರ್ ಚೌಕ್‌ನಲ್ಲಿ ಸಭೆ ಸೇರುವಂತೆ ವೀಕ್ಷಕರಿಗೆ ಕರೆ ನೀಡಿದ. ಮಧ್ಯಾಹ್ನ 2:30 ಏಕೆ? ಕಪಿಲ್ ಮಿಶ್ರಾ ಕೂಡ ಅದೇ ಸಮಯದಲ್ಲಿ ಅಲ್ಲಿರುತ್ತಾರೆ ಎಂಬುದು ದೀಪಕ್‌ನಿಗೆ ಮೊದಲೇ ತಿಳಿದಿತ್ತೆ? ಹಿಂಸಾಚಾರವನ್ನು ಪ್ರಾರಂಭಿಸಲು ಪ್ರಚೋದಿಸಲಾಗುತ್ತಿದ್ದ ಜನಸಮೂಹವನ್ನು ಸಜ್ಜುಗೊಳಿಸಲು ಈ ಸಮಯ ಮತ್ತು ಸ್ಥಳವನ್ನು ನಿಗದಿಪಡಿಸಿದ ಗುಪ್ತ ಕೈ ಯಾವುದು? ಈ ಮೂಲ ಪ್ರಶ್ನೆ ಕೇಳಲು ದೆಹಲಿ ಪೊಲೀಸರು ಯಾಕೆ ತಲೆಕೆಡಿಸಿಕೊಳ್ಳಲಿಲ್ಲ?

ಹಿಂಸಾಚಾರವನ್ನು ಪ್ರಚೋದಿಸುವ ಪಿತೂರಿಯ ಭಾಗವಾಗಿ ಮೌಜ್ಪುರ್ ಚೌಕ್ ಬಳಿ ಆಕ್ಟಿವಿಸ್ಟ್‌ಗಳು ರಸ್ತೆಯನ್ನು ತಡೆದಿದ್ದಾರೆ ಎಂದು ಪೊಲೀಸರು ಹೇಳುತ್ತಾರೆ. ಹಾಗಾದರೆ ‘ದೀಪಕ್ ಸಿಂಗ್ ಹಿಂದೂ’ ಈ ಪಿತೂರಿಯ ಭಾಗವಾಗಿದ್ದರಾ? ಅವನು ತನ್ನ ಕರೆಯನ್ನು ನೀಡದಿದ್ದರೂ ಹಿಂಸಾಚಾರ ನಡೆಯುತ್ತಿತ್ತೆ? ಪೊಲೀಸರು ಆತನ ಮೇಲೆ ಯಾಕೆ ಆರೋಪ ಮಾಡಿಲ್ಲ?

ವಿಪರ್ಯಾಸವೆಂದರೆ, ಸಿಎಎ ವಿರೋಧಿ ಪ್ರತಿಭಟನಾಕಾರರು 2020 ರ ಫೆಬ್ರವರಿ 22 ರಂದು ಮೌಜ್ಪುರ್ ಚೌಕ್‌ನಲ್ಲಿರುವ ಜಾಫ್ರಾಬಾದ್ ಮೆಟ್ರೋ ನಿಲ್ದಾಣವನ್ನು ನಿರ್ಬಂಧಿಸುವ ಮೊದಲೇ ದೀಪಕ್ ಸಿಂಗ್ ಹಿಂದೂ ಮತ್ತು ಇತರ ಕಾರ್ಯಕರ್ತರು ಹಿಂಸಾಚಾರವನ್ನು ಆರಂಭಿಸಲು ಹೇಗೆ ಯೋಜಿಸುತ್ತಿದ್ದರು ಎಂಬುದನ್ನು ನೋಡಿದಾಗ ದೆಹಲಿ ಪೊಲೀಸರು ಪ್ರಕರಣ ನಿಭಾಯಿಸಿದ ರೀತಿ ನಿಜಕ್ಕೂ ಕುಸಿಯುತ್ತದೆ. ದೆಹಲಿ ಪೊಲೀಸರು ರ್ಜಾರಾ ಘಟನೆ ಗಲಭೆಗಳಿಗೆ ಪ್ರಚೋದಕವಾಗಿತ್ತು ಮತ್ತು ಮುಂದೆ ಏನಾಯಿತು ಎಂಬುದಕ್ಕೆ ಸಿಎಎ ವಿರೋಧಿ ಕಾರ್ಯಕರ್ತರು ಕಾರಣರು ಎನ್ನುತ್ತಾರೆ.

ಆದರೆ ಜನವರಿ 23, 2020 ರಂದು, ಮೆಟ್ರೋ ನಿಲ್ದಾಣದಲ್ಲಿ ಯಾವುದೇ ರಸ್ತೆ ತಡೆ ಉಂಟಾಗುವ ಒಂದು ತಿಂಗಳ ಮೊದಲು, ದೀಪಕ್ ಸಿಂಗ್ ಹಿಂದೂ ಅವರು ಶಾಂತಿಯುತ ಪ್ರತಿಭಟನಾಕಾರರ ಮೇಲೆ ಯೋಜಿಸುತ್ತಿದ್ದ ಹಿಂಸಾಚಾರದ ಬಗ್ಗೆ ಎಚ್ಚರಿಸಿದ್ದ:

“ನಾನು ಶಾಹೀನ್ ಬಾಗ್, ಜೆಎನ್‌ಯು ಮತ್ತು ಜಾಮಿಯಾಕ್ಕೆ ಏಕಾಂಗಿಯಾಗಿ ಹೋಗಿ ಸಾವಿರಾರು ಜನಸಮೂಹದ ನಡುವೆ ಘರ್ಜಿಸಿದ್ದೇನೆ. ನೀವು (ಮುಸ್ಲಿಮರು) ದೇಶಭಕ್ತರಾಗಿದ್ದರೆ, ನೀವು ಈ ದೇಶವನ್ನು ಧರ್ಮದ ಹೆಸರಿನಲ್ಲಿ ವಿಭಜಿಸುತ್ತಿರಲಿಲ್ಲ. ನೀವು ದೇಶಭಕ್ತರಲ್ಲ, ನೀವು ಹಂದಿ. ನೀವು ದೇಶದ್ರೋಹಿಗಳು, ದೇಶದ್ರೋಹಿಗಳು, ದೇಶದ್ರೋಹಿಗಳು ಮತ್ತು ದೇಶದ್ರೋಹಿಗಳನ್ನು ಬೂಟುಗಳಿಂದ ಹೊಡೆಯಲಾಗುತ್ತದೆ, ಇದನ್ನು ನಾನು ನಿಮಗೆ ಲಿಖಿತವಾಗಿ ಹೇಳುತ್ತಿದ್ದೇನೆ ಮತ್ತು ಇದು ಸಂಭವಿಸಲಿದೆ….’ ಎಂದು ಒಂದು ತಿಂಗಳಿ ಹಿಂದೆಯೇ ಬರೆದುಕೊಂಡಿದ್ದ.

ದೀಪಕ್ ಸಿಂಗ್ ಹಿಂದೂ ಅವರಂತಹ ಜನರು ಒಂದು ರೀತಿಯ ಫ್ರಿಂಜ್ ಅಂಶ ಎಂದು ಸೂಚಿಸಲು ಬಿಜೆಪಿ ಇಷ್ಟಪಡುತ್ತದೆ. ಆದರೂ, ಮೋದಿ ಸರ್ಕಾರದಲ್ಲಿ ಸಚಿವರಾಗಿರುವ ಪಕ್ಷದ ಹಿರಿಯ ನಾಯಕರಾದ ಪರ್ವೇಶ್ ವರ್ಮಾ ಮತ್ತು ಅನುರಾಗ್ ಠಾಕೂರ್ ಅವರು ಜನವರಿ ಕೊನೆಯಲ್ಲಿ ನಡೆದ ದೆಹಲಿ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಹೇಳಿದ್ದನ್ನು ದೀಪಕ್‌ಸಿಂಗ್ ನಿಜವಾಗಿಯೂ ಪ್ರತಿಧ್ವನಿಸುತ್ತಿದ್ದ ಎಂಬುದು ಸತ್ಯ.

ಹಿಂದುತ್ವ ಪರಿಸರ ವ್ಯವಸ್ಥೆಯು ಕಾರ್ಯನಿರ್ವಹಿಸುವ ವಿಧಾನವೆಂದರೆ, ಈ ಉಗ್ರಗಾಮಿ ಅಂಶಗಳ ನಡುವೆ ನಿರಂತರ ಸಂವಹನವಿದೆ – ಆನ್‌ಲೈನ್‌ನಲ್ಲಿ ಸಹಜವಾಗಿ ಇದ್ದೇ ಇದೆ, ಆದರೆ ಪ್ರತಿಭಟನೆಗಳಲ್ಲಿ ಮತ್ತು ಬೀದಿಗಳಲ್ಲೂ ಪರಸ್ಪರ ಸಂವಹನ ಇದೆ, ಸಮಾನವಾಗಿ, ಈ ‘ಫ್ರಿಂಜ್’ ಎಂದು ಕರೆಯಲ್ಪಡುವವರು ಬಿಜೆಪಿಯ ಗೌರವಾನ್ವಿತ ‘ಮುಖ್ಯವಾಹಿನಿಯೊಂದಿಗೆ’ ನಿಯಮಿತವಾಗಿ ಸಂವಹನ ನಡೆಸುತ್ತಾರೆ.

ಆದರೆ ದೀಪಕ್ ಸಿಂಗ್ ಹಿಂದೂ ಅನೇಕ ಹಿಂದುತ್ವ ಕಾರ್ಯಕರ್ತರಲ್ಲಿ ಒಬ್ಬರು, ಅವರನ್ನು ದೆಹಲಿ ಹಿಂಸಾಚಾರದಲ್ಲಿ ಪೊಲೀಸರು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ್ದಾರೆ. ಅವರಂತೆ ಇನ್ನೂ ಅನೇಕರು ಇದ್ದಾರೆ.

ಅಂಕಿತ್ ತಿವಾರಿ: ಬಿಜೆಪಿ ಸ್ವಯಂಸೇವಕ ಮತ್ತು ಆರ್‌ಎಸ್‌ಎಸ್ ಸದಸ್ಯ

ಬಿಜೆಪಿಯ ಕಪಿಲ್ ಮಿಶ್ರಾ ನಿಜವಾದ ಪಿತೂರಿಯ ರಾಜಕೀಯ ಮುಖವಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಮೌಜ್ಪುರ ಮತ್ತು ಈಶಾನ್ಯ ದೆಹಲಿಯ ಇತರ ಸ್ಥಳಗಳಲ್ಲಿ ಹಿಂಸಾತ್ಮಕ ಜನಸಮೂಹವನ್ನು ಸಜ್ಜುಗೊಳಿಸಲು ಹಿಂದೂತ್ವ ಸಂಸ್ಥೆಗಳಿಗೆ ದೀಪಕ್ ಸಿಂಗ್ ಹಿಂದೂ ಸಹಾಯ ಮಾಡಿದರೆ, ಅಂಕಿತ್ ತಿವಾರಿ ಒಬ್ಬ ನೇರ ಹಿಂಸಾಚಾರದಲ್ಲಿ ಪಾಲ್ಗೊಂಡ ಮನುಷ್ಯ. ಈತ ಹಿಂಸಾಚಾರದಲ್ಲಿ ತೊಡಗಿದ ವಿಡಿಯೋ ಲಭ್ಯ ಇವೆ, ನಾನು ಮುಸ್ಲಿಮರನ್ನು ಕೊಂದೆ ಎಂದು ಬಹಿರಂಗವಾಗಿ ಸಂತೋಷ ಪಟ್ಟವನೀತ.

ಅಂಕಿತ್ ತಿವಾರಿಯ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳನ್ನು ದಿ ವೈರ್ ನೋಡಿದೆ, ಅದು ಮುಸ್ಲಿಮರ ಬಗ್ಗೆ ದ್ವೇಷದಿಂದ ಕೂಡಿದೆ. ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದೊಂದಿಗಿನ ತಮ್ಮ ಒಡನಾಟವನ್ನು ಬಹಿರಂಗವಾಗಿ ಜಾಹೀರಾತು ಮಾಡುತ್ತಾರೆ.

ಅಂಕಿತ್ ತಿವಾರಿ

ಅನೇಕ ವೀಡಿಯೊಗಳಲ್ಲಿ ತಿವಾರಿ ಬಹಿರಂಗವಾಗಿ ಪ್ರಚೋದಿಸುವುದನ್ನು ಮತ್ತು ಹಿಂಸಾಚಾರದಲ್ಲಿ ತೊಡಗಿದ್ದನ್ನು ನೋಡಬಹುದು. ಕುತೂಹಲಕಾರಿಯಾಗಿ, ಸಿಎಎ ವಿರೋಧಿ ಕಾರ್ಯಕರ್ತರು ಈಗ ಹಲವಾರು ತಿಂಗಳುಗಳ ಕಾಲ ಜೈಲಿನಲ್ಲಿದ್ದರೆ, ಅಂಕಿತ್ ತಿವಾರಿ ಅವರು ತಮ್ಮ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳಲ್ಲಿ ಸ್ವತಃ ಒದಗಿಸಿದ ಪುರಾವೆಗಳ ಹೊರತಾಗಿಯೂ ದೆಹಲಿಯ ಬೀದಿಗಳಲ್ಲಿ ಸಂಚರಿಸಲು ಮುಕ್ತನಾಗಿದ್ದಾನೆ!

ಆತಂಕಕಾರಿಯಾಗಿ, ಅವರು ಹಿಂಸಾಚಾರಕ್ಕೆ ಬೆದರಿಕೆ ಹಾಕುವ ವಿಟ್ರಿಯಾಲಿಕ್, ಪ್ರಚೋದನಾತ್ಮಕ ವೀಡಿಯೊಗಳನ್ನು ಪೋಸ್ಟ್ ಮಾಡುವುದನ್ನು ಮುಂದುವರಿಸಿದ್ದಾನೆ.
ನವೆಂಬರ್ 12, 2020 ರಂದು ಇನ್ಸ್ಟಾಗ್ರಾಮ್‌ನಲ್ಲಿ ಬಿಡುಗಡೆ ಮಾಡಿದ ಒಂದು ವೀಡಿಯೊದಲ್ಲಿ, ಕಾಶ್ಮೀರದ ‘ಕಟುವಾಸ್’ ಅಥವಾ ಮುಸ್ಲಿಮರನ್ನು ಕೊಲ್ಲುವ ಸಲುವಾಗಿ ತಾನು ಸೈನ್ಯಕ್ಕೆ ಸೇರಲು ಬಯಸಿದ್ದೇನೆ’ ಎಂದು ಅಂಕಿತ್ ತಿವಾರಿ ಹೇಳಿದ್ದಾನೆ.

ಕಳೆದ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ, ರಹಸ್ಯ ವರದಿಗಾರರು ಇನ್ಸ್ಟಾಗ್ರಾಮ್‌ನಲ್ಲಿ, ತಿವಾರಿ ಅವರೊಂದಿಗೆ ಚಾಟ್ ಮಾಡುವ ಸಲುವಾಗಿ ಮಹಿಳೆಯಂತೆ ನಟಿಸಿದ್ದಾರೆ. ಈ ಚಾಟ್‌ಗಳಲ್ಲಿ ಅಂಕಿತ್ ತಿವಾರಿ ತಾನು ಅನೇಕ ಮುಸ್ಲಿಮರನ್ನು ಕೊಂದಿರುವೆ ಎಂದು ಹೇಳಿಕೊಳ್ಳುತ್ತಾನೆ.

ಒಂದು ರಾತ್ರಿ ಮೌಜ್‌ಪುರದಲ್ಲಿ ಇದನ್ನು ಮಾಡಿದ್ದೇನೆ ಎಂದು ಅಂಕಿತ್ ತಿವಾರಿ ಹೇಳುತ್ತಾನೆ: “ನಾವೆಲ್ಲರೂ ಯುದ್ಧಸಾಮಗ್ರಿಗಳೊಂದಿಗೆ ರಾಷ್ಟ್ರೀಯತಾವಾದಿ ಸ್ನೇಹಿತರಾಗಿದ್ದೇವು…”
ಆರ್‌ಎಸ್‌ಎಸ್, ಭಜರಂಗದಳ ಮತ್ತು ಎಬಿವಿಪಿಯ ಕೆಲವು ಸದಸ್ಯರು ತಮ್ಮನ್ನು ಜಂಟಿ ತಂಡಗಳಾಗಿ ಸಂಘಟಿಸಿದ್ದಾರೆ ಎಂದು ಅಂಕಿತ್ ಹೇಳಿದ್ದಾನೆ. ಮುಸ್ಲಿಮರ ಮೇಲಿನ ದೌರ್ಜನ್ಯವನ್ನು ಸೂಚಿಸಲು ಕೋಡೆಡ್ ಭಾಷೆಯನ್ನು ಬಳಸಿ, “ನಾವು ಪ್ರಸಾದವನ್ನು ಸರಿಯಾಗಿ ವಿತರಿಸಿದ್ದೇವೆ” ಎಂದು ಹೇಳಿದ್ದಾನೆ.

ಮತ್ತೊಂದು ಇನ್ಸ್ಟಾಗ್ರಾಮ್ ಸಂಭಾಷಣೆಯಲ್ಲಿ, ತಿವಾರಿ ಅನೇಕ “ಮುಲ್ಲಾಗಳು” ಮತ್ತು “ಕಟುವಾಸ್” ಗಳನ್ನು ಕೊಂದಿದ್ದೇನೆ ಎಂದು ಹೇಳಿಕೊಂಡಿದ್ದಾನೆ.
ದೀಪಕ್ ಸಿಂಗ್ ಹಿಂದೂ ಅವನಂತೆಯೇ, ತಿವಾರಿ ಕೂಡ ಒಂಟಿ ತೋಳವಲ್ಲ, ಆದರೆ ಕಾರ್ಯಕರ್ತರ ಹಿಂಸಾತ್ಮಕ ಪರಿಸರ ವ್ಯವಸ್ಥೆಯ ಒಂದು ಭಾಗವಾಗಿದ್ದಾನೆ.

ದೊಡ್ಡ ಪ್ರಮಾಣದ ಹಿಂಸಾಚಾರಕ್ಕೆ ಮೂರು ವಾರಗಳ ಮೊದಲು, 2020 ರ ಜನವರಿ 30 ರಂದು ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಜಾಮಿಯಾ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಿದ ಕಾರ್ಯಕರ್ತ ‘ರಾಮ್‌ಭಕ್ತ್’ ಗೋಪಾಲ್ ನನಗೆ ಗೊತ್ತು ಎಂದು ತನ್ನ ಒಂದು ಚಾಟ್‌ನಲ್ಲಿ ಅಂಕಿತ್ ಹೇಳುತ್ತಾನೆ.

ಡಿಸೆಂಬರ್ 20, 2019 ರಂದು ಕೊನಾಟ್ ಪ್ಲೇಸ್‌ನಲ್ಲಿ ನಡೆದ ಆರ್‌ಎಸ್‌ಎಸ್ ಸಂಘಟಿತ ರ‍್ಯಾಲಿಯಲ್ಲಿ ಭಾಗವಹಿಸಿದ್ದೆ ಎಂದು ತಿವಾರಿ ನಮಗೆ ತಿಳಿಸಿದ್ದಾನೆ. ಅಲ್ಲಿ ಕಪಿಲ್ ಮಿಶ್ರಾ ಸಿಎಎ-ಎನ್‌ಆರ್‌ಸಿಯನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದರು ಎಂದಿದ್ದಾನೆ. ದೆಹಲಿಯಲ್ಲಿ ನಡೆದ ಅಮಿತ್ ಶಾ ಭಾಗವಹಿಸಿದ್ದ ಚುನಾವಣಾ ರ‍್ಯಾಲಿಯಲ್ಲಿ ತಾನಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾನೆ.

ತಾನು ಮತ್ತು ತನ್ನ ಸಹಚರರು ಮತ್ತೊಂದು ಸುತ್ತಿನ ಗಲಭೆಗಳಿಗೆ ಯೋಜಿಸುತ್ತಿದ್ದೇವೆ ಮತ್ತು ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಅಂಕಿತ್ ಹೆಮ್ಮೆಪಡುತ್ತಾನೆ. ದೆಹಲಿಯಲ್ಲಿ ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ಜಾರಿಗೆ ಬಂದಾಗಲೆಲ್ಲಾ ಮತ್ತೊಂದು ಸುತ್ತಿನ ಗಲಭೆಗಳು ನಡೆಯುತ್ತವೆ ಎಂದು ಅವನು ಹೇಳಿದ್ದಾನೆ.

2020 ರ ದೆಹಲಿ ಗಲಭೆಯ ಹಿಂದಿನ ನಿಜವಾದ ಪಿತೂರಿಯ ಕುರಿತ ದಿ ವೈರ್ ಸರಣಿಯ ಭಾಗ 2 ರಲ್ಲಿ, ರಾಜಧಾನಿಯ ಹಿಂದುತ್ವ ಜಾಲದಿಂದ ಇನ್ನೂ ನಾಲ್ಕು ಪಾತ್ರಗಳನ್ನು ನಾವು ನಿಮಗೆ ಪರಿಚಯಿಸುತ್ತೇವೆ. ಈ ಪಾತ್ರಗಳು ಮತ್ತು ಅವುಗಳು ಚೆಲ್ಲುವ ವಿಷವು ದೆಹಲಿಯಷ್ಟೇ ಅಲ್ಲ, ಒಟ್ಟಾರೆಯಾಗಿ ಭಾರತದ ಮೇಲೆ ನಡೆಸುವ ಆಡಳಿತ ಸ್ಥಾಪನೆಯ ರಾಜಕೀಯ ಯೋಜನೆಯ ಭಾಗವಾಗಿದೆ ಎಂಬುದನ್ನು ನಾವು ನಿಮಗೆ ತೋರಿಸುತ್ತೇವೆ.

ದಿ ವೈರ್‌ ಮಾಡಿದ ವಿಡಿಯೋ ವರದಿ ನೋಡಿ.

 


ಇದನ್ನೂ ಓದಿ: ದೆಹಲಿ ಗಲಭೆಗೆ ಅಮಿತ್ ಶಾ ಅವರೇ ನೇರ ಹೊಣೆ: ಸತ್ಯಶೋಧನಾ ಸಮಿತಿಯ ವರದಿ!

LEAVE A REPLY

Please enter your comment!
Please enter your name here