ಮುಸ್ಲಿಂ ಯುವಕನನ್ನು ವಿವಾಹವಾಗಿದ್ದಕ್ಕೆ ವಿವಾಹ ಪೂರ್ವ ಮತಾಂತರ ನಿಷೇಧ ಕಾನೂನಿನ ಅಡಿಯಲ್ಲಿ ಮೊರಾದಾಬಾದ್ ಜಿಲ್ಲೆಯ ಆಶ್ರಯ ಕೇಂದ್ರಕ್ಕೆ ಕಳುಹಿಸಲ್ಪಟ್ಟಿದ್ದ ಯುವತಿ ಇದೀಗ ತನ್ನ ಗಂಡನ ಕುಟುಂಬಕ್ಕೆ ಮರಳಿದ್ದಾರೆ. ವಿವಾಹ ಪೂರ್ವ ಮತಾಂತರ ನಿಷೇಧ ಕಾನೂನಿನ ಅಡಿಯಲ್ಲಿ ಮುಸ್ಲಿಂ ಯುವಕನನ್ನು ಹಾಗೂ ಆತನ ಸಹೋದರನನ್ನು ಬಂಧಿಸಲಾಗಿತ್ತು.
ತಾನು 1998 ರಲ್ಲಿ ಜನಿಸಿದ್ದೇನೆ ಮತ್ತು ರಶೀದ್‌ನೊಂದಿಗೆ ಈ ವರ್ಷದ ಜುಲೈ 24 ರಂದು ಡೆಹ್ರಾಡೂನ್‌ನಲ್ಲಿ ನಿಕಾಹ್ ಆಗಿದ್ದೇನೆ. ತಾನು ಮತಾಂತರಗೊಂಡಿದ್ದು ರಶೀದ್ ಅಲಿಯ ಕುಟುಂಬದೊಂದಿಗೆ ತೆರಳುತ್ತೇನೆ ಎಂದು 22 ವರ್ಷದ ಪಿಂಕಿ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದ್ದಾಗಿ ಮೊರಾದಾಬಾದ್‌ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿದ್ಯಾ ಸಾಗರ್ ಮಿಶ್ರಾ ಹೇಳಿದ್ಧಾರೆ.
ಇದನ್ನೂ ಓದಿ: ಉತ್ತರ ಪ್ರದೇಶ-ಅಂತರ್‌ಧರ್ಮಿಯ ವಿವಾಹ; ಗರ್ಭಿಣಿ ಸರ್ಕಾರಿ ಆಶ್ರಯತಾಣದಲ್ಲಿ, ಪತಿ ಜೈಲಿನಲ್ಲಿ!
ತಾನು ಸ್ವಇಚ್ಛೆಯಿಂದ ರಶೀದ್ ಅಲಿಯನ್ನು ಮದುವೆಯಾಗಿದ್ದಾಗಿ ನ್ಯಾಯಾಲಯದಲ್ಲಿ ತಿಳಿಸಿರುವ ಮೂರು ತಿಂಗಳ ಗರ್ಭಿಣಿಯು ಆಗಿರುವ ಯುವತಿಗೆ ಅಗತ್ಯವಿರುವ ಭದ್ರತೆಯನ್ನು ನೀಡುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿವಾಹ ಪೂರ್ವ ಮತಾಂತರ ನಿಷೇಧ ಕಾನೂನು ಜಾರಿಗೆ ಬರುವ ಮೊದಲೆ ತಾವು ಮದುವೆಯಾಗಿದ್ದೇವೆಂದು ದೃಢಪಡಿಸಿರುವ ದಂಪತಿಗಳ ಮದುವೆ ಪ್ರಮಾಣಪತ್ರವನ್ನು ನಾವು ಪರಿಶೀಲಿಸಲಿದ್ದೇವೆ ಎಂದು ಮೊರಾದಾಬಾದ್ ಪೊಲೀಸ್ ಅಧೀಕ್ಷಕರು ಹೇಳಿದ್ದಾರೆ.
22 ವರ್ಷದ ಹಿಂದೂ ಯುವತಿ ಜುಲೈನಲ್ಲಿ ಮುಸ್ಲಿಂ ಸಮುದಾಯದ ವ್ಯಕ್ತಿಯನ್ನು ಮದುವೆಯಾಗಿ ಮತಾಂತರಗೊಂಡಿದ್ದರು. ಈ ದಂಪತಿ ಡಿಸೆಂಬರ್ 5 ರಂದು ಮದುವೆಯನ್ನು ನೋಂದಾಯಿಸಲು ಹೋಗಿದ್ದಾಗ, ಬಜರಂಗದಳದ ಕಾರ್ಯಕರ್ತರು ಆಕೆಯ ಪತಿ ಮತ್ತು ಪತಿಯ ಸಹೋದರನನ್ನು ಪೊಲೀಸರಿಗೆ ಒಪ್ಪಿಸಿ ಈಕೆಯನ್ನು ಎಳೆದೊಯ್ದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು.
ಇದನ್ನೂ ಓದಿ: ಟಿಪ್ಪು ಸುಲ್ತಾನರ ಬಲವಂತದ ಮತಾಂತರ ಚರ್ಚೆಯೊಳಗಿನ ವಾಸ್ತವಗಳು!


