Homeಮುಖಪುಟಟಿಪ್ಪು ಸುಲ್ತಾನರ ಬಲವಂತದ ಮತಾಂತರ ಚರ್ಚೆಯೊಳಗಿನ ವಾಸ್ತವಗಳು!

ಟಿಪ್ಪು ಸುಲ್ತಾನರ ಬಲವಂತದ ಮತಾಂತರ ಚರ್ಚೆಯೊಳಗಿನ ವಾಸ್ತವಗಳು!

ಮನಸಾರೆ ಒಪ್ಪಿಕೊಳ್ಳದಿದ್ದರೆ ಆತ ಮುಸ್ಲಿಂ ಆಗಲು ಸಾಧ್ಯವೇ ಇಲ್ಲ ಎಂಬ ವಿಚಾರ ಇಸ್ಲಾಮಿನ ಬಗ್ಗೆ ಪ್ರಾಥಮಿಕ ಜ್ಞಾನವಿರುವರಿಗೆ ನಿಲುಕುವ ಸರಳ ತರ್ಕ. ಇದು ಟಿಪ್ಪು ಸುಲ್ತಾನ್‌ಗೆ ತಿಳಿದಿರಲಿಲ್ಲವೇ?

- Advertisement -
- Advertisement -

ಟಿಪ್ಪು ಸುಲ್ತಾನರ ಮೇಲೆ ಬಲವಂತದ ಮತಾಂತರದ ಆರೋಪ ಇಂದು ನಿನ್ನೆಯದಲ್ಲ. ಅಂತೆಯೇ ಅದನ್ನು ನಿರಾಕರಿಸುವ ಎಡಪಂಥೀಯ ಒಲವಿನ ಮತ್ತು ಯಾವುದೇ ಪಂಥಗಳ ಸಂಕೋಲೆಯೊಳಗೆ ಬಂಧಿಯಾಗದ ಇತಿಹಾಸಕಾರರ ಪ್ರತಿಪಾದನೆಯೂ ಇಂದು ನಿನ್ನೆಯದಲ್ಲ. ವಸಾಹತುಶಾಹಿ ಪರ ಇತಿಹಾಸಕಾರರ ಸುಳ್ಳಾರೋಪಗಳಿಗೆ ಅವರದ್ದೇ ವಸಾಹತು ಪ್ರಭುಗಳ ಜನಗಣತಿಯ ಆಧಾರಗಳನ್ನನ್ನುಸರಿಸಿ ಹಲವು ಇತಿಹಾಸಕಾರರು ದಾಖಲೆಗಳನ್ನು ನೀಡಿದ್ದಾರೆ. ಅವುಗಳೆಲ್ಲವೂ ಜನಸಾಮಾನ್ಯರ ಆಲೋಚನೆಗಳಿಗೆ ಸರಳವಾಗಿ ನಿಲುಕುವಂತಹವುಗಳು. ಅಲ್ಲೆಲ್ಲೂ ಇತಿಹಾಸ ಮಂಡನೆಯ ನಿರ್ದಿಷ್ಟ ಸಿದ್ಧಾಂತದ ಭಾರವೂ ಇಲ್ಲ. ಅವುಗಳ ಮೇಲೊಂದು ಪಕ್ಷಿ ನೋಟ ಬೀರುವ ಪ್ರಯತ್ನ ಮಾಡುತ್ತೇನೆ.

ಮಾರ್ಕ್ ವಿಲ್ಕ್ಸ್ ಎಂಬ ವಸಾಹತುಶಾಹಿಗಳ ಇತಿಹಾಸಕಾರ ತನ್ನ “Sketches of South Indian history” ಎಂಬ ಗ್ರಂಥದಲ್ಲಿ ‘ಟಿಪ್ಪು ಸುಲ್ತಾನ್ ಕೊಡಗಿನಲ್ಲಿ 70,000 ಹಿಂದೂಗಳನ್ನು ಇಸ್ಲಾಮಿಗೆ ಮತಾಂತರಿಸಿದ” ಎಂದು ಆಪಾದಿಸಿದ್ದಾನೆ. ಬಿ.ಎಲ್.ರೈಸ್ ಎಂಬ ಇನ್ನೋರ್ವ ವಸಾಹತುಶಾಹಿ ಪರ ಇತಿಹಾಸಕಾರ Mysore Gazzetiar ಒಂದರಲ್ಲಿ ಟಿಪ್ಪು ಸುಲ್ತಾನ್ ಕೊಡಗಿನಲ್ಲಿ‌85,000 ಜನರನ್ನು ಇಸ್ಲಾಂಗೆ ಮತಾಂತರಿಸಿದ” ಎಂದು ಆರೋಪಿಸಿದ್ದಾನೆ. ಇಲ್ಲೇ ಒಂದು ವ್ಯತ್ಯಾಸ ಗಮನಿಸಿ. ಇವರೀರ್ವರು ನೀಡುವ ಸಂಖ್ಯೆಗಳಲ್ಲಿ ‌15,000ದಷ್ಟು ಬೃಹತ್ ಅಂತರವಿದೆ. ಟಿಪ್ಪು ಹುತಾತ್ಮರಾಗಿದ್ದು 1799ರಲ್ಲಿ. 1836ರಲ್ಲಿ ಅಂದರೆ ಟಿಪ್ಪು ಹುತಾತ್ಮರಾಗಿ 37ವರ್ಷಗಳ ಬಳಿಕ ಬ್ರಿಟಿಷ್ ವಸಾಹತುಶಾಹಿ ಪ್ರಭುಗಳೇ ನಡೆಸಿದ ಜನಗಣತಿಯ ಪ್ರಕಾರ ಕೊಡಗಿನ ಒಟ್ಟು ಜನಸಂಖ್ಯೆ 65,437 ಮಾತ್ರ. 37‌ ವರ್ಷಗಳ ಹಿಂದೆ ಸಹಜವಾಗಿಯೇ ಜನಸಂಖ್ಯೆ ಕಡಿಮೆಯಿರುತ್ತದೆಯೇ ಹೊರತು ಹೆಚ್ಚಿರುವುದಿಲ್ಲ. ಇರುವ ಒಟ್ಟು ಜನಸಂಖ್ಯೆಗಿಂತ ಹೆಚ್ಚು ಜನರನ್ನು ಹೇಗೆ ಮತಾಂತರಿಸಲು ಸಾಧ್ಯ..? ವಾದಕ್ಕೆ ಅಷ್ಟೂ ಸಂಖ್ಯೆಯ ಜನರನ್ನು ಟಿಪ್ಪು ಮತಾಂತರಿಸಿದ್ದರೆಂದೇ ಇಟ್ಟುಕೊಳ್ಳೋಣ. ಟಿಪ್ಪುವಿನ ಆಡಳಿತ 1799 ಮೇ ನಾಲ್ಕರಂದು ಟಿಪ್ಪು ಹುತಾತ್ಮರಾಗುವುದರೊಂದಿಗೆ ಮುಗಿಯುತ್ತದೆ. ಬಲಾತ್ಕಾರದಿಂದ ಮತಾಂತರಕ್ಕೊಳಪಟ್ಟವರು ಆ ಬಳಿಕ ಅಂದರೆ ಓರ್ವ ಹಿಂದೂ ಅರಸನ ಕಾಲದಲ್ಲಿ ಮರು ಮತಾಂತರವಾಗಬಹುದಿತ್ತಲ್ವಾ..? ಹಾಗೆ ಸಾಮೂಹಿಕವಾಗಿ ಮರು ಮತಾಂತರಗೊಂಡ ಏಕೈಕ ನಿದರ್ಶನವನ್ನಾದರೂ ಇಂದು ಟಿಪ್ಪುವಿನ ಮೇಲೆ ಮತಾಂತರದ ಆರೋಪ ಹೊರಿಸುವವರು ತೋರಿಸಲಿ.

ಇನ್ನು ಮಂಗಳೂರು ಕ್ರೈಸ್ತರ ಮತಾಂತರದ ಕುರಿತಂತೆ ನೋಡೋಣ. ಫಾದರ್ ಮಿರಾಂಡ ಎಂಬವರು “ಟಿಪ್ಪು 60,000 ಕ್ರೈಸ್ತರನ್ನು ಬಲವಂತವಾಗಿ ಇಸ್ಲಾಮಿಗೆ ಮತಾಂತರಿಸಿದ” ಎಂದು ಆಪಾದಿಸುತ್ತಾರೆ. ಇನ್ನೊಂದೆಡೆ ಆತ ಹೀಗೆ ಆಪಾದಿಸುತ್ತಾರೆ. “ಟಿಪ್ಪು 40,000 ಕ್ರೈಸ್ತರನ್ನು ಮಂಗಳೂರಿನಿಂದ ಮೈಸೂರಿಗೆ ಕೊಂಡೊಯ್ದು ಮತಾಂತರಿಸಿದ್ದಾನೆ. ಅವರಲ್ಲಿ 15,000 ಕ್ರೈಸ್ತರು ಮಂಗಳೂರಿಗೆ ವಾಪಾಸು ಬಂದಿದ್ದಾರೆ.”
1894 ರಲ್ಲಿ ಬ್ರಿಟಿಷ್ ವಸಾಹತುಶಾಹಿಗಳೇ ರಚಿಸಿದ Madras Manual ಎಂಬ ಗ್ರಂಥದ South Canada gazattier ಎಂಬ ಉಪಶೀರ್ಷಿಕೆಯಡಿ 1890ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ಜನಸಂಖ್ಯೆ 70,000 ಎಂದು ದಾಖಲಿಸಲಾಗಿದೆ. ಹಾಗಿದ್ದರೆ ಸುಮಾರು ನೂರು ವರ್ಷಗಳ ಹಿಂದೆ ಮಂಗಳೂರಿನ ಒಟ್ಟು ಜನಸಂಖ್ಯೆ ಎಷ್ಟಿದ್ದಿರಬಹುದು..? ಅದರಲ್ಲಿ ಕ್ರೈಸ್ತರು ಎಷ್ಟಿದ್ದಿರಬಹುದು ಎಂದು ಊಹಿಸಿ ನೋಡಿ. ಟಿಪ್ಪುವಿನ ಕಾಲಾನಂತರ ಮಂಗಳೂರಿನಲ್ಲೂ ಕೂಡಾ ಕ್ರೈಸ್ತ ಧರ್ಮಕ್ಕೆ ಮರು ಮತಾಂತರಗೊಂಡ ಏಕೈಕ ನಿದರ್ಶನವಿಲ್ಲ.

ಇನ್ನೊಂದು ಸರಳ ತರ್ಕ ನೋಡೋಣ. ಓರ್ವ ಮುಸ್ಲಿಮೇತರ ಇಸ್ಲಾಮ್‌ಗೆ ಮತಾಂತರವಾಗಬೇಕೆಂದರೆ ಆತ ವಾಚಾ ಮತ್ತು ಮನಸಾ “ಅಶ್‌ಹದು ಅಲ್ಲಾಇ‌ಲಾಹ ಇಲ್ಲಲ್ಲಾಹ್,ವ‌ಅಶ್‌ಹದು ಅನ್ನ ಮುಹಮ್ಮದರ್ರಸೂಲುಲ್ಲಾಹ್” (ಅಲ್ಲಾಹನಲ್ಲದೇ ಅನ್ಯ ಆರಾಧ್ಯರಿಲ್ಲ, ಮುಹಮ್ಮದ್ (ಸ)ರು ಅಲ್ಲಾಹನ ಸಂದೇಶವಾಹಕರು) ಎಂದು ಮನಸಾರೆ ಒಪ್ಪಿ ಪ್ರತಿಜ್ಞೆ‌ಗೈಯಬೇಕು. ಒಬ್ಬ ವ್ಯಕ್ತಿ ಜೀವಭಯದಿಂದ ಬಾಯಲ್ಲಿ ಉಚ್ಚರಿಸಬಹುದೇ ಹೊರತು ಮನಸಾರೆ ಒಪ್ಪಿಕೊಳ್ಳಲಾರ. ಮನಸಾರೆ ಒಪ್ಪಿಕೊಳ್ಳದಿದ್ದರೆ ಆತ ಮುಸ್ಲಿಂ ಆಗಲು ಸಾಧ್ಯವೇ ಇಲ್ಲ ಎಂಬ ವಿಚಾರ ಇಸ್ಲಾಮಿನ ಬಗ್ಗೆ ಪ್ರಾಥಮಿಕ ಜ್ಞಾನವಿರುವರಿಗೆ ನಿಲುಕುವ ಸರಳ ತರ್ಕ. ಇಂತಹ ಸರಳ ತರ್ಕವನ್ನು ಅರಿಯದಷ್ಟು ಹುಂಬರೇ ಟಿಪ್ಪು ಸುಲ್ತಾನ್…?

ಟಿಪ್ಪು ಸುಲ್ತಾನರ ಮೇಲೆ ಚಿದಾನಂದಮೂರ್ತಿಯಾದಿಯಾಗಿ ಕೆಲವು ಮರಿ ಸಂಶೋಧಕರು 7,900 ದೇವಸ್ಥಾನಗಳ ಧ್ವಂಸದ ಆರೋಪವನ್ನು ಹೊರಿಸುತ್ತಾ ಬಂದಿದ್ದಾರೆ. ಸುಮ್ಮನೆ ಒಂದು ಸರಳ ತರ್ಕ ನೋಡೋಣ. ಟಿಪ್ಪುವಿನ ಒಟ್ಟು ಆಡಳಿತಾವಧಿ 17 ವರ್ಷಗಳು. ಅಂದರೆ 365×17= 6205 ದಿನಗಳು. ದಿನಕ್ಕೊಂದು ದೇವಸ್ಥಾನ ಧ್ವಂಸಗೈದರೂ‌ 6205 ದೇವಸ್ಥಾನಗಳಾಗುತ್ತವೆ. ಹಾಗಾದರೆ ಉಳಿದ 1695 ದೇವಾಲಯಗಳನ್ನು ಯಾರು ನಾಶಪಡಿಸಿದರು..? ಟಿಪ್ಪುವಿಗೆ ದೇವಾಲಯ ನಾಶಪಡಿಸುವುದೊಂದೇ ಕೆಲಸವಿದ್ದುದೇ..? ಬೇರೇನೂ ಕೆಲಸವೇ ಇರಲಿಲ್ಲವೇ..? ಟಿಪ್ಪು ಬ್ರಿಟಿಷರ ವಿರುದ್ಧ ನಾಲ್ಕು ಯುದ್ಧ ಮಾಡಿದ್ದು., ಮರಾಠಾ, ನಿಝಾಮ ಮುಂತಾದವರೊಂದಿಗೆ ಯುದ್ಧ,ದಂಗೆ ಎದ್ದ ರಾಜದ್ರೋಹಿಗಳನ್ನು ನಿಯಂತ್ರಣಕ್ಕೆ ತಂದದ್ದು, ಅಸಂಖ್ಯ ಅಭಿವೃದ್ದಿ, ಜನಕಲ್ಯಾಣ , ಕೈಗಾರಿಕೆ, ಕೃಷಿ ಯೋಜನೆ ಇತ್ಯಾದಿಗಳನ್ನು ಮಾಡಿದ್ದು, ಕುಟುಂಬದೊಂದಿಗೆ ಕಳೆದಿದ್ದು, ಆಡಳಿತ ನಡೆಸಿದ್ದೆಲ್ಲಾ ಯಾವಾಗ..? ಬಲ್ಲವರು ತಿಳಿಸುವರೇ…?

  • ಇಸ್ಮತ್ ಪಜೀರ್

ಇದನ್ನೂ ಓದಿ: ಟಿಪ್ಪು ಜನ್ಮ ದಿನಾಚರಣೆ: ಮೈಸೂರು ಹುಲಿ ಟಿಪ್ಪುವಿನ ಪುಸ್ತಕ ಪ್ರೇಮ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...