ಪ್ರತಿಯೊಂದು ದೇಶ, ರಾಜ್ಯ, ಜಿಲ್ಲೆ, ತಾಲೂಕು ಅಥವಾ ಗ್ರಾಮಗಳಲ್ಲಿನ ಸಮುದಾಯಗಳೆಲ್ಲವಕ್ಕೂ ತನ್ನದೇ ಆದ ಆಹಾರ ಸಂಸ್ಕೃತಿಯ ಬಗ್ಗೆ ಅಪಾರವಾದ ಗೌರವ ಮತ್ತು ಹೆಮ್ಮೆ ಇರುತ್ತದೆ. ಸ್ಥಳೀಯವಾಗಿ ಪ್ರಾಕೃತಿಕ ಪರಿಸರದಲ್ಲಿ ಲಭ್ಯವಿರುವ ಸಸ್ಯ, ಪ್ರಾಣಿ-ಮೀನುಗಳ ಆಧಾರದ ಮೇಲೆ ಆಹಾರ ಸಂಸ್ಕೃತಿಯೂ ವಿಕಾಸವಾಗಿರುತ್ತದೆ.
ಕೊಲಂಬಸ್ ದಕ್ಷಿಣ ಅಮೆರಿಕವನ್ನು ತಲುಪಿದ ಮೇಲೆ ಅಲ್ಲಿದ್ದ ಅಪಾರವಾದ ಆಹಾರ ವೈವಿಧ್ಯತೆ ಯುರೋಪ್ ಮತ್ತು ಏಷ್ಯಾ ಖಂಡಗಳಿಗೆ ತಲುಪುವಂತಾಯಿತು. ಇದನ್ನು ಕೊಲೊಂಬಿಯನ್ ಎಕ್ಸ್ಚೇಂಜ್ ಎನ್ನುತ್ತಾರೆ. ಅನಾನಸ್‍ಅನ್ನು ಹಿಂದೆಂದೂ ಕಾಣದ ಯುರೋಪಿಯನ್ನರು ಅದರ ಮೋಹದಿಂದ ಯುರೋಪಿನಲ್ಲಿ ಅನಾನಸ್ ತರದ ಕಟ್ಟಡಗಳನ್ನು ನಿರ್ಮಿಸಿ ಅದರ ವೈಭವವನ್ನು ಕೊಂಡಾಡಿದರು. ಅನೇಕ ಆರ್ಥಿಕ ತಜ್ಞರ ಪ್ರಕಾರ ದಕ್ಷಿಣ ಅಮೆರಿಕದ ಆಲೂಗಡ್ಡೆ ಯುರೋಪಿಯನ್ನರಿಗೆ ಸಿಕ್ಕದಿದ್ದಲ್ಲಿ ಅಲ್ಲಿ ಕೈಗಾರಿಕಾ ಕ್ರಾಂತಿಯೇ ಸಾಧ್ಯವಾಗುತ್ತಿರಲಿಲ್ಲ ಎನ್ನುತ್ತಾರೆ. ಹೊಟ್ಟೆಗೆ ಆಹಾರವಿದ್ದ ಕಾರಣ ಮನುಷ್ಯನ ಕ್ರಿಯಾತ್ಮಕ ಶಕ್ತಿ ನಗರ ನಿರ್ಮಾಣ ಮತ್ತು ಉತ್ಪಾದನೆಗೆ ಸಹಕರಿಸಿ ಕೈಗಾರಿಕಾ ಕ್ರಾಂತಿ ಉಂಟಾಯಿತು. ಬಿಜಿಎಲ್ ಸ್ವಾಮಿಯವರು ‘ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕಾ’ ಎನ್ನುವ ಪುಸ್ತಕ ಬರೆದು ಇಂದು ನಾವು ನಮ್ಮದೇ ಎಂದುಕೊಳ್ಳುವ ಬ್ಯಾಡಗಿ ಮೆಣಸಿನಕಾಯಿ ಕೂಡ ದಕ್ಷಿಣ ಅಮೇರಿಕಾದ ಚಿಲಿಯಿಂದ ಬಂದಿದ್ದು ಎಂದ ಮೇಲೆ ಸ್ವಲ್ಪ ಮುಜುಗರವಾಗುತ್ತದೆ. ತಮಾಷೆಗಾಗಿ ಹೀಗೆ ಹೇಳುವುದುಂಟು. ಭಾರತೀಯರು ಏನೇ ತಿಂದರು ಅದು ಮೆಣಸಿನಕಾಯಿಗೋಸ್ಕರವೇ ಎಂದು.
ಅದೆಲ್ಲ ಹಾಗಿರಲಿ, ರಾಗಿ ಮುದ್ದೆ ನಮ್ಮದೆ ಅಲ್ಲವೇ ಎಂದು ಹೆಮ್ಮೆ ಪಡೋಣ ಎಂದುಕೊಂಡರೆ, ಮೂಲತಃ ರಾಗಿ ಆಫ್ರಿಕಾ ಖಂಡದ ಇಥಿಯೋಪಿಯಾದಿಂದ ಬಂದದ್ದು ಎನ್ನುವುದನ್ನು ಮರೆಯುವಂತಿಲ್ಲ. ಹಾಗೆ ನೋಡಿದರೆ ನಾವೆಲ್ಲರೂ ಸಹ ಸುಮಾರು ಎಪ್ಪತ್ತು ಸಾವಿರದ ವರ್ಷದ ಹಿಂದೆ ಆಫ್ರಿಕಾ ಖಂಡದಿಂದ ಹೊರಟು ಇಡೀ ಜಗತ್ತನ್ನು ಆವರಿಸಿಕೊಂಡ ಪ್ರಳಯಾಂತಕ ಪ್ರಾಣಿಗಳೆ. ಅಷ್ಟೇ ಅಲ್ಲ, ನಮ್ಮ ಕೃಷಿ ಕೂಡ ಕೇವಲ ಸುಮಾರು 15 ಸಾವಿರ ವರ್ಷ ಹಳೆಯದ್ದಷ್ಟು. ಅದಕ್ಕೂ ಹಿಂದೆ ನಾವೆಲ್ಲರೂ ಬೇಟೆಯಾಡಿ ಬದುಕುತ್ತಿದ್ದ ಪ್ರಾಣಿಗಳೆ. ಬೆನಿಡಿಕ್ಟ್ ಆಂಡರ್‍ಸನ್ ತನ್ನ ‘ಇಮ್ಯಾಜಿನ್ಡ್ ಕಮ್ಯುನಿಟಿ’ ಎನ್ನುವ ಪುಸ್ತಕದಲ್ಲಿ ರಾಷ್ಟ್ರ, ಜನಾಂಗ, ಸಮುದಾಯ ಎನ್ನುವುದೆಲ್ಲವೂ ಕಲ್ಪಿತವೇ ಎನ್ನುತ್ತಾನೆ. ಭಾಷೆ ಕೂಡ ನಮ್ಮದು ಎಂದು ಬಹಳ ಹೆಗ್ಗಳಿಕೆಯಿಂದ ಹೇಳುವಾಗ ನೋಮ್ ಚಾಮ್ಸ್‌ಕಿಯ ಯೂನಿವರ್ಸಲ್ ಗ್ರಾಮರ್ ಸಿದ್ಧಾಂತದ ಪ್ರಕಾರ ಭಾಷೆಗಿಂತ ಮೊದಲು ವ್ಯಾಕರಣದ ಹುಟ್ಟು ಎನ್ನುವುದನ್ನ ಮರೆಯುವಂತಿಲ್ಲ. ವ್ಯಾಕರಣ ನಮ್ಮ ಮೆದುಳಿನ ಭೌತಿಕ ಹೆಣಿಕೆ ಹುಟ್ಟಿನಿಂದಲೇ ಇರುವಂತದ್ದು. ಮನುಷ್ಯನ ಅಡುಗೆ ಕೂಡ ಬಹಳ ಪುರಾತನವಾದದ್ದೇನು ಅಲ್ಲ. ಮತ್ತೆ ಬೇಯಿಸದೇ ಇರುವ ಆಹಾರ ಸಂಸ್ಕೃತಿಯೂ (Paleo diet ) ಇದೆ ಎನ್ನುವುದನ್ನು ಮರೆಯುವಂತಿಲ್ಲ.

ಬೆಳೆದ ಮತ್ತು ಪೃಕೃತಿಯಲ್ಲಿಯೇ ಸ್ಥಳೀಯವಾಗಿ ದಕ್ಕುವ ಆಹಾರ ಸಾಮಗ್ರಿಗಳನ್ನು ಬಳಸಿಕೊಂಡು ತನ್ನದೇ ಆಹಾರ ಸಂಸ್ಕೃತಿಯನ್ನು ಪ್ರತಿಯೊಂದು ಸಮುದಾಯವೂ ರೂಪಿಸಿಕೊಂಡಿರುವುದನ್ನು ಮತ್ತು ಅದು ವಿಕಾಸವಾಗಿರುವುದನ್ನು ಗಮನಿಸಬಹುದು. ಎಷ್ಟು ರೀತಿಯಲ್ಲಿ ಸಾಂಬಾರು ಮತ್ತು ರಸಂ ಮಾಡುಬಹುದೆನ್ನುವುದನ್ನು ಊಹಿಸಲಾಗದು. ಗುಲಾಬಿಯ ಬಗ್ಗೆ ಎಷ್ಟು ರೀತಿಯ ಕವಿತೆಗಳನ್ನು ಬರೆಯಬಹುದೆಂಬುದಕ್ಕೆ ಇತಿಮಿತಿ ಇರುವುದಿಲ್ಲವೋ ಹಾಗೆಯೆ ಒಂದೇ ಸಾಮಾಗ್ರಿಯನ್ನು ಹತ್ತು ಹಲವು ಬಗೆಯಲ್ಲಿ ಅಡುಗೆಯಲ್ಲಿ ಅಳವಡಿಸಿಕೊಳ್ಳುವ ಸಾಧ್ಯತೆ ಇದ್ದೇ ಇರುತ್ತದೆ. ಆಹಾರ ಸಂಸ್ಕೃತಿ ಎನ್ನುವಾಗ ಸಾಮಾನ್ಯವಾಗಿ ನಾವು ಹೆಗ್ಗಳಿಕೆಯಿಂದ ಮಾತನಾಡುವುದು, ನಾವು ಕಲ್ಪಿಸಿಕೊಂಡಿರುವ ಶ್ರೇಷ್ಠ, ಶುದ್ಧ, ಉಚ್ಛ ಎನ್ನುವ ಆಹಾರ ಸಂಸ್ಕೃತಿಯ ಬಗ್ಗೆ. ಬುಡಕಟ್ಟು ಜನಾಂಗಗಳ ಮತ್ತು ತಳ ಸಮುದಾಯಗಳ ಬಹು ಆಹಾರ ಸಂಸ್ಕೃತಿಯನ್ನು ನಾವು ಅಷ್ಟಾಗಿ ವಿಜೃಂಭಿಸುವುದಿಲ್ಲ ಮತ್ತು ಅವುಗಳ ಬಗ್ಗೆ ಬಹಳ ಕೀಳರಿಮೆ ಉಳಿಸಿಕೊಂಡಿದ್ದೇವೆ. ಕರ್ನಾಟಕದಲ್ಲಿಯೇ ಸುಮಾರು ಸಾವಿರ ರೀತಿಯ ಕೀಟಗಳ ಭಕ್ಷಣೆ ಉಂಟು. ಕಾಡಿನ ವೈವಿಧ್ಯಮಯ ಸಂಪತ್ತನ್ನು ಅಡುಗೆಗೆ ಬಳಸುವುದುಂಟು. ವಿ.ಗಾಯಿತ್ರಿಯವರ ಪುಟ್ಟೀರಮ್ಮನ ಪುರಾಣ ಎನ್ನುವ ಪುಸ್ತಕದಲ್ಲಿ ನಂಜನಗೂಡಿನ ಅವಿದ್ಯಾವಂತ ಮಹಿಳೆ ಪುಟ್ಟೀರಮ್ಮ ಸುಮಾರು 300ಕ್ಕೂ ಹೆಚ್ಚು ಕಾಡು ಸೊಪ್ಪುಗಳನ್ನ ಅಡುಗೆಗೆ ಬಳಸುತ್ತಾಳೆ ಎಂದು ದಾಖಲಿಸಿದ್ದಾರೆ. ಇದು ನಿಜವಾದ ಆಹಾರ ಸಂಸ್ಕೃತಿ. ಸಾಮಾನ್ಯವಾಗಿ ಔಷಧೀಯ ಗಿಡವನ್ನು ಕಳೆಯನ್ನಾಗಿ ನೋಡುವವರನ್ನು ಇಂದು ವಿದ್ಯಾವಂತ ನಾಗರಿಕ ಎಂದು ನಾವು ಪರಿಗಣಿಸುತ್ತೇವೆ. ಮಾರ್ಕ್ ಟ್ವೈನ್ Cauliflower is a cabbage with college education ಎಂದು ಹೇಳಿದ್ದಾನೆ. ಸಮಾಜ ಶಾಸ್ತ್ರಜ್ಞ ಎಂ.ಎನ್.ಶ್ರೀನಿವಾಸ್ ಇರುಳಾ ಸಮುದಾಯದೊಂದಿಗೆ ಮಾತನಾಡುತ್ತ, ನೀವು ಇಲಿ ತಿನ್ನುತ್ತೀರಾ ಎಂದಾಗ ಅವರು ಕೋಪಗೊಂಡು ಇಲಿಗಳಲ್ಲಿರುವ ಹತ್ತಾರು ಬಗೆಯನ್ನು ಹೇಳಿ ನಾವು ಬಳಸುವ ಇಲಿಯ ಮೇಲೆ ಮೂರು ಗೆರೆಗಳುಂಟು ಎಂದು ಬಣ್ಣಿಸುತ್ತಾರೆ. ಹೀಗೆ ಇಂತಹ ಆಹಾರ ಸಂಸ್ಕೃತಿಗಳ ಬಗ್ಗೆ ಸಮಾಜ ಶಾಸ್ತ್ರೀಯ ಅಧ್ಯಯನವೂ ಬಹಳ ಕಮ್ಮಿ.
ಆಹಾರ ಸಂಸ್ಕೃತಿಯಲ್ಲಿ ಇದು ನಮ್ಮದೇ ಎಂದು ಹೇಳುವುದು ಬಹಳ ಕಷ್ಟ. ಉದಾಹರಣೆಗೆ ಪಶ್ಚಿಮ ಬಂಗಾಳಕ್ಕೆ ರಸಗುಲ್ಲಾದ ಭೌತಿಕ ಹಕ್ಕಾದ ಬೌಗೋಳಿಕ ಸೂಚ್ಯಂಕವನ್ನು (GI) ನೀಡಿದಾಗ ಒರಿಸ್ಸಾ ರಾಜ್ಯದವರು ತಕರಾರು ತಂದರು. ಏಕೆಂದರೆ ಅನೇಕ ವರ್ಷಗಳಿಂದ ರಸಗುಲ್ಲಾವನ್ನು ಪಕ್ಕದ ಹಳ್ಳಿಯೊಂದರಿಂದ ಪುರಿಯ ಜಗನ್ನಾಥ ದೇವಾಲಯಕ್ಕೆ ನೈವೇದ್ಯಕ್ಕೆ ತಂದುಕೊಡುತ್ತಿದ್ದ ತಿಂಡಿಯಾಗಿದೆ.
ಇಂತಹ ಸಂದರ್ಭದ ನಡುವೆಯೂ ನಮ್ಮ ಕನ್ನಡ ನಾಡಿನ ಆಹಾರ ಸಂಸ್ಕೃತಿಯನ್ನು ಅಲ್ಲಗಳೆಯುವುದು ಅಸಾಧ್ಯವೆ. ಕರ್ನಾಟಕದ ಆಹಾರ ಸಂಸ್ಕೃತಿಯೆಂದರೆ ನಮಗೆ ಎದ್ದು ಕಾಣುವುದು ದಕ್ಷಿಣ ಕರ್ನಾಟಕದ ಮುದ್ದೆ ಸೊಪ್ಪಿನ ಸಾರು, ಉತ್ತರ ಕರ್ನಾಟಕದ ಜೋಳದ ರೊಟ್ಟಿ ಎಣಗಾಯಿ ಪಲ್ಯ, ಮಂಗಳೂರಿನ ಕುಚ್ಚಲಕ್ಕಿ ಗಂಜಿ ಒಣಮೀನು, ಕೊಡವರ ಪಂದಿಕರಿ, ಮಲೆನಾಡಿನ ಅಕ್ಕಿರೊಟ್ಟಿ ಹೀಗೆ. ಮೂಲ ಊಟವನ್ನು ಬಿಟ್ಟು ಪರಿಗಣಿಸುವುದಾದರೆ ಧಾರವಾಡದ ಪೇಡ, ಬೆಳಗಾವಿಯ ಕುಂದಾ, ಮೈಸೂರು ಪಾಕ್, ಮಸಾಲಾ ದೋಸೆ, ಕರದಂಟು ಹೀಗೆ ಪಟ್ಟಿಮಾಡಬಹುದು. ಹಾಗೆಯೆ ಮಂಗಳೂರಿನ ಬ್ಯಾರಿ ಸಮುದಾಯದ ಊಟ, ಲಂಬಾಣಿಯವರ ಊಟ ಹೀಗೆ ಸಮುದಾಯದಿಂದ ಸಮುದಾಯಕ್ಕೆ ಸೂಕ್ಷ್ಮ ವ್ಯತ್ಯಾಸಗಳನ್ನು ಗಮನಿಸಬಹುದು.
ಉಡುಪಿಯ ಶಿವಳ್ಳಿ ಬ್ರಾಹ್ಮಣರು ಸೌಟು ಹಿಡಿದು ಇಡೀ ಭಾರತಕ್ಕೆ ತಮ್ಮ ಆಹಾರ ಸಂಸ್ಕೃತಿಯನ್ನು ಹೊಟೇಲ್ ವ್ಯಾಪಾರದ ಮೂಲಕ ಪಸರಿಸಿದ್ದಾರೆ. ಮುಂಬೈ ನಗರದಲ್ಲಿಯೇ ಸುಮಾರು 15 ಸಾವಿರ ಉಡುಪಿ ಹೋಟೆಲ್‍ಗಳಿವೆ ಎನ್ನುವ ಅಂದಾಜು. ದೆಹಲಿಯ ಮದ್ರಾಸ್ ಕೆಫೆ, ಚೆನ್ನೈನ ವುಡ್‍ಲ್ಯಾಂಡ್ಸ್ ಇವರು ಹುಟ್ಟುಹಾಕಿದ ಹೊಟೇಲ್‍ಗಳೆ.
ಇಂದು ಆಹಾರ ಸಂಸ್ಕೃತಿ ಅನೇಕ ಕೊಡುಕೊಳ್ಳುವಿಕೆಗಳ ಹಂತದಲ್ಲಿದೆ. ಜಾಗತೀಕರಣ, ಮನುಷ್ಯನ ಓಡಾಟ ಮತ್ತು ವಿಭಿನ್ನ ಸಂಸ್ಕೃತಿಗಳು ಪಸರುವಿಕೆಯ ಕಾರಣದಿಂದ ಆಹಾರ ಸಂಸ್ಕೃತಿಯಲ್ಲಿ ಹೊಸ ಹೊಸ ಬೆಸುಗೆ ಸಾಧ್ಯವಾಗಿದೆ. ಬೆಂಗಳೂರು ನಗರದಲ್ಲಿಯೇ ಇಂದು ಸುಮಾರು 20 ಜಪಾನಿ ಹೊಟೆಲ್‍ಗಳಿವೆ. ಆಹಾರ ಸಂಸ್ಕೃತಿ ಎಂಬುದು ಸಹ ನಿಂತ ನೀರಲ್ಲ. ಹೊಸ ಅಡುಗೆ ತಂತ್ರಜ್ಞಾನಗಳ ಮತ್ತು ಯಂತ್ರಗಳ ಅಳವಡಿಕೆಯೂ ಸಹ ಆಹಾರ ಸಂಸ್ಕೃತಿಯನ್ನು ಹೊಸ ದಿಕ್ಕಿನತ್ತ ಹರಿಸಬಹುದು.
ಆಹಾರ ಸಂಸ್ಕೃತಿಯೆಂದರೆ ಆಹಾರವನ್ನು ಸೇವಿಸುವಾಗ ಇಳಿವಯಸ್ಸಿನ ನೆನೆಪು ಮರುಕಳಿಸುವುದು. ಅಜ್ಜಿಯ ನೆನೆಪು ತರಿಸುವುದು. ತನ್ನ ಹುಟ್ಟೂರು ಮತ್ತು ಸಂಗಾತಿಗಳನ್ನು ಜೀವಂತಗೊಳಿಸುವುದು. ಹೀಗೆ Eating is a massive memory.



