| ನಾನುಗೌರಿ ಡೆಸ್ಕ್ |
ಕಳೆದ ಎರಡು ಮೂರು ದಿನಗಳಿಂದ ಸಹಾಯಕ ಪ್ರಾಧ್ಯಾಪಕ ಹುದ್ದೆ ಆಕಾಂಕ್ಷಿಗಳಿಗೆ ಶಾಕ್ ನ್ಯೂಸ್, 35 ವರ್ಷ ಮೇಲ್ಪಟ್ಟವರು ಇನ್ನು ಮುಂದೆ ಪರೀಕ್ಷೆ ಬರೆಯುವಂತಿಲ್ಲ ಎಂಬ ವಾಟ್ಸಾಪ್ ಸಂದೇಶವೊಂದು ವೈರಲ್ ಆಗಿತ್ತು.
ಇದನ್ನು ಭಾರತ ಸರ್ಕಾರವೇ ನಿರ್ಧರಿಸಿದ್ದು ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯವು ಯು.ಜಿ.ಸಿಗೆ ಆದೇಶ ನೀಡಲಾಗಿದೆ, ಎಲ್ಲಾ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆ ಬರೆಯುವವರಿಗೆ 35ವರ್ಷದ ವಯೋಮಿತಿ (ಎಲ್ಲಾ ಜಾತಿಯವರಿಗೂ) ನಿಗಧಿಗೊಳಿಸಲಾಗಿದೆ ಎಂಬ ಸಂದೇಶ ಹರಿದಾಡಿತ್ತು.
01.06.2019ರಿಂದಲೇ ಈ ಆದೇಶ ಜಾರಿಗೆ ಬರಲಿದ್ದು ಮಾನವ ಸಂಪನ್ಮೂಲ ಸಚಿವರ ಹೆಸರಿನಲ್ಲಿ ಪ್ರೆಸ್ ನೋಟ್ ಬಂದ ರೀತಿಯ ಸಂದೇಶ ಇದಾಗಿದ್ದು ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರು ಇದನ್ನು ಸಾಕಷ್ಟು ಸಂಖ್ಯೆಯಲ್ಲಿ ಷೇರ್ ಮಾಡಿದ್ದರು. ಇದನ್ನು ನೋಡಿ ಹಲವು ಆಕಾಂಕ್ಷಿಗಳು ಗಾಬರಿ ಬಿದ್ದಿದ್ದು ಸಹ ನಿಜ.
ಆದರೆ ಇದು ಸಂಪೂರ್ಣ ಸುಳ್ಳು ಸಂದೇಶವಾಗಿದೆ. ಈ ಕುರಿತು ಯು.ಜಿ.ಸಿ ಸದಸ್ಯರಾದ ಪ್ರೊ.ಜಿ ಗೋಪಾಲ ರೆಡ್ಡಿಯವರು ಸ್ಪಷ್ಟನೆ ನೀಡಿದ್ದು ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಯಾವುದೇ ರೀತಿಯ ವಯೋಮಿತಿ ಇಲ್ಲ ಎಂದು ತಿಳಿಸಿದ್ದಾರೆ. ಯಾರೋ ಕಿಡಿಗೇಡಿಗಳು ಆಕಾಂಕ್ಷಿಗಳಲ್ಲಿ ಭಯ ಹುಟ್ಟಿಸಲು ಈ ಸಂದೇಶ ಹರಿಯಬಿಟ್ಟಿದ್ದಾರೆ ಅದನ್ನು ನಂಬಬೇಡಿ ಎಂದು ಹೇಳಿದ್ದಾರೆ.
ಮೊದಲನೇಯದಾಗಿ ಎಂ.ಎಚ್.ಆರ್.ಡಿ ಯಾಗಲಿ, ಯು.ಜಿ.ಸಿ ಯಾಗಲಿ ವಾಟ್ಸಾಪ್ ಬರಹದ ಮೂಲಕ ಪ್ರೆಸ್ ನೋಟ್ ಕಳಿಸುವುದಿಲ್ಲ. ಗೆಜೆಟ್ ಆದೇಶಗಳ ಮೂಲಕವೇ ಕಳಿಸುತ್ತಾರೆ. ಹಾಗಾಗಿ ಈ ರೀತಿಯ ಸಂದೇಶಗಳನ್ನು ನಂಬುವ ಮೊದಲು ಪುನರ್ ಪರಿಶೀಲನೆ ನಡೆಸಬೇಕು.
ಕಳೆದ 6-7 ವರ್ಷಗಳಿಂದ ಈ ಸುಳ್ಳು ಸುದ್ದಿಗಳು ಹರಿದಾಡುವುದು ಹೆಚ್ಚಾಗಿದೆ. ಅದರಲ್ಲೂ ಸಾಮಾಜಿಕ ತಾಲತಾಣಗಳ ಬಳಕೆ ಹೆಚ್ಚಾದ ಮೇಲಂತೂ ಇದು ಮಿತಿ ಮೀರಿದೆ. ಕೆಲ ಟಿವಿ ಚಾನೆಲ್, ಪತ್ರಿಕೆಗಳೂ ಈ ದುಷ್ಟತನಕ್ಕಿಳಿದಿರುವುದು ಅಪಾಯಕಾರಿಯಾಗಿದೆ. ಇದರಿಂದ ಮುಗ್ಧ ಜನರು ಮೋಸ ಹೋಗುತ್ತಿದ್ದಾರೆ. ಹಾಗಾಗಿ ವಿದ್ಯಾವಂತರಾದವರು ಯಾವುದೇ ಸಂದೇಶವನ್ನು ನಂಬುವ ಮತ್ತು ಫಾರ್ವಾಡ್ ಮಾಡುವ ಮೊದಲು ಫ್ಯಾಕ್ಟ್ ಚೆಕ್ ಮಾಡಬೇಕೆಂದು ನಾನುಗೌರಿ.ಕಾಂ ಮನವಿ ಮಾಡುತ್ತದೆ. ಜೊತೆಗೆ ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚಲು ಈ ಕೆಳಗಿನ ವಿಧಾನಗಳನ್ನು ಬಳಸಲು ಸೂಚಿಸುತ್ತೇವೆ.
ಇದನ್ನು ತಡೆಗಟ್ಟುವುದು ಹೇಗೆ? ಅಂದರೆ ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚುವುದು ಹೇಗೆ
ಕಾನೂನಿನ ವ್ಯಾಪ್ತಿಯಲ್ಲಿ ಪೋಲಿಸ್ ಮತ್ತು ಇತರ ತನಿಖಾ ಏಜೆನ್ಸಿಗಳು ಇದರ ಸತ್ಯಾಸತ್ಯತೆ ಪತ್ತೆಹಚ್ಚುವ ಕೆಲಸ ಮಾಡುತ್ತಿರುತ್ತವೆ. ಜನ ಸಾಮಾನ್ಯರು ಮಾಡಬೇಕಾಗಿರುವುದು ಇಷ್ಟೇ:
- ಸುದ್ದಿ ಮೂಲ ಪರೀಕ್ಷಿಸಿ. ಸಂದೇಶವನ್ನು ಬಿಟ್ಟು ಅದರ ಮೂಲದ ಬಗ್ಗೆ ಹುಡುಕಿ. ಯಾರು ಇದನ್ನು ನಿಮಗೆ ಕಳುಹಿಸಿದ್ದಾರೆ ಅವರು ಕೇವಲ ಸ್ನೇಹಿತರೇ, ಯಾವುದೋ ಗುಂಪಿನ ಸದಸ್ಯರೇ, ನಂಬಿಕಸ್ಥರೇ ತಿಳಿಯಿರಿ. ಜಾಲತಾಣದ ಉದ್ದೇಶವೇನು, ಅವರ ಸಂಪರ್ಕ ವಿಳಾಸ ದೂರವಾಣಿ ಸಖ್ಯೆ ಇದೆಯೇ ನೋಡಿ.
- ಕೇವಲ ಸುದ್ದಿಯ ತಲೆಬರಹ ಓದಬೇಡಿ, ಅವು ರೋಚಕವಾಗಿರುತ್ತವೆ, ಇದೀ ಸುದ್ದಿ ಓದಿ ನೋಡಿ.
- ಸುದ್ದಿಯ ಲೇಖಕರ/ಪ್ರಕಾಶಕರ ಬಗ್ಗೆ ಸ್ವಲ್ಪ ಹುಡುಕಿ, ಅವರು ಪೂರ್ವಗ್ರಹ ಪೀಡಿತರಾಗಿರಬಹುದು.
- ಸುದ್ದಿಗೆ ಏನಾದರೂ ಬೆಂಬಲಿಸುವಂತಹ ಮೂಲದ ಲಿಂಕ್ ಇದ್ದರೆ ಅದನ್ನು ಜಾಲಿಸಿ ನೋಡಿ. ಪೂರಕವಾಗಿದೆಯೇ ಇಲ್ಲವೇ ಎಂದು. ಎಷ್ಟೋ ಬಾರಿ ಅಂತಹ ಜಾಲತಾಣವೇ ಇರುವುದಿಲ್ಲ.
- ಕೇವಲ ಒರ್ವ ದೊಡ್ಡ ವ್ಯಕ್ತಿಯ ಭಾವಚಿತ್ರವಿದೆ ಮತ್ತು ಅದರೊಂದಿಗೆ ಏನೋ ಹೇಳಿಕೆ ಇದೆ ಎಂದ ಮಾತ್ರಕ್ಕೆ ಅದು ನಿಜವಾಗುವುದಿಲ್ಲ. ಚಾಣಕ್ಯ, ನಾಟ್ರಡ್ಯಾಮಸ್, ಚರ್ಚಿಲ್, ಮಕ್ಕಾಲೆ ಮುಂತಾದವರ ಭಾವಚಿತ್ರದ ಜೊತೆ ಏನೇನೋ ಸಂದೇಶಗಳು ಹರಿದಾಡುತ್ತಿವೆ.
- ಸುದ್ದಿಯ ದಿನಾಂಕ ನೋಡಿ. ಹಳೆಯ ಸುದ್ದಿಗಳು ಹೊಸ ತಲೆಬರಹದೊಂದಿಗೆ ಮತ್ತೆ ಮತ್ತೆ ಕಾಣಸಿಗುತ್ತವೆ.
- ಸುದ್ದಿಯೋ ಕೇವಲ ತಮಾಷೆಯೋ ಸರಿಯಾಗಿ ನೋಡಿ. ಏಪ್ರಿಲ್ 1ರ ಸಂದೇಶಗಳು ವರ್ಷವಿಡೀ ಸುತ್ತುತ್ತಿರುತ್ತವೆ.
- ನಿಮ್ಮ ಸ್ವಂತ ಪೂರ್ವನಿರ್ಧಾರಿತ ನಂಬಿಕೆಗಳು ಸುಳ್ಳನ್ನೇ ನಿಜ ಎಂದು ನಂಬುವಂತೆ ಮಾಡಬಹುದು. ಅದನ್ನು ಸರಿಪಡಿಸಿಕೊಳ್ಳಿ.
- ತಜ್ಞರನ್ನು ಸಂಪರ್ಕಿಸಿ. ಸಂದೇಶ ನಿಜವೋ ಸುಳ್ಳೋ ಎಂದು ಸಂದೇಹವಿದ್ದಲ್ಲಿ ಅದನ್ನು ಮುಂದಕ್ಕೆ ಪಸರಿಸದೇ ಅದನ್ನು ನಂಬಿಕಸ್ಥ ಸತ್ಯಾಸತ್ಯತೆ ಪರಿಶೀಲಿಸುವ ಜಾಲತಾಣಗಳಿಗೆ ಕಳುಹಿಸಿ (ಆಲ್ಟ್-ನ್ಯೂಸ್, ಫ್ಯಾಕ್ಟ್-ಚೆಕರ್, ಎಸ್.ಎಂ.ಹೋಕ್ಸ್ ಸ್ಲೇಯರ್ ಇತ್ಯಾದಿ). ಸತ್ಯವನ್ನು ಬೆಂಬಲಿಸುವ ಜಾಲತಾಣಗಳನ್ನು ಬೆಂಬಲಿಸಿ.
ಸುಳ್ಳು ಸುದ್ದಿ/ಅಪಪ್ರಚಾರ ಪಸರಿಸಬೇಡಿ. ಇದರಿಂದ ದೇಶಕ್ಕೆ ಯಾವ ಪ್ರಯೋಜನವೂ ಇಲ್ಲ.


