ಈ ಬಾರಿಯ ಆಸ್ಕರ್ ಪ್ರಶಸ್ತಿ ವಿಜೇತ ನಟ ವಿಲ್ ಸ್ಮಿತ್ ವೇದಿಕೆಯಲ್ಲಿಯೇ ಸಹ ನಟ ಮತ್ತು ನಿರೂಪಕ ಕ್ರಿಸ್ ರಾಕ್ ಕೆನ್ನೆಗೆ ಬಾರಿಸಿದ್ದಕ್ಕಾಗಿ ಬೇಷರತ್ ಕ್ಷಮೆಯಾಚಿಸಿದ್ದಾರೆ.
ಕಿಂಗ್ ರಿಚರ್ಡ್ಸ್ ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ವಿಭಾಗದಲ್ಲಿ ಪ್ರಶಸ್ತಿ ಗಳಿಸಿದ ವಿಲ್ ಸ್ಮಿತ್, ಆಸ್ಕರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ತಮ್ಮ ಪತ್ನಿ ಜಾಡಾ ಪಿಂಕೆಟ್‌ರೊಂದಿಗೆ ಆಗಮಿಸಿದ್ದರು. ಸಮಾರಂಭದ ಒಂದು ಘಟ್ಟದಲ್ಲಿ ನಿರೂಪಣೆ ಮಾಡುತ್ತಿದ್ದ ನಟ ಮತ್ತು ಕಾಮಿಡಿಯನ್ ಕ್ರಿಸ್ ರಾಕ್, ಜಾಡಾ ಪಿಂಕೆಟ್ ತಲೆಕೂದಲಿನ ಬಗೆಗೆ ಜೋಕ್ ಮಾಡಿದ್ದರು. ಇದರಿಂದ ಸಿಟ್ಟಿಗೆದ್ದ ವಿಲ್ ಸ್ಮಿತ್ ವೇದಿಕೆಯೇರಿ ರಾಕ್ ಕೆನ್ನಗೆ ಬಾರಿಸಿದ್ದರು.
ಈ ಸಂದರ್ಭದಲ್ಲಿ ಆಘಾತಕ್ಕೊಳಗಾದ ರಾಕ್ ಸ್ವಲ್ಪ ಹೊತ್ತು ಮೌನವಾಗಿದ್ದರು. ಆಗ ಕೆಳಗಿದ್ದ ವಿಲ್ ಸ್ಮಿತ್, “ನನ್ನ ಪತ್ನಿಯ ಬಗ್ಗೆ ಹೇಳಬೇಡ, ನನ್ನ ಪತ್ನಿಯ ಬಗ್ಗೆ ನಿನ್ನ ಕೊಳಕು ಬಾಯಿಂದ ಮಾತನಾಡಬೇಡ” ಎಂದು ಕೂಗಿದ್ದರು. ಆಗ ಕ್ರಿಸ್ ರಾಕ್ ಒಕೆ ಒಕೆ ಎಂದಿದ್ದರು.
ಈ ಘಟನೆಯು ತಮಾಷೆಯೋ, ನಿಜವೋ ಎಂದು ಅರ್ಥೈಸುವಲ್ಲಿ ಪ್ರೇಕ್ಷಕರು ಗೊಂದಲದಲ್ಲಿದ್ದರು. ಆಸ್ಕರ್ ಪ್ರಶಸ್ತಿ ನೀಡುವ ಅಕಾಡೆಮಿ ಸಂಸ್ಥೆಯು ಈ ಕುರಿತು ಇಬ್ಬರನ್ನು ಮಾತನಾಡಿಸಿದ್ದಲ್ಲದೆ ತನಿಖೆಗೆ ಆದೇಶಿಸಿದೆ.
ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ನಟ ವಿಲ್ ಸ್ಮಿತ್ ಕ್ರಿಸ್ ರಾಕ್ ಬಳಿ ಬೇಷರತ್ ಕ್ಷಮೆಯಾಚಿಸಿದ್ದಾರೆ. “ನಾನು ನಿಮ್ಮಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಲು ಬಯಸುತ್ತೇನೆ ಕ್ರಿಸ್. ಆ ಸಂದರ್ಭದಲ್ಲಿ ನಾನು ಸ್ಥಿಮಿತತೆ ಕಳೆದುಕೊಂಡಿದ್ದೆ ಮತ್ತು ತಪ್ಪು ಮಾಡಿದ್ದೇನೆ. ಈ ಘಟನೆಯಿಂದ ನನಗೆ ಮುಜುಗರವಾಗಿದೆ. ನಾನು ಹೇಗಿರಬೇಕೆಂದು ಬಯಸುತ್ತೀನೊ ಅದಕ್ಕೆ ವಿರುದ್ಧವಾಗಿ ಅಂದು ನಡೆದುಕೊಂಡಿದ್ದೇನೆ” ಎಂದು ತಮ್ಮ Instagram ನಲ್ಲಿ ಬರೆದುಕೊಂಡಿದ್ದಾರೆ.
“ನನ್ನ ಬಗೆಗಿನ ಜೋಕ್‌ಗಳು ನಮ್ಮ ಕೆಲಸದ ಭಾಗವಾಗಿವೆ. ಆದರೆ ಜಾಡಾ ಅವರ ವೈದ್ಯಕೀಯ ಸ್ಥಿತಿಯ ಬಗೆಗಿನ ಜೋಕ್ ನನಗೆ ಸಹಿಸಲಾಗಲಿಲ್ಲ ಮತ್ತು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದೆ. ಆದರೆ ಹಿಂಸಾಚಾರವು ಎಲ್ಲಾ ರೂಪಗಳಲ್ಲಿ ವಿಷಕಾರಿ ಮತ್ತು ವಿನಾಶಕಾರಿಯಾಗಿದೆ. ಕಳೆದ ರಾತ್ರಿಯ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ನನ್ನ ವರ್ತನೆಯು ಸ್ವೀಕಾರಾರ್ಹವಲ್ಲ ಮತ್ತು ಕ್ಷಮಿಸಲಾಗದಂತಿತ್ತು” ಎಂದು ಸ್ಮಿತ್ ಬರೆದಿದ್ದಾರೆ.
ಪ್ರೀತಿ ಮತ್ತು ದಯೆಯ ಜಗತ್ತಿನಲ್ಲಿ ಹಿಂಸೆಗೆ ಸ್ಥಳವಿಲ್ಲ. ಹಾಗಾಗಿ ಆಸ್ಕರ್ ಅಕಾಡೆಮಿ, ಕಾರ್ಯಕ್ರಮದ ನಿರ್ಮಾಪಕರು, ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ಮತ್ತು ಪ್ರಪಂಚದಾದ್ಯಂತ ಕಾರ್ಯಕ್ರಮ ವೀಕ್ಷಿಸಿದ ಪ್ರತಿಯೊಬ್ಬರ ಬಳಿಯೂ ನಾನು ಕ್ಷಮೆಯಾಚಿಸಲು ಬಯಸುತ್ತೇನೆ. ನಾನು ವಿಲಿಯಮ್ಸ್ ಕುಟುಂಬ ಮತ್ತು ನನ್ನ ಕಿಂಗ್ ರಿಚರ್ಡ್ ಕುಟುಂಬಕ್ಕೆ ಕ್ಷಮೆಯಾಚಿಸಲು ಬಯಸುತ್ತೇನೆ. ನನ್ನ ನಡವಳಿಕೆಯು ನಮಗೆಲ್ಲರಿಗೂ ಒಂದು ಸುಂದರವಾದ ಪ್ರಯಾಣವಾಗಿದೆ ಎಂದು ನಾನು ತೀವ್ರವಾಗಿ ವಿಷಾದಿಸುತ್ತೇನೆ. ಇದನ್ನು ತಿದ್ದಿಕೊಳ್ಳಲು ಕೆಲಸ ಮಾಡುತ್ತೇನೆ ಎಂದು ಅವರು ಪೋಸ್ಟ್ ಮಾಡಿದ್ದಾರೆ. ಈ ರೀತಿಯ ಅವರ ವಿನಯಪೂರ್ವಕ ಕ್ಷಮೆಯಾಚನೆಗೆ ಹಲವಾರು ಅಭಿಮಾನಿಗಳು ಬೆಂಬಲ ಸೂಚಿಸಿದ್ದಾರೆ.
#badboys3 #gijane2 #willsmith #chrisrock #oscars #besttvever
Can't believe what I just saw live on screen pic.twitter.com/YiijPRQENt
— Guy Springthorpe (the pistol slug) (@GuySpringthorpe) March 28, 2022
ಸ್ಮಿತ್ ಪತ್ನಿ ಜಾಡ ಪಿಂಕೆಟ್ ಅವರು ಕೂದಲು ಉದುರುವಿಕೆಗೆ ಕಾರಣವಾಗುವ ಅಲೋಪೆಸಿಯಾ ರೋಗದಿಂದ ಬಳಲುತ್ತಿದ್ದಾರೆ. ಹಾಗಾಗಿ ಅವರು ಭಾನುವಾರದ ಆಸ್ಕರ್ ಸಮಾರಂಭದಲ್ಲಿ ಭಾಗವಹಿಸುವ ಮುನ್ನ ಅವರ ಸಂಪೂರ್ಣ ತಲೆಗೂದಲು ಕತ್ತರಿಸಿದ್ದರು.
“94 ನೇ ಅಕಾಡೆಮಿ ಪ್ರಶಸ್ತಿಗಳು ಅಂತಿಮ ಘಳಿಗೆಯಲ್ಲಿದ್ದು, ಪಿಂಕೆಟ್ ಸ್ಮಿತ್ ಅವರು ‘G.I. ಜೇನ್ 2’ ನಲ್ಲಿ (ತಲೆ ಬೋಳಿಸಿಕೊಂಡ ಮಹಿಳಾ ಸೈನಿಕರ ಕುರಿತಾದ ಚಲನಚಿತ್ರದ ಮುಂದಿನ ಭಾಗ) ನಟಿಸಲು ಸಿದ್ಧರಾಗಿ ಕಾಣಿಸಿಕೊಂಡಿದ್ದಾರೆ” ಎಂದು ನಟ ಮತ್ತು ಕಾಮಿಡಿಯನ್ ಕ್ರಿಸ್ ರಾಕ್ ವ್ಯಂಗ್ಯವಾಡಿದ್ ರು. ಇದು ಇಡೀ ಪ್ರಕರಣಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ; ಮುಸ್ಲಿಮರಿಗೆ ಜಾತ್ರೆಯಲ್ಲಿ ಬಹಿಷ್ಕಾರ: ರಾಜ್ಯ ಸರ್ಕಾರ ವಿರುದ್ದ ಬಿಜೆಪಿ MLC ಹೆಚ್. ವಿಶ್ವನಾಥ್ ಆಕ್ರೋಶ


