ಪೊಲೀಸರ ಬಿಗಿ ಭದ್ರತೆಯಲ್ಲಿ ‘ಟಿಪ್ಪು ನಿಜಕನಸುಗಳು’ ನಾಟಕವನ್ನು ಮೈಸೂರು ರಂಗಾಯಣದ ಭೂಮಿಗೀತದಲ್ಲಿ ಭಾನುವಾರ ಪ್ರದರ್ಶಿಸಲಾಯಿತು. ಆ ನಾಟಕ ನೋಡಲು ಪತ್ರಕರ್ತ ಟಿ.ಗುರುರಾಜ್ ಮತ್ತು ರಂಗಾಯಣದ ಮಾಜಿ ನಿರ್ದೇಶಕರಾದ ಸಿ.ಬಸವಲಿಂಗಯ್ಯ ಹೋಗಿದ್ದರು. ಆದರೆ ಇವರನ್ನು ಒಳಗೆ ಪ್ರವೇಶಿಸದಂತೆ ಪೊಲೀಸರು ಅಡಚಣೆ ಉಂಟು ಮಾಡಿದ್ದು ಸುದ್ದಿಯಾಗಿದೆ.
ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರು ರಚನೆ ಮಾಡಿ ನಿರ್ದೇಶಿಸಿರುವ ಈ ನಾಟಕವನ್ನು ರಂಗಾಯಣ ರೆಪರ್ಟರಿ ಕಲಾವಿದರು ಅಭಿನಯಿಸಿದ್ದು, ಸುಮಾರು 250ಕ್ಕೂ ಹೆಚ್ಚು ಪೊಲೀಸರ ಬಿಗಿ ಭದ್ರತೆಯಲ್ಲಿ ನಾಟಕ ಪ್ರದರ್ಶನವಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಕಾದಂಬರಿಕಾರ ಎಸ್.ಎಲ್.ಭೈರಪ್ಪ, ಲೇಖಕ ಡಾ.ಪ್ರಧಾನ ಗುರುದತ್ತ, ಶಾಸಕ ಕೆ.ಜಿ.ಬೋಪಯ್ಯ, ಆರ್‌ಎಸ್‌ಎಸ್ ಮುಖಂಡ ಮಾ.ವೆಂಕಟರಾಮ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ, ಸಂಸದ ಪ್ರತಾಪ ಸಿಂಹ ಪತ್ನಿ ಅರ್ಪಿತಾ ಸಿಂಹ ವೀಕ್ಷಿಸಿದರು. ಟಿಪ್ಪು ನೈಜ ಇತಿಹಾಸದ ಕುರಿತು ಮೊದಲಿನಿಂದಲೂ ಮಾತನಾಡುತ್ತಾ ಬಂದಿರುವ ‘ಹಲೋ ಮೈಸೂರು’ ಪತ್ರಿಕೆಯ ಸಂಪಾದಕರಾದ ಟಿ.ಗುರುರಾಜ್ ಹಾಗೂ ರಂಗಕರ್ಮಿ ಬಸವಲಿಂಗಯ್ಯ ಅವರು ನಾಟಕ ವೀಕ್ಷಿಸಲು ತೆರಳಿದ್ದರು. “ಟಿಕೆಟ್ ಇದ್ದರೂ ಪ್ರವೇಶ ನೀಡದ ಪೊಲೀಸರೊಂದಿಗೆ” ಸಿ.ಬಸವಲಿಂಗಯ್ಯ ಹಾಗೂ ಪತ್ರಕರ್ತ ಟಿ.ಗುರುರಾಜ್ ಮಾತಿನ ಚಕಮಕಿ ನಡೆಸಿದರು. ದ್ವಾರದಲ್ಲೇ ಧರಣಿ ಕುಳಿತ ಅವರು, ‘ಅನುಮಾನವಿದ್ದರೆ ನಮ್ಮೊಂದಿಗೆ ಪೊಲೀಸರೂ ಬರಲಿ’ ಎಂದು ಮನವರಿಕೆ ಮಾಡಿದ ನಂತರ ಪ್ರವೇಶಕ್ಕೆ ಅನುಮತಿ ಕೊಡಲಾಯಿತು.
ಘಟನೆಯ ಕುರಿತು ‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಟಿ.ಗುರುರಾಜ್, “ನನ್ನ ಮತ್ತು ಬಸವಲಿಂಗಯ್ಯನವರ ಅಕ್ಕಪಕ್ಕ ಇಬ್ಬರು- ಮೂವರು ಪೊಲೀಸರು ಕೂತುಕೊಂಡಿದ್ದರು. ಇವರಿಲ್ಲದಿದ್ದರೆ ಬಹುಶಃ ನಮ್ಮ ಮೇಲೆ ಹಲ್ಲೆಯಾಗುತ್ತಿತ್ತೇನೋ. ಅಲ್ಲಿ ಸಂಘಪರಿವಾರದವರು ಇದ್ದರು. ನಾಟಕ ನೋಡಿ ಹೊರಬಂದ ಬಳಿಕ ರಂಗಾಯಣದ ನಿರ್ದೇಶಕ ಕಾರ್ಯಪ್ಪ ಮಾತನಾಡಿ ನಮ್ಮ ವಿರುದ್ಧ ಗದಾಪ್ರಹಾರ ಮಾಡಿದರೆಂದು ತಿಳಿಯಿತು. ನಮಗೆ ಸೂಕ್ತ ಭದ್ರತೆ ನೀಡಿದ ಪೊಲೀಸರಿಗೆ ಧನ್ಯವಾದಗಳು” ಎಂದರು.
“ನಾಟಕದ ಬಗ್ಗೆ ಹೇಳುವುದಾದರೆ ಗಿರೀಶ್ ಕಾರ್ನಾಡರು ಬರೆದಿರುವ ಸಾಲುಗಳನ್ನು ಯಥಾವತ್ತು ಕದ್ದು ಈ ನಾಟಕದಲ್ಲಿ ಸೇರಿಸಲಾಗಿದೆ. ಸತ್ಯಗಳಿಗೆ ಸುಳ್ಳಿನ ಪರದೆ ಹೊದಿಸಿ, ಇದೇ ಸತ್ಯವೆಂದು ಬಿಂಬಿಸಲಾಗಿದೆ. ಇಡೀ ನಾಟಕದ ಆಶಯ ಮೂರೇ ಮೂರು ಅಂಶಗಳನ್ನು ಒಳಗೊಂಡಿದೆ. ಜಿಹಾದ್, ಅಲ್ಲಾ ಓ ಅಕ್ಬರ್, ಮುಸಲ್ಮಾನರ ರಾಜ್ಯವನ್ನಾಗಿ ಪಣತೊಟ್ಟ ಟಿಪ್ಪು ಸುಲ್ತಾನ್- ಈ ಮೂರರ ಮೇಲೆ ಇಡೀ ನಾಟಕ ಕೇಂದ್ರೀಕೃತವಾಗಿದೆ” ಎಂದು ವಿವರಿಸಿದರು.
“ಅಡ್ಡಂಡ ಕಾರ್ಯಪ್ಪನವರಿಗೆ ಮೈಸೂರು ಇತಿಹಾಸದ ಕನಿಷ್ಠ ಪ್ರಜ್ಞೆಯೂ ಇಲ್ಲ. ಯಾವ ರಾಜರು ಹೈದರಾಲಿಯ ಕಾಲದಲ್ಲಿ ಆಳುತ್ತಿದ್ದರು ಎಂಬ ಪರಿವೇ ಇಲ್ಲ. ಇಮ್ಮಡಿ ಕೃಷ್ಣರಾಜ ಒಡೆಯರ ಹೆಸರಿನ ಬದಲಿಗೆ ನಂಜರಾಜ ಒಡೆಯರ್ ಎಂದು ಹೇಳಿಸಿದ್ದಾರೆ. ಶೃಂಗೇರಿ ಅರಸರು ಟಿಪ್ಪುವಿನೊಂದಿಗೆ ನಡೆಸುವ ಪತ್ರ ವ್ಯವಹಾರ 1791, 1792ರ ಅವಧಿಗೆ ಸೇರಿವೆ. ಆದರೆ ಅಡ್ಡಂಡ ಕಾರ್ಯಪ್ಪ ಈ ಪತ್ರವನ್ನು 1799, ಮೇ 4ನೇ ತಾರೀಖಿನಂದು ಬರೆಸಿದ್ದಾರೆ. ಈ ನಾಟಕ ಆಭಾಸಗಳಿಂದ ತುಂಬಿ ತುಳುಕುತ್ತಿದೆ. ಇಲ್ಲಿಯವರೆಗೆ ಯಾವ ಇತಿಹಾಸಕಾರರು ಬರೆಯದ, ಯಾವುದೇ ಕೃತಿಯಲ್ಲೂ ಇರದ ಉರಿಗೌಡ ಮತ್ತು ದೊಡ್ಡ ನಂಜೇಗೌಡ ಎಂಬವರು ಟಿಪ್ಪುವನ್ನು ಕೊಂದಿರುವುದಾಗಿ ಕೊನೆಯಲ್ಲಿ ತೋರಿಸಲಾಗಿದೆ. ವಾಟ್ಸಾಪ್ ವಿಶ್ವವಿದ್ಯಾನಿಲಯ ಸಂಶೋಧನೆಯು ನಾಟಕವೊಂದರ ನಿಜಪಾತ್ರವಾಗಿ ಬಂದಿದೆ” ಎಂದು ವಿಷಾದಿಸಿದರು.
“‘ನಮ್ಮ ಟಿಪ್ಪು: ವದಂತಿ ಮತ್ತು ಸತ್ಯಸಂಗತಿ’ ಎಂಬ ಪುಟ್ಟ ಕೃತಿಯನ್ನು ರಚಿಸುತ್ತಿದ್ದೇನೆ. ಟಿಪ್ಪುವನ್ನು ಸಮರ್ಥಿಸುವ ಕೆಲಸವನ್ನೇನೂ ನಾನು ಮಾಡುತ್ತಿಲ್ಲ. ರಾಜಪ್ರಭುತ್ವದ ಕಾಲದವನಾದ ಟಿಪ್ಪು ಮಾಡಿದ ತಪ್ಪುಗಳನ್ನು ನಾವು ಒಪ್ಪಿಕೊಳ್ಳಬೇಕು. ರಾಜಪ್ರಭುತ್ವ ಮತ್ತು ಪ್ರಜಾಪ್ರಭುತ್ವಕ್ಕೂ ವ್ಯತ್ಯಾಸಗಳಿವೆ. ಭೂತವನ್ನು ವರ್ತಮಾನದಲ್ಲಿಟ್ಟು, ವರ್ತಮಾನದಲ್ಲಿ ಭವಿಷ್ಯಕ್ಕೆ ಮಾರಕವಾಗುವಂತೆ ನಡೆದುಕೊಳ್ಳುವುದು ಮತ್ತಷ್ಟು ಆಘಾತಕಾರಿ. ನಾವು ಕಟ್ಟುವ ಕೆಲಸ ಮಾಡಬೇಕು, ಒಡೆಯುವ ಕೆಲಸವನ್ನಲ್ಲ. ಭಾರತೀಯತೆ ನಮ್ಮ ಎದೆಯೊಳಗೆ ಇದೆ. ಅದರ ಪಾಠವನ್ನು ಇನ್ನ್ಯಾರೋ ಮಾಡುವ ಅಗತ್ಯವಿಲ್ಲ” ಎಂದು ತಿಳಿಸಿದರು.
ಇದನ್ನೂ ಓದಿರಿ: ಮತ್ತೊಂದು ವಿವಾದಕ್ಕೆ ರಂಗಾಯಣ ನಿರ್ದೇಶಕರ ರೂಪುರೇಷೆ; ‘ಟಿಪ್ಪು’ ಕುರಿತ ನಾಟಕ ಪ್ರದರ್ಶನಕ್ಕೆ ಸಿದ್ಧ
“ಟಿಪ್ಪುವಿನ ಬಗ್ಗೆ ಇವರು ಎತ್ತಿರುವ ಎಲ್ಲ ಪ್ರಶ್ನೆಗಳಿಗೆ ಐತಿಹಾಸಿಕವಾದ ಉತ್ತರವನ್ನು ಕೊಡುವ ಪ್ರಯತ್ನವನ್ನು ಈ ಪುಟ್ಟ ಕೃತಿಯಲ್ಲಿ ಮಾಡುತ್ತಿದ್ದೇನೆ. ನಾನು ಬರೆದಿರುವುದು ಸುಳ್ಳು ಎಂದು ಯಾರಾದರೂ ದಾಖಲೆ ಸಮೇತ ಸಾಬೀತುಪಡಿಸಿದರೆ ಒಪ್ಪಿಕೊಳ್ಳಲು ಸಿದ್ಧವಿದ್ದೇನೆ. ಟಿಪ್ಪು ಯಾರನ್ನೂ ಕೊಂದಿಲ್ಲ, ಮತಾಂತರ ಮಾಡಿಲ್ಲ ಎಂದು ಮೊಂಡುವಾದ ಮಾಡಲ್ಲ. ಇಡೀ ರಾಜಪ್ರಭುತ್ವದ ಚರಿತ್ರೆಯನ್ನು ನೋಡಿದರೆ ಟಿಪ್ಪುವಿನಂತೆಯೇ ಎಲ್ಲ ಅರಸರ ಇತಿಹಾಸವಿರುತ್ತದೆ. ತಮ್ಮ ಸಂಬಂಧಿಕರನ್ನೇ ಕೊಂದ ಘಟನೆಗಳು ಸಿಗುತ್ತವೆ. ಸತ್ಯಕ್ಕೆ ವಿದಾಯ ಹೇಳಿರುವ ಅಡ್ಡಂಡ ಕಾರ್ಯಪ್ಪ ಸರ್ಕಾರಕ್ಕೆ ಋಣಸಂದಾಯ ಮಾಡಿದ್ದಾರೆ ಅನಿಸುತ್ತದೆ. 30 ವರ್ಷಗಳ ರಂಗಾಯಣ ಇತಿಹಾಸದಲ್ಲಿ ಈ ನಮೂನೆಯ ಪೊಲೀಸರು ಯಾವತ್ತೂ ಬರಲಿಲ್ಲ. ಬಸವಲಿಂಗಯ್ಯನವರು ಇಡೀ ರಾತ್ರಿ ‘ಮಲೆಗಳಲ್ಲಿ ಮದುಮಗಳು’ ನಾಟಕವನ್ನು ಆಡಿಸಿದ್ದರು. ಸಾವಿರಾರು ಜನ ಬೇರೆ ಬೇರೆ ದೇಶಗಳಿಂದ ಬಂದು ನೋಡಿದರು. ಅಂದು ಹೀಗೆ ಪೊಲೀಸರು ಪ್ರವೇಶಿಸಿರಲಿಲ್ಲ” ಎಂದು ಹೇಳಿದರು.
“ನಾಟಕ ನೋಡಲು ಹೋಗದಂತೆ ನಮ್ಮನ್ನು ತಡೆಯಲಾಯಿತು. ಆದರೆ ಪೊಲೀಸರ ಅಕ್ಕಪಕ್ಕ ಕೂತು ನಾಟಕ ವೀಕ್ಷಿಸಲು ಅನುಮತಿ ಕೊಡಲಾಯಿತು. ನಮ್ಮ ಅಕ್ಕಪಕ್ಕದಲ್ಲಿ ಕೂತಿದ್ದ ಪೊಲೀಸರಿಗೆ ನಾವು ಕೃತ್ಯಜ್ಞತೆಯನ್ನು ಅರ್ಪಿಸುತ್ತೇವೆ. ಯಾಕೆಂದರೆ ನಾಟಕ ನೋಡಲು ಸಂಘಪರಿವಾರದ ಪ್ರೀತಿಪಾತ್ರರು ಬಂದಿದ್ದರು. ಉದ್ದೇಶಪೂರ್ವಕವಾಗಿ ನಾಟಕ ಮುಗಿದ ಮೇಲೆ ಅಡ್ಡಂಡ ಕಾರ್ಯಪ್ಪ ನಮ್ಮ ಹೆಸರನ್ನು ಪ್ರಸ್ತಾಪಿಸಿದ್ದಾರೆ. ನಮ್ಮ ಮೇಲೆ ಹಲ್ಲೆ ನಡೆಸುವ ಸಾಧ್ಯತೆಯೂ ಇತ್ತು. ಬಹುಶಃ ಪೊಲೀಸರು ಇಲ್ಲದೆ ಇದ್ದಿದ್ದರೆ ನಾವು ಏಟು ತಿಂದುಕೊಂಡು ಹೊರಬರಬೇಕಿತ್ತೇನೋ, ಗೊತ್ತಿಲ್ಲ. ಹೀಗಾಗಿ ಅವರಿಗೆ ಥ್ಯಾಂಕ್ಸ್ ಹೇಳಬೇಕು” ಎಂದರು.


