Homeಕರ್ನಾಟಕಗೌರಿ ಮೇಡಂ ಇಲ್ಲದ ಈ ಐದು ವರ್ಷಗಳು..

ಗೌರಿ ಮೇಡಂ ಇಲ್ಲದ ಈ ಐದು ವರ್ಷಗಳು..

- Advertisement -
- Advertisement -

ಕೆಲವು ಸಂಗತಿಗಳು ನಮ್ಮನ್ನು ಚಿಂತನೆಗೆ ಹಚ್ಚುವ ಮಹತ್ವದ ದಿನಗಳನ್ನು ಸೃಷ್ಟಿಸುತ್ತವೆ. ಗೌರಿ ಲಂಕೇಶರನ್ನು ಕೊಂದ ಸೆಪ್ಟೆಂಬರ್ 5 ಅಂತಹ ಒಂದು ದಿನ. ಅನ್ಯಾಯವಾಗಿ ಹತ್ಯೆಗೈಯ್ಯಲಾದ ವ್ಯಕ್ತಿ ನಮ್ಮೆಲ್ಲರ ಪ್ರೀತಿಯ ಗೌರಿ ಮೇಡಂ ಆಗಿದ್ದರು ಎಂಬ ಕಾರಣಕ್ಕಲ್ಲ. ಹಾಗಿದ್ದಲ್ಲಿ ಅದುವರೆಗೆ ಅವರಿಗೆ ಪ್ರೀತಿಪಾತ್ರರಾಗಿದ್ದವರಿಗೆ ಮಾತ್ರ ಅದು ಮಹತ್ವದ್ದಾಗಿರುತ್ತದೆ. ಆದರೆ, ಇದಕ್ಕೆ ಒಂದು ಚಾರಿತ್ರಿಕ ಮಹತ್ವ ಬರಲು ಬೇರೆ ಕಾರಣಗಳಿವೆ. ದೇಶದಲ್ಲಿನ ಜೀವ ವಿರೋಧಿ ರಾಜಕಾರಣ ಹಾಗೂ ಅದರ ವಿರುದ್ಧದ ಸಂಗ್ರಾಮದ ತಿರುವು ಬಿಂದುಗಳಲ್ಲಿ ಅದೂ ಒಂದಾಗಿದೆ. ಮಾನವೀಯತೆ ಪರ ನಿಂತ ಬುದ್ಧಿಜೀವಿ ಚಿಂತಕರ ಸರಣಿ ಹತ್ಯೆಗಳಲ್ಲಿ ಗೌರಿಯವರದ್ದು ನಾಲ್ಕನೆಯದ್ದು. ಆದರೆ, ಅಲ್ಲಿಂದ ಮುಂದಕ್ಕೆ ಆ ರೀತಿಯ ಹತ್ಯೆಗಳು ನಡೆಯಲಿಲ್ಲ. ಈ ಹತ್ಯೆಯ ತನಿಖೆಯ ಹೊಣೆ ಹೊತ್ತ ಎಸ್‌ಟಿಎಫ್‌ನ ಅಧಿಕಾರಿಗಳು ಹೇಳುವಂತೆ ’ಗೌರಿ ಇನ್ನೂ ಹಲವರ ಜೀವ ಉಳಿಸಿದರು’. ಗೌರಿಯವರ ಹತ್ಯೆಯ ಕಾರಣದಿಂದ ರಚನೆಯಾದ ಎಸ್‌ಟಿಎಫ್ ’ಕಿಲ್ಲರ್ ಗ್ಯಾಂಗ್’ನ್ನು ಹಿಡಿದುಹಾಕಿತು ಎಂಬ ಕಾರಣಕ್ಕೆ ಮಾತ್ರವಲ್ಲ; ಇಂತಹ ಹತ್ಯೆಗಳನ್ನು ಭಾರತದ ನಾಗರಿಕ ಸಮಾಜವು ಸುಮ್ಮನೇ ಸಹಿಸುವುದಿಲ್ಲ ಎಂಬ ಸಂದೇಶವನ್ನ ಭಾರತದ ಸಮಾಜವು ’ಸಂಬಂಧಪಟ್ಟವರಿಗೆ’ ನೀಡಿತು.

ಹತ್ಯೆಯ ಮೂಲಕ ಒಂದು ಸಂದೇಶ ಕೊಡಬೇಕೆಂದು ಬಯಸಿದವರಿಗೆ ಪ್ರತಿ ಸಂದೇಶವನ್ನು ಸಮಾಜವು ನೀಡಿದ್ದು ಗೌರಿಯವರ ಹತ್ಯೆಯ ನಂತರ. ಅಲ್ಲಿಂದಾಚೆಗೆ ಬುದ್ಧಿಜೀವಿ ಚಿಂತಕರನ್ನು ಹಣಿಯಲು ಭೀಮಾ ಕೊರೆಗಾಂವ್ ಸುಳ್ಳು ಕೇಸು, ದೆಹಲಿ ಗಲಭೆಯ ಸುಳ್ಳು ಕೇಸುಗಳನ್ನು ಹೆಣೆಯಲಾಯಿತು. ತೀರಾ ಇತ್ತೀಚೆಗೆ ತೀಸ್ತಾ ಸೆತ್ಲ್‌ವಾದ್ ಹಾಗೂ ಶ್ರೀಕುಮಾರ್‌ರನ್ನು ಜೈಲಿಗೆ ತಳ್ಳಲು ಸುಪ್ರೀಂಕೋರ್ಟನ್ನೇ ಬಳಸಿಕೊಳ್ಳಲಾಯಿತು. ಭೌತಿಕ ಹತ್ಯೆಗಳು ಅಸಾಧ್ಯವೆಂಬ ವಾತಾವರಣ ನಿರ್ಮಾಣವಾದಾಗ ಕಂಡುಕೊಂಡ ಪರ್ಯಾಯ ದಾರಿಗಳಿವು. ಅದು ಅಸಾಧ್ಯವೆಂದಾಗಿದ್ದು ಗೌರಿಯವರ ಹತ್ಯೆಯನ್ನು ಜೀರ್ಣಿಸಿಕೊಳ್ಳಲಾಗದ್ದರಿಂದ.

ಅದಕ್ಕೆ ಮುಂಚೆಯೇ ಜೆಎನ್‌ಯುನಲ್ಲಿ ನಡೆದ ಪ್ರತಿಭಟನೆ, ಊನಾ ಪ್ರತಿಭಟನೆ, ರೋಹಿತ್ ವೇಮುಲ ಹತ್ಯೆಯ ನಂತರ ನಡೆದ ಪ್ರತಿಭಟನೆಗಳು ಒಂದು ವಾತಾವರಣವನ್ನು ಉಂಟು ಮಾಡಿದ್ದವು. ಸಂಬಂಧಪಟ್ಟ ವ್ಯಕ್ತಿಗಳು ದೈತ್ಯ ಶಕ್ತಿಗಳೆದುರಿನ ಪ್ರತಿರೋಧದ ಸಂಕೇತಗಳಾಗಿ ಹೊರಹೊಮ್ಮುತ್ತಿದ್ದರು. ಅಂತಹ ಸಂಕೇತಗಳನ್ನೇ ಗೌರಿಯವರು ತನ್ನ ಮಕ್ಕಳು ಎಂದು ಕರೆದಿದ್ದು. ಅವೆಲ್ಲವೂ ಶಿಖರ ಮುಟ್ಟಿದ್ದು ಗೌರಿಯವರ ಹತ್ಯೆಯ ಸಂದರ್ಭದಲ್ಲಿ. ಒಂದಲ್ಲ ಒಂದು ರೀತಿಯಲ್ಲಿ ಆ ಪ್ರತಿರೋಧವು ಇಂದೂ ಮುಂದುವರಿಯುತ್ತಿದೆ. ಆದರೆ, ಇದಕ್ಕಿಂತ ಭಿನ್ನ ಆಯಾಮದ ಎರಡು ಜನಾಂದೋಲನಗಳು ಮತ್ತು ಒಂದು ಪಕ್ಷ ’ಅಜೇಯ’ರನ್ನು ಮಣಿಸಿದವು. ಆ ಎರಡು ಜನಾಂದೋಲನಗಳ ನೇತೃತ್ವ ವಹಿಸಿದವರು ಜನಸಾಮಾನ್ಯರು. ಒಂದು, ದೇಶದ ಮುಸ್ಲಿಮರ ನೇತೃತ್ವದಲ್ಲಿ ನಡೆದ ಸಿಎಎ ವಿರೋಧಿ ಆಂದೋಲನ. ಎರಡು, ಪಂಜಾಬ್ ಹರಿಯಾಣಗಳ ರೈತರ ನೇತೃತ್ವದಲ್ಲಿ ನಡೆದ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ಮಾಡಿದ ಆಂದೋಲನ. ಗುಣಾತ್ಮಕವಾಗಿ ಬೇರೆ ಬಗೆಯ ಚಳವಳಿಗಳಾದ ಇವುಗಳು, ವಿಶಾಲಾರ್ಥದಲ್ಲಿ ಕಳೆದೊಂದಷ್ಟು ಕಾಲದ ಒಳಬೇಗುದಿಯ ಅಭಿವ್ಯಕ್ತಿಯೇ ಆಗಿದ್ದವು. ಆ ಅರ್ಥದಲ್ಲಿ ಇವು ನಿಜಕ್ಕೂ ನಾಲ್ಕು ಹೆಜ್ಜೆ ಮುಂದಕ್ಕೆ ತಂದ ವಿದ್ಯಮಾನಗಳು. ಹಾಗೆಯೇ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ಸು ಬಿಜೆಪಿಯ ಓಟಕ್ಕೆ ತಡೆ ಹಾಕಿತು.

ಅದೇನೇ ಇದ್ದರೂ, ಕೊಲೆಗೀಡಾದ ಮತ್ತು ಬಂಧನಕ್ಕೊಳಗಾಗಿರುವ ವ್ಯಕ್ತಿಗಳಾರೂ ಬಯಸದ ಪುನರಾಯ್ಕೆ 2019ರಲ್ಲಿ ನಡೆಯಿತು. ಬಯಸದ ಪ್ರಮಾಣದಲ್ಲಿ ಮೋದಿ ಸರ್ಕಾರ ಪುನರಾಯ್ಕೆಯಾಯಿತು. ಉತ್ತರ ಪ್ರದೇಶದಂತಹ ರಾಜ್ಯ ಇನ್ನೂ ಕೆಟ್ಟಸ್ಥಿತಿಗೆ ಹೋಯಿತು. ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರಗಳಲ್ಲಿ ಬಿಜೆಪಿಗೆ ಬಹುಮತ ಬಾರದಿದ್ದರೂ ಅಧಿಕಾರಕ್ಕೆ ಬಂದಿತು. ಒಂದು ರೀತಿಯಲ್ಲಿ ಗೌರಿ ಲಂಕೇಶರು ಇದ್ದ ಕಾಲದ ಕೇಡುಗಳ ಮುಂದುವರಿಕೆಗಳಿವು. ಅದುವರೆಗೆ ತೆವಳುತ್ತಾ ಭಜನೆ ಮಾಡತೊಡಗಿದ್ದ ಮಾಧ್ಯಮದ ಜೊತೆಗೆ ನ್ಯಾಯಾಲಯಗಳೂ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯತೊಡಗಿದ್ದು ಈ ಅವಧಿಯ ಇನ್ನೊಂದು ’ಬೆಳವಣಿಗೆ’. ಮಂದಿರ ಶಿಲಾನ್ಯಾಸ, ಕಾಶ್ಮೀರ, ಹಿಜಾಬ್ ಒಳಗೊಂಡು ಹಲವು ಹತ್ತು ಬಗೆಯ ಕಮ್ಯುನಲ್ ಆಕ್ಷನ್‌ಗಳೆಲ್ಲದರ ಸಂದರ್ಭದಲ್ಲಿ ಕೋರ್ಟು ತನ್ನ ಕ್ರಿಯೆ ಅಥವಾ ನಿಷ್ಕ್ರಿಯೆಗಳ ಮೂಲಕ ಶಾಮೀಲಾಯಿತು. ಇನ್ನೊಂದು ಮುಂದುವರಿಕೆಯದು.

ಬಂಧನಕ್ಕೊಳಗಾಗಿ, ಇದೀಗ ಬಿಡುಗಡೆಯಾಗಿರುವ ಹಾಗೂ ಗೌರಿ ನೆನಪಿನ ಕಾರ್ಯಕ್ರಮಕ್ಕೆ ಬರಲಿರುವ ಝುಬೇರ್ ಇನ್ನೊಂದು ವಿದ್ಯಮಾನದ ಮುಂದುವರಿಕೆ. ಇಂತಹ ನೂರಾರು ಕ್ರಿಯಾಶೀಲರು ಹೊಸ ಮಾಧ್ಯಮದ ಪ್ರಯತ್ನದಲ್ಲಿ ಸ್ಥಾಪಿತ ಪಟ್ಟಭದ್ರರಿಗೆ ಸೆಡ್ಡು ಹೊಡೆದು ನಿಂತಿದ್ದಾರೆ. ಇದು ಹಿಂದಿನ ಶತಮಾನದ ಒಳ್ಳೆಯ ಜರ್ನಲಿಸಂನ ಮುಂದುವರಿಕೆಯಾದರೂ, ಸ್ವತಃ ಗೌರಿಯವರು ಪ್ರತಿನಿಧಿಸುತ್ತಿದ್ದ ಈ ಕಾಲದ ಜರ್ನಲಿಸಂ-ಆಕ್ಟಿವಿಸಂನ ಮುಂದುವರಿಕೆಯೂ ಹೌದು.

ಕೇಡು ತನ್ನ ಸ್ವರೂಪದಲ್ಲಿ ಹಾಗೂ ಪ್ರಮಾಣದಲ್ಲಿ ನೆಗೆದು ನಿಂತಿದೆ. ಪ್ರತಿರೋಧವು ಅದೇ ಪ್ರಮಾಣದಲ್ಲಿ ಬೆಳೆದಿಲ್ಲವಾದರೂ, ಮುಂದುವರೆದಿದೆ; ಒಂದಷ್ಟು ಭಿನ್ನ ಸ್ವರೂಪದಲ್ಲೂ ಸಹಾ. ಭಿನ್ನ ಸ್ವರೂಪ ಏಕೆಂಬುದನ್ನು ಒಂದು ಉದಾಹರಣೆಯ ಮೂಲಕ ವಿವರಿಸಬಹುದು. ಸಿಎಎ ಸಂದರ್ಭದಲ್ಲಿ ಆ ಆಂದೋಲನದ ಶಕ್ತಿಯಾಗಿದ್ದದ್ದು ಮುಸ್ಲಿಂ ಜನಸಾಮಾನ್ಯರು; ಆದರೆ ಅದಕ್ಕೊಂದು ವಿಶಿಷ್ಟ ಕಳೆ ತಂದುಕೊಟ್ಟಿದ್ದು ಮುಸ್ಲಿಂ ಮಹಿಳೆಯರು ಮತ್ತು ನಗರಗಳಲ್ಲಿ ಯುವಜನರ ಗುಂಪುಗಳು. ಇವರು ಹಿಂದೆ ಇಂತಹ ಕಡೆ ಕಾಣದವರು. ರೈತಾಂದೋಲನದ ಹೊಸದಲ್ಲ; ತಿಂಗಳುಗಟ್ಟಲೆ ಸಾವಿರ ಸಾವಿರ ಜನರು ಈ ಪರಿ ಕೂರುವುದು ಹೊಸದು. ಝುಬೇರ್‌ರಂಥವರು ಹೊಸಬರು. ಅಂದರೆ ’ಪ್ರಗತಿಪರರ ಐಕ್ಯತೆ’ಯ ಅದೇ ಹಳೆಯ ಮಂತ್ರದಿಂದ ಸಾಧಿತವಾಗದ ಹೊಸದು ಇದು. ಉಡುಪಿಯ ಸಹಬಾಳ್ವೆ ಸಮಾವೇಶದಲ್ಲೂ ಅಂತಹದೊಂದು ಹೊಸತನ ಸಣ್ಣ ಪ್ರಮಾಣದಲ್ಲಿ ಇದ್ದಿತ್ತು. ಆದರೆ ಈ ಕಡೆಯ ಕೇಡುಗಳು ಕಡಿಮೆಯೇನಿಲ್ಲ. ಬಿಜೆಪಿ, ಆರೆಸ್ಸೆಸ್ಸನ್ನು ಅವರ ಅಸ್ತ್ರಗಳಿಂದಲೇ ಕತ್ತರಿಸಹೊರಡುವ ಎಲ್ಲವೂ ಆ ಕಡೆಗೇ ಅನುಕೂಲ ಮಾಡಿಕೊಡುತ್ತವೆ. ಆ ಅಸ್ತ್ರಗಳೆಂದರೆ ಸುಳ್ಳು, ದ್ವೇಷ, ಅವಕಾಶವಾದಿತನ, ಅಸಹನೆ ಇತ್ಯಾದಿ. ಮತ್ತು ಈ ಕಡೆಯವರಿಗೆ ಮಾತ್ರ ಸಿದ್ಧಿಸಿರುವ ಈಗೋ, ಸಣ್ಣತನ ಮತ್ತು ಎಂತಹುದೇ ಸಂದರ್ಭದಲ್ಲೂ ತಮ್ಮದೇ ಕಿರೀಟ ಎತ್ತರದಲ್ಲಿರಬೇಕೆಂಬ ಅತೀವ ಲಾಲಸೆ. ಇದೂ ಸಹಾ ಹಿಂದಿನದ್ದೇ ಮುಂದುವರಿಕೆ.

ಆ ಅರ್ಥದಲ್ಲಿ ಒಂದಷ್ಟು ಜನ ತುಂಬಾ ಮುಂದುವರೆದಿಲ್ಲ. ಮುಂದುವರೆದವರು ರೈತರು, ಮುಸ್ಲಿಂ ಮಹಿಳೆಯರು, ನೂರು ಬಗೆಯ ಹೊಸ ಸಂವಹನ ಸಾಧ್ಯತೆ ಕಂಡುಕೊಂಡಿರುವವರು ಮುಂತಾದವರು. ಬಹುಶಃ ಅವರು ಮತ್ತು ಅವರಂಥವರೇ ಮುಂದಿನ ಹಾದಿಯನ್ನೂ ತೋರುತ್ತಾರೆ ಮತ್ತು ಮುನ್ನಡೆಸುತ್ತಾರೆಂದು ತೋರುತ್ತದೆ.

ಪ್ರತಿ ಸೆಪ್ಟೆಂಬರ್ 5, ಜೀವಪರ ಕನಸ್ಸುಳ್ಳ ಕರ್ನಾಟಕದ ಒಂದಷ್ಟು ಕ್ರಿಯಾಶೀಲರಿಗೆ ಒಂದ್ಹೆಜ್ಜೆ ನಿಂತು ನೋಡಿಕೊಳ್ಳುವ ಸಂದರ್ಭವೆನ್ನುವುದಾದರೆ, ಈ ಹೊತ್ತು ನೋಡಿಕೊಳ್ಳಲು ಸಾಧ್ಯವಾಗಿದ್ದು ಇಷ್ಟೇ.


ಇದನ್ನೂ ಓದಿ: ‘ಜಾಮೀನು ನಿರಾಕರಿಸಲು ಕಾರಣವೇ ಇಲ್ಲ’: ತೀಸ್ತಾ ಸೆಟಲ್ವಾಡ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...