ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಂಗಳವಾರ ತಮ್ಮ ಜೆಡಿಯು ಪಕ್ಷದ ಎಲ್ಲಾ ಶಾಸಕರು ಮತ್ತು ಸಂಸದರ ಸಭೆಯನ್ನು ಕರೆದಿದ್ದು, ಮೈತ್ರಿ ಪಕ್ಷವಾದ ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿ- ಜೆಡಿಯು ಮೈತ್ರಿ ಸರ್ಕಾರದಲ್ಲಿ ಬಿರುಕು ಮೂಡಿದ್ದು, ಅದಕ್ಕೆ ಕಾರಣವಾದ ಐದು ಅಂಶಗಳ ಕುರಿತು ರಾಜಕೀಯ ವಿಶ್ಲೇಷಕರು ಗಮನ ಹರಿಸಿದ್ದಾರೆ.
- ಸ್ಪೀಕರ್ ಹಸ್ತಕ್ಷೇಪ
ಬಿಹಾರ ವಿಧಾನಸಭಾ ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ಅವರನ್ನು ಕೆಳಗಿಳಿಸಬೇಕು ಎಂದು ನಿತೀಶ್ ಕುಮಾರ್ ಬಯಸಿದ್ದಾರೆ. ತಮ್ಮ ಸರ್ಕಾರದ ವಿರುದ್ಧ ಪ್ರಶ್ನೆಗಳನ್ನು ಎತ್ತುವ ಮೂಲಕ ಸಂವಿಧಾನವನ್ನು ಬಹಿರಂಗವಾಗಿ ಉಲ್ಲಂಘಿಸಿದ್ದಾರೆ ಎಂದು ನಿತೀಶ್ ಆರೋಪಿಸಿದ್ದಾರೆ. ಸ್ಪೀಕರ್ ಸಿನ್ಹಾ ಅವರ ಮೇಲೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅನೇಕ ಸಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2. ಕೇಂದ್ರದಲ್ಲಿ ಸಿಗದ ಸ್ಥಾನಮಾನ
2019ರ ಜೂನ್‌ನಲ್ಲಿ ನರೇಂದ್ರ ಮೋದಿ ಸರ್ಕಾರದಲ್ಲಿ ತಮ್ಮ ಪಕ್ಷ ಜೆಡಿಯುಗೆ ಒಂದೇ ಒಂದು ಸ್ಥಾನವನ್ನು ನೀಡಿದ ನಂತರ ನಿತಿಶ್ ಅಸಮಾಧಾನ ವ್ಯಕ್ತಪಡಿಸಿದ್ದರು. ಆನಂತದಲ್ಲಿ ನಿತೀಶ್ ಕುಮಾರ್ ಕ್ಯಾಬಿನೇಟ್ ವಿಸ್ತರಣೆ ಮಾಡಿ ತಮ್ಮ ಪಕ್ಷದ ಎಂಟು ಮಂದಿಯನ್ನು ಸೇರಿಸಿಕೊಂಡರು. ಬಿಜೆಪಿಗೆ ಒಂದು ಸ್ಥಾನವನ್ನು ನೀಡಿದರು.
3. ಏಕಕಾಲದ ಚುನಾವಣೆ ಚಿಂತನೆಗೆ ಜೆಡಿಯು ವಿರೋಧ
ರಾಜ್ಯ ಮತ್ತು ಕೇಂದ್ರ ಸರ್ಕಾರದ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಯೋಚನೆಯನ್ನು ಜೆಡಿಯು ಮುಖ್ಯಸ್ಥರು ವಿರೋಧಿಸಿದ್ದಾರೆ. ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ಏಕಕಾಲದಲ್ಲಿ ಚುನಾವಣೆಯನ್ನು ನಡೆಸುವ ಪ್ರಸ್ತಾಪವನ್ನು ಮೋದಿ ಮಾಡಿದ್ದು, ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಜೆಡಿಯು ಪ್ರತಿಪಕ್ಷಗಳ ನಿಲುವನ್ನು ಸ್ವಾಗತಿಸಿರುವುದು ಬಿಜೆಪಿಗೆ ಸಹಿಸಲಾಗಿಲ್ಲ.
4. ಬಿಹಾರದ ಮೇಲೆ ಅಮಿತ್ ಶಾ ಹಿಡಿತ
ನಿತೀಶ್ ಕುಮಾರ್ ಅವರು ತಮ್ಮ ಸಂಪುಟಕ್ಕೆ ಬಿಜೆಪಿ ಸಚಿವರನ್ನು ಸೇರಿಸಿಕೊಳ್ಳುವಾಗ ಸವಾಲುಗಳನ್ನು ಎದುರಿಸಿದ್ದಾರೆ. ತಮಗೆ ಆಪ್ತರಾಗಿರುವವರನ್ನು ಮಂತ್ರಿಗಳನ್ನಾಗಿ ಮಾಡುವ ಮೂಲಕ ಬಿಹಾರದ ಮೇಲೆ ಗೃಹ ಸಚಿವ ಅಮಿತ್ ಶಾ ಹಿಡಿತ ಸಾಧಿಸುತ್ತಿದ್ದಾರೆ ಎಂಬ ಆರೋಪಗಳಿವೆ.
5. ನಿತೀಶ್‌ಕುಮಾರ್ ಮಾತು ಕೇಳದ ಆರ್‌ಸಿಪಿ ಸಿಂಗ್
ಜೆಡಿಯು ತೊರೆದ ಮಾಜಿ ಕೇಂದ್ರ ಸಚಿವ ಆರ್‌ಸಿಪಿ ಸಿಂಗ್, ಬಿಜೆಪಿ ನಾಯಕರೊಂದಿಗೆ ನೇರವಾಗಿ ವ್ಯವಹರಿಸುತ್ತಿದ್ದದ್ದು ನಿತೀಶ್ ಕುಮಾರ್ ಅವರ ಕೋಪಕ್ಕೆ ಕಾರಣವಾಯಿತು. ನಿತೀಶ್ ಅವರ ನಿಲುವಿಗೆ ವಿರುದ್ಧವಾಗಿ ಕೇಂದ್ರದ ಮಂತ್ರಿಯಾಗಿದ್ದರು.
“ಕೇಂದ್ರ ಸಚಿವ ಸಂಪುಟಕ್ಕೆ ಸೇರುವ ಅಗತ್ಯವೇನು? ನಾವು ಕೇಂದ್ರ ಸಚಿವ ಸಂಪುಟದ ಭಾಗವಾಗುವುದಿಲ್ಲ ಎಂದು ಮುಖ್ಯಮಂತ್ರಿಯವರು 2019ರಲ್ಲಿಯೇ ನಿರ್ಧರಿಸಿದ್ದರು. ಅದನ್ನು ಮೀರಿ ಆರ್‌ಸಿಪಿ ಸಿಂಗ್ ಕೇಂದ್ರ ಸರ್ಕಾರದ ಸಚಿವರಾಗಿದ್ದು ಸರಿಯೇ” ಎಂದು ಜೆಡಿಯು ರಾಷ್ಟ್ರೀಯ ಅಧ್ಯಕ್ಷ ರಾಜೀವ್ ರಂಜನ್ (ಲಾಲನ್) ಸಿಂಗ್ ಭಾನುವಾರ ಹೇಳಿಕೆ ನೀಡಿದ್ದಾರೆ.
ಪಥನವಾಗುತ್ತದೆಯೇ ಮೈತ್ರಿ ಸರ್ಕಾರ?
ಬಿಹಾರದಲ್ಲಿ ಆಡಳಿತರೂಢ ಜೆಡಿಯು ಮತ್ತು ಬಿಜೆಪಿ ಪಕ್ಷಗಳ ಮೈತ್ರಿ ನಡುವೆ ಕಾಣಿಸಿಕೊಂಡ ಬಿರುಕು ದೊಡ್ಡದಾಗತೊಡಗಿದೆ. ಜೆಡಿಯು ಶಾಸಕರ ಸಭೆ ಕರೆದಿರುವ ಸಿಎಂ ನಿತೇಶ್ ಕುಮಾರ್ ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಬಿಹಾರದಲ್ಲಿ ಜೆಡಿಯು ಪಕ್ಷವನ್ನು ಇಬ್ಭಾಗ ಮಾಡಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿರುವ ಜೆಡಿಯು ರಾಷ್ಟ್ರಿಯ ಅಧ್ಯಕ್ಷ ರಾಜೀವ್ ರಂಜನ್ ಸೂಕ್ತ ಸಮಯದಲ್ಲಿ ಈ ಪಿತೂರಿಗಳನ್ನು ಬಹಿರಂಗಪಡಿಸಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿರಿ: ಬಿಜೆಪಿ ನಾಯಕನ ಮನೆ ಉರುಳಿಸಿದ ಯೋಗಿ ಆದಿತ್ಯನಾಥ್ ಸರ್ಕಾರ: ಕಾರಣವೇನು?
ಇನ್ನೊಂದೆಡೆ ಜೆಡಿಯು ಸದಸ್ಯರು ಮಧ್ಯಂತರ ಚುನಾವಣೆ ಎದುರಿಸಲು ಸಿದ್ದರಿಲ್ಲದ ಕಾರಣ ಬಿಜೆಪಿ ಜೊತೆಗಿನ ಮೈತ್ರಿ ಕಳೆದುಕೊಂಡಲ್ಲಿ ಆರ್‌ಜೆಡಿ ಮತ್ತು ಕಾಂಗ್ರೆಸ್ ಜೊತೆಗೂಡಿ ಸರ್ಕಾರ ರಚಿಸಲು ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಒಟ್ಟು 243 ವಿಧಾನಸಭಾ ಕ್ಷೇತ್ರಗಳ ಬಿಹಾರ ಅಸೆಂಬ್ಲಿಯಲ್ಲಿ ಬಹುಮತಕ್ಕೆ 122 ಸ್ಥಾನಗಳ ಅಗತ್ಯವಿದ್ದು ಸದ್ಯ ಎನ್‌ಡಿಎ ಮೈತ್ರಿ 127 ಸ್ಥಾನ ಹೊಂದುವ ಮೂಲಕ ಸರ್ಕಾರ ರಚಿಸಿದೆ. ಅದರಲ್ಲಿ ಬಿಜೆಪಿ 77, ಜೆಡಿಯು 45, ಹಿಂದೂಸ್ತಾನ್ ಅವಾಜ್ ಮೋರ್ಚಾ 04 ಮತ್ತು ಒಬ್ಬರು ಪಕ್ಷೇತರರು ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ.
ವಿರೋಧ ಪಕ್ಷಗಳ ಪಾಳಯದಲ್ಲಿ ಮಹಾಘಟಬಂಧನ್ ಮೈತ್ರಿಯಲ್ಲಿ ಆರ್‌ಜೆಡಿ 80, ಸಿಪಿಐ-ಎಂಎಲ್ 12, ಸಿಪಿಐ(ಎಂ)-02, ಸಿಪಿಐ 02 ಸ್ಥಾನದೊಂದಿಗೆ ಒಟ್ಟು 96 ಸ್ಥಾನ ಹೊಂದಿವೆ. ಅಲ್ಲದೆ ಕಾಂಗ್ರೆಸ್ 19 ಮತ್ತು ಎಐಎಂಐಎಂ ಪಕ್ಷವು 01 ಸ್ಥಾನ ಹೊಂದಿದೆ. ಒಂದು ವೇಳೆ ಜೆಡಿಯು ಎನ್‌ಡಿಎ ಮೈತ್ರಿಯಿಂದ ಹೊರಬಂದಲ್ಲಿ ಮಹಾಘಟಬಂಧನ್ ಜೊತೆ ಸೇರಿ ಸರ್ಕಾರ ರಚಿಸಬಹುದಾಗಿದೆ.


