ಭಾರತದ ಮುಖ್ಯ ನ್ಯಾಯಮೂರ್ತಿ ಬಿ. ಆರ್ ಗವಾಯಿ ಅವರ ಮೇಲೆ ವಕೀಲರೊಬ್ಬರು ಶೂ ಎಸೆಯಲು ಯತ್ನಿಸಿದ ಘಟನೆ ಸೋಮವಾರ (ಅ.6) ಸುಪ್ರೀಂ ಕೋರ್ಟ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಸಿಜೆಐ ನ್ಯಾಯಪೀಠದಲ್ಲಿ ಕುಳಿತು ಪ್ರಕರಣಗಳ ವಿಚಾರಣೆ ಪ್ರಾರಂಭಿಸಲು ಅಣಿಯಾದಾಗ, ಪೀಠದ ಬಳಿಗೆ ತೆರಳಿದ ವಕೀಲ ತನ್ನ ಶೂ ಕಳಚಿ ಅವರತ್ತ ಎಸೆಯಲು ಯತ್ನಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಬಾರ್ & ಬೆಂಚ್ ವರದಿ ಮಾಡಿದೆ.
ವಕೀಲ ಸಿಜೆಐ ಮೇಲೆ ಶೂ ಎಸೆಯಲು ಯತ್ನಿಸಿದ್ದಾರೆ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ವಕೀಲ ಪೇಪರ್ ಸುತ್ತಿ ಸಿಜೆಐ ಮೇಲೆ ಎಸೆಯಲು ಯತ್ನಿಸಿದ್ದಾರೆ ಎಂದು ಹೇಳಿದ್ದಾಗಿ ಲೈವ್ ಲಾ ವರದಿ ತಿಳಿಸಿದೆ.
ವಕೀಲ ಸಿಜೆಐ ಪೀಠದತ್ತ ನುಗ್ಗುತ್ತಿದ್ದಂತೆ ಭದ್ರತಾ ಸಿಬ್ಬಂದಿ ಧಾವಿಸಿ ಅವರನ್ನು ಕೋರ್ಟ್ ಹಾಲ್‌ನಿಂದ ಹೊರಗಡೆ ಕಳಿಸಿದರು. ಹೊರಗಡೆ ಹೋಗುವಾಗ “ಸನಾತದ ಧರ್ಮದ ಅವಮಾನವನ್ನು ಸಹಿಸುವುದಿಲ್ಲ” ಎಂದು ವಕೀಲ ಕೂಗಿದ್ದಾರೆ ಎಂದು ವರದಿಗಳು ವಿವರಿಸಿವೆ.
ವಕೀಲರ ಕೃತ್ಯದಿಂದ ವಿಚಲಿತರಾಗದ ಸಿಜೆಐ ಪ್ರಕರಣಗಳ ವಿಚಾರಣೆ ಮುಂದುವರಿಸಿದರು. “ಇದರಿಂದ ವಿಚಲಿತರಾಗಬೇಡಿ. ಈ ವಿಷಯಗಳು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ. ಕಲಾಪ ಮುಂದುವರಿಸಿ” ಎಂದು ಅವರು ಹೇಳಿದರು ಎಂದಿವೆ.
ಇತ್ತೀಚೆಗೆ ಖಜುರಾಹೊದಲ್ಲಿನ ಶಿರಚ್ಛೇದಗೊಂಡ ವಿಷ್ಣುವಿನ ವಿಗ್ರಹವನ್ನು ಪುನಃಸ್ಥಾಪಿಸುವ ಕುರಿತ ಪ್ರಕರಣವೊಂದರಲ್ಲಿ ಸಿಜೆಐ ಬಿ.ಆರ್. ಗವಾಯಿ ಅವರು ನೀಡಿದ್ದ ಹೇಳಿಕೆಯೇ ಈ ಘಟನೆಗೆ ಪ್ರಚೋದನೆ ನೀಡಿರಬಹುದು ಎಂದು ವಿಶ್ಲೇಷಿಸಲಾಗಿದೆ.
ಖಜುರಾಹೊ ಸಂಬಂಧಿತ ಅರ್ಜಿಯನ್ನು ವಜಾಗೊಳಿಸುವಾಗ, “ನೀವು ವಿಷ್ಣುವಿನ ಪರಮ ಭಕ್ತ ಎಂದು ಹೇಳಿಕೊಳ್ಳುತ್ತೀರಿ. ಹೋಗಿ ನಿಮ್ಮ ದೇವರ ಬಳಿಯೇ ಪ್ರಾರ್ಥಿಸಿ, ಆ ದೇವರೇ ಏನಾದರೂ ಮಾಡಲಿ” ಎಂದು ಅರ್ಜಿದಾರರಿಗೆ ಸಿಜೆಐ ಮೌಖಿಕವಾಗಿ ಹೇಳಿದ್ದರು.
ಈ ಹೇಳಿಕೆಯು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿತ್ತು, ಹಲವರು ಸಿಜೆಐ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದರು. ಎರಡು ದಿನಗಳ ನಂತರ ಮುಕ್ತ ನ್ಯಾಯಾಲಯದಲ್ಲಿ ವಿವಾದವನ್ನು ಪ್ರಸ್ತಾಪಿಸಿದ್ದ ಸಿಜೆಐ, ನಾನು ಧರ್ಮವನ್ನು ಅವಹೇಳನ ಮಾಡಿಲ್ಲ, ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ” ಎಂದಿದ್ದರು.
ಸಿಜೆಐ ಗವಾಯಿ ಮೇಲೆ ಶೂ ಎಸೆಯಲು ಪ್ರಯತ್ನ! ‘ಸನಾತನ ಧರ್ಮದ ಅವಮಾನ ಸಹಿಸುವುದಿಲ್ಲ’ ಎಂದು ಕಿರುಚಾಡಿದ ವಕೀಲ


