Homeಕರ್ನಾಟಕಮಕ್ಕಳಿಗೆ ಮೊಟ್ಟೆ ಬೇಡ ಎನ್ನುವವರು ರಾಜ್ಯದ ‘ಅಪೌಷ್ಟಿಕತೆ’ ತಿಳಿದಿಲ್ಲವೇ? ಬಸವಣ್ಣನವರ ವಚನ ಓದಿಲ್ಲವೇ?

ಮಕ್ಕಳಿಗೆ ಮೊಟ್ಟೆ ಬೇಡ ಎನ್ನುವವರು ರಾಜ್ಯದ ‘ಅಪೌಷ್ಟಿಕತೆ’ ತಿಳಿದಿಲ್ಲವೇ? ಬಸವಣ್ಣನವರ ವಚನ ಓದಿಲ್ಲವೇ?

ಮಾಂಸಾಹಾರಕ್ಕೆ ಸಸ್ಯಾಹಾರ ಪರ್ಯಾಯವಲ್ಲ ಎನ್ನುತ್ತಾರೆ ಡಾ.ಶ್ರೀನಿವಾಸ ಕಕ್ಕಿಲ್ಲಾಯ.

- Advertisement -
- Advertisement -

ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟದ ಜೊತೆಗೆ ಕೋಳಿ ಮೊಟ್ಟೆ ಕೊಡುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಬೀದರ್‌ ನಗರದಲ್ಲಿ ರಾಷ್ಟ್ರೀಯ ಬಸವ ದಳ, ಲಿಂಗಾಯತ ಧರ್ಮ ಮಹಾಸಭಾ, ಅಕ್ಕನಾಗಲಾಂಬಿಕಾ ಮಹಿಳಾ ಗಣ ಹಾಗೂ ಲಿಂಗಾಯತ ಸಮಾಜದ ಆಶ್ರಯದಲ್ಲಿ ಪ್ರತಿಭಟನೆ ನಡೆಸಲಾಗಿದೆ.

ಬೀದರ್‌ ನಗರದ ಬಸವೇಶ್ವರ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸಿ, ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತದ ಅಧಿಕಾರಿಗೆ ಪ್ರತಿಭಟನಾಕಾರರು ನೀಡಿದ್ದಾರೆ.

ಪ್ರತಿಭಟನೆಯಲ್ಲಿ ಮಾತನಾಡಿರುವ ಬಸವ ಮಂಟಪದ ಪ್ರಧಾನ ಸಂಚಾಲಕರಾದ ಮಾತೆ ಸತ್ಯಾದೇವಿ, “ಅನುದಾನಿತ ಮತ್ತು ಸರ್ಕಾರಿ ಶಾಲೆಗಳ 1 ರಿಂದ 8ನೇ ತರಗತಿವರೆಗೆ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಕೋಳಿಮೊಟ್ಟೆ ಕೊಡುವ ಕುರಿತು ಸರ್ಕಾರ ಆದೇಶ ಹೊರಡಿಸಿದೆ. ಮೊಟ್ಟೆ ಮಾಂಸಾಹಾರ, ಇದರಿಂದ ಮಕ್ಕಳ ಮಾನಸಿಕತೆ ಮೇಲೆ ದುಷ್ಪರಿಣಾಮ ಬೀರಲಿದೆ. ಮಕ್ಕಳಲ್ಲಿ ಪೌಷ್ಠಿಕತೆ ಹೆಚ್ಚಿಸುವ ಕಳಕಳಿ ಇದ್ದಲ್ಲಿ ಹಣ್ಣು, ದ್ವಿದಳ ಧಾನ್ಯಗಳು ಮತ್ತು ಮೊಳಕೆ ಕಾಳು ಕೊಡುವ ವ್ಯವಸ್ಥೆ ಮಾಡಲಿ” ಎಂದು ಸಲಹೆ ನೀಡಿದ್ದಾರೆ.

“ಶಾಲೆಯಲ್ಲಿ ಮುಗ್ಧ ಮಕ್ಕಳಿಗೆ ಕೋಳಿಮೊಟ್ಟೆ ನೀಡಿದರೆ ಉದ್ದೇಶಪೂರ್ವಕವಾಗಿ ಮಾಂಸಾಹಾರಕ್ಕೆ ಪ್ರಚೋದನೆ ನೀಡಿದಂತಾಗುತ್ತದೆ. ಮೊಟ್ಟೆ ತಿನ್ನುವ ಮಕ್ಕಳು ಮತ್ತು ತಿನ್ನದ ಮಕ್ಕಳೆಂದು ಶಾಲೆಯಲ್ಲಿ ನೀವೇ ಭೇದಭಾವ ಮೂಡಿಸಿದಂತಾಗುತ್ತದೆ. ಜೈನ ಮತ್ತು ಲಿಂಗಾಯತ ಧರ್ಮದ ಪ್ರಕಾರ ಮೊಟ್ಟೆ ಮಾಂಸಾಹಾರ ಪದ್ಧತಿಯಾಗಿದೆ. ಇದರಿಂದ ಸಸ್ಯಾಹಾರಿ ಪದ್ಧತಿ ಅಳವಡಿಸಿಕೊಂಡವರಿಗೆ ಇದು ಅವಮಾನ ಮಾಡಿದಂತಾಗುತ್ತದೆ. ಆದ್ದರಿಂದ ಸರ್ಕಾರ ಕೂಡಲೇ ಈ ನಿರ್ಣಯವನ್ನು ಹಿಂಪಡೆಯಬೇಕು” ಎಂದು ಮಾತಾಜಿ ಆಗ್ರಹಿಸಿದ್ದಾರೆ.

“ಮೊಟ್ಟೆ ಸಸ್ಯಾಹಾರ, ಮಾಂಸಾಹಾರ ಅಲ್ಲ. ಅದು ಪೌಷ್ಟಿಕಾಂಶಗಳಿಂದ ತುಂಬಿದ ದ್ರವ. ಮೊಟ್ಟೆಗೆ ಧರ್ಮ, ಜಾತಿ ಲೇಪನ ಮಾಡಬಾರದು” ಎಂದು ಆರ್‌ಪಿಐ, ಭಾರತೀಯ ವಿದ್ಯಾರ್ಥಿ ಸಂಘಟನೆಗಳು ಹೇಳಿವೆ. ಮೊಟ್ಟೆಯನ್ನು ಸಸ್ಯಾಹಾರವೆಂದು ಬಣ್ಣಿಸಿ, ಅದರ ಉಪಯೋಗವನ್ನು ಪಡೆಯುವುದು ಮತ್ತೊಂದು ರೀತಿಯ ದ್ವಂದ್ವ ನಿಲುವು. ಆದರೆ ಎಲ್ಲ ಚರ್ಚೆಗಳಾಚೆಗೆ ‘ಮೊಟ್ಟೆ’ ಪೌಷ್ಟಿಕಯುಕ್ತ ಆಹಾರ ಎಂಬುದು ಎಲ್ಲ ವೈದ್ಯರ ಅಭಿಪ್ರಾಯ.

ಮಾಂಸಾಹಾರಕ್ಕೆ ಸಸ್ಯಾಹಾರ ಪರಿಹಾರವಲ್ಲ: ಡಾ.ಕಕ್ಕಿಲ್ಲಾಯ

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲೆಯ ಖ್ಯಾತ ವೈದ್ಯರಾದ ಶ್ರೀನಿವಾಸ ಕಕ್ಕಿಲ್ಲಾಯ ಅವರು, “ಕೇರಳ ಮತ್ತು ತಮಿಳುನಾಡಿನಲ್ಲಿ ವಾರಕ್ಕೆ ಐದು ದಿನ ಮಕ್ಕಳಿಗೆ ಮೊಟ್ಟೆ ಕೊಡುತ್ತಿದ್ದಾರೆ. ಅಲ್ಲಿ ಮಕ್ಕಳ ಕುಪೋಷಣೆ ಇಡೀ ದೇಶದಲ್ಲಿ ಕನಿಷ್ಠ ಮಟ್ಟದಲ್ಲಿದೆ. ಕರ್ನಾಟಕದಲ್ಲಿ 2007-2008ರಲ್ಲಿ ಈ ಪ್ರಸ್ತಾಪ ಬಂದ ದಿನದಿಂದ ಈ ಕಾಟವನ್ನು ಸ್ವಾಮೀಜಿಗಳು ಕೊಡುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಮಕ್ಕಳಲ್ಲಿ ಕುಪೋಷಣೆ ಶೇ. 38 ಇದೆ. ಹಿಂದುಳಿದ ಜಿಲ್ಲೆಗಳಲ್ಲಿ ಈ ಪ್ರಮಾಣ ಇನ್ನೂ ಹೆಚ್ಚಾಗಿದೆ. ವೈಜ್ಞಾನಿಕ ಕಾರಣದಿಂದ ಈ ಹಿಂದುಳಿದ ಜಿಲ್ಲೆಗಳಲ್ಲಿ ಮೊಟ್ಟೆಯನ್ನು ಕೊಡಲು ಸರ್ಕಾರ ಮುಂದಾಗಿದೆ. ಇದಕ್ಕೆ ವಿರೋಧ ಸಲ್ಲದು” ಎಂದರು.

“ಮಾಂಸಾಹಾರಕ್ಕೆ ಪರ್ಯಾಯ ಇಲ್ಲ. ಮಕ್ಕಳಿಗೆ ಬೇಕಾದಷ್ಟು ಪ್ರೋಟೀನ್‌‌ ಯಾವುದೇ ಸಸ್ಯಾಹಾರದಲ್ಲಿ ಸಿಗುವುದಿಲ್ಲ. ರಾಜ್ಯದಲ್ಲಿ ಶೇ. 80ರಿಂದ 88ರಷ್ಟು ಜನರು ಮಾಂಸಾಹಾರವನ್ನು ಸೇವಿಸುತ್ತಾರೆ. 12ರಿಂದ 20 ಶೇಕಡಾ ಜನರು ಮನೆಯಲ್ಲಿ ಸಸ್ಯಾಹಾರಿಗಳು. ಇವರ ಮಕ್ಕಳಿಗೆ ಮನೆಯಲ್ಲಿ ಮೊಟ್ಟೆಯನ್ನು ಕೊಡಬೇಡಿ” ಎಂಬುದು ಡಾ.ಶ್ರೀನಿವಾಸ ಕಕ್ಕಿಲ್ಲಾಯ ಅವರ ಅಭಿಪ್ರಾಯ.

ಅಪೌಷ್ಟಿಕತೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಐದನೇ ಸ್ಥಾನ

“ಭಾರತದಲ್ಲಿ 33 ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ, ಮಹಾರಾಷ್ಟ್ರ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಅಪೌಷ್ಟಿಕ ಮಕ್ಕಳಿದ್ದಾರೆ” ಎಂದು ಪಿಟಿಐ ವರದಿ ಮಾಡಿತ್ತು. ಪಿಟಿಐ ಸುದ್ದಿಸಂಸ್ಥೆಯು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಈ ಮಾಹಿತಿಯನ್ನು ಪಡೆದುಕೊಂಡಿತ್ತು.

ಮಹಿಳಾ ಮತ್ತು ಮಕ್ಕಳ ಸಬಲೀಕರಣ ಸಚಿವಾಲಯದ ಅಕ್ಟೋಬರ್‌ 14ರವರೆಗಿನ ಮಾಹಿತಿ ಪ್ರಕಾರ, ಅಪೌಷ್ಟಿಕತೆಯನ್ನು ಹೊಂದಿರುವ ಅರ್ಧದಷ್ಟು ಮಕ್ಕಳು ತೀವ್ರತರನಾದ ಅಪೌಷ್ಟಿಕತೆಯನ್ನು ಹೊಂದಿವೆ. 17,76,902 ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆ ಇದ್ದು, 15,46,420 ಮಕ್ಕಳಲ್ಲಿ ಮಧ್ಯಮ ತೀವ್ರ ಅಪೌಷ್ಟಿಕತೆ ಇದೆ.

ಎತ್ತರಕ್ಕೆ ಅನುಗುಣವಾಗಿ ಇಲ್ಲದ ತೂಕ, ತೋಳಿನ ಮಧ್ಯದ ಸುತ್ತಳತೆ 115 ಮಿಲಿಮೀಟರ್‌ಗಿಂತ ಕಡಿಮೆ ಇರುವುದು ತೀವ್ರ ಅಪೌಷ್ಟಿಕತೆಯನ್ನು ಸೂಚಿಸುತ್ತದೆ ಎಂದು ವಿಶ್ವಸಂಸ್ಥೆ ಹೇಳಿದೆ. ತೋಳಿನ ಮಧ್ಯದ ಸುತ್ತಳತೆ 115 ಮಿಲಿಮೀಟರ್‌ಗಳಿಗಿಂತ ಹೆಚ್ಚು ಆದರೆ 125 ಮಿಲಿಮೀಟರ್‌ಗಳಿಗಿಂತ ಕಡಿಮೆ ಇದ್ದರೆ ಅದನ್ನು ಮಧ್ಯಮ ತೀವ್ರ ಅಪೌಷ್ಟಿಕತೆ ಎಂದು ವಿಶ್ವಸಂಸ್ಥೆ ವ್ಯಾಖ್ಯಾನಿಸಿದೆ.

ವರದಿಯ ಪ್ರಕಾರ, 6,16,772 ಅಪೌಷ್ಟಿಕ ಮಕ್ಕಳನ್ನು ಹೊಂದಿರುವ ಮಹಾರಾಷ್ಟ್ರ ರಾಜ್ಯ ಮೊದಲ ಸ್ಥಾನದಲ್ಲಿದೆ. ಬಿಹಾರದಲ್ಲಿ 4,75,824, ಗುಜರಾತ್‌ನಲ್ಲಿ 3,20,465, ಆಂಧ್ರಪ್ರದೇಶದಲ್ಲಿ 2,67,228, ಕರ್ನಾಟಕದಲ್ಲಿ 2,49,463, ಉತ್ತರ ಪ್ರದೇಶದಲ್ಲಿ 1,86,640 ಅಪೌಷ್ಟಿಕ ಮಕ್ಕಳಿದ್ದಾರೆ.

ನವೆಂಬರ್ 2020 ಮತ್ತು ಈ ವರ್ಷದ ಅಕ್ಟೋಬರ್ 14ರ ನಡುವೆ ತೀವ್ರತರವಾದ ಅಪೌಷ್ಟಿಕತೆಯ ಮಕ್ಕಳ ಸಂಖ್ಯೆಯಲ್ಲಿ 91% ಏರಿಕೆಯಾಗಿದೆ. ನವೆಂಬರ್ 2020ರಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ 9,27,606 ಆಗಿತ್ತು. ಪಿಟಿಐ ವರದಿ ಪ್ರಕಾರ, ಎರಡು ವಿಧದಲ್ಲಿ ಅಪೌಷ್ಟಿಕ ಮಕ್ಕಳ ಅಂಕಿ-ಅಂಶಗಳನ್ನು ಸರ್ಕಾರ ದಾಖಲಿಸಿದೆ. ಕಳೆದ ವರ್ಷದ ಅಂಕಿಅಂಶಗಳನ್ನು ರಾಜ್ಯ ಸರ್ಕಾರಗಳು ಸಂಗ್ರಹಿಸಿ ಕೇಂದ್ರಕ್ಕೆ ರವಾನಿಸಿದ್ದರೆ, ಈ ವರ್ಷದ ಅಂಕಿಅಂಶಗಳನ್ನು ಅಂಗನವಾಡಿ ಕಾರ್ಯಕರ್ತೆಯರು ನೇರವಾಗಿ ಪೋಷಣ್‌ ಟ್ರ್ಯಾಕರ್ ಅಪ್ಲಿಕೇಶನ್‌ನಲ್ಲಿ ನಮೂದಿಸಿ ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದಾರೆ.

ಕಳೆದ ವರ್ಷದ ದತ್ತಾಂಶವು ಆರು ತಿಂಗಳಿಂದ ಆರು ವರ್ಷಗಳವರೆಗಿನ ಮಕ್ಕಳ ಗುಂಪಿಗೆ ಸಂಬಂಧಿಸಿದ್ದು, ಈ ವರ್ಷದ ದತ್ತಾಂಶದಲ್ಲಿ ಮಕ್ಕಳ ವಯಸ್ಸಿನ ಗುಂಪನ್ನು ನಿರ್ದಿಷ್ಟಪಡಿಸಲಾಗಿಲ್ಲ. ಎಲ್ಲಾ ಅಂಗನವಾಡಿ ಕೇಂದ್ರಗಳು ಮತ್ತು ಅವುಗಳ ಫಲಾನುಭವಿಗಳನ್ನು ಪತ್ತೆಹಚ್ಚಲು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಪೋಷಣ್‌ ಟ್ರ್ಯಾಕರ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದೆ.

ಹಿಂದಿನ ಅಂಕಿ-ಅಂಶಗಳ ಪ್ರಕಾರ ಅಪೌಷ್ಟಿಕತೆ, ರಕ್ತಹೀನತೆ ಹೊಂದಿರುವ ಶಾಲಾ ಮಕ್ಕಳ ಶೇಕಡಾವಾರು ಪ್ರಮಾಣ ಕರ್ನಾಟಕದಲ್ಲಿ ತೀವ್ರತರನಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ ಶೇ. 74ರಷ್ಟು ಅಪೌಷ್ಟಿಕತೆ ಇದೆ. ಕಲಬುರಗಿಯಲ್ಲಿ ಶೇ. 72.4, ಬಳ್ಳಾರಿಯಲ್ಲಿ ಶೇ. 72.3, ಕೊಪ್ಪಳದಲ್ಲಿ ಶೇ. 70.7, ರಾಯಚೂರಿನಲ್ಲಿ ಶೇ. 70.6, ಬೀದರ್‌ನಲ್ಲಿ ಶೇ. 69.1, ವಿಜಯಪುರದಲ್ಲಿ ಶೇ. 68ರಷ್ಟು ಅಪೌಷ್ಟಿಕತೆ ವರದಿಯಾಗಿದೆ.

ಸಸ್ಯಾಹಾರ, ಮಾಂಸಾಹಾರ ಭಿನ್ನತೆ ಸಲ್ಲದು ಎಂದಿದ್ದರು ಬಸವಣ್ಣ

ಮೊಟ್ಟೆ ಮಾಂಸಾಹಾರವಾಗಿದ್ದು, ಅದನ್ನು ಮಕ್ಕಳಿಗೆ ಕೊಡಬೇಡಿ ಎಂದು ಇಂದು ದನಿ ಎತ್ತಿರುವವರು ಬಸವಣ್ಣನವರ ಅನುಯಾಯಿಗಳು ಎಂದು ಬಿಂಬಿಸಿಕೊಂಡಿದ್ದಾರೆ. ಆಹಾರ ಸಂಸ್ಕೃತಿಯ ಕುರಿತು ಬಸವಣ್ಣ ಇಂತಹ ಯಾವುದೇ ತಾತ್ಸರವನ್ನು ಹೊಂದಿರಲಿಲ್ಲ. ಬಸವಣ್ಣನವರ ಒಂದು ವಚನ ನಮ್ಮನ್ನು ಚಿಂತನೆಗೆ ಹಚ್ಚಬೇಕು.

“ಮರ ಗಿಡ ಬಳ್ಳಿ ಧಾನ್ಯಂಗಳ ಬೆಳಸೆಲ್ಲವ ತರಿತರಿದು

ಪ್ರಾಣವ ಕೊಂದುಂಡು, ಶರೀರವ ಹೊರೆವ ದೋಷಕ್ಕೆ

ಇನ್ಯಾವುದು ವಿಧಿಯಯ್ಯಾ

ಒಂದಿಂದ್ರಿಯ ಮೊದಲಾಗಿ ಐದಿಂದ್ರಿಯ ಕಡೆಯಾದ

ಜೀವಜಾಲದಲ್ಲಿದೆ ಚರಾಚರವೆಲ್ಲ

ಅದು ಕಾರಣ,

ಕೂಡಲ ಸಂಗನ ಶರಣರು ಲಿಂಗಕ್ಕರ್ಪಿಸಿ ಪ್ರಸಾದವ ಕೊಂಡು

ನಿರ್ದೋಷಿಗಳಾಗಿ ಬದುಕಿದರು.

ಇತ್ತೀಚೆಗೆ ಮಧುಮೇಹದ ಕುರಿತು ಮಾತನಾಡುತ್ತಾ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಅವರು ಬಸವಣ್ಣನವರ ಈ ವಚನವನ್ನು ಉಲ್ಲೇಖಿಸಿದ್ದರು. “ನಾವು ಮರ, ಗಿಡ, ಬಳ್ಳಿಗಳನ್ನೆಲ್ಲ ಕತ್ತರಿಸಿ ತಿನ್ನುತ್ತೇವೆ, ಪ್ರಾಣಿಗಳನ್ನು ಕೊಂದು ತಿನ್ನುತ್ತೇವೆ. ಈ ಇವುಗಳಿಂದ ಶರೀರವನ್ನು ಹೊರೆಯುತ್ತೇವೆ. ಇವೆಲ್ಲವೂ ಆಹಾರವೇ. ಇದು ದೋಷ. ಇದಕ್ಕೆ ಉತ್ತರ ಏನು? ಬಸವಣ್ಣ ಹೇಳುತ್ತಾರೆ- ಒಂದಿದ್ರಿಯ ಮೊದಲಾಗಿ ಐದಿಂದ್ರಿಯ ಕಡೆಯಾದ ಜೀವಜಾಲದಲ್ಲಿದೆ ಚರ ಅಚರವೆಲ್ಲ; ಅದು ಕಾರಣ ಕೂಡಲ ಸಂಗನ ಶರಣರು ಲಿಂಗಕ್ಕರ್ಪಿಸಿ ಪ್ರಸಾದವ ಕೊಂಡು ನಿರ್ದೋರ್ಷಿಗಳಾಗಿ ಬದುಕಿದರು- ಎಂದು. ಅಂದರೆ ಮಾಂಸಾಹಾರ ತಿಂದರೂ, ಸಸ್ಯಾಹಾರ ತಿಂದರೂ ಜೀವಹಾನಿಯನ್ನು ಮಾಡಿದ ಹಾಗೆಯೇ. ನಾವು ಬದುಕಬೇಕಾದರೆ ನಾವು ಜೀವಿಗಳನ್ನೇ ತಿನ್ನಬೇಕಾಗುತ್ತದೆ. ಎಲ್ಲ ಜೀವಿಗಳಿಗೂ ಸಂವೇದನೆ ಇದೆ. ಅದು ಒಂದಿದ್ರಿಯ ಜೀವಿಯಾಗಲೀ, ಐದಿಂದ್ರಿಯ ಜೀವಿಯಾಗಿರಲಿ. ಹೀಗಾಗಿ ಪ್ರಕೃತಿ ಕೊಟ್ಟಿದ್ದನ್ನು ಲಿಂಗಕ್ಕೆ ಅರ್ಪಿಸಿ, ನೀವು ಇದನ್ನು ಸ್ವೀಕರಿಸಿದರೆ ಇದು ದೋಷ ಅನಿಸುವುದಿಲ್ಲ ಎಂದು ಹನ್ನೆರಡನೇ ಶತನಮಾನದಲ್ಲೇ ಹೇಳಿದ ಬಹುದೊಡ್ಡ ದಾರ್ಶನಿಕ ಬಸವಣ್ಣ” ಎನ್ನುತ್ತಾರೆ ಡಾ.ಶ್ರೀನಿವಾಸ ಕಕ್ಕಿಲ್ಲಾಯ.

ಬಸವಣ್ಣನವರ ಬ್ಯಾನರ್‌ ಹಿಡಿದು ಮಾಂಸಾಹಾರ, ಸಸ್ಯಾಹಾರದ ವಿವಾದ ಸೃಷ್ಟಿಸುವವರಿಗೆ ಇದು ಅರ್ಥವಾಗುವುದೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...