ಅವರ ಹೆಸರು ಅಶ್ರಫ್ ಅಲೀ ಸೈಯ್ಯದ್ ಹುಸೈನ್, ವಯಸ್ಸು 72 ವರ್ಷ. ಮಹಾರಾಷ್ಟ್ರದ ಜಲಗಾಂವ್‌ನಿಂದ ಕಲ್ಯಾಣ್‌ಗೆ ರೈಲಿನ ಮೂಲಕ ಆಗಾಗ ಪ್ರಯಾಣಿಸುತ್ತಿದ್ದರು. ಕಲ್ಯಾಣ್ ಜಂಕ್ಷನ್ ರೈಲು ನಿಲ್ದಾಣದಲ್ಲಿ ಇಳಿದು, ಅಲ್ಲಿಂದ ಆಟೋ ರಿಕ್ಷಾ ಹಿಡಿದು ನಾಲಕ್ಕು ಕಿ.ಮೀ ಪ್ರಯಾಣಿಸಿ ನಗರದ ಹೊರಗಿನ ಕೊಂಗಾವ್ ಎಂಬ ಹಳ್ಳಿಗೆ ತಲುಪುತ್ತಿದ್ದರು. ಅಲ್ಲಿ ಅವರ ಮಗಳ ಮನೆಯಿತ್ತು.
ಪ್ರತೀ ಬಾರಿ ರೈಲಿನ ಮೂಲಕ ಮಗಳ ಮನೆಗೆ ತೆರಳುತ್ತಿದ್ದ ಅಶ್ರಫ್ ಅಲೀ ಅವರಿಗೆ ಆಗಸ್ಟ್ 30ರಂದು ಆಘಾತ ಕಾದಿತ್ತು. ರೈಲಿನಲ್ಲಿ ಅವರ ಮುಂದಿನ ಆಸನದಲ್ಲಿ ಕುಳಿತಿದ್ದ ಸುಮಾರು 20-25 ವರ್ಷ ಆಸುಪಾಸಿನ ಯುವಕರ ಗುಂಪೊಂದು ಗೋಮಾಂಸ ಸಾಗಾಟದ ಆರೋಪ ಹೊರಿಸಿ ವಯಸ್ಸಿನ ಹಿರಿತನ ನೋಡದೆ ಅಶ್ರಫ್ ಅಲೀ ಅವರಿಗೆ ಥಳಿಸಿದ್ದರು. ಅದಕ್ಕಿಂತಲೂ ಹೆಚ್ಚಾಗಿ ಇತರ ಪ್ರಯಾಣಿಕರ ಮುಂದೆ ಅವಮಾನಿಸಿ ಮಾನಸಿಕ ಹಿಂಸೆ ನೀಡಿದ್ದರು. ಹಲ್ಲೆ ಮಾಡಿದವರೆಲ್ಲರೂ ಪೊಲೀಸ್ ಹುದ್ದೆಯ ಪರೀಕ್ಷೆ ಬರೆಯಲು ಮುಂಬೈಗೆ ತೆರಳುತ್ತಿದ್ದವರು ಎಂಬುವುದು ಆತಂಕದ ವಿಷಯ.
ಅಶ್ರಫ್ ಅಲೀ ಅವರಿಗೆ ಹಲ್ಲೆ ಮಾಡಿದವರು ಪೊಲೀಸರಾಗಿ ಸಂವಿಧಾನದಡಿ ಕಾನೂನು ಕಾಪಾಡಲು ಹೊರಟವರಾಗಿದ್ದರು. ಆದರೆ, ಅವರೇ ಗೋಮಾಂಸದ ಆರೋಪ ಹೊರಿಸಿ ಅಶ್ರಫ್ ಅಲೀ ಅವರ ಮುಖ, ಎದೆ, ಹೊಟ್ಟೆ ಎಂದು ನೋಡದೆ ಥಳಿಸಿದ್ದರು. ಅಶ್ರಫ್ ಅಲೀ ಅವರ ಮೊಬೈಲ್ ಫೋನ್ ಕಸಿದುಕೊಂಡಿದ್ದರು. ತಮ್ಮ ದುಷ್ಕೃತ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ್ದರು.
ಈ ಘಟನೆ ಸಂಬಂಧ ಥಾಣೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರಂಭದಲ್ಲಿ ಆಕಾಶ್ ಅಹ್ವಾದ್, ನೀಲೇಶ್ ಅಹಿರೆ ಮತ್ತು ಜಯೇಶ್ ಮೋಹಿತೆ ಎಂಬ ಮೂವರನ್ನು ಬಂಧಿಸಿದ್ದರು. ಆದರೆ, ಹಲ್ಲೆ ನಡೆಸಿರುವ ವಿಡಿಯೋ ಸಾಕ್ಷಿಯ ಹೊರತಾಗಿಯೂ ಆರೋಪಿಗಳ ವಿರುದ್ದ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಜಾಮೀನು ಪಡೆಯಬಹುದಾದ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿದ್ದರು. ಹಾಗಾಗಿ, ಆರೋಪಿಗಳು ಬಂಧನಕ್ಕೊಳಗಾದ ಮರುದಿನವೇ ಬಿಡುಗಡೆಯಾಗಿದ್ದಾರೆ.
ತನ್ನ ಮೇಲಿನ ಹಲ್ಲೆ ಘಟನೆಯನ್ನು ದಿ ವೈರ್ ಸುದ್ದಿ ಸಂಸ್ಥೆಗೆ ವಿವರಿಸಿರುವ ಅಶ್ರಫ್ ಅಲೀ “ನನ್ನ ಮೇಲಿನ ದಾಳಿ ಅಪ್ರಚೋದಿತವಾಗಿದೆ. ಜಲಗಾಂವ್‌ನ ಚಾಲಿಸ್‌ಗಾಂವ್ ನಿಲ್ದಾಣದಲ್ಲಿ ನಾನು ರೈಲು ಹತ್ತಿದ್ದೆ. ರೈಲಿನಲ್ಲಿ ಜನಸಂದಣಿ ಇತ್ತು. ಹಾಗಾಗಿ ರೈಲು ನಾಸಿಕ್ ರೈಲು ನಿಲ್ದಾಣಕ್ಕೆ ಹತ್ತಿರವಾಗುವವರೆಗೂ ನಿಂತುಕೊಂಡೇ ಇದ್ದೆ. ನಂತರ ಮೇಲಿನ ಬರ್ತ್‌ನಲ್ಲಿ ಕುಳಿತಿದ್ದ ಒಬ್ಬಳು ಹುಡುಗಿ ತನ್ನ ಸೀಟಿನಿಂದ ಇಳಿದಳು. ನಾನು ಆ ಸ್ಥಳಕ್ಕೆ ಹೋದೆ. ಆಗ ನನ್ನ ಪಕ್ಕದಲ್ಲಿ ನಿಂತಿದ್ದ ಸುಮಾರು 24-25 ವರ್ಷ ವಯಸ್ಸಿನ ಯುವಕ, ತನಗೆ ಜಾಗ ಕೊಡಿ ಎಂದು ಕೇಳಿದ. ಇನ್ನೊಬ್ಬ ವ್ಯಕ್ತಿ ಕೂರಲು ಜಾಗ ಇಲ್ಲದ ಕಾರಣ ನಾನು ಮಡಿಲಲ್ಲಿ ಕೂರುತ್ತೀರಾ? ಎಂದು ಆ ಯುವಕನಿಗೆ ಕೇಳಿದೆ. ಅದು ಆ ಯುವಕ ಮತ್ತು ಆತನ ಜೊತೆ ನಿಂತಿದ್ದವರಿಗೆ ಕೋಪ ತರಿಸಿತು” ಎಂದಿದ್ದಾರೆ.
ಮುಂದುವರಿದು “ನಾನು ಇಳಿಯಬೇಕಿದ್ದ ನಿಲ್ದಾಣ ಕಲ್ಯಾಣ್‌ಗೆ ರೈಲು ಬರುವವರೆಗೂ ಕುಳಿತಿದ್ದೆ. ನನ್ನ ಜೊತೆ ಚೀಲವೊಂದಿತ್ತು. ಅದರಲ್ಲಿ ಎರಡು ಪ್ಲಾಸ್ಟಿಕ್ ಡಬ್ಬಗಳಲ್ಲಿ ಎಮ್ಮೆ ಮಾಂಸ ಇತ್ತು. ಮಹಾರಾಷ್ಟ್ರದಲ್ಲಿ ಎಮ್ಮೆ ಮಾಂಸ ಸೇವನೆ ಕಾನೂನು ಬದ್ಧವಾಗಿದೆ. ಯುವಕರ ಗುಂಪು ಏಕಾಏಕಿ ನನ್ನ ಬ್ಯಾಗ್ ತೆರೆದು ಅವರಿಗೆ ತೋರಿಸಲು ಒತ್ತಾಯಿಸಿದರು. ನನ್ನನ್ನು ದಬಾಯಿಸಲು ಪ್ರಾರಂಭಿಸಿದರು. ಬ್ಯಾಗ್‌ನಲ್ಲಿ ಏನಿದೆ? ಎಂದು ಕೇಳಿದರು. ನನಗೆ ಗೊಂದಲವುಂಟಾಯಿತು. ಗೂಳಿ ಮಾಂಸ ಎಂದೆ. ತಕ್ಷಣ ಯುವಕರು ನನಗೆ ಥಳಿಸಲು ಪ್ರಾರಂಭಿಸಿದರು” ಎಂದು ಹುಸೈನ್ ಎಫ್‌ಐಆರ್‌ನಲ್ಲಿ ವಿವರಿಸಿದ್ದಾರೆ ಎಂದು ದಿ ವೈರ್ ಹೇಳಿದೆ.
“ಅವನನ್ನು ರೈಲಿನಿಂದ ಹೊರಕ್ಕೆ ತಳ್ಳಿ”
“ರೈಲು ಕಲ್ಯಾಣ್ ನಿಲ್ದಾಣಕ್ಕೆ ಸಮೀಪಿಸುತ್ತಿದ್ದಂತೆ ನಾನು ಇಳಿಯಲು ಮುಂದಾದೆ. ಆದರೆ, ಆ ಯುವಕರು ನನ್ನನ್ನು ಬಿಡಲಿಲ್ಲ. ಅವರಲ್ಲಿ ಕೆಲವರು ” ಅವನನ್ನು ರೈಲಿನಿಂದ ಹೊರಕ್ಕೆ ತಳ್ಳಿ” ಎಂದರು. ರೈಲಿನಲ್ಲಿದ್ದ ಕೆಲವರು ನನಗೆ ಹೊಡೆಯದಂತೆ ಕೇಳಿಕೊಂಡರೂ, ಯುವಕರು ತಲೆಕೆಡಿಸಿಕೊಳ್ಳದೆ ಹಲ್ಲೆ ಮಾಡುವುದನ್ನು ಮುಂದುವರೆಸಿದರು” ಎಂದು ಅಶ್ರಫ್ ಅಲೀ ನೆನಪಿಸಿಕೊಂಡಿದ್ದಾರೆ.
“ಆರೋಪಿಗಳು ಪೊಲೀಸರಿಗೆ ದೂರು ನೀಡಿದರೆ ನನ್ನನ್ನು ಕೊಲ್ಲುವುದಾಗಿ ಮತ್ತು ನನ್ನ ಕುಟುಂಬದ ಮಹಿಳೆಯರನ್ನು ಅತ್ಯಾಚಾರವೆಸಗುವುದಾಗಿ ಬೆದರಿಕೆ ಹಾಕಿದ್ದಾರೆ. ಅವರು ದೇಶದ ಹಲವೆಡೆ ಗುಂಪು ಹತ್ಯೆಗಳನ್ನು ನಡೆಸುತ್ತಿರುವ ಸ್ವಯಂ ಘೋಷಿತ ಗೋರಕ್ಷರು ಮತ್ತು ಬಜರಂಗದಳದ ಜೊತೆಗಿನ ತಮ್ಮ ಸಂಪರ್ಕದ ಬಗ್ಗೆ ಹೇಳಿ ಹೆಮ್ಮೆಪಟ್ಟುಕೊಳ್ಳುತ್ತಿದ್ದರು” ಎಂದು ಅಶ್ರಫ್ ಅಲೀ ಹೇಳಿದ್ದಾರೆ.
“ಕಲ್ಯಾಣ್ ನಿಲ್ದಾಣದಲ್ಲಿ ರೈಲಿನಿಂದ ಇಳಿಯಬೇಕಾಗಿದ್ದ ನಾನು ಕೊನೆಗೆ ಥಾಣೆ ನಿಲ್ದಾಣದಲ್ಲಿ ಇಳಿದೆ. ಬಳಿಕ ಪೊಲೀಸ್ ಠಾಣೆಗೆ ಹೋದೆ. ನನಗೆ ಥಳಿಸಿದ್ದಾರೆ ಎಂದು ಪೊಲೀಸರಿಗೆ ಹೇಳಿದೆ. ನನ್ನ ಮುಖ ಊದಿಕೊಂಡಿತ್ತು. ದೇಹದ ತುಂಬಾ ನೋವಿತ್ತು. ಕಣ್ಣಿನ ಕುಳಿ ಕಪ್ಪು ಬಣ್ಣಕ್ಕೆ ತಿರುಗಿತ್ತು. ಆದರೆ, ಪೊಲೀಸರು ನನ್ನ ಪರಿಸ್ಥಿತಿಯನ್ನು ನಿರ್ಲಕ್ಷಿಸಿದರು. ಕೋಮು ಆಯಾಮದಲ್ಲಿ ನನ್ನ ಮೇಲೆ ನಡೆದ ದಾಳಿಯನ್ನು ಸಾಮಾನ್ಯ ಹಲ್ಲೆ ಘಟನೆಯೆಂದು ಪರಿಗಣಿಸಿದರು. ಸಾಮಾನ್ಯ ಕಾಗದಲ್ಲಿ ಏನೋ ಬರೆದು ಸಹಿ ಮಾಡುವಂತೆ ಹೇಳಿದರು. ನಾನು ಸಹಿ ಮಾಡಿ ಹೊರಟೆ” ಎಂದು ಅಶ್ರಫ್ ಅಲೀ ತಿಳಿಸಿದ್ದಾರೆ.
“ಥಾಣೆಯಿಂದ ನಾನು ವಾಪಸ್ ಕಲ್ಯಾಣ್‌ಗೆ ಬಂದು ಮಗಳ ಊರಾದ ಕೊಂಗಾವ್‌ಗೆ ಹೋದೆ. ಯುವಕರು ನನ್ನ ಮೇಲೆ ಹಲ್ಲೆ ಮಾಡಿರುವುದು ನನ್ನ ಜೊತೆಗಿದ್ದ ಮಾಂಸದ ಕಾರಣಕ್ಕೆ ಎಂದು ನನಗೆ ಗೊತ್ತಾಯಿತು. ಅದಕ್ಕೆ ಆ ಮಾಂಸವನ್ನು ಮಗಳ ಮನೆಯ ದಾರಿ ಮಧ್ಯೆ ಹರಿಯುವ ನೀರಿಗೆ ಎಸೆದೆ. ನನ್ನ ಮೇಲೆ ನಡೆದ ಹಲ್ಲೆಯನ್ನು ಯಾರಿಗೂ ಗೊತ್ತಾಗದಂತೆ ಮುಚ್ಚಿಟ್ಟಿದ್ದೆ. ಆದರೆ, ಅಷ್ಟರಲ್ಲಿ ವಿಡಿಯೋ ಎಲ್ಲೆಡೆ ಹರಿದಾಡಿತ್ತು” ಎಂದಿದ್ದಾರೆ.
“ಪೊಲೀಸರು ಸರಳ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿದ್ದಾರೆ”
ಅಶ್ರಫ್ ಅಲೀ ಅವರ ಮೇಲೆ ಕೋಮುದಾಳಿ ನಡೆದಿದೆ. ಅವರು ಮುಸ್ಲಿಂ ಧರ್ಮದವರು ಮತ್ತು ಗೋಮಾಂಸ ಸಾಗಿಸುತ್ತಿದ್ದರು ಎಂದು ಥಳಿಸಲಾಗಿದೆ. ಆದರೆ, ಥಾಣೆ ರೈಲ್ವೆ ಪೊಲೀಸರು ಸಾಮಾನ್ಯ ಹಲ್ಲೆ ಪ್ರಕರಣ ದಾಖಲಿಸಿದ್ದಾರೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಎಸ್‌ಡಿಪಿಐ ಆಕ್ರೋಶ ವ್ಯಕ್ತಪಡಿಸಿದೆ ಎಂದು ದಿ ವೈರ್ ವರದಿ ಮಾಡಿದೆ.
ಕೃಪೆ: thewire.in
ಇದನ್ನೂ ಓದಿ : ಮುಸ್ಲಿಂ ವಿರೋಧಿ ದ್ವೇಷ ಭಾಷಣದ ಆರೋಪ; ಮಹಾರಾಷ್ಟ್ರ ಬಿಜೆಪಿ ಶಾಸಕ ನಿತೇಶ್ ರಾಣೆ ವಿರುದ್ಧ ಎಫ್‌ಐಆರ್


