ಕೃಪೆ: ಇಂಡಿಯಾಟೈಮ್ಸ್
ಅನುವಾದ: ನಿಖಿಲ್ ಕೋಲ್ಪೆ
ಡಿಸೆಂಬರ್ 16, 2012ರ ರಾತ್ರಿ ದಿಲ್ಲಿಯಲ್ಲಿ ಪುಂಡರ ಗುಂಪೊಂದು ಅರೆ ವೈದ್ಯಕೀಯ ವಿದ್ಯಾರ್ಥಿನಿ ಯುವತಿಯೊಬ್ಬರ ಮೇಲೆ ಚಲಿಸುವ ಬಸ್ಸಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ ಘೋರ ಘಟನೆ ನಡೆದಿತ್ತು. ನಿರ್ಭಯಾ ಪ್ರಕರಣವೆಂದು ಮಾಧ್ಯಮಗಳು ಹೆಸರಿಸಿದ್ದ ಈ ಘಟನೆಯಿಂದ ದೇಶದ ಜನರಂತೆ ಗೋರಖ್‌ಪುರದ ಅಭಿಷೇಕ್ ಯಾದವ್ ಅವರಿಗೂ ತೀವ್ರ ನೋವಾಗಿತ್ತು.
ಈ ಕುರಿತು ಏನನ್ನಾದರೂ ಮಾಡಲೇಬೇಕು ಎಂಬ ದೃಢ ಸಂಕಲ್ಪ ಮಾಡಿದಾಗ ಅವರು ಹೆಚ್ಚು ಆ ಕಡೆ, ಈ ಕಡೆ ನೋಡಬೇಕಾಗಿರಲಿಲ್ಲ. ಹಲವು ರೀತಿಯ ಸ್ವಯಂರಕ್ಷಣಾ ಕಲೆಗಳಲ್ಲಿ ನಿಷ್ಣಾತರಾಗಿರುವ ಅವರು, ಮಹಿಳೆಯರು ಮತ್ತು ಹುಡುಗಿಯರಿಗೆ ಈ ರೀತಿಯ ದಾಳಿಕೋರರ ವಿರುದ್ಧ ತಮ್ಮನ್ನು ರಕ್ಷಿಸಿಕೊಳ್ಳುವ ತರಬೇತಿ ನೀಡಲು ನಿರ್ಧರಿಸಿದರು. ಅಂದಿನಿಂದ ಅವರು 2.5 ಲಕ್ಷಕ್ಕೂ ಹೆಚ್ಚು ಮಹಿಳೆಯರು ಮತ್ತು ಹುಡುಗಿಯರಿಗೆ ಸ್ವಯಂ ರಕ್ಷಣೆಯಲ್ಲಿ ತರಬೇತಿ ನೀಡಿದ್ದಾರೆ.

28 ವರ್ಷ ಪ್ರಾಯದ ಅವರು, ‘ಅಭಿಸೆಲ್ಫ್ ಪ್ರೊಟೆಕ್ಷನ್ ಟ್ರಸ್ಟ್’ (Abhiself Protection Trust) ಎಂಬ ಸ್ವಯಂಸೇವಾ ಸಂಸ್ಥೆಯನ್ನು ನಡೆಸುತ್ತಿದ್ದು, ಅದರ ಅಡಿಯಲ್ಲಿ ‘ಮೇರಿ ರಕ್ಷಾ ಮೇರಿ ಹಾತೋಂಮೆ’ (ನನ್ನ ರಕ್ಷಣೆ ನನ್ನ ಕೈಗಳಲ್ಲಿ) ಕಾರ್ಯಕ್ರಮದಡಿ ಹೆಣ್ಣುಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ. ಅವರಲ್ಲಿ ತರಬೇತಿ ಪಡೆಯುತ್ತಿರುವವರಲ್ಲಿ ಹೆಚ್ಚಿನವರು ಗ್ರಾಮೀಣ ಪ್ರದೇಶದವರೇ ಆಗಿರುವುದು ವಿಶೇಷವಾಗಿದೆ.
ಅಭಿಷೇಕ್ ಮೂಲತಃ ಜಪಾನ್ ಮೂಲದ ಐಕಿಡೋ (Aikido) ಪರಿಣಿತರಾಗಿದ್ದು, ಆರಂಭದಲ್ಲಿ ಉತ್ತರ ಪ್ರದೇಶ ಪೊಲೀಸರಿಗೆ ತರಬೇತಿ ನೀಡುತ್ತಿದ್ದರು.
“ನಾನು 2007ರಲ್ಲಿ ಉತ್ತರ ಪ್ರದೇಶದ ಪೊಲೀಸ್ ಕಮಾಂಡೊಗಳಿಗೆ ತರಬೇತಿ ಆರಂಭಿಸಿದೆ. ಆದರೆ, 2012ರಲ್ಲಿ ದಿಲ್ಲಿಯ ಸಾಮೂಹಿಕ ಅತ್ಯಾಚಾರದ ಬಳಿಕ, ಅದೇ ರಕ್ಷಣಾ ತಂತ್ರವನ್ನು ಹೆಣ್ಣುಮಕ್ಕಳಿಗೆ ಕಲಿಸಲು ನಾವೊಂದು ಅಭಿಯಾನ ಆರಂಭಿಸಿದೆವು. ಒಂದು ವಾರ ಅವಧಿಯ ಈ ತರಬೇತಿಯು ಯಾವುದೇ ದಾಳಿಕೋರರನ್ನು ಸ್ವಂತವಾಗಿ ಎದುರಿಸಲು ಅವರನ್ನು ಶಕ್ತರನ್ನಾಗಿ ಮಾಡುತ್ತದೆ” ಎಂದು ಅಭಿಷೇಕ್ ಹೇಳುತ್ತಾರೆ.
ಅವರ ಶಿಬಿರಗಳಲ್ಲಿ ಸಾಮಾನ್ಯವಾಗಿ ನೂರಾರು ಹೆಣ್ಣುಮಕ್ಕಳಿರುತ್ತಾರೆ. ಆದರೆ, ಅವರು 2016ರಲ್ಲಿ ಪ್ರತಾಪಗಢದ ಕುಂದಾ ಎಂಬಲ್ಲಿ 5,700ರಷ್ಟು ಭಾರೀ ಸಂಖ್ಯೆಯ ಹೆಣ್ಣುಮಕ್ಕಳಿಗೆ ತರಬೇತಿ ನೀಡಿ ಲಿಮ್ಕಾ ವಿಶ್ವದಾಖಲೆ ಮಾಡಿದರು.
2002ರಿಂದ ಸ್ವಯಂರಕ್ಷಣಾ ಕಲೆಯಲ್ಲಿ ತರಬೇತಿ ಪಡೆಯಲು ಆರಂಭಿಸಿದ ಅವರು, ಅಂತರರಾಷ್ಟ್ರೀಯ ಕರಾಟೆಯಲ್ಲಿ ಚಿನ್ನದ ಪದಕ ವಿಜೇತರೂ ಹೌದು. ಈಗ ತರಬೇತಿಯಲ್ಲಿ ಅವರಿಗೆ ನೆರವಾಗಲು 12 ಮಂದಿಯ ತಂಡವಿದೆ.

“ನಮ್ಮ ಗುರಿಯೆಂದರೆ ಹೆಣ್ಣುಮಕ್ಕಳನ್ನು ಸಶಕ್ತಗೊಳಿಸಿ, ಯಾವುದೇ ಸವಾಲನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುವಂತಹ ವ್ಯಕ್ತಿಗಳಾಗಿ ಅವರನ್ನು ಗಟ್ಟಿಗೊಳಿಸುವುದು. ಐಕಿಡೋದಲ್ಲಿ ಯಾರೂ ಬೇಕಾದರೂ ನಿಯಮಿತ ಅಭ್ಯಾಸದಿಂದ ಕಲಿತು ನಿಜಜೀವನದಲ್ಲಿ ಉಪಯೋಗಿಸಬಹುದಾದ ಹಲವಾರು ಪಟ್ಟುಗಳು ಮತ್ತು ತಂತ್ರಗಳಿವೆ” ಎಂದು ಅಭಿಷೇಕ್ ವಿವರಿಸುತ್ತಾರೆ.
“ನಾವು ಶಾಲೆಯಿಂದ ಶಾಲೆಗೆ ಹೋಗುತ್ತೇವೆ. ಅಲ್ಲಿ ನಾವು ಅವರು ಏಕೆ ಸ್ವಯಂರಕ್ಷಣೆಯನ್ನು ಕಲಿಯುವುದು ಅಗತ್ಯ ಮತ್ತು ಅದರಲ್ಲೂ ಮಹಿಳೆಯರ ಸುರಕ್ಷಿತತೆಯ ವಿಷಯದಲ್ಲಿ ನಮ್ಮ ದೇಶದಲ್ಲಿ ಪರಿಸ್ಥಿತಿ ಇಷ್ಟೊಂದು ಕೆಟ್ಟಿರುವ ಸಂದರ್ಭದಲ್ಲಿ ಇದು ಏಕೆ ಮುಖ್ಯ ಎಂದು ವಿವರಿಸುತ್ತೇವೆ” ಎಂದವರು ಹೇಳುತ್ತಾರೆ.
ಉತ್ತರ ಪ್ರದೇಶದಲ್ಲಿ ತರಬೇತಿ ನೀಡಿದ ಮೇಲೆ ಈ ತರಬೇತಿ ಕಾರ್ಯಕ್ರಮವನ್ನು ರಾಜ್ಯದಾಚೆಗೂ ವಿಸ್ತರಿಸುವ ಗುರಿಯಿದೆ ಎನ್ನುವ ಅವರು, ಸದ್ಯವೇ ದಿಲ್ಲಿ ಮತ್ತು ಹರ್ಯಾಣದಲ್ಲಿ ತರಬೇತಿ ಕಾರ್ಯಕ್ರಮ ಆರಂಭಿಸುವುದಾಗಿ ತಿಳಿಸಿದ್ದಾರೆ…
ಅವರಿಗೆ ನಾವೆಲ್ಲರೂ ಒಂದು ಸಲಾಂ ಹೇಳೋಣ ಅಲ್ಲವೇ?


