ಪ್ರಧಾನಿ ಮೋದಿಗೆ ಬಹಿರಂಗ ಪತ್ರ ಬರೆದಿದ್ದ ಸೆಲೆಬ್ರಿಟಿಗಳ ವಿರುದ್ಧ ಎಫ್ ಐಆರ್ ಮತ್ತು ದೇಶದ್ರೋಹದ ಕೇಸ್ ದಾಖಲಿಸಿರುವುದಕ್ಕೆ ಚಲನಚಿತ್ರ ನಿರ್ಮಾಪಕಿ ಅಪರ್ಣಾ ಸೇನ್ ಮತ್ತು ಶ್ಯಾಮ್ ಬೆನೆಗಲ್ ಬೇಸರ ವ್ಯಕ್ತಪಡಿಸಿದ್ದಾರೆ. ಸಾಮೂಹಿಕ ಹಲ್ಲೆ ಮತ್ತು ಗೋ ರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಹಿಂಸಾಚಾರ ತಡೆಯುವಂತೆ ಮೋದಿಗೆ ಪತ್ರ ಬರೆದಿದ್ದ ಸೆಲೆಬ್ರಿಟಿಗಳ ವಿರುದ್ಧ ಮುಜಫ್ಫರ್ ಪುರ ಕೋರ್ಟ್ ಎಫ್ಐಆರ್ ಮತ್ತು ದೇಶದ್ರೋಹ ಕೇಸ್ ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಿದೆ.
ಇದೊಂದು ದೊಡ್ಡ ಹಾಸ್ಯಾಸ್ಪದ ಸಂಗತಿ. ಪತ್ರದಲ್ಲಿ ದೇಶದ್ರೋಹದಂತಹ ಸಂಗತಿಯ ಉಲ್ಲೇಖವಿಲ್ಲ. ಇವು ಬಹಳ ಸಂದಿಗ್ಧ, ವಿಚಿತ್ರ ಮತ್ತು ವಿಷಮ ಸಮಯ. ಇದು ಶುದ್ಧ ಕಿರುಕುಳವಲ್ಲದೇ ಬೇರೇನೂ ಅಲ್ಲ ಎಂದು ಅಪರ್ಣಾ ಸೇನ್ ಅಭಿಪ್ರಾಯಪಟ್ಟಿದ್ದಾರೆ. ಅರ್ಜಿ ಸಲ್ಲಿಸಿದ್ದ ಸುಧೀರ್ ಓಜಾ, ಸೆಲೆಬ್ರಿಟಿಗಳ ವಿರುದ್ಧ ಕೇಸ್ ದಾಖಲಿಸುವುದನ್ನೇ ಹವ್ಯಾಸ ಮಾಡಿಕೊಂಡಿದ್ದಾರೆ. ಪ್ರಕರಣ ಸಂಬಂಧ ಪಾಟ್ನಾ ಹೈಕೋರ್ಟ್ ಮೊರೆ ಹೋಗುತ್ತೇವೆ. ಅಲ್ಲಿ ನಮಗೆ ನ್ಯಾಯ ಸಿಗುವ ಭರವಸೆಯಿದೆ. ಇದೆಲ್ಲದರ ಹಿಂದೆ ಸರ್ಕಾರದ ಹಸ್ತಕ್ಷೇಪವಿದೆಯಾ ಅನ್ನೋದು ಗೊತ್ತಿಲ್ಲ. ಸರ್ಕಾರ ಈ ತರಹದ ಕೆಟ್ಟ ಕೆಲಸಕ್ಕೆ ಕೈಹಾಕುವುದಿಲ್ಲ ಎಂದುಕೊಂಡಿದ್ದೇನೆ ಎಂದಿದ್ದಾರೆ.
ಇನ್ನು ಪ್ರಕರಣದ ಬಗ್ಗೆ ಕಾಂಗ್ರೆಸ್ ನಾಯಕ ಹಾಗೂ ವಯನಾಡು ಸಂಸದ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ. ಯಾರು ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತಾರೋ ಅವರನ್ನು ಜೈಲಿಗೆ ಹಾಕಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಸ್ಥಳೀಯ ನ್ಯಾಯವಾದಿ ಸುಧೀರ್ ಕುಮಾರ್ ಓಜಾ, ಎರಡು ತಿಂಗಳ ಹಿಂದೆ ಸಲ್ಲಿಸಿದ್ದ ಅರ್ಜಿಗೆ ಸ್ಪಂದಿಸಿರುವ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಸೂರ್ಯ ಕಾಂತ್ ತಿವಾರಿ ಸೆಲೆಬ್ರಿಟಿಗಳ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಓಜಾ, ಆಗಸ್ಟ್ 20 ರಂದು ಸಿಜೆಎಂ ಆದೇಶವನ್ನು ಅಂಗೀಕರಿಸಿದೆ, ರಶೀದಿಯ ಮೇರೆಗೆ ಅರ್ಜಿ ಸ್ವೀಕರಿಸಿ ಸದರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಹೇಳಿದರು. ಪತ್ರದಲ್ಲಿ ಸಹಿ ಹಾಕಿ, ಬೆಂಬಲ ಸೂಚಿಸಿದ ಇತಿಹಾಸ ತಜ್ಞ ರಾಮಚಂದ್ರ ಗುಹಾ, ನಟ ಕೊಂಕಣ ಸೇನ್ ಶರ್ಮಾ, ನಿರ್ಮಾಪಕ ಮಣಿರತ್ಮಂ ಸೇರಿ 50 ಮಂದಿ ವಿರುದ್ಧ ಕೇಸ್ ದಾಖಲಿಸಲಾಗಿದೆ. ಪ್ರತ್ಯೇಕತಾ ಪ್ರವೃತ್ತಿಗೆ ಬೆಂಬಲ, ದೇಶದ ಸಾರ್ವತ್ರಿಕ ಚಿತ್ರಣಕ್ಕೆ ಧಕ್ಕೆ, ಪ್ರಧಾನಿಯವರ ಪ್ರಭಾವ ಹಾಗೂ ಕಾರ್ಯಕ್ಷಮತೆಯನ್ನು ದುರ್ಬಲಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಓಜಾ ಹೇಳಿದರು.


