ಶಿಕ್ಷಕರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಿಹಾರದ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಪಾಟ್ನಾ ಜಿಲ್ಲಾಧಿಕಾರಿಯೊಂದಿಗೆ ಫೋನ್‌ನಲ್ಲಿ ನಡೆಸಿದ ಸಂಭಾಷಣೆಯೊಂದು ವೈರಲ್ ಆಗುತ್ತಿದೆ.
ಪಾಟ್ನಾದಲ್ಲಿ ಹಲವು ದಿನಗಳಿಂದ ತಮ್ಮ ಕೆಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶಿಕ್ಷಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ತಾವು ಬಯಸಿದ ಜಾಗದಲ್ಲಿ ಪ್ರತಿಭಟನೆ ಮಾಡಲು ಪೊಲೀಸರು ಅನುಮತಿ ನೀಡುತ್ತಿಲ್ಲ ಎಂದು ಅವರು ದೂರಿದ್ದಾರೆ. ಪ್ರತಿಭಟನಾನಿರತ ಶಿಕ್ಷಕರಿಗೆ ಬೆಂಬಲ ನೀಡಲು ಆಗಮಿಸಿದ ತೇಜಸ್ವಿ ಯಾದವ್ ಗಮನಕ್ಕೆ ಈ ವಿಚಾರ ಬಂದಾಗ ಅವರು ಫೋನ್‌ನಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ, ಪೊಲೀಸ್ ಮುಖ್ಯಸ್ಥರು ಮತ್ತು ಪಾಟ್ನಾ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ ಪ್ರತಿಭಟನೆಗೆ ಅನುಮತಿ ದೊರಕಿಸುವ ಭರವಸೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ ತೇಜಸ್ವಿ ಯಾದವ್ ಪ್ರತಿಭಟನಾ ನಿರತ ಶಿಕ್ಷಕರಿದಂದ ಸುತ್ತುವರಿದು ಪಾಟ್ನಾ ಜಿಲ್ಲಾಧಿಕಾರಿ ಚಂದ್ರಶೇಕರ್ ಸಿಂಗ್‌ರೊಂದಿಗೆ ಒಪನ್ ಸ್ಪೀಕರ್‌ನಲ್ಲಿ ಮಾತನಾಡಿದ್ದಾರೆ. “ಶಿಕ್ಷಕರು ಪ್ರತಿಭಟನೆ ನಡೆಸಲು ಅವಕಾಶ ನೀಡುತ್ತಿಲ್ಲ, ಅವರು ಪ್ರತಿದಿನ ಅನುಮತಿ ಪಡೆಯಬೇಕೆ? ಅವರ ಮೇಲೆ ಲಾಠಿಚಾರ್ಜ್ ಮಾಡಲು ಕಾರಣವೇನು? ಅವರ ಆಹಾರವನ್ನು ಏಕೆ ಚೆಲ್ಲಲಾಯಿತು? ಅವರು ಭಯಭೀತರಾಗಿದ್ದಾರೆ. ಪ್ರತಿಭಟನೆಗೆ ಜಾಗ ಸಿಗದೆ ಇಕೋ ಪಾರ್ಕ್‌ನಲ್ಲಿ ನನ್ನೊಂದಿಗಿದ್ದಾರೆ. ಅವರು ಪ್ರತಿಭಟಿಸುವ ಹಕ್ಕನ್ನು ಕೇಳುತ್ತಿದ್ದಾರೆ” ಎಂದು ಯಾದವ್ ಹೇಳಿದ್ದಾರೆ.
ಅವರ ಪತ್ರವನ್ನು ವಾಟ್ಸಾಪ್ ಮಾಡುತ್ತೇನೆ. ದಯವಿಟ್ಟು ಪ್ರತಿಭಟನೆಗೆ ಅವಕಾಶ ಕೊಡಿ ಎಂದು ತೇಜಸ್ವಿ ಒತ್ತಾಯಿಸಿದ್ದಾರೆ. ಅದಕ್ಕೆ ಉತ್ತರಿಸಿದ ಡಿಸಿ ಆಯ್ತು ನೋಡೋಣ ಎಂದಿದ್ದಾರೆ.
ಯಾವಾಗ ನೋಡುತ್ತೀರಿ ಎಂದು ಯಾದವ್ ಪ್ರಶ್ನಿಸಿದರೆ, ಕೋಪಗೊಂಡ ಡಿಸಿ, “ಯಾವಾಗ ಅಂದರೆ? ನನ್ನನ್ನೇ ಪ್ರಶ್ನಿಸುತ್ತಿದ್ದೀರಾ? ಎಂದು ತಿರುಗೇಟು ನೀಡಿದ್ದಾರೆ.
“ನಾನು ತೇಜಸ್ವಿ ಯಾದವ್ ಮಾತನಾಡುತ್ತಿದ್ದೇನೆ ಡಿಎಂ ಸಾಬ್” ಎಂದಿದ್ದಾರೆ. ಆಗ ಸ್ವಲ್ಪ ಸಮಯ ಬಿಟ್ಟು ಡಿಸಿ ಒಕೆ, ಒಕೆ ಸರ್ ಸರ್ ಎಂದು ತಗ್ಗಿದ ಧ್ವನಿಯಲ್ಲಿ ಉತ್ತರಿಸಿದ್ದಾರೆ. ಆಗ ಸುತ್ತುವರಿದಿದ್ದ ಶಿಕ್ಷಕರು ಜೋರಾಗಿ ಕೂಗಿ ಶಿಳ್ಳೆ ಹಾಕಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.
ಮುಂದುವರಿದ ತೇಜಸ್ವಿ ಯಾದವ್ “ವಾಟ್ಸಾಪ್ ನಲ್ಲಿ ಪತ್ರ ಕಳಿಸುತ್ತೇವೆ. ಆದಷ್ಟು ಬೇಗ ಪ್ರತಿಕ್ರಿಯಿಸಿ. ಇಲ್ಲದಿದ್ದರೆ ಇಡೀ ರಾತ್ರಿ ಇಲ್ಲೇ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿ ಕರೆ ಅಂತ್ಯಗೊಳಿಸಿದ್ದಾರೆ.
ಇಷ್ಟು ಘಟನೆಗಳ ವಿಡಿಯೋ ತೇಜಸ್ವಿ ಯಾದವ್‌ರನ್ನು ಹೊಗಳುತ್ತ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಾಜಿ ಪ್ರಧಾನಿ ದಿವಂಗತ ವಾಜಪೇಯಿಯವರ ಸಹೋದ್ಯೋಗಿಯಾಗಿದ್ದ ಸುಧೀಂದ್ರ ಕುಲಕರ್ಣಿಯವರು ಈ ವಿಡಿಯೋ ವನ್ನು ಷೇರ್ ಮಾಡಿ “ಕೊನೆಯವರೆಗೂ ನೋಡಿ. ಹೇಗೆ ತೇಜಸ್ವಿ ಯಾದವ್ ಭಾರತದ ಮಾಸ್ ಲೀಡರ್ ಆಗಿ ಅತಿಬೇಗ ಬೆಳಯುತ್ತಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.
"Hum Tejashvi Yadav Bol Rahe Hain, DM Saab…"
Must watch. And watch it till the end to know why @yadavtejashwi is fast emerging as one of the most promising mass leaders of India. https://t.co/QVhd4W1yTs
— Sudheendra Kulkarni (@SudheenKulkarni) January 21, 2021
ಪ್ರತಿಭಟನೆಗೆ ಅವಕಾಶ ಸಿಗದಿದ್ದಾಗ ಶಿಕ್ಷಕರು ಟಿಕೆಟ್ ಪಡೆದು ಪಾರ್ಕ್ ಒಂದರಲ್ಲಿ ತಂಗಿದ್ದರು. ನಾನು ಹೋಗಿ ಮುಖ್ಯ ಕಾರ್ಯದರ್ಶಿ ಡಿಜಿಪಿ ಮತ್ತು ಡಿಎಂ ಅವರೊಂದಿಗೆ ಮಾತನಾಡಿದ ನಂತರ ಅನುಮತಿ ಸಿಕ್ಕಿದ್ದು, ರಾತ್ರಿಯಲ್ಲಿ ಕಾಲ್ನಡಿಗೆಯಲ್ಲಿ ಮೆರವಣಿಗೆ ಮೂಲಕ ಮತ್ತೆ ಧರಣಾ ಸ್ಥಳ ತಲುಪಿದ್ದಾರೆ ಎಂದು ಯಾದವ್ ಟ್ವೀಟ್ ಮಾಡಿದ್ದಾರೆ. ರೈತರ ಪರವಾಗಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆಗೆ ಪೊಲೀಸರು ಅವಕಾಶ ನೀಡದಿದ್ದಾಗಲೂ ಸಹ “ರೈತರಿಗಾಗಿ ಗಲ್ಲಿಗೇರಲು ಸಿದ್ದ, ತಾಕತ್ತಿದ್ದರೆ ಬಂಧಿಸಿ” ಎಂದು ಗುಡುಗಿದ್ದರು.
वादानुसार आज प्रशासन ने गर्दनीबाग धरना स्थल पर प्रदर्शनकारियों को अनुमति नहीं दी जिसके चलते सभी अभ्यर्थी टिकट लेकर इको पार्क पहुंच गए। शाम को वहाँ पहुँचा और मुख्य सचिव, डीजीपी और डीएम से बात कर अनुमति मिलने के बाद रात्रि में पैदल मार्च कर उन्हें दोबारा धरना स्थल पर पहुँचा कर आया। https://t.co/zmrfyeySBm pic.twitter.com/hBhIfu2abr
— Tejashwi Yadav (@yadavtejashwi) January 20, 2021
ತೇಜಸ್ವಿ ಯಾದವ್ ಇತ್ತೀಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಭರವಸೆಯ ನಾಯಕರಾಗಿ ಹೊರಹೊಮ್ಮಿದ್ದಾರೆ. 31 ವರ್ಷದ ಅವರ ಮಹಾಘಟಬಂಧನ್ ಚುನಾವಣೆಯಲ್ಲಿ ಅಧಿಕಾರವಿಡಿಯಲು ಅಲ್ಪದರಲ್ಲೇ ವಿಫಲರಾದರೂ ಸಹ ತೇಜಸ್ವಿ ಯಾದವ್‌ರವರ ಆರ್‌ಜೆಡಿ ಪಕ್ಷ 76 ಸ್ಥಾನಗಳಲ್ಲಿ ಜಯಿಸುವ ಮೂಲಕ ಬಿಹಾರ ವಿಧಾನಸಭೇಯ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಇದನ್ನೂ ಓದಿ: ‘ರೈತರಿಗಾಗಿ ಗಲ್ಲಿಗೇರಲು ಸಿದ್ಧ- ತಾಕತ್ತಿದ್ದರೆ ಬಂಧಿಸಿ’: ನಿತೀಶ್‌ಗೆ ತೇಜಸ್ವಿ ಯಾದವ್ ಸವಾಲು


