Homeಕರೋನಾ ತಲ್ಲಣಖಾಸಗಿ ಲಸಿಕೆಗಳು: ಸರಕಾರಗಳು ದೊಡ್ಡ ಫಾರ್ಮಾ ಕಂಪನಿಗಳಿಗೆ ಹೇಗೆ ಸಬ್ಸಿಡಿ ನೀಡುತ್ತವೆ?

ಖಾಸಗಿ ಲಸಿಕೆಗಳು: ಸರಕಾರಗಳು ದೊಡ್ಡ ಫಾರ್ಮಾ ಕಂಪನಿಗಳಿಗೆ ಹೇಗೆ ಸಬ್ಸಿಡಿ ನೀಡುತ್ತವೆ?

1955ರಲ್ಲಿ ಜೋನಾಸ್ ಸಾಕ್ ಅವರು ಪೋಲಿಯೊಗೆ ಲಸಿಕೆಯನ್ನು ಅಭಿವೃದ್ಧಿಪಡಿಸಿದರು. ಆಗ ಒಬ್ಬ ಪತ್ರಕರ್ತ ಅವರಿಗೆ ಕೇಳಿದ್ದು; ಪೋಲಿಯೋ ಲಸಿಕೆಯ ಪೇಟೆಂಟ್ ಯಾರಿಗೆ ಸೇರಿರುತ್ತೆ? ಸಾಕ್ ಅವರ ಉತ್ತರ: "ಜನರು, ಅಂತ ಹೇಳುತ್ತೇನೆ. ಇದಕ್ಕೆ ಪೇಟೆಂಟ್ ಎಂಬುದಿಲ್ಲ. ಸೂರ್ಯಂಗೆ ಪೇಟೆಂಟ್ ಮಾಡಬಹುದೇ?"

- Advertisement -
- Advertisement -

ಹೊಸ ವರ್ಷ ಹೊಸ ಭರವಸೆಗಳನ್ನು, ನಿರೀಕ್ಷೆಗಳನ್ನು ತರುತ್ತದೆ. ಈ ಹೊಸ ವರ್ಷ ಇನ್ನೂ ದೊಡ್ಡದಾದ ಭರವಸೆಗಳನ್ನು ತರುವ ನಿರೀಕ್ಷೆ ಹೊಂದಿದೆ; ಅದು ವಿಶ್ವಾದ್ಯಂತ 19 ಲಕ್ಷ ಜನರನ್ನು ಬಲಿ ತೆಗೆದುಕೊಂಡ, ಭಾರತದಲ್ಲಿ ಒಂದೂವರೆ ಲಕ್ಷ ಜನರ ಪ್ರಾಣ ತೆಗೆದುಕೊಂಡ ಕೋವಿಡ್-19ಗೆ ಕೊನೆಗೂ ಒಂದು ಲಸಿಕೆ ಸಿಗುತ್ತೆ ಎಂಬ ನಿರೀಕ್ಷೆ. ಕೋವಿಡ್-19 ವೈರಾಣು ಸಮಯ ಕಳೆದಂತೆ ದುರ್ಬಲಗೊಂಡಿದೆ ಹಾಗೂ ಸಾವುಗಳ ಸಂಖ್ಯೆಯೂ ಇಳಿಮುಖವಾಗಿದೆ ಹಾಗೂ ಈ ವೈರಾಣು ನಿರ್ನಾಮವಾಗಲಿದೆ ಅಥವಾ ಜನರು ಈ ವೈರಾಣುವನ್ನು ಸುಲಭವಾಗಿ ಸೋಲಿಸಲು ರೋಗನಿರೋಧಕ ಶಕ್ತಿ ಪಡೆಯಲಿದ್ದಾರೆ ಎಂಬ ನಿರೀಕ್ಷೆಯೂ ಬಲವಾಗಿದೆ. ಹಾಗೂ ಈ ನಿರೀಕ್ಷೆ ಕಾರ್ಯರೂಪಕ್ಕೆ ಬಂದಿದೆ, ಅದು ನೀಡಿದ ಸಮಾಧಾನ ಅಲ್ಪಾವಧಿಯದ್ದಾಗಿದ್ದರೂ ಸಹ.

ಸದ್ಯಕ್ಕೆ, ಈ ಲಸಿಕೆಯ ರೇಸಿನಲ್ಲಿ ಪ್ರಮುಖವಾಗಿ ಫೈಝರ್ ಮತ್ತು ಆಸ್ಟ್ರಾಝೆನಿಕಾ ಎಂಬ ಕಂಪನಿಗಳಿವೆ. ಹಾಗೂ ಈ ಹೊಸ ವರ್ಷದ ಶುರುವಿನಲ್ಲಿ ಕೋವಿಡ್ ಲಸಿಕೆ ಲಭ್ಯವಾಗುವುದಾಗಿ ಘೋಷಿಸಿವೆ. ಫೈಝರ್ ಕಂಪನಿಯ ಲಸಿಕೆಯನ್ನು ಮೊತ್ತಮೊದಲಿಗೆ ಘೋಷಿಸಿದ್ದು ಇಂಗ್ಲೆಂಡ್ ದೇಶ. ಆರೋಗ್ಯ ಸೇವೆಯಲ್ಲಿ ನಿರತರಾಗಿ ಕೆಲಸ ಮಾಡುತ್ತಿರುವ ಕಾರ್ಮಿಕರು ಮತ್ತು ಹಿರಿಯ ನಾಗರಿಕರಿಗೆ ಲಸಿಕೆ ನೀಡುವ ಏರ್ಪಾಡು ಮಾಡಲಾಗುತ್ತಿದೆ.

ಇದರಲ್ಲಿ ಭಾರತವನ್ನು ಒಳಗೊಂಡಂತೆ ಇತರೆ ದೇಶಗಳು ಕೂಡ ಹಿಂದೆ ಬಿದ್ದಿಲ್ಲ ಹಾಗೂ ಲಸಿಕೆಯನ್ನು ಬಳಸಲು ತುರ್ತಾಗಿ ಅನುಮತಿ ನೀಡುವ ಘೋಷಣೆ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿವೆ. ಇದು ಆಗುತ್ತಿರುವುದು, ಈ ಲಸಿಕೆಗಳು ತಮ್ಮ ಪ್ರಯೋಗದ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್‌ಗಳನ್ನು ಪೂರ್ಣಗೊಳಿಸುವುದಕ್ಕೆ ಮುಂಚೆಯೇ. ಎಲ್ಲಾ ಡೇಟಾಗಳನ್ನು ಸಾರ್ವಜನಿಕರಿಗಾಗಿ ಬಹಿರಂಗಗೊಳಿಸುವುದಂತೂ ಆಗಿಯೇ ಇಲ್ಲ.

ಇದರೊಂದಿಗೆ ಈ ಸಮಯದಲ್ಲಿ ಲಸಿಕೆಗಳಲ್ಲಿಯೇ ಸ್ಪರ್ಧೆಗಳೂ ಕಾಣಿಸಿಕೊಂಡವು. ಫೈಝರ್ ಕಂಪನಿಯ ಮೊದಲ ಪತ್ರಿಕಾ ಹೇಳಿಕೆಯಲ್ಲಿ ಅದರ ಲಸಿಕೆಯ ಪರಿಣಾಮಕಾರಿತ್ವ 90% ಇದೆ ಎಂದಿದ್ದರು. ಅದಾದ ನಂತರ ಮಾಡರ್ನಾ ಕಂಪನಿಯ ಘೋಷಣೆ ಹೊರಬಂತು. ಆಗ ಫೈಝರ್ ಕಂಪನಿಯು ತನ್ನ ಲಸಿಕೆಯ ಪರಿಣಾಮಕಾರಿತ್ವ 95% ಎಂದು ಬದಲಿಸಿ ಹೇಳಿಕೆ ನೀಡಿದರು.

ನಮ್ಮ ದೇಶದಲ್ಲೂ, ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಮತ್ತು ಸೀರಮ್ ಇನ್‌ಸ್ಟ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್‌ಗಳು, ತನ್ನ ಪರೀಕ್ಷೆಗಳನ್ನು (ಕ್ಲಿನಿಕಲ್ ಟ್ರಯಲ್) ಸಂಪೂರ್ಣಗೊಳಿಸುವ ಮುಂಚೆಯೇ ಸರಕಾರ ಅನುಮತಿ ನೀಡಿರುವುದರಿಂದ, ತಮ್ಮ ತಮ್ಮ ಲಸಿಕೆಯ ಪರಿಣಾಮಕತ್ವದ ಬಗ್ಗೆ, ಕ್ಲಿನಿಕಲ್ ಪರೀಕ್ಷೆಗಳ ಬಗ್ಗೆ ಮತ್ತು ಯಾವುದು ಒಳ್ಳೆಯ ಲಸಿಕೆ ಎಂಬುದರ ಬಗ್ಗೆ ಜಿದ್ದಿಗೆ ಬಿದ್ದಿವೆ.

ಔಷಧಿ ಕಂಪನಿಗಳು ತಮ್ಮನ್ನು ಲಸಿಕೆ ಸಪ್ಲೈಯರ್ ಎಂದು ಘೋಷಿಸುವಂತೆ ಮಾಡುವ ಸಲುವಾಗಿ, ತಮ್ಮ ಲಸಿಕೆಗಳೇ ಹೆಚ್ಚು ಪರಿಣಾಮಕಾರಿ ಎಂದು ಬಿಂಬಿಸುವುದನ್ನು ಮುಂದುವರೆಸುತ್ತವೆ.

ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಬಹುತೇಕ ಕಂಪನಿಗಳು ಸರಕಾರಿ ಗುತ್ತಿಗೆಗಳನ್ನು ಪಡೆದುಕೊಂಡು, ತಾತ್ಕಾಲಿಕ ಏಕಸ್ವಾಮ್ಯವನ್ನಾದರೂ ಸಾಧಿಸಿ, ತಮ್ಮನ್ನು ತಾವು ಮೊದಲ ವಿತರಕರು ಎಂಬ ಸ್ಥಾನ ಪಡೆದುಕೊಳ್ಳುವ ಪ್ರಯತ್ನ ಮಾಡುತ್ತಿವೆ. ಇದರ ಪರಿಣಾಮವಾಗಿ, ಲಸಿಕೆಯನ್ನು ಬಳಸುವುದಕ್ಕಿಂತ ಮುಂಚೆಯೇ ಲಕ್ಷ ಮತ್ತು ಕೋಟಿ ಡಾಲರ್‌ಗಳನ್ನು ಪಡೆಯಬಹುದಾಗಿದೆ.

ಇದೇ ಸಮಯದಲ್ಲಿ ಟಿವಿ ನಿರೂಪಕರಿಂದ ಹಿಡಿದು, ಸರಕಾರದ ಎಲ್ಲಾ ವಕ್ತಾರರು ಈ ಔಷಧಿ ಕಂಪನಿಗಳನ್ನು ಹೊಗಳಿದ್ದೇ ಹೊಗಳಿದ್ದು ಹಾಗೂ ಔಷಧಿ ಕಂಪನಿಗಳೂ ಲಸಿಕೆಗೆ ಒಂದು ’ನ್ಯಾಯಯುತವಾದ’ ಬೆಲೆಯನ್ನು ನಿಗದಿಪಡಿಸಿ, ಈ ಎಲ್ಲಾ ಪ್ರಶಂಸೆಗಳನ್ನು ಸ್ವೀಕರಿಸಿದ್ದಾರೆ.

’ಲಸಿಕೆಯನ್ನು ಅಭಿವೃದ್ಧಿಪಡಿಸುವುದರ’ ಹಿಂದೆ ಏನೆಲ್ಲಾ ಆಗುತ್ತೆ?

ಈ ಲಸಿಕೆಯ ಗದ್ದಲದಲ್ಲಿ ಮತ್ತು ಕ್ರೆಡಿಟ್‌ಅನ್ನು ಪಡೆಯುವ ಸ್ಪರ್ಧೆಯಲ್ಲಿ, ಈ ಲಸಿಕೆಯನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಯಲ್ಲಿ ಏನೆಲ್ಲಾ ಆಗುತ್ತೆ ಎಂಬುದನ್ನು ತಿಳಿಯುವುದಕ್ಕೆ ಆಗುತ್ತಿಲ್ಲ. ಟಿವಿಯಲ್ಲಿ ತೋರಿಸಿದಂತೆ ಲಸಿಕೆಗಳನ್ನು ಕೆಲವೇ ಕೆಲವು ತಿಂಗಳ ಸಮಯದಲ್ಲಿ ಈ ಔಷಧ ಕಂಪನಿಗಳು ಮಾಡಿಲ್ಲ.

ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಯಲ್ಲಿ ಆಕ್ಯಾಡೆಮಿಕ್ ಅಧ್ಯಯನ, ಬಯೋಟೆಕ್ ಕಂಪನಿಗಳು, ಸಾರ್ವಜನಿಕ ಸಂಸ್ಥೆಗಳು, ಸಾರ್ವಜನಿಕರ ದುಡ್ಡು ಮತ್ತು ದೊಡ್ಡ ಔಷಧಿ ಕಂಪನಿಗಳ ಒಡನಾಟ ಅಡಗಿರುತ್ತೆ. ಇದು ಮುಂಚೆಯಿಂದಲೂ ಹೀಗೆ ಇದೆ ಮತ್ತು ಅಭಿವೃದ್ಧಿಯ ಅನುಕ್ರಮವೂ ಹೀಗೆಯೇ ಇರುತ್ತೆ. ಇದರಿಂದ ಸರಕಾರಕ್ಕೆ ಮತ್ತು ಅಕ್ಯಾಡೆಮಿಕ್ ವಿಜ್ಞಾನಿಗಳಿಗೆ ತಮ್ಮ ಕೊಡುಗೆಯ ಮೇಲೆ ಹೆಚ್ಚಿನ ಹಿಡಿತ ಸಿಗುತ್ತದೆ.

ಯಾವುದೇ ಲಸಿಕೆಯನ್ನು ತಯಾರಿಸಲು ಬೇಕಾದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಲ್ಲಿ ಸರಕಾರದ ಅನುದಾನಿತ ಸಂಶೋಧನಾ ಸಂಸ್ಥೆಗಳಲ್ಲಿ ಕೆಲಸ ಮಾಡುವ ಅನೇಕ ಸಂಶೋಧಕರ ಹಲವು ವರ್ಷಗಳ ಕಾಲ ಮಾಡಿದ ಅಧ್ಯಯನ, ಸಂಶೋಧನೆ, ರಕ್ತ-ಬೆವರು ಸೇರಿರುತ್ತದೆ. ಫೈಝರ್ ಮತ್ತು ಮಾಡರ್ನಾ ಕಂಪನಿಗಳ ಲಸಿಕೆಯ ಹಿಂದೆ ಇರುವ ಎಮ್‌ಆರ್‌ಎನ್‌ಎ ತಂತ್ರಜ್ಞಾನವು ಔಷಧಿ ಕಂಪನಿಗಳಿಂದ ಹುಟ್ಟಿಕೊಂಡಿಲ್ಲ, ಅದು ಅಭಿವೃದ್ಧಿ ಆಗಿದ್ದು, ಸರಕಾರದಿಂದ ಅನುದಾನಿತವಾದ ವಿಶ್ವವಿದ್ಯಾಲಯಗಳ ಮತ್ತು ಸಂಸ್ಥೆಗಳ ಸಂಶೋಧನಾ ಪ್ರಯೋಗಶಾಲೆಗಳಲ್ಲಿ.

ಸಾಕ್ ಮತ್ತು ಸಾಬಿನ್ ಇದೇ ರೀತಿಯಲ್ಲಿ ತಮ್ಮ ಪೋಲಿಯೊ ಲಸಿಕೆಯನ್ನು 1955ರಲ್ಲಿ ಅಭಿವೃದ್ಧಿಪಡಿಸಿದ್ದು. ಆ ಸಮತದಲ್ಲಿ ಫೈಝರ್ ಕಂಪನಿಯು ಸಾಬಿನ್ ಲಸಿಕೆಯ ಕೇವಲ ಒಂದು ಪ್ರಮುಖ ಉತ್ಪಾದಕ ಮತ್ತು ವಿತರಕರಾಗಿದ್ದರು. ಲಸಿಕೆಯನ್ನು ಅಭಿವೃದ್ಧಿಪಡಿಸುವ ಮತ್ತು ವಿತರಿಸುವ ದೊಡ್ಡ ಪ್ರಕ್ರಿಯೆಯಲ್ಲಿ ಒಂದು ಪುಟ್ಟ ಪಾತ್ರವನ್ನು ಮಾತ್ರ ವಹಿಸಿದ್ದರು ಮತ್ತು ಅಷ್ಟಕ್ಕೆ ಮಾತ್ರ ಅವರನ್ನು ಗುರುತಿಸಲಾಗಿತ್ತು.

ಸರಕಾರಗಳು ದೊಡ್ಡ ಔಷಧ ಕಂಪನಿಗಳಿಗೆ ಹೇಗೆ ಸಬ್ಸಿಡಿ ನೀಡುತ್ತವೆ?

ಈ ಸಾಂಕ್ರಾಮಿಕ ಪಿಡುಗಿನ ಮೇಲೆ ಹಿಡಿತ ಸಾಧಿಸಲು ಮತ್ತು ಆರ್ಥಿಕತೆಯ ಮೇಲೆ ಆಗುತ್ತಿರುವ ದುಷ್ಪರಿಣಾಮಗಳನ್ನು ತಡೆಯಲು, ಅನೇಕ ಸರಕಾರಗಳು ಬಯೋಟೆಕ್ ಮತ್ತು ಫಾರ್ಮ ಕಂಪನಿಗಳಿಗೆ ಧಾರಾಳವಾಗಿ ಧನಸಹಾಯ ಮಾಡಿದವು. ಅದು ಲಸಿಕೆ ಅಭಿವೃದ್ಧಿಪಡಿಸುವ ಪ್ರಕ್ರಿಯೆಯನ್ನು ವೇಗವಾಗಿಸಲು ಸಾಧ್ಯವಾಯಿತು.

ಇಂದಿನ ಪ್ರಮುಖ ಲಸಿಕೆಗಳ ಆಯ್ಕೆಗಳು

ಮಾಡರ್ನಾ ಲಸಿಕೆ – 2010ರಲ್ಲಿ ಸ್ಥಾಪಿಸಲಾದ ಪುಟ್ಟ ಅಮೆರಿಕನ್ ಬಯೋಟೆಕ್ ಕಂಪನಿ ಇದಾಗಿದೆ. ಆರ್‌ಎನ್‌ಎ ಆಧಾರಿತ ಲಸಿಕೆಯ ತಂತ್ರಜ್ಞಾನದ ಮೇಲೆ ಕೆಲಸ ಮಾಡಲು ಅಮೆರಿಕದ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಒಬ್ಬ ಬಂಡವಾಳ ಹೂಡಿಕೆದಾರರಿಂದ ಬೆಂಬಲ ಪಡೆದುಕೊಂಡ ಮೇಲೆ ಸ್ಥಾಪಿಸಲಾಗಿತ್ತು. ಆದರೆ, ಮಾಡರ್ನಾದ ಮೂಲ ಕಾರ್ಯವು, ಅವಲಂಬಿಸಿ ನಿಂತಿದ್ದು ಅದಕ್ಕಿಂತ ಮುಂಚೆ ಪೆನ್ಸಿಲ್ವೇನಿಯ ವಿಶ್ವವಿದ್ಯಾಲಯಗಳ ವಿಜ್ಞಾನಿಗಳು ಮಾಡಿದ ಸಂಶೋಧನೆಗಳ ಮೇಲೆಯೇ. ಹಾಗೂ ಆ ವಿಶ್ವವಿದ್ಯಾಲಯಗಳಿಗೆ ತಮ್ಮ ಅಧ್ಯಯನ ಮತ್ತು ಸಂಶೋಧನೆಗಳಿಗೆ ಅನುದಾನ ಸಿಗುವುದು ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್‌ನಿಂದ.

ಮಾಡರ್ನಾಗೆ ಕಳೆದ ವರ್ಷ ಎರಡೂವರೆ ಶತಕೋಟಿ ಡಾಲರ್‌ಗಳ ಅನುದಾನ ನೀಡಿದ್ದು, ಅಮೆರಿಕದ ಸರಕಾರದ ಆಪರೇಷನ್ ವಾರ್ಪ್ ಸ್ಪೀಡ್ ಪ್ರೋಗ್ರಾಮ್ ಎಂಬ ಯೋಜನೆಯಿಂದ ಹಾಗೂ ಈ ಮುಂಚೆಯ ಕೊರೊನಾ ವೈರಸ್ ಲಸಿಕೆಗಳಿಗಾಗಿ ಅಭಿವೃದ್ಧಿಪಡಿಸಿದ ಎನ್.ಐ.ಎಚ್‌ನ (ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್, ಒಂದು ಸರಕಾರಿ ಸಂಸ್ಥೆ) ತಂತ್ರಜ್ಞಾನವನ್ನೂ ಅದು ಪಡೆಕೊಂಡಿತ್ತು. ಅದರೊಂದಿಗೆ ಹತ್ತಾರು ಸಾವಿರ ರೋಗಿಗಳ ಕ್ಲಿನಿಕಲ್ ಪರೀಕ್ಷೆಯ ಜವಾಬ್ದಾರಿ ವಹಿಸಿ, ವ್ಯಾಪಕವಾದ ವ್ಯವಸ್ಥಾಪನಾ ಬೆಂಬಲವನ್ನೂ ಎನ್.ಐ.ಎಚ್ ನೀಡಿದೆ. ಈಗ ಮಾಡರ್ನಾ ತಮ್ಮ ಲಸಿಕೆಗೆ ಪ್ರತಿ ಡೋಸ್‌ಗೆ 37 ಡಾಲರ್‌ನಂತೆ ಬೆಲೆ ನಿಗದಿಪಡಿಸಿ ಲಾಭ ಮಾಡುವ ಯೋಜನೆಯಲ್ಲಿದೆ. ವಿಶ್ವಸಂಸ್ಥೆಯ ಕೋವ್ಯಾಕ್ಸ್ ಕಾರ್ಯಕ್ರಮವು ಬಡದೇಶಗಳಿಗೆ ಕೊರೊನಾ ವೈರಸ್ ಲಸಿಕೆಗಳನ್ನು ತಲುಪಿಸುವುದಕ್ಕೆ ಸಬ್ಸಿಡಿ ನೀಡಲಿದೆ ಆದರೆ ಮಾಡರ್ನಾ ನಿರ್ಧರಿಸುವ ಬೆಲೆಯ ಆಧಾರದ ಮೇಲೆ, ಸಬ್ಸಿಡಿ ನೀಡಿದ ನಂತರವೂ ಬೆಲೆ ತುಂಬಾ ತುಟ್ಟಿಯಾಗುವ ಸಾಧ್ಯತೆ ಇದೆ.

ಫೈಝರ್ – ಬಯೋನೆಟ್ ಕೋವಿಡ್19 ಲಸಿಕೆ: – ಫೈಝರ್ ತಾನು ಸರಕಾರಿ ಹಣದಿಂದ ದೂರವಿರುವುದಾಗಿ ಹೇಳಿಕೊಳ್ಳುತ್ತದೆ ಆದರೆ ಅದು ಜರ್ಮನ್ ಸರಕಾರದಿಂದ 44 ಕೋಟಿ ಡಾಲರ್‌ಗಿಂತಲೂ ಹೆಚ್ಚು ಅನುದಾನ ಪಡೆದ ಬಯೋಎನ್‌ಟೆಕ್ ಎಂಬ ಒಂದು ಕಂಪನಿಯ ಸಹಭಾಗದೊಂದಿಗೆ ಈ ಲಸಿಕೆಯನ್ನು ಉತ್ಪಾದಿಸಿ ವಿತರಿಸುತ್ತಿದೆ. ಫೈಝರ್‌ನ ಲಸಿಕೆಗೆ ಬಯೋಎನ್‌ಟೆಕ್‌ನ ತಂತ್ರಜ್ಞಾನ ಆಧಾರವಾಗಿದೆ. ಇಲ್ಲಿ ಫೈಝರ್‌ನ ಪಾತ್ರ ಇರುವುದು ಅಭಿವೃದ್ಧಿ ಮತ್ತು ಉತ್ಪಾದನೆಯ ಗತಿಯನ್ನು ತ್ವರಿತಗೊಳಿಸಿರುವುದರಲ್ಲಿ. ಫೈಝರ್ ಈ ಮುಂಚೆ ಎಮ್‌ಆರ್‌ಎನ್‌ಎ ಲಸಿಕೆಯ ಉತ್ಪಾದನೆ ಮಾಡಿಲ್ಲ ಆದರೆ ತನ್ನ ಬೃಹತ್ ಬಂಡವಾಳ ಮತ್ತು ಲಾಜಿಸ್ಟಿಕ್ ನೆಟ್‌ವರ್ಕ್‌ಅನ್ನು ಮತ್ತು ಕಾರ್ಖಾನೆಗಳನ್ನು ಬಳಸಿ ಉತ್ಪಾದಿಸುವಂತೆ ಮಾಡುತ್ತದೆ. ಅಂತಿಮ ಕ್ಲಿನಿಕಲ್ ಪ್ರಯೋಗಗಳು ಶುರುವಾಗುವುದಕ್ಕಿಂತ ಮುಂಚೆಯೇ ಅಮೆರಿಕದ ಸರಕಾರವು 2 ಶತಕೋಟಿ ಡಾಲರ್‌ಗಳ ಆರ್ಡರ್‌ಅನ್ನು ನೀಡಿದೆ ಹಾಗಾಗಿ ಫೈಝರ್ ಎದುರಿಸಬಹುದಾದ ಗಣನೀಯ ಪ್ರಮಾಣದ ಆರ್ಥಿಕ ಬಿಕ್ಕಟ್ಟನ್ನು ತೆಗೆದುಹಾಕಿದೆ. ಈ ಲಸಿಕೆಯ ಒಂದು ಡೋಸ್‌ನ ಉತ್ಪಾದನಾ ವೆಚ್ಚ 15 ಡಾಲರ್ ಆಗಿರುವ ಸಮಯದಲ್ಲಿ, ಫೈಝರ್ ಕಂಪನಿಯು ಸರಕಾರಕ್ಕೆ 39 ಡಾಲರ್ ಬೆಲೆಗೆ ಮಾರಾಟ ಮಾಡಲಿದೆ; ಇದರಿಂದ ವಿಶ್ವಾದ್ಯಂತ 2021ರಲ್ಲಿ 14 ಶತಕೋಟಿ ಡಾಲರ್‌ಗಳ ಲಾಭ ಪಡೆಯುವ ಸ್ಥಿತಿಯಲ್ಲಿದೆ.

ಆಸ್ಟ್ರಾಜೆನೆಕಾ-ಆಕ್ಸ್‌ಫರ್ಡ್ ಲಸಿಕೆ: ಇದನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ಸಹಯೋಗದಲ್ಲಿ ಆಸ್ಟ್ರಾಜೆನೆಕಾವು ಅಭಿವೃದ್ಧಿಪಡಿಸಿ ವಿತರಿಸುತ್ತಿದೆ. ಇದು ಒಳ್ಳೆಯ ಕೆಲಸ ಆಗುವುದಾದಲ್ಲಿ ಅದನ್ನು ಪ್ರಶಂಸಿಸಬೇಕು. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಆಸ್ಟ್ರಾಜೆನೆಕಾದೊಂದಿಗೆ ಒಂದು ಒಪ್ಪಂದ ಮಾಡಿಕೊಂಡಿರುವಂತೆ, ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ನ್ಯಾಯಯುತ ಬೆಲೆಯಲ್ಲಿ ನೀಡುವ ಬದ್ಧತೆಯನ್ನು ಹೊಂದಿದೆ.

ಈ ಆಸ್ಟ್ರಾಜೆನೆಕಾ ಲಸಿಕೆಯನ್ನು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಕೋವಿಶೀಲ್ಡ್ ಹೆಸರಿನಲ್ಲಿ ಮಾರಾಟ ಮಾಡುತ್ತಿದೆ. ಭಾರತದಲ್ಲಿ ಲಸಿಕೆಯ ಪ್ರತಿ ಡೋಸ್‌ನ ಬೆಲೆ ಖಾಸಗಿ ಮಾರುಕಟ್ಟೆಯಲ್ಲಿ 1,000 ರೂಪಾಯಿ ಮತ್ತು ಸರಕಾರಕ್ಕಾಗಿ 200 ರೂಪಾಯಿಗಳಿಗೆ ಮಾರುವುದಾಗಿ ಎಸ್‌ಐಐನ ಮುಖ್ಯಸ್ಥ ಆದಾರ್ ಪೂನಾವಾಲ ಹೇಳಿದ್ದಾರೆ. ಮುಂದಿನ ಆರರಿಂದ ಎಂಟು ತಿಂಗಳಲ್ಲಿ 30 ಕೋಟಿ ಜನರಿಗೆ ಲಸಿಕೆ ನೀಡುವ ಗುರಿಯನ್ನಿಟ್ಟುಕೊಂಡಿರುವ ಸರ್ಕಾರ ಈ ಸಂಸ್ಥೆಯಿಂದ 6 ಕೋಟಿ ಡೋಸ್‌ಗಳನ್ನು ಖರೀದಿ ಮಾಡುವ ಯೋಜನೆಯಿನ್ನಿಟ್ಟುಕೊಂಡಿದೆ.

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದೊಂದಿಗೆ ಆಸ್ಟ್ರಾಜೆನೆಕಾ ಮಾಡಿಕೊಂಡ ಒಪ್ಪಂದವು 2021ರ ಜುಲೈ ತನಕ ಮಾತ್ರ ಇದೆ ಹಾಗೂ 20% ಲಾಭದ ಮಾರ್ಜಿನ್ ಹೊಂದಿದೆ.

ಫಾರ್ಮಾ ಕಂಪನಿಗಳು ತಾವೆಷ್ಟು ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ ಎಂದು ಬಿಂಬಿಸಿಕೊಂಡಿದ್ದರೂ, ಈ ಕೊರನಾ ಬಿಕ್ಕಟ್ಟಿನಿಂದ ಒಳ್ಳೆಯ ಲಾಭ ಮಾಡಿಕೊಳ್ಳಲಿದ್ದಾರೆ. ಪ್ರಶ್ನೆ ಏನೆಂದರೆ, ಈ ’ಲಸಿಕೆಯ ನಿಸ್ವಾರ್ಥತೆ’ಯ ಪ್ರಚಾರದಿಂದ ನಾವು ಕುರುಡಾಗಿದ್ದೇವೆಯೇ?

(ಕನ್ನಡಕ್ಕೆ): ರಾಜಶೇಖರ ಅಕ್ಕಿ


ಇದನ್ನೂ ಓದಿ: ಕೋವಿಡ್ ಲಸಿಕೆಯಷ್ಟೇ ಸಾಕೆ? ಭವಿಷ್ಯದ ಸಾಂಕ್ರಾಮಿಕಗಳನ್ನು ಎದುರಿಸಲು ನಾವು ಸಜ್ಜಾಗಿದ್ದೇವೆಯೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಭಾಷಣ: ಮೋದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆದ 2,200ಕ್ಕೂ...

0
ರಾಜಸ್ಥಾನದ ಬನ್ಸ್ವಾರದಲ್ಲಿ ಮುಸ್ಲಿಮರ ವಿರುದ್ಧ ದ್ವೇಷದ ಹೇಳಿಕೆಗಳನ್ನು ನೀಡಿದ ಬಿಜೆಪಿಯ ಸ್ಟಾರ್ ಪ್ರಚಾರಕ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ 2,200ಕ್ಕೂ ಹೆಚ್ಚು ನಾಗರಿಕರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಆದರೆ...