ಬಂಡವಾಳಶಾಹಿ ವ್ಯವಸ್ಥೆ ನಮಗೆ ಆಯ್ಕೆಯ ಭ್ರಮೆಗಳನ್ನು ಸೃಷ್ಟಿಸುತ್ತದೆ, ಆದುದರಿಂದ ನಾವು ನಮಗೆ ಆಯ್ಕೆಯ ಸ್ವಾತಂತ್ರ್ಯವಿದೆ ಎಂದು ಭಾವಿಸುತ್ತೇವೆ.
ಒಂದು ವರ್ಷದ ಸಾಂಕ್ರಾಮಿಕದ ನಂತರ ಜಗತ್ತಿನ ವಿವಿಧ ಭಾಗಗಳಲ್ಲಿನ ವಿವಿಧ ಕಂಪನಿಗಳು ವಿವಿಧ ದರಪಟ್ಟಿ ಹೊಂದಿದ ಲಸಿಕೆಗಳನ್ನು ಬಿಡುಗಡೆ ಮಾಡಿವೆ. ನವೆಂವರ್ ಹೊತ್ತಿಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಕ್ಲಿನಿಕಲ್ ಟ್ರಯಲ್ ಅನುಮತಿ ಪಡೆದ ಸುಮಾರು 47 ಲಸಿಕೆಗಳ ಅಭಿವೃದ್ಧಿ ನಡೆಯುತ್ತ ಬಂದಿದೆ.
ಒಟ್ಟಾರೆಯಾಗಿ ಇದು ಶುಭ ಸಮಾಚಾರವೇ ಆದರೂ ಯಾರಿಗೆ ಲಭ್ಯವಾಗಲಿದೆ, ಯಾವಾಗ ಮತ್ತು ಏನು ಲಭ್ಯವಾಗಲಿದೆ ಎಂಬ ಕಳವಳವಂತೂ ಇದೆ.
ಭಾರತ ಮತ್ತು ವಿದೇಶಗಳಲ್ಲಿ ಸುದ್ದಿಯಲ್ಲಿರುವ ಮತ್ತು ಸುದ್ದಿಯಲ್ಲಿಲ್ಲದ ಎಲ್ಲ ಲಸಿಕೆಗಳ ಮೇಲೆ ಒಮ್ಮೆ ಕಣ್ಣಾಡಿಸೋಣ.
ಲಸಿಕೆಗಳ ಸುದ್ದಿಯಲ್ಲಿ ಫೈಜರ್-ಬಯೋನೆಟ್ ಲಸಿಕೆ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ-ಅಸ್ಟ್ರಾಜೆನಿಕಾ ಲಸಿಕೆ ಮತ್ತು ಮಾಡೆರ್ನಾ ಲಸಿಕೆಗಳು ಪ್ರಧಾನವಾಗಿ ಗೋಚರಿಸುತ್ತಿವೆ. ಭಾರತದಲ್ಲಿ ಭಾರತ್ ಬಯೋಟೆಕ್‌ನ-ಕೊವ್ಯಾಕ್ಸಿನ್ ಮತ್ತು ಭಾರತೀಯ ಸೀರಂ ಸಂಸ್ಥೆಯ (SII) ಕೊವಿಶೀಲ್ಡ್ ಹೆಚ್ಚು ಪ್ರಚಾರದಲ್ಲಿವೆ. ಕೋವಿಶೀಲ್ಡ್ ಆಕ್ಸ್‌ಫರ್ಡ್-ಅಸ್ಟ್ರಾಜೆನಿಕಾ ಲಸಿಕೆಯ ಭಾರತೀಯ ಆವೃತ್ತಿಯಾಗಿದ್ದು, ಅಧಿರ್ ಪೂನಾವಾಲಾರ ಸೀರಂ ಸಂಸ್ಥೆ ಇದನ್ನು ಉತ್ಪಾದಿಸುತ್ತಿದೆ.

ಈ ಎಲ್ಲ ಲಸಿಕೆಗಳ ಪೈಕಿ ಫೈಜರ್, ಮಾಡೆರ್ನಾ ಮತ್ತು ಆಕ್ಸ್‌ಫರ್ಡ್-ಅಸ್ಟ್ರಾಜೆನಿಕಾ ಲಸಿಕೆಗಳಿಗೆ ಮಾತ್ರ ಪರಿಣಾಮಕಾರಿತ್ವ ಮತ್ತು ಸುರಕ್ಷತೆಯ ಮಾನದಂಡ ಕ್ಲಿನಿಕಲ್ ಟ್ರಯಲ್‌ಗಳಲ್ಲಿ ಸಾಬೀತಾಗಿವೆ. ಅಪೂರ್ಣ ಕ್ಲಿನಿಕಲ್ ಟ್ರಯಲ್ಸ್ ಮತ್ತು ಪರಿಣಾಮಕಾರಿತ್ವದ ದತ್ತಾಂಶದ ಕೊರತೆಯ ಕಾರಣದಿಂದಾಗಿ ಕೊವ್ಯಾಕ್ಸಿನ್ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ.
ಈ ಲೇಖನ ಬರೆಯುವ ಸಂದರ್ಭದಲ್ಲಿ, ಮೇಲೆ ಉಲ್ಲೇಖಿಸಿದ ಲಸಿಕೆಗಳು ಆಯಾ ದೇಶಗಳಲ್ಲಿ ಬಳಕೆಗೆ ಅನುಮತಿ ಪಡೆದಿವೆ. ಬ್ರಿಟನ್ ಮೊದಲಿಗೆ ಲಸಿಕಾ ಅಭಿಯಾನ ಆರಂಭಿಸಿದ್ದು, ಭಾರತ ಉತ್ತಮ ಸಾಗಣೆ ಮತ್ತು ವಿತರಣೆ ಮಾದರಿ ಕಂಡುಕೊಳ್ಳಲು ಇದೀಗ ಅಣಕು ಪ್ರದರ್ಶನಗಳನ್ನು ಮುಗಿಸಿದೆ.
ಇತರ ಹಲವು ಲಸಿಕೆ ಮಾದರಿಗಳು ಭಾರತ ಮತ್ತು ವಿದೇಶಗಳಲ್ಲಿ ಅಭಿವೃದ್ಧಿ ಹಂತದಲ್ಲಿವೆ.
1. ZyCOV-D:: ಅಹಮದಾಬಾದ್ ಮೂಲದ ಫಾರ್ಮಾ ಕಂಪನಿ ಝೈಡಸ್ ಕ್ಯಾಡಿಲಾ ಜೈವಿಕ ತಂತ್ರಜ್ಞಾನ ಇಲಾಖೆಯ ಸಹಯೋಗದಲ್ಲಿ ಲಸಿಕೆ ಅಭಿವೃದ್ಧಿ ಮಾಡುತ್ತಿದ್ದು, ಈಗ ಮೂರನೆ ಹಂತದ ಕ್ಲಿನಿಕಲ್ ಟ್ರಯಲ್ಸ್ ನಡೆದಿವೆ.
2. ಸ್ಪುಟ್ನಿಕ್-5: ರಷ್ಯಾದ ಗಮಾಲೆಯಾ ಸಂಸ್ಥೆ ಅಭಿವೃದ್ಧಿಪಡಿಸಿರುವ ಈ ಲಸಿಕೆಯನ್ನು ಭಾರತದಲ್ಲಿ ಡಾ. ರೆಡ್ಡಿಸ್ ಲ್ಯಾಬ್ಸ್ ಸಹಯೋಗದಲ್ಲಿ ಉತ್ಪಾದಿಸಲಾಗುತ್ತಿದ್ದು, ಈಗ 2 ಮತ್ತು 3ನೆ ಹಂತದ ಕ್ಲಿನಿಕಲ್ ಟ್ರಯಲ್ಸ್ ನಡೆದಿವೆ. ರಷ್ಯಾ ತನ್ನ ದೇಶದಲ್ಲಿ ಲಸಿಕಾ ಕಾರ್ಯಕ್ರಮ ಆರಂಭಿಸಿದೆ.
3. NVX-Cov 2373: ಅಮೆರಿಕದ ನೋವಾವ್ಯಾಕ್ಸ್ ಕಂಪನಿಯ ಸಹಕಾರದಲ್ಲಿ ಭಾರತದ ಸೀರಂ ಸಂಸ್ಥೆ ಇದನ್ನು ಅಭಿವೃದ್ಧಿಪಡಿಸುತ್ತಿದೆ. ಮೂರನೆ ಹಂತದ ಟ್ರಯಲ್‌ಗೆ ಸಿದ್ಧತೆ ನಡೆದಿವೆ.
4. ಬಯೋಲಾಜಿಕಲ್ ಇ ಲಿಮಿಟೆಡ್ ಲಸಿಕೆ: ಅಮೆರಿಕದ ಹೂಸ್ಟನ್‌ನ ಬೇಯಲಾರ್ ಕಾಲೇಜ್ ಆಫ್ ಮೆಡಿಸಿನ್ ಮತ್ತು ಅಮೆರಿಕದ ಡೈನಾವ್ಯಾಕ್ಸ್ ಟೆಕ್ನಾಲಜೀಸ್ ಕಾರ್ಪೊರೇಶನ್ ಇದನ್ನು ಅಭಿವೃದ್ಧಿಪಡಿಸುತ್ತಿವೆ. ಕ್ಲಿನಿಕಲ್ ಟ್ರಯಲ್ಸ್ ನಡೆಯುತ್ತಿದ್ದು, ಏಪ್ರಿಲ್‌ನಲ್ಲಿ ಸಂಪೂರ್ಣ ಸಿದ್ಧವಾಗಬಹುದು.
5. HGCO19: ಇದು ಎಂ-ಆರ್‌ಎನ್‌ಎ ಮಾದರಿಯ ಲಸಿಕೆಯಾಗಿದ್ದು, ಅಮೆರಿಕದ ಒಂದು ಬಯೋಟೆಕ್ ಕಂಪನಿಯ ಸಹಯೋಗದಲ್ಲಿ ಪೂನಾದ ಜೆನ್ನೋವಾ ಬಯೋಫಾರ್‍ಮಾಟಿಕಲ್ಸ್ ಕಂಪನಿ ಇದನ್ನು ಅಭಿವೃದ್ಧಿಗೊಳಿಸುತ್ತಿದೆ. ಇದಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅನುದಾನದ ಬೆಂಬಲ ಇದೆ. ಈ ತಿಂಗಳು ಕ್ಲಿನಿಕಲ್ ಟ್ರಯಲ್‌ಗಳು ಪ್ರಾರಂಭವಾಗಲಿವೆ.
6. ಭಾರತ್ ಬಯೋಟೆಕ್‌ನ 2ನೆ ಲಸಿಕೆ: ಭಾರತ್ ಬಯೋಟೆಕ್ ಇಂಟರ್‌ನ್ಯಾಶನಲ್ ಲಿಮಿಟೆಡ್, ಅಮೆರಿಕದ ಥಾಮಸ್ ಜೆಫರ್‌ಸನ್ ವಿವಿಯ ಸಹಯೋಗದಲ್ಲಿ ಇನ್ನೊಂದು ಲಸಿಕೆ ಅಬಿವೃದ್ಧಿಪಡಿಸುತ್ತಿದ್ದು, ಅದು ಕ್ಲಿನಿಕಲ್ ಟ್ರಯಲ್‌ನ ಪೂರ್ವ ಹಂತದಲ್ಲಿದೆ.
7. ಅರಬಿಂದೋ ಫಾರ್ಮಾ ಲಸಿಕೆ: ಅಮೆರಿಕದ ಪ್ರೊಫೆಕ್ಟಸ್ ಬಯೋ ಸೈನ್ಸ್‌ಸ್ ಕಂಪನಿ ಸಹಯೋಗದಲ್ಲಿ ತಯಾರಾಗುತ್ತಿದ್ದು ಕ್ಲಿನಿಕಲ್ ಟ್ರಯಲ್ ಪೂರ್ವ ಹಂತದಲ್ಲಿದೆ.
8. ಸಿನೊವ್ಯಾಕ್ ಮತ್ತು ಸಿನೊಫಾರ್ಮ್: ಚೀನಾದ ಬೀಜಿಂಗ್ ಇನ್‌ಸ್ಟಿಟ್ಯೂಟ್ ಮತ್ತು ಚೀನಾದ ಕಂಪನಿಯೊಂದು ಅಭಿವೃದ್ಧಿಪಡಿಸಿರುವ ಈ ಎರಡು ಲಸಿಕೆಗಳು ಶೇ. 91ರಷ್ಟು ಪರಿಣಾಮಕಾರಿತ್ವ ತೋರಿಸಿದ್ದು, ಮುಂದಿನ ಕ್ಲಿನಿಕಲ್ ಟ್ರಯಲ್‌ಗಳ ಫಲಿತಾಂಶಕ್ಕೆ ಕಾಯಲಾಗುತ್ತಿದೆ.
9. ಜೆ&ಜೆ: ಅಮೆರಿಕದ ಜಾನ್ಸನ್ & ಜಾನ್ಸನ್ ಕಂಪನಿಯು ತಯಾರಿಸಿರುವ ಈ ಲಸಿಕೆ, ಅಮೆರಿಕದಲ್ಲಿ ಬಳಕೆಯ ಅನುಮತಿಗೆ ಕಾಯಲಾಗುತ್ತಿದೆ.
10. ಪ್ರಿವೆಂಟ್-19: ನೋವಾವ್ಯಾಕ್ಸ್ ಕಂಪನಿ ಅಭಿವೃದ್ಧಿಪಡಿಸಿದ್ದು, ಅಮೆರಿಕ ಸರ್ಕಾರ ಸಾಕಷ್ಟು ಧನಸಹಾಯ ನೀಡಿದೆ. ಅಮೆರಿಕ, ಆಸ್ಟ್ರೇಲಿಯಾ ಮತ್ತು ದ.ಆಫ್ರಿಕಾದಲ್ಲಿ ಟ್ರಯಲ್ಸ್ ನಡೆದಿವೆ. 2021ರ ಮಧ್ಯಭಾಗದಲ್ಲಿ ಫಲಿತಾಂಶ ಲಭ್ಯವಾಗಬಹುದು.
11. ಸೊಬೆರಾನಾ-01 ಮತ್ತು ಸೊಬೆರಾನಾ-02: ಕ್ಯೂಬಾದ ಈ ಲಸಿಕೆಗಳ ಕ್ಲಿನಿಕಲ್ ಟ್ರಯಲ್ ಈಗ ಹವಾನಾ ಮತ್ತು ಇರಾನ್‌ಗಳಲ್ಲಿ ನಡೆದಿದೆ.

ಭವಿಷ್ಯದ ಸಾಂಕ್ರಾಮಿಕಗಳಿಗೆ ನಾವು ಸಜ್ಜುಗೊಂಡಿದ್ದೇವೆಯೇ?
ಸಾಂಕ್ರಾಮಿಕ ರೋಗಗಳು ಪ್ರತ್ಯೇಕವಾಗಿಯೇನೂ (ಐಸೋಲೇಷನ್) ಸಂಭವಿಸುವುದಿಲ್ಲ. ಪ್ರಕೃತಿ ಮತ್ತು ಮನುಷ್ಯರ ನಡುವಿನ ಅಸಮತೋಲನದಿಂದ ಅವು ಸಂಭವಿಸುತ್ತವೆ. ಹೀಗಾಗಿ ಈ ಪ್ರಶ್ನೆಗೆ ಉತ್ತರ ಪಡೆಯಬೇಕೆಂದರೆ, ನಿಸರ್ಗ, ಪರಿಸರ ವಿಜ್ಞಾನ, ವನ್ಯಜೀವಿ ಮತ್ತು ಮಾನವನ ಚಟುವಟಿಕೆಗಳ ನಡುವಿನ ಅಂತರ್-ಸಂಬಂಧ, ಅಂತರ್-ಸಂಪರ್ಕಗಳ ಬಗ್ಗೆ ನಾವೆಷ್ಟು ಅರಿತಿದ್ದೇವೆ ಎಂಬುದನ್ನು ಪರಿಶೀಲಿಸಬೇಕು.
1918ರಲ್ಲಿ ಇನ್‌ಫ್ಲುಯೆಂಜಾದ ನಂತರ ಕೊವಿಡ್-19 ಆರನೇ ಸಾಂಕ್ರಾಮಿಕವಾಗಿದೆ. ಈ ಎಲ್ಲ ಸಾಂಕ್ರಾಮಿಕಗಳಿಗೂ ಮಾನವ ಚಟುವಟಿಕೆಗಳೇ ಕಾರಣವಾಗಿವೆ.
ಪ್ರತಿವರ್ಷ ಹೊಸ ರೋಗಗಳು ಕಾಣಿಸಿಕೊಳ್ಳುತ್ತಲೇ ಇವೆ, ಅವುಗಳ ಪೈಕಿ ಯಾವುದಾದರೂ ಸಾಂಕ್ರಾಮಿಕವಾಗಬಲ್ಲ ಸಾಮರ್ಥ್ಯ ಹೊಂದಿವೆ. ಈಗ ಉದ್ಭವವಾಗುತ್ತಿರುವ ರೋಗಗಳಲ್ಲಿ ಶೇ.70ರಷ್ಟು ಪ್ರಾಣಿಜನ್ಯ (zoonotic) ಆಗಿವೆ, ಅಂದರೆ ಅವು ಮನುಷ್ಯರಲ್ಲದ ಪ್ರಾಣಿಗಳಿಂದ ಮನುಷ್ಯರಿಗೆ ಹಬ್ಬಬಲ್ಲ ರೋಗಗಳಾಗಿವೆ. ಪ್ರಾಣಿಗಳಲ್ಲಿ ಇನ್ನೂ ಆವಿಷ್ಕಾರಗೊಳ್ಳದ ಸುಮಾರು 5,80,000 ವೈರಸ್‌ಗಳಿದ್ದು, ಅವು ಮನುಷ್ಯರಿಗೆ ಸೋಂಕು ತಗುಲಿಸುವ ಸಾಮರ್ಥ್ಯ ಹೊಂದಿವೆ.
ಪ್ರಸ್ತುತ ಮಾನವ ಅಭಿವೃದ್ಧಿ ಮಾದರಿಯು ಅರಣ್ಯನಾಶ, ವನ್ಯಜೀವಿ ಮತ್ತು ಪರಿಸರ ಸಮತೋಲನಕ್ಕೆ ಧಕ್ಕೆ ಮಾಡುವಂತೆ ರೂಪುಗೊಂಡಿದೆ. ಯಾವಾಗ ಅರಣ್ಯ ಇಲ್ಲವಾಗುತ್ತವೋ ಆಗ ವನ್ಯಜೀವಿ ಸಮೂಹ ಮಾನವ ಸಮೂಹದೊಂದಿಗೆ ಹತ್ತಿರದ ಸಂಪರ್ಕಕ್ಕೆ ಬರುವುದರಿಂದ, ಪ್ರಾಣಿಗಳಿಂದ ಸೋಂಕು ತಗುಲುವ ಸಾಧ್ಯತೆ ಹೆಚ್ಚುತ್ತದೆ ಮತ್ತು ಮನುಷ್ಯರಲ್ಲಿ ಅವುಗಳನ್ನು ಎದುರಿಸುವ ರೋಗ ನಿರೋಧಕತೆ ಇಲ್ಲ.
ವನ್ಯಜೀವಿ ಸಮೂಹವನ್ನು ನಾಶ ಮಾಡುವ ಮಾನವ ಚಟುವಟಿಕೆಯೇ ಹವಾಮಾನ ಬದಲಾವಣೆಗೆ ಕಾರಣವಾಗುತ್ತದೆ. ಹವಾಮಾನ ಬದಲಾವಣೆಯಿಂದ ತಾಪಮಾನದಲ್ಲಿ ಹೆಚ್ಚಳವುಂಟಾಗಿ, ವನ್ಯಜೀವಿಗಳು ತಮ್ಮ ನೈಸರ್ಗಿಕ ವಾಸಸ್ಥಾನ ತೊರೆದು ಹೊಸ ಪ್ರದೇಶಗಳತ್ತ ಚಲಿಸುತ್ತ ರೋಗಗಳನ್ನು ಹರಡುತ್ತವೆ.
ಕೆಲವು ಜನರಿಗಷ್ಟೇ ಗುಣಮಟ್ಟದ ಸೇವೆ ನೀಡುವ ಲಾಭಕರ-ಆರೋಗ್ಯ ವ್ಯವಸ್ಥೆಯೂ ಬದಲಾಗಬೇಕಿದೆ. ಬಹಳಷ್ಟು ಜನರು ಕೊವಿಡ್‌ನಿಂದಾಗಿ ಸಾಯಲಿಲ್ಲ, ಸರಿಯಾದ ವೇಳೆಯಲ್ಲಿ ಅವರಿಗೆ ವೈದ್ಯಕೀಯ ನೆರವು ಸಿಗದೇ ಅಸು ನೀಗಿದ್ದನ್ನು ನಾವು ನೋಡಿದ್ದೇವೆ.
ಸಾಂಕ್ರಾಮಿಕ ಎದುರಿಸಲು ಉತ್ತಮ ಸನ್ನದ್ಧತೆಗೆ, ಪ್ರಸ್ತುತ ಅಭಿವೃದ್ಧಿ ಮಾದರಿಯನ್ನು ಪ್ರಶ್ನಿಸುವ, ಹವಾಮಾನ ಬದಲಾವಣೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜಾಗತಿಕ ಪ್ರಜ್ಞೆಯಲ್ಲಿ ದೊಡ್ಡ ಬದಲಾವಣೆಯ ಅಗತ್ಯವಿದೆ. ಈ ಸಾಂಕ್ರಾಮಿಕವು ವೈಜ್ಞಾನಿಕ ಪರಿಭಾಷೆಯೊಂದಿಗೆ ನಮಗೆ ಪಾಠ ಕಲಿಸಿದೆ ಎಂದು ನಾನು ಭಾವಿಸುತ್ತೇನೆ.
ಹೊಸ ಸ್ವರೂಪದ ವೈರಸ್ ಎಷ್ಟು ಅಪಾಯಕಾರಿ
ಹೊಸ ಸ್ವರೂಪದ ವೈರಸ್ ಎಷ್ಟು ಅಪಾಯಕಾರಿ ಮತ್ತು ಈಗ ಅಭಿವೃದ್ಧಿಗೊಂಡಿರುವ ಲಸಿಕೆಗಳು ಅದನ್ನು ನಿವಾರಿಸುತ್ತವೆಯೇ ಎಂಬ ಪ್ರಶ್ನೆ ನಮ್ಮ ಮುಂದಿದೆ.
ಈ ಸಾಂಕ್ರಾಮಿಕದ ಸಮಯದಲ್ಲಿ ಹೊಸ ಸ್ವರೂಪದ ವೈರಸ್ ಕುರಿತ ಅಸಮಂಜಸ ಮತ್ತು ತಪ್ಪು ಮಾಹಿತಿಯ ಚರ್ಚೆಗಳು ವ್ಯಾಪಕವಾಗಿ ಹರಡುತ್ತಿವೆ ಮತ್ತು ಉಳಿದುಕೊಳ್ಳಲು ಶತಾಯಗತಾಯ ಕೆಲಸ ಮಾಡುತ್ತಿರುವ ನಮ್ಮ ಮನಸ್ಸುಗಳ ಮೇಲೆ ಅದು ಆಟವಾಡುತ್ತದೆ. ಬದಲಾವಣೆಯೊಂದೇ ಸ್ಥಿರ ಮತ್ತು ಇದಕ್ಕೆ ವೈರಸ್ ಕೂಡ ಭಿನ್ನವಾಗಿಲ್ಲ ಎಂಬುದನ್ನು ನಾವು ಮರೆತುಬಿಡುತ್ತೇವೆ. ವಾಸ್ತವವಾಗಿ, ಪ್ರತಿ ವೈರಸ್ ಕೂಡ ರೂಪಾಂತರಿಯೇ. ಅದು ಅವುಗಳ ಜೀವನಚಕ್ರದ ಭಾಗ ಮತ್ತು ಅದು ಯಾವಾಗಲೂ ದೊಡ್ಡ ಇಶ್ಯೂ ಕೂಡ ಆಗುವುದಿಲ್ಲ. ಎಲ್ಲ ರೂಪಾಂತರಗಳೂ ಕೆಟ್ಟವೇ ಆಗಬೇಕೆಂದೇನಿಲ್ಲ. ಕೆಲವು ಸಂದರ್ಭಗಳಲ್ಲಿ ಅಂತಹ ರೂಪಾಂತರಗಳು ಇನ್ನೂ ಅಶಕ್ತ ವೈರಸ್‌ಗೂ ಕಾರಣವಾಗಬಹುದು.
ಫ್ಲೂ ವೈರಸ್‌ನಂತೆಯೇ ಕೊವಿಡ್ ವೈರಸ್ ಕೂಡ ಆರ್‌ಎನ್‌ಎ ವೈರಸ್ ಆಗಿದ್ದು, ಆರ್‌ಎನ್‌ಎ ವೈರಸ್‌ಗಳು ಆಗಾಗ್ಗೆ ಬದಲಾವಣೆಗೊಳ್ಳುತ್ತವೆ. ಕೋವಿಡ್‌ನ ಹೊಸ ಸ್ವರೂಪ ಬಂದಿರುವುದು ಕೂಡ ಇದು ಮೊದಲ ಸಲವೇನಲ್ಲ, ಆದರೆ ಕಡಿಮೆ ವೇಗದಲ್ಲಿ ಕೊವಿಡ್-19 ವೈರಸ್ ರೂಪಾಂತರಗೊಳ್ಳುತ್ತಲೇ ಬಂದಿದೆ. ಬ್ರಿಟನ್‌ನಲ್ಲಿ ಸೆಪ್ಟೆಂಬರ್‌ನಲ್ಲಿ ಸಂಗ್ರಹಿಸಿದ ಮಾದರಿಯಲ್ಲಿ ಈ ಹೊಸ ಸ್ವರೂಪ ಪತ್ತೆಯಾಗಿದೆ, ಅಂದರೆ ಆಗಲೇ ಇತರ ದೇಶಗಳಲ್ಲೂ ಅದು ಅಸ್ತಿತ್ವ ಹೊಂದಿರಬಹುದು ಮತ್ತು ಹರಡುತ್ತಿರಬಹುದು. ಆ ದೇಶಗಳಲ್ಲಿ ಅದರ ಆವಿಷ್ಕಾರ ಆಗಿರಲಿಕ್ಕಿಲ್ಲವಷ್ಟೇ. ಬ್ರಿಟನ್ ಜೀನೋಮ್ ಸೀಕ್ವೆನ್ಸಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಇದು ಪತ್ತೆಯಾಗಿದೆ. ಇಲ್ಲಿವರೆಗೆ ಸಂಶೋಧಕರು ಸಾರ್ಸ್-ಕೋವ್-2ರ 14 ರೂಪಾಂತರ ಪ್ರಭೇದಗಳನ್ನು ಗುರುತಿಸಿದ್ದಾರೆ.
ವರದಿಗಳ ಪ್ರಕಾರ ಹೊಸ ಸ್ವರೂಪದ ವೈರಸ್ ತೀಕ್ಷ್ಣವಾಗಿ ಹರಡುತ್ತದಾದರೂ, ಮೂಲ ವೈರಸ್‌ಗಿಂತ ಸೋಂಕು ತೀವ್ರ ಸ್ವರೂಪದ್ದಲ್ಲ. ಆದರೆ ಈಗಿನ ಅಶಕ್ತ ಆರೋಗ್ಯ ವ್ಯವಸ್ಥೆಗೆ ಅದು ಹೆಚ್ಚಿನ ಒತ್ತಡ ಹಾಕಬಲ್ಲದು. ಮೂಲ ವೈರಸ್ ಮತ್ತು ರೂಪಾಂತರಿ ವೈರಸ್‌ನ ಗುಣಲಕ್ಷಣಗಳು ಹೆಚ್ಚೂಕಡಿಮೆ ಒಂದೇ ಆಗಿವೆ.
ಲಸಿಕೆ ಹೊಸ ವೈರಸ್‌ಗೆ ಮದ್ದೆ?
ಸ್ಪೈಕ್ ಪ್ರೊಟಿನ್‌ನಲ್ಲಿನ ಹಲವು ವ್ಯತ್ಯಾಸದ ಹೊರತಾಗಿಯೂ ಲಸಿಕೆಗಳು ರೂಪಾಂತರಿ ವೈರಸ್ ಸೋಂಕಿಗೆ ಪರಿಹಾರ ಆಗಬಲ್ಲವು ಎಂದು ಆರಂಭಿಕ ವರದಿಗಳು ಹೇಳುತ್ತಿವೆ. ಹೆಚ್ಚಿನ ಲಸಿಕೆಗಳನ್ನು ವೈರಸ್‌ನ ಕೋರ್ ಸೀಕ್ವೆನ್ಸ್ ಹಣಿಯುವಂತೆ ಅಭಿವೃದ್ಧಿ ಮಾಡಲಾಗಿದ್ದು, ಅವು ಒಂದು ಶ್ರೇಣಿಯ ರೋಗನಿರೋಧಕಗಳನ್ನು ಸೃಷ್ಟಿಸುತ್ತವೆ. ಹಲವಾರು ರೂಪಾಂತರಿಗಳು ಬಂದರೂ ಈಗಿನ ಬಹುತೇಕ ಲಸಿಕೆಗಳು ವೈರಸ್ ವಿರುದ್ಧ ದೀರ್ಘಕಾಲೀನ ಪ್ರತಿರೋಧಕ ಶಕ್ತಿಯನ್ನು ಒದಗಿಸುತ್ತವೆ.

ಅದಾಗ್ಯೂ ಇಲ್ಲಿ ಅನೇಕ ವಿಷಯಗಳಿವೆ. ಇದು ಕೇವಲ ವೈರಸ್ ಮತ್ತು ವ್ಯಾಕ್ಸಿನ್ ನಡುವಿನ ಯುದ್ಧವಲ್ಲ. ಲಸಿಕೆಗಳು ಆರೋಗ್ಯಕರ ಮಾನವ ದೇಹವು ಸ್ವಾಭಾವಿಕವಾಗಿ ಸೋಂಕಿನ ವಿರುದ್ಧ ಹೋರಾಡುವುದನ್ನು ಅನುಕರಿಸುತ್ತದೆ ಮತ್ತು ಅದನ್ನು ತೀವ್ರಗೊಳಿಸುತ್ತದೆ ಎಂಬುದನ್ನು ನಾವು ಮರೆಯುತ್ತಿದ್ದೇವೆ. ಸಮಯ ಸರಿದಂತೆ ವೈರಸ್ ಅಶಕ್ತವಾಗಬಹುದು, ಅದರೆ ಹೆಚ್ಚು ಪ್ರಸರಣಶೀಲವಾಗಬಹುದು, ಯಾವುದೇ ಲಕ್ಷಣಗಳು ಕಾಣಿಸದೆ ಸೋಂಕು ತಗುಲಬಹುದು. ಅಥವಾ ನಾವು ’ಮಂದೆ ರೋಗನಿರೋಧಕ’ (ಹೆರ್ಡ್ ಇಮ್ಯುನಿಟಿ) ಪಡೆಯಬಹುದು.
ಲಸಿಕೆಗಳಿಂದ ರೋಗ ಪ್ರತಿರೋಧಕ ಶಕ್ತಿ ಪಡೆಯಬಹುದು. ಇದರಿಂದ ನಮ್ಮ ದೇಹ ಈ ವೈರಸ್ ಅನ್ನು ಸೋಲಿಸಬಹುದು. ಹಾಗಾದಾಗ ಅಲ್ಲಲ್ಲಿ ಅಷ್ಟೇ ನಾವು ಕೊವಿಡ್ ಸೋಂಕನ್ನು ಕಾಣಬಹುದು. ಆದರೆ ಸಾಂಕ್ರಾಮಿಕದ ಗರಿಷ್ಠ ಪ್ರಮಾಣಕ್ಕೆ ತಲುಪಲಾರೆವು ಮತ್ತು ಆರೋಗ್ಯ ವ್ಯವಸ್ಥೆಯ ಮೇಲೆ ಒತ್ತಡ ಇರಲಾರದು. ಹೀಗಾಗಿ ಭವಿಷ್ಯದಲ್ಲಿ ಸಾಂಕ್ರಾಮಿಕವನ್ನು ಇನ್ನಷ್ಟು ಚೆನ್ನಾಗಿ ಹ್ಯಾಂಡಲ್ ಮಾಡಬಹುದು.
ಹೀಗಾಗಿ ಈ ಸಾಂಕ್ರಾಮಿಕ ರೋಗವನ್ನು ನಾವು ನಿವಾರಿಸಿಕೊಳ್ಳುತ್ತೇವೆ ಎಂಬ ಭರವಸೆ ಮತ್ತು ಆಶಯಗಳಿವೆ!
(ಕನ್ನಡಕ್ಕೆ): ಮಲ್ಲನ್‌ಗೌಡರ್
ಇದನ್ನೂ ಓದಿ: ಕೊವ್ಯಾಕ್ಸಿನ್: ಒಂದು ಪೊಲಿಟಿಕಲ್ ಜುಮ್ಲಾ, ಆತ್ಮ್‌ನಿರ್ಭರ್ ಹಪಾಹಪಿಗೊಂದು ನಿದರ್ಶನ
