“ಬದುಕಿರುವ ಎಚ್.ಡಿ.ದೇವೇಗೌಡರ ಬಗ್ಗೆಯೇ ಸುಳ್ಳು ಹೇಳುವವರು, ಗಾಂಧೀಜಿಯ ಬಗ್ಗೆ ಹೇಳುವುದಿಲ್ಲವೇ? ಸಾವರ್ಕರ್ ಅವರು ಬ್ರಿಟಿಷರಿಗೆ ಕ್ಷಮಾಪಣ ಪತ್ರ ಬರೆಯುವಂತೆ ಗಾಂಧೀಜಿ ಸಲಹೆ ನೀಡಿದ್ದರು ಎಂದು ಹೇಳುವುದರ ಹಿಂದೆ ಸಾವರ್ಕರ್ ಮೇಲಿರುವ ಆರೋಪಕ್ಕೆ ಜನಮನ್ನಣೆ ಸಿಗುವಂತೆ ಮಾಡುವ ಉನ್ನಾರವಿದೆ” ಎಂದು ಪ್ರೊ.ಎಸ್.ಚಂದ್ರಶೇಖರ್ ಹೇಳಿದರು.
“ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆಯುವಂತೆ ಗಾಂಧೀಜಿಯವರು ಸಾವರ್ಕರ್ ಅವರಿಗೆ ಸಲಹೆ ನೀಡಿದ್ದರು” ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೇಳಿರುವುದಕ್ಕೆ ‘ನಾನುಗೌರಿ.ಕಾಮ್’ನೊಂದಿಗೆ ಅವರು ಪ್ರತಿಕ್ರಿಯಿಸಿದರು.
“ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಆರ್‌ಎಸ್‌ಎಸ್ ಹೊಗಳಿದ್ದರು ಎಂದು ಸಚಿವ ಸಿ.ಟಿ.ರವಿ ಹೇಳಿದ್ದರು. ಆ ಮೇಲೆ ದೇವೇಗೌಡರೇ ಸ್ಪಷ್ಟನೆ ನೀಡಿದರು. ಬದುಕಿರುವವರ ಬಗ್ಗೆ ಹೀಗೆ ಹೇಳುವವರು, ತೀರಿಕೊಂಡವರ ಬಗ್ಗೆ ಹೇಳುವುದಿಲ್ಲವೆ?” ಎಂದು ಎಚ್ಚರಿಸಿದರು.

“ದೇವೇಗೌಡರು ಸುಳ್ಳು ಹೇಳಬೇಡಿ ಎಂದು ಹೇಳಿದ್ದಾರೆ. ಆದರೆ ಸುಳ್ಳು ಹೇಳಬೇಡಿ ಎಂದು ಪ್ರತಿಕ್ರಿಯಿಸಲು ಗಾಂಧಿ ಇಲ್ಲವಲ್ಲ. ವ್ಯವಸ್ಥಿತವಾಗಿ ಈ ಥರದ ನೆರೇಟಿವ್‌ಗಳನ್ನು ಬೆಳೆಸಲಾಗುತ್ತದೆ. ಅವರ ಮೇಲೆ ಇರುವ ಆರೋಪಗಳನ್ನು ರಿವರ್ಸ್ ಮಾಡಲು ಈ ಥರ ಹೇಳಿಕೆಗಳನ್ನು ನೀಡುತ್ತಾ ಹೋಗುತ್ತಾರೆ” ಎಂದು ಅಭಿಪ್ರಾಯಪಟ್ಟರು.
“ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಆರ್‌ಎಸ್‌ಎಸ್‌ಗೆ ಹೋಗಿದ್ದರು. -ನೀವು ಅಲ್ಲಿಗೆ ಹೋಗಬೇಡಿ, ನಿಮ್ಮನ್ನು ಬಳಸಿಕೊಳ್ಳುತ್ತಾರೆ- ಎಂದು ಅವರ ಮಗಳು ಎಚ್ಚರಿಸಿದ್ದರು. ಅಲ್ಲಿ ಪ್ರಣವ್ ಏನು ಮಾತನಾಡಿದ್ದರು ಎಂಬುದು ಮುಖ್ಯವಾಗುವುದಿಲ್ಲ. ಅಲ್ಲಿಗೆ ಹೋಗಿದ್ದರು ಎಂಬುದಷ್ಟೇ ಮುಖ್ಯವಾಗುತ್ತದೆ. ಈ ಥರದ್ದು ರಾಜಕಾರಣದಲ್ಲಿ ನಡೆಯುತ್ತಿರುತ್ತದೆ. ಅದು ಆಶ್ಚರ್ಯವೇನಲ್ಲ” ಎಂದರು.
“ಆರ್‌ಎಸ್‌ಎಸ್ ಮೂಲವನ್ನು ಬಿಟ್ಟು ಗಾಂಧೀಜಿಗೆ ಹತ್ತಿರವಿದ್ದ ಯಾರಾದರೂ ಈ ಬಗ್ಗೆ ದಾಖಲಿಸಿದ್ದಾರಾ ಎಂದು ಕೇಳಬೇಕಾಗುತ್ತದೆ. ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಗಾಂಧಿಗೆ ಹತ್ತಿರವಿದ್ದರು. ಜವಹರಲಾಲ್ ನೆಹರೂ ಅವರಿದ್ದರು. ಇವರ್‍ಯಾರಾದರೂ ಹೇಳಿದ್ದರೆ ದಾಖಲೆ ಇದ್ದರೆ ತಿಳಿಸಬೇಕು” ಎಂದು ಆಗ್ರಹಿಸಿದರು.
“ರಕ್ಷಣಾ ಸಚಿವರೇ ಹೀಗೆ ಹೇಳಿದ್ದರು ಎಂದು ಮತ್ತೊಬ್ಬ ಹೇಳಲು ಶುರು ಮಾಡುತ್ತಾನೆ. ಹೀಗೆ ಒಬ್ಬರಿಂದ ಒಬ್ಬರಿಗೆ ಸುಳ್ಳು ಹರಡುತ್ತಾ ಹೋಗುತ್ತದೆ. ಈ ಥರದಲ್ಲಿ ಸುಳ್ಳುಗಳ ಪ್ರತಿಪಾದನೆ ಬೆಳೆಯುತ್ತಾ ಹೋಗುತ್ತದೆ. ಈ ಹೊತ್ತಿನ ರಾಜಕಾರಣ, ಅಡ್ಡ ದಾರಿಯ ರಾಜಕಾರಣ. ಯಾರ ಬಾಯಲ್ಲಿ ಏನು ಬೇಕಾದರೂ ತುರುಕುತ್ತಾರೆ” ಎಂದು ಟೀಕಿಸಿದರು.
ಪತ್ರಕರ್ತರಾದ ಸ್ವಾತಿ ಚತುರ್ವೇದಿಯವರು ಟ್ವೀಟ್ ಮಾಡಿದ್ದು, ಗಾಂಧೀಜಿಯವರು ಸಾವರ್ಕರ್ ಅವರಿಗೆ ಬರೆದಿರುವ ಪತ್ರದ ಕುರಿತು ಹಂಚಿಕೊಂಡಿದ್ದಾರೆ. ಆದರೆ ಕ್ಷಮಾಪಣೆ ಕೇಳುವಂತೆ ಗಾಂಧೀಜಿಯವರು ಈ ಪತ್ರದಲ್ಲಿ ಉಲ್ಲೇಖಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Gandhi’s letter to Savarkar. No mention of a grovelling mercy petition pic.twitter.com/PfS2Vssttk
— Swati Chaturvedi (@bainjal) October 13, 2021
ರಾಜನಾಥ್ ಸಿಂಗ್ ಅವರು ಇತಿಹಾಸವನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗಿವೆ. ಹಿರಿಯ ನ್ಯಾಯವಾಧಿ ಪ್ರಶಾಂತ್ ಭೂಷಣ್ ಟ್ಟೀಟ್ ಮಾಡಿದ್ದು, “ತನ್ನನ್ನು ಶೂಟ್ ಮಾಡುವಂತೆ ಗೋಡ್ಸೆಯನ್ನು ಗಾಂಧೀಜಿ ಕೇಳಿದರು, ರಾಜ್‌ನಾಥ್ ಸಿಂಗ್ ಜೀ” ಎಂದು ಕುಟುಕಿದ್ದಾರೆ.
Yes Rajnath ji. Just as Gandhiji asked Godse to shoot him! https://t.co/TDi9qNkB0a
— Prashant Bhushan (@pbhushan1) October 13, 2021
ಸಮೀನ್ ಅಖ್ತರ್ ಪ್ರತಿಕ್ರಿಯಿಸಿ, ” ಗಾಂಧಿ ಆಕಸ್ಮಿಕವಾಗಿ ಗುಂಡೇಟಿಗೆ ಬಲಿಯಾದರು ಮತ್ತು ಗಾಡ್ಸೆ ಗಾಂಧಿಯ ಸಶಸ್ತ್ರ ಅಂಗರಕ್ಷಕರಾಗಿದ್ದರು ಎಂಬುದು ನನಗೆ ತಿಳಿದಿರಲಿಲ್ಲ” ಎಂದು ಹೇಳಿದ್ದಾರೆ.
“ಗಾಂಧೀಜಿ ಸತ್ತಿದ್ದು, ಆಟೋರಿಕ್ಷಾ ಅಪಘಾತದಲ್ಲಿ ಎಂಬುದು ಸತ್ಯವಾಗಿದೆ” ಎಂದು ವಿಶಾಲ್ ಎಂಬವರು ಟ್ಟೀಟ್ ಮಾಡಿದ್ದಾರೆ.
“ಹಿಂದುತ್ವದ ಪ್ರತಿಪಾದನೆಯ ಆದ್ಯ ಪ್ರವರ್ತಕರಲ್ಲಿ ಒಬ್ಬರಾದ ವಿ.ಡಿ.ಸಾವರ್ಕರ್ ಅವರು ಅಂಡಮಾನ್ ಜೈಲಿನಿಂದ ಹೊರಬರಲು ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆಯುವಂತೆ ಮಹಾತ್ಮ ಗಾಂಧೀಜಿಯವರು ಸಲಹೆ ನೀಡಿದ್ದರು. ಆದರೆ ಸಾವರ್ಕರ್ ಅವರನ್ನು ವಿರೋಧಿಸುವ ಸಿದ್ಧಾಂತಿಗಳು ಸಾವರ್ಕರ್ ಅವರು ಸ್ವಾತಂತ್ರ್ಯ ಹೋರಾಟಕ್ಕಾಗಿ ನೀಡಿದ ಕೊಡುಗೆಯನ್ನು ನಿಂದಿಸಿದ್ದು, ಅದನ್ನು ಇನ್ನು ಮುಂದೆ ಸಹಿಸುವುದಿಲ್ಲ” ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿರಿ: ಬಿಜೆಪಿಯು ಸಾವರ್ಕರ್‌ರನ್ನು ಶೀಘ್ರದಲ್ಲೇ ರಾಷ್ಟ್ರಪಿತ ಎಂದು ಘೋಷಿಸಲಿದೆ: ಅಸಾದುದ್ದೀನ್ ಓವೈಸಿ ಆಕ್ರೋಶ
ಉದಯ್ ಮಹೂರ್‌ಕರ್ ಮತ್ತು ಚಿರಾಯು ಪಂಡಿತ್ ಅವರು ಬರೆದಿರುವ “ದಿ ಮ್ಯಾನ್ ವೂ ಕುಡ್ ಹ್ಯಾವ್ ಪ್ರಿವೆಂಟೆಂಡ್ ಪಾರ್ಟಿಷನ್” ಕೃತಿಯನ್ನು ರೂಪಾ ಪಬ್ಲಿಕೇಷನ್ ಪ್ರಕಟಿಸಿದ್ದು, ಮಂಗಳವಾರ ಬಿಡುಗಡೆಯಾಗಿದೆ. ನವದೆಹಲಿಯ ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಪಾಲ್ಗೊಂಡಿದ್ದ ಸಾವರ್ಕರ್ ಕುರಿತ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ರಮದಲ್ಲಿ ರಕ್ಷಣಾ ಸಚಿವರು ಮಾತನಾಡಿದ್ದಾರೆ.
“ಸಾವರ್ಕರ್ ವಿರುದ್ಧ ಸಾಕಷ್ಟು ಸುಳ್ಳುಗಳನ್ನು ಹರಡಲಾಗಿದೆ. ಅವರು ಬ್ರಿಟಿಷ್ ಸರ್ಕಾರದ ಮುಂದೆ ಹಲವು ಕ್ಷಮಾದಾನ ಅರ್ಜಿಗಳನ್ನು ಸಲ್ಲಿಸಿದರು ಎಂದು ಪದೇ ಪದೇ ಹೇಳಲಾಗುತ್ತಿದೆ. ಸತ್ಯವೆಂದರೆ ಸಾವರ್ಕರ್ ಅವರು ತನ್ನ ಬಿಡುಗಡೆಗಾಗಿ ಈ ಅರ್ಜಿಗಳನ್ನು ಸಲ್ಲಿಸಿಲ್ಲ. ಸಾಮಾನ್ಯವಾಗಿ ಕೈದಿಗೆ ಕ್ಷಮಾದಾನ ಅರ್ಜಿ ಸಲ್ಲಿಸುವ ಹಕ್ಕಿದೆ. ಸಾವರ್ಕರ್ ಕ್ಷಮಾದಾನ ಅರ್ಜಿ ಸಲ್ಲಿಸುವಂತೆ ಮಹಾತ್ಮ ಗಾಂಧಿ ಹೇಳಿದ್ದರು. ಗಾಂಧಿಯವರ ಸಲಹೆಯ ಮೇರೆಗೆ ಅವರು ಕ್ಷಮಾದಾನ ಅರ್ಜಿ ಸಲ್ಲಿಸಿದರು. ಸಾವರ್ಕರ್ ಅವರನ್ನು ಬಿಡುಗಡೆ ಮಾಡಬೇಕು ಎಂದು ಮಹಾತ್ಮಾ ಗಾಂಧಿಯವರು ಮನವಿ ಮಾಡಿದರು. ನಾವು ಸ್ವಾತಂತ್ರ್ಯಕ್ಕಾಗಿ ಚಳವಳಿಯನ್ನು ಶಾಂತಿಯುತವಾಗಿ ನಡೆಸುತ್ತಿದ್ದೇವೆ ಎಂದು ಗಾಂಧೀಜಿ ಹೇಳಿದ್ದರು, ಸಾವರ್ಕರ್ ನಂಬಿಕೆಯೂ ಇದೇ ಆಗಿತ್ತು”ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಗುಲಾಮಗಿರಿಯ ಸಂಕೋಲೆಗಳನ್ನು ಮುರಿಯಲು ಜನರನ್ನು ಪ್ರೇರೇಪಿಸಿದರು. ಮಹಿಳಾ ಹಕ್ಕುಗಳು ಸೇರಿದಂತೆ ಇತರ ಸಾಮಾಜಿಕ ಸಮಸ್ಯೆಗಳನ್ನು ಪ್ರಶ್ನಿಸಿದರು. ಅಸ್ಪೃಶ್ಯತೆಯ ವಿರುದ್ಧ ಆಂದೋಲನ ಮಾಡಿದರು ಎಂದ ಅವರು, “ದೇಶದ ಸಾಂಸ್ಕೃತಿಕ ಏಕತೆಯಲ್ಲಿ ಅವರ ಕೊಡುಗೆಯನ್ನು ಕಡೆಗಣಿಸಲಾಗಿದೆ” ಎಂದಿದ್ದಾರೆ.
ಇದನ್ನೂ ಓದಿರಿ: ಮಹಿಳಾ ನಿಂದನೆ: ಡಾ.ಕೆ.ಸುಧಾಕರ್ ಆಯ್ತು, ಈಗ ರಾಜಸ್ತಾನ ಶಿಕ್ಷಣ ಸಚಿವರ ಸರದಿ!


