ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯನ್ನು ವಿರೋಧಿಸುತ್ತಿರುವ ಬಿಜೆಪಿ ಸೇರಿದಂತೆ ಇತರೆ ರಾಜಕೀಯ ಪಕ್ಷಗಳ ನಾಯಕರು ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ಸಮುದಾಯಗಳ ಸಾಮಾಜಿಕ ನ್ಯಾಯದ ವಿರೋಧಿಗಳಾಗಿದ್ದಾರೆ ಎಂದು ಜಾಗೃತ ಕರ್ನಾಟಕ ಮಂಡ್ಯ ಜಿಲ್ಲಾ ಘಟಕ ಕಿಡಿಕಾರಿದೆ.
ಈ ಕುರಿತು ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಾಗೃತ ಕರ್ನಾಟಕ ಸಂಚಾಲಕರಾದ ಎನ್.ನಾಗೇಶ್ ಹಾಗೂ ಪೃಥ್ವಿರಾಜ್, “ಭಾರತದಲ್ಲಿ ಜಾತಿ ವ್ಯವಸ್ಥೆ ವಾಸ್ತವ. ಅದೇ ರೀತಿ ಕೆಲವೇ ಕೆಲವು ಜಾತಿಗಳು ಮುಂದುವರೆದಿರುವುದು ಮತ್ತು ಹಲವು ಜಾತಿಗಳು ಹಿಂದುಳಿದಿರುವುದು ಕೂಡ ವಾಸ್ತವವೇ. ಅದಕ್ಕಾಗಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ ಯಾವ ಜಾತಿಗಳು ಎಷ್ಟು ಹಿಂದುಳಿದಿವೆ? ಎಷ್ಟು ಮುಂದುವರೆದಿವೆ? ಎನ್ನುವುದನ್ನು ಕಾಲಕಾಲಕ್ಕೆ ಅಧ್ಯಯನ ಮಾಡಬೇಕು. ಅಂದರೆ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಬೇಕು. ಈ ಸಮೀಕ್ಷೆ ಆಧಾರದ ಮೇಲೆ ಸರ್ಕಾರಗಳು ನೀತಿ-ನಿರೂಪಣೆ ರೂಪಿಸಬೇಕು. ಜೊತೆಗೆ ಸಾಮಾಜಿಕ ನ್ಯಾಯವನ್ನು ಜಾರಿ ಮಾಡಲು ಪ್ರಯತ್ನಿಸಬೇಕು, ಆದರೆ ಇಂತಹ ಸಮೀಕ್ಷೆಗೆ ಕೆಲವರು ಅಡ್ಡಗಾಲು ಹಾಕುತ್ತಿರುವುದು ಸಾಮಾಜಿಕ ನ್ಯಾಯದ ವಿರೋಧಿ ನಡೆಯಾಗಿದೆ” ಎಂದು ಖಂಡಿಸಿದರು.
“ಸವೋಚ್ಚ ನ್ಯಾಯಾಲಯವು (ಮಂಡಲ್ ಕೇಸಿನಲ್ಲಿ) ಎಲ್ಲ ರಾಜ್ಯಗಳು ಹಿಂದುಳಿದ ವರ್ಗಗಳ ಶಾಶ್ವತ ಆಯೋಗವನ್ನು ರಚಿಸಬೇಕು ಎಂದು ಹೇಳಿದೆ. ಆನಂತರ ಬಂದ ಕಾಯ್ದೆಗಳು ಈ ಆಯೋಗಗಳು 10 ವರ್ಷಕ್ಕೊಮ್ಮೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಬೇಕು ಎಂದು ಹೇಳಿವೆ. ಇದರಿಂದಾಗಿ ಸದ್ಯ ಕರ್ನಾಟಕದಲ್ಲಿ ನಡೆಯುತ್ತಿರುವ ಜಾತಿ ಸಮೀಕ್ಷೆಯು ನ್ಯಾಯಯುತವಾದುದಾಗಿದೆ. ಯಾರೂ ಕೂಡ ಜಾತಿ ಸಮೀಕ್ಷೆಗೆ ವಿರೋಧ ಮಾಡಬಾರದು” ಎಂದರು.
“ಹಿಂದುಳಿದ ವರ್ಗಗಳ ಆಯೋಗ ಸಮೀಕ್ಷೆ ನಡೆಸುತ್ತದೆಯಾದರೂ ಅದು ಹಿಂದುಳಿದ ಜಾತಿಗಳನ್ನು ಮಾತ್ರ ಸಮೀಕ್ಷೆಗೆ ಒಳಪಡಿಸುವುದಿಲ್ಲ. ರಾಜ್ಯದ ಎಲ್ಲ ಜಾತಿಗಳನ್ನು ಅಧ್ಯಯನ ನಡೆಸುತ್ತದೆ. ಅದರಿಂದಾಗಿ ಈ ಸಮೀಕ್ಷೆಯಲ್ಲಿ ಸರ್ವ ಸಮುದಾಯಗಳ ಹಿತ ಅಡಗಿದೆ. ಹಿಂದುಳಿದಿರುವ ಜಾತಿಗಳನ್ನು ಗುರುತಿಸಿ ಅವುಗಳ ಬೆಳವಣಿಗೆಗೆ ಅನುಕೂಲವಾಗುವಂಥ ಶಿಫಾರಸುಗಳನ್ನು ಮಾಡುವುದರಿಂದ ಸಹಜವಾಗಿ ಇದರಿಂದ ಹಿಂದುಳಿದಿರುವ ಎಲ್ಲ ಜಾತಿ-ಉಪಜಾತಿಗಳಿಗೆ ಲಾಭ ಇದೆ. ಹಾಗಾಗಿ, ಜಾತಿ ಸಮೀಕ್ಷೆಗೆ ವಿರೋಧ ಮಾಡುವವರು ಹಿಂದುಳಿದವರ ವಿರೋಧಿಗಳೇ ಆಗಿರುತ್ತಾರೆ. ತಮ್ಮ ವಿರುದ್ಧ ನಡೆಯುತ್ತಿರುವ ಈ ಷಡ್ಯಂತ್ರವನ್ನು ಹಿಂದುಳಿದ ಸಮುದಾಯಗಳು ಎಂದಿಗೂ ಮರೆಯುವುದಿಲ್ಲ” ಎಂದು ಆಕ್ರೋಶ ಹೊರಹಾಕಿದರು.
“ಜಾತಿ ಸಮೀಕ್ಷೆ ನಡೆಸುವುದೇ ಸಾಮಾಜಿಕ ನ್ಯಾಯವನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲು. ಆದುದರಿಂದ ಜಾತಿ ಸಮೀಕ್ಷೆಗೆ ವಿರೋಧ ಮಾಡುವವರು ಸಾಮಾಜಿಕ ನ್ಯಾಯದ ವಿರೋಧಿಗಳು. ನಮ್ಮ ಮತಗಳನ್ನು ತೆಗೆದುಕೊಂಡು ಅಧಿಕಾರ ಪಡೆದು ನಮ್ಮ ವಿರುದ್ಧ ಮಸಲತ್ತು ನಡೆಸುತ್ತಿರುವ ಖಳನಾಯಕರು. ಇಂಥ ಸಮುದಾಯ ಮತ್ತು ನಾಯಕರ ವಿರುದ್ಧ ಹಿಂದುಳಿದ ಸಮುದಾಯಗಳು ಒಗ್ಗಟ್ಟಾಗುತ್ತಿವೆ. ಇದರ ಬಗ್ಗೆ ಎಲ್ಲ ಹಿಂದುಳಿದ ಜಾತಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಸಾಮಾಜಿಕ ನ್ಯಾಯದ ವಿರೋಧಿಗಳಿಗೆ ಮುಂಬರುವ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಲಾಗುತ್ತದೆ ಎಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ” ಎಂದರು.
“ಇದೇ ವೇಳೆ, ಕರ್ನಾಟಕ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸಮೀಕ್ಷೆ ವೇಳೆ ಆಗುತ್ತಿರುವ ಸಣ್ಣಪುಟ್ಟ ಲೋಪದೋಷಗಳನ್ನು ಕೂಡಲೇ ಬಗೆಹರಿಸಬೇಕು. ಸಮಯ ಮಿತಿಯೊಳಗೆ ಪೂರ್ಣಗೊಳಿಸುವುದು ಎಷ್ಟು ಮುಖ್ಯವೋ ಅದನ್ನು ಸಮರ್ಪಕವಾಗಿ ನಡೆಸುವುದು ಕೂಡಾ ಅಷ್ಟೇ ಮುಖ್ಯ. 2015ರ ಸಮೀಕ್ಷೆ ಬಗ್ಗೆ ಆಕ್ಷೇಪಗಳು ಬಂದು ಕಡೆಗೆ ಸರ್ಕಾರ ಅದನ್ನು ಅಂಗೀಕರಿಸದಿರುವುದು ದುರ್ಬಲ ಸಮುದಾಯಗಳಿಗೆ ಆದ ದೊಡ್ಡ ಅನ್ಯಾಯ. ಮತ್ತೊಮ್ಮೆ ಅಂಥ ಮಹದನ್ಯಾಯ ಆಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಆಯೋಗದ ಮೇಲಿದೆ” ಎಂದು ಸಲಹೆ ನೀಡಿದರು.
“ಸಾಮಾಜಿಕ ನ್ಯಾಯಕ್ಕಾಗಿ ಈ ಸಮೀಕ್ಷೆ ಅಗತ್ಯ ಮತ್ತು ಇದರಲ್ಲಿ ಸರ್ವ ಸಮುದಾಯಗಳ ಹಿಂದುಳಿದವರ ಹಿತ ಅಡಗಿದೆ. ಸಮೀಕ್ಷೆ ವಿರೋಧಿಸುವ ಸಾಮಾಜಿಕ ನ್ಯಾಯದ ವಿರೋಧಿಗಳಿಗೆ ಮುಂಬರುವ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಾಗೃತ ಕರ್ನಾಟಕದ ಮಂಡ್ಯ ಘಟಕದ ಸಂಚಾಲಕರಾದ ಸಂತೋಷ್ ಜಿ, ನಗರಕೆರೆ ಜಗದೀಶ್, ಸುಬ್ರಮಣ್ಯ ಹಾಗೂ ಪ್ರಶಾಂತ್ ಭಾಗವಹಿಸಿದ್ದರು.


