ಕೊರೋನಾ ಎರಡನೇ ಅಲೆ ದೇಶದಲ್ಲಿ ಲಕ್ಷಾಂತರ ಜನರ ಬಲಿ ಪಡೆದುಕೊಂಡಿದೆ. ಅದರಲ್ಲಿ ಅನೇಕರು ಪುಟ್ಟ ಪುಟ್ಟ ಮಕ್ಕಳ ತಂದೆ ತಾಯಿಗಳು ಕೊರೋನಾ ಸಾಂಕ್ರಾಮಿಕದಿಂದ ನಿಧನರಾಗಿದ್ದಾರೆ. 26,176 ಮಕ್ಕಳು 2020 ಏಪ್ರಿಲ್ 1 ರಿಂದ ಜೂನ್ 5 ರ 14 ತಿಂಗಳ ಅವಧಿಯಲ್ಲಿ ಕೊರೋನಾ ಸಾಂಕ್ರಾಮಿಕಕ್ಕೆ ತಂದೆತಾಯಿಯರನ್ನು ಕಳೆದುಕೊಂಡಿದ್ದಾರೆ. ಇವರಲ್ಲಿ 3,621 ಮಕ್ಕಳು ಅಕ್ಷರಶ: ಅನಾಥರಾಗಿದ್ದಾರೆ. ಕಳೆದ ಎರಡು ತಿಂಗಳಲ್ಲಿ 274 ಮಕ್ಕಳು ತಮ್ಮವರು ಯಾರೂ ಇಲ್ಲದೇ ಬೀದಿ ಪಾಲಾಗಿದ್ದಾರೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿದೆ.
ಸುಮಾರು 30,071 ಮಕ್ಕಳು ಕೊರೋನಾ ಸಾಂಕ್ರಾಮಿಕದಿಂದ ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ರಾಜ್ಯ ಸರ್ಕಾರಗಳಿಂದ ಈ ಸಂಬಂಧ ಮಾಹಿತಿ ಪಡೆಯಲಾಗುತ್ತಿದೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ಏಪ್ರೀಲ್ 1, 2020 ರಿಂದ ಜೂನ್ 5, 2021 ರ ವರೆಗೆ ತಂದೆ-ತಾಯಿಯರನ್ನು ಕಳೆದುಕೊಂಡ ಮಕ್ಕಳ ಮಾಹಿತಿಯನ್ನು ಆಯೋಗದ ವಿಶೇಷ ಪೋರ್ಟಲ್ ಬಾಲ ಸ್ವರಾಜ್ ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ತಿಳಿಸಿದೆ.
ಇದನ್ನೂ ಓದಿ : ಲಸಿಕಾ ನೀತಿಯಲ್ಲಿ ಯು-ಟರ್ನ್: ಲಸಿಕೆ ಜವಾಬ್ದಾರಿ ಕೇಂದ್ರದ್ದು ಎಂದ ಮೋದಿ
ಮಹರಾಷ್ಟ್ರ, ಉತ್ತರ ಪ್ರದೇಶ, ರಾಜಸ್ಥಾನ ರಾಜ್ಯಗಳಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಮಕ್ಕಳು ಅನಾಥರಾಗಿದ್ದಾರೆ. ಕೋವಿಡ್ ಕಾರಣದಿಂದ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥವಾದ ಮಕ್ಕಳಿಗೆ ಆರ್ಥಿಕ ಸಹಾಯ ಮತ್ತು ಮಾಸಿಕ ಪಿಂಚಣಿಯನ್ನು ನೀಡಲು ಅನೇಕ ರಾಜ್ಯಗಳು ಮುಂದಾಗಿವೆ. ಕೇಂದ್ರ ಸರ್ಕಾರ ಕೂಡ ತಂದೆ ತಾಯಿ ಕಳೆದುಕೊಂಡು ಅನಾಥವಾದ ಮಕ್ಕಳಿಗೆ ಸಹಾಯ ಮಾಡುವ ರಾಷ್ಟ್ರೀಯ ಯೋಜನೆಯೊಂದನ್ನು ಜಾರಿ ಮಾಡುವುದಾಗಿ ಹೇಳಿದೆ.
ರಾಜ್ಯಸರ್ಕಾರ ಮತ್ತು ಕೇಂದ್ರಸರ್ಕಾರಗಳ ಯೋಜನೆಗಳಿಗೆ NCPCR ಅಂಕಿ ಅಂಶಗಳು ಸಹಕಾರಿಯಾಗಲಿವೆ.


