Homeಮುಖಪುಟಪಶ್ಚಿಮ ಘಟ್ಟದಲ್ಲಿ ಸಾವಿರಾರು ಕಿರು ಅಣೆಕಟ್ಟೆ ಯೋಜನೆ; ಗುಡ್ಡಗಳ ಸಾಲು ಕುಸಿವ ಆತಂಕ!

ಪಶ್ಚಿಮ ಘಟ್ಟದಲ್ಲಿ ಸಾವಿರಾರು ಕಿರು ಅಣೆಕಟ್ಟೆ ಯೋಜನೆ; ಗುಡ್ಡಗಳ ಸಾಲು ಕುಸಿವ ಆತಂಕ!

- Advertisement -
- Advertisement -

ಪಶ್ಚಿಮ ಘಟ್ಟದ ತಪ್ಪಲಲ್ಲಿ ಹರಿಯುವ ನದಿಗಳನ್ನು ಬಯಲು ಸೀಮೆಯತ್ತ ತಿರುಗಿಸುವ ಅನಾಹುತಕಾರಿ ಕಾರ್ಯಸಾಧ್ಯವಲ್ಲದ ಯೋಜನೆಗಳು ಪ್ರಸ್ತಾಪವಾಗುತ್ತಿರುವ ಹೊತ್ತಲ್ಲೇ ಸಣ್ಣ ನೀರಾವರಿ ಸಚಿವ ಜೆ.ಸಿ ಮಾಧುಸ್ವಾಮಿ ಇದೇ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಬರೋಬ್ಬರಿ ಒಂದು ಸಾವಿರದಾ ನಾಲ್ಕು ನೂರು ಕಿರು ಅಣೆಕಟ್ಟು ಕಟ್ಟಿ ನೀರಿನ ದಾಹ ಇಂಗಿಸಲಾಗುವುದೆಂದು ಹೇಳಿದ್ದಾರೆ! ಇಲ್ಲಿಯೇ ಸರಣಿ ಚೆಕ್ ಡ್ಯಾಮ್ ಕಟ್ಟಿದರೆ ಬಯಲು ಸೀಮೆ ನದಿಗಳಿಗೆ ಸೇರಿಸಲು ನೀರು ಸಿಗುತ್ತದಾ? ಇದೆಲ್ಲ ಒಂದಕ್ಕೊಂದು ವಿರೋಧಭಾಸದ ಹುಚ್ಚು ಲೆಕ್ಕಾಚಾರವೆಂಬ ಜಿಜ್ಞಾಸೆ ನಡೆದಿದೆ.

ಇಂಥ ಕೆಲಸಕ್ಕೆ ಬಾರದ ಯೋಜನೆಗಳ ಪ್ರಸ್ತಾಪವಾದಾಗೆಲ್ಲ ಪಶ್ಚಿಮವಾಹಿನಿ ನದಿಗಳು ವ್ಯರ್ಥವಾಗಿ ಸಮುದ್ರ ಸೇರುತ್ತದೆಂದು ಸರ್ಕಾರಿ ಪಂಡಿತರು ವ್ಯಾಖ್ಯಾನಿಸುತ್ತಾರೆ. ಆದರೆ ಪಶ್ಚಿಮವಾಹಿನಿ ನದಿಗಳು ಹರಿವಾಗ ಇಕ್ಕೆಲದ ದಂಡೆಯುದ್ದಕ್ಕೂ ಅಸಂಖ್ಯ ಜೀವ ರಾಶಿಯನ್ನು ಪೋರೆದು ಕೊನೆಗೆ ಕಡಲ ಜಲಚರಗಳಿಗೆ ಆಹಾರ-ಪೋಶಕಾಂಶ ಒದಗಿಸುತ್ತವೆ. ನದಿ ನೀರು ಸಮುದ್ರ ಸೇರದಿದ್ದರೆ ಅಳಿವೆ ಒಣಗಿ ಮೀನುಗಾರಿಕೆ, ಕೃಷಿ, ಕುಡಿಯುವ ನೀರಿನ ಬಾವಿಗಳಿಗೆ ಧಕ್ಕೆಯಾಗುತ್ತದೆ. ಹಾಗಾಗಿ ನದಿ ನೀರು ಸಮುದ್ರ ಸೇರುವುದು ವ್ಯರ್ಥವೆಂಬುದೇ ಅನರ್ಥಕಾರಿ ಮಾತೆಂದು ಪರಿಸರ ತಜ್ಞರು ಹೇಳುತ್ತಾರೆ. ಈಗ ಸಚಿವ ಮಾಧುಸ್ವಾಮಿಯೂ ಹಾಗೇ ಹೇಳಿದ್ದಾರೆ. ಪಶ್ಚಿಮ ಘಟ್ಟಗಳಲ್ಲಿನ ನದಿಗಳು ವ್ಯರ್ಥವಾಗಿ ನದಿ ಸೇರುತ್ತಿದ್ದು ಆ ನೀರನ್ನು ಕುಡಿಯುವುದಕ್ಕೆ 1,400 ಸರಣಿ ಚೆಕ್ ಡ್ಯಾಮ್‌ಗಳಲ್ಲಿ ಸಂಗ್ರಹಿಸಲಾಗುತ್ತದಂತೆ!

ಈ ಯೋಜನೆಗೆ ಪರಿಸರವಾದಿಗಳಿಂದ ದೊಡ್ಡ ವಿರೋಧ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ಭುಗಿಲೆಳುತ್ತಿದ್ದಂತೆ ಸದರಿ ಯೋಜನೆ ಪರಿಸರಕ್ಕೆ ಮಾರಕವಲ್ಲವೆಂಬ ಸಮಜಾಯಿಶಿ ಕೊಟ್ಟಿದ್ದಾರೆ. ಪಶ್ಚಿಮ ಘಟ್ಟವಿರುವ ಐದು ಜಿಲ್ಲೆಗಳನ್ನು ಬಿಟ್ಟು ಉಳಿದ ಕೊಡಗು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಾತ್ರ ಈ ಕಿರು ಆಣೆಕಟ್ಟೆ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಾಗುತ್ತದಂತೆ. ಅಣೆಕಟ್ಟೆ ಎತ್ತರ ಆರು ಅಡಿಯಾದರೆ, ಅಚ್ಚುಕಟ್ಟು ಪ್ರದೇಶ 60-70 ಎಕರೆ. ದೊಡ್ಡ ಪ್ರಮಾಣದ ನೀರು ಸಂಗ್ರಹವಾಗುವುದಿಲ್ಲದ್ದರಿಂದ ಅರಣ್ಯ ನಾಶವಾಗುವುದಿಲ್ಲ, ಪರಿಸರ ಸಮಸ್ಯೆಯಿಲ್ಲ ಎಂದು ಮಂತ್ರಿ ಮಾಧುಸ್ವಾಮಿ ಹೇಳುತ್ತಾರೆ. ಇದನ್ನು ರಾಷ್ಟ್ರೀಯ ಜಲಮಿಷನ್ ಯೋಜನೆಯಲ್ಲಿ ಕಾರ್ಯಗತಗೊಳಿಸಲಾಗುತ್ತದಂತೆ. ಕೇಂದ್ರ ಸರ್ಕಾರ ನೆರವು ನೀಡುವ ಭರವಸೆಯಿದೆಯಂತೆ.

ಸಚಿವ ಮಾಧುಸ್ವಾಮಿ ಕೊಟ್ಟಿರುವ ಯೋಜನಾ ಮಾಹಿತಿ ಒಂಥರಾ ಮೋಗಮ್ ಆಗಿದೆ. ಯೋಜನೆಯ ಅಂದಾಜು ವೆಚ್ಚ, ಸಂಗ್ರಹವಾಗುವ ನೀರು ಎಲ್ಲಿ ಬಳಸಲಾಗುತ್ತದೆ, ಆ ನೀರನ್ನು ಯಾವ ವಿಧಾನದಲ್ಲಿ ಉದ್ದೇಶಿತ ಪ್ರದೇಶಕ್ಕೆ ಸಾಗಿಸಲಾಗುತ್ತದೆ ಎಂಬುದನ್ನು ಮಾಧುಸ್ವಾಮಿ ಹೇಳಿಲ್ಲ; ವಿಸ್ತ್ರತ ಯೋಜನಾ [ಡಿಪಿಆರ್] ಬಗ್ಗೆ ಕಾರ್ಯಸಾಧ್ಯತಾ ವರದಿ ಯೋಜನೆ ಅನುಷ್ಠಾನದಿಂದ ಪರಿಸರದ ಮೇಲಾಗುವ ಪರಿಣಾಮಗಳ ಕುರಿತು ಏನನ್ನು ಸ್ಪಷ್ಟಪಡಿಸಿಲ್ಲ. ಯೋಜನೆ ಜಾರಿಗೊಳಿಸಲು ಮಂತ್ರಿಗಳು ವಹಿಸಿರುವ ಆಸಕ್ತಿ ನೋಡಿದರೆ ಅವರಿಗೆ ಪಶ್ಚಿಮ ಘಟ್ಟಗಳು ಅದೆಷ್ಟು ನಾಜೂಕು ಮತ್ತಲ್ಲಿ ಅಭಿವೃದ್ಧಿ ಕಾಮಗಾರಿ ಕೈಗಳ್ಳುವಾಗ ಅದೆಂಥ ಎಚ್ಚರ ವಹಿಸಬೇಕೆಂದು ಬಾಹ್ಯಕಾಶ ವಿಜ್ಞಾನಿ ಕಸ್ತೂರಿರಂಗನ್, ಪರಿಸರ ವಿಜ್ಞಾನಿ ಮಾಧವ ಗಾಡ್ಗಿಳ್ ಮತ್ತಿತರ ಭೂ ವಿಜ್ಞಾನಿಗಳು ಅಧ್ಯಯನಪೂರ್ಣವಾಗಿ ಮಂಡಿಸಿರುವ ವರದಿಯ ಗಂಭೀರತೆಯ ಅರಿವಿರುವಂತಿಲ್ಲವೆಂದು ಪರಿಸರವಾದಿಗಳು ಹೇಳುತ್ತಾರೆ. ಅಣೆಕಟ್ಟು ಯಾವ ಗಾತ್ರದ್ದೇ ಇರಲಿ. ಘಟ್ಟದಲ್ಲಿ ಕಾಂಕ್ರೀಟ್ ಕಾಮಗಾರಿ ನಡೆಸಿದರೆ ಘಟ್ಟದ ಬುಡ ಅಲ್ಲಾಡಿ ಗುಡ್ಡಗಳು ಕುಸಿದು ಅನಾಹುತವಾಗುತ್ತದೆ. ಘಟ್ಟದ ಮೇಲೆ ಯಾವ ಕಾಮಗಾರಿ ಕೈಗೊಂಡರೂ ಪರಿಸರದ ಲಯ ತಪ್ಪುತ್ತದೆ. ಪಶ್ಚಿಮ ಘಟ್ಟದಲ್ಲಿ ಕಿರು ಆಣೆಕಟ್ಟು ಕಟ್ಟಿದರೆ ಘಟ್ಟದ ಬುಡದಲ್ಲಿನ ಬದುಕಷ್ಟೇ ಅಲ್ಲ, ಇಡೀ ರಾಜ್ಯದ ಮೇಲೆ ಕೆಟ್ಟ ಪರಿಣಮವಾಗುತ್ತದೆ ಎಂದು ಭೂ ವಿಜ್ಞಾನಿಗಳು ಹೇಳುತ್ತಾರೆ.

ಕೊಡಗಿನದು ಮೆದು ಮಣ್ಣಾದ್ದರಿಂದ ತೇವಾಂಶ ಹೆಚ್ಚಾದರೆ ಗುಡ್ಡಗಳು ಕುಸಿಯುತ್ತವೆ. 2018ರಲ್ಲಿ ಹಾರಂಗಿ ಜಲಾಶಯದ ಹಿನ್ನಿರಿಂದ ಗುಡ್ಡಗಳು ಆಸ್ಪೋಟಿಸಿದ್ದವು. ಗುಡ್ಡದಲ್ಲಿ ಮಿನಿ ಜಲಾಶಯ ಕಟ್ಟುವುದು ಅಪಾಯಕಾರಿ ಎಂದು ಪರಿಸರವಾದಿಗಳು ಹೇಳುತ್ತಿದ್ದಾರೆ. ಕಾಫಿ ತೋಟಕ್ಕೆ ನೀರು ಹಾಯಿಸಲು ಕಾಫಿ ಬೆಳೆಗಾರರು ಹಲವು ಕೆರೆಗಳನ್ನು ನಿರ್ಮಿಸಿದ್ದರು. 2018ರಲ್ಲಿ ಮಳೆ ಜೋರಾಗಿ ಕೆರೆಗಳು ಒಡೆದು ಬೆಟ್ಟಗಳು ಕಸಿದುಬಿದ್ದು ದೊಡ್ಡ ದುರಂತ ಸಂಭವಿಸಿತ್ತು. ಬೆಟ್ಟದ ಮೇಲೆ ಕೆರೆ ನಿರ್ಮಿಸಿದ್ದೆ ಅನಾಹುತಕ್ಕೆ ಕಾರಣವೆಂದು ಭೂ ವಿಜ್ಞಾನಿಗಳು ವರದಿ ಕೊಟ್ಟಿದ್ದಾರೆ. ಇದೆಲ್ಲ ಸರಣಿ ಮಿನಿ ಜಲಾಶಯ ಕಟ್ಟಲು ಹೊರಟವರ ಕಣ್ಣು ತೆರೆಸದಿರುವುದು ದುರಂತವಾಗಿದೆ.

PC : Bantwal News

ಕಳೆದ ವರ್ಷ ತಲಕಾವೇರಿಯಲ್ಲಿ ಗುಡ್ಡ ಸ್ಪೋಟಗೊಂಡು ಗಂಡಾಂತರ ಎದುರಾಗಿತ್ತು; ಈ ಮಳೆಗಾಲದಲ್ಲಿ ಅಣಸಿ ಗುಡ್ಡ, ಅರೆಬೈಲ್ ಗುಡ್ಡ ಉರುಳಿಬಿದ್ದಿದೆ! ಯಲ್ಲಾಪುರದ ಕಳಚೆಯೆಂಬ ಹಳ್ಳಿ ಮಣ್ಣಡಿ ಹೂತು ಹೋಗಿದೆ. ಈಗ ಪಶ್ಚಿಮ ಘಟ್ಟ ಭಗದಲ್ಲಿಕರು ಜಲ ವಿದ್ಯುತ್ ಯೋಜನೆಗಳಿಂದ ಅನೇಕ ಸಮಸ್ಯೆಯಾಗುತ್ತಿದೆ. ಮಿನಿ ಡ್ಯಾಮ್ ನಿರ್ಮಾಣವಾಗುವ ಪ್ರದೇಶದ ಗುಡ್ಡಗಳಿಂದ ನೀರು ಒಸರುತ್ತದೆ. ಇದು ಭೂ ಕುಸಿತಕ್ಕೆ ಕಾರಣವಾಗಲಿದೆ. ಚೆಕ್ ಡ್ಯಾಮ್ ನಿರ್ಮಾಣಕ್ಕೆ ತಳಪಾಯ ಬಂಡೆಯಂತೆ ಗಟ್ಟಿಯಾಗಿರಬೇಕು. ಆದರೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅಂತಹ ಗಟ್ಟಿ ಜಾಗವಿಲ್ಲ. ಮಿನಿ ಅಣೆಕಟ್ಟು ಕಟ್ಟಿದರೂ ಅವು ದೀರ್ಘ ಕಾಲ ಬಾಳಿಕೆ ಬರಲಾರದು. ಮಳೆ ನೀರಿನೊಂದಿಗೆ ಹರಿದುಬರುವ ಕಸ-ಕಡ್ಡಿ ಮಿನಿ ಡ್ಯಾಮ್‌ನಲ್ಲಿ ತುಂಬಿ ಕೊಚ್ಚಿಹೋಗುವ ಸಾಧ್ಯತೆಯೆ ಹೆಚ್ಚೆಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ. ಇದೆಲ್ಲ ಕಿರು ಡಾಮ್‌ನಿಂದ ಕುಡಿಯುವ ನೀರಿನ ದಾಹ ತಣಿಸುವ ತರಾತುರಿಯಲ್ಲಿರುವ ಪಂಡಿತರಿಗೆ ಅರ್ಥ ಮಾಡಿಸುವವರ್‍ಯಾರು?!


ಇದನ್ನೂ ಓದಿ: ನಮ್ಮ ಕೃಷಿಯಿಂದಾಗಿ ಕೋಟಿಗಟ್ಟಲೆ ಟನ್ ಮಣ್ಣು ಅರಬ್ಬೀ ಸಮುದ್ರ ಸೇರ್ತಾ ಇದೆ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಟಿಎಂಸಿಯನ್ನು ಭಷ್ಟ ಎನ್ನುವ ಮೋದಿ ಕನ್ನಡಿ ನೋಡಿಕೊಳ್ಳಬೇಕು; ಅವರ ಪಕ್ಷ ಡಕಾಯಿತರಿಂದ ತುಂಬಿದೆ: ಮಮತಾ

0
ಪಶ್ಚಿಮ ಬಂಗಾಳದಲ್ಲಿ ಕೇಂದ್ರ ತಂಡಗಳು ನಡೆಸಿರುವ ತನಿಖೆಗಳ ಕುರಿತು ಶ್ವೇತಪತ್ರ ಹೊರಡಿಸುವಂತೆ ಒತ್ತಾಯಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, "ತಮ್ಮ ಟಿಎಂಸಿ ಭ್ರಷ್ಟಾಚಾರದ ಆರೋಪ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲು ಕನ್ನಡಿಯಲ್ಲಿ...