Homeಮುಖಪುಟಗೌರಿ ಲಂಕೇಶ್ ಇಲ್ಲದ ಈ ಮೂರು ವರುಷಗಳು : ಪ್ರೊ.ಸಬಿಹಾ ಭೂಮಿಗೌಡ

ಗೌರಿ ಲಂಕೇಶ್ ಇಲ್ಲದ ಈ ಮೂರು ವರುಷಗಳು : ಪ್ರೊ.ಸಬಿಹಾ ಭೂಮಿಗೌಡ

ಇಂಥ ಜೀವಪ್ರೀತಿಯ ಗೌರಿ ತನ್ನ ನೇರ ಮತ್ತು ದಿಟ್ಟ ಮಾತಿಗಾಗಿ, ಬರಹಕ್ಕಾಗಿ ಬಲಪಂಥೀಯರಿಗೆ ನುಂಗಲಾರದ ತುತ್ತಾದುದು ವರ್ತಮಾನದ ದುರಂತಕ್ಕೆ ಸಾಕ್ಷಿ.

- Advertisement -
- Advertisement -

2017ರವರೆಗೆ ಸೆಪ್ಟೆಂಬರ್ 5 ಎಂದರೆ ನನಗೆ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹುಟ್ಟುಹಬ್ಬ ನೆನಪಾಗುತ್ತಿತ್ತು. ಅಲ್ಲಿಂದೀಚೆಗೆ ಸೆಪ್ಟಂಬರ್ 5 ಎಂದರೆ ಗೌರಿಯನ್ನು ನಾವು ಕಳಕೊಂಡ ದಿನವಾಗಿ, ನಮ್ಮಿಂದ ಗೌರಿಯನ್ನು ಕಿತ್ತುಕೊಂಡ ದಿನವಾಗಿ, ಪ್ರಜಾಪ್ರಭುತ್ವ ದೇಶದಲ್ಲಿ ಮೂಲಭೂತ ಹಕ್ಕುಗಳಲ್ಲಿ ಬರುವ ವಾಕ್ ಸ್ವಾತಂತ್ಯದ ದಮನದ ದಿನವಾಗಿ ಮತ್ತು ಬಲಪಂಥೀಯ ಮೂಲಭೂತವಾದಿ ಮನಸ್ಸುಗಳು ಜಾತ್ಯತೀತ ಮತ್ತು ವೈಚಾರಿಕ ಪ್ರಜ್ಞೆಗಳ ಮೇಲೆ ಸಾಧಿಸಲೆಳಸಿದ ಪ್ರಭುತ್ವದ ಸಂಕೇತವಾಗಿ ಕಂಡುಬರುತ್ತದೆ. ನಮ್ಮಂತವರ ಮೇಲೆ ಪ್ರಭುತ್ವವನ್ನು ಹೇರಿ ಸಾಧಿಸುವ ಅವರ ಪ್ರಯತ್ನವು ಪ್ರಯತ್ನ ಮಾತ್ರವೇ ಹೊರತು ಅದು ವಿಜಯವಲ್ಲ ಎಂಬುದನ್ನು 2017ರಿಂದ ಗೌರಿಯ ಅಸಂಖ್ಯಾತ ಸ್ನೇಹಿತರು, ಬಂಧುಗಳು ಮತ್ತು ಅಭಿಮಾನಿಗಳು ಪ್ರಭುತ್ವಕ್ಕೆ ಸಾಬೀತು ಪಡಿಸಿದ್ದೇವೆ; ಮುಂದೆಯೂ ಅದೇ ಸಂದೇಶ ನೀಡುವವರಿದ್ದೇವೆ.

ನನ್ನ ಪ್ರಕಾರ ಗೌರಿಯ ನೆನಪು ಹಂಚಿಕೊಳ್ಳುವುದೆಂದರೆ ಅಮೂರ್ತಕ್ಕೆ ಮೂರ್ತರೂಪ ಕೊಡುವ ಪ್ರಯತ್ನದಂತೆ; ಕುರುಡರು ಆನೆ ಕಂಡು ವಿವರಿಸಿದಂತೆ; ಎಲ್ಲವೂ ಅವರವರ ಭಾವಕ್ಕೆ ತಕ್ಕಂತೆ, ಅವರವರ ತೆಕ್ಕೆಗೆ ದಕ್ಕಿದಂತೆ. ಆದರೆ ಅವಷ್ಟೇ ಅಲ್ಲ, ಅದರಾಚೆಗೆ ಗೌರಿಯ ವ್ಯಕ್ತಿತ್ವ ಗೋಚರಿಸುತ್ತದೆ. ನನ್ನ ಗ್ರಹಿಕೆಗೆ ಗೌರಿ ಲಂಕೇಶ್ ಎಟುಕಿದ್ದಾಳೆ ಎಂಬುದೇ ಅಹಂಕಾರ ಎನಿಸಿಬಿಡುವ ಸ್ಥಿತಿ ಇದು.

Photo Credit: New Indian Express

ಗೌರಿಯ ಜೊತೆಗಿನ ಸಂವಾದ ಎಂದರೆ ಅದೊಂದು ಪ್ರವಾಸದಂತೆ. ಅಲ್ಲಿ ನಾನು ಕಂಡ, ಕೇಳಿದ, ಗ್ರಹಿಸಬಹುದಾದ ಸಂಗತಿಗಳಿದ್ದಂತೆ, ನನ್ನ ಎಲ್ಲೆ ದಾಟಿದ ಹತ್ತು ಹಲವು ವಿಷಯಗಳಿರುತ್ತಿದ್ದವು. ಸಪ್ತಸಾಗರದಾಚೆಗಿನ ನವನವೀನ ಸಂಗತಿಗಳು, ವ್ಯಕ್ತಿಗಳು, ಅವರ ಸಾಧನೆಗಳು ಹೀಗೇ…… ವಿಚಾರ ಸ್ಫುರಿಸಿದಂತೆ ಅತ್ಯಂತ ವೇಗವಾಗಿ ಗೌರಿ ಮಾತಾಡುತ್ತಿದ್ದರೆ, ಅವಳ ಮಾತುಗಳನ್ನು ಗ್ರಹಿಸಲು ಓಡೋಡಿ ದಣಿಯುವ ಸಂದರ್ಭಗಳು ಇದ್ದವು. ಆ ದಣಿವಿನಲ್ಲಿ ಒಂದು ಖುಷಿ ಇತ್ತು. ಕರ್ನಾಟಕದ ಮಾತ್ರವಲ್ಲ, ದೇಶದ ಅನೇಕ ಚಿಂತಕರು, ಹೋರಾಟಗಾರರು ನನಗೆ ಪರಿಚಿತರಾದುದು, ಕೆಲವರ ಜೊತೆ ಭಾವನಾತ್ಮಕ ಸಂಬಂಧ ಬೆಳೆಯುವಂತಾದುದು ಗೌರಿಯಿಂದ. ದೇಶ-ವಿದೇಶಗಳ ಸುದ್ದಿ-ವ್ಯಕ್ತಿಗಳ ಕುರಿತು ಹಾಗೂ ಸ್ಥಳೀಯ, ಪ್ರಾಂತೀಯ ಸುದ್ದಿ-ವ್ಯಕ್ತಿಗಳ ಕುರಿತು ಗೌರಿಯ ಸ್ಪಂದನೆಯಲ್ಲಿ ವ್ಯತ್ಯಾಸವಿರಲಿಲ್ಲ. ಹೀಗಾಗಿ ಅವಳ ಜೊತೆಗಿನ ಸಂವಾದ ಎಂದರೆ ಅದೊಂದು ಸುಖಕರ, ಕುತೂಹಲಕರ, ರೋಮಾಂಚಕ ಅನುಭವ ನೀಡುವ ಪ್ರಯಾಣವಾಗಿರುತ್ತಿತ್ತು.

ಗೌರಿ ಒಂದು ಸೂಜಿಗಲ್ಲಾಗಿ ನಮ್ಮ ನಡುವೆ ಇದ್ದಳು. ತನ್ನ ಅಯಸ್ಕಾಂತೀಯ ಗುಣದಿಂದ ಎಲ್ಲರನ್ನೂ ತನ್ನೆಡೆ ತನ್ನ ಧ್ಯೇಯ, ಕಾಳಜಿ ಮತ್ತು ಕರ್ತೃತ್ವ ಶಕ್ತಿಯಿಂದ ಸೆಳೆಯುತ್ತಿದ್ದಳು. ಅದೇ ವೇಳೆಗೆ ತನ್ನ ಗುಣವನ್ನು ಹತ್ತಿರಕ್ಕೆ ಬಂದವರ ಮೇಲೂ ಬೀರಿ ಸಣ್ಣ ಸಣ್ಣ ಗುಂಪುಗಳಾಗಿ, ಬಿಡಿಬಿಡಿ ವ್ಯಕ್ತಿತ್ವಗಳಾಗಿ, ಘಟಕಗಳಾಗಿ ಚಲನಶೀಲರಾಗಿದ್ದವರ ನಡುವೆ ಬಂಧುತ್ವದ ಬೆಸುಗೆಯನ್ನು ಹಾಕಿದ್ದಳು. ಆಕೆ ಬಿತ್ತಿದ ಪ್ರೀತಿಯ ಬೀಜ ಅಪಾರ. ಹೋದಲ್ಲೆಲ್ಲಾ ಅವಳದು ಇದೇ ಕಾಯಕ. ಗೌರಿಯ ಪ್ರೀತಿಯ ತೋಟದಲ್ಲಿ ಹಲವು ಸಸಿಗಳು. ತನ್ನ ಪರಿಚಯಕ್ಕೆ ಬಂದ ಒಬ್ಬೊಬ್ಬರ ಕುರಿತೂ ಕಾಳಜಿ, ಪ್ರೀತಿಯ ಮಳೆ ಸುರಿಸಿದಾಕೆ. ರೋಹಿತ್ ವೇಮುಲಾ ನನ್ನ ಒಬ್ಬ ಮಗ; ಇನ್ನೊಬ್ಬ ಮಗ ಕನ್ಹಯ್ಯ ಎಂದು ಎಲ್ಲರೊಡನೆ ಗೌರಿ ಸಂಭ್ರಮದಿಂದ ಹೇಳುತ್ತಿದ್ದಳು. ಜಿಗ್ನೇಶ್ ಮೇವಾನಿ, ಉಮರ್ ಖಾಲಿದ್ ಅವರೂ ಅವಳ ಪ್ರೀತಿಯ ತೋಟದ ಸಸಿಗಳೇ. ಯುವ ಪೀಳಿಗೆಯೊಂದು ದೇಶಾದ್ಯಂತ ಹುಟ್ಟಿಸಿದ ಕ್ರಾಂತಿಯ ಕಿಡಿ ಮತ್ತು ಅಲೆಗಳನ್ನು ನೋಡಿ ಸಂಭ್ರಮಿಸಿದಾಕೆ. ಅದಕ್ಕಾಗಿ ದೆಹಲಿವರೆಗೆ ಹೋಗಿ ಅವರೊಡನೆ ಮಾತಾಡಿ, ತನ್ನ ಬೆಂಬಲ ಸೂಚಿಸಿ ಬಂದುದು ಅವಳ ಕಾಳಜಿಯ ಗಾಂಭೀರ್ಯಕ್ಕೆ ಸಾಕ್ಷಿಯಾಗಿದೆ.

ಇಂಥ ಜೀವಪ್ರೀತಿಯ ಗೌರಿ ತನ್ನ ನೇರ ಮತ್ತು ದಿಟ್ಟ ಮಾತಿಗಾಗಿ, ಬರಹಕ್ಕಾಗಿ ಬಲಪಂಥೀಯರಿಗೆ ನುಂಗಲಾರದ ತುತ್ತಾದುದು ವರ್ತಮಾನದ ದುರಂತಕ್ಕೆ ಸಾಕ್ಷಿ. ಅವಳಿಗೆ ಇದರ ವಾಸನೆ ಬಡಿದಿರಲಿಲ್ಲ ಎಂದಲ್ಲ; ಆದರೆ ಈ ಬೆದರಿಕೆ ಕೊಲೆವರೆಗೆ ತಲುಪೀತು ಎಂದು ಅವಳಾದರೂ ಯಾಕೆ, ನಾವೂ ಊಹಿಸಿರಲಿಲ್ಲ. ಬಲಪಂಥೀಯರ ಕುತ್ಸಿತ ಮತ್ತು ಅಸಹನಶೀಲತೆಗೆ, ಕ್ರೌರ್ಯದ ಅಟ್ಟಹಾಸಕ್ಕೆ ಗೌರಿ ಮೊದಲಿನವಳೂ ಅಲ್ಲ, ಕೊನೆಯವಳೂ ಅಲ್ಲ ಎಂಬುದು ಚರಿತ್ರೆಯನ್ನು ಅರಿತವರಿಗೆಲ್ಲ ತಿಳಿದ ಸಂಗತಿ.

ಗೌರಿ ಇನ್ನಿಲ್ಲವಾದ ಸುದ್ದಿ ಬಿತ್ತರವಾದಾಗ ನಾನು ವಿಜಯಪುರದಲ್ಲಿದ್ದೆ. ಮರುದಿನ ಸಿಂಡಿಕೇಟ್ ಸಭೆ ನಿರ್ಣಯವಾಗಿತ್ತು. ಅದನ್ನು ಇತರರಿಗೆ ವಹಿಸಿಕೊಟ್ಟು ಬೆಂಗಳೂರಿಗೆ ದೌಡಾಯಿಸಿದೆವು. ಗೌರಿಯನ್ನು ಗಾಜಿನ ಪೆಟ್ಟಿಗೆಯಲ್ಲಿ ಕಂಡು ಕೊನೆ ನಮಸ್ಕಾರ ತಿಳಿಸಿ ಬಂದದ್ದಾಯಿತು. ಇದನ್ನು ನೆನಪಿಸಿಕೊಳ್ಳಲು ಎರಡು ಕಾರಣಗಳಿವೆ. ಮೊದಲನೆಯದು ಮುಂದೊಂದು ವಾರದಲ್ಲಿ ನಡೆದ ‘ನಾನು ಗೌರಿ’ ಉದ್ಘೋಷದ ಪ್ರತಿಭಟನಾ ರ್ಯಾಲಿಯು ದೇಶದ ಮೂಲೆ ಮೂಲೆಯಿಂದ ಸ್ವಯಂಪ್ರೇರಿತರಾಗಿ ಬಂದ ‘ಗೌರಿಯರ ಮಹಾಸಾಗರ’ವು ವ್ಯವಸ್ಥೆಗೆ ಅದಕ್ಕೂ ಹಿರಿದಾಗಿ ಬಲಪಂಥೀಯರಿಗೆ ದೊಡ್ಡ ಸಂದೇಶವನ್ನು ನೀಡಿತು. ಒಬ್ಬ ಗೌರಿಯನ್ನು ಕೊಂದರೆ ಸಾವಿರಾರು ಗೌರಿಯರು ನಾವು ಇದ್ದೀವಿ ಎಂಬ ಸವಾಲನ್ನು ಹಾಕಿತು; ಗೌರಿಯ ಅಪೂರ್ಣ ಕನಸುಗಳನ್ನು ಪೂರ್ಣಗೊಳಿಸಲು, ಅವಳ ಆದರ್ಶದ ಹಾದಿಯಲ್ಲಿ ಮುನ್ನೆಡೆಯಲು, ವ್ಯವಸ್ಥೆಯ ಲೋಪಗಳಿಗೆ ಮೌನಿಯಾಗಿರುವವರಲ್ಲ, ನಮ್ಮ ಸ್ಪಷ್ಟ ದನಿಯನ್ನು, ಗಟ್ಟಿದನಿಯನ್ನು ನಾವು ಇನ್ನು ಮುಂದೆಯೂ ನೀಡುವವರೆ; ಆ ಮೂಲಕ ನಮ್ಮಿಂದ ಕಿತ್ತುಕೊಂಡ ಗೌರಿಯನ್ನು ಅಜರಾಮರಗೊಳಿಸುತ್ತೇವೆ; ನಮ್ಮ ಅಂತರಂಗದಲ್ಲಿ ಪ್ರತಿಷ್ಠಾಪಿಸಿಕೊಳ್ಳುತ್ತೇವೆ ಎಂದು ಸಾರಿದ ಸಮಾವೇಶವದು. ಗೌರಿಯ ಅವ್ವ ಮತ್ತು ತಂಗಿಯು ಈ ಗೌರಿ ಬಳಗ ಕಂಡು ಭಾವುಕವಾದ ಕ್ಷಣಕ್ಕೆ ಸಮಾವೇಶ ಸಾಕ್ಷಿಯಾಯಿತು.

ಎರಡನೆಯದು ತುಂಬ ತಡವಾಗಿ ನನ್ನ ಅರಿವಿಗೆ ಬಂದ ಸಂಗತಿ. ನಾನು ವಿಜಯಪುರದಿಂದ ಬೆಂಗಳೂರಿಗೆ ಸೆಪ್ಟಂಬರ್ 5ರ ಅಪರಾತ್ರಿ ಓಡೋಡಿ ಬಂದರೆ, ಅತ್ತ ಅವಳ ಕೊಲೆಗಾರನೆಂಬ ಅಪಾದಿತ ವಾಗ್ಮೋರೆ ತಾನು ಗುರಿಯಿಟ್ಟ ಗುಂಡು ಗೌರಿಯನ್ನು ಘಾಸಿಗೊಳಿಸಿತೋ ಇಲ್ಲವೋ, ಅವಳು ಕೊಲೆಯಾದಳೋ ಇಲ್ಲವೋ ಎಂಬುದು ತಿಳಿಯದೆ, ಅಪರಾಧ ಜಗತ್ತಿನಲ್ಲಿ ಪಾದಾರ್ಪಣೆ ಮಾಡಿದ ದಿಗ್ಬಾಂತಿಯಲ್ಲಿ ತಲೆ ಮರೆಸಿಕೊಂಡು ವಿಜಯಪುರದತ್ತ ಹೊರಟ್ಟಿದ್ದ!. ವಿಜಯಪುರದ ಹತ್ತಿರದ ಸಿಂಧಗಿ ಎಂಬುದು ಆತನ ಊರು ಎಂದು ತಿಳಿದಾಗ ಮೈಯೆಲ್ಲಾ ಮತ್ತೆ ಜುಮ್ಮೆಂದಿತ್ತು. ಕಾಂಗ್ರೆಸ್ ಸರಕಾರ ಮತ್ತು ಅದರಲ್ಲೂ ಅಂದಿನ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಆಸ್ಥೆ ತೆಗೆದುಕೊಂಡ ಕಾರಣದಿಂದ ಜಗತ್ತಿಗೇ ಗೊತ್ತಿದ್ದ ಸತ್ಯಕ್ಕೆ ನ್ಯಾಯಾಲಯ ಅಪೇಕ್ಷಿಸುವ ಸಾಕ್ಷ್ಯಾಧಾರಗಳು ದೊರೆಯುವಂತಾಯಿತು. ಇನ್ನು ಅಪರಾಧಿಗಳಿಗೆ ಶಿಕ್ಷೆ ನೀಡುವಂತಹ ದಿನ ಬಂದೀತೇ ಎಂಬುದು ಯಕ್ಷಪ್ರಶ್ನೆ. ಇಷ್ಟೆಲ್ಲಾ ಪ್ರಯತ್ನಗಳು ‘ಸಾಧನ’ಗಳನ್ನು ಬಯಲಿಗಿಡಬಹುದೇ ಹೊರತು ಅದರ ಹಿಂದಿನ ಸೈದ್ಧಾಂತಿಕತೆಯ ರೂವಾರಿಗಳನ್ನು ಮುಟ್ಟಲಾಗದ ಅಪಾಯಕಾರಿ ವರ್ತಮಾನ ನಮ್ಮದು ಎಂಬುದೇ ನಮ್ಮ ದುಗುಡ.

Photo Credit: Janta Ka Reporter

ಗೌರಿಯನ್ನು ಕಳೆದುಕೊಂಡ ಈ ಮೂರು ವರ್ಷಗಳಲ್ಲಿ ಅವಳ ಆಶಯವವನ್ನು ಸಾಕಾರಗೊಳಿಸಲು ನಾವು ಮಾಡಿದ ಕೆಲಸಗಳ ಹೆಜ್ಜೆ ಗುರುತು ಕೂಡ ಮುಖ್ಯ. ಸೂತ್ರಹರಿದ ಗಾಳಿಪಟದಂತೆ ನಾವೆಲ್ಲ ಚೆಲ್ಲಾಪಿಲ್ಲಿ ಆಗಿಬಿಡ್ತೀವೇನೋ ಎಂಬ ಭಯವಿತ್ತು. ಆರಂಭಕಾಲದ ನಮ್ಮ ರೋಷ ದಿನಕಳೆದಂತೆ ಮೊನಚು ಕಳೆದುಕೊಂಡಿತೇನೋ ಎಂಬ ಅಳುಕು ಚುಚ್ಚುತ್ತಿತ್ತು. ಆದರೆ ಗೌರಿಯನ್ನು ಅಜರಾಮರಗೊಳಿಸಲು ಇದುವರೆಗೆ ನಡೆಸಿದ ಕೆಲಸಗಳು ಗುರುತರವೆಂಬಂತೆ ಕಾಣತೊಡಗಿದೆ. ‘ನಾನುಗೌರಿ’ ಪತ್ರಿಕೆಯನ್ನು ನಿರಂತರ ಹೊರತರುವ ಯತ್ನದಲ್ಲಿ ಎದುರಿಸಿರುವ ಹಲವಾರು ಸಂಕಷ್ಟಗಳು ವಾಸ್ತವವಾದರೂ ಆ ಕಷ್ಟಗಳೇ ನಮ್ಮೊಳಗೆ ಐಕ್ಯತೆಯ ಅಂಟಿಗೆ ಕಾರಣವೂ ಆಗಿವೆ. ಆ ಕಷ್ಟಗಳೇ ಪತ್ರಿಕೆಗೆ ಗೌರಿಯ ಬಂಧುಗಳಿಂದ ನಿರಂತರವಾಗಿ ಲೇಖನಗಳನ್ನು ತರಿಸಿಕೊಳ್ಳುವ ಯಶಸ್ಸಿಗೆ ಕಾರಣವಾಗಿವೆ. ಓದುಗ ವಲಯವನ್ನು ಮರಳಿ ಕಟ್ಟುವ ಸವಾಲನ್ನು, ಹೊಸ ಆರ್ಥಿಕ ಬಿಕ್ಕಟ್ಟುಗಳು, ಕೊರೋನಾ ವಿಪತ್ತು ಪತ್ರಿಕೆಗೆ ಹೊಸ ಹೊಸ ಸಂಕಷ್ಟಗಳನ್ನು ಒಡ್ಡಿವೆ. ಇಂತಹ ಇಕ್ಕಟ್ಟು-ಬಿಕ್ಕಟ್ಟುಗಳೇ, ಸವಾಲುಗಳೇ ಹೊಸ ಶೋಧಕ್ಕೆ ಮನುಷ್ಯರನ್ನು ಪ್ರೇರಿಸುತ್ತವೆ/ ಪ್ರೇರಿಸಿವೆ; ಬದುಕಿನ ಸಾಧನೆಯ ನಿರಂತರತೆಗೆ ದಾರಿ ತೋರುತ್ತವೆ/ ತೋರಿವೆ.

ಗೌರಿ ಇದ್ದಾಗಲೇ ‘ನಾವು ಗೆಳತಿಯರ ಸುಭದ್ರ ಗುಂಪನ್ನು ಕಟ್ಟಬೇಕು, ಹತ್ತು ಹಲವು ಯೋಜನೆಗಳನ್ನು ಹಾಕಿಕೊಂಡು ಕೆಲಸ ಮಾಡಬೇಕು’ ಎಂದು ಆಗಾಗ ಹೇಳುತ್ತಿದ್ದಳು. ಇನ್ನೊಂದು ‘ನಾನು ಇರುವಾಗಲೇ ಈ ಪತ್ರಿಕೆಯನ್ನು ಟ್ರಸ್ಟ್‌ನ ಅಡಿಯಲ್ಲಿ ತರಬೇಕು, ಸಾಮುದಾಯಿಕ ಒಡೆತನದಲ್ಲಿ ಇದು ನಡೆಯುವಂತಾಗಬೇಕು’ ಎನ್ನುತ್ತಿದ್ದಳು. ಮೊದಲನೆಯದು ಇದುವರೆಗೂ ನಡೆಯಲಿಲ್ಲ. ಎರಡನೆಯದು ಬೇರೆ ನೆಲೆಯಲ್ಲಿ ಊರ್ಜಿತಕ್ಕೆ ಬಂದಿದೆ.

ಮೊನ್ನೆ ಭೇಟಿಯಾದ ಡಾ.ವಾಸು, ನರಸಿಂಹಮೂರ್ತಿ ಮತ್ತು ಸುನಿಲ್ ಶಿರಸಂಗಿ ಇವರುಗಳು ಹೊಸ ಕಾಲದ ಮಾಧ್ಯಮದ ವಿಸ್ತರಣೆಯ ಕನಸುಗಳನ್ನು ನಮ್ಮೊಡನೆ ಹಂಚಿಕೊಂಡರು. ಅದಕ್ಕಾಗಿ ವಿಸ್ತಾರವಾದ ಓದುಗರ ವೇದಿಕೆಯನ್ನು ನಿರ್ಮಿಸಿಕೊಳ್ಳುವ ಸಾಧ್ಯತೆಗಳನ್ನು ಮುಂದಿಟ್ಟರು. ಅದಕ್ಕಾಗಿ ಕಳೆದ ಆರು ತಿಂಗಳಿನಿಂದ ನಡೆಸಿದ ಸಭೆಗಳು, ಚರ್ಚೆಗಳು, ಸಿದ್ದತೆಗಳ ಕುರಿತು ವಿವರಿಸಿದರು. ಇದೊಂದು ಮಾದರಿಯಾದ ವೇದಿಕೆ ಮಾತ್ರವಲ್ಲ; ವರ್ತಮಾನದ ಜರೂರಿನ ವೇದಿಕೆ.

ಈಗ ವಿಶೇಷ ಸಂಚಿಕೆಗಳಿಗೆ ಸ್ಥಳೀಯ ಮತ್ತು ದೇಶೀಯ ಮಟ್ಟದ, ಅದರಾಚೆಗೆ ಅಂತರಾಷ್ಟ್ರೀಯ ನೆಲೆಯ ಬರಹಗಾರರು ಬರೆಯುತ್ತಿರುವುದನ್ನು ನೋಡುತ್ತಿದ್ದೇನೆ. ಅದೇ ರೀತಿ ವಿಸ್ತಾರ ಓದುಗ ವಲಯದಲ್ಲೂ ಬರುವ ದಿನಗಳು ಕಾಣುತ್ತಿವೆ. ಗೌರಿಯ ನೆನಪಲ್ಲಿ, ನೆಪದಲ್ಲಿ, ಇದು ಹುಟ್ಟುತ್ತಿರುವುದು ತುಂಬಾ ಮೌಲಿಕವೂ ಸ್ತುತ್ಯರ್ಹವೂ ಆದ ಕೆಲಸವಾಗಿದೆ.


ಇದನ್ನು ಓದಿ: ಬದುಕಿದ್ದರೆ ಗೌರಿ ಮೇಡಂ ಹೀಗನ್ನುತ್ತಿದ್ದರೇನೋ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...