Homeಮುಖಪುಟಪ್ರೀತಿಯ ಸಂಗಾತಿ ಗೌರಿಗೆ ಒಂದು ಪತ್ರ : ವಿ.ಎಸ್ ಶ್ರೀಧರ್

ಪ್ರೀತಿಯ ಸಂಗಾತಿ ಗೌರಿಗೆ ಒಂದು ಪತ್ರ : ವಿ.ಎಸ್ ಶ್ರೀಧರ್

ನಿನ್ನ ಗೆಳೆಯ ಪ್ರಕಾಶ ರೈ ಹೇಳಿದ ಪ್ರಕಾರ ‘ನಾವು ಗೌರಿಯನ್ನು ಹೂತಿಲ್ಲ; ಬಿತ್ತಿದ್ದೇವೆ’ ಎಂಬ ಮಾತನ್ನು ನಿಜಮಾಡುವಂತೆ ನೀನು ಪ್ರತಿ ದಿನವೂ ನಮ್ಮಲ್ಲಿ ಬೆಳೆಯುತ್ತಿದ್ದೀಯ. ನೀನು ಬಿಟ್ಟು ಹೋದ ಪತ್ರಿಕೆಯನ್ನು ರೂಪಿಸುತ್ತಿರುವ ಪತ್ತ್ರಿಕಾ ತಂಡ ನಿನ್ನನ್ನು ಸದಾ ತನ್ನ ಎದೆಯಲ್ಲಿ ಇರಿಸಿಕೊಂಡು, ತನ್ನೆಲ್ಲಾ ಕಷ್ಟ-ನಷ್ಟಗಳ ನಡುವೆ ನಿನ್ನನ್ನು ಪ್ರತೀ ವಾರ ಓದುಗರತ್ತ ಕೊಂಡೊಯ್ಯಿತ್ತಿದೆ.

- Advertisement -
- Advertisement -

ನಿನ್ನನ್ನು ನಮ್ಮಿಂದ ಅಗಲಿಸಿ ಈಗ ಮೂರು ವರ್ಷಗಳಾಗಿವೆ. ಹಾಗೆ ಮಾಡಿದ ಹಿಂದುತ್ವ ಮತಾಂಧರುಗಳು ಆ ಮೂಲಕ ನಿನ್ನ ಮಾತುಗಳನ್ನು, ನೀನು ನಂಬಿ ಹೋರಾಡುತ್ತಾ ಬಂದ ತತ್ವಗಳನ್ನೂ ಮುಗಿಸಿಬಿಡಬಹುದು ಎನ್ನುವುದನ್ನು ನೀನು ಸುಳ್ಳುಮಾಡಿದ್ದೀಯಾ. ಹಾಗೆ ನೋಡಿದರೆ ನಿನ್ನ ದೇಹದ ಮೇಲೆ ಗುಂಡು ಹಾರುತ್ತಿದ್ದಂತೆಯೇ, ನೀನು ಬಹಳ ಎತ್ತರಕ್ಕೆ ಹೋಗಿಬಿಟ್ಟೆ. ನಿನ್ನ ಧ್ವನಿ, ನಿನ್ನ ನೋವು, ನಿನ್ನ ಆಕ್ರೋಶ, ನಿನ್ನ ಜನ ಪ್ರೀತಿ ಆ ಕ್ಷಣದಲ್ಲಿಯೇ ನೂರು ಪಟ್ಟು, ಸಾವಿರ ಪಟ್ಟು ಹೆಚ್ಚಾಯಿತು. ನೀನು ಜೀವಿಸಿರುವಾಗ ಕಂಡಿರದ, ಕಾಣದ – ಕೇವಲ ಈ ನಾಡು ಮತ್ತು ದೇಶವಲ್ಲದೆ, ಜಾಗತಿಕ ಮಟ್ಟದಲ್ಲಿ- ಲಕ್ಷಾಂತರ ಜನರ ಬೆಂಬಲ, ನಿಟ್ಟುಸಿರು, ಪ್ರೀತಿಯನ್ನು ಅಲ್ಲಿಂದಲೇ ನೋಡಿರುತ್ತೀಯ.

ವ್ಯಂಗ್ಯವೆಂದರೆ, ನಿನ್ನನ್ನು ಚೆನ್ನಾಗಿ ಬಲ್ಲ, ನೀನು ಬಹುವಾಗಿ ಇಷ್ಟಪಡುತ್ತಿದ್ದ ನಿನ್ನ ಅನೇಕ ಗೆಳೆಯ-ಗೆಳತಿಯರು, ನಿನ್ನನ್ನು ದೊಡ್ಡ ದ್ವನಿಯ, ಮೆಲುಮಾತುಗಳಲ್ಲಿ ಹೇಳಬಹುದಾದ್ದನ್ನು ಚೀರಿ ಹೇಳುವ ವ್ಯಕ್ತಿ ಎಂದು ಪ್ರೀತಿಯಿಂದಲೇ ಟೀಕಿಸುತ್ತಿದ್ದರು. ಇದು ಕೇವಲ ಅವರ ಸ್ವಂತ ಧ್ವನಿಯಾಗಿರದೆ ನಮ್ಮ ಅನಿಸಿಕೆಗಳನ್ನು ಆದಷ್ಟು ಸೂಕ್ಷ್ಮವಾಗಿ, ಸಾಧ್ಯವಾದರೆ ದ್ವಂದ್ವಾತ್ಮಕವಾಗಿ ಹೇಳುವುದೇ ಹೆಚ್ಚು ಮೌಲ್ಯಾತ್ಮಕ ಎಂದು ಭಾವಿಸುವ ಕನ್ನಡ ಸಂಸ್ಕೃತಿಯ ಯಾವತ್ತೂ ನಿಲುವಿನ ಅಭಿವ್ಯಕ್ತಿಯೂ ಆಗಿತ್ತು. ಇದು ನಮ್ಮ ಇಡೀ ಕನ್ನಡ ನಾಡಿನ ಬಹುತೇಕ ಲೇಖಕರು, ಚಿಂತಕರು ಪಾಲಿಸಿಕೊಂಡು ಬಂದ ಸಂಪ್ರದಾಯವೂ ಹೌದು.

ನಾವು ಯಾವುದೇ ಅನ್ಯಾಯವಾಗಲೀ, ಶೋಷಣೆಯ ವಿರುದ್ಧದ ಕೂಗನ್ನಾಗಲೀ, ನಮ್ಮ ನೆರೆಯವರಾದ ತಮಿಳು, ಮಲೆಯಾಳಿ ಅಥವಾ ತೆಲುಗು ಭಾಷಿಕರಂತೆ ಗಟ್ಟಿಯಾಗಿ ದೊಡ್ಡ ಧ್ವನಿಯಲ್ಲಿ ಚೀರುವವರಲ್ಲ. ಈ ಭಾಷೆಗಳಲ್ಲಿರುವಂತೆ ನಮ್ಮಲ್ಲಿ ಅಂಥಾ ಮೈನವಿರೇಳಿಸುವ ಘೋಷಣೆಗಳು, ಬಹುಷಃ ಈ ಕಾರಣಕ್ಕೆ ಇಲ್ಲ. ‘ಆವಾಜ್ ದೋ, ಹಮ್ ಏಕ್ ಹೈ’ ಅಂಥಾ ಘೊಷಣೆಗೆ ಇರುವ ಜೋಷ್ ಮತ್ತು ಎನರ್ಜಿ, ಅದರ ಕನ್ನಡ ಅವತರಣಿಕೆಯಾದ, ‘ಕೂಗಿ ಹೇಳಿ, ನಾವೆಲ್ಲಾ ಒಂದು’ ಎನ್ನುವುದಕ್ಕೆ ಇಲ್ಲ. ಇರಲಿ. ಆದರೆ, ನಿನ್ನನ್ನು ನೆನೆವಾಗ ಜನಮಾನಸದಿಂದ ಮೂಡಿಬಂದ ‘ನಾವೆಲ್ಲಾ ಗೌರಿ, ನಾನೂ ಗೌರಿ’ ಘೋಷಣೆಗೆ ಹಿಂದೆಂದೂ ಇಲ್ಲದ ಹೊಸ ಶಕ್ತಿ, ಕಸುವು, ರೋಷ ಮತ್ತು ಅನನ್ಯ ಪ್ರೀತಿ ಸೇರಿಕೊಂಡು ನಮ್ಮ ಹೋರಾಟಕ್ಕೇ ಹೊಸ ಭಾಷ್ಯ ಬರೆಯಿತು. ಇದು ಕನ್ನಡ ಜನಪದ ನಿನ್ನನ್ನು ತನ್ನೊಳಗೆ ಇಳಿಸಿಕೊಂಡ ಪರಿ. ನೀನು ಕನ್ನಡಕ್ಕೆ ನೀಡಿದ ದೊಡ್ಡ ಕಾಣಿಕೆಗಳಲ್ಲಿ ಒಂದು.

ನಿನ್ನ ನೆನಪಿಗೆ, ನೀನು ಬದುಕಿದ ಮೌಲ್ಯಕ್ಕೆ, ನಿನ್ನನ್ನು ಕಳೆದುಕೊಂಡ ದುಖಃಕ್ಕೆ ಜನ ಎಲ್ಲೆಲ್ಲಿಂದಲೋ ಧ್ವನಿ ಗೂಡಿಸಿದರು. ಆ ಮೆರವಣಿಗೆಯಲ್ಲಿ, ನಂತರ ಗೌರಿ ಸ್ಮಾರಕ ಟ್ರಸ್ಟ್ ನಡೆಸಿದ ಒಂದೊಂದು ಸಮಾವೇಶದಲ್ಲೂ ಸೇರಿದ ಜನಸಂದಣಿಯನ್ನು ನೋಡಿ, ‘ನೋಡೋ, ನಾನು ಎಷ್ಟು ಪಾಪ್ಯುಲರ್!?’ ಎಂದು ನೀನು ನಿನ್ನ ಕಣ್ಣು ಮಿಟುಕಿಸಿ, ಜಂಬದ ಇನಿತೂ ಹಂಗಿಲ್ಲದೆ ನಮಗೆ ಹೇಳುವುದನ್ನು ನಾವು ಮೌನದಲ್ಲಿ ಕೇಳಿಸಿಕೊಂಡಿದ್ದೇವೆ. ಕಿಕ್ಕಿರಿದ ಸಭೆಯಲ್ಲಿ ವಿವಿಧ ರೀತಿಯ ಸಂಗೀತ, ಭಾಷಣಗಳ ಮಧ್ಯೆ ಕೂಡ, ಹಿನ್ನೆಲೆಯಲ್ಲಿದ್ದ ನಿನ್ನ ಚಿತ್ರ ನೋಡುತ್ತಾ, ಎಲ್ಲೋ ಮೂಲೆಯಲ್ಲಿ ನಿಂತು ಎರಡು ಹನಿ ಕಣ್ಣೀರು ಹಾಕಿದ್ದೇವೆ. ಅದರಲ್ಲೂ ಕೀಮೋಥೆರಪಿ ಮಾಡಿಸಿಕೊಂಡು ಹೈರಾಣಾಗಿದ್ದ ಹಿರಿಯ ಸುಬ್ಬಯ್ಯನವರು ಹಾಗೂ ಮೂಗಿಗೆ ಆಮ್ಲಜನಕದ ನಳಿಕೆ, ಅದರ ಜತೆ ಇರುವ ಸಿಲಿಂಡರ್ ಹೊತ್ತುಕೊಂಡೇ, ‘ನಾನು ನಗರ ನಕ್ಸಲ್’ ಎಂಬ ಪ್ಲಕಾರ್ಡನ್ನು ತಗುಲಿಹಾಕಿಕೊಂಡು ಬಂದ ಗಿರೀಶ ಕಾರ್ನಾಡರು ಇಡೀ ಸಭೆಯನ್ನು ರೋಮಾಂಚಿತಗೊಳಿಸಿದ್ದನ್ನು ನೋಡಿ ದಂಗಾಗಿದ್ದೇವೆ. ನಿನ್ನ ಗೆಳೆಯ ಪ್ರಕಾಶ ರೈ ಹೇಳಿದ ಪ್ರಕಾರ ‘ನಾವು ಗೌರಿಯನ್ನು ಹೂತಿಲ್ಲ; ಬಿತ್ತಿದ್ದೇವೆ’ ಎಂಬ ಮಾತನ್ನು ನಿಜಮಾಡುವಂತೆ ನೀನು ಪ್ರತಿ ದಿನವೂ ನಮ್ಮಲ್ಲಿ ಬೆಳೆಯುತ್ತಿದ್ದೀಯ. ನೀನು ಬಿಟ್ಟು ಹೋದ ಪತ್ರಿಕೆಯನ್ನು ರೂಪಿಸುತ್ತಿರುವ ಪತ್ತ್ರಿಕಾ ತಂಡ ನಿನ್ನನ್ನು ಸದಾ ತನ್ನ ಎದೆಯಲ್ಲಿ ಇರಿಸಿಕೊಂಡು, ತನ್ನೆಲ್ಲಾ ಕಷ್ಟ-ನಷ್ಟಗಳ ನಡುವೆ ನಿನ್ನನ್ನು ಪ್ರತೀ ವಾರ ಓದುಗರತ್ತ ಕೊಂಡೊಯ್ಯಿತ್ತಿದೆ. ಅಲ್ಲದೆ ‘ನಾನು ಗೌರಿ’ ಎಂಬ ಅಂತರ್ಜಾಲ ಸಂಚಿಕೆಗಳನ್ನೂ ಹೊರತರುತ್ತಿದೆ. ಈಗ ನೀನೊಬ್ಬ ಐಕಾನ್, ನಮ್ಮ ಸುಪ್ತ ಪ್ರಜ್ಞೆಯ ಪ್ರತೀಕ. ಅಭಿವ್ಯಕ್ತಿ ಸ್ವಾತಂತ್ರ್ಯ, ಮುಕ್ತ ಚಿಂತನೆಯ ಹೋರಾಟಕ್ಕೆ ಕನ್ನಡನಾಡು ನೀಡಿರುವ ಜಾಗತಿಕ ಕೊಡುಗೆ.

Image Courtesy: Newsclick

ನೀನು ಬಿಟ್ಟುಹೋದ ಈ ಮೂರು ವರ್ಷಗಳಲ್ಲಿ ಏನೇನು ನಡೆದು ಹೋಗಿದೆ! ಇಡೀ ಜಗತ್ತಿನಲ್ಲಿ ನೀನು ದ್ವೇಷಿಸುತ್ತಿದ್ದ ಬಲಪಂಥೀಯ ಶಕ್ತಿಗಳೇ ಮೇಲುಗೈ ಪಡೆದಿವೆ. ಅದರ ಭಾಗವಾಗಿಯೇ ಇಂದು ಇನ್ನಷ್ಟು ಬಲಗೊಂಡ ಕೋಮುವಾದಿ ಪಕ್ಷ ನಮ್ಮ ದೇಶದಲ್ಲಿ ಮತ್ತೊಮ್ಮೆ ಆಳುತ್ತಿದೆ. ದ್ವೇಷ, ಹಗೆತನ, ಅಸಹಿಷ್ಣುತೆ ಇನ್ನೂ ಹೆಚ್ಚಾಗಿದೆ. ತನಗಾಗದವರನ್ನು, ತನ್ನ ಕೋಮುವಾದಿ ಸಿದ್ಧಾಂತವನ್ನು ವಿರೋಧಿಸುವವರನ್ನು ತಮ್ಮ ಕಾಲಾಳುಗಳ ಮೂಲಕ ನೇರವಾಗಿ ಮುಗಿಸಿಬಿಡುವ ಅಗತ್ಯವೇ ಇನ್ನು ಮುಂದೆ ಇಲ್ಲವೆನ್ನುವಂತೆ, ಪ್ರಭುತ್ವ ತನ್ನ ಸಾಂವಿಧಾನಿಕ ಅಂಗಾಂಗಗಳನ್ನೇ ಬಳಸಿ ಪ್ರತಿಭಟನಕಾರರನ್ನು, ಜನರ ಪರವಾಗಿ ಧ್ವನಿ ಎತ್ತುವವರನ್ನು ಕಾನೂನಿನ ಮೂಲಕವೇ ಮೌನವಾಗಿಸುವ ಹೊಸ ತಂತ್ರ ಶುರುಮಾಡಿದೆ. ನೀನು ಗೌರವಿಸುತ್ತಿದ್ದ ಅನೇಕ ಪ್ರತಿಭಾವಂತ ಪ್ರಜಾತಂತ್ರವಾದಿಗಳು, ಜನಪರ ಹೋರಾಟಗಾರರು ಇಂದು ಕರಾಳ ಶಾಸನದಡಿಯಲ್ಲಿ ಬಂಧಿತರಾಗಿ, ಜಾಮೀನು ಕೂಡ ಸಿಗದಿರುವ ಪರಿಸ್ಥಿತಿಯಲ್ಲಿದ್ದಾರೆ. ಮೇಲುನೋಟಕ್ಕೇ ಸ್ಪಷ್ಟವಾಗಿ ಕಾಣುವ ಸುಳ್ಳು ಆರೋಪಗಳನ್ನು ಅವರ ಮೇಲೆ ಹೇರಲಾಗಿದೆ. ಇದೊಂದೂ ಗೊತ್ತಿಲ್ಲದ ಹಾಗೆ, ನ್ಯಾಯಾಂಗಗಳು ಕಣ್ಣು ಮುಚ್ಚಿಕೊಂಡಿವೆ. ಹೀಗೆ ಕಾನೂನಿನ ಚೌಕಟ್ಟಿನಲ್ಲೇ, ಸಂವಿಧಾನದ ನೆರಳಿನಲ್ಲೇ ಅಪ್ರಜಾತಾಂತ್ರಿಕ ಆಡಳಿತವನ್ನು ನಡೆಸಿಕೊಂಡು ಹೋಗಬಹುದಾದ ನವ ಉದಾರವಾದ ಇಂದು ಭಾರತದಲ್ಲಿ ಮೇಲುಗೈ ಪಡೆದಿದೆ. ಆದರೆ ಅದು ಆಳದಲ್ಲಿ ಅತ್ಯಂತ ಅಸಭ್ಯವಾದ, ಉದಾರವಿರೋಧಿತನವನ್ನು ತನ್ನ ಗರ್ಭದಲ್ಲಿ ಧರಿಸಿಕೊಂಡಿದೆ. ಹೇಗೆ ‘ಮುಕ್ತ ಮಾರುಕಟ್ಟೆ’ ಕೇವಲ ಬಂಡವಾಳಶಾಹಿಗಳಿಗೆ ಮಾತ್ರ ತೆರೆದುಕೊಂಡ, ನಿಜವಾದ ಅರ್ಥದಲ್ಲಿ, ನಿರ್ಬಂಧಗಳಿಗೆ ಒಳಗಾಗಿರುವ ವ್ಯವಸ್ಥೆಯೋ ಹಾಗೆ, ಈ ಲಿಬರಲಿಸಂ ಕೂಡ. ಈ “ಇಲ್ಲಿಬರಲಿಸಂ” ತತ್ವಕ್ಕೆ ಪಶ್ಚಿಮದಲ್ಲಿ ಸುಮಾರು 30 ವರುಷಗಳ ಇತಿಹಾಸವಿದೆ. ಅದು ಆಳದಲ್ಲಿ ಬಿಳಿಯರ ಶ್ರೇಷ್ಠತೆ, ಗುಲಾಮಗಿರಿ, ಜನಾಂಗೀಯ ಹತ್ಯೆ, ಸಾಮ್ರಾಜ್ಯಶಾಹಿ ಇತ್ಯಾದಿಗಳ ಪರವಾಗಿದ್ದು, ಹೊರನೋಟಕ್ಕೆ ಅತ್ಯಂತ ಸಂಭಾವಿತವಾದ ಪ್ರಜಾತಾಂತ್ರಿಕ ಮುಸುಗನ್ನು ಧರಿಸಿರುತ್ತದೆ. ವ್ಯಂಗ್ಯವೆಂದರೆ, ಸದಾ ಸ್ವದೇಶಿ, ಸ್ವಧರ್ಮ, ದೇಶಪ್ರೇಮಗಳನ್ನೇ ಜಪಿಸುವ ನಮ್ಮ ದೇಶದ ಹಿಂದುತ್ವ ಫ್ಯಾಸಿಸ್ಟ್ ಪ್ರಭುತ್ವ, ಪಶ್ಚಿಮದ ಈ ತಾತ್ವಿಕತೆಯನ್ನೇ ತನ್ನ ಆದರ್ಶವಾಗಿ ಸ್ವೀಕರಿಸಿದೆ.

ಈಗ ಇಡೀ ಜಗತ್ತಿನಲ್ಲಿ ಕೋವಿಡ್ ಎಂಬ, ಕಣ್ಣಿಗೆ ಕಾಣದ ಮಹಾ ವೈರಸ್ ಆವರಿಸಿರುವುದನ್ನು, ಅದರಿಂದ ಜನರು, ಅದರಲ್ಲೂ ದುಡಿಯುವ ಜನರು, ಹೇಗೆ ಹಿಂದೆಂದೂ ಕಂಡರಿಯದ ಬವಣೆಗೆ ತುತ್ತಾಗಿರುವುದನ್ನು ನೀನು ನೋಡಿರುತ್ತೀಯಾ. ಮೌನದಲ್ಲಿ ತಮ್ಮ ಊರುಗಳಿಗೆ ಗುಳೆಹೋದ ಲಕ್ಷಾಂತರ ಮಂದಿ ಕಾರ್ಮಿಕರನ್ನು, ಅವರ ಮಕ್ಕಳನ್ನು ನೋಡಿ ನಿನ್ನ ಮನಸ್ಸು ಕರಗಿಹೋಗಿರುತ್ತದೆ. ಆದರೆ ಒಂದು ಪ್ರಬಾವಶಾಲಿ ವ್ಯಾಕ್ಸೀನು ತಯಾರಾಗಿ ಈ ವೈರಸ್ಸಿನ ಅಬ್ಬರ ಇನ್ನು ಕೆಲವು ತಿಂಗಳುಗಳಲ್ಲಿ ಕಡಿಮೆಯಾಗಬಹುದು. ಆದರೆ, ಜಾಗತಿಕ ಮಟ್ಟದ ಈ ಲಿಬರಲ್ ವೈರಸ್ ತೊಲಗಬೇಕಾದರೆ, ಅದನ್ನು ಬುಡಸಮೇತ ಕಿತ್ತುಹಾಕಬಹುದಾದ ವ್ಯಾಕ್ಸೀನ್ ತಯಾರಾಗ ಬೇಕಾದರೆ, ಇನ್ನೊಂದು ಕ್ರಾಂತಿಯೇ ಅಗಬೇಕು. ಅದಕ್ಕೆ ದೊಡ್ಡ ಮಟ್ಟದ, ದೊಡ್ಡ ಧ್ವನಿಯ ಹೋರಾಟವೇ ಬೇಕು. ಅಲ್ಲಿಯವರೆಗೆ ನಾವು ಯಾರು ಏನೇ ಹೇಳಲಿ, ದೊಡ್ಡ ಗಂಟಲಿನಲ್ಲಿ ಚೀರಿ ಹೇಳುತ್ತಲೇ ಇರಬೇಕು. ಕೆಲವರ ಈ ಚೀರಾಟ, ಜನರ ಹೋರಾಟದ ಮೂಲಕ ಎಲ್ಲರ ಧ್ವನಿಯಾದಾಗ, ಈ ಚೀರಾಟವೇ ಹೊಸ ಕಾವ್ಯವಾಗುವುದು. ಘೋಷಣೆಗೆ ಹೊಸ ಶಕ್ತಿ ಬರುವುದು. ಆಗ ಅದು ನಮ್ಮ ಸಂಸ್ಕೃತಿಯ ಹೆಮ್ಮೆಯ ಭಾಗವಾಗುವುದು. ನಿನ್ನ ಅಬ್ಬರದ ಧ್ವನಿ ನಿನ್ನೊಬ್ಬಳದ್ದೇ ಅಲ್ಲ ಎನ್ನುವ ನಿನ್ನ ತಿಳಿವು, ಎಲ್ಲರ ಅರಿವಿನಲ್ಲಿ ಮೂಡುವುದು.

photo credit: Scroll.in

ಮತ್ತೆ ಕಳೆದ ಮೂರು ವರುಷಗಳಲ್ಲಿ, ನಿರಾಸೆಯ ಮಧ್ಯೆಯೂ ಹೊಸ ಭರವಸೆಯೊಂದು ಚಿಗುರೊಡೆಯಿತು. ಅದು ಅತ್ಯಂತ ಅಪ್ರಜಾತಾಂತ್ರಿಕವಾದ ಸಿ.ಎ.ಎ. ವಿರುದ್ಧ, ಜನರು ನಡೆಸಿದ ಹೋರಾಟ. ಇಡೀ ಭಾರತದಲ್ಲಿ ಹರಡಿದ ಈ ಚಳವಳಿಯಲ್ಲಿ ನಿನ್ನ ಅತ್ಯಂತ ಪ್ರೀತಿಪಾತ್ರರಾದ ಜನ ತಂಡ, ತಂಡವಾಗಿ ಭಾಗವಹಿಸಿದ್ದನ್ನು ನೋಡಿ ನೀನು ಹೆಮ್ಮೆ ಪಟ್ಟಿರುತ್ತೀಯ. ಇಲ್ಲಿದ್ದಿದ್ದರೆ, ದೇಶದ ನಾನಾ ಕಡೆ ನೀನು ಪುರುಸೊತ್ತಿಲ್ಲದೆ ಓಡಾಡಿ, ಈ ಹೋರಾಟವನ್ನು ಬೆಂಬಲಿಸುತ್ತಿದ್ದೆ. ಬಹುಶಃ ಸ್ವಾತಂತ್ರ್ಯೋತ್ತರ ಕಾಲದ ಅತಿ ದೊಡ್ಡ ಹೋರಾಟ ಇದು. ಈಗ ಇದು ಕೊರೊನಾ ಹಾವಳಿಯಿಂದಾಗಿ ಹಿಂದಕ್ಕೆ ಸರಿದಿದೆಯಾದರೂ, ಮತ್ತೆ ಇದು ಗರಿಗೆದರುವುದರಲ್ಲಿ ಸಂಶಯವೇ ಇಲ್ಲ. ಇದು ಕೇವಲ ಕೆಲವರ ನಾಗರೀಕತೆಯ ಪ್ರಶ್ನೆ ಅಲ್ಲ, ಬದಲಿಗೆ ನೀನು ಯಾವತ್ತೂ ಎತ್ತಿ ಹಿಡಿಯುತ್ತಿದ್ದ ಸಂವಿಧಾನದ ಅಳಿವು-ಉಳಿವಿನ ಪ್ರಶ್ನೆ. ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವ ಪ್ರಯತ್ನ.

ಈ ಪ್ರಜಾಪ್ರಭುತ್ವ ಎನ್ನುವುದು ಅಭಿವೃದ್ಧಿ ಹೊಂದಿದ ಆಧುನಿಕ ರಾಷ್ಟ್ರಗಳಲ್ಲಿ ಮಾತ್ರ ಸಾಧ್ಯ ಎನ್ನುವ ಬಂಡವಾಳ ಶಾಹಿಯ ಕುತಂತ್ರದ ಸಿದ್ಧಾಂತವನ್ನು ಬಯಲಿಗೆಳೆಯುವಂತೆ ಈ ಸಿ.ಎ.ಎ. ವಿರೋಧಿ ಹೋರಾಟ ಮೂಡಿಬಂತು. ಅಂದರೆ, ದೇಶವೊಂದು ಮುಂದುವರೆಯುವುದಕ್ಕೆ ಪ್ರಜಾತಂತ್ರವೇ ಮೂಲ ಮಂತ್ರ ಮತ್ತು ಅಗತ್ಯ ಎನ್ನುವುದು ನಮ್ಮಂಥ “ಮೂರನೇ” ರಾಷ್ಟ್ರಗಳು ತೋರಬೇಕಾಗಿದೆ. ಅಂದರೆ, ನಮ್ಮ ಪ್ರಜಾಪ್ರಭುತ್ವದ ಬಗೆಗಿನ ಕಾಳಜಿ ನಮ್ಮ ದೈನಿಕದ ಭಾಗವಾಗಬೇಕಾಗಿದೆ. ಅದು ನಮ್ಮ ಮನೆಗಳಲ್ಲಿ, ಶಾಲೆ ಕಾರ್ಖಾನೆಗಳಲ್ಲಿ ಸಾಧ್ಯವಾಗಬೇಕಿದೆ. ಇದರಿಂದ ಮಾತ್ರ ಜನ, ವ್ಯಯಕ್ತಿಕವಾಗಿ ಹಾಗೂ ಸಾಮೂಹಿಕವಾಗಿ ತಮ್ಮ ಚರಿತ್ರೆಯನ್ನು ತಾವೇ ಬರೆದುಕೊಳ್ಳಬಲ್ಲರು; ತಮ್ಮ ಸಮಾಜವನ್ನು ತಾವೇ ಕಟ್ಟಿಕೊಳ್ಳಬಲ್ಲರು. ನಿನ್ನ ಬದುಕೇ ಅದಕ್ಕೆ ಒಂದು ‘ಜೀವಂತ’ ಉದಾಹರಣೆ. ಎಲ್ಲೋ ಇಂಗ್ಲಿಷ್ ಪತ್ರಿಕೋದ್ಯಮದಲ್ಲಿ ಮುಳುಗಿಹೋಗಿದ್ದ ನೀನು, ಅಲ್ಲೇ ಇನ್ನೂ ಆಳವಾಗಿ ಬೇರೂರುವ ಸಾಧ್ಯತೆಗಳಿದ್ದರೂ, ಅದನ್ನೇಲ್ಲಾ ತೊರೆದು, ಕನ್ನಡಕ್ಕೆ, ಕರ್ನಾಟಕಕ್ಕೆ ಮರಳಿ ಬಂದೆ. ಹೊಸದಾಗಿ ಭಾಷೆ ಕಲಿತೆ, ಇಲ್ಲಿನ ಹೋರಾಟದಲ್ಲಿ ಧುಮುಕಿ ನಿನಗೇ ಅಚ್ಚರಿಯಾಗುವ ಹಾಗೆ ಬೆಳೆದೆ. ಜಾಗತೀಕರಣದ ಹುನ್ನಾರಗಳನ್ನು ಅಭ್ಯಾಸ ಮಾಡಿ, ಸ್ಥಳೀಯವಾಗಿ ಬೇರುಬಿಡುತ್ತಲೇ, ಜಾಗತಿಕ ಮಟ್ಟದ ವಿದ್ಯಮಾನಗಳನ್ನು ಅರಿತುಕೊಳ್ಳುವ, ಅವುಗಳ ನಡುವಿನ ಸಂಕೀರ್ಣ ಸಂಬಂಧಗಳನ್ನು ವಿಶ್ಲೇಷಿಸುವ ದಾರಿಯಲ್ಲಿ ನಡೆಯತೊಡಗಿದೆ. ಈಗ ಆ ದಾರಿ ಇನ್ನಷ್ಟು ದೂರವಾಗಿದೆ, ಅದರೆ ಆ ದಾರಿಯಲ್ಲಿರುವ ಅಡಚಣೆಗಳು ಅನುಭವಕ್ಕೆ ಬರತೊಡಗಿವೆ. ಈ ದಾರಿಯಲ್ಲಿ ನಾವು ಮೊದಲು ಎದುರಿಸಬೇಕಾಗಿದ್ದು ಈಗ ನಾವಿರುವ ಫ್ಯಾಸಿಸ್ಟ್ ಪ್ರಭುತ್ವವನ್ನು. ಇದನ್ನು ಫ್ಯಾಸಿಸ್ಟ್ ಎಂದು ಕರೆಯಬೇಕೇ ಬೇಡವೇ ಎಂದು ನಮ್ಮಲ್ಲಿ ಇನ್ನೂ ಅನೇಕರಿಗೆ ಗೊಂದಲಗಳಿವೆ. ಈ ಗೊಂದಲ ಆಳುವ ವರ್ಗಕ್ಕೆ ಅನುಕೂಲ ಮಾಡಿಕೊಡಬಹುದೇ ವಿನಃ ನಮ್ಮ ಹೋರಾಟಕ್ಕೆ ನೆರವಾಗಲಾರದು. ಪ್ರತೀ ದೇಶವೂ, ತನ್ನ ಕಾಲಘಟ್ಟದಲ್ಲಿ ತನ್ನ ಜಾಯಮಾನಕ್ಕೆ ತಕ್ಕುದಾದ ಫ್ಯಾಸಿಸಂ ಅನ್ನು ಪಡೆದುಕೊಳ್ಳುತ್ತದೆ, ಕಾಲಕ್ಕೆ ತಕ್ಕಂತೆ ಚಹರೆ ಬದಲಾಗುವ ವೈರಸ್ಸಿನಂತೆ. ಆಗಲೇ ಹೇಳಿದಂತೆ, ಇಂದಿನ ಫ್ಯಾಸಿಸಂ ಸಧ್ಯಕ್ಕೆ ನವಉದಾರವಾದಿ ಮುಖವಾಡವನ್ನು ಧರಿಸಿದೆ. ಆದರೆ ಆಳದಲ್ಲಿ ಗಮನಿಸಿದರೆ ಅದು ಯಾವರೀತಿಯಲ್ಲೂ ಉದಾರವಾದುದಲ್ಲ.

ಚಹರೆ ಯಾವುದೇ ಇರಲಿ, ಫ್ಯಾಸಿಸಂಗೆ ಮೂರು ಮುಖ್ಯ ಲಕ್ಷಣಗಳಿರುತ್ತದೆ. ಒಂದು ತನ್ನ ಬಂಡವಾಳಶಾಹಿಪರ ನಿಲುವನ್ನು ಯಾವ ಕಾರಣಕ್ಕೂ ಪ್ರಶ್ನೆಮಾಡದಿರುವಂತೆ, ಸಮಾಜವನ್ನು ಮತ್ತು ಸರ್ಕಾರಗಳನ್ನು ಮ್ಯಾನೇಜ್ ಮಾಡುವುದು. ಹೀಗಾಗಿ ಇಂದು ನಮ್ಮ ಘನ ಸರಕಾರ ಶಿಕ್ಷಣದಿಂದ ಹಿಡಿದು ರೈಲ್ವೇವರೆಗೆ ಒಂದೊಂದಾಗಿ ಎಲ್ಲ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗಿಯವರಿಗೆ ಒಪ್ಪಿಸುತ್ತಿದೆ. ಇದು ಜನಹಿತಕ್ಕಾಗಿಯೇ ಜಾರಿಮಾಡಲಾಗಿದೆ ಎಂದು ಜನರನ್ನು ನಂಬಿಸುತ್ತಿದೆ. ಆದರೆ, ಇನ್ನು ಮುಂದೆ ಬಡವರಿಗೆ ಒಂದು ಶಿಕ್ಷಣ, ಶ್ರೀಮಂತರಿಗೆ ಇನ್ನೊಂದು ಅನ್ನುವ ರೀತಿಯಲ್ಲೇ, ಬಡವರಿಗೆ ಒಂದು ರೈಲು, ಶ್ರೀಮಂತರಿಗೆ ಇನ್ನೊಂದು ರೈಲು ಹಳಿಯಮೇಲೆ ಓಡಲಿದೆ. ಆದುರರಿಂದ ಫ್ಯಾಸಿಸಂ ಅನ್ನು ಎದುರಿಸುವುದೆಂದರೆ, ಖಾಸಗೀಕರಣವನ್ನು ಮತು ಖಾಸಗೀ ಬಂಡವಾಳವನ್ನು ವಿರೋಧಿಸುವುದು ಎಂದೇ ಅರ್ಥ. ಒಂದನಿಟ್ಟುಕೊಂಡು ಇನ್ನೊಂದನ್ನು ಮಾತ್ರ ವಿರೋಧಿಸುವುದು ಗಾಯಕ್ಕೆ ಮುಲಾಮು ಹಚ್ಚಿದಂತೆಯೇ ಹೊರತು, ವೃಣಗಳಿಗೆ ಕಾರಣವಾದ ದೇಹದಲ್ಲೇ ಹುದುಗಿರುವ ರೋಗಾಣುಗಳನ್ನು ನಾಶಪಡಿಸಿದಂತಲ್ಲ.

ಇನ್ನು ಫ್ಯಾಸಿಸಂನ ಎರಡನೇ ಲಕ್ಷಣವೆಂದರೆ ನಿಧಾನವಾಗಿ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವುದು. ಅಂದರೆ ಬಹುತ್ವವನ್ನು ನಾಶಪಡಿಸಿ, ವಿಭಿನ್ನತೆಯನ್ನು ಹತ್ತಿಕ್ಕಿ, ಅಲ್ಪಸಂಖ್ಯಾತರ ಹಕ್ಕುಗಳನ್ನು ಮೊಟಕುಗೊಳಿಸಿ, ಈ ಕ್ರಮಗಳನ್ನು ಪ್ರಶ್ನಿಸುವುದನ್ನೇ ದೇಶದ್ರೋಹ ಎಂದು ಬಿಂಬಿಸುವುದು. ಇವೆಲ್ಲಾ ಮೌಲ್ಯಗಳನ್ನು ಹೊರತುಪಡಿಸಿ, ಚುನಾವಣೆಯಲ್ಲಿ ಬಹುಮತದಿಂದ ಗೆದ್ದುಬರುವುದನ್ನೇ ಪ್ರಜಾಪ್ರಭುತ್ವದ ದಿಗ್ವಿಜಯ ಎಂದು ಒಣಹೆಮ್ಮೆ ಪಟ್ಟುಕೊಳ್ಳುವುದು. ಇನ್ನು ಮೂರನೆಯದು, ಈ ಮೇಲಿನ ಎರಡು ಕ್ರಮಗಳನ್ನೇ ದೇಶೋದ್ದಾರ ಎಂದು ಜನರನ್ನು, ಅದರಲ್ಲೂ ಮಧ್ಯಮ ವರ್ಗವನ್ನು ಒಪ್ಪಿಸುವುದು. ಇಂದು ಎಲ್ಲ ರೀತಿಯ ಹಿಮ್ಮುಖವಾದ ಚಲನೆಯನ್ನೇ ಅಭಿವೃದ್ಧಿ, ಪ್ರಗತಿ ಎಂದು ಜನರನ್ನು ಮರುಳು ಮಾಡುವುದು. ಇವುಗಳು 21ನೇ ಶತಮಾನದ ಫ್ಯಾಸಿಸಂನ ಪ್ರಮುಖ ಲಕ್ಷಣಗಳು. ಇದು ನಮ್ಮೊಳಗೇ ಸೇರಿಹೋಗಿರುವ, ಇದರ ವಿರುದ್ಧ ಹೋರಾಡುವುದೆಂದರೆ, ನಮ್ಮೊಳಗೇ ಇರುವ ದ್ವಂದ್ವಗಳನ್ನು ಎದುರಿಸಬೇಕಾದ ಸಂಗತಿಯಾಗಿದೆ.

ಗೆಳತೀ, ನೀನು ಹೊರಟು ಹೋದ ನಂತರದ ಭಾರತದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ಹಳೆಯ ಚಾಳಿಗಳು ಹೊಸ ಸ್ವರೂಪದಲ್ಲಿ ನೇಪಥ್ಯಕ್ಕೆ ಬಂದಿವೆ. ಕೋಮುವಾದ ಕೇವಲ ಧಾರ್ಮಿಕ ಮೂಲಭೂತವಾದಕ್ಕೆ ಸೀಮಿತವಾದುದಲ್ಲ ಎನ್ನುವುದು ನೀನಿದ್ದಾಗಲೇ ನಮ್ಮೆಲರ ಅನುಭವಕ್ಕೆ ಬಂದ ವಿಷಯ. ಅದು ಈಗ ಭಾರತದ ಫ್ಯಾಸಿಸಂನ ವಿಶಿಷ್ಟ ಲಕ್ಷಣವಾಗಿ ಬೆಳೆದು ನಿಂತಿದೆ. ಇವೆಲ್ಲಾ ಬೆಳವಣಿಗೆಗಳಿಗೆ ನೀನು ಸಾಕ್ಷಿಯಾಗಿದ್ದೀ, ಮತ್ತು ಇಲ್ಲಿನ ಪ್ರಜಾಪ್ರಭುತ್ವಕ್ಕಾಗಿ ನಡೆಯುವ ಮತ್ತು ನಡೆಯಬೇಕಾದ ಹೋರಾಟಗಳಿಗೆ ಅಲ್ಲಿಂದಲೇ ನೀನು ನಮ್ಮ ಜತೆಯಾಗಿರುತ್ತೀ ಎನ್ನುವುದರಲ್ಲಿ ನಮಗೆ ಯಾವ ಸಂಶಯವೂ ಇಲ್ಲ.

ಇಷ್ಟು ಮಾತುಗಳನ್ನು ನಿನ್ನಲ್ಲಿ ಹಂಚಿಕೊಳ್ಳಬೇಕೆನಿಸಿತು. ಇದು ನಿನಗೆ ತಿಳಿದಿರಲಾರದು ಎನ್ನುವುದಕ್ಕಲ್ಲ; ನಿನ್ನ ಮೂಲಕ ನಮ್ಮನ್ನು ನಾವು ಮತ್ತೊಮ್ಮೆ ಎಚ್ಚರಗೊಳಿಸುವುದಕ್ಕೆ.


ಇದನ್ನು ಓದಿ: ಬದುಕಿದ್ದರೆ ಗೌರಿ ಮೇಡಂ ಹೀಗನ್ನುತ್ತಿದ್ದರೇನೋ..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...