HomeUncategorizedಟಿಕೆಟ್ ಯಾರಿಗೆ?: ಶಿರಾ ಉಪಚುನಾವಣೆ ಘೋಷಣೆಯಾಗದಿದ್ದರೂ ಚರ್ಚೆ ಜೋರು

ಟಿಕೆಟ್ ಯಾರಿಗೆ?: ಶಿರಾ ಉಪಚುನಾವಣೆ ಘೋಷಣೆಯಾಗದಿದ್ದರೂ ಚರ್ಚೆ ಜೋರು

ನಿಖಿಲ್‌ರನ್ನು ಕಣಕ್ಕಿಳಿಸಲು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚಿಂತನೆ ನಡೆಸಿದ್ದರೆ, ಹಾಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಪುತ್ರ ವಿಜಯೇಂದ್ರರನ್ನು ಸ್ಪರ್ಧೆಗೆ ಇಳಿಸಿ ಗೆಲ್ಲಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಂಬ ಚರ್ಚೆ ಜೋರಾಗಿಯೇ ನಡೆಯುತ್ತಿದೆ.

- Advertisement -
- Advertisement -

ಶಿರಾ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಸತ್ಯನಾರಾಯಣ ಅವರು ನಿಧನರಾಗಿ ತಿಂಗಳೂ ಕೂಡ ಕಳೆದಿಲ್ಲ. ಜೊತೆಗೆ ಉಪಚುನಾವಣೆಯೂ ಘೋಷಣೆ ಆಗಿಲ್ಲ. ಆದರೆ ಕ್ಷೇತ್ರದಲ್ಲಿ ರಾಜಕೀಯ ಚರ್ಚೆಗಳು ಬಿರುಸಾಗಿ ನಡೆಯತೊಡಗಿವೆ. ಸ್ಪರ್ದೆಗೆ ಇಳಿಯುವ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದರೂ ನಾಲ್ಕು ಹೆಸರುಗಳು ಕ್ಷೇತ್ರದ ಜನರ ಬಾಯಿಯಲ್ಲಿ ನಿತ್ಯವೂ ಗುನುಗುತ್ತಿವೆ. ಮೂರೂ ಪಕ್ಷಗಳು ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ತಂತ್ರಗಳನ್ನು ಎಣೆಯುತ್ತಿವೆ. ಯಾರನ್ನು ಕಣಕ್ಕಿಸಿದರೆ ಗೆಲುವು ಸಾಧ್ಯ ಎಂಬ ಬಗ್ಗೆ ಲೆಕ್ಕಾಚಾರ ಮಾಡುತ್ತಿವೆ.

ಪ್ರಮುಖವಾಗಿ ಜೆಡಿಎಸ್‌ನಿಂದ ನಿಖಿಲ್ ಕುಮಾರಸ್ವಾಮಿ, ಬಿಜೆಪಿಯಿಂದ ವಿಜಯೇಂದ್ರ ಮತ್ತು ಕಾಂಗ್ರೆಸ್‌ನಿಂದ ಹಿರಿಯ ನಾಯಕ ಟಿ.ಬಿ.ಜಯಚಂದ್ರ ಅವರು ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಮಾತು ಕ್ಷೇತ್ರದಲ್ಲಿ ಹರಿದಾಡುತ್ತಿವೆ. ನಿಖಿಲ್ ಮತ್ತು ವಿಜಯೇಂದ್ರ ಮಾಜಿ, ಹಾಲಿ ಮುಖ್ಯಮಂತ್ರಿಗಳ ಪುತ್ರರು. ಯುವಕರು, ಪೈಪೋಟಿ ನೀಡಬಲ್ಲವರು. ನಿಖಿಲ್‌ರನ್ನು ಕಣಕ್ಕಿಳಿಸಲು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚಿಂತನೆ ನಡೆಸಿದ್ದರೆ, ಹಾಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಪುತ್ರ ವಿಜಯೇಂದ್ರರನ್ನು ಸ್ಪರ್ಧೆಗೆ ಇಳಿಸಿ ಗೆಲ್ಲಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಂಬ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಆದರೆ ನಿಖಿಲ್ ಇದನ್ನು ನಿರಾಕರಿಸಿದ್ದಾರೆ.

ಇದನ್ನೂ ಓದಿ: ಬಿ. ಸತ್ಯನಾರಾಯಣ್ ಆಮಿಷಕ್ಕೆ ಬಲಿಯಾಗದ ನಿಷ್ಠಾವಂತ ವ್ಯಕ್ತಿ: ಮಾಜಿ ಪ್ರಧಾನಿ ದೇವೇಗೌಡ

ಜೆಡಿಎಸ್ ಹೇಗಾದರೂ ಮಾಡಿ ಶಿರಾ ಕ್ಷೇತ್ರವನ್ನು ತನ್ನದನ್ನಾಗಿಸಿಕೊಳ್ಳಲು ಶತಪ್ರಯತ್ನ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶಾಸಕ ಬಿ.ಸತ್ಯನಾರಾಯರಣ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಈ ಮೂಲಕ ಕ್ಷೇತ್ರದಲ್ಲಿನ ಜನರ ನಾಡಿ ಮಿಡಿತ ಅರಿಯುವ ಪ್ರಯತ್ನ ಮಾಡಿದ್ದಾರೆ. ಸತ್ಯನಾರಾಯಣ್ ಪತ್ನಿ ಅಮ್ಮಾಜಮ್ಮ ಇಲ್ಲವೇ ಪುತ್ರ ಸತ್ಯಪ್ರಕಾಶ್ ಅವರಲ್ಲಿ ಯಾರನ್ನು ಕಣಕ್ಕಿಳಿಸಿದರೆ ಅನುಕೂಲ, ಪಕ್ಷಕ್ಕೆ ಲಾಭ ತಂದುಕೊಡಲಿದೆ ಎಂಬ ಬಗ್ಗೆ ದೊಡ್ಡಗೌಡರ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.

ಶಾಸಕ ಬಿ. ಸತ್ಯನಾರಾಯಣ ನಿಧನದಿಂದ ಕ್ಷೇತ್ರದಲ್ಲಿ ಎದ್ದಿರುವ ಅನುಕಂಪದ ಅಲೆಯ ಲಾಭ ಪಡೆಯಲು ಜೆಡಿಎಸ್ ಯೋಚಿಸುತ್ತಿದೆ. ಜಿಲ್ಲೆಯಲ್ಲಿ ಜೆಡಿಎಸ್ ಕೋಟೆಗೆ ಲಗ್ಗೆ ಇಟ್ಟ ಬಿಜೆಪಿ ಐದು ಸ್ಥಾನಗಳನ್ನು ಪಡೆದಿತ್ತು. ಜೆಡಿಎಸ್ ಕಳೆದ ಚುನಾವಣೆಯಲ್ಲಿ ಎರಡು ಸ್ಥಾನಗಳನ್ನು ಕಳೆದುಕೊಂಡಿತ್ತು. ತುರುವೇಕೆರೆ ಮತ್ತು ಚಿಕ್ಕನಾಯಕನಹಳ್ಳಿ ಕ್ಷೇತ್ರಗಳು ಜೆಡಿಎಸ್ ಕೈತಪ್ಪಿದ್ದವು. ಈಗ ಶಿರಾ ಕ್ಷೇತ್ರವೂ ಕೈತಪ್ಪಿದರೆ ಜೆಡಿಎಸ್ ಜಿಲ್ಲೆಯಲ್ಲಿ ಮತ್ತಷ್ಟು ದುರ್ಬಲವಾಗಲಿದೆ ಎಂಬ ಅರಿವು ಹಿರಿಯ ಮುಖಂಡರಲ್ಲಿದೆ. ಅದೇ ಕಾರಣಕ್ಕೇ ನಿಖಿಲ್ ಕುಮಾರಸ್ವಾಮಿ ದಾಳ ಉರುಳಿಸಿ ಕ್ಷೇತ್ರದ ಜನರ ಸ್ಪಂದನೆ ಹೇಗಿದೆ ಎಂಬ ಲೆಕ್ಕಾಚಾರ ಹಾಕಿದೆ ಜೆಡಿಎಸ್.

ಇದೇ ಕಾರಣಕ್ಕೆ ನಿಖಿಲ್ ಕುಮಾರಸ್ವಾಮಿ ತಾನು ಉಪಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಎಚ್.ಡಿ.ದೇವೇಗೌಡರು ಮತ್ತು ಎಚ್.ಡಿ.ಕುಮಾರಸ್ವಾಮಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕ್ಷೇತ್ರದಲ್ಲಂತೂ ಸತ್ಯನಾರಾಯಣ ಪತ್ನಿ ಅಮ್ಮಾಜಮ್ಮ ಅಥವಾ ಪುತ್ರ ಸತ್ಯಪ್ರಕಾಶ್ ಅವರಲ್ಲಿ ಒಬ್ಬರಿಗೆ ಟಿಕೆಟ್ ನೀಡಿದರೆ ಗೆಲ್ಲಿಸಿಕೊಂಡು ಬರುತ್ತೇವೆ ಎಂಬ ಭರವಸೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಪಕ್ಷದ ವರಿಷ್ಠರ ನಿಲುವು ಏನಿದೆ ಎಂಬುದು ಇದುವರೆಗೂ ಹೊರಬಿದ್ದಿಲ್ಲ.

ಇದನ್ನೂ ಓದಿ: ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಗೆ ಪಟ್ಟು: ಬೆಳಗಾವಿ ಚಲೋಗೆ ಭಾರೀ ಜನಬೆಂಬಲ

ಜೆಡಿಎಸ್ ಮುಖಂಡರು ಶಿರಾ ಕ್ಷೇತ್ರದ ಅಭ್ಯರ್ಥಿ ಯಾರೆಂಬುದನ್ನು ಸ್ಪಷ್ಟಪಡಿಸದೇ ಇರುವುದರಿಂದ ಗೊಂದಲ ಉಂಟಾಗಿದೆ. ಸತ್ಯಪ್ರಕಾಶ್ ಅವರಿಗೆ ಟಿಕೆಟ್ ಕೊಡದಿದ್ದರೆ ಅವರು ಬಿಜೆಪಿಯ ಅಭ್ಯರ್ಥಿಯಾಗುವುದು ಖಚಿತ ಎಂದು ಜೆಡಿಎಸ್ ಬೆಂಬಲಿಗರು ಹೇಳುವ ಮಾತು. ಹಾಗಾಗಿಯೇ ಬಿಜೆಪಿ ಮುಖಂಡರ ಜೊತೆಯೂ ಸತ್ಯ ಪ್ರಕಾಶ್ ಎರಡು ಸುತ್ತಿನ ಮಾತುಕತೆ ನಡೆಸಿದ್ದಾರೆ. ಡಿಸಿಎಂ ಅಶ್ವತ್ಥನಾರಾಯಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಜೊತೆ ಚರ್ಚಿಸಿರುವ ಸತ್ಯಪ್ರಕಾಶ್ ತಮಗೆ ಟಿಕೆಟ್ ನೀಡಬೇಕೆಂಬುದನ್ನು ಖಚಿತಪಡಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಶಾಸಕ ಬಿ.ಸತ್ಯನಾರಾಯಣ್ ಕುಟುಂಬದವರೊಬ್ಬರಿಗೆ ಟಿಕೆಟ್ ನೀಡಿದರೆ ಗೆಲ್ಲುವುದು ಖಚಿತ. ನಿಖಿಲ್ ಮತ್ತು ವಿಜಯೇಂದ್ರ ಅವರನ್ನು ಸ್ಪರ್ಧೆಗೆ ಇಳಿಸಿದರೆ ಅನಾಯಾಸವಾಗಿ ಕಾಂಗ್ರೆಸ್‌ನ ಟಿ.ಬಿ.ಜಯಚಂದ್ರ ಗೆದ್ದೇ ಗೆಲ್ಲುತ್ತಾರೆ. ಇದು ಪಕ್ಷದ ವರಿಷ್ಠರಿಗೂ ಗೊತ್ತಿದೆ. ವರಿಷ್ಠರು ತಪ್ಪು ಮಾಡುವುದಿಲ್ಲ. ಕ್ಷೇತ್ರ ಉಳಿಸಿಕೊಳ್ಳುವುದು ವರಿಷ್ಠರಿಗೂ ಸವಾಲಾಗಿದೆ. ಹಾಗಾಗಿ ಸತ್ಯನಾರಾಯಣ್ ಕುಟುಂಬದ ಸದಸ್ಯರೊಬ್ಬರಿಗೆ ಟಿಕೆಟ್ ಕೊಡುತ್ತಾರೆ ಎಂಬ ವಿಶ್ವಾಸ ಸ್ಥಳೀಯ ಮುಖಂಡರದ್ದು.

ಶಿರಾ ಕ್ಷೇತ್ರದಲ್ಲಿ ಬಿಜೆಪಿಗೆ ನೆಲೆ ಇಲ್ಲ. ಆದರೆ ಕಳೆದ ಎರಡು ಚುನಾವಣೆಗಳಲ್ಲಿ ಮತ ಗಳಿಕೆಯನ್ನು ಹೆಚ್ಚಳ ಮಾಡಿಕೊಂಡಿದ್ದು ಬಿಟ್ಟರೆ ಹೇಳಿಕೊಳ್ಳುವಂತಹ ಸಾಧನೆಯನ್ನೇನೂ ಮಾಡಿಲ್ಲ. ಹಾಗಾಗಿ ಇಲ್ಲಿ ಕಾಂಗ್ರೆಸ್‌ನ ಟಿ.ಬಿ.ಜಯಚಂದ್ರ ಮತ್ತು ಜೆಡಿಎಸ್ ನಡುವೆ ಪ್ರಬಲ ಪೈಪೋಟಿ ಇದೆ. ಜೆಡಿಎಸ್‌ನಲ್ಲಿ ಕಳೆದ 7 ಸಾರ್ವತ್ರಿಕ ಚುನಾವಣೆಯಲ್ಲೂ ಸತ್ಯನಾರಾಯಣ್ ಅವರಿಗೆ ಟಿಕೆಟ್ ನೀಡಲಾಗಿದೆ. ಈಗ ಕುಟುಂಬದ ಸದಸ್ಯರನ್ನು ಬಿಟ್ಟು ಬೇರೆಯವರಿಗೆ ಟಿಕೆಟ್ ಕೊಡಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ.

ಜೆಡಿಎಸ್‌ನಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಆರ್. ಉಮೇಶ್, ಮೂರು ಬಾರಿ ನಗರಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಆರ್. ಉಗ್ರೇಶ್ ಅವರೂ ಕೂಡ ಸ್ಪರ್ಧಾ ಆಕಾಂಕ್ಷಿಗಳಾಗಿದ್ದಾರೆ. ಆದರೆ ಜೆಡಿಎಸ್ ವರಿಷ್ಟರ ಒಲವು ಯಾರ ಪರವಾಗಿದೆ ಎಂಬುದು ಕೆಲವೇ ದಿನಗಳಲ್ಲಿ ಹೊರಬೀಳಲಿದೆ.


ಇದನ್ನೂ ಓದಿ: ಶಿರಾ ಶಾಸಕ, ಮಾಜಿ ಸಚಿವ ಬಿ.ಸತ್ಯನಾರಾಯಣ್ ನಿಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್, ಕೆ. ಕವಿತಾಗೆ ನೋ ರಿಲೀಫ್‌: ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

0
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು...