Homeಮುಖಪುಟಎಸ್‌ಡಿಪಿಐಗೆ ನೇರ ಪ್ರಶ್ನೆಗಳು: ರಾಜ್ಯಾಧ್ಯಕ್ಷ ಇಲ್ಯಾಸ್ ತುಂಬೆಯವರ ಸಂದರ್ಶನ

ಎಸ್‌ಡಿಪಿಐಗೆ ನೇರ ಪ್ರಶ್ನೆಗಳು: ರಾಜ್ಯಾಧ್ಯಕ್ಷ ಇಲ್ಯಾಸ್ ತುಂಬೆಯವರ ಸಂದರ್ಶನ

ನಮ್ಮ ತಪ್ಪುಗಳನ್ನು ಎತ್ತಿ ತೋರಿಸಿ. ಆದರೆ ನಮ್ಮ ಕುರಿತು ಏಕಪಕ್ಷೀಯ ವರದಿಗಳನ್ನು ನೀವು ಮಾಡಿಲ್ಲವಾದರೂ, ಬಹುತೇಕರು ಹಾಗೆಯೇ ಮಾಡುತ್ತಾರೆ. ಆದ್ದರಿಂದ ನಮ್ಮ ನಿಲುವನ್ನೂ ಕೇಳಿ ಎಂದು ನಾವು ಕೋರುತ್ತೇವೆ.

- Advertisement -
- Advertisement -

ರಾಜ್ಯದಲ್ಲಿ ಮತ್ತು ದೇಶದಲ್ಲಿ ಹಲವಾರು ಗಲಭೆಗಳು ಮತ್ತು ಹತ್ಯೆಗಳ ಸಂದರ್ಭದಲ್ಲಿ ಎಸ್‌ಡಿಪಿಐ ಪಕ್ಷ ಮತ್ತು ಪಿಎಫ್‌ಐ ಸಂಘಟನೆಗಳ ಹೆಸರುಗಳು ಕೇಳಿಬರುತ್ತದೆ. ಇತ್ತೀಚೆಗೆ ಡಿ.ಜೆ.ಹಳ್ಳಿಯಲ್ಲಿ ನಡೆದ ಗಲಭೆಯ ಸಂದರ್ಭದಲ್ಲೂ ಎಸ್‌ಡಿಪಿಐ ಅದಕ್ಕೆ ಕಾರಣ ಎಂಬ ಆರೋಪ ಕೇಳಿ ಬಂದಿತು. ಬಿಜೆಪಿ ಆರೆಸ್ಸೆಸ್‌ ವಿರೋಧಿಸುವ ಪ್ರಗತಿಪರ ಸಂಘಟನೆಗಳಲ್ಲೂ ಹಲವರು ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳನ್ನು ಒಪ್ಪುವುದಿಲ್ಲ. ಹೀಗಾಗಿ ಆ ಎಲ್ಲಾ ಪ್ರಶ್ನೆಗಳನ್ನು ನೇರವಾಗಿ ಎಸ್‌ಡಿಪಿಐ ಪಕ್ಷದ ರಾಜ್ಯಾಧ್ಯಕ್ಷರಿಗೆ ಕೇಳಬೇಕೆಂದು ನಾನುಗೌರಿ.ಕಾಂ ನಿರ್ಧರಿಸಿತು. ಇಲ್ಯಾಸ್ ಮುಹಮ್ಮದ್ ತುಂಬೆಯವರೊಡನೆ ನಡೆದ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.

ನಾನುಗೌರಿ.ಕಾಂ: ನಮಸ್ಕಾರ ಇಲ್ಯಾಸ್‌ ತುಂಬೆಯವರೇ.. ಈ ಸಂದರ್ಶನದಲ್ಲಿ ನಾವು ಕೆಲವು ಕಠಿಣ ಪ್ರಶ್ನೆಗಳನ್ನು ಕೇಳಲಿದ್ದೇವೆ. ನೀವು ಯಾವ ಪ್ರಶ್ನೆಯನ್ನೂ ನಿರಾಕರಿಸುವ ಹಾಗಿಲ್ಲ.

ಇಲ್ಯಾಸ್‌ ತುಂಬೆ: ನಮಸ್ಕಾರ. ಖಂಡಿತಾ ಇಲ್ಲ. ಆದರೆ ನೀವು ನಮ್ಮನ್ನು ಕೇಳುವ ಪ್ರಶ್ನೆಗಳಿಗೆ ನಾವು ಹೇಳುವ ಸಂಪೂರ್ಣ ಉತ್ತರವನ್ನು ಪ್ರಕಟಿಸಬೇಕೆಂದು ಕೋರುತ್ತೇವೆ. ನೀವು ಹಾಗೆ ಮಾಡುತ್ತೀರಿ ಎಂಬ ವಿಶ್ವಾಸವಿದೆ.

ನಾನುಗೌರಿ.ಕಾಂ: ಪ್ರಶ್ನೆಗಳು ನಿಮಗೆ ಮಾತ್ರ ಸಂಬಂಧಿಸಿದ್ದಾಗಿರುವುದಿಲ್ಲ. ಪಿಎಫ್ಐಗೂ ಸಂಬಂಧಿಸಿರುತ್ತದೆ. ಏಕೆಂದರೆ ನೀವು ಮತ್ತು ಅವರು ಒಂದೇ. ಬಿಜೆಪಿ ಮತ್ತು ಆರೆಸ್ಸೆಸ್‌ ಇದ್ದ ಹಾಗೆ.

ಇಲ್ಯಾಸ್‌ ತುಂಬೆ: ಬಿಜೆಪಿ ಮತ್ತು ಆರೆಸ್ಸೆಸ್‌ ಜೊತೆಗಿನ ಯಾವುದೇ ಹೋಲಿಕೆ ನಮಗೆ ಬೇಸರವನ್ನುಂಟು ಮಾಡುತ್ತದೆ. ಇರಲಿ, ಇನ್ನು ನಮ್ಮ ಮತ್ತು ಪಿಎಫ್‌ಐಗೆ ಇರುವ ಸಂಬಂಧದ ಬಗ್ಗೆ. ಈ ದೇಶದಲ್ಲಿ ಎಷ್ಟೋ ಚಳವಳಿಗಳು ರಾಜಕೀಯ ಪಕ್ಷಗಳಿಗೆ ಬೆಂಬಲ ವ್ಯಕ್ತಪಡಿಸುತ್ತವೆ. ಪಿಎಫ್‌ಐ ಸಹಾ ನಮಗೆ ಬೆಂಬಲಿಸುವುದು ನಿಜ. ಹಾಗಾಗಿ ಕೆಲವು ಪ್ರಶ್ನೆಗಳಿಗೆ ಮಾತ್ರ ನಾವು ಉತ್ತರ ಕೊಡುವುದು ಸಾಧ್ಯ. ಆದರೆ, ಪಿಎಫ್‌ಐ ಮತ್ತು ಎಸ್‌ಡಿಪಿಐ ಎರಡೂ ಒಂದೇ ಎನ್ನುವುದು ನಿಜವಲ್ಲ. ನಮ್ಮದೊಂದು ಒತ್ತಾಯವಿದೆ. ನೀವು ಕಟುವಾದ ಪ್ರಶ್ನೆಗಳನ್ನು ಪಿಎಫ್‌ಐಗೂ ಕೇಳಿ ಪರವಾಗಿಲ್ಲ. ಹಲವು ವಿವರಗಳು ನಮಗೆ ಗೊತ್ತಿರುವುದಿಲ್ಲ. ಅದನ್ನು ಅದರ ನಾಯಕರ ಬಳಿಯೇ ಉತ್ತರ ಪಡೆಯಬೇಕು.

ನಾನುಗೌರಿ.ಕಾಂ: ಮೊದಲಿಗೆ ಡಿ.ಜೆ.ಹಳ್ಳಿ ಘಟನೆಯಿಂದಲೇ ಶುರು ಮಾಡೋಣ. ಅಲ್ಲಿನ ಗಲಭೆಯಲ್ಲಿ ಎಸ್‌ಡಿಪಿಐ ಭಾಗಿಯಾಗಿದೆ ಎಂದು ಆಡಳಿತ ಪಕ್ಷದ ನಾಯಕರು ಮತ್ತು ಮಾಧ್ಯಮಗಳಲ್ಲಿ ಸಾಕಷ್ಟು ಬಂದಿದೆ. ನಿಮ್ಮ ಪಕ್ಷದ ಮುಖಂಡರು ಬಂಧಿತರಾಗಿದ್ದಾರೆ.

ಇಲ್ಯಾಸ್‌ ತುಂಬೆ: ಡಿಜೆ ಹಳ್ಳಿ ದೊಂಬಿ ಘಟನೆಯಲ್ಲಿ ಎಸ್ಡಿಪಿಐ ಯಾವ ಪಾತ್ರವೂ ಇಲ್ಲ. ಅಂದು ಎಸ್ಡಿಪಿಐಯ ಮುಖಂಡ ಮುಝಮ್ಮಿಲ್ ಪಾಶಾ ಮತ್ತು ಇತರ ಐದಾರು ಸಂಗಡಿಗರು ದೂರನ್ನು ಸಲ್ಲಿಸಲು ಠಾಣೆಗೆ ಹೋಗಿದ್ದರು. ಆಗಿನಿಂದ ಠಾಣೆಯಲ್ಲಿ ಪೊಲೀಸರ ಜೊತೆಗೆ ಇದ್ದರು. ಉದ್ರಿಕ್ತ ಜನರನ್ನು ಶಾಂತಿ ಸಮಾಧಾನ ಪಡಿಸಲು ಅವಿರತ ಶ್ರಮಿಸಿದ್ದರು. ಅವೆಲ್ಲದರ ಬಗ್ಗೆ ಹಲವು ವಿಡಿಯೋಗಳು ಇವೆ. ಇದು ಎಲ್ಲರೂ ವಿಡಿಯೋ ಮಾಡುವ ಕಾಲ. ಪೊಲೀಸರ ಬಳಿ ಅದೆಷ್ಟೋ ಫೂಟೇಜ್‌ ಇರುತ್ತದೆ. ಹಾಗಾಗಿಯೇ ನಾವು ಗಟ್ಟಿಯಾಗಿ ಹೇಳುತ್ತಿದ್ದೇವೆ. ಯಾರೇ ಈ ಪ್ರಕರಣದಲ್ಲಿ ಕಾನೂನನ್ನು ಮೀರಿ ನಡೆದುಕೊಂಡಿದ್ದರೆ, ಅದು ಫೇಸ್‌ಬುಕ್‌ ಪೋಸ್ಟ್‌ ಹಾಕಿದ ನವೀನ್‌ನಿಂದ ಹಿಡಿದು, ದಾಂಧಲೆ ನಡೆಸಿ ಆಸ್ತಿಪಾಸ್ತಿ ನಷ್ಟ ಮಾಡಿದ ದೊಂಬಿಕೋರರವರೆಗೆ ಅವರಿಗೆ ಕಾನೂನಿನ ಪ್ರಕಾರ ನೀಡಬಹುದಾದ ಅತಿ ಹೆಚ್ಚಿನ ಶಿಕ್ಷೆಯನ್ನೇ ನೀಡಿ ಎಂದು.

Moulana P.M MUZAMMIL AUR SDPI TEAM (Bangalore district Secretary MUZAMMIL PASHA, MAQSOOD, AYAZ aur volunteers ki team D.J HALLI me KASHEEDGI ke baad halaat ko control karte huwe. NABI KI SHAAN ME SOCIAL MEDIA PAR AIK SHAKS NE GUSTAQI KI THI…. #DJ

Moulana P.M MUZAMMIL AUR SDPI TEAM (Bangalore district Secretary MUZAMMIL PASHA, MAQSOOD, AYAZ aur volunteers ki team D.J HALLI me KASHEEDGI ke baad halaat ko control karte huwe.NABI KI SHAAN ME SOCIAL MEDIA PAR AIK SHAKS NE GUSTAQI KI THI….#DJHalli #KGHalli #Bengaluru

Posted by SDPI Karnataka on Tuesday, August 11, 2020

ಪೊಲೀಸರ ಜೊತೆಗೇ ಇದ್ದ ಮುಜಮ್ಮಿಲ್ ಪಾಷಾ ಮತ್ತಿತರರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ತನ್ನ ವೈಫಲ್ಯವನ್ನು ಮುಚ್ಚಿಹಾಕಲು ಹಾಗೂ ಬಿಜೆಪಿ ತನ್ನ ದಾರಿಗೆ ತೊಡಕಾಗಿರುವ ಎಸ್ಡಿಪಿಐಯನ್ನು ಮಟ್ಟಹಾಕಲು ಪಕ್ಷದ ಹೆಸರನ್ನು ಎಂದಿನಂತೆ ಎಳೆದು ತರುತ್ತಿದೆ. ಸರಿಯಾದ ತನಿಖೆ ನಡೆದರೆ ಆ  ಪ್ರಕರಣದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಶಾಂತಿ ಕಾಪಾಡಲು ಇನ್ನಿಲ್ಲದ ಹಾಗೆ ಪ್ರಯತ್ನಿಸಿದ್ದು ಮತ್ತು ಆ ಕಾರಣಕ್ಕಾಗಿ ರಿಸ್ಕ್‌ ತೆಗೆದುಕೊಂಡಿದ್ದು ಬೆಳಕಿಗೆ ಬರುತ್ತದೆ. ಇದನ್ನು ನಾವು ಯಾವುದೇ ಸಂದೇಹಕ್ಕೆ ದಾರಿಯಿಲ್ಲದಂತೆ ಹೇಳುತ್ತಿದ್ದೇವೆ.

ನಾನುಗೌರಿ.ಕಾಂ: ಇದೊಂದರಲ್ಲಿ ಮಾತ್ರವಲ್ಲ. ಯಾವುದೇ ಇಂತಹ ಘಟನೆಗಳಾದಾಗ ಎಸ್ಡಿಪಿಐ ಹೆಸರು ಕೇಳಿಬರುತ್ತದೆ ಹಾಗೂ ಎಸ್‌ಡಿಪಿಐ ಕಾರ್ಯಕರ್ತರು ಶಾಮೀಲಾಗಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.

ಇಲ್ಯಾಸ್‌ ತುಂಬೆ: ಹೌದು. ಇದು ಒಂದು ವ್ಯವಸ್ಥಿತ  ಷಡ್ಯಂತ್ರವಲ್ಲದೆ ಇನ್ನೇನು ಅಲ್ಲ. ಶಾಹಿನ್ ಭಾಗ್ ಚಳವಳಿ, ದೆಹಲಿ ಗಲಭೆ, ಮಂಗಳೂರು ಗಲಭೆ, ಬೆಂಗಳೂರು ಗಲಭೆ, ಜಾಮಿಯಾ ಮಿಲಿಯಾ ವಿ.ವಿ.ಯ ಪ್ರತಿಭಟನೆಯಲ್ಲಿ ಪೊಲೀಸರ ದೌರ್ಜನ್ಯ ಘಟನೆ, ಇತ್ಯಾದಿಗಳನ್ನು ಒಳಗೊಂಡಂತೆ ಯಾವುದೇ ಸಣ್ಣಪುಟ್ಟ ಅಥವಾ ದೊಡ್ಡ ಘಟನೆಗಳಾದರೆ ಎಸ್‌ಡಿಪಿಐ ಹೆಸರನ್ನು ಎಳೆದು ತರಲಾಗುತ್ತಿರುವುದು ಅತ್ಯಂತ ಮಾಮೂಲಿಯಾಗಿಬಿಟ್ಟಿದೆ. ಇಂತಹ ಘಟನೆಗಳಲ್ಲಿ ಎಸ್‌ಡಿಪಿಐಯ ಯಾವ ಪಾತ್ರವೂ ಇಲ್ಲ. ದೇಶದಲ್ಲಿ ಕಾರ್ಯಾಚರಿಸುತ್ತಿರುವ ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ಎಸ್‌ಡಿಪಿಐ ದೇಶದಾದ್ಯಂತ ಪ್ರಬಲ ಪ್ರತಿಭಟನೆಗಳು ಹೋರಾಟಗಳನ್ನು ಮಾಡುತ್ತವೆ. ಸಂಘಪರಿವಾರದ ಪ್ರತಿಯೊಂದು ಹುನ್ನಾರವನ್ನು ಬಹಿರಂಗವಾಗಿ ಭಾಷಣಗಳಲ್ಲಿ, ಬರಹಗಳಲ್ಲಿ ಬಯಲುಗೊಳಿಸುತ್ತ ಜನತೆಯನ್ನು ಸಂಘಟಿಸುತ್ತಿರುವ ಕಾರಣಕ್ಕಾಗಿ ನಾವು ಫ್ಯಾಸಿಸ್ಟ್ ಶಕ್ತಿಗಳ ದಾರಿಯಲ್ಲಿ ದೊಡ್ಡ ತೊಡಕಾಗಿದ್ದೇವೆ. ಹಾಗಾಗಿ ನಮ್ಮನ್ನು ಪ್ರತ್ಯೇಕಗೊಳಿಸಲು ಮತ್ತು ದಮನಿಸಲು ಈ ರೀತಿಯ ಆರೋಪಗಳನ್ನು ಹೊರಿಸುವ ಮತ್ತು ಹೆಸರು ಕೆಡಿಸುವ ವ್ಯವಸ್ಥಿತ ತಂತ್ರಗಾರಿಕೆಯನ್ನು ಮಾಧ್ಯಮಗಳ ಮೂಲಕ ಸಂಘಪರಿವಾರ ಮಾಡುತ್ತಿದೆ.

ಒಂದು ವಿಚಾರವನ್ನು ಎಲ್ಲರೂ ಗಮನಿಸಬೇಕೆಂದು ಕೋರುತ್ತೇವೆ. ಒಂದು ವೇಳೆ ಎಸ್‌ಡಿಪಿಐ ಅಸ್ತಿತ್ವದಲ್ಲಿಲ್ಲದೆ ಇರುತ್ತಿದ್ದರೆ ಯಾವುದೋ ಇತರ ಸಂಘಟನೆಗಳನ್ನು ಈ ರೀತಿಯಾಗಿ ಎಳೆದು ತರುತ್ತಿದ್ದರು ಎಂದು ಅರ್ಥಮಾಡಿಕೊಳ್ಳಬಹುದಾಗಿದೆ.

ನಾನುಗೌರಿ.ಕಾಂ: ಹಾಗಾದರೆ ಮಂಗಳೂರಿನಲ್ಲಿ ನೈತಿಕ ಪೊಲೀಸ್’ಗಿರಿಯಲ್ಲಿ ನಿಮ್ಮ ಪಕ್ಷದ ಕಾರ್ಯಕರ್ತರು ಒಳಗೊಂಡಿದ್ದ ಪ್ರಕರಣಗಳು ವರದಿಯಾಗಿತ್ತು. ಅದು ಸುಳ್ಳೇ?

ಇಲ್ಯಾಸ್‌ ತುಂಬೆ: ಈ ವಿಚಾರದಲ್ಲಿ ನಾವು ನಿಮ್ಮ ಮುಂದೆ ವಿಚಾರವನ್ನು ಸ್ಪಷ್ಟವಾಗಿ ಮುಂದಿಡುತ್ತೇವೆ. ನೈತಿಕ ಪೊಲೀಸ್ ಗಿರಿಯನ್ನು ಎಸ್‌ಡಿಪಿಐ ಸಿದ್ಧಾಂತವು ಖಡಾಖಂಡಿತವಾಗಿ ವಿರೋಧಿಸುತ್ತದೆ. ಯಾಕೆಂದರೆ ಅದು ಸಮಾಜದಲ್ಲಿ ದ್ವೇಷ, ವಿಭಜನೆ ಹಾಗೂ ಸಂಕುಚಿತತೆಯನ್ನು ಹುಟ್ಟುಹಾಕುತ್ತದೆ. ಎಸ್ಡಿಪಿಐ ಸ್ಥಾಪನೆಯಾಗಿ ಹತ್ತು ವರ್ಷಗಳು ಕಳೆದಿವೆ. ಪಕ್ಷದ ಪ್ರಾರಂಭದಲ್ಲಿ ಕೆಲವೊಂದು ನೈತಿಕ ಪೊಲೀಸ್’ಗಿರಿ ಘಟನೆಗಳಲ್ಲಿ ಕಾರ್ಯಕರ್ತರು ಶಾಮೀಲಾಗಿದ್ದಾರೆಂದು ವರದಿಯಾಗಿದ್ದದ್ದು ನಿಜ. ಒಂದು ವೇಳೆ ನಮ್ಮ ಸಿದ್ಧಾಂತವೇ ನೈತಿಕ ಪೊಲೀಸ್‌ಗಿರಿಯಾಗಿದ್ದಲ್ಲಿ ನಂತರದ ವರ್ಷಗಳಲ್ಲೂ ಅದು ಕೇಳಿಬರಬೇಕಿತ್ತಲ್ಲವೇ? ಆ ನಂತರ ಎಲ್ಲೂ ಇಂತಹ ವರದಿಯಾಗಿಲ್ಲ. ಸಮಾಜದ ಎಲ್ಲ ಸ್ತರಗಳಿಂದ ಬಂದ ವಿವಿಧ ಮನೋಭಾವನೆಯ ಜನರನ್ನು ಪಕ್ಷದ ಸದಸ್ಯರನ್ನಾಗಿಸಿ ಅವರಲ್ಲಿ ಶಿಸ್ತು, ಸಂವಿಧಾನ ಬದ್ಧತೆ, ಸೇವಾ ಮನೋಭಾವನೆಯನ್ನು ಮೂಡಿಸುವ ಮತ್ತು ಆ ಮೂಲಕ ಪರಿವರ್ತನೆಯನ್ನು ನಿರಂತರವಾಗಿ ಮಾಡುತ್ತಿರುವುದರಿಂದ ಕಾರ್ಯಕರ್ತರು ಮತ್ತು ಸಮಾಜದಲ್ಲಿ ಅಮೂಲಾಗ್ರ ಬದಲಾವಣೆ ಆಗಿದೆ.

ನಾನುಗೌರಿ.ಕಾಂ: ಹೌದು ನೈತಿಕ ಪೊಲೀಸ್‌ ಗಿರಿ ಪ್ರಕರಣದಲ್ಲಿ ಇತ್ತೀಚೆಗೆ ಕೇಳಿಬಂದಿಲ್ಲ. ಆದರೆ, ಹಿಂದೆ ಕೇರಳದಲ್ಲಿ ಪ್ರಾಧ್ಯಾಪಕರೊಬ್ಬರ ಕೈ ಕಡಿತ ಪ್ರಕರಣದಲ್ಲಿ ಎಸ್‌ಡಿಪಿಐ ಪಾತ್ರವಿದ್ದುದು ನಿಜವಲ್ಲವೇ?

ಇಲ್ಯಾಸ್‌ ತುಂಬೆ: ಅದು ಯಾವಾಗ ನಡೆದದ್ದು ಎಂಬುದನ್ನು ಗಮನಿಸಿ. ಅಧ್ಯಾಪಕರೊಬ್ಬರು ಪ್ರವಾದಿಯವರನ್ನು ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಯುವಕರು ಸೇರಿ ನಡೆಸಿದ ಕೃತ್ಯವದಾಗಿತ್ತು. ಈ ಘಟನೆ 2010 ಜುಲೈ 4ರಂದು ನಡೆದಿದೆ. ಎಸ್ಡಿಪಿಐ ಸ್ಥಾಪನೆಯಾಗಿದ್ದು 2010ರ ಜೂನ್ 21ರಂದು. ಘಟನೆಯ ಆರೋಪಿಗಳಲ್ಲಿ ಕೆಲವರು ಪಿಎಫ್ಐ ಸದಸ್ಯರು ಹಾಗೂ ಇತರ ಪಕ್ಷದ-ಸಂಘಟನೆಗಳ ಸದಸ್ಯರು ಇದ್ದಾರೆ. ಇದೊಂದು ಸ್ಥಳೀಯ ಜನರ ಗುಂಪು ನಡೆಸಿದ ಕೃತ್ಯವಾಗಿದೆ. ಘಟನೆಯನ್ನು ಪಿಎಫ್ಐ ಅದಾಗಲೇ ಖಂಡಿಸಿತ್ತು. ಇದಕ್ಕಿಂತ ಹೆಚ್ಚು ಮಾಹಿತಿಯನ್ನು ನೀವು ಪಿಎಫ್‌ಐನವರ ಬಳಿ ಕೇಳಬೇಕು.

ನಾನುಗೌರಿ.ಕಾಂ: ಆ ಘಟನೆಯ ಪ್ರಧಾನ ಆರೋಪಿಗೇ ನಿಮ್ಮ ಪಕ್ಷದ ವತಿಯಿಂದ ಸ್ಪರ್ಧಿಸಲು ನಂತರ ಟಿಕೆಟ್‌ ನೀಡಲಾಯಿತು. ಹಾಗಾಗಿ ನೀವೂ ಉತ್ತರ ಹೇಳಬೇಕು.

ಇಲ್ಯಾಸ್‌ ತುಂಬೆ: ಆ ಘಟನೆಯಲ್ಲಿ ಅನೇಕ ಅಮಾಯಕರನ್ನೂ ಪೊಲೀಸರು ಫಿಕ್ಸ್‌ ಮಾಡಿದ್ದರು. ಅವರಲ್ಲಿ ಪ್ರೊಫೆಸರ್‌ ಅನಸ್‌ ಅವರೂ ಒಬ್ಬರು. ಅವರು ಪ್ರಧಾನ ಆರೋಪಿಯಾಗಿದ್ದರು ಎಂಬುದು ನಿಜವಲ್ಲ.  ಆ ವಿಚಾರದಲ್ಲಿ ಪಕ್ಷಕ್ಕೆ ಸಂಪೂರ್ಣ ದೃಢವಾದ ಸತ್ಯಾಸತ್ಯತೆ ತಿಳಿದಿತ್ತು. ಅನಸ್‌ರವರನ್ನು ಉದ್ದೇಶಪೂ‍ರ್ವಕವಾಗಿಯೇ ಈ ಕೇಸಿನಲ್ಲಿ ಸಿಲುಕಿಸಲಾಗಿದೆ ಎಂಬುದು ನಮಗೆ ದೃಢಪಟ್ಟಿದ್ದರಿಂದ ಕೇರಳ ಪಂಚಾಯತ್‌ ಚುನಾವಣೆಯಲ್ಲಿ ಪಕ್ಷದ ವತಿಯಿಂದ ಟಿಕೆಟ್‌ ನೀಡಲಾಗಿತ್ತು. ಅನಸ್‌ ಜೈಲಿನಲ್ಲಿದ್ದುಕೊಂಡು ಪಂಚಾಯತ್‌ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಮತ್ತು ಅತ್ಯಧಿಕ ಬಹುಮತದಿಂದ ಗೆಲುವು ಸಾಧಿಸಿದ್ದರು. ಕೋರ್ಟ್‌ ವಿಚಾರಣೆಯ ನಂತರ ಅನಸ್‌ ಅವರನ್ನು ನಿರಪರಾಧಿಯೆಂದು ಬಿಡುಗಡೆಗೊಳಿಸಿತ್ತು ಎಂಬುದನ್ನೂ ಇಲ್ಲಿ ಗಮನಿಸಬೇಕಾಗಿದೆ. ಹಾಗೆಯೇ ಇನ್ನೊಂದು ವಿಚಾರವನ್ನೂ ಇಲ್ಲಿ ಹೇಳಬೇಕು. ಆ ನಿರ್ದಿಷ್ಟ ಘಟನೆಯಂತಹ ಹಿಂಸಾ ಕೃತ್ಯಗಳನ್ನು ನಾವೆಂದೂ ಒಪ್ಪುವುದಿಲ್ಲ.

ನಾನುಗೌರಿ.ಕಾಂ: ನಿಷೇಧಿತ ಸಿಮಿ ಮತ್ತು ಪಿಎಫ್‌ಐ ಹಾಗೂ ಎಸ್ಡಿಪಿಐಗೆ ಏನು ಸಂಬಂಧ? ಸಿಮಿ ನಿಷೇಧವಾಗಿದ್ದರಿಂದ ಅದರಲ್ಲಿದ್ದವರೇ ಪಿಎಫ್‌ಐಅನ್ನು ಸ್ಥಾಪಿಸಿದರು. ಅಲ್ಲವೇ?

ಇಲ್ಯಾಸ್‌ ತುಂಬೆ: ಇದನ್ನೂ ನಾವು ಕಾಲಾನುಕ್ರಮದಲ್ಲಿ ನೋಡಿದರೆ ಸತ್ಯ ಗೊತ್ತಾಗುತ್ತದೆ ಮತ್ತು ಆ ಸತ್ಯವನ್ನು ನೋಡಿ ನಿಮಗೆ ಆಶ್ಚರ್ಯವಾಗುತ್ತದೆ. ಪಿಎಫ್‌ಐ 2007ರಲ್ಲಿ ಕರ್ನಾಟಕದ ಕೆಎಫ್‌ಡಿ, ಕೇರಳದ ಎನ್‌ಡಿಎಫ್‌ ಮತ್ತು ತಮಿಳುನಾಡಿನ ಎಂಎನ್‌ಪಿಗಳು ಸೇರಿ ರಚನೆಯಾಯಿತು. ಎನ್‌ಡಿಎಫ್‌ ಅಧಿಕೃತ ಘೋಷಣೆಯಾಗಿದ್ದು 1993ರಲ್ಲಿ. ಸಿಮಿ ನಿಷೇಧವಾಗಿದ್ದು 2001ಲ್ಲಿ. ಹೀಗಾಗಿ ಒಂದು, ಎಸ್‌ಡಿಪಿಐಗೂ ಸಿಮಿಗೂ ಯಾವ ಸಂಬಂಧವೂ ಇಲ್ಲ. ಎರಡು, ಎನ್ ಡಿಎಫ್ ನ ಪ್ರಾರಂಭದ ಸದಸ್ಯರಲ್ಲಿ ಕೆಲವರು ಸಿಮಿಯ ನಾಯಕತ್ವದಲ್ಲಿದ್ದರು ಎನ್ನುವುದು ನಿಜ. ಆದರೆ ಸಿಮಿ ನಿಷೇಧದ ಹದಿನೈದು ವರ್ಷಗಳ ಮೊದಲೇ ಅವರೆಲ್ಲರೂ ಸಿಮಿಯಿಂದ ಬೇಸತ್ತು ಹೊರಬಂದ ಕೇರಳದ ನಾಯಕರಾಗಿದ್ದರು. ಹಾಗಾಗಿ ಸಿಮಿ ನಿಷೇಧದ ನಂತರ ಸಿಮಿಯಲ್ಲಿದ್ದವರಿಂದ ಪಿಎಫ್ಐ ಕಟ್ಟಲಾಯಿತು ಎನ್ನುವ ವಾದವು ಸತ್ಯಕ್ಕೆ ದೂರವಾಗಿದೆ. ಆರಂಭದಲ್ಲಿ ನಮ್ಮನ್ನು ಸಿಮಿಯ ವಿರೋಧಿ ಸಂಘಟನೆ ಎಂದು ನೋಡುತ್ತಿದ್ದವರೇ ನಂತರ ಇವರು ಸಿಮಿಯ ಸಂಘಟನೆ ಎಂದು ಸುಳ್ಳಿನ ಸರಮಾಲೆ ಹೆಣೆದರು.

ನಾನುಗೌರಿ.ಕಾಂ: ಎಸ್‌ಡಿಪಿಐಗೆ ಗಲ್ಫ್ ನಿಂದ ಹಣ ಬರುತ್ತಿದೆ. ಗಲ್ಫ್ ನಲ್ಲಿರುವ ತೀವ್ರವಾದಿ ಸಂಘಟನೆಗಳೊಂದಿಗೆ ಎಸ್‌ಡಿಪಿಐ ಸಂಬಂಧ ಹೊಂದಿದೆ ಎನ್ನುವ ಆರೋಪದ ಬಗ್ಗೆ ಏನು ಹೇಳುತ್ತೀರಿ?

ಇಲ್ಯಾಸ್‌ ತುಂಬೆ: ಮೊದಲಿಗೆ ಎಸ್‌ಡಿಪಿಐನ ಹಣಕಾಸಿನ ಮೂಲದ ವಿಚಾರ. ಎಸ್‌ಡಿಪಿಐ ಪ್ರತಿ ವರ್ಷಕ್ಕೊಮ್ಮೆ ನಡೆಸುವ ಫಂಡ್ ಡ್ರೈವ್ ಅಭಿಯಾನದಲ್ಲಿ ಸಾರ್ವಜನಿಕರಿಂದ ಹಾಗೂ ಪಕ್ಷದ ಕಾರ್ಯಕರ್ತರಿಂದ ದೇಣಿಗೆ ಸಂಗ್ರಹಿಸಿ ಎಸ್ಡಿಪಿಐ ಪಕ್ಷವನ್ನು ಮುನ್ನಡೆಸಲಾಗುತ್ತಿದೆ. ಪ್ರತಿವರ್ಷವೂ ಎಸ್‌ಡಿಪಿಐ ಕೇಂದ್ರ ಸರಕಾರಕ್ಕೆ ತನ್ನ ಆಡಿಟೆಡ್ ಲೆಕ್ಕಪತ್ರವನ್ನು ಸಲ್ಲಿಸುತ್ತದೆ.

ಇನ್ನು ಯಾವುದೇ ವಿದೇಶೀ ಸಂಘಟನೆಯಿಂದ ಹಣ ಬರುವ ವಿಚಾರ. ಭಾರತದಲ್ಲಿ ನಮ್ಮಂತಹ ಒಂದು ಪಕ್ಷವು ವಿದೇಶದ ಇನ್ಯಾವುದೋ ಸಂಘಟನೆಯಿಂದ ಅನಧಿಕೃತವಾಗಿ ಹಣ ತೆಗೆದುಕೊಳ್ಳಲು ಸಾಧ್ಯವೇ? ಎಸ್‌ಡಿಪಿಐಗೆ ಯಾವುದೇ ವಿದೇಶಿ ಸಂಘಟನೆಗಳೊಂದಿಗೆ ಸಂಬಂಧವಿರುವುದಾಗಲೀ ಸಂಪರ್ಕವಿರುವುದಾಗಲೀ ಇಲ್ಲ. ಯಾವುದೇ ವಿದೇಶದಿಂದ ಎಸ್‌ಡಿಪಿಐಗೆ ಹಣ ಬರುವುದಿಲ್ಲ. ಅದರ ಅವಶ್ಯಕತೆಯೂ ಎಸ್‌ಡಿಪಿಐಗೆ ಇಲ್ಲ. ಇವೆಲ್ಲವೂ ಸುಳ್ಳಿನ ಕಂತೆಯಾಗಿದೆ.

ನಾನುಗೌರಿ.ಕಾಂ: ಇನ್ನೊಂದು ಆರೋಪವೆಂದರೆ, ಎಸ್‌ಡಿಪಿಐನಲ್ಲಿ ನಿಮ್ಮಂತಹ ಸಾಫ್ಟ್‌ ನಾಯಕರಿದ್ದೀರಿ. ಇನ್ನೊಂದು ಗುಂಪೂ ಇದೆ. ಒಂದು ವೇಳೆ ನಿಮ್ಮಂಥವರು ನೀವು ಮಾತನಾಡುವ ಹಾಗೆಯೇ ಇದ್ದರೂ ರಾಜ್ಯ ಹಾಗೂ ಜಿಲ್ಲಾ ನಾಯಕರಿಗೆ ಕೆಳಗಿನ ಹಂತದ ಕಾರ್ಯಕರ್ತರ ನಿಯಂತ್ರಣವಿಲ್ಲ ಎನ್ನುವ ಆರೋಪಕ್ಕೆ ಏನಂತೀರಿ?

ಇಲ್ಯಾಸ್‌ ತುಂಬೆ: ಎಸ್‌ಡಿಪಿಐ ಒಂದು ಕೇಡರ್ ಆಧಾರಿತ ಪಕ್ಷ. ಇದರಲ್ಲಿ ಪ್ರತಿ ಹಂತದಲ್ಲೂ ಸ್ಟ್ರಕ್ಚರ್ ಇದೆ. ಗ್ರಾಮಮಟ್ಟದಲ್ಲಿ ಬ್ರಾಂಚ್ ಹಾಗೂ ಪಂಚಾಯತ್ ಸಮಿತಿ ಮತ್ತು ನಗರದಲ್ಲಿ ವಾರ್ಡ್ ಹಾಗೂ ನಗರ ಸಮಿತಿ ಇದೆ. ಇವುಗಳ ಮೇಲ್ನೋಟ ಹಾಗೂ ನಿಯಂತ್ರಣಕ್ಕಾಗಿ ಅಸೆಂಬ್ಲಿ ಸಮಿತಿ ಇದ್ದು ಅದರ ಮೇಲೆ ಜಿಲ್ಲಾ ಹಾಗೂ ರಾಜ್ಯ ಸಮಿತಿ ಇರುತ್ತದೆ. ಇವೆಲ್ಲ ರಚನೆಗಳು ಸಮಯಾಧಾರಿತ ಮೀಟಿಂಗ್ ಗಳನ್ನು ನಡೆಸಿ ಸಾಮಾಜಿಕ-ರಾಜಕೀಯ ಪರಿಸ್ಥಿತಿಯ ಅವಲೋಕನ, ಜನರ ಸಮಸ್ಯೆಗಳ ಬಗ್ಗೆ ಚರ್ಚೆ, ಪಕ್ಷದ ಕಾರ್ಯ ಚಟುವಟಿಕೆ ಇತ್ಯಾದಿಗಳ ಬಗ್ಗೆ ವಿವರವಾದ ಮಾತುಕತೆಗಳನ್ನು ನಡೆಸಿ ಕಾರ್ಯಕ್ರಮಗಳನ್ನು ಸಿದ್ಧಗೊಳಿಸುತ್ತದೆ. ಅಲ್ಲದೆ ಪಕ್ಷದ ಕಾರ್ಯಕರ್ತರ ಸಮಾವೇಶ, ನಾಯಕತ್ವ ತರಬೇತಿ ಶಿಬಿರಗಳು, ಇತ್ಯಾದಿಗಳನ್ನು ನಡೆಸುತ್ತವೆ. ಜನಸಾಮಾನ್ಯರನ್ನು ಪಕ್ಷದಲ್ಲಿ ಸದಸ್ಯರನ್ನಾಗಿಸಿ ಅವರಿಗೆ ಶಿಸ್ತಿನ ತರಬೇತಿ ನೀಡಲಾಗುತ್ತದೆ. ಈ ಮಧ್ಯೆ, ಅಂದರೆ ಸಮಾಜದಲ್ಲಿ ಜನಸಾಮಾನ್ಯರಾಗಿದ್ದವರು ಶಿಸ್ತಿನ ಕೇಡರ್‌ ಆಗುವ ನಡುವೆ ಕೆಲವು ತಪ್ಪುಗಳೂ ನಡೆದಿರಬಹುದು. ಹಾಗೆ ನಡೆದಾಗ ಪಕ್ಷವು ಅದನ್ನು ಗಂಭೀರವಾಗಿ ಪರಿಗಣಿಸುತ್ತದೆ ಎಂಬುದಂತೂ ನಿಜ.


ಇದನ್ನೂ ಓದಿ: ಇದುವರೆಗೂ ಯಾವುದೇ ಲವ್‌ ಜಿಹಾದ್‌ ನಡೆದಿಲ್ಲವೆಂದ ಮೋದಿ ಸರ್ಕಾರ : ಇದು ಬಿಜೆಪಿ V/S ಬಿಜೆಪಿಯ ಕದನ.. 


ನಾನುಗೌರಿ.ಕಾಂ: ಎಸ್‌ಡಿಪಿಐ ಪಕ್ಷದಲ್ಲಿ ಮುಸ್ಲಿಮರು ಮಾತ್ರವಿದ್ದಾರೆ. ಹಾಗಾಗಿ ಇದೊಂದು ಮುಸ್ಲಿಂ ಪಕ್ಷವಲ್ಲವೇ?

ಇಲ್ಯಾಸ್‌ ತುಂಬೆ: ಈ ದೇಶದಲ್ಲಿ ಎಷ್ಟೋ ರಾಜಕೀಯ ಪಕ್ಷಗಳು ಕೆಲವು ಸಮುದಾಯಗಳಿಗೆ ಸೀಮಿತವಾಗಿವೆ. ವಾಸ್ತವದಲ್ಲಿ ಎಸ್‌ಡಿಪಿಐ ಒಂದು ಜಾತ್ಯತೀತ ಪಕ್ಷ. ಶೋಷಿತ ಹಾಗೂ ಕಡೆಗಣಿಸಲ್ಪಟ್ಟ ಸಮುದಾಯಗಳ ಸಬಲೀಕರಣ ಹಾಗೂ ದೇಶದಲ್ಲಿ ಸಾಮಾಜಿಕ ನ್ಯಾಯ ಮತ್ತು ಸರ್ವತೋಮುಖ-ಸಂತುಲಿತ ಅಭಿವೃದ್ಧಿಯನ್ನು ಸಾಧಿಸಲು ರಾಜಕೀಯ ಅಧಿಕಾರವನ್ನು ಜನಸಾಮಾನ್ಯರ ಕೈಗೆ ದೊರಕಿಸಬೇಕೆಂಬುದು ಎಸ್‌ಡಿಪಿಐ ಪಕ್ಷದ ಗುರಿ. ಪಕ್ಷದಲ್ಲಿ ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಸಮಾನ ಅವಕಾಶವಿದೆ. ಆದರೆ, ಪಕ್ಷವು ಆರಂಭವಾದಾಗ ಮುಸ್ಲಿಮರ ನೇತೃತ್ವದಲ್ಲಿ ಸ್ಥಾಪಿಸಿದ್ದರಿಂದ ಸಹಜವಾಗಿ ಪಕ್ಷದ ಕಾರ್ಯಕರ್ತರಲ್ಲಿ ಮತ್ತು ನಾಯಕರಲ್ಲಿ ಗಣನೀಯ ಸಂಖ್ಯೆಯ ಮುಸ್ಲಿಮರಿದ್ದಾರೆ. ಶೋಷಿತ ಸಮುದಾಯಕ್ಕೆ ಸೇರಿದವರು ಸಂಘಟಿತರಾಗುವುದರಲ್ಲಿ ತಪ್ಪೇನೂ ಇಲ್ಲ ಎಂದು ನಾವು ಭಾವಿಸುತ್ತೇವೆ. ಆದರೆ ಸದಸ್ಯರಾಗಿ ಹಾಗೂ ನಾಯಕತ್ವದಲ್ಲಿ ಇತರ ಸಮುದಾಯಗಳ ಜನರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಎಲ್ಲ ಸಮುದಾಯಗಳ ಬಾಂಧವರನ್ನು ಪಕ್ಷದೊಳಗೆ ತರಲು ಮತ್ತು ನಾಯಕತ್ವ ನೀಡಲು ನಿರಂತರ ಪ್ರಯತ್ನ ನಡೆಸಲಾಗುತ್ತಿದೆ. ಕಾಲಕ್ರಮೇಣ ಇದು ಯಶಸ್ವಿಯಾಗುತ್ತದೆ ಎಂಬ ಭರವಸೆ ಇದೆ.

Photo Courtesy: The Hindu

ನಾನುಗೌರಿ.ಕಾಂ: ಎಸ್‌ಡಿಪಿಐ ಪಕ್ಷವು ‘ಮುಸ್ಲಿಂ ಬಿಜೆಪಿ’ ಎಂಬ ಅಭಿಪ್ರಾಯವಿದೆ.

ಇಲ್ಯಾಸ್‌ ತುಂಬೆ: ನಮ್ಮನ್ನು ಯಾವುದರ ಜೊತೆ ಬೇಕಾದರೂ ಹೋಲಿಸಿ. ಬಿಜೆಪಿಯ ಜೊತೆಗಲ್ಲ. ಏಕೆಂದರೆ ನಮ್ಮಲ್ಲಿ ಈ ಸದ್ಯ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಸದಸ್ಯರಿರಬಹುದಾದರೂ ನಮ್ಮದು ಹಿಂದೂ ವಿರೋಧಿ ಪಕ್ಷವಲ್ಲ. ಬದಲಿಗೆ ಹಿಂದೂ ಸಮುದಾಯದ ಬಹುಸಂಖ್ಯಾತರ ಪರವಾಗಿ ಹೋರಾಡುತ್ತೇವೆ. ಆದರೆ ಬಿಜೆಪಿ ಇಂಡಿಯಾವನ್ನು ಮನುವಾದಿ ರಾಷ್ಟ್ರೀಯತೆಯ ದೇಶವನ್ನಾಗಿ ಮಾಡಲು ಹೊರಟಿದೆ. ದ್ವೇಷ ರಾಜಕಾರಣ, ವಿಭಜನವಾದ ಅದರ ಕಾರ್ಯತಂತ್ರವಾಗಿದೆ. ಸಂವಿಧಾನವನ್ನು ಬುಡಮೇಲು ಗೊಳಿಸುವ ಮತ್ತು ಮನು ಸಂಹಿತೆ ಆಧಾರದ ಪ್ರಣಾಳಿಕೆ ಜಾರಿಗೆ ತರುವುದು ಅದರ ಅಜೆಂಡಾ. ಎಸ್‌ಡಿಪಿಐ ಯದ್ದು ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಸೌಹಾರ್ದತೆಯ ಸಿದ್ಧಾಂತವಾಗಿರುತ್ತದೆ.

ನಾನುಗೌರಿ.ಕಾಂ: ಚುನಾವಣೆಗಳಲ್ಲಿ ಎಸ್‌ಡಿಪಿಐ ಪಕ್ಷದ ಸ್ಪರ್ಧೆ ಕಾಂಗ್ರೆಸ್ಸಿನ ಮತಗಳನ್ನು ಒಡೆದು ಬಿಜೆಪಿಯ ಗೆಲುವಿಗೆ ಸಹಾಯಕವಾಗುವುದು. ಎಸ್‌ಡಿಪಿಐ ಮತ್ತು ಬಿಜೆಪಿ ನಡುವೆ ಹೊಂದಾಣಿಕೆ ಇದೆ ಎನ್ನುವ ವಿಶ್ಲೇಷಣೆ ಕೇಳುತ್ತಿದೆಯಲ್ಲವೇ?

ಇಲ್ಯಾಸ್‌ ತುಂಬೆ: ನಿಮಗೆ ನಮ್ಮ ಬಗ್ಗೆ ಏನೂ ಅಭಿಪ್ರಾಯವಿದ್ದರೂ ಈ ವಿಚಾರದಲ್ಲಿ ನಮ್ಮ ವಾದವನ್ನು ನೀವು ಕೇಳಿ ಅಂತಿಮ ಅಭಿಪ್ರಾಯಕ್ಕೆ ಬರಬೇಕೆಂದು ಕೋರುತ್ತೇನೆ. ಬೇಕಾದರೆ ಈ ರೀತಿ ಅಭಿಪ್ರಾಯ ಇರುವವರ ಜೊತೆ ನಾವು ಜೊತೆಯಲ್ಲಿ ಕುಳಿತು ಸರಿಯಾದ ಅಧ್ಯಯನ ಹಾಗೂ ವಿಶ್ಲೇಷಣೆ ನಡೆಸಲು ಸಿದ್ಧ. ಎಸ್‌ಡಿಪಿಐ ಪಕ್ಷ ಚುನಾವಣೆಗಳಲ್ಲಿ ಸ್ಪರ್ಧೆ ಮಾಡುವುದಕ್ಕಿಂತ ಹಿಂದಿನ ಕಾಲದಿಂದಲೇ ಕಾಂಗ್ರೆಸ್ ಪಕ್ಷ ಅದೇ ಕ್ಷೇತ್ರಗಳಲ್ಲಿ ಸೋಲುತ್ತಲೇ ಬಂದಿದೆಯೇ ಇಲ್ಲವೇ? ಉತ್ತರಭಾರತದಲ್ಲಿ ಕಾಂಗ್ರೆಸ್ ತನ್ನ ನೆಲೆಯನ್ನು ಕಳೆದುಕೊಳ್ಳಲು ಕಾರಣ ಎಸ್‌ಡಿಪಿಐ ಪಕ್ಷವೇ. ದಕ್ಷಿಣ ಭಾರತದಲ್ಲಿ ಕರ್ನಾಟಕ, ಕೇರಳ ಬಿಟ್ಟರೆ ಉಳಿದ ಕಡೆಗಳಲ್ಲಿ ಕಾಂಗ್ರೆಸ್ಸಿನ ನೆಲೆ ಧ್ವಂಸಗೊಳ್ಳುತ್ತಲೇ ಇದೆ. ಅದಕ್ಕೇನು ಕಾರಣ?

ಕಾಂಗ್ರೆಸ್ ಮುಸ್ಲಿಂ ಮತಬ್ಯಾಂಕನ್ನು ನೆಚ್ಚಿಕೊಂಡಿದೆ. ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದವರು ಅತ್ಯಂತ ಭ್ರಮನಿರಸನರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ತೆರೆಯ ಮರೆಯ ಹಿಂದಿನ ಕೋಮುವಾದ, ಪಾರಂಪರ್ಯದ ಪಾರುಪತ್ಯ, ಅಖಂಡ ಭ್ರಷ್ಟಾಚಾರ, ದಗಲ್ಬಾಜಿತನ, ಇತ್ಯಾದಿಗಳಿಗೆ ಈ ದೇಶ ಪ್ರತಿ ಕಾಲಘಟ್ಟದಲ್ಲೂ ಸಾಕ್ಷಿಯಾಗಿ ನಿಂತಿದೆ. ಚುನಾವಣೆಯಲ್ಲಿ ಜನ ಕಾಂಗ್ರೆಸ್‌ಗೆ ಮತ ಹಾಕುವ ಕಾರಣವೇನೆಂದರೆ ಇನ್ನೊಂದು ಸೂಕ್ತ ರಾಜಕೀಯ ಪಕ್ಷವಿಲ್ಲ ಎಂಬುದಕ್ಕಾಗಿ. ಒಂದು ಪರ್ಯಾಯ ಹಾಗೂ ದಿಟ್ಟ ರಾಜಕೀಯ ಪಕ್ಷದ ಅಗತ್ಯ ಅತ್ಯಂತ ಅನಿವಾರ್ಯವಾಗಿರುವಾಗ ಎಸ್‌ಡಿಪಿಐ ಚುನಾವಣೆಗಳಲ್ಲಿ ಸ್ಪರ್ಧಿಸಬೇಕಾದುದು ಅತ್ಯಂತ ಅನಿವಾರ್ಯವೂ ಸೂಕ್ತವೂ ಆಗಿದೆ.

ನಾನುಗೌರಿ.ಕಾಂ: ಸಂವಿಧಾನಕ್ಕೆ ಎಸ್‌ಡಿಪಿಐ ಬದ್ಧವಾಗಿದೆಯೇ? ಬದ್ಧವಾಗಿರುತ್ತದೆಯೇ?

ಇಲ್ಯಾಸ್‌ ತುಂಬೆ: ಬದ್ಧತೆಯ ಪ್ರಶ್ನೆ ಮಾತ್ರವಲ್ಲಾ, ಈ ದೇಶದ ಸಂವಿಧಾನದ ಮೇಲೆ ಎಸ್ಡಿಪಿಐ ಅಪಾರ ಭರವಸೆಯನ್ನು ಇಟ್ಟುಕೊಂಡಿದೆ. ಎಸ್ಡಿಪಿಐ ತನ್ನ ಪ್ರತಿಯೊಂದು ನಾಯಕತ್ವ ತರಬೇತಿ ಶಿಬಿರಗಳಲ್ಲಿ ಸಂವಿಧಾನದ ಬಗ್ಗೆ ಮಾಹಿತಿಗಳನ್ನು ಹಾಗೂ ರಚನಾತ್ಮಕವಾದ ತರಗತಿಗಳನ್ನು ನೀಡುತ್ತದೆ. ಕಾರ್ಯಕರ್ತರ ಪ್ರತಿಯೊಂದು ಸಮಾವೇಶಗಳಲ್ಲಿ ಸಂವಿಧಾನವನ್ನು ಬಲಪಡಿಸುವ ಪ್ರೇರಣೆಗಳನ್ನು ನೀಡುತ್ತದೆ. ದೇಶದಲ್ಲಿ ಎಲ್ಲಾದರೂ ಸಂವಿಧಾನವಿರೋಧಿ ಘಟನೆಗಳು, ಸಂವಿಧಾನ ವಿರೋಧಿ ಸರ್ಕಾರದ ನಿಲುವುಗಳು, ಇತ್ಯಾದಿ ಸಂಭವಿಸಿದಲ್ಲಿ ಅದರ ವಿರುದ್ಧ ಜನಾಂದೋಲನ ಮತ್ತು ಪ್ರತಿಭಟನೆಗಳನ್ನು ಎಸ್ಡಿಪಿಐ ಸಂಘಟಿಸುತ್ತಲೇ ಬಂದಿದೆ. ಸಂಘಪರಿವಾರದ ಸಂವಿಧಾನವಿರೋಧಿ ನಡೆಗಳನ್ನು ತೀಕ್ಷ್ಣವಾಗಿ ವಿರೋಧಿಸುತ್ತಿರುವ ಎಸ್ಡಿಪಿಐ, ಸಂವಿಧಾನದಿಂದ ಈ ದೇಶದ ಪ್ರಗತಿ ಸಾಧಿಸಲಾಗುವುದು ಎಂಬ ವಿಶ್ವಾಸವನ್ನು ಹೊಂದಿದೆ.

ನಾನುಗೌರಿ.ಕಾಂ: ಧನ್ಯವಾದಗಳು.

ಇಲ್ಯಾಸ್‌ ತುಂಬೆ: ಧನ್ಯವಾದಗಳು, ಆದರೆ ನೀವು ನಮ್ಮ ಮೇಲಿನ ಆರೋಪಗಳ ಕುರಿತು ಮಾತ್ರ ಕೇಳಿದ್ದೀರಿ. ನಮ್ಮ ಯೋಜನೆಯೇನು? ನಾವೇನು ಮಾಡಲು ಹೊರಟಿದ್ದೀವಿ ಎಂಬ ಕುರಿತು ಕೇಳಲಿಲ್ಲ.

ನಾನುಗೌರಿ.ಕಾಂ: ದಯವಿಟ್ಟು ಹೇಳಿ.

ಇಲ್ಯಾಸ್‌ ತುಂಬೆ: ಭಯವಿಲ್ಲದ, ಹಸಿವಿಲ್ಲದ ದೇಶವನ್ನು ಕಟ್ಟುವುದು. ಸಾಮಾಜಿಕ ನ್ಯಾಯ, ಸರ್ವರಿಗೂ ಪ್ರಾತಿನಿಧ್ಯ ಉಳ್ಳ ಪ್ರಜಾಪ್ರಭುತ್ವ ಹಾಗೂ ಜಾತ್ಯತೀತ ಕಲ್ಯಾಣ ರಾಷ್ಟ್ರದ ನಿರ್ಮಾಣ. ಶ್ರೀಮಂತ-ಬಲಾಡ್ಯ-ಕೋಮುವಾದಿಗಳ ಕೈಯಲ್ಲಿರುವ ರಾಜಕೀಯ ಅಧಿಕಾರವನ್ನು ಜನಸಾಮಾನ್ಯರ ಕೈಗೆ  ಹಸ್ತಾಂತರಿಸುವುದು. ಇವುಗಳು ಎಸ್ಡಿಪಿಐ ಕನಸು. ಇದರ ಈಡೇರಿಕೆಗಾಗಿ ಪ್ರತಿಯೊಂದು ಹಳ್ಳಿ, ಗ್ರಾಮ, ನಗರಗಳಲ್ಲಿ ತಳಮಟ್ಟದಲ್ಲಿ ಜನರಲ್ಲಿ ಪ್ರಜ್ಞಾವಂತಿಕೆ ಮೂಡಿಸುವುದು.

ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕಾಗಿ ಅವಿರತ ಪರಿಶ್ರಮ, ಜನಸೇವೆ, ಎಲ್ಲ ಸಮುದಾಯಗಳ ಜೊತೆಗೆ ಅನ್ಯೋನ್ಯತೆ, ಕಾರ್ಯಕರ್ತರು ಹಾಗೂ ನಾಯಕರಿಗೆ ಸೂಕ್ತ ತರಬೇತಿ ಸಮಾವೇಶಗಳನ್ನು ನಡೆಸುವುದು ಇತ್ಯಾದಿಗಳ ಮೂಲಕ ರಾಜಕೀಯ ಚಳವಳಿಯನ್ನು ಮುನ್ನಡೆಸುವುದು. ಪಂಚಾಯತ್ ನಿಂದ ಪಾರ್ಲಿಮೆಂಟು ವರೆಗಿನ ಚುನಾವಣೆಗಳಲ್ಲಿ ಸ್ಪರ್ಧಿಸಿ ಜನಸಾಮಾನ್ಯರಿಗೆ ಪ್ರಾತಿನಿಧ್ಯ ಒದಗಿಸುವುದು ಇತ್ಯಾದಿಗಳು ಅದರ ಕಾರ್ಯವಿಧಾನ. ಮುಸ್ಲಿಂ-ದಲಿತ-ಕ್ರೈಸ್ತ ಹಾಗೂ ಹಿಂದುಳಿದ ಸಮುದಾಯಗಳೊಂದಿಗಿನ ವಿಶಾಲ ರಾಜಕೀಯ ತಳಹದಿ ನಿರ್ಮಿಸುವುದು.

ಇದರ ಜೊತೆಗೆ ನಿಮ್ಮಲ್ಲಿ ಇನ್ನೂ ಒಂದು ಮನವಿ. ನಮ್ಮ ತಪ್ಪುಗಳನ್ನು ಎತ್ತಿ ತೋರಿಸಿ. ಆದರೆ ನಮ್ಮ ಕುರಿತು ಏಕಪಕ್ಷೀಯ ವರದಿಗಳನ್ನು ನೀವು ಮಾಡಿಲ್ಲವಾದರೂ, ಬಹುತೇಕರು ಹಾಗೆಯೇ ಮಾಡುತ್ತಾರೆ. ಆದ್ದರಿಂದ ನಮ್ಮ ನಿಲುವನ್ನೂ ಕೇಳಿ ಎಂದು ನಾವು ಕೋರುತ್ತೇವೆ.

ನಾನುಗೌರಿ.ಕಾಂ: ಸರಿ, ಹಾಗೆಯೇ ನಿಮ್ಮನ್ನು ಟೀಕೆ ಮಾಡುವವರಿಂದಲೂ ನಾವು ನಿಮ್ಮ ಕುರಿತು ಬರೆಯಲು ಹೇಳುತ್ತೇವೆ.

ಇಲ್ಯಾಸ್‌ ತುಂಬೆ: ಅದು ನಿಮ್ಮ ಸ್ವಾತಂತ್ರ್ಯ. ಸ್ವಾಗತಿಸುತ್ತೇವೆ. ಪಿಎಫ್‌ಐನವರನ್ನೂ ನೀವು ಇಂತಹುದೇ ಪ್ರಶ್ನೆಗಳನ್ನು ಕೇಳಿದರೆ ಒಳ್ಳೆಯದು.

ನಾನುಗೌರಿ.ಕಾಂ: ಖಂಡಿತಾ ಅವರಿಗೆ ಇನ್ನೂ ಕಠಿಣವಾದ ಪ್ರಶ್ನೆಗಳಿವೆ. ಧನ್ಯವಾದಗಳು.

  • ಸಂದರ್ಶನ – ನಾನುಗೌರಿ ತಂಡ.

ಇದನ್ನೂ ಓದಿ: ಡಿ.ಜೆ ಹಳ್ಳಿಯಲ್ಲಿ ಗಲಭೆಯಾಗುತ್ತಿದ್ದಾಗ ಮುಸ್ಲಿಂ ಮುಖಂಡರು ಏನು ಮಾಡುತ್ತಿದ್ದರು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಡೊನಾಲ್ಡ್ ಟ್ರಂಪ್ ಹತ್ಯೆ ಯತ್ನ ಪ್ರಕರಣ; ದಾಳಿಕೋರ ಥಾಮಸ್ ಮ್ಯಾಥ್ಯೂ ಗುರುತು ಪತ್ತೆ

0
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆ ಯತ್ನದಲ್ಲಿ ಭಾಗಿಯಾಗಿರುವ ಶಂಕಿತನನ್ನು ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂದು ಗುರುತಿಸಲಾಗಿದೆ ಎಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ. ಎಫ್‌ಬಿಐ...