ಟಿಪ್ಪು ಜಯಂತಿಯನ್ನು ಬಿಜೆಪಿ ಹಿಂದಿನಿಂದಲೂ ವಿರೋಧಿಸುತ್ತಲೇ ಬಂದಿದೆ. ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದು ಈ ಬಾರಿ ಟಿಪ್ಪು ಜಯಂತಿಯನ್ನು ಆಚರಿಸುವುದಿಲ್ಲ ಎಂದು ಘೋಷಿಸಿದೆ. ಅಷ್ಟೇ ಅಲ್ಲದೇ ಈಗ ಪಠ್ಯ ಪುಸ್ತಕಗಳಲ್ಲಿ ಟಿಪ್ಪು ಸುಲ್ತಾನ್ ಕುರಿತ ಪಾಠಕ್ಕೂ ಕತ್ತರಿ ಹಾಕಲು ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಪರಿಶೀಲನೆ ನಡೆಸಿ, ಕ್ರಮ ಕೈಗೊಳ್ಳುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಸುರೇಶ್‍ಕುಮಾರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುರೇಶ್‍ಕುಮಾರ್, ಟಿಪ್ಪು ಜಯಂತಿಗೆ ಹಿಂದಿನಿಂದಲೂ ಸಾಕಷ್ಟು ವಿರೋಧವಿದ್ದು, ವಾದ-ವಿವಾದಗಳಿಗೆ ಜಯಂತಿ ಎಡೆಮಾಡಿ ಕೊಟ್ಟಿದೆ. ಬಿಜೆಪಿ ಶಾಸಕ ಅಪ್ಪಚ್ಚುರಂಜನ್ ಅವರು ಟಿಪ್ಪು ಸುಲ್ತಾನ್ ಕುರಿತ ಪಠ್ಯವನ್ನು ಕೈ ಬಿಡುವಂತೆ ಪತ್ರ ಬರೆದಿದ್ದಾರೆ. ಆದರೆ ಪತ್ರ ಇನ್ನೂ ಕೈಸೇರಿಲ್ಲ. ಪತ್ರ ತಲುಪಿದ ಬಳಿಕ ಸೂಕ್ತ ಪರಿಶೀಲನೆ ನಡೆಸಿ, ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಟಿಪ್ಪು ಸುಲ್ತಾನ್ ಒಬ್ಬ ಕ್ರೂರಿ, ಹಿಂದೂಗಳ ಮೇಲೆ ಅಕ್ರಮಣಕಾರಿ ಧೋರಣೆ ಅನುಸರಿಸಿದವನು. ಅಂಥವನ ಜಯಂತಿ ಆಚರಿಸುತ್ತಿರುವುದು ಏಕೆ..? ಎಂಬ ಆಕ್ರೋಶ ವ್ಯಕ್ತವಾಗಿತ್ತು. ಕೊಡಗು, ದಕ್ಷಿಣ ಕನ್ನಡ ಸೇರಿದಂತೆ ಹಲವು ಕಡೆಗಳಲ್ಲಿ ಟಿಪ್ಪು ಸುಲ್ತಾನ್ ಆಕ್ರಮಣ ನಡೆಸಿದ್ದ. ಹೀಗಾಗಿ ಅಲ್ಲಿನ ಜನತೆ ಶೋಷಣೆಗೆ ಒಳಗಾಗಿದ್ದರು. ದಮನಕಾರಿ ಆಡಳಿತ ನಡೆಸಿದ್ದ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ಈ ಭಾಗಗಳ ಜನತೆ ವಿರೋಧಿಸುತ್ತಿದ್ದಾರೆ. ಆದರೆ ಹಿಂದಿನ ಸರ್ಕಾರಗಳು ವಿರೋಧದ ನಡುವೆಯೂ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಿದವು ಎಂದು ಸುರೇಶ್ ಕುಮಾರ್‌ರವರು ಆರೋಪಿಸಿದ್ದಾರೆ.
ಇನ್ನು ಟಿಪ್ಪು ಸುಲ್ತಾನ್‍ನಿಂದ ಪ್ರೇರಣೆ, ಪಾಠ ಕಲಿಯುವಂಥದ್ದು ಏನಿದೆ..? ಅಂತಹ ಪರಿಸ್ಥಿತಿ ಇಲ್ಲ. ದಿ.ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಸಂತ ಶಿಶುನಾಳ ಷರೀಫ್ ಅವರಂತಹ ಮಹಾನ್ ನಾಯಕರ ಜಯಂತಿ ಆಚರಿಸಿದರೆ ಮಕ್ಕಳು ಉತ್ತಮ ಪಾಠ ಕಲಿಯಲು ಪ್ರೇರಣೆ ದೊರೆಯುತ್ತದೆ. ಟಿಪ್ಪು ಜಯಂತಿ ಮತ್ತು ಟಿಪ್ಪು ಕುರಿತ ಪಾಠಕ್ಕೆ ಖಂಡನೆ ವ್ಯಕ್ತವಾಗಿದೆ ಎಂದು ಹೇಳಿದರು.
ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ರಾಜ್ಯದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯನ್ನು ಜಾರಿಗೆ ತಂದಿತು. ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲೂ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲಾಯಿತು. ಆದರೆ ಬಿಜೆಪಿ, ಆರ್‌ಎಸ್‍ಎಸ್ ಟಿಪ್ಪು ಜಯಂತಿಯನ್ನು ಬಲವಾಗಿ ವಿರೋಧಿಸುತ್ತಲೇ ಇವೆ. ಟಿಪ್ಪು ಜಯಂತಿ ಆಚರಣೆ ತಡೆಗೆ ಬಿಜೆಪಿ ಹರಸಾಹಸ ನಡೆಸಿತ್ತು. ಈ ಮಧ್ಯೆ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿ ಟಿಪ್ಪು ಜಯಂತಿ ಮತ್ತು ಪಾಠಗಳಿಗೆ ಕತ್ತರಿ ಹಾಕಲು ಮುಂದಾಗಿದೆ…



E Nan magan ge yen guttu ,tippu eedi prapanchadalli hesarwasi aagidare, Mysore hulli tippu sultan