ತಮ್ಮ ಶಾಲಾ ಆವರಣದ ಆಟದ ಮೈದಾನದಲ್ಲಿರುವ ಮರಗಳನ್ನು ಕಡಿಯದಂತೆ ಆಗ್ರಹಿಸಿ ವಿದ್ಯಾರ್ಥಿಗಳು ಅಪ್ಪಿಕೊ ಚಳವಳಿ ರೀತಿಯಲ್ಲಿ ಪ್ರತಿಭಟನೆ ನಡೆಸಿರುವ ಘಟನೆ ಬೆಂಗಳೂರಿನ ಪೀಣ್ಯ ದಾಸರಹಳ್ಳಿಯ ಅಬ್ಬಿಗೆರೆಯಲ್ಲಿ ನಡೆದಿದೆ. ಅಬ್ಬಿಗೆರೆ ಸರ್ಕಾರಿ ಶಾಲಾ ಮಕ್ಕಳು ಇಂತಹ ಒಂದು ಸಾಹಸಕ್ಕೆ ಕೈಹಾಕಿದ್ದಾರೆ.
ಏಕಾಏಕಿ ರಸ್ತೆ ವಿಸ್ತರಣೆ ಹೆಸರಿನಲ್ಲಿ ಮರಗಳನ್ನು ಕಡಿಯಲು ಬಿಬಿಎಂಪಿ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಅಬ್ಬಿಗೆರೆ ಸರಕಾರಿ ಶಾಲಾ ಮಕ್ಕಳು ಕೈಯಲ್ಲಿ ಶಾಲಾ ಆವರಣದಲ್ಲಿನ ಮರಗಳನ್ನು ಕಡಿಯದಂತೆ ನಾಮಫಲಕಗಳನ್ನು ಹಿಡಿದು, ಮರಗಳನ್ನು ಸುತ್ತುವರಿದು ಪ್ಪಿಕೋ ಚಳವಳಿ ನಡೆಸಿ, ಮರ ಕಡಿಯದಂತೆ ಮನವಿ ಮಾಡಿದ್ದಾರೆ.
ಸರ್ಕಾರಿ ಶಾಲಾ ಆವರಣದಲ್ಲಿರುವ ಮೈದಾನದಲ್ಲಿ 100ಕ್ಕೂ ಹೆಚ್ಚು ಮರಗಳಿವೆ. ಅಬ್ಬಿಗೆರೆಯಿಂದ ಚಿಕ್ಕಬಾಣಾವರಕ್ಕೆ ಸಂಪರ್ಕಿಸುವ ಮುಖ್ಯರಸ್ತೆಯನ್ನು ಅಗಲೀಕರಣ ಮಾಡಲು ಪಾಲಿಕೆ ಅಧಿಕಾರಿಗಳು, ಕಾಂಟ್ರಾಕ್ಟರ್ ಗಳು ಮುಂದಾಗಿದ್ದಾರೆ. ಈ ಅಗಲೀಕರಣ ಅವೈಜ್ಞಾನಿಕವಾಗಿದ್ದು ಯಾವುದೇ ಕಾರಣಕ್ಕೂ ಮುಂದುವರೆಸದಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ರಾಜಕಾರಣಿಗಳ ಬಗ್ಗೆ ತೇಜಸ್ವಿಯರಿಗೆ ಒಳ್ಳೆಯ ಅಭಿಪ್ರಾಯ ಇರಲಿಲ್ಲ; ಆದರೆ, ನನ್ನ ಬಗ್ಗೆ ಪ್ರೀತಿ, ಅಭಿಮಾನವಿತ್ತು-ಸಿದ್ದರಾಮಯ್ಯ
ಈ ಮರಗಳು ಸುಮಾರು 15 ರಿಂದ 20 ವರ್ಷದ ಮರಗಳಾಗಿದ್ದು, ಆಮ್ಲಜನಕ ಎತೇಚ್ಛವಾಗಿ ಪೂರೈಸುವ ಮರಗಳಾಗಿವೆ. ಈ ಸರ್ಕಾರಿ ಶಾಲೆ ಕೂಡ 30 ವರ್ಷ ಹಳೆಯದಾಗಿದೆ. ಶಾಲಾ ಆವರಣದಲ್ಲಿರುವ ಮರಗಳನ್ನು ತೆರವುಗೊಳಿಸುವ ಕುರಿತು ಶಿಕ್ಷಣ ಇಲಾಖೆ ಅಥವಾ ಅರಣ್ಯ ಇಲಾಖೆಯಾಗಲಿ ಯಾವುದೇ ಸೂಚನೆ ನೋಟಿಸ್ ನೀಡಿಲ್ಲ ಎಂದು ಶಿಕ್ಷಕರು, ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಈ ಕುರಿತು ಸ್ಥಳೀಯ ಶಾಸಕರು, ಮಾಜಿ ಪಾಲಿಕೆ ಸದಸ್ಯರಿಗೆ ಮನವಿ ಸಲ್ಲಿಸಲಾಗಿದೆ ಆದರೆ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ, ಪೀಣ್ಯ ದಾಸರಹಳ್ಳಿ ವಿಭಾಗದ ಪಾಲಿಕೆ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಯಾವುದೇ ಸ್ಪಂದನೆ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಅಪ್ಪಿಕೊ ಚಳವಳಿ ನೇತಾರ ಸುಂದರರಾಲ್ ಬಹುಗುಣ ಅವರಿಗೆ ‘ಭಾರತ ರತ್ನ’ ಶಿಫಾರಸ್ಸು ಮಾಡಿದ ದೆಹಲಿ ಸರ್ಕಾರ


